ಬಹುಕೋನ ಸ್ಪರ್ದಿಯಿಂದ ಕ್ಲಿಷ್ಟಗೊಳ್ಳುತ್ತಿರುವ ಗುಜರಾತ್ ಚುನಾವಣೆ

ಕು.ಸ.ಮಧುಸೂದನರಂಗೇನಹಳ್ಳಿ

ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ರಾಜ್ಯ ವಿದಾನಸಭಾ ಚುನಾವಣೆಯಲ್ಲಿ ಬಾಜಪೇತರ ಪಕ್ಷಗಳು ಮೈತ್ರಿಕೂಟವೊಂದನ್ನು ರಚಿಸಿಕೊಳ್ಳುವುದರತ್ತ ಮನಸ್ಸು ಕೊಡದೆ ಸ್ವತಂತ್ರವಾಗಿ ಸ್ಪರ್ದಿಸುತ್ತಿವೆ. ಹೀಗಾಗಿ ಸತತವಾಗಿ ಇಪ್ಪತ್ತೆರಡು ವರ್ಷಗಳಿಂದ ಅಡಳಿತ ನಡೆಸುತ್ತಿರುವ ಬಾಜಪ ಸರಕಾರಕ್ಕಿರಬಹುದಾದ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಅದನ್ನು ಸೋಲಿಸುವ ಅವಕಾಶವೊಂದನ್ನು ಹೆಚ್ಚೂ ಕಡಿಮೆ ಕೈಚೆಲ್ಲಿದಂತೆ ಕಾಣುತ್ತಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೇಸ್ ಸೇರಿದಂತೆ, ಪ್ರಾದೇಶಿಕ ಪಕ್ಷಗಳಾದ ಕುಮಾರಿ ಮಾಯಾವತಿಯವರ ಬಹುಜನಪಕ್ಷ, ಅರವಿಂದ್ ಕೇಜ್ರೀವಾಲರ ಆಮ್ ಆದ್ಮಿ ಪಕ್ಷ, ಶರದ್ಪವಾರರ ಎನ್.ಸಿ.ಪಿ. ಮತ್ತು ಶಂಕರ್ ಸಿಂಗ್ ವಘೇಲಾರವರ ಆಲ್ ಇಂಡಿಯಾ ಹಿಂದುಸ್ಥಾನ್ ಕಾಂಗ್ರೇಸ್, ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ ಮುಂತಾದ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ದಿಸುತ್ತಿದ್ದು ಬಾಜಪಕ್ಕೆ ಅನುಕೂಲವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.

ಬಹಳ ಮುಖ್ಯವಾಗಿ ಕಳೆದ ಒಂದೂವರೆ ದಶಕಗಳಿಂದಲೂ ಕಾಂಗ್ರೇಸ್ಸಿನ ಮಿತ್ರ ಪಕ್ಷವಾಗಿ ಯು.ಪಿ.ಎ. ಸರಕಾರದಲ್ಲಿ ಅಧಿಕಾರವನ್ನು ಹಂಚಿಕೊಂಡಿದ್ದ ಶರದ್ ಪವಾರರ ಎನ್.ಸಿ.ಪಿ. ಎಲ್ಲ 182 ಸ್ಥಾನಗಳಲ್ಲಿಯೂ ಸ್ಪರ್ದಿಸುತ್ತಿದ್ದು ಕಾಂಗ್ರೇಸ್ ಪಡೆಯಬಹುದಾದ ಮತಗಳ ಬುಟ್ಟಿಗೆ ಕೈ ಹಾಕಿದೆ. ಕೆಲತಿಂಗಳ ಹಿಂದೆ ನಡೆದ ಗುಜರಾತ್ ರಾಜ್ಯಸಭಾ ಚುನಾವಣೆಗಳಲ್ಲಿ ಅಹಮದ್ ಪಟೇಲ್ ವಿರುದ್ದ ಮತಚಲಾಯಿಸಿದ ಎನ್.ಸಿ.ಪಿ. ಶಾಸಕರುಗಳ ವರ್ತನೆಯೇ ಎರಡೂ ಪಕ್ಷಗಳ ಮೈತ್ರಿ ಮುರಿಯಲು ಮೊದಲ ಕಾರಣವಾಯಿತು. ಇದರ ಜೊತೆಗೇನೆ ಎರಡು ವಾರದ ಹಿಂದೆ. ಗುಜರಾತ್ ಎನ್.ಸಿ.ಪಿ.ಯ ರಾಜ್ಯಘಟಕದ  ಹಲವು ನಾಯಕರುಗಳು ಸುಮಾರು ಐನೂರು ಕಾರ್ಯಕರ್ತರುಗಳ ಜೊತೆಗೆ  ರಾಹುಲ್ ಗಾಂದಿಯ ಸಮ್ಮುಖದಲ್ಲಿ ಕಾಂಗ್ರೇಸ್ಸನ್ನು ಸೇರಿದ್ದು  ಸಹ ಎನ್.ಸಿ.ಪಿ.ಯ ನಾಯಕರುಗಳಲ್ಲಿ ಅಸಮಾದಾನ ಮೂಡಿಸಿತು. ಹೀಗಾಗಿ ಗುಜರಾತ್ ಚುನಾವಣೆಗಳ ಹಿನ್ನೆಲೆಯಲ್ಲಿ ಕಾಂಗ್ರೇಸ್ ಮತ್ತು ಎನ್.ಸಿ.ಪಿ.ಯ ನಡುವೆ ಚುನಾವಣಾಪೂರ್ವ ಮೈತ್ರಿಯ ಯಾವುದೆ ಮಾತುಕತೆಗಳೂ ನಡೆಯಲೇ ಇಲ್ಲ. ಇದರ ಮದ್ಯೆ ಎನ್.ಸಿ.ಪಿ.ಯ .ಹೆಸರು ಹೇಳದ ನಾಯಕರೊಬ್ಬರು ಕಾಂಗ್ರೇಸ್ಸಿನಿಂದ ಶಾಸಕರುಗಳು ಬಾಜಪ ಸೇರುತ್ತಿದ್ದು, ತನ್ನ ಪಕ್ಷದ ನಾಯಕರುಗಳನ್ನು ಕಾಪಾಡಿಕೊಳ್ಳಲು ವಿಫಲವಾದ ಕಾಂಗ್ರೇಸ್ ತಮ್ಮ ಪಕ್ಷವನ್ನು ದುರ್ಬಲಗೊಳಿಸಲು ಹೊರಟಿದೆಯೆಂದು ಅರೋಪಿಸಿ ಕಾಂಗ್ರೇಸ್ ಜೊತೆಗಿನ ಸಖ್ಯವನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಯು.ಪಿ.ಎ.ಆಡಳಿತಾವಧಿಯಲ್ಲಿ ಸತತವಾಗಿ ಹತ್ತು ವರ್ಷಗಳ ಕಾಲ ಅಧಿಕಾರ ಅನುಭವಿಸಿದ ಎನ್.ಸಿ.ಪಿ.ಯ ಶರದ್ ಪವಾರ್ ಮಹಾರಾಷ್ಟ್ರದ ವಿದಾನಸಭಾ ಚುನಾವಣೆಗಳ ಸಂದರ್ಭದಲ್ಲಿಯೂ ಕಾಂಗ್ರೇಸ್ಸಿಗೆ ಕೈಕೊಟ್ಟು  ಸ್ವತಂತ್ರವಾಗಿ ಸ್ಪದರ್ಿಸಿ ಬಾಜಪದ ಗೆಲುವಿಗೆ ಪೂರಕವಾಗಿ ಕೆಲಸ ಮಾಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ನಿದಾನವಾಗಿ ಎನ್.ಸಿ.ಪಿ.ಯು ಬಾಜಪದತ್ತ ವಾಲುತ್ತಿದೆಯೆ ಎಂಬ ಅನುಮಾನ ಜನತೆಯಲ್ಲಿ ಮೂಡುತ್ತಿದೆ.

ಇನ್ನು ಅರವಿಂದ್ ಕೇಜ್ರೀವಾಲರ ಆಮ್ ಆದ್ಮಿ ಪಕ್ಷ ಇತ್ತೀಚೆಗೆ ಪಂಜಾಬ್ ಮತ್ತು ಗೋವಾಗಳಲ್ಲಿ ಸೋಲುಅನುಭವಿಸಿದ್ದು ಗುಜರಾತ್ ಚುನಾವಣೆಯಲ್ಲಿ ಸ್ಪದರ್ಿಸದೆಇರುವ ನಿದರ್ಾರವನ್ನು ತೆಗೆದುಕೊಂಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅದು ಕನಿಷ್ಠ 24 ಕ್ಷೇತ್ರಗಳಲ್ಲಿ  ಸ್ಪರ್ದಿಸುವ ತೀರ್ಮಾನ ಕೈಗೊಂಡಿದ್ದು, ಅಹಮದಾಬಾದ್, ಸೌರಾಷ್ಟ್ರ, ಸೂರತ್ ಸುತ್ತಲಿನ ಪ್ರದೇಶಗಳಲ್ಲಿ ತನ್ನ ಅಭ್ಯಥಿಗಳನ್ನು ಕಣಕ್ಕಿಳಿಸಲಿದೆ. ತನಗೆ ಗೆಲ್ಲುವ ಭರವಸೆ ಇರುವ ಮತ್ತು  ಬಾಜಪದ ವಿರುದ್ದ ಜನಾಭಿಪ್ರಾಯ ಬಲವಾಗಿರುವ ಕ್ಷೇತ್ರಗಳಲ್ಲಿ ತಾನು ಸ್ಪರ್ದಿಸುತ್ತಿರುವುದಾಗಿ ಹೇಳಿಕೊಂಡಿದೆ. ಆಮ್ ಆದ್ಮಿಯ ಈ ನಡೆ ಕೂಡಾ ಕಾಂಗ್ರೇಸ್ಸಿನ ಮತಗಳಿಕೆಗೆ ಪೆಟ್ಟುಕೊಡಲಿದೆ.

ಬಹುಜನ ಪಕ್ಷದ ಕುಮಾರಿ ಮಾಯಾವತಿಯವರು ಸಹ ತಮ್ಮ ಪಕ್ಷ ಈ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ದಿಸಲಿದ್ದು  ಗುಜರಾತ್ ದಲಿತ ಸಮುದಾಯದ ಮತಗಳನ್ನು ಪಡೆಯುವ ವಿಶ್ವಾಸ ಇದೆಯೆಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೇಸ್ಸಿನ ದಲಿತ ಮತಬ್ಯಾಂಕು ಇದರಿಂದ ಛಿದ್ರಗೊಳ್ಳುವ ಅಪಾಯವಿದೆ.  ಗುಜರಾತ್ ಚುನಾವಣೆಯಲ್ಲಿ ನಿರ್ಣಾಯಕವಾಗುವ ದಲಿತ ಮತಗಳು ಹಂಚಿಹೋದರೆ ಮತ್ತೆ ಅದರ ಲಾಭ ಬಾಜಪಕ್ಕೆ ಆಗುವುದು ಖಚಿತ.

ಬಿಹಾರದಲ್ಲಿ  ಬಾಜಪದ  ಜೊತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿಕೊಂಡಿರುವ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ ಸಹ ತಾನು ನೂರಕ್ಕೂ ಅಧಿಕ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ದಿಸುವುದಾಗಿ ಹೇಳಿಕೊಂಡಿದೆ. ಇದು ಬಾಜಪ ಮತ್ತು ನಿತೀಶ್ ಕುಮಾರ್ ಅವರ ಚುನಾವಣಾ ತಂತ್ರಗಾರಿಕೆಯಾಗಿದೆಯಷ್ಟೆ.. ಬಾಜಪ ವಿರೋದಿ ಮತಗಳಲ್ಲಿ ಒಂದಂಶವನ್ನು ಜನತಾದಳ ಪಡೆದು ಕಾಂಗ್ರೇಸ್ಸಿಗೆ ಅದರ ಲಾಭ ಮಾಡಿಕೊಡದಿರುವ ನಿತೀಶರ ಈ ನಡೆಯ ಹಿಂದಿರುವುದು ಚುನಾವಣಾ ತಂತ್ರಗಾರಿಕೆಯಷ್ಟೆ!

ಕೆಲ ತಿಂಗಳ ಹಿಂದೆ ಕಾಂಗ್ರೇಸ್ಸಿಗೆ ರಾಜಿನಾಮೆ ನೀಡಿ ಹೊರಹೋದ ಶಂಕರ್ ಸಿಂಗ್ ವಘೇಲಾರು ತಮ್ಮ ಹಿಂಬಾಲಕರು ರಚಿಸಿದ್ದ ‘ಜನ ವಿಕಲ್ಪ್’ ಸಂಘಟನೆಯ ಮೂಲಕ ಚುನಾವಣೆ ಎದುರಿಸುವ ಸಿದ್ದತೆ ನಡೆಸಿದ್ದರೂ ಚುನಾವಣಾ ಆಯೋಗದಿಂದ ಚಿಹ್ನೆ ಸಿಗಲು ವಿಳಂಬವಾಗುವ ದೃಷ್ಠಿಯಿಂದ ಪಕ್ಕದ ರಾಜಸ್ಥಾನದಲ್ಲಿ ಕಳೆದ ವರ್ಷ ಸ್ಥಾಪನೆಯಾದ ‘ಆಲ್ ಇಂಡಿಯಾ ಹಿಂದುಸ್ಥಾನ್ ಕಾಂಗ್ರೇಸ್’ ಎಂಬ ಪಕ್ಷದ  ದ್ವಜದ ಅಡಿಯಲ್ಲಿ ಸ್ಪರ್ದಿಸಲಿದ್ದಾರೆ. ಈ ಹಿಂದುಸ್ಥಾನ್ ಕಾಂಗ್ರೇಸ್ ಚಿಹ್ನೆಯ  ಅಡಿಯಲ್ಲಿ ಎಲ್ಲ 182 ಕ್ಷೇತ್ರಗಳಲ್ಲಿಯೂ ತಮ್ಮ ಅಭ್ಯರ್ಥಿಗಳನ್ನು ಹಾಕಲಿದ್ದಾರೆ. ಬಹುಶ: ಇದು ಸಹ ಬಾಜಪ ಮತ್ತು ವಘೇಲಾರವರ ನಡುವಿನ ಒಂದು ಒಳ ಒಪ್ಪಂದದ ತಂತ್ರಗಾರಿಕೆಯಾಗಿದೆ ಎನಿಸುತ್ತದೆ. ಯಾಕೆಂದರೆ ವಘೇಲಾರವರು ಗುಜರಾತಿನ ಜನಪ್ರಿಯ ಕ್ಷತ್ರಿಯ ನಾಯಕರಾಗಿದ್ದು, ಬಾಜಪಕ್ಕೆ ಸ್ಪಷ್ಟ ಬಹುಮತ ಸಿಗದೇ ಹೋದಲ್ಲಿ  ವಘೇಲಾರವರು ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ. 2004ರಲ್ಲಿ ಕರ್ನಾಟಕದಲ್ಲಿ ಜನತಾದಳ ವಹಿಸಿದ ರಾಜಕೀಯ ಪಾತ್ರವನ್ನು ವಘೇಲಾರವರ ಪಕ್ಷ ನಿಬಾಯಿಸುವ ಸಂಭವ ಇದೆ.

ಸಂಯುಕ್ತ ಜನತಾದಳ ಒಡೆದು ಹೋಳಾಗಿ  ಸೃಷ್ಠಿಯಾದ ಶರದ್ ಯಾದವ್ ಅವರ ಬಣಕ್ಕೆ ಇದೀಗ ಹೊಸ ಚಿಹ್ನೆ ದೊರಕಬೇಕಾಗಿದ್ದು ಗುಜರಾತಿನ ಅದರ ಏಕೈಕ ಶಾಸಕರಾದ ಚೋಟುವಾಸ್ತವ್  ನೇತೃತ್ವದಲ್ಲಿ ಅದು  ಕೆಲವು ಸ್ಥಾನಗಳಲ್ಲಿ ಸ್ಪರ್ದಿಸುವ ಇರಾದೆ ಹೊಂದಿದೆ.

ಅಖಿಲೇಶ್ ಯಾದವರ ಸಮಾಜವಾದಿ ಪಕ್ಷ ತಾನು ಐದು ಕ್ಷೇತ್ರಗಳಲ್ಲಿ ಸ್ಪರ್ದಿಸಲು ಬಯಸಿದ್ದು, ಇದಕ್ಕಾಗಿ ಕಾಂಗ್ರೇಸ್ ಜೊತೆಗೆ ಮೈತ್ರಿಯ ಮಾತುಕತೆ ನಡೆಸುತ್ತಿದೆ.

ಒಟ್ಟಿನಲ್ಲಿ ಬಾಜಪ ಮತ್ತು ಕಾಂಗ್ರೇಸ್ ನಡುವೆ ನೇರ ಹಣಾಹಣಿ ನಡೆದಿದ್ದರೆ ಬರಬಹುದಾಗಿದ್ದ ಪಲಿತಾಂಶವನ್ನು ಈಗ ನಡೆಯಲಿರುವ ಬಹುಕೋನ ಸ್ಪರ್ದೆ ಒಂದಿಷ್ಟಾದರು ಬದಲಾಯಿಸುವುದು ನಿಶ್ಚಿತ. ಬಹುಶ: ಬಾಜಪ ಮಾತ್ರ ಇದನ್ನು ಬಯಸುತ್ತಿದೆ.  ತಾನೊಂದು ರಾಷ್ಟ್ರೀಯ ಪಕ್ಷ ಎಂಬ ಅಹಮ್ಮನ್ನು ತೊರೆದು ಇತರೇ ಪ್ರಾದೇಶಿಕ ಪಕ್ಷಗಳ ಜೊತೆ ಮಾತುಕತೆ ನಡೆಸಿ ಚುನಾವಣಾ ಪೂರ್ವ ಮೈತ್ರಿಯೊಂದನ್ನು ರಚಿಸಿಕೊಳ್ಳುವತ್ತ  ಹೆಜ್ಜೆ ಇಡಬೇಕಾಗಿದ್ದ ಕಾಂಗ್ರೇಸ್ ಇದುವರೆಗು ಆ ದಿಸೆಯಲ್ಲಿ ಒಂದೇ ಒಂದು ಸಣ್ಣ ಪ್ರಯತ್ನವನ್ನೂ ಮಾಡದೆ ತನ್ನ ಹಾದಿಗೆ ತಾನೇ ಮುಳ್ಳುಗಳನ್ನು ಹರಡಿಕೊಂಡುಕೂತಿದೆ.  ರಾಹುಲ್ ಗಾಂದಿಯವರನ್ನು ಪಕ್ಷದ ಅದ್ಯಕ್ಷರನ್ನಾಗಿ ಆಯ್ಕೆ ಮಾಡುವ ಕಾರ್ಯಬಾರದಲ್ಲಿ ತೊಡಗಿಸಿಕೊಂಡಿರುವ ಅದು ತನ್ನ ಪಕ್ಷದ ಆಂತರೀಕ ಚುನಾವಣೆಗಳನ್ನು ಮೊದಲೇ ಮಾಡಿಮುಗಿಸಿಕೊಂಡು ಈ ಚುನಾವಣೆಗಳಿಗೆ ಸಿದ್ದತೆ ನಡೆಸುವತ್ತ ಗಮನ ಹರಿಸಿದ್ದರೆ ಗುಜರಾತ್ ರಾಜ್ಯವನ್ನು ಮರಳಿಪಡೆಯುವ ಅದರ ಪ್ರಯತ್ನ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು. ಆದರೆ ಅದರ ಆಂತರೀಕ ಗೊಂದಲಗಳೇ ಅದಕ್ಕೆ ಅಡ್ಡಿಯಾಗಿರುವಂತೆ ಕಾಣುತ್ತಿದೆ.

ಒಟ್ಟಿನಲ್ಲಿ ತಾನೊಂದು ರಾಷ್ಟ್ರೀಯ ಪಕ್ಷವೆಂಬ ಕಾಂಗ್ರೇಸ್ಸಿನ ಅಹಂಕಾರ,ಗೋವಾ ಸೋಲಿನ ಆಘಾತಗಳಿಂದ ಹೊರಬರಲಾಗದೆ ಹತಾಶೆಗೊಂಡಿರುವ ಆಮ್ ಆದ್ಮಿಯ ಅರವಿಂದ್ ಕೇಜ್ರೀವಾಲರ ಮೌನ, ಯಾರ ಮಾತಿಗೂ ಕಿವಿಗೊಡದ ಬಹುಜನಪಕ್ಷದ ಮಾಯಾವತಿಯವರ ಜಿಗುಟುತನ,  ಅಧಿಕಾರ ಇರುವ ಕಡೆಗೆ ತಕ್ಕಡಿ ವಾಲಿಸುವ ಎನ್.ಸಿ.ಪಿ.ಯ ಶರದ್ ಪವಾರರ  ಅವಕಾಶವಾದಿತನ, ಕೊನೆ ಗಳಿಗೆಯಲ್ಲಿ ಕಾಂಗ್ರೇಸ್ಸನ್ನು ತೊರೆದು ಬಾಜಪಕ್ಕೆ ಲಾಭ ಮಾಡಿಕೊಡಲು ಮುಂದಾಗಿರುವ ಶಂಕರ್ ಸಿಂಗ್ ವಘೇಲಾರವರ ಸಮಯಸಾಧಕತನ ಗುಜರಾತ್ ಚುನಾವಣೆಯನ್ನು ಕ್ಲಿಷ್ಟಗೊಳಿಸಿವೆ.

ನಾಳೆ ಏನಾದರು ಬಾಜಪ ಬಹುಮತ ಪಡೆದು ಅಧಿಕಾರಕ್ಕೆ ಮರಳಿದರೆ ನಾನು ಮೇಲೆ ಕಾಣಿಸಿದ ಅಂಶಗಳೇ ಪ್ರಮುಖ  ಕಾರಣವಾಗಿರುತ್ತವೆ ಎನ್ನುವುದರಲ್ಲಿ ಅನುಮಾನವಿಲ್ಲ.

 

Leave a Reply

Your email address will not be published.