ಬಲ್ಲಿದಳು

ಗೋದೂರು ಪ್ರಸನ್ ಎಸ್

ಬಲ್ಲಿದಳು

ಬಲ್ಲಿದಳು ನೀನೆಂದು ನಾ ಬಲ್ಲೆ ಗೆಳತಿ,

ಭಾನ ಬಾಗಿಲಲಿ ಬೆಳ್ಳಕ್ಕಿ ಸಾಲು ಕಂಡಿರಲು,

ಬೆಳಕ ಉಂಬ ಮೋಡಕೀಗಾ ಮೋಹಸ್ಪರ್ಶವದು ನೋಡು!

ತೇಲುತ್ತಿದೆ, ಹಾಡುತ್ತಿದೆ, ಕನಸ ಹೆತ್ತ ಮನವು,

ಬರಿದೇ ಒರಲಾಡುತ್ತಿರೆ ಪ್ರೇಮಜ್ವರದಿ ಈ ಒಡಲು,

ನಲಿವುದೀ ನದಿಯ ಜಲ, ಕುಣಿವುದೈ ಹಸುರ ನೆಲ ಅದಕೆ.

ಬಲ್ಲಿದಳು ಬರುವ ಮಾಟ, ಮರುಳಾಗಿ, ಬೆರಗ ಹರಿಸೇ,

ಕವಿಯ ಕಣ್ಣೋಟ ಸೋತು, ಸಂದ ಬಯಕೆಯ (ಕಂಡ ಸವಿಯ),

ಹಾಡಾಗಿ ಬರೆಯೆ; ಇಗೋ ಗುನುಗುವುದೇಕೋ ತುಟಿ ತಂತಾನೇ ಮೆಲ್ಲಗೆ.

ಬಲ್ಲಿದಳು ನೀನೆಂದು ನಾ ಬಲ್ಲೆ ಗೆಳತಿ,

ಹೊಳಪು ನಗುವಿನಲಿ, ಚೆಲುವ ದನಿಬೆರಸಿ,

ಚಿತ್ತಾರಸೆರಗಿನಲಿ, ನಡುವ  ಇರಿಸಿ, ನಡೆಗೊಮ್ಮೊಮ್ಮೆ ಒಮ್ಮೆ ಕಾಲ್ಗೆಜ್ಜೆ ಕುಣಿಸಿ

ಬರುವ ಬಲ್ಲಿದಳು, ನೀನೆಂದು ಬಲ್ಲೆ ಗೆಳತಿ,

ಬಲ್ಲಿದಳು, ಬಲ್ಲಿದಳು, ಎದೆಯಾಳದ ನೆಲದವಳು,

ಬಾಳಯಾನದ ನಾವಿಕಳೂ,  ನೀನೇ ಗೆಳತಿ.

Leave a Reply

Your email address will not be published.