ಬಾಂಬೆ ಎಂಬ ದೆವ್ವಗಳ ಊರಲ್ಲಿ…

ಅಜಿತ್ ಪಿಳ್ಳೈ : ಅನುವಾದ-ಸತೀಶ್ ಜಿ ಟಿ

 

ಬಾಂಬೆಯ ನಾರಿಮನ್ ಪಾಯಿಂಟ್‍ನಲ್ಲಿರುವ ಇಡೀ 500 ಚದರ ಅಡಿಗಳಷ್ಟು ಕಚೇರಿ ಜಾಗಕ್ಕೆ ಅಧಿಪತಿಯಾಗಿರುವುದೆಂದರೆ ಸಾಮಾನ್ಯವಾಗಿ ಕನಸೊಂದು ನನಸಾದಂತೆ. ಆದರೆ ನನ್ನ ಪಾಲಿಗದು ಭಿನ್ನ ಅನುಭವ. ಅತೀವ ಒಂಟಿತನಕ್ಕೆ ತಳ್ಳಿದ, ಸದಾ ಆತಂಕಕ್ಕೀಡು ಮಾಡುವ ಕಾಫ್ಕಾನ ಅನುಭವಗಳನ್ನು ಮೈಮೇಲೆ ಎಳೆದುಕೊಂಡಂತೆ ನನಗೆ ಭಾಸವಾಗಿದ್ದು 1993ರ ಬಾಂಬೆ ಗಲಭೆಗಳು ಉತ್ತುಂಗದಲ್ಲಿದ್ದಾಗ. ಆಗ ನಾನು ಬಾಂಬೆ ‘ಪಯೋನೀರ್’ ಕಚೇರಿಯ ಏಕೈಕ ವಾರಸುದಾರ. ಆಗ ಕಚೇರಿ ದಕ್ಷಿಣ ಮುಂಬೈನ ಬಹುಬೇಡಿಕೆಯ ವ್ಯಾಪಾರಿ ಪ್ರದೇಶದ ಬಹುಮಹಡಿ ಕಟ್ಟಡದಲ್ಲಿತ್ತು. ನಿಜಾರ್ಥದಲ್ಲಿ ಬೇರೆ ಅವಕಾಶಗಳು ಇಲ್ಲದೆ, ಜೊತೆಗೆ ಯಾವುದೇ ಸಹೋದ್ಯೋಗಿ, ಸಹಾಯಕ ಸಿಬ್ಬಂದಿಗಳಿಲ್ಲದೆ ಏಕಾಂಗಿಯಾದ ಸಂದರ್ಭವದು.

ಆ ಬಂಧನಕ್ಕೆ ಒಳಗಾಗುವ 24 ಗಂಟೆಗಳ ಮುನ್ನ ನಾನು ಇತರೆ ಕೆಲ ಪತ್ರಕರ್ತರೊಂದಿಗೆ ಗುಜರಾತ್‍ನ ಕಛ್‍ನಲ್ಲಿದ್ದೆ. ಹನಿ ನೀರಾವರಿಯ ಸಾಧ್ಯತೆ ಬಗ್ಗೆ ತಿಳಿದುಕೊಳ್ಳುತ್ತಾ, ರುಚಿ ರುಚಿಯಾದ ಊಟ ಮಾಡಿಕೊಂಡು ಆರಾಮವಾಗಿದ್ದ ನನಗೆ ಮೊಬೈಲ್ ಫೋನ್‍ಗಳಿಲ್ಲದ ಆ ದಿನಗಳಲ್ಲಿ ಬಾಂಬೆಯಲ್ಲಿ ನಡೆಯುತ್ತಿದ್ದ ಘಟನೆಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಗಾಂಧಿಧಾಮದಿಂದ ರಾತ್ರಿ ರೈಲಿನಲ್ಲಿ ಸೂರತ್ ತಲುಪಿ ಸುದ್ದಿಪತ್ರಿಕೆಗಳನ್ನು ಓದಿದಾಗಲಷ್ಟೆ ಬಾಂಬೆಯ ಗಲಭೆಗಳ ಬಗ್ಗೆ ಗೊತ್ತಾಯಿತು. ಮುಂದೇನಾಗಬಹುದು ಎಂಬುದರ ಬಗ್ಗೆ ನಮಗೆ ಯಾವುದೇ ಸುಳಿವಿರಲಿಲ್ಲ. ಆದಷ್ಟು ಬೇಗ ನಮ್ಮ ಕೆಲಸದಲ್ಲಿ ನಾವು ತೊಡಗಿಸಿಕೊಳ್ಳಬೇಕು ಎನಿಸಿದ್ದಂತೂ ಸ್ಪಷ್ಟ.

ನಾನು ಜನವರಿ 6ರಂದು ಕಚೇರಿ ತಲುಪುವ ಹೊತ್ತಿಗಾಗಲೇ ಇತರೆ ಸಿಬ್ಬಂದಿ ಆತಂಕದಲ್ಲಿ ಕಚೇರಿಯಿಂದ ಹೊರಡಲು ಸಿದ್ಧರಾಗಿದ್ದರು. ನಾರಿಮನ್ ಪಾಯಿಂಟ್‍ನ ಬಹುತೇಕ ಕಚೇರಿಗಳಲ್ಲಿರುವ ಸಿಬ್ಬಂದಿ ರೈಲು ಸೇವೆ ಯಾವಾಗ ಬೇಕಾದರೂ ಸ್ಥಗಿತಗೊಳ್ಳಬಹುದು ಎಂದು ಆತಂಕಗೊಂಡು ಬೇಗ ಮನೆ ಕಡೆ ಧಾವಿಸುತ್ತಿದ್ದರು. ನಾನು ಸಿಟಿ ಪತ್ರಿಕೆಗಳ ಮೇಲೆ ಕಣ್ಣಾಡಿಸಿ ಏನಾಗುತ್ತಿದೆ ಎಂದು ಗ್ರಹಿಸುವುದರೊಳಗೆ ನನಗೆ ಅರ್ಥವಾದದ್ದೆಂದರೆ, ನಾನೊಬ್ಬನೇ ಅಲ್ಲಿ ಉಳಿಯಬೇಕಾಗುತ್ತದೆ. ಆ ಹೊತ್ತಿಗೆ ನಾನು ರಾತ್ರಿ ಮನೆಗೆ ಬರುವುದು ತುಂಬಾ ತಡವಾಗಬಹುದು ಎಂದು ಹೇಳಿದ್ದೆ. ಆದರೆ ಕೆಲ ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗ ನಾನು ಅಲ್ಲಿ ಉಳಿದುಕೊಳ್ಳುವುದೇ ಸುರಕ್ಷಿತ ಎಂಬ ಸಲಹೆ ಬಂತು. ಆ ಕ್ಷಣಕ್ಕೆ ನನ್ನ ಕಚೇರಿಯೇ ಕೆಲ ದಿನಗಳ ಮಟ್ಟಿಗೆ ನನ್ನ ಮನೆ ಯಾಗುತ್ತದೆ ಎಂದು ಊಹಿಸಿರಲಿಲ್ಲ.

ಶಿವಸೇನೆಯ ಗೂಂಡಾಗಳು ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ಹಿಂಸಾಚಾರ ನಡೆಸುತ್ತಿದ್ದುದು ನನ್ನನ್ನು ಅತೀವ ದುಃಖಕ್ಕೆ ತಳ್ಳಿತ್ತು ಹಾಗೂ ವಿಚಲಿತನನ್ನಾಗಿ ಮಾಡಿತ್ತು. ನಂತರದ ಕೆಲವು ದಿನಗಳು ನಾವು ಪತ್ರಕರ್ತರು ಗುಂಪಾಗಿದ್ದುಕೊಂಡು ಗಲಭೆಗ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಹಿಂಸೆಗೆ ತುತ್ತಾದವರನ್ನು, ಅವರ ಕುಟುಂಬದವರನ್ನು ಮಾತನಾಡಿಸುವ ಕೆಲಸ ಮಾಡಿದೆವು. ಅಂಗಡಿ ಹಾಗೂ ಮನೆಗಳಲ್ಲಿ ಮೌಲ್ಯಯುತ ವಸ್ತುಗಳನ್ನು ಹೊತ್ತು ಓಡುವುದನ್ನೂ, ಬೆಂಕಿ ಹಚ್ಚುವುದನ್ನೂ ಕಂಡೆವು. ಸಂಜೆ ಹೊತ್ತಿಗೆ ಮುಂಬೈನ ಆಯುಕ್ತ ಶ್ರೀಕಾಂತ್ ಬಾಪಟ್ ಅವರ ಪತ್ರಿಕಾಗೋಷ್ಠಿಗೆ ಹಾಜರಾಗಿ ಮಾಹಿತಿ ಕಲೆಹಾಕುತ್ತಿದ್ದೆವು. ಬಾಪಟ್, ಕಾನೂನು ಸುವ್ಯವಸ್ಥೆ ಪತ್ರಕರ್ತರು ಭಾವಿಸುವ ಮಟ್ಟಿಗೆ ಬಿಗಡಾಯಿಸಿಲ್ಲ ಎಂದು ನಮ್ಮನ್ನು ನಂಬಿಸಲು ಪ್ರಯತ್ನಿಸುತ್ತಿದ್ದರು. ಪೊಲೀಸರು ಕೇವಲ ಸತ್ತವರ ಸಂಖ್ಯೆಯನ್ನು ಕಡಿಮೆ ಮಾಡಿ ಹೇಳುತ್ತಿರುವುದಷ್ಟೇ ಅಲ್ಲ, ಗಲಭೆಗಳ ಬಗ್ಗೆ ಕಣ್ಣುಮುಚ್ಚಿ ಕುಳಿತುಕೊಂಡು ಗಲಭೆಕೋರರಿಗೆ ಮುಕ್ತ ಅವಕಾಶ ನೀಡಿದ್ದರು ಎಂಬುದು ನಂತರ ಗೊತ್ತಾಯಿತು. ಶಿವಸೇನೆ ಪ್ರಾಯೋಜಿತ ಹಿಂಸಾಚಾರಕ್ಕೆ ರಾಜ್ಯ ಸರಕಾರವೂ ಮೌನ ಸಮ್ಮತಿ ನೀಡಿತ್ತು ಎನ್ನುವ ಅನುಮಾನವಿತ್ತು.

ಹಾಗೆ ನೋಡಿದರೆ ತುಂಬಾ ಹಿಂದೆಯೇ ಇದೆಲ್ಲ ಆರಂಭವಾಗಿತ್ತು. 1992ರ ನವೆಂಬರ್‍ನಲ್ಲಿಯೇ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದರ ಬಗ್ಗೆ ಘೋಷಿಸುವ ಹಾಗೂ ಆ ಕೆಲಸಕ್ಕೆ ಹಿಂದೂ ಕರಸೇವಕರನ್ನು ಆಹ್ವಾನಿಸುವ ಫಲಕಗಳು ಬಾಂಬೆಯಲ್ಲಿ ಕಾಣಿಸಿಕೊಂಡಿದ್ದವು. ಬೀದಿ ಬೀದಿಗಳಲ್ಲಿ ಆ ಬಗ್ಗೆ ಸಭೆಗಳು ನಡೆಯುತ್ತಿದ್ದವು. ಈ ಬೆಳವಣಿಗೆಯ ಪರಿಣಾಮವಾಗಿ ಮುಸ್ಲಿಂ ಗುಂಪುಗಳು ಇದಕ್ಕೆ ಪ್ರತಿಯಾಗಿ ಕಾರ್ಯಾಚರಣೆ ಗಿಳಿದವು. ಎರಡು ಸಮುದಾಯಗಳ ನಡುವೆ ಆತಂಕ ಉಲ್ಬಣಿಸುತ್ತಿತ್ತು. ಹಾಗೂ ಕೆಲವು ಹೇಳಿಕೆಗಳು ಮುಸ್ಲಿಮರನ್ನು ಇನ್ನಿಲ್ಲದಂತೆ ಪ್ರಚೋದಿಸಿದ್ದವು ಎಂಬುದನ್ನು ಪತ್ರಕರ್ತರು ಆ ನಂತರ ಅರಿತುಕೊಂಡರು. ಹಿಂದೂ ಮಹಾಸಭಾದ ಮುಖಂಡರೊಬ್ಬರು “ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರೆ ಈ ಹೊತ್ತಿಗಾಗಲೇ ಮಸೀದಿಯನ್ನು ಬಾಂಬ್‍ನಿಂದ ಉರುಳಿಸಿ ಮಂದಿರ ಕಟ್ಟಿರುತ್ತಿದ್ದೆ. ಆ ಮೂಲಕ ಮುಸ್ಲಿಮರನ್ನೆಲ್ಲ ದೇಶ ಬಿಟ್ಟು ಓಡಿಸಲು ಚಾಲನೆ ನೀಡುತ್ತಿದ್ದೆ” ಎಂದು ಹೇಳಿಕೆ ನೀಡಿದ್ದರು. ಇಂತಹ ಹೇಳಿಕೆಗಳು ಮುಖ್ಯವಾಹಿನಿಯ ಮಾಧ್ಯಮದಲ್ಲಿ ವರದಿಯಾಗಿದ್ದು ಅಪರೂಪ. ಆದರೆ ಆ ಸುದ್ದಿ ಊರ ಮುಸ್ಲಿಮರಿಗೆಲ್ಲ ಸುಲಭವಾಗಿ ತಿಳಿದಿತ್ತ್ತ್ತು. ಇಂತಹ ಪ್ರಚೋದನಕಾರಿ ಹೇಳಿಕೆಗಳು ಆತಂಕ ಸೃಷ್ಟಿಗೆ ಕಾರಣ ಆಗುತ್ತಿವೆ ಎಂದು ಮಾಧ್ಯಮಗಳಿಗೆ ಗೊತ್ತಾಗಿದ್ದು ಡಿಸೆಂಬರ್ 6ರ ಬಾಬ್ರಿ ಮಸೀದಿ ಧ್ವಂಸದ ಪರಿಣಾಮವಾಗಿ ಐದು ದಿನಗಳ ಕಾಲ ಮುಂಬೈನಲ್ಲಿ ಗಲಭೆಗಳು ಸಂಭವಿಸಿದ ನಂತರ.

ಮಸೀದಿ ಧ್ವಂಸದ ನಂತರ ಇಸ್ಲಾಂಗೆ ಕಂಟಕ ಎದುರಾಗಿದೆ, ಹಾಗಾಗಿ ಅದನ್ನು ಎದುರಿಸಬೇಕು ಎಂದು ಮುಸ್ಲಿಂ ಸಮುದಾಯದ ಮೂಲಭೂತವಾದಿಗಳು ಘೋಷಿಸಿದ ತರುವಾಯ ಸಮುದಾಯದ ಅನೇಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಬೀದಿಗಿಳಿದರು. ಶಿವಸೇನೆ, ಬಿಜೆಪಿ ಹಾಗೂ ಹಿಂದೂ ಗುಂಪುಗಳು ವಿಜಯದ ಮೆರವಣಿಗೆ (ಮಸೀದಿ ಧ್ವಂಸಕ್ಕೆ) ನಡೆಸಿದ್ದು ಕೂಡಾ ಗಲಭೆಯ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಯ್ತು. ಒಂದು ಸಮುದಾಯದ ಒಳಗಿದ್ದ ಆಕ್ರೋಶವನ್ನು ತಣಿಸಲು ಪೊಲೀಸರು ಮುಂದಾಗಲಿಲ್ಲ. ಬದಲಿಗೆ ಹಿಂದೂ ಗುಂಪುಗಳು ಪ್ರತಿ ದಾಳಿ ಮಾಡಲು ಅನುವು ಮಾಡಿಕೊಟ್ಟರು. ಪರಿಣಾಮವಾಗಿ ನಗರದಾದ್ಯಂತ ಕೋಮುಗಲಭೆಗಳು ನಡೆದವು. ಈ ಘಟನೆಗಳಲ್ಲಿ ಎರಡೂ ಕೋಮಿನ ಹಲವು ಪೂಜಾ ಸ್ಥಳಗಳು ದಾಳಿಗೆ ತುತ್ತಾದವು. ಹಿಂದೂ ಪರವಾಗಿದ್ದ ಪೊಲೀಸರು ಮುಸ್ಲಿಂ ಪ್ರತಿಭಟನಾಕಾರರನ್ನು ಕೇವಲ ಗಾಯಗೊಳಿಸದೆ ಕೊಲ್ಲುವ ಉದ್ದೇಶದಿಂದಲೇ ಫೈರ್ ಮಾಡುತ್ತಿದ್ದರು ಎಂಬ ಆರೋಪಗಳೂ ಕೇಳಿಬಂದವು.

ಹೀಗೆ ಡಿಸೆಂಬರ್ 1992ರಲ್ಲಿ ನಗರದ ತುಂಬೆಲ್ಲ ಚದುರಿದಂತೆ ಘಟನೆಗಳು ನಡೆದರೂ 1993ರ ಜನವರಿ ಹೊತ್ತಿಗೆ ಅದು ತೀವ್ರತರಕ್ಕೆ ಹೋಗುತ್ತದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಹೊಸ ವರ್ಷದ ಮೊದಲ ದಿನದ ಶಿವಸೇನೆ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಹಿಂದೂಗಳನ್ನು ಉತ್ತೇಜಿಸುವ ಮಾತುಗಳಿದ್ದರೂ, ಆ ಹೊತ್ತಿಗಾಗಲೇ ಅಂತಹ ಅನೇಕ ಬರಹಗಳನ್ನು ಪ್ರಕಟಿಸಿದ್ದ ಪತ್ರಿಕೆಯ ಮತ್ತೊಂದು ನಡೆ ಎಂದೇ ಗ್ರಹಿಸಲಾಗಿತ್ತು. ಆದರೆ ಜನವರಿ 5ರ ಹೊತ್ತಿಗೆ ಬೆಳವಣಿಗೆಗಳು ತೀವ್ರ ಸ್ವರೂಪ ಪಡೆದವು. ಅಂದು ಡೋಂಗ್ರಿಯಲ್ಲಿ ನಾಲ್ವರು ಹಮಾಲಿ (ಮತಾದಿ) ಕೆಲಸಗಾರರ ಹತ್ಯೆಯಾಯಿತು. ಕಾರ್ಮಿಕರ ಸಂಘಟನೆ ಮಾರನೇ ದಿನವೇ ಬಂದ್‍ಗೆ ಕರೆ ಕೊಟ್ಟಿತು. ಆ ಹೊತ್ತಿಗೆ ಕೊಲೆಗಾರರ ಸುಳಿವು ಸಿಕ್ಕಿರ ಲಿಲ್ಲವಾದರೂ ಶಿವಸೇನೆಯ ನಾಯಕರು ಮುಸ್ಲಿಮರಿಂದಲೇ ಈ ಕೊಲೆಗಳಾಗಿವೆ ಎಂದು ಆರೋಪಿಸಿದರು. ತಕ್ಷಣ ಗಲಭೆಗಳು ಆರಂಭವಾದವು. ಗಾಳಿ ಸುದ್ದಿ ಹರಡುವುದು ಜೋರಾಯಿತು. ಮುಸ್ಲಿಮರ ದಾಳಿ ಬಗ್ಗೆ ಒಂದು ಸುದ್ದಿ ಹರಡಿದರೆ, ಮತ್ತೊಂದೆಡೆ ಶಿವಸೇನೆಯ ದಾಳಿ. ಯಾವುದನ್ನು ನಂಬಬೇಕೆಂದು ಯಾರಿಗೂ ತಿಳಿಯದ ಸ್ಥಿತಿ.

ಜೋಗೇಶ್ವರಿಯ ರಾಜಭಾಯಿ ಕಟ್ಟಡದಲ್ಲಿ ಜನವರಿ 8ರಂದು ನಡೆದ ಹಿಂದೂಗಳ ಹತ್ಯೆ, ಗಲಭೆಗಳು ಹಿಂದೆಂದೂ ಕಾಣದ ಮಟ್ಟಿಗೆ ವೇಗ ಪಡೆದುಕೊಂಡವು. ಆರು ಜನರನ್ನು (ಒಬ್ಬ ಪುರುಷ, ಐವರು ಮಹಿಳೆಯರು) ಕಳೆದುಕೊಂಡ ಕುಟುಂಬ ಮಾಧ್ಯಮಗಳ ಗಮನ ಸೆಳೆದಿತ್ತು. ಶಿವಸೇನೆ ಪ್ರತೀಕಾರಕ್ಕೆ ಕರೆ ಕೊಟ್ಟಿತು. ಜೋಗೇಶ್ವರಿಯಲ್ಲಿ ಹಿಂದೂಗಳನ್ನು ಜೀವಂತವಾಗಿ ಸುಡಲಾಗಿದೆ. ಆ ಕಾರಣಕ್ಕಾಗಿ ಹಿಂದೂಗಳು ಬೀದಿಗಿಳಿದಿದ್ದಾರೆ ಎಂದು ‘ಸಾಮ್ನಾ’ ಸಂಪಾದಕೀಯ ಬರೆಯಿತು. “ಪಾಕಿಸ್ತಾನದಿಂದ ಬಂದ ಶಸ್ತ್ರಾಸ್ತ್ರಗಳನ್ನು ಹಿಡಿದ ಮುಸ್ಲಿಮರು ಮಸೀದಿಗಳಿಂದ ಜನರತ್ತ ಮತ್ತು ಪೊಲೀಸರ ಮೇಲೆ ದಾಳಿ ಮಾಡುತ್ತಿದ್ದಾರೆ. ನಾವು ಏಕೆ ಅಂತಹವರನ್ನು ರಕ್ಷಿಸಬೇಕು? ಭಾರತದ ಮುಸಲ್ಮಾನರು ಪಾಕಿಸ್ತಾನಿಗಳಂತೆ ವರ್ತಿಸುತ್ತಿದ್ದಾರೆ. ಒಂದು ದೇಶದಲ್ಲಿ ಎರಡು ದೇಶಗಳು ಸೃಷ್ಟಿಯಾದಂತಿದೆ. ಪೊಲೀಸರು ಅವರತ್ತ ಗುಂಡು ಹಾರಿಸಲು ಕಾಯುತ್ತಿದ್ದಾರೆ. ಅವರಿಗೂ ಸಾಮಾನ್ಯ ಜನರ ಆಕ್ರೋಶ ಅರ್ಥವಾಗಿದೆ. ಹಿಂದೂಗಳೇ ನಿಮ್ಮ ಕಣ್ಣುಗಳನ್ನು ತೆರೆಯಿರಿ. ಹೊರಗಡೆ ಏನಾಗುತ್ತಿದೆ ಎಂದು ನೋಡಿ-ನಿಮ್ಮ ಅಂತ್ಯಸಂಸ್ಕಾರದ ಬೆಂಕಿ ಉರಿಯುತ್ತಿದೆ…” ಹೀಗಿತ್ತು ಆ ಪತ್ರಿಕೆಯ ಬರಹ.

ಆ ದಿನಗಳಲ್ಲಿ ಹತ್ತಾರು ಆಘಾತಕಾರಿ ಕತೆಗಳನ್ನು ಕೇಳಬೇಕಾಯ್ತು. ಕೆಲ ಹಿಂದೂಗಳು ಮತದಾರರ ಪಟ್ಟಿ ಹಿಡಿದು ಮುಸ್ಲಿಮರು ಇರುವ ಮನೆ ಹುಡುಕಿ ಹುಡುಕಿ ದಾಳಿ ಮಾಡುತ್ತಿದ್ದರು. ಆ ಸಮುದಾಯದ ಬೆಲೆಬಾಳುವ ವಸ್ತುಗಳನ್ನು ಹೊತ್ತೊಯ್ದರು. ಮುಸ್ಲಿಮರನ್ನು ಮದುವೆಯಾದ ಹಿಂದೂ ಮಹಿಳೆಯರನ್ನು ಸುಟ್ಟರು. ಅವರ ಗಂಡಂದಿರನ್ನು ಕೊಂದರು. ಪಾರ್ಸಿಗಳ ಮನೆಗಳ ಮೇಲೆ ದಾಳಿಯಾಯ್ತು. ಜೊರಾಷ್ಟ್ರಿಯನ್ ಧರ್ಮದ ಬರಹಗಳನ್ನು ಅರೇಬಿಕ್ ಎಂದು ತಿಳಿದು ಆ ಸಮುದಾಯದವರನ್ನೂ ಕೊಂದರು. ಪಾಪ, ಅವರು ತಮ್ಮ ಧರ್ಮದ ಗುರುತನ್ನು ಗಲಭೆಕೋರರಿಗೆ ತಿಳಿಸಿ ಮನವರಿಕೆ ಮಾಡುವಲ್ಲಿ ಸೋತಿದ್ದರು.

ಇಂತಹ ಅನೇಕ ಕತೆಗಳನ್ನು ಕೇಳಬೇಕಾಯ್ತು. ಇಲ್ಲಿ ಮರೆಯಲಾಗದ್ದು ಕಾಮರಾಜ್ ಎಂಬ ತಮಿಳುನಾಡು ಮೂಲದ ವಿದ್ಯಾರ್ಥಿಯದು. ಅವನು ತನ್ನ ಇತರ ಸಹಪಾಠಿಗಳೊಂದಿಗೆ ಮುಂಬೈ ಪ್ರವಾಸಕ್ಕೆ ಬಂದಿದ್ದಾಗ ಇಲ್ಲಿ ಗಲಭೆ ನಡೆಯುತ್ತಿತ್ತು. ವಿ.ಟಿ.ರೈಲ್ವೆ ಸ್ಟೇಷನ್ ಹತ್ತಿರ ಅವನನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಗಿತ್ತು. ಗಲಭೆಕೋರರು ಅವನ ಧರ್ಮ ಯಾವುದು ಎಂಬುದನ್ನೂ ತಿಳಿಯುವ ಗೋಜಿಗೆ ಹೋಗಿರಲಿಲ್ಲ. ಅವನ ಒಬ್ಬ ಸ್ನೇಹಿತನ ಪ್ರಕಾರ ಅವನು ಸಂಶಯಾಸ್ಪದವಾಗಿ ಕಂಡ ಕಾರಣ ಅವನನ್ನು ಮುಸ್ಲಿಂ ಎಂದು ತಿಳಿದು ಗಲಭೆಕೋರರು ಕೊಂದಿದ್ದರು. ಸ್ಥಳೀಯ ಜನತಾದಳ ಮುಖಂಡ ಹಾಗೂ ಇತರ ನಾಗರಿಕರು ನೀಡಿದ್ದ ದೇಣಿಗೆ ಸಹಾಯದಿಂದ ಅವನ ದೇಹವನ್ನು ಚೆನ್ನೈಗೆ ಕಳುಹಿಸಲಾಯಿತು. “ಬಾಂಬೆ ಅಂದ್ರೆ ಹೀಗೆ ಎಂದು ನಮಗೆ ಗೊತ್ತೇ ಇರಲಿಲ್ಲ’’ ಎಂದು ಆ ಗುಂಪಿನಲ್ಲಿದ್ದ ವಿದ್ಯಾರ್ಥಿಯೊಬ್ಬ ನನಗೆ ಹೇಳಿದ.

ಆ ಗಲಭೆಗಳ ಮುಖ್ಯ ಗುರಿ ಮುಸ್ಲಿಮರು. ಆದರೆ ಯಾರು ಬೇಕಾದರೂ ಹಿಂಸೆಗೆ ತುತ್ತಾಗುವ ಪರಿಸ್ಥಿತಿ ಇತ್ತು. ಗಲಭೆಗ್ರಸ್ತ ಧಾರಾವಿಯಲ್ಲಿ ಜನರಿಗೆ ಆಹಾರ ವಿತರಿಸುತ್ತಿದ್ದ ಕ್ರಿಶ್ಚಿಯನ್ ಸಾಮಾಜಿಕ ಕಾರ್ಯಕರ್ತೆಯೊಬ್ಬಳು ದಾಳಿ ಎದುರಿಸಬೇಕಾಯಿತು. ಗಲಭೆಗ್ರಸ್ತ ಮುಸ್ಲಿಮರ ನೆರವಿಗೆ ಧಾವಿಸಿದ್ದೇ ಅವಳ ಮೇಲಿನ ಹಲ್ಲೆಗೆ ಕಾರಣವಾಗಿತ್ತು. ಹಲ್ಲೆ ಮಾಡಿದವರು ಮುಸ್ಲಿಮರ ನಂತರ ಅವಳ ಧರ್ಮದವರೇ ಮುಂದಿನ ಗುರಿ ಎಂದು ಎಚ್ಚರಿಸಿದ್ದರು. ಆ ಘಟನೆ ಅವಳ ಮೇಲೆ ಎಂತಹ ಪರಿಣಾಮ ಬೀರಿತ್ತೆಂದರೆ, ಅವಳು ಒಂದು ವಾರ ಕಾಲ ತನ್ನ ಸಂಸ್ಥೆಯಿಂದ ರಜೆ ಪಡೆದು ಹೋದಳು. ಮಹೀಮ್ ಪ್ರದೇಶದ ಹಿಂದೂ ಪಾನ್ ಶಾಪ್ ಮಾಲೀಕರು “ತಾನು ಶಿವಸೇನೆಯವರಿಗೆ ರಕ್ಷಣಾ ಶುಲ್ಕ(ನಿಧಿ) ನೀಡಿದ್ದರೂ ತನ್ನ ಅಂಗಡಿಯನ್ನೇಕೆ ಸುಟ್ಟರು ಎಂದು ಗೊತ್ತಾಗಲಿಲ್ಲ’’ ಎಂದರು ಅಲ್ಲದೆ, ಬಾಂಬೆ ಸೆಂಟ್ರಲ್‍ನ ಫ್ಲಾಟ್ ಒಂದರಲ್ಲಿದ್ದ ನಿವೃತ್ತ ಪಾರ್ಸಿ ಗಂಡ-ಹೆಂಡತಿ ಫಿರೋಜ್ ಮತ್ತು ಮೆಹ್ರೂ ಮೆಥೋರ್‍ರನ್ನು ಯಾಕೆ ಸುಟ್ಟು ಹತ್ಯೆ ಮಾಡಲಾಯಿತು ಎನ್ನುವುದಕ್ಕೂ ವಿವರಣೆಗಳು ಇಲ್ಲ. ಪೊಲೀಸರು ಆ ಘಟನೆಯನ್ನು ತಪ್ಪು ಗ್ರಹಿಕೆಯಿಂದಾದ ಅಚಾತುರ್ಯ ಎಂದು ತಳ್ಳಿ ಹಾಕಿದರು.

ಬಾಂಬೆಯ ಆಸ್ಪತ್ರೆಗಳು ಗಲಭೆಯಲ್ಲಿ ನೊಂದವರ, ಮತ್ತವರ ಸಂಬಂಧಿಕರಿಂದ ತುಂಬಿ ಹೋಗಿದ್ದವು. ಮತ್ತೆ ಕೆಲವರು ಶವಾಗಾರದಲ್ಲಿ ತಮ್ಮ ಕಡೆಯವರ ದೇಹಗಳನ್ನು ಪಡೆಯಲು ಕಾಯುತ್ತಿದ್ದರು. ಅವರೆಲ್ಲರೂ ಹೇಳುತ್ತಿದ್ದ ಘಟನೆಗಳಲ್ಲಿ ಕೇಳಿ ಬರುತ್ತಿದ್ದ ಒಂದು ಸಂಗತಿ ಎಂದರೆ, ‘ಜೈ ಭವಾನಿ, ಜೈ ಶಿವಾಜಿ’ ಎಂಬ ಉದ್ಗಾರಗಳೊಂದಿಗೆ ಶಸ್ತ್ರಗಳನ್ನು ಹಿಡಿದು ದೊಂಬಿ ನಡೆಸಿದ್ದು. ಭೀಕರ ರಕ್ತಪಾತ ಮತ್ತು ಬೆಂಕಿ ಹಚ್ಚುವ ಪ್ರಕರಣಗಳಿಗೆ ಅವರು ಸಾಕ್ಷಿಯಾಗಿದ್ದರು. ಶಿವಸೇನೆಯವರು ಮುಸ್ಲಿಮರ ನಮಾಜ್‍ಗೆ ಪರ್ಯಾಯವಾಗಿ ಆಯೋಜಿಸಿದ್ದ ಮಹಾ ಆರತಿ ಮುಗಿದ ನಂತರ ಹಿಂಸಾಚಾರ ಮತ್ತಷ್ಟು ತೀವ್ರಗೊಳ್ಳುತ್ತಿತ್ತು. ಈ ಪ್ರಾರ್ಥನಾ ಸಭೆಗಳನ್ನು ದ್ವೇಷದ ಭಾಷಣಗಳಿಗೆ ವೇದಿಕೆಗಳನ್ನಾಗಿ ಮಾಡಿಕೊಳ್ಳಲಾಗಿತ್ತು. ಅಂತಹ ಮೊದಲ ಸಭೆ ನಡೆದದ್ದು ಡಿಸೆಂಬರ್ 27, 1992ರಂದು. ಅವು ಗಲಭೆಯ ದಿನಗಳಲ್ಲಿ ನಿರಂತರವಾಗಿ ಮುಂದುವರಿದವು. ಅಂತಿಮವಾಗಿ ಈ ಪ್ರಾರ್ಥನಾ ಸಭೆಗಳನ್ನು ನಿಷೇಧಿಸಿದ್ದು ಫೆಬ್ರವರಿಯಲ್ಲಿ.

ಸೇನಾ ತುಕಡಿಗಳ ಪಥಸಂಚಲನದ ನಂತರವೂ ನಗರದಲ್ಲಿ ಗಲಭೆಗಳು ನಿಯಂತ್ರಣಕ್ಕೆ ಬರಲಿಲ್ಲ. ಅನೇಕ ಮಂದಿ ಊರನ್ನೇ ಬಿಟ್ಟು ಹೊರಟರು. ಹಾಗೆ ಊರು ಬಿಟ್ಟು ಹೋದವರು ಮುಸ್ಲಿಮರಷ್ಟೇ ಅಲ್ಲ. ರೇಲ್ವೆ ಅಧಿಕಾರಿಯೊಬ್ಬರು ನನಗೆ ಹೇಳಿದಂತೆ, ಹಾಗೆ ಗಂಟುಮೂಟೆ ಕಟ್ಟಿ ಗುಳೇ ಹೊರಟವರಲ್ಲಿ ಶೇಕಡ 40ರಷ್ಟು ಮಂದಿ ಬೇರೆ ಬೇರೆ ಸಮುದಾಯದವರು. ಒಂದು ವಾರದ ತನಕ ವಿ.ಟಿ.ಸ್ಟೇಷನ್ ನಿರಾಶ್ರಿತರ ಶಿಬಿರದಂತೆ ಕಾಣುತ್ತಿತ್ತು. ಜನ ತಂತಮ್ಮ ತವರು ಊರುಗಳಿಗೆ ಹೋಗಲು ರೈಲುಗಳಿಗಾಗಿ ಕಾದು ಕುಳಿತಿದ್ದರು. ಅವರೆಲ್ಲ ಬಿಹಾರ, ಒರಿಸ್ಸಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದ ಕಡೆ ಹೋಗುವವರು.

ಅಂದಿನ ಕಾಂಗ್ರೆಸ್ ಸರಕಾರ ಹಿಂಸಾಚಾರವನ್ನು ತಡೆಯಲು ವಿಫಲವಾಯಿತು. ಸರಕಾರ ಶಿವಸೇನೆ ಕಾರ್ಯಕರ್ತರು ಗಲಭೆ ನಡೆಸಲು ಅನುವು ಮಾಡಿಕೊಡುತ್ತಿದೆ ಎಂಬ ಆರೋಪಗಳಿದ್ದವು. ಪತ್ರಕರ್ತರು ಅಂದಿನ ಮುಖ್ಯಮಂತ್ರಿ ಸುಧಾಕರ ನಾಯಕ್‍ರ ಪತ್ರಿಕಾಗೋಷ್ಠಿಗಳಿಗೆ ಹೋದಾಗೆಲ್ಲ ಅವರು ಏನೂ ಸಂಭವಿಸಿಯೇ ಇಲ್ಲವೇನೋ ಎಂಬಂತೆ ಶಾಂತವಾಗಿ ಎದುರಿಗಿದ್ದ ಕಾಗದದ ಮೇಲೆ ವೃತ್ತ, ತ್ರಿಭುಜ, ಚೌಕ ಹಾಗೂ ಹೂವುಗಳನ್ನು ಗೀಚುತ್ತಿದ್ದರು. ಪ್ರತಿ ಬಾರಿಯೂ “ಎಲ್ಲವೂ ನಿಯಂತ್ರಣಕ್ಕೆ ಬಂದಿದೆ” ಎನ್ನುತ್ತಿದ್ದರು. ಆದರೆ ನಿಜ ಪರಿಸ್ಥಿತಿಯೇ ಬೇರೆ ಇತ್ತು. ಪೊಲೀಸರ ನಿಷ್ಕ್ರಿಯತೆ ಬಗ್ಗೆ ಕೇಳಿದಾಗಲೆಲ್ಲ ಮುಖ್ಯಮಂತ್ರಿ ತನ್ನ ಪೊಲೀಸ್ ಪಡೆಯನ್ನು ಸಮರ್ಥಿಸಿಕೊಳ್ಳುವುದಷ್ಟೇ ಅಲ್ಲ, ಅಂದಿನ ಪೊಲೀಸ್ ಕಮಿಷನರ್ ಎಸ್.ಕೆ.ಬಾಪಟ್ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದರು. ಮುಖ್ಯಮಂತ್ರಿಯ ಇಂತಹ ನಡವಳಿಕೆಯನ್ನು ಬೆಹ್ರಾಮ್ ಕಂಟ್ರಾಕ್ಟರ್  ತಮ್ಮ ಅಂಕಣದಲ್ಲಿ ಟೀಕಿಸಿ “ಈ ಮನುಷ್ಯ ತನ್ನ ಪೈಪಿನಲ್ಲಿ ಏನನ್ನು ಸೇದುತ್ತಾನೆ?’’ ಎಂದು ಪ್ರಶ್ನಿಸಿದ್ದರು.

ಪೊಲೀಸ್ ಆಯುಕ್ತ ಕೂಡಾ ಅದೇ ಧೋರಣೆಯನ್ನು ಅನುಸರಿಸಿ ಹಿಂಸೆಯ ಪ್ರಮಾಣವನ್ನು ಮಾಧ್ಯಮದಲ್ಲಿ ಉತ್ಪ್ರೇಕ್ಷಿಸಲಾಗಿದೆ ಎಂದು ಹೇಳುತ್ತಿದ್ದರು. ‘ಟೈಮ್ಸ್ ಆಫ್ ಇಂಡಿಯಾ’ ದಿನಪತ್ರಿಕೆ ತನ್ನ ವರದಿಗಾರರನ್ನು ಶವಾಗಾರಗಳಿಗೆ ಕಳುಹಿಸಿ ಮೃತರ ಸಂಖ್ಯೆ ಲೆಕ್ಕ ಹಾಕಿಸಿತ್ತು. ಆ ಹೊತ್ತಿಗೆ ಸತ್ತವರ ಸಂಖ್ಯೆ 500 ದಾಟಿತ್ತು. ಎರಡು ಸುತ್ತಿನ ಗಲಭೆಗಳ ನಂತರ (ಡಿಸೆಂಬರ್ ಮತ್ತು ಜನವರಿ) ಒಟ್ಟು ಸತ್ತವರ ಸಂಖ್ಯೆ 900. ಅವರಲ್ಲಿ 575 ಮುಸಲ್ಮಾನರು, 275 ಹಿಂದೂಗಳು ಹಾಗೂ 50 ಮಂದಿ ಇತರರು. ಪೊಲೀಸರ ಗುಂಡಿನ ದಾಳಿಗೆ ತುತ್ತಾದವರು 356 ಮಂದಿ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಅಂಕಿ ಸಂಖ್ಯೆಗಳು ಗಲಭೆಗಳ ತನಿಖೆ ನಡೆಸಿದ ಶ್ರೀಕೃಷ್ಣ ಆಯೋಗದ ಲೆಕ್ಕಾಚಾರ. ಇದನ್ನೇ ಅಧಿಕೃತ ಎಂದು ತಿಳಿಯಲಾಗಿದೆ. ಆದರೆ ಅನಧಿಕೃತ ಮೂಲಗಳು ಹೇಳುವಂತೆ, ಸತ್ತವರ ಸಂಖ್ಯೆ 1500 ರಿಂದ 2000. ಅದು ನಿಜಕ್ಕೂ ಉತ್ಪ್ರೇಕ್ಷೆಯ ಮಾತು. ಏಕೆಂದರೆ ಊರು ಬಿಟ್ಟು ಹೋದ ಅನೇಕರನ್ನು ಮೃತರೆಂದು ಲೆಕ್ಕ ಹಾಕಿದ್ದಾರೆ. ಪೊಲೀಸರು ಮಾಧ್ಯಮಗಳೊಂದಿಗೆ ನಿಖರ ಮಾಹಿತಿ ಹಂಚಿಕೊಳ್ಳದೇ ಇದ್ದದ್ದೂ ಇಂತಹ ಲೆಕ್ಕಾಚಾರಗಳಿಗೆ ಅಥವಾ ಊಹೆಗಳಿಗೆ ಕಾರಣವಾಗಿತ್ತು.

ಗಲಭೆಯ ಆರಂಭದ ದಿನಗಳಲ್ಲಿ ನಾವು ವರದಿಗಾರರೆಲ್ಲರೂ ಒಂದೇ ನಿಗದಿತ ಷೆಡ್ಯೂಲ್ ಅನುಸರಿಸುತ್ತಿದ್ದೆವು. ಸಂಜೆ ಎಲ್ಲ ಸುದ್ದಿಗಳನ್ನು ಕಳುಹಿಸಿದ ನಂತರ ಪ್ರೆಸ್‍ಕ್ಲಬ್‍ಗೆ ನಡೆದೇ ಹೋಗುತ್ತಿದ್ದೆವು. ಅಲ್ಲಿ ಅದುವರೆಗೆ ಕಲೆ ಹಾಕಿದ್ದ ಮಾಹಿತಿಯನ್ನು ಹಂಚಿಕೊಳ್ಳು ತ್ತಿದ್ದೆವು. ಡ್ರಿಂಕ್ಸ್ ಮತ್ತು ರಾತ್ರಿ ಊಟದ ನಂತರ ಮತ್ತೆ ಇಳಿ ಸಂಜೆ ಹೊತ್ತಿನ ಸುದ್ದಿಗಳನ್ನು ಕಳುಹಿಸಲು ಮತ್ತೆ ಕಚೇರಿಗೆ ಬರಬೇಕಿತ್ತು. ಆದರೆ ಈ ವ್ಯವಸ್ಥೆ ಬಹಳ ಕಾಲ ಸಾಗಲಿಲ್ಲ. ದಕ್ಷಿಣ ಬಾಂಬೆಯ ಹೊಟೇಲ್‍ಗಳು, ರಸ್ತೆ ಬದಿಯ ಅಂಗಡಿಗಳು ಕ್ರಮೇಣ ಬಂದ್ ಆದವು. ಪ್ರೆಸ್‍ಕ್ಲಬ್‍ಗೆ ಅಪರೂಪಕ್ಕೊಮ್ಮೆ ಬರುವವರೂ ಕೂಡಾ ಈಗ ಕ್ಲಬ್ ಮೇಲೆ ಅವಲಂಬಿತರಾಗಬೇಕಾಯಿತು. ಹೀಗಾಗಿ ಕ್ಲಬ್‍ನ ಕಿಚನ್‍ನಲ್ಲಿದ್ದ ಸರಕು ಬೇಗನೆ ಖಾಲಿ ಯಾಯ್ತು. ಹೊಸದಾಗಿ ತರಲು ಸಾಧ್ಯವಾಗುತ್ತಿರಲಿಲ್ಲ. ಬೇರೆ ದಾರಿ ಇಲ್ಲದೆ ಅಡುಗೆ ಮನೆಯೂ ಬಂದ್ ಆಯ್ತು. ಆಗ ಊಟಕ್ಕಾಗಿ ಕಿಲೋಮೀಟರ್‍ಗಟ್ಟಲೆ ನಡೆದು ಹೋಗಿ ಅರ್ಧಂಬರ್ಧ ತೆರೆದಿದ್ದ ಅಂಗಡಿ/ಹೊಟೇಲ್‍ಗಳನ್ನು ಹುಡುಕಿ ಹೊಟ್ಟೆ ತುಂಬಿಸಿ ಕೊಳ್ಳಬೇಕಾಗಿತ್ತು.

ಅನೇಕ ದಿನಗಳ ಕಾಲ ಒಂಟಿಯಾಗಿ ಅರೆಹೊಟ್ಟೆಯಲ್ಲಿದ್ದ ನಾನು ಅದೊಂದು ದಿನ ಸ್ನೇಹಿತನೊಬ್ಬನಿಗೆ ಕರೆ ಮಾಡಿ (ಆತ ಜಾಹೀರಾತು ಏಜೆನ್ಸಿಯೊಂದರಲ್ಲಿ ಒಳ್ಳೆಯ ಸ್ಥಾನದಲ್ಲಿದ್ದ) ರಾತ್ರಿ ಊಟಕ್ಕೆ ಮನೆಗೆ ಬರಬಹುದೇ ಎಂದು ಕೇಳಿದೆ. ಅವನು ‘ಬಾ’ ಎಂದ. ಅಂದು ನಾನು ನನ್ನ ಕೆಲಸ ಮುಗಿಸಿ ದಕ್ಷಿಣ ಮುಂಬೈನಲ್ಲಿದ್ದ ಅವನ ಅಪಾರ್ಟ್‍ಮೆಂಟ್‍ಗೆ ನಡೆದುಕೊಂಡು ಹೋದೆ. ಆತ್ಮೀಯವಾಗಿ ಸ್ವಾಗತಿಸಿದ ಹಾಗೂ ಡ್ರಿಂಕ್ಸ್ ಕೂಡ ಆಫರ್ ಮಾಡಿದ. ಆದರೆ ಅವನ ಪತ್ನಿಗೇಕೋ ಅಸಮಾಧಾನ ಇದ್ದಂತಿತ್ತು. ಆ ಸಂಜೆಯ ಸಾಕಷ್ಟು ಸಮಯವನ್ನು ಆಕೆ ಮನೆಯಲ್ಲಿ ಆಹಾರ ಸಾಮಾಗ್ರಿಗಳ ಕೊರತೆಯ ಬಗ್ಗೆಯೇ ಹೆಚ್ಚು ಮಾತನಾಡಿದಳು. “ಮನೆಯಲ್ಲಿ ಮೊಟ್ಟೆ, ಬ್ರೆಡ್, ತರಕಾರಿ, ಚಿಕನ್ ಎಲ್ಲವೂ ಖಾಲಿಯಾಗುತ್ತಿದೆ” ಎಂದಳು. ನನ್ನಲ್ಲಿ ತಪ್ಪಿತಸ್ಥ ಭಾವ. “ಏನೂ ಬೇಡ, ರೋಟಿ-ದಾಲ್ ಇದ್ದರಷ್ಟೆ ಸಾಕು” ಎಂದೆ.

ಆಕೆಯ ಆತಂಕ ಸಹಜವಾದುದು. ಆಗ ಎಲ್ಲಿಯೂ ತರಕಾರಿ ಮಾರುವವರಾಗಲಿ, ಹಣ್ಣು ಮಾರುವವರಾಗಲಿ ಇರಲಿಲ್ಲ. ಯಾವ ಪ್ರಾವಿಜನ್ ಸ್ಟೋರ್ ಕೂಡ ತೆರೆದಿರಲಿಲ್ಲ. ಅಂತಹ ಅಂಗಡಿಗಳಲ್ಲಿ ದುಡಿಯುತ್ತಿದ್ದ ಬಹುತೇಕ ಮಂದಿ ನಗರದ ಹೊರವಲಯದಿಂದ ಬರುವವರು. ಗಲಭೆಯ ದಿನಗಳಲ್ಲಿ ಕೆಲಸಕ್ಕೆ ಬರುವ ಧೈರ್ಯ ಮಾಡುತ್ತಿರಲಿಲ್ಲ. ಜೊತೆಗೆ ಮಾಲೀಕರು ಕೂಡ ಇಂತಹ ಹೊತ್ತಿನಲ್ಲಿ ಅಂಗಡಿ ತೆರೆದಿಡುವುದು ಸೂಕ್ತವಲ್ಲ ಎಂದು ತಿಳಿದಿದ್ದರು. ನಾರಿಮನ್ ಪಾಯಿಂಟ್‍ನಲ್ಲಿ ಸ್ಯಾಂಡ್‍ವಿಚ್ ಮಾರುವವರು ಕೂಡ ಕಾಣದಾಗಿದ್ದರು. ನನ್ನ ಕಚೇರಿಯಿದ್ದ ಕಟ್ಟಡದಲ್ಲಿ ಸೆಕ್ಯುರಿಟಿ ಗಾರ್ಡ್ ಬಿಟ್ಟರೆ ಮತ್ತೊಂದು ಜೀವಿ ಇರಲಿಲ್ಲ. ವಿನಾಶದ ದಿನಗಳನ್ನು ತೋರಿಸುವ (ಅಪೋಕಲಿಪ್ಟಿಕ್) ಸಿನೆಮಾಗಳಲ್ಲಿ ಕಾಣುವ ನಗರಗಳಲ್ಲಿ ಜೀವಿಸುತ್ತಿದ್ದೆವೇನೋ ಎಂಬಂತೆ ನನಗನ್ನಿಸುತ್ತಿತ್ತು.

ನನ್ನ ಸಂಕಟ ಮತ್ತಷ್ಟು ತೀವ್ರವಾಗುತ್ತಿದ್ದುದು ಸ್ನೇಹಿತರು ಹಾಗೂ ಸಂಬಂಧಿಕರ ಕರೆಗಳಿಂದ. ಅವರು ಆಗಾಗ ಕರೆ ಮಾಡಿ ಸಲಹೆ ನೀಡುತ್ತಿದ್ದರು. ಕೆಲವರು “ಮೊದಲು ನಿನ್ನ ಗಡ್ಡ ತೆಗಿ, ಯಾರಾದ್ರೂ ನಿನ್ನನ್ನು ಮುಸ್ಲಿಂ ಎಂದು ತಪ್ಪು ತಿಳಿದಾರು” ಎಂದರೆ ಮತ್ತೆ ಕೆಲವರು “ಗಂಡಸರಿಗೆ ಮುಂಜಿ ಆಗಿದೆಯೋ ಇಲ್ಲವೋ ಎಂದು ತಿಳಿಯಲು ಪ್ಯಾಂಟ್ ಬಿಚ್ಚಿ ಖಾತ್ರಿ ಮಾಡಿಕೊಂಡು ದಾಳಿ ಮಾಡ್ತಾರಂತೆ, ಹುಷಾರಪ್ಪ” ಅನ್ನುತ್ತಿದ್ದರು. ಇನ್ನು ಕೆಲವರು “ಕಚೇರಿಯಲ್ಲಿಯೇ ಇರು, ಎಲ್ಲಿಗೂ ಬರಬೇಡ” ಎನ್ನುತ್ತಿದ್ದರು. “ಸುಮ್ನೆ ಏಜೆನ್ಸಿ ಕಾಪಿಗಳನ್ನು ಸ್ವಲ್ಪ ತಿದ್ದಿ ತೀಡಿ ಕಳುಹಿಸು” ಎನ್ನುವವರೂ ಇದ್ದರು. ಆತಂಕದ ದಿನಗಳೆಲ್ಲ ಮುಗಿದ ಮೇಲೆ ಕೆಲ ಪತ್ರಕರ್ತರು “ನೀನು ಮನೆಯಲ್ಲಿಯೇ ಉಳಿದುಕೊಂಡು ರೈಲಿನಲ್ಲಿ ಕಚೇರಿಗೆ ಬಂದು ಹೋಗಬಹುದಿತ್ತು” ಎಂದರು. ಆದರೆ ಆ ಹೊತ್ತಿನ ಅನಿಶ್ಚಿತತೆ ಮತ್ತು ಹಿಂಸೆಯ ಪ್ರಮಾಣವನ್ನು ಗಮನಿಸಿದರೆ ಸುದ್ದಿ ಹರಡುತ್ತಿದ್ದ ದಕ್ಷಿಣ ಬಾಂಬೆಯಲ್ಲಿಯೇ ಉಳಿಯುವುದು ಒಳ್ಳೆಯದಾಗಿತ್ತು. (ನೆನಪಿನಲ್ಲಿಡಿ, ಅದು ಮೊಬೈಲ್ ಫೋನ್‍ಗಳು ಇಲ್ಲದ ಕಾಲ. ಇಂಟರ್‍ನೆಟ್ ಮೂಲಕ ಸುದ್ದಿ ಕಲೆ ಹಾಕುವುದು ಅಷ್ಟು ಸಲೀಸಲ್ಲದ ದಿನಗಳವು) ಅಷ್ಟಲ್ಲದೆ, ದೆಹಲಿಯಲ್ಲಿ ಕೂತಿದ್ದ ನನ್ನ ಹಿರಿಯ ಸಹೋದ್ಯೋಗಿಗಳಿಂದ ಸುದ್ದಿಗಾಗಿ ಒತ್ತಡ ಇರುತ್ತಿತ್ತು. ಬೇರೆಯವರಿಗಿಂತ ಹೆಚ್ಚಿನ ಸುದ್ದಿ ಕೊಡುವ ಒಬ್ಬ ವ್ಯಕ್ತಿ ಆ ಹೊತ್ತಿನಲ್ಲಿ ಎಷ್ಟು ಕೆಲಸ ಮಾಡಲು ಸಾಧ್ಯವೋ ಅಷ್ಟನ್ನು ಮಾಡಿದೆ.
ಒಂದು ಮಾತು ನಾನಿಲ್ಲಿ ಹೇಳಲೇಬೇಕು. ಬಾಂಬೆಯ ಗಲಭೆಗಳನ್ನು ವರದಿ ಮಾಡಿದ ಪತ್ರಕರ್ತರೆಲ್ಲರಿಗೂ ಅವು ಕಷ್ಟದ ದಿನಗಳಾಗಿದ್ದವು. ಆದರೆ ನನ್ನ ಪರಿಸ್ಥಿತಿ ಮಾತ್ರ ಬೇರೆಯಾಗಿತ್ತು. ಇತರರು ತಮ್ಮ ದೊಡ್ಡ ಕಚೇರಿಗಳಲ್ಲಿ ಕೂತು ಕೆಲಸ ಮಾಡುತ್ತಿದ್ದರೆ ನಾನು ಒಬ್ಬನೇ. ನನ್ನ ಪರಿಸ್ಥಿತಿ ಮತ್ತಷ್ಟು ವಿಷಮವಾಗಲು ಕಾರಣವೆಂದರೆ, ಸಾಮಾನ್ಯವಾಗಿ ಸ್ನೇಹಮಯ ಹಾಗೂ ಸಹಾಯಹಸ್ತ ಚಾಚುವ ಗುಣ ಹೊಂದಿದ್ದ ಬಾಂಬೆ ಜನ ಆಗ ತುಸು ಸ್ವಾರ್ಥಿಗಳಾಗಿದ್ದರು. ಈಗ ನಾನು ಆ ಪರಿಸ್ಥಿತಿಯ ಬಗ್ಗೆ ಯೋಚಿಸುವುದಾದರೆ, ಆಗ ಅವರೆಲ್ಲ ಆತಂಕದಲ್ಲಿದ್ದರು. ಅಭದ್ರತೆ ಹಾಗೂ ಅಸಹಾಯಕತೆಯಿಂದ ಹಾಗೆ ವರ್ತಿಸುತ್ತಿದ್ದರು.

ನಾನು ಒಂದು ಕಚೇರಿಯಲ್ಲಿ ಒಂಟಿಯಾಗಿ ಉಳಿದಿದ್ದರ ಪರಿಣಾಮ ಹಲವು ಸಮಸ್ಯೆ ಗಳನ್ನು ಎದುರಿಸಬೇಕಾಯಿತು. ಬದಲಿಸಲು ಬಟ್ಟೆಗಳಿರಲಿಲ್ಲ. ಕೆಲ ನೂರು ರೂಪಾಯಿಗಳನ್ನು ಬಿಟ್ಟರೆ ಜೇಬಿನಲ್ಲಿ ಮತ್ತೇನೂ ಇರಲಿಲ್ಲ. ಅದೃಷ್ಟವಶಾತ್ ಗಲಭೆಯ ಮೊದಲ ದಿನವೇ ಟೂತ್ ಪೇಸ್ಟ್, ಟೂತ್ ಬ್ರಷ್ ಹಾಗೂ ಸಾಬೂನು ಕೊಂಡಿದ್ದೆ. ಆಫೀಸಿನ ಓವರ್ ಹೆಡ್ ಟ್ಯಾಂಕಿನಲ್ಲಿ ಸಾಕಷ್ಟು ನೀರಿತ್ತು. ಬಿಲ್ಡಿಂಗಿನಲ್ಲಿ ಬೇರೆ ಯಾರೂ ಇಲ್ಲದ ಕಾರಣ ನೀರು ಖರ್ಚಾಗಿರಲಿಲ್ಲ. ಪ್ರತಿ ದಿನ ಸ್ನಾನ ಮಾಡಿ ಇರುವ ಅಂಗಿಯನ್ನು ರಾತ್ರಿ ತೊಳೆದು ಹಾಕಿಕೊಂಡರೂ ನಾನು ಶುಚಿಯಾಗಿದ್ದೇನೆ ಎಂಬ ಭಾವನೆ ಬರುತ್ತಿರಲಿಲ್ಲ. ದಿನಗಟ್ಟಲೆ ಕಸ ಗುಡಿಸದೆ, ಒರೆಸದೆ ಕಚೇರಿಯಲ್ಲಿ ದಿನ ನೂಕುತ್ತಿದ್ದುದು ನನ್ನ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತ್ತು.
ನನ್ನ ಕಷ್ಟದ ದಿನಗಳಲ್ಲೂ ಗುಜರಾತಿ ಪತ್ರಿಕೆ ‘ಜನ್ಮಭೂಮಿ’ಯ ಸಿಬ್ಬಂದಿ ನನಗೆ ಸಹಕಾರಿಯಾಗಿದ್ದರು. ಜತಿನ್ ದೇಸಾಯಿ, ವಿರಾಟ್ ಮಜುಂದಾರ್ ಮತ್ತು ಅನೇಕರು ನನಗೆ ಆಹಾರ ಕೊಟ್ಟರು, ಅಗತ್ಯ ಬಿದ್ದಾಗ ಕಚೇರಿಗೆ ಡ್ರಾಪ್ ಮಾಡುತ್ತಿದ್ದರು ಹಾಗೂ ಅವರ ಲೈಬ್ರರಿಯನ್ನು ಉಪಯೋಗಿಸಲು ಅವಕಾಶ ಮಾಡಿಕೊಟ್ಟರು. ಅಷ್ಟೇ ಅಲ್ಲ, ಕೆಲ ಸುದ್ದಿಗಳನ್ನೂ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಪತ್ರಿಕೆಯ ವರದಿಗಾರರ ಜಾಲ ದೊಡ್ಡ ದಿತ್ತು. ಹಾಗಾಗಿ ಮಹಾರಾಷ್ಟ್ರದ ಇತರೆಡೆಗಳಲ್ಲಿ ಏನಾಗುತ್ತಿತ್ತು ಎಂಬುದರ ಮಾಹಿತಿ ಅಲ್ಲಿ ಸಿಗುತ್ತಿತ್ತು.

ನಾಲ್ಕು ದಿನಗಳ ಕಾಲ ಕಚೇರಿಯಲ್ಲಿ ಕಳೆದ ನಂತರ ಜತಿನ್ ಮತ್ತು ನಾನು ಮನೆಗೆ ಹೋಗಲು ನಿರ್ಧಾರ ಮಾಡಿದೆವು. ನಾವಿಬ್ಬರೂ ಅಂಧೇರಿಯಲ್ಲಿ ನೆರೆಹೊರೆಯವರು. ಚರ್ಚ್‍ಗೇಟ್ ರೈಲ್ವೆ ನಿಲ್ದಾಣದಲ್ಲಿ ರಾತ್ರಿ 9 ಗಂಟೆಗೆ ಸೇರೋಣ ಎಂದು ಮಾತಾಡಿಕೊಂಡೆವು. ಬೇರೆ ದಿನಗಳಲ್ಲಿ ಆ ಸ್ಥಳಕ್ಕೆ ಅಂತಹ ಹೊತ್ತಿನಲ್ಲಿ ಹೋಗುವುದೆಂದರೆ ಸಾಕಷ್ಟು ಜನರ ಮಧ್ಯೆ ನೂಕುನುಗ್ಗಲಿನಲ್ಲಿ ಹೆಣಗಾಡಬೇಕಾಗಿತ್ತು. ಆದರೆ ಅಂದು ಎಲ್ಲ ಪ್ಲಾಟ್ ಫಾರಂಗಳು ಖಾಲಿ ಖಾಲಿ. ಅಂಧೇರಿಗೆ ಹೋಗುವ ರೈಲಿನಲ್ಲಿ ಒಬ್ಬ ಪ್ರಯಾಣಿಕನೂ ಇಲ್ಲ. ಆತಂಕದಿಂದಲೇ ರೈಲು ಹತ್ತಿದೆವು. ರೈಲು ಚಾಲಕನ ಹತ್ತಿರದ ಬೋಗಿಯಲ್ಲೇ ಕೂತೆವು. 45 ನಿಮಿಷಗಳ ಪ್ರಯಾಣದಲ್ಲಿ ನಾವು ಸುತ್ತ ಕಣ್ಣು ಹಾಯಿಸಿದಲ್ಲಿ ಉರಿವ ಬೆಂಕಿ, ಆಶ್ರಯಕ್ಕಾಗಿ ಓಡುವ ಜನ, ಹಿಂಸೆಗೆ ತುತ್ತಾದವರ ಕೂಗು, ಮೊರೆತ. ಅದೊಂದು ಭೀಕರ ಅನುಭವ.

ಅಂತೂ ಮನೆಯನ್ನು ತಲುಪಿದೆ. ದಾರಿ ಮಧ್ಯೆ ‘ಪಾಕಿಸ್ತಾನಿ ಕಮಾಂಡೋಗಳ’ ದಾಳಿಯನ್ನು ತಡೆಯಲೆಂದು ಕಟ್ಟಿಕೊಂಡಿದ್ದ ಗುಂಪನ್ನು ಎದುರಿಸಬೇಕಾಯಿತು. “ಪಾಕಿಸ್ತಾನದ ಯುದ್ಧ ಹಡಗೊಂದು ಜುಹುವಿನಲ್ಲಿ ಲಂಗರು ಹಾಕಿದೆ. ಅದರಲ್ಲಿನ ಸೈನಿಕರು ಯಾವಾಗ ಬೇಕಾದರೂ ದಾಳಿ ಮಾಡಬಹುದು” ಎಂದು ಅವರು ತಿಳಿದಿದ್ದರು. ಆ ಬಗ್ಗೆ ನಾನು ಒಬ್ಬ ವರದಿಗಾರನಾಗಿಯೂ ತಿಳಿಯದಿದ್ದುದಕ್ಕೆ ಅವರು ವಿಚಿತ್ರವಾಗಿ ಕಂಡರು. “ಬಿಬಿಸಿಯಲ್ಲಿ ಆ ಸುದ್ದಿ ಬಂತು” ಎಂದು ಮದ್ಯದ ಪ್ರಭಾವದಲ್ಲಿದ್ದ ವ್ಯಕ್ತಿಯೊಬ್ಬ ಹೇಳಿದ. ಹಾಗೆ ಹೇಳಿದರೆ ನಾನು ನಂಬುತ್ತೇನೆ ಎಂಬುದು ಅವನ ಲೆಕ್ಕಾಚಾರ. ಅಲ್ಲ, ಅದು ನಿಜವೇ ಆಗಿದ್ದಲ್ಲಿ ಹೀಗೆ ಹಾಕಿ ಸ್ಟಿಕ್ಸ್, ಕ್ರಿಕೆಟ್ ಬ್ಯಾಟ್ ಹಿಡ್ಕೊಂಡ ಗುಂಪು ಹಡಗಿನಲ್ಲಿ ಶಸ್ತ್ರಗಳೊಂದಿಗೆ ಬಂದಿರುವ ಸೈನಿಕರನ್ನು ಹೇಗೆ ತಡೆದಾರು?

ಮಾರನೆಯ ದಿನ ಬೆಳಿಗ್ಗೆ ನಾವು ಮತ್ತೆ ದಕ್ಷಿಣ ಬಾಂಬೆಯಲ್ಲಿದ್ದೆವು. ಜತಿನ್‍ನ ದ್ವಿಚಕ್ರ ವಾಹನದಲ್ಲಿ 28ಕಿ.ಮೀ.ಗಳನ್ನು ಕ್ರಮಿಸಿದೆವು, ಯಾವುದೇ ಸಂಚಾರಿ ದೀಪಗಳ ಕಾಟವಿಲ್ಲದೆ. ಈ ಬಾರಿ ಮನೆಯಿಂದ ಹೊರಡುವಾಗ ಸುದೀರ್ಘ ಅವಧಿಗೆ ಸಾಕಾಗುವಷ್ಟು ತಯಾರಿ ಮಾಡಿಕೊಂಡು ಬಂದಿದ್ದೆ. ಅದೃಷ್ಟವಶಾತ್, ಪರಿಸ್ಥಿತಿ ಸುಧಾರಣೆಯ ಹಾದಿಯಲ್ಲಿತ್ತು. ಬಾಂಬೆ ತನ್ನ ಹಿಂದಿನ ಸ್ಥಿತಿಗೆ ಮರಳಲು ವಾರಗಳೇ ಬೇಕಾಗಿತ್ತು. ಪೆದ್ದಾರ್ ರಸ್ತೆಯಿಂದ ಸ್ನೇಹಿತನೊಬ್ಬ ಫೋನ್ ಮಾಡಿ ಶಿವಸೇನೆ ಕಾರ್ಯಕರ್ತರು ‘ರಕ್ಷಣಾ ನಿಧಿ’ಗಾಗಿ ಅಲ್ಲಿಯ ವ್ಯಾಪಾರಿಗಳನ್ನು ಕೇಳುತ್ತಿದ್ದಾರೆ ಎಂದ. ಶಿವಸೇನೆಯ ಕಾರ್ಯಕರ್ತರಿಂದ ದಾಳಿಗೆ ಒಳಗಾಗ ದಿರಲೆಂದು ಅವರು ಹೀಗೆ ಹಣ ನೀಡಬೇಕಿತ್ತು. ನನ್ನ ಸ್ನೇಹಿತ ಹಣ ಪಡೆದು ಶಿವಸೇನೆ ಯವರು ನೀಡಿದ್ದ ರಸೀದಿಯ ಪ್ರತಿಯೊಂದನ್ನು ಸಂಗ್ರಹಿಸಿದ್ದ. ‘ಪಯೋನೀರ್’ ಪತ್ರಿಕೆಗೆ ಆ ಸುದ್ದಿ ಬೇಕಾ ಎಂದು ತಿಳಿಯುವ ಉದ್ದೇಶದಿಂದ ಸ್ನೇಹಿತ ಕರೆ ಮಾಡಿದ್ದ. ಹಣ ಕೊಟ್ಟು ರಸೀದಿ ಪಡೆದವನ ಹೆಸರು ಬಹಿರಂಗ ಮಾಡದಿದ್ದರಷ್ಟೆ ಸಾಕು ಎನ್ನುವ ಅವನ ಷರತ್ತಿಗೆ ನಾನು ಒಪ್ಪಿದೆ.

ಇಂತಹದೊಂದು ಸುದ್ದಿಯ ಬಗ್ಗೆ ದೆಹಲಿಯ ಕಚೇರಿಗೆ ಹೇಳಿದ ಕೂಡಲೇ ನನ್ನ ಹಿರಿಯ ಸಹೋದ್ಯೋಗಿಗಳೂ ಉತ್ಸುಕರಾದರು. ಆದರೆ ಸುದ್ದಿ ಕಳುಹಿಸುವ ಹೊತ್ತಿಗೆ ನಮ್ಮ ಚೀಫ್ ಆಫ್ ಬ್ಯೂರೋ ಪ್ರೇಮಾನಂದ ಝಾ ಹಾಗೂ ಸಂಪಾದಕರಿಗೆ ಈ ಸುದ್ದಿ ಪ್ರಕಟಿಸಿದರೆ ನನಗೆ ಒದಗಬಹುದಾದ ಅಪಾಯಗಳ ಬಗ್ಗೆ ಚಿಂತೆಯಾಯಿತು. ಬಾಂಬೆಯಲ್ಲಿ ನಾನು ಒಬ್ಬನೇ ಇದ್ದುದರಿಂದ ಸುಲಭವಾಗಿ ದಾಳಿಗೆ ತುತ್ತಾಗಬಹುದಿತ್ತು. ಕೊನೆಗೆ ಆ ಸುದ್ದಿ ಬಾಂಬೆಯಿಂದ ಬಂದದ್ದು ಎಂಬ ಮಾಹಿತಿಯನ್ನು ಮರೆಮಾಚಿ ಸುದ್ದಿ ಪ್ರಕಟಿಸಲು ತೀರ್ಮಾನಿಸಲಾಯಿತು. ನಂತರ ಆ ಸುದ್ದಿಯನ್ನು ನವದೆಹಲಿಯ ಡೇಟ್ ಲೈನ್‍ನಲ್ಲಿ ಕೇಂದ್ರ ಗೃಹ ಇಲಾಖೆಯ ಹೆಸರು ಹೇಳಲಿಚ್ಛಿಸದ ಅಧಿಕಾರಿಗಳಿಂದ ಪಡೆದ ಮಾಹಿತಿ ಎಂಬಂತೆ ಮುಖಪುಟದಲ್ಲಿ ಪ್ರಕಟಿಸಲಾಯಿತು. ಕೆಲ ವಾರಗಳ ನಂತರ ಬಾಂಬೆಯ ಪತ್ರಿಕೆಯೊಂದು ಇದೇ ಸುದ್ದಿಯನ್ನು ‘ಎಕ್ಸ್‍ಕ್ಲೂಸಿವ್’ ಎಂಬ ವಿಶೇಷಣದೊಂದಿಗೆ ಪ್ರಕಟಿಸಿತು.

ಬಾಂಬೆ ಸಿಟಿ ಸಹಜ ಸ್ಥಿತಿಗೆ ಮರಳಲು ಸಾಕಷ್ಟು ಸಮಯ ಬೇಕಾಯಿತು. ಹೊಟೇಲ್, ರೆಸ್ಟೋರೆಂಟ್‍ಗಳು ವ್ಯವಹಾರ ಆರಂಭಿಸಿದ ನಂತರವೂ ಹಲವು ದಿನಗಳ ಕಾಲ ವ್ಯಾಪಾರ ಮೊದಲಿನಂತಿರಲಿಲ್ಲ. ಗಲಭೆ ನಿಂತ ಎಷ್ಟೋ ದಿನಗಳ ನಂತರವೂ ರಾತ್ರಿ ಸಮಯದಲ್ಲಿ ರೈಲುಗಳು ಖಾಲಿ ಖಾಲಿ. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಅಪನಂಬಿಕೆ ಹೆಚ್ಚಾಗಿ ಧ್ರುವೀಕರಣ ಆರಂಭವಾಗಿತ್ತು. ಶಿವಸೇನೆ ಬೆಂಬಲಿಸುವ ಪತ್ರಕರ್ತರು, ಜಾಹೀರಾತು ಕ್ಷೇತ್ರದ ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಕೆಲ ಪ್ರೊಫೆಸರ್‍ಗಳೂ ಇದ್ದರು.

ನಮ್ಮ ಕಚೇರಿಯಲ್ಲಿದ್ದ ನಾಲ್ಕು ಸಹಾಯಕರ ಪೈಕಿ ಒಬ್ಬ ನನ್ನ ಬಳಿ ಬಂದು ದುಬಾರಿ ಬೆಲೆಯ ಶೂ ಬೆಲೆ ಕೇವಲ ನೂರು ರೂಪಾಯಿಗೆ ಬೇಕಾ ಎಂದು ಕೇಳಿದ. ಅವನ ಸ್ನೇಹಿತನೊಬ್ಬ ಗಲಭೆ ಸಮಯದಲ್ಲಿ ದಾದರ್‍ನಲ್ಲಿರುವ ‘ದಾವೂದ್ ಶೂ’ ಅಂಗಡಿಗೆ ನುಗ್ಗಿ ಹಲವು ಜೊತೆ ಶೂಗಳನ್ನು ಹೊತ್ತು ತಂದಿದ್ದ. ನಾನು ಬೇಡ ಎಂದಾಗ ಅವನಿಗೆ ಆಶ್ಚರ್ಯವಾಯಿತು. “ಅದರಲ್ಲಿ ತಪ್ಪೇನಿದೆ ಸಾರ್? ಆ ಕಂಪನಿ ದಾವೂದ್ ಇಬ್ರಾಹಿಂಗೆ ಸೇರಿದ್ದು, ಸರಿಯಾಗಿಯೇ ಮಾಡಿದ್ದಾರೆ” ಎಂದು ವಾದಿಸಿದ. “ಅಲ್ಲಪ್ಪ, ಆ ಅಂಗಡಿ ಷರೀಫ್ ಸದ್ರುದೀನ್ ದಯಾಗೆ ಸೇರಿದ್ದು” ಎಂದೆ. “ಯಾರಾದ್ರೂ ಆಗಲಿ, ಅವನೊಬ್ಬ ಮುಸ್ಲಿಂ ತಾನೆ” ಎಂದು ವಾದಿಸಿದ. ನಂತರ ಮುಂದೊಂದು ದಿನ ದಯಾ ನನಗೆ ಹೇಳಿದರು, ಅವರ ಕುಟುಂಬ 1921ರಷ್ಟು ಹಿಂದೆಯೂ ಶೂ ಅಂಗಡಿಗಳನ್ನು ಆರಂಭಿಸಿತ್ತು. ಅವರಪ್ಪನ ನೆನಪಿಗಾಗಿ ‘ದಾವೂದ್’ ಎಂದು ಹೆಸರಿಟ್ಟಿದ್ದರು. “ನಾನು ನನ್ನ ಬ್ರಾಂಡ್ ಬದಲಾಯಿಸಬೇಕಿತ್ತು. ಹಾಗೆ ಮಾಡಿದ್ದರೆ ಒಳ್ಳೆಯದಿತ್ತು. ಆದರೆ ಹಾಗೆ ರಾತ್ರೋರಾತ್ರಿ ಹೆಸರು ಬದಲು ಮಾಡಲಾಗುವುದಿಲ್ಲ ನೋಡಿ” ಎಂದು ವಿಷಾದಿಸಿದರು. ಆ ಗಲಭೆಗಳಲ್ಲಿ ಅವರ 14 ಅಂಗಡಿಗಳ ಪೈಕಿ ಎಂಟು ಗಲಭೆಕೋರರ ದಾಳಿಗೆ ತುತ್ತಾಗಿದ್ದವು. ಕೆಲವನ್ನು ಸುಟ್ಟು ಧ್ವಂಸ ಮಾಡಿದ್ದರೆ ಮತ್ತೆ ಕೆಲವನ್ನು ಲೂಟಿ ಮಾಡಿದ್ದರು.

ವೈಯಕ್ತಿಕವಾಗಿ ಈ ಗಲಭೆಗಳು ನನ್ನಲ್ಲಿ ಕೆಲವು ನೋವಿನ ಗುರುತುಗಳಿಗೆ ಕಾರಣವಾದವು. ನಾವು ವಾರಕ್ಕೊಮ್ಮೆ ಮಾತ್ರ ಒಟ್ಟಿಗೆ ದುಡ್ಡು ಕೊಟ್ಟು ಪ್ರತಿ ದಿನ ಸವಿಯುತ್ತಿದ್ದ ಪಾವ್, ಮೊಟ್ಟೆ, ಮೀನು ಮಾರುತ್ತಿದ್ದ ರಸ್ತೆ ಬದಿಯ ಅಂಗಡಿಗಳ ಮಾಲೀಕರು ಹಿಂದಿರುಗಿ ಬರಲೇ ಇಲ್ಲ. ಅವರು ತಮ್ಮ ಜೀವ ಉಳಿಸಿಕೊಳ್ಳಲು ಊರು ಬಿಟ್ಟು ಹೋದರೋ ಅಥವಾ ಸತ್ತವರ ಪೈಕಿ ಅವರೂ ಇದ್ದರಾ? ಗೊತ್ತಿಲ್ಲ. ಆದರೆ ನಾನು ಇಂದಿಗೂ ಅವರ ಋಣದಲ್ಲಿದ್ದೇನೆ.

ಇದು ಯಾವ ಸೀಮೆಯ ಚರಿತ್ರೆ? ಹೇಳದೆ ಉಳಿದ ಸುದ್ದಿಯ ಕತೆಗಳು : ಅಜಿತ್ ಪಿಳ್ಳೈ : ಅನುವಾದ-ಸತೀಶ್ ಜಿ ಟಿ

-ಅಹರ್ನಿಶಿ ಪ್ರಕಾಶನ : ಜ್ಞಾನವಿಹಾರ ಬಡಾವಣೆ , ಕಂಟ್ರಿಕ್ಲಬ್ ಎದುರು ,ವಿದ್ಯಾನಗರ , ಶಿವಮೊಗ್ಗ 577203

Leave a Reply

Your email address will not be published.