ಬಳ್ಳಾರಿ ಜಿಲ್ಲೆಯ ಪಕ್ಷಿಧಾಮ ಅಂಕಸಮುದ್ರ

ಚಿತ್ರ-ಲೇಖನ : ಸಿದ್ಧರಾಮ ಹಿರೇಮಠ ಕೂಡ್ಲಿಗಿ

siddha (6)

ಬಳ್ಳಾರಿ ಜಿಲ್ಲೆ ಬಿರುಬೇಸಿಗೆಗೆ ಹೆಸರುವಾಸಿ. ಅಂತೆಯೇ ಗಣಿನಾಡು ಎಂಬ ಹೆಸರೂ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇವುಗಳ ಮರೆಯಲ್ಲಿಯೇ ವಿದೇಶಿ ಪಕ್ಷಿಧಾಮವಾಗಿ ಹೊಸದಾಗಿ ರೂಪುಗೊಳ್ಳುತಿರುವ ಹಗರಿಬೊಮ್ಮನಹಳ್ಳಿಯ ಅಂಕಸಮುದ್ರದ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ.

KDL1ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಪುಟ್ಟ ಗ್ರಾಮ. ಗ್ರಾಮಕ್ಕೆ ಹೊಂದಿಕೊಂಡಂತೆಯೇ ಇರುವ ಕೆರೆ ವಿವಿಧ ಪಕ್ಷಿಗಳ ಆಶ್ರಯತಾಣವಾಗಿ ಇತ್ತೀಚೆಗೆ ನಿಧಾನವಾಗಿ ರೂಪುಗೊಳ್ಳುತ್ತಿದೆ. ಇದಕ್ಕೆ ಮುಖ್ಯ ಕಾರಣ ಕೆರೆಯಲ್ಲಿರುವ ಹಲವಾರು ಜಾಲಿಮರಗಳು. ಮರಗಳಲ್ಲಿ ಸುರಕ್ಷಿತವಾಗಿ ಗೂಡು ಕಟ್ಟಲು ಅವಕಾಶವಿರುವುದರಿಂದ ಹಾಗೂ ಕೆರೆಯಲ್ಲಿ ಹೇರಳವಾಗಿ ಆಹಾರವೂ ಸಿಗುವುದರಿಂದಲೂ ವಿದೇಶಿ ಪಕ್ಷಿಗಳು ಬಂದು ಇಲ್ಲಿ ನೆಲೆಯೂರಲು ಅವಕಾಶವಾಗಿದೆ.

KDL2ಈ ಪ್ರದೇಶವನ್ನು ಪಕ್ಷಿಧಾಮವನ್ನಾಗಿಸಲು ಪಕ್ಷಿಪ್ರೇಮಿ ಹಾಗೂ ಪರಿಸರ ತಜ್ಞರಾದ ವಿಜಯ್ ಇಟ್ಟಗಿ, ಸಮದ್ ಕೊಟ್ಟೂರು ಶ್ರಮಿಸಿದ್ದಾರೆ. ಅಂಕಸಮುದ್ರ ಕೆರೆಯಲ್ಲಿ ದೇಶಿ ಹಾಗೂ ವಿದೇಶಿ ಪಕ್ಷಿಗಳು ಬಂದು ನೆಲೆಯೂರುತ್ತಿರುವುದನ್ನು ಅರಿತ ಇವರು ಅವಕ್ಕೆ ಪೂರಕ ವಾತಾವರಣ ನಿರ್ಮಿಸುವ ಸಲವಾಗಿ ಹಲವಾರು ಸುರಕ್ಷಾ ಕಾರ್ಯಗಳನ್ನು ಹಮ್ಮಿಕೊಂಡುದರ ಫಲವಾಗಿ ಇಂದು ಹಲವಾರು ಪಕ್ಷಿಗಳು ನೆಲೆಯೂರಲು ಕಾರಣವಾಗಿದೆ. ಇವರ ಶ್ರಮದ ಫಲವಾಗಿ ಇಂದು ಈ ಕೆರೆಯಲ್ಲಿ 178 ಜಾತಿಯ ಸಾವಿರಾರು ಪಕ್ಷಿಗಳು ಹಾಗೂ ಅಳಿವಿನಂಚಿನಲ್ಲಿರುವ 11 ಜಾತಿಯ ಪಕ್ಷಿಗಳು ಇಲ್ಲಿ ಬೀಡುಬಿಟ್ಟಿವೆ.

ಕೆರೆಯ ಪಕ್ಷಿಗಳನ್ನು ಸಂರಕ್ಷಿಸಲು ಗ್ರಾಮದ ಯುವಕರ ಪಡೆಯನ್ನೇ ಸಿದ್ಧಪಡಿಸಿ ಯುವ ಬ್ರಿಗೇಡ್ ಎಂದು ಹೆಸರಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಕೆರೆಯಲ್ಲಿಯೇ ಸಾವಿರಾರು ಜಾಲಿಮರಗಳನ್ನು ಬೆಳೆಸಲಾಗಿದೆ. ಇದೆಲ್ಲದರೆ ಫಲವಾಗಿ ಇಂದು ಅಂಕಸಮುದ್ರ ಪಕ್ಷಿಧಾವi ನಿಧಾನವಾಗಿ ರೂಪುಗೊಳ್ಳುತ್ತಿದೆ. ಸ್ವಾನ್ ಸಂಸ್ಥೆಯೂ ಪಕ್ಷಿಧಾಮದ ಪಕ್ಷಿಗಳ ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸ್ಥಳೀಯ ಆಡಳಿತವೂ ಇದಕ್ಕೆ ಕೈಜೋಡಿಸಿದೆ. ಪಕ್ಷಿಧಾಮದ ಸಮೀಪ ವಿವಿಧ ಪಕ್ಷಿಗಳ ಚಿತ್ರ ಹಾಗೂ ವಿವರಗಳ ನಾಮಫಲಕಗಳನ್ನು ಸಿದ್ಧಪಡಿಸಲಾಗಿದೆ. ಕೆರೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರಿಗೆ ದೂರದಿಂದಲೇ ಪಕ್ಷಿಗಳನ್ನು ವೀಕ್ಷಿಸಲು ಬೈನಾಕ್ಯುಲರ್‍ಗಳ ವ್ಯವಸ್ಥೆ ಮಾಡಲಾಗಿದೆ.

KDL9ಭೇಟಿ ನೀಡುವ ಪ್ರವಾಸಿಗರ ಅಭಿಪ್ರಾಯಗಳನ್ನೂ, ಸಲಹೆ ಸೂಚನೆಗಳನ್ನೂ ಸಂಗ್ರಹಿಸಲಾಗುತ್ತಿದೆ. ಯುವ ಬ್ರಿಗೇಡ್‍ನ ಸ್ವಯಂಸೇವಕರು ಹಾಗೂ ಗ್ರಾಮದ ಜನತೆಯ ಕಾಳಜಿ, ಪರಿಸರ ಪ್ರೇಮಿಗಳ ಪ್ರಯತ್ನದ ಫಲವಾಗಿ ಅಂಕಸಮುದ್ರದಲ್ಲಿ ಹಕ್ಕಿಗಳ ಕಲರವ ಹೆಚ್ಚಾಗುತ್ತಿದೆ. ಸರ್ಕಾರವೂ ಹೆಚ್ಚಿನ ಕಾಳಜಿಯನ್ನು ವಹಿಸಿದಲ್ಲಿ ಉತ್ತರ ಕರ್ನಾಟಕದಲ್ಲೊಂದು ರಂಗನತಿಟ್ಟು ಪಕ್ಷಿಧಾಮದ ರೀತಿಯಲ್ಲಿ ಪಕ್ಷಿಧಾಮ ನಿರ್ಮಾಣವಾಗುವುದು. ಮುಖ್ಯವಾಗಿ ಪ್ರವಾಸಿಗರು ಪಕ್ಷಿಗಳಿಗೆ ತೊಂದರೆಯಾಗದ ರೀತಿಯಲ್ಲಿಯೇ ಪಕ್ಷಿಗಳನ್ನು ವೀಕ್ಷಿಸಬೇಕು. ಇದಕ್ಕಾಗಿ ಸೂಚನಾ ಫಲಕಗಳು ಹಾಗೂ ಸ್ಥಳೀಯ ಆಡಳಿತ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿರುವುದು ಅತ್ಯಂತ ಅಗತ್ಯವಾಗಿದೆ.

KDL5ಸದ್ಯಕ್ಕೆ ಇಲ್ಲಿ ಇರುವ ಪಕ್ಷಿಗಳು ನೆಕೆಡ್ ಸ್ಟಾರ್ಕ್ (ಉಣ್ಣೆಕುತ್ತಿಗೆ ಬಕ) ಸ್ಪಾಟ್ ಬಿಲ್ಲಡ್ ಪೆಲಿಕಾನ್(ಹೆಜ್ಜಾಲ) ಪೇಂಟೆಡ್ ಸ್ಟಾರ್ಕ್, ನೀರು ನವಿಲು, ಗ್ರೇಟರ್ ಕಾರ್ಮೋರೆಂಟ್(ಹಿರಿಗಾತ್ರದ ನೀರು ಕಾಗೆ)ಪರ್ಪಲ್ ಮೊರೇನ್, ಪರ್ಪಲ್ ಹೆರಾನ್ ಮುಂತಾದವುಗಳು ಇಲ್ಲಿವೆ.
ಹಗರಿಬೊಮ್ಮನಹಳ್ಳಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಅಂಕಸಮುದ್ರಕ್ಕೆ ಬರುವ ಪ್ರವಾಸಿಗರು ಪಕ್ಷಿಗಳಿಗೆ ಯಾವುದೇ ರೀತಿಯಿಂದ ತೊಂದರೆಯಾಗದಂತೆ ವೀಕ್ಷಣೆ ಮಾಡಬೇಕು. ದೂರದ ಸ್ಥಳಗಳಿಂದ ಬರುವವರಿದ್ದಲ್ಲಿ ತಿಂಡಿ ತಿನಿಸನ್ನು ತರಬೇಕಾಗುವುದು. ಆದರೆ ಪಕ್ಷಿಧಾಮದ ಬಳಿ ಯಾವುದೇ ರೀತಿಯಲ್ಲಿ ಕಸವನ್ನು ಚೆಲ್ಲದ ರೀತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕಾಗುತ್ತದೆ. ಪಕ್ಷಿಗಳ ವೀಕ್ಷಣೆಗೆ ಬೆಳಿಗ್ಗೆ ಹಾಗೂ ಸಂಜೆ ಸೂಕ್ತ ಸಮಯ.

 

Leave a Reply

Your email address will not be published.