ಬಸವಣ್ಣನ ಹಾದಿಯಲ್ಲಿ ಜನನಾಯಕರು: ಯಾರವರು!!

ಪ್ರೊ. ಟಿ. ಆರ್. ಚಂದ್ರಶೇಖರ್

‘ಬಸವನ ಹಾದಿಯಲ್ಲಿ ಜನನಾಯಕರು’ ಎಂಬ ವಿಷಯ ಕುರಿತಂತೆ ಒಂದು ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದ್ದರ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಶೀರ್ಷಿಕೆಯೇನೋ ಆಕರ್ಷಣೀಯವಾಗಿದೆ. ಇಲ್ಲಿ ನಮಗೆ ಎದುರಾಗುವ ಪ್ರಶ್ನೆಯೆಂದರೆ ಬಸವಣ್ಣನ ಹಾದಿಯಲ್ಲಿ ನಡೆಯುತ್ತಿರುವ ಜನನಾಯಕರು ಯಾರು? ಯಾರವರು? ಇದಕ್ಕೆ ಉತ್ತರ ಸುಲಭವಾಗಿ ದೊರೆಯುವುದಿಲ್ಲ. ಬಸವಣ್ಣನನ್ನು ಅನುಸರಿಸುವುದು ಸುಲಭದ ಸಂಗತಿಯಲ್ಲ.

ಬಸವಣ್ಣನೇ ಹೇಳಿರುವಂತೆ ಅವನದು ಲೋಕ ವಿರೋಧವನ್ನು ಕಟ್ಟಿಕೊಂಡು ನಡೆದ ನಡೆ. ಅದು ದಾಕ್ಷಿಣ್ಯಕ್ಕೆ ಒಳಗಾಗದ ನಡೆ. ಅದು ಕಾಯಕನಿಷ್ಠೆಯ ನಡೆ. ಅವನದು ಮೌಢ್ಯ ವಿರೋಧಿ ನಡೆ. ಅದಕ್ಕೆ ಅವನು ಹೇಳುತ್ತಾನೆ—‘ನೀರ ಕಂಡಲ್ಲಿ ಮುಳುಗುವರಯ್ಯಾ, ಮರನ ಕಂಡಲ್ಲಿ ಸುತ್ತುವರಯ್ಯಾ, ಬತ್ತುವ ಜಲವ, ಒಣಗುವ ಮರನ ನಂಬಿದವರು ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ’.

ಈ ವಚನವನ್ನು ಹೇಳಿಕೊಂಡೇ ಮಳೆಗಾಗಿ ಪರ್ಜನ್ಯ ಹೋಮ ಮಾಡಿಸುವ ಜನನಾಯಕರನ್ನು ಬಸವಣ್ಣ ಹಾದಿಯಲ್ಲಿ ನಡೆಯುವವರು ಎಂದು ಹೇಳಬಹುದೇ? ರೇಷ್ಮೆಯ ಶಾಲನ್ನು ಹೊದ್ದುಕೊಂಡು, ಹಣೆಯ ಮೇಲೆ ಕುಂಕುಮ ಬಳಿದುಕೊಂಡು ಇಡೀ ದೇಶದ ಗುಡಿ ಗುಡಾರಗಳನ್ನು ಸುತ್ತುವವರನ್ನು ಬಸವಣ್ಣನ ಹಾದಿಯಲ್ಲಿ ನಡೆಯುವ ಜನನಾಯಕರು ಎಂದರೆ ಕೂಡಲಸಂಗಮದೇವ ನಗುವನಯ್ಯ. ಹಡಪದ ಅಪ್ಪಣ್ಣಗಳು ಹೇಳುವ ವಚನ ನೋಡಿ:
ತೀರ್ಥ ಯಾತ್ರೆ ಲಿಂಗ ದರುಶನಕ್ಕೆ ಹೋಗಿ
ಕರ್ಮವ ಹಿಂಗಿಸಿಕೊಂಬೆನೆಂಬ ಭಂಗಿತರ ಮಾತ ಕೇಳಲಾಗದು.
ಅದೇನು ಕಾರಣವೆಂದರೆ,
———–
ಇದನರಿಯದೆ ಇನ್ನು ತೀರ್ಥ ಯಾತ್ರೆ ಲಿಂಗ ದರುಶನ ಉಂಟೆಂಬ
ಅಂಗ ಹೀನರ ಮುಖವ ನೋಡಲಾಗದು ಬಸವಪ್ರಿಯ ಕೂಡಲಚೆನ್ನಬಸವಣ್ಣ
ತೀರ್ಥಯಾತ್ರೆ ಮತ್ತು ಲಿಂಗ ದರುಶನ ಇಂದು ವ್ಯಾಪಾರದ ಸಂಗತಿಗಳಾಗಿವೆ. ಅವುಗಳಿಗೆ ಅರ್ಥವಿಲ್ಲವೆಂದು ಬಸವ ಪ್ರಣಾಳಿಕೆ ಹೇಳುತ್ತದೆ. ಇಂದು ತೀರ್ಥಯಾತ್ರೆ ಅನ್ನುವುದು ವ್ಯಾಪಾರವಾಗಿದೆ.

ನಮ್ಮ ಹಿಂದಿನ ಮುಖ್ಯಮಂತ್ರಿಯೊಬ್ಬರು ಅಧಿಕಾರ ಸ್ವೀಕಾರ ಮಾಡಿದ ಮೇಲೆ ತಮ್ಮ ಕಚೇರಿಯ ಪೀಠೋಪಕರಣಗಳನ್ನು ಪುರೋಹಿತರ ನೇತೃತ್ವದಲ್ಲಿ ಪರಿಶುದ್ಧಗೊಳಿಸಿ ಅದರಲ್ಲಿ ಆಸೀನರಾದರು. ಆದರೂ ಅವರಿಗೆ ತಮ್ಮ ಅಧಿಕಾರವಧಿಯನ್ನು ಪೂರೈಸಲಾಗಲಿಲ್ಲ ಎಂಬುದು ಬೇರೆ ಮಾತು!. ಪವಿತ್ರ-ಅಪವಿತ್ರ, ಶುದ್ಧ-ಅಶುದ್ಧಗಳ ನಡುವಿನ ಭಿನ್ನತೆಯನ್ನೇ ಬಸವ ಪ್ರಶ್ನೆ ಮಾಡಿದ. ಅವನ ಈ ಪ್ರಣಾಳಿಕೆ ಹೀಗಿದೆ:
ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ, ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನತಾನರಿದವಂಗೆ, ಫಲವೊಂದೆ ಷಡುದರುಶನ ಮುಕ್ತಿಗೆ,
ನಿಲವೊಂದೆ ಕೂಡಲಸಂಗಮದೇವಾ ನಿನ್ನನರಿದವಂಗೆ.
ಬಸವಣ್ಣನ ಹಾದಿ ರತ್ನಗಂಬಳಿಯ ಹಾದಿಯಲ್ಲ. ಅದು ಹೂವು-ಹಾಸಿಗೆ, ಚಂದ್ರ-ಚಂದನದ ಹಾದಿಯಲ್ಲ. ಅದು ಕಲ್ಲುಮುಳ್ಳಿನ ಹಾದಿ. ಇಂದಿನ ಜನನಾಯಕರಿಗೆ ಬಸವಣ್ಣನ ಕಾಯಕನಿಷ್ಠೆಗಿಂತ ಮರ ಸುತ್ತುವುದು ಬೇಕು. ಗುಡಿಯನ್ನು ಸುತ್ತುವುದಕ್ಕಾಗಿ ನಮ್ಮ ಜನನಾಯಕರು ಹಿಮಾಲಯಕ್ಕೂ ಹೋಗಿ ಬರುತ್ತಾರೆ. ಕೇರಳಕ್ಕೂ ಎಡತಾಕುತ್ತಾರೆ.

ಬಸವಣ್ಣನ ಹಾದಿ ಅಂದರೆ ಅದು ಯಜ್ಞ ಯಾಗಗಳಿಂದ ಮುಕ್ತವಾದ ನಡೆ. ಹೋಮಹವನಗಳ ಹಂಗಿಲ್ಲದ ನಡೆ. ಬಸವಣ್ಣ ಇದರ ಬಗ್ಗೆ ಹೀಗೆ ನುಡಿದಿದ್ದಾನೆ.
ಆಹ್ವಾನವಿಲ್ಲ ಪ್ರಾಣ ಲಿಂಗವಾದ ಕಾರಣ,
ವಿಸರ್ಜನವಿಲ್ಲ ಲಿಂಗ ನೆಲೆಗೊಂಡಿಪ್ಪುದಾಗಿ
ಇದು ಕಾರಣ ಆಹ್ವಾನವಿಲ್ಲ, ವಿಸರ್ಜನವಿಲ್ಲ,
ಶರಣರ ಪರಿ ಬೇರೆ
ಅಂಗಸಂಗವೇ ಲಿಂಗ, ಲಿಂಗಸಂಗವೇ ಮನ,
ನಮ್ಮ ಕೂಡಲಸಂಗನ ಶರಣ ಸುಯಿದಾನಿ.
ಆಹ್ವಾನ ಮತ್ತು ವಿಸರ್ಜನ—ಇವು ಯಜ್ಞದ ಪರಿಭಾಷೆ. ಅವುಗಳನ್ನು ಬಸವ ಸಂವಿಧಾನ ತಿರಸ್ಕರಿಸಿದೆ. ಅದನ್ನು ಕಾಯಾ ವಾಚ ಮನಸಾ ಅನುಸರಿಸುವವರು ಬಸವನ ಹಾದಿಯ ಜನನಾಯಕರಾಗ ಬಲ್ಲರೆ! ಇಂದಿನ ನಮ್ಮ ಜನನಾಯಕರಿಗೆ ಯಜ್ಞ-ಯಾಗಗಳಿಲ್ಲದೆ ನಡೆಯುವುದಿಲ್ಲ. ಹಾಗಾದರೆ ಬಸವಣ್ಣನ ಹಾದಿಯಲ್ಲಿ ನಡೆಯುವ ಜನನಾಯಕರು ಅಂದರೆ ಯಾರವರು! ಬಸವ ಮೌಲ್ಯಗಳನ್ನು ಬದುಕುತ್ತಿರುವವರು ಯಾರವರು?

ಅಕ್ರಮಗಳ ಆಪಾದನೆಯ ಮೇಲೆ ಸೆರೆಮನೆ ಸೇರಿ ಬಂದ ರಾಜಕಾರಣಿಗಳು ಬಸವಣ್ಣನ ಹಾದಿಯ ಜನನಾಯಕರಾಗಬಲ್ಲರೆ? ಡಾ. ಎಂ. ಎಂ. ಕಲಬುರ್ಗಿ ಅವರ ಹತ್ಯೆಯಾದಾಗ ಮತ್ತು ತದನಂತರ ಅದನ್ನು ಖಂಡಿಸಿ ಪ್ರತಿಭಟನೆ ಮಾಡುವುದಕ್ಕೆ ಸಿದ್ದರಿಲ್ಲದ ಜನರು ಇಂದು ಆಯ್ದ ಕೊಲೆಗಳ ಬಗ್ಗೆ ಹೋರಾಟದ ಕರೆ ನೀಡುತ್ತಿದ್ದಾರೆ. ಬಸವಣ್ಣನ ಹಾದಿಯ ಜನನಾಯಕರು ಅಂದರೆ ಡಾ. ಎಂ. ಎಂ. ಕಲಬುರ್ಗಿ. ಕೊನೆಯುಸಿರು ಇರುವವರೆವಿಗೂ ಕಾಯಕದಲ್ಲಿ ನಿಷ್ಠರಾಗಿದ್ದ ಡಾ. ಕಲಬುರ್ಗಿ ಅವರು ಬಸವಣ್ಣನ ಹಾದಿಯಲ್ಲಿ ನಡೆದ ಜನನಾಯಕರು. ಬಸವಣ್ಣನ ಹಾದಿಯಲ್ಲಿ ನಡಯುತ್ತಿರುವ ಜನನಾಯಕರು ಎಂದು ಹೇಳಿಕೊಂಡು ಸಂಸ್ಕøತಕ್ಕೆ ಮಣೆ ಹಾಕುತ್ತಿರುವವರು ಜನನಾಯಕರಾಗುವುದು ಸಾಧ್ಯವಿಲ್ಲ. ವೇದಕ್ಕೆ ಒರೆಯ ಕಟ್ಟುವೆ ಎಂದೂ, ವೇದ ನಡುನಡುಗಿತ್ತು ಎಂದು ವೇದಾಗಮಶಾಸ್ತ್ರಗಳನ್ನು ತಿರಸ್ಕರಿಸಿದ್ದು ಬಸವಣ್ಣನ ಹಾದಿ. ಅವುಗಳು ನಮ್ಮ ಸಮಾಜದ ಅದರ್ಶದ ಸಂಗತಿಗಳೆಂದು ಪೊಳ್ಳು ಪೊಳ್ಳು ಮಾತನಾಡುವವರು ಜನನಾಯಕರಾಗ ಬಲ್ಲರೆ? ಬಸವ ಪ್ರಣಾಳಿಕೆಗೆ ವೇದಾಗಮ ಉಡುಪು ತೊಡಿಸುತ್ತಿರುವ ವಿದ್ವಾಂಸರು ಬಸವನ ಹಾದಿಯ ಜನನಾಯಕರೆಂದರೆ ಅದನ್ನು ನಂಬಲಾಗುವುದಿಲ್ಲ.

ಬಸವಣ್ಣನ ಹಾದಿ ಅಂದರೆ ಅದು ಕೇವಲ ಬಸವಣ್ಣ ಒಬ್ಬ ವ್ಯಕ್ತಿಯಾಗಿ ನಡೆದ-ಕಟ್ಟಿದ ಹಾದಿಯಲ್ಲ. ಅದು ಬಸವ ಸಂಘಟನೆಯ ನಡೆ. ಅದು ವಚನ ಸಂಸ್ಕøತಿಯ ನಡೆ. ಸಮಾನತೆಯ ಕಡೆಗಿನ ನಡೆ. ಮತ್ತೆ ಮತ್ತೆ ಮಾದಾರ ಚೆನ್ನಯ್ಯನನ್ನು ಸ್ಮರಿಸುವ ಬಸವಣ್ಣನದು ಸಾಮಾಜಿಕ ನ್ಯಾಯದ ನಡೆ. ಅದನ್ನು ತಿರಸ್ಕರಿಸುತ್ತಿರುವ ಸಂಘಟನೆಯ ಪ್ರತಿನಿಧಿಯಾಗಿರುವವರು ಬಸವನ ಹಾದಿಯ ಜನನಾಯಕರಾಗುವುದು ಸಾಧ್ಯವಿಲ್ಲ. ಅಂಬಿಗರ ಚೌಡಯ್ಯ ಹೇಳುತ್ತಾರೆ:

ದೇಹಾರ ಮಾಡುವ ಅಣ್ಣಗಳಿರಾ ಒಂದು ತುತ್ತು ಆಹಾರವನ್ನಿಕ್ಕಿರಯ್ಯ್ಯಾ
ದೇಹಾರಕ್ಕೆ ಆಹಾರವೇ ನಿಚ್ಚಳಿಕೆ ದೇಹಾರವ ಮಾಡುತ್ತೆ ಆಹಾರವನ್ನಿಕ್ಕದಿದ್ದರೆ
ಆ ಹರನಿಲ್ಲೆಂದ ಅಂಬಿಗರ ಚೌಡಯ್ಯ.
ಆದರೆ ಇಂದಿಗೂ ಸಾವಿರಾರು ಕೋಟಿ ರೂಪಾಯಿ ಹಣವನ್ನು ಹೂಡಿ ದೇಹಾರ/ದೇವಾಲಯಗಳನ್ನು ಕಟ್ಟಿಸುವವರಿದ್ದಾರೆ. ಅದಕ್ಕೆ ಒತ್ತಾಸೆಯಾಗಿ ನಿಲ್ಲುವವರು ಬಸವಣ್ಣನ ಹಾದಿಯ ಜನನಾಯಕರಾಬಲ್ಲುರೆ? ಬಸವಣ್ಣನದು ಅಕ್ಷರ ದಾಸೋಹದ ನಡೆ. ಆದರೆ ಅಕ್ಷಯ ಪಾತ್ರದ ನಡೆಯವರು ಬಸವನ ಹಾದಿಯ ಜನನಾಯಕರಾಗುವುದು ಅಸಾಧ್ಯ. ಬಸವಣ್ಣ ಸಂವಿಧಾನದಲ್ಲಿ ಅಕ್ಷರ ಮತ್ತು ಆಹಾರ ಜನರ ಹಕ್ಕುಗಳು. ಅವು ದತ್ತಿದಾನ ಉಂಬಳಿಯಲ್ಲ. ದತ್ತಿ-ದಾನದಲ್ಲಿ ಮತ್ತು ಬೇಡುವ-ನೀಡುವ ಪ್ರಕ್ರಿಯೆಯಲ್ಲಿ ನಂಬಿಕೆಯಿರುವವರು ಬಸವ ಸಂವಿಧಾನದಲ್ಲಿ ಸ್ಥಾನ ಪಡೆಯುವುದು ಹೇಗೆ ಸಾಧ್ಯ?

ಜಾನುವಾರುಗಳ ಹೆಸರಿನಲ್ಲಿ ಮುಗ್ದ ಜನರನ್ನು ಕೊಲೆ ಮಾಡುತ್ತಿರುವ, ಅದನ್ನು ತಮ್ಮ ಪವಿತ್ರ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿರುವ ಪಕ್ಷಕ್ಕೆ ಸೇರಿದವರು ಬಸವನ ಹಾದಿಯ ಜನನಾಯಕರಾಗುವುದು ಎಂದರೆ ಅದು ಬಸವಣ್ಣನಿಗೆ, ವಚನ ಸಿದ್ಧಾಂತಕ್ಕೆ ಸಲ್ಲದ ಸಂಗತಿ. ಮತ್ತೊಬ್ಬರ ಆಹಾರದ ಹಕ್ಕನ್ನು ಕಿತ್ತುಕೊಳ್ಳುವವರು ದಾಸೋಹ ಪ್ರೇಮಿ ಬಸವನ ಹಾದಿ ಜನನಾಯಕರಾಗುವುದು ಸಾಧ್ಯವಿಲ್ಲ. ಒಂದು ಸಮಾಜದಲ್ಲಿ ಏಕರೂಪತೆ ಅನ್ನುವುದು ಇರಲು ಸಾಧ್ಯವಿಲ್ಲ.

ಬಹರೂಪತೆಯನ್ನು, ಬಹುವಚನವನ್ನು ಪೋಷಿಸಿದವನು ಬಸವಣ್ಣ. ಆದರೆ ಇಂದು ಎಲ್ಲರಿಗೂ ಒಂದೆ ಆಹಾರ, ಒಂದೆ ಧರ್ಮಗ್ರಂಥ, ಒಂದೆ ಮಾರುಕಟ್ಟೆ—ಮುಂತಾದವುಗಳನ್ನು ಮಾಡಹೊರಟಿರುವವರು ಜನನಾಯಕರು ಅಂದರೆ ಬಸವಣ್ಣ ನಗುತ್ತಾನೆ. ಬಹುರೂಪಿ ಅನ್ನುವುದು ಬಸವನ ಹಾದಿಯಲ್ಲಿ ಒಂದು ಮೌಲ್ಯ. ಅದು ತಿರಸ್ಕಾರದ ಸಂಗತಿಯಲ್ಲ. ಕುಲಹದಿನೆಂಟು ಜಾತಿಗೂ ಮನ್ನಣೆ ನೀಡಿದ್ದ ಬಸವಣ್ಣ ಕೆಳವರ್ಗದವರಿಗೆ, ಕೆಳಜಾತಿಯವರಿಗೆ ಆದ್ಯತೆಯನ್ನು ಕಲ್ಪಸಿದ್ದ. ಅದಕ್ಕಾಗಿಯೇ ಮಾತು ಮಾತಿಗೆ ಅವನು ಮಾದಾರ ಚೆನ್ನಯ್ಯನನ್ನು ತನ್ನ ನಡೆಯ ಮಾನದಂಡವನ್ನಾಗಿ ಮಾಡಿಕೊಳ್ಳುತ್ತಾನೆ. ಆದರೆ ಇಂದು ಸಮಾಜದಲ್ಲಿ ಕೇವಲ ಶೇಕಡ ನಾಲ್ಕೂವರೆಯಷ್ಟಿರುವ ಜನರು ಅಧಿಕಾಧಿಕ ಪ್ರಮಾಣದಲ್ಲಿ ಅಧಿಕಾರಗಳಲ್ಲಿದ್ದಾರೆ. ಮನುಷ್ಯರಿಗಿಂತ ಇಲ್ಲಿ ಪ್ರತಿಭೆಯು ಮುಖ್ಯವಾಗಿ ಬಿಟ್ಟಿದೆ. ಪ್ರತಿಭೆಗೆ ಮಣೆ ಹಾಕುವುದು ಬಸವನ ಹಾದಿಯಲ್ಲ. ವಂಚಿತರಿಗೆ, ಅಂಚಿನಲ್ಲಿರುವವರಿಗೆ ಮಣೆ ಹಾಕುವುದು ವಚನ ಸಂಸ್ಕøತಿ ಮೌಲ್ಯ.

ಇಂದು ಧರ್ಮ ಮತ್ತು ವ್ಯಾಪಾರಗಳ ನಡುವೆ ಬಿಡಿಸಲಾಗದಷ್ಟು ಸಂಬಂಧ ಬೆಳೆದು ಬಿಟ್ಟಿದೆ. ಧರ್ಮವನ್ನು ವ್ಯಾಪಾರದ ಸಾಧನವನ್ನಾಗಿ ಮಾಡಿಕೊಂಡಿರುವ ಸಾಧು-ಸಂತರು ಹಾದಿ ಬೀದಿಯಲ್ಲಿ ದೊರೆಯುತ್ತಾರೆ. ತರತರದ ಎಣ್ಣೆ ಮಾರುವ ಸಾಧುಗಳಿದ್ದಾರೆ. ಹಿಟ್ಟು ಮಾರಾಟ ಮಾಡುವ ಸಂತರಿದ್ದಾರೆ. ಧರ್ಮ ಅನ್ನುವುದು ಇಂದು ಕಾರ್ಪೊರೇಟ್ ಸಂಸ್ಥೆಯಾಗಿ ಗುತ್ತಿದೆ. ಆನ್ ಲೈನಿನಲ್ಲಿ ಪೂಜೆ, ಹರಕೆ, ಯಜ್ಞ-ಯಾಗಗಳನ್ನು ನಡೆಸುವ ಮಹರ್ಷಿಗಳಿದ್ದಾರೆ. ಇವರುಗಳನ್ನು ಬಸವ ಹಾದಿಯ ಜನನಾಯಕರನ್ನಾಗಿ ಮಾಡಿಕೊಳ್ಳುವುದು ಬಸವ ದ್ರೋಹ. ವ್ಯಾಪಾರ ಮಜಭೂತವಾಗಿ ನಡೆಯುವುದಾದರೆ ಬಸವನ ಹೆಸರು, ಮಾರಾಟ ನಡೆಯುವುದಾದರೆ ರಾಘವೇಂದ್ರನ ಭಜನೆ, ಜನ ಸೇರುವುದಾದರೆ ಗಣೇಶನ ಉತ್ಸವ, ಮಾಲೆಯ ಹೆಸರಿನಲ್ಲಿ ಮತಾಂಧತೆಯ ಪೋಷಣೆ ಮುಂತಾದ ಅಟ್ಟಹಾಸದಲ್ಲಿ ನಿರತರಾದವರು ಬಸವ ಹಾದಿ ಜನನಾಯಕರು ಅನ್ನಿಸಿಕೊಳ್ಳಲು ಅನರ್ಹರು. ಕುಟುಂಬ ರಾಜಕಾರಣ ನಡೆಸುವವರು ಬಸವ ಹಾದಿಯ ಜನನಾಯಕರಲ್ಲ.

ಬಸವನ ಹಾದಿಯಲ್ಲಿ ಜನನಾಯಕರು ಅನ್ನುವ ಕಾರ್ಯಕ್ರಮದಲ್ಲಿ ಬಸವ ಮೌಲ್ಯಗಳ ಚರ್ಚೆಗೆ ಪ್ರತಿಯಾಗಿ ಜನನಾಯಕನನ್ನು ಹೊಗಳುವ ಕೆಲಸ ನಡೆಯಿತು. ‘ಕಾಯದ ಕಳವಳಕ್ಕಾಗಿ ಕಾಯಯ್ಯಾ ಎನ್ನೆನು, ಜೀವನೋಪಾಯಕ್ಕಾಗಿ ಈಯಯ್ಯಾ ಎನ್ನೆನು, ಆ ನಿಮ್ಮ ಹಾರೆನು, ಮಾನವರ ಬೇಡೆನು’ ಎಂದು ಬಸವಣ್ಣ ಹೇಳಿದರೆ ನಾನು ತಮ್ಮ ಅಡಿಯಾಳಾಗುತ್ತೇನೆ ಅನ್ನುವ ನಾಯಕರ ಭಕ್ತರಾಗುವ ಜನರು ನಮ್ಮ ನಡುವಿದ್ದಾರೆ. ಈ ಬಗೆಯ ಜನನಾಯಕರುಗಳ ಕಾಲಿಗೆ ಬಿದ್ದು ತಮ್ಮ ಸ್ವಾಮಿನಿಷ್ಠೆಯನ್ನು ತೋರಿಸುವ ಕುಲಪತಿಗಳು ನಮ್ಮ ಮಧ್ಯದಲ್ಲಿದ್ದಾರೆ. ಇವರುಗಳನ್ನು ಜನನಾಯಕರು ಎಂದು ಒಪ್ಪಿಕೊಳ್ಳುವುದು ಹೇಗೆ? ಮಹಿಳೆಯರ ದೇವಾಲಯ ಪ್ರವೇಶದ ಬಗ್ಗೆ ಇನ್ನೂ ಅನುಮಾನ ವ್ಯಕ್ತ ಪಡಿಸುವ ಬಹುಶ್ರ್ರುತರೂ ನಮ್ಮಲ್ಲಿದ್ದಾರೆ. ಇವರು ಪ್ರಸಿದ್ಧ ಅಂಕಣಗಾರರು ಹೌದು. ಇವರನ್ನು ಜನನಾಯಕರೆನ್ನಬಹುದೆ?

ಬಸವ ಸಂವಿಧಾನದ ಮೌಲ್ಯಗಳಾದ ಸಮಾನತೆ, ಸಾಮಾಜಿಕ ನ್ಯಾಯ, ಕಾಯಕನಿಷ್ಠೆ, ಲಿಂಗ ಸಮಾನತೆ, ಅಕ್ಷರ ಸಂಸ್ಕøತಿ, ಆಹಾರ ಹಕ್ಕು ಬಗ್ಗೆ ಇಂದು ಹೋರಾಟ ಮಾಡುತ್ತಿರುವವರು ಎಡಪಂಥೀಯ ಚಿಂತಕರು. ಅಪ್ಪಟ ಬಸವ ಹಾದಿಯ ಜನನಾಯಕರು ಅಂದರೆ ಎಡಪಂಥಿಯ ಚಿಂತಕರು ಎಂಬುದನ್ನು ನಾವು ಅರಿತುಕೊಳ್ಳಬೇಕು. ನಮ್ಮ ರಾಜ್ಯದಲ್ಲಿನ ಅಂಗನವಾಡಿ ಕಾರ್ಯಕರ್ತೆಯರ ಯಶಸ್ವಿ ಹೋರಾಟ ಸಂಘಟಿಸಿದವರು ಯಾರು? ಬೆಂಗಳೂರಿನಲ್ಲಿ ಪಿ ಎಫ್ ಹಣ ಪಡೆಯುವುದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡಿದವರು ಮಹಿಳಾ ಕಾಯಕಜೀವಿಗಳು. ಇವರು ಬಸವ ಹಾದಿಯ ಜನನಾಯಕರು. ಇಂದು ಕರ್ನಾಟಕದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚಳುವಳಿಯನ್ನು ನಡೆಸುತ್ತಿರುವವರು ಬಸವ ಹಾದಿ ಜನನಾಯಕರು.

ಹಸಿವು ಮುಕ್ತ ಕರ್ನಾಟಕಕ್ಕಾಗಿ, ದಲಿತರ ಭೂಮಿ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಜನನಾಯಕರೇನಿದ್ದಾರೆ ಅವರು ಬಸವ ಹಾದಿಯ ಪ್ರಮಥರು. ಜಾತಿಯ ಹೆಸರಿನಲ್ಲಿ, ಜಾನುವಾರು ರಕ್ಷಣೆಯ ರಾಜಕಾರಣದ ಮೂಲಕ, ಮಠಗಳನ್ನು ಗುತ್ತಿಗೆ ಹಿಡಿಯುವ ನೆಪದಲ್ಲಿ ತಾರತಮ್ಯ ಮಾಡುವ, ಅಸಮಾನತೆಯನ್ನು ಊರ್ಜಿತಗೊಳಿಸುವ ಕೆಲಸದಲ್ಲಿ ನಿರತರಾದವರು ಬಸವ ಹಾದಿಯ ಜನನಾಯಕರಾಗುವುದು ಸಾಧ್ಯವಿಲ್ಲ. ಬಸವ ಹಾದಿ ಸಂಸ್ಕøತಿಯನ್ನು ದೆಹಲಿಗೆ ಒಯ್ಯುವವರು ಜನನಾಯಕರಾಗಬಲ್ಲರು. ತಾರತಮ್ಯವಾದಿ ದೆಹಲಿ ಸಂಸ್ಕøತಿಯನ್ನು ಕರ್ನಾಟಕದ ಮೇಲೆ ಹೇರುವವರು ಜನನಾಯಕರಾಗುವುದು ಸಲ್ಲ. ಬಸವ ಮೌಲ್ಯಗಳನ್ನು ಬದುಕವುದಕ್ಕೆ ಪ್ರತಿಯಾಗಿ ಅವನನ್ನು ಸಾಧನವನ್ನಾಗಿ ಮಾಡಿಕೊಂಡು ರಾಜಕಾರಣ ಮಾಡುವವರು ಬಸವ ಸಂಸ್ಕøತಿಗೆ ಸಲ್ಲುವುದಿಲ್ಲ.

ಬಸವ ಹಾದಿಯ ಜನನಾಯಕರು ಯಾರು ಎಂಬುದನ್ನು ನಿರ್ಧರಿಸುವ ಕಾಲ ಕರ್ನಾಟಕಕ್ಕೆ ಈಗ ಬಂದಿದೆ. ನಾವು ಸರಿಯಾದ ಆಯ್ಕೆ ಮಾಡಬೇಕಾಗಿದೆ. ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ ಪರಮೇಶ್ವರನನ್ನು ಕಂಡವರು ಮಾದಾರ ಧೂಳಯ್ಯ ಅವರು. ಅಂಬಲಿಯನ್ನು ಕೂಡಲಸಂಗಮನಿಗೆ ಉಣಿಸಿದವರು ಮಾದಾರ ಚೆನ್ನಯ್ಯನವರು. ಇವರೆಲ್ಲ ಬಸವ ಮೌಲ್ಯಗಳನ್ನು ಬದುಕಿದವರು. ಈ ಮೌಲ್ಯಗಳನ್ನು ಬದುಕುತ್ತಿರುವವರು ಮಾತ್ರ ಬಸವ ಹಾದಿಯ ಜನನಾಯಕರು.

Leave a Reply

Your email address will not be published.