ಬರ ಮತ್ತು ವಲಸೆಯ ಬಹುರೂಪಿ ಚಿತ್ರಗಳು

-ಅರುಣ್ ಜೋಳದಕೂಡ್ಲಿಗಿ

ರೈತರ ಪಾಲಿಗೆ ಬರ ಎನ್ನುವುದು ವಿಶೇಷ ಅತಿಥಿಯಾಗಿ ಉಳಿದಿಲ್ಲ. ಅವರ ಬೆನ್ನಿಗಂಟಿದ ಹುಣ್ಣಾಗಿ ಸದಾ ನೋಯಿಸುತ್ತಲೇ, ಅದಕ್ಕವರು ಚಿಕಿತ್ಸೆ ಪಡೆಯುತ್ತಿರುವ ವಿದ್ಯಮಾನ ಸಹಜವಾಗಿದೆ. ಕನಿಷ್ಠ ಎರಡು ದಶಕಗಳ ಬರದ ಛಾಯೆ ಚೂರು ಅದಲುಬದಲಾಗಿದ್ದು ಬಿಟ್ಟರೆ ಒಂದು ಏಕರೂಪ ಇದೀಗ ಸ್ಥಿರವಾಗಿದೆ. ಹಾಗಾಗಿ ರೈತರು ಭೂಮಿಯ ಜತೆಗಿನ ನಂಬಿಕೆಯನ್ನು ಅತಂತ್ರಗೊಳಿಸಿಕೊಂಡಿದ್ದಾರೆ. ಮುಖ್ಯವಾಗಿ ಬರಪರಿಹಾರದಂತಹ ಸರಳ ಪರ್ಯಾಯವನ್ನು ಸರಕಾರ ಯೋಜಿಸುತ್ತಿದೆ. ಆದರೆ ಇಂತಹ ಏಕರೂಪದ ಬರ ಪರಿಹಾರ ರೈತ ಸಮುದಾಯದ ಕಷ್ಟಗಳನ್ನು ನೀಗಿಸಲಾರದು. ಹಾಗಾಗಿ ಬರ ಹಲವು ಬಗೆಯ ಅನಪೇಕ್ಷಿತ ಪರಿಣಾಮಗಳನ್ನೂ ಜನ ಸಮುದಾಯಗಳ ಮೇಲೆ ಬೀರಿದೆ. ಅಂತೆಯೇ ಬರವೇ ಕೃಷಿಯಾಚೆಯ ವೃತ್ತಿಗಳಲ್ಲಿ ತೊಡಗುವಂತೆ ಇಕ್ಕಟ್ಟನ್ನೂ ಸೃಷ್ಟಿಸಿದೆ. ಹಿರಿಯರಾದ ನಾಟಕಕಾರ ಪ್ರಸನ್ನ ಅವರು ಬರವನ್ನೂ, ಗ್ರಾಮಗಳ ಪಲ್ಲಟವನ್ನೂ ಏಕಮುಖವಾಗಿ ರಮ್ಯವಾಗಿ ನೋಡುವ ಬದಲು ಅದರ ಸೂಕ್ಷ್ಮತೆಯನ್ನು ಬಹುರೂಪಿಯಾಗಿ ಗಮನಿಸಬೇಕಿದೆ.

ಈಚೆಗೆ ಬೆಂಗಳೂರಿನಿಂದ ಬರುವಾಗ ಗುಲ್ಬರ್ಗಾ ಕಡೆ ಹೋಗುವ ಬಸ್ಸಿನ ತುಂಬಾ ರಾಯಚೂರು ದೇವದುರ್ಗ ಭಾಗದ ರೈತರೆ ಹೆಚ್ಚಿದ್ದರು. ಬಸ್ಸಿನಲ್ಲಿ ಮಕ್ಕಳಿಗೆ ಸೀರೆಯಿಂದ ಜೋಕಾಲಿ ಕಟ್ಟಿ ಕಂದಮ್ಮಗಳನ್ನು ಮಲಗಿಸಿದರು. ನೀರಿನ ಕೊಡ, ಚಾಪೆ ಮೊದಲಾದ ದಿನಬಳಕೆಯ ಸಾಮಾನುಗಳನ್ನು ಬಸ್ಸಿನೊಳಗೆ ಜಾಗ ಸಿಕ್ಕಲೆಲ್ಲಾ ಒತ್ತರಿಸಿಟ್ಟರು. ಹೀಗೆ ನೋಡು ನೋಡುತ್ತಲೇ ಬಸ್ಸಿನೊಳಗೊಂದು ಉತ್ತರ ಕರ್ನಾಟಕ (ಉಕ)ಸೃಷ್ಟಿಯಾದಂತೆನಿಸಿತು. ಈ ಬಸ್ಸು ಚಲಿಸುತ್ತಿದ್ದರೆ ಬೆಂಗಳೂರಿನೊಳಗೊಂದು ಪುಟ್ಟ ಹೈದರಾಬಾದ್ ಕರ್ನಾಟಕ(ಹೈಕ) ಉತ್ತರ ಕರ್ನಾಟಕವೆ ಪಯಣಿಸುತ್ತಿರುವ ಅನುಭವವಾಯಿತು.

ಇದನ್ನು ನೋಡಿದರೆ ಗುಲ್ಬರ್ಗಾ, ಬೀದರ್, ಸಿಂಧನೂರು, ಬಿಜಾಪುರ, ಗದಗ, ಬಾಗಲಕೋಟೆ ಕಡೆಗಳಿಗೆ ಬರುವ ಎಲ್ಲಾ ಸರ್ಕಾರಿ ಬಸ್ಸುಗಳು ಹೀಗೆ ಉತ್ತರ ಕರ್ನಾಟಕದ ಚಹರೆಯನ್ನು ಪಡೆದುಕೊಳ್ಳುತ್ತವೆ. ಈ ಬಸ್ಸುಗಳು ವಲಸಿಗರಿಂದಲೆ ತುಂಬುತ್ತವೆ. ಇನ್ನೂ ಮುಂದುವರಿದು ಸರಕಾರಿ ಬಸ್ಸುಗಳು ವಲಸಿಗರಿಗಾಗಿ ಬಸ್ ಧರಕ್ಕೂ ರಿಯಾಯಿತಿ ನೀಡಿದ್ದುಂಟು. ಅಂತೆಯೇ 25 ಜನರಿಗಿಂತ ಹೆಚ್ಚಿನವರು ಬೆಂಗಳೂರಿಗೆ ಹೋಗುವವರಿದ್ದರೆ, ಅವರವರ ಹಳ್ಳಿಗಳಿಗೇ ಹೋಗಿ ರೈತರನ್ನು ಹತ್ತಿಸಿಕೊಂಡು ಬರುವ ಪ್ರಯೋಗಗಳೂ ನಡೆದಿವೆ. ಬಹುಶಃ ವಲಸೆ ದೊಡ್ಡ ಪ್ರಮಾಣದಲ್ಲಿ ನಿಂತರೆ ಈ ಭಾಗಕ್ಕೆ ಬರುವ ಬಸ್ಸುಗಳೆಲ್ಲಾ ಜನರಿಲ್ಲದೆ ಸ್ಥಗಿತಗೊಂಡರೂ ಅಚ್ಚರಿಯಿಲ್ಲ.

ಬಸ್ಸಿನಲ್ಲಿ ನನ್ನ ಜತೆಗೆ ಕುಳಿತ ಲಿಂಗಣ್ಣ ಎಂಬುವವರೊಂದಿಗೆ ಮಾತನಾಡುತ್ತಾ ಅಚಾನಕ್ಕಾಗಿ ರೈತರ ಆತ್ಮಹತ್ಯೆ ವಿಷಯ ಪ್ರಸ್ತಾಪಿಸಿದೆ. ಆಗ ಲಿಂಗಣ್ಣ `ಅಲ್ರಿ ಸರಾ ಸಾಲ ಆದ್ರ, ಆ ಸಾಲನ ಹೊಲದಾಗ ದುಡುದು ತೀರ್ಸಾಕ ಆಗಲ್ಲ ಅಂದ್ರ ಬೇರೆ ಕಡೀಗೋಗೀ ದುಡುದು ಸಾಲ ತೀರ್ಸಾಕ್ರಿ, ಅದು ಬಿಟ್ಟು ನೇಣು ಬಿಕ್ಕಂಡ್ರ ಸಮಸ್ಯೆ ಬಗೆರಿಯಿತ್ತೇನ್ರಿ’ ಅಂದರು. ಮುಂದುವರಿದು `ನನ್ನ ತಗಳ್ರಿ, ಬೆಳಿ ಕೈಕೊಟ್ಟು ಐವತ್ತು ಸಾವ್ರ ಸಾಲ ಆಗಿತ್ತು. ನನ್ನ ಇಬ್ರು ಮಕ್ಕಳು ನಾನು ಸೇರಿ ಬೆಂಗಳೂರಿಗೆ ಬಂದು ಗೋಂಡಿ ಕೆಲಸ ಮಾಡಿ ಸಾಲ ತೀರಿಸಿದ್ವಿ. ಈ ವರ್ಷ ಬೀಜ ಗೊಬ್ಬರ ನೆಗದಿ ತಂದು ಬಿತ್ತೇವ್ರಿ. ಈ ಬಾರಿ ಮಳಿ ಬಂದು ಬೆಳೆ ಛೊಲೋ ಆದ್ರ ಲಾಟರಿ ರಿ, ಬೆಳೆ ಆಗಿಲ್ಲ ಅಂದ್ರ ಮತ್ತೆ ಬೆಂಗಳೂರಿಗೆ ದುಡಿಯಾಕ ಹೋಗಾದರೀ’ ಎಂದು ಹೇಳಿದರು.

ಈ ಮಾತುಗಳು ಉತ್ತರ ಕರ್ನಾಟಕದ ಅನೇಕ ರೈತರು ಆತ್ಮಹತ್ಯೆಯಿಂದ ಪಾರಾಗಿರುವ ವಾಸ್ತವವನ್ನು ಒಡೆದು ತೋರುವಂತಿತ್ತು. ನಾವು ಆತ್ಮಹತ್ಯೆಗೆ ಕಾರಣ ಹುಡುಕುವ ದಾರಿಯಲ್ಲಿ ಯಾವ ಭಾಗದಲ್ಲಿ ಹೆಚ್ಚು ಆತ್ಮಹತ್ಯೆಗಳು ನಡೆದಿಲ್ಲ, ಅದು ಯಾಕಾಗಿ ಎಂದು ಹುಡುಕ ಹೊರಟರೆ ಕಾಣಬಹುದಾದ ವಾಸ್ತವವನ್ನು ಲಿಂಗಣ್ಣ ಅವರ ಮಾತುಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು.

ಸಾಮಾನ್ಯವಾಗಿ ಬಯಲು ಸೀಮೆಯ ರೈತರು ಸಾಲ ಮಾಡುವುದು ಬಿತ್ತುವ ಬೀಜ ಗೊಬ್ಬರ ಕ್ರಿಮಿನಾಶಕ ಮತ್ತು ಗಳೇವು ಬಾಡಿಗೆ, ಬಿತ್ತಾಟದ ಆಳುಗಳಿಗೆ ಕೊಡುವ ನಗದು ಕೂಲಿಗಾಗಿ. ಈ ಸಾಲವನ್ನು ಸಾಮಾನ್ಯವಾಗಿ ಕೃಷಿಮಾರುಕಟ್ಟೆಯ ಖಾಸಗಿ ಬೀಜಗೊಬ್ಬರದ ಅಂಗಡಿಗಳಲ್ಲಿ ತರುತ್ತಾರೆ. ಇಲ್ಲಿನ ಬಡ್ಡಿಯ ಪ್ರಮಾಣ ಸಾಮಾನ್ಯವಾಗಿ ಬ್ಯಾಂಕುಗಳಿಗಿಂತ ಹೆಚ್ಚಿರುತ್ತದೆ. ಹೀಗಾಗಿ ಬೆಳೆದ ಬೆಳೆಯನ್ನು ಕಡ್ಡಾಯವಾಗಿ ಸಾಲ ತಂದ ಅಂಗಡಿಗಳಲ್ಲಿ ಮಾರಾಟಮಾಡಬೇಕು. ಅಲ್ಲಿ ಬೆಲೆ ಸ್ವಲ್ಪ ಕಡಿಮೆಯಾದರೂ ಮಾರುವ ಒತ್ತಡ ನಿರ್ಮಾಣವಾಗುತ್ತದೆ. ಎಷ್ಟೋ ರೈತರು ಸಾಲವನ್ನು ತೀರಿಸಿ ಪೈಸೆಯೂ ಇಲ್ಲದೆ ಮನೆಗೆ ಮರಳುವುದಿದೆ.

ಕೈಯಲ್ಲಿ ಹಣವಿರುವ ರೈತರು ಬಿತ್ತನೆ ಬೀಜ ಗೊಬ್ಬರ ಆಳು ಗಳೇವು ಬಾಡಿಗೆಗೆ ನಗದು ಹಣ ನೀಡುತ್ತಾರೆ. ಆಗ ಅವರು ಬೆಳೆದ ಬೆಳೆಯನ್ನು ಕೃಷಿ ಮಾರುಕಟ್ಟೆಯ ಯಾವುದೇ ಅಂಗಡಿಯಲ್ಲಿ ಮಾರಾಟ ಮಾಡಬಹುದು. ಬೆಳೆಗೆ ಹೆಚ್ಚು ಬೆಲೆ ಬರುವತನಕ ಕಾಯ್ದಿರಿಸುವ ಸ್ವತಂತ್ರವೂ ಇರುತ್ತದೆ. ಆಗ ಬೆಳೆಯ ಖರ್ಚಿನ ಭಾಗವಾದರೂ ಕೊನೆಗೆ ಒಟ್ಟಾಗಿ ರೈತರ ಕೈಸೇರುವ ಸಾಧ್ಯತೆ ಇದೆ. ವಲಸೆ ಹೋಗುವ ಬಹುಪಾಲು ಉತ್ತರ ಕರ್ನಾಟಕದ ಕೃಷಿಕೂಲಿಕಾರರು ಬಿತ್ತಾಟಕ್ಕೆ ಮಾಡುವ ಸಾಲದ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಇದರಿಂದಾಗಿ ವಲಸೆ ಕೂಲಿಕಾರರು ಬೆಳೆ ಬಂದರೂ, ಬರದಿದ್ದರೂ ಬದುಕಿನ ಕನಿಷ್ಠ ಅಗತ್ಯಗಳನ್ನು ವಲಸೆಯಿಂದ ಪೂರೈಸಿಕೊಳ್ಳುತ್ತಾರೆ.

ಉತ್ತರ ಕರ್ನಾಟಕದ ಬಹುಪಾಲು ರೈತಕೂಲಿಗಳ ಜೀವನ ವಿಧಾನವೂ ಅವರ ವಲಸೆಗೆ ಸಹಕರಿಸುತ್ತದೆ. ಕಾರಣ ಅತ್ಯಲ್ಪ ಜೀವನಾವಶ್ಯಕಗಳಲ್ಲಿ ಬದುಕುವವರೇ ಹೆಚ್ಚು. ಬೆಂಗಳೂರು ಮುಂಬೈ ಮುಂತಾದ ಕಡೆಗಳಲ್ಲಿ ಸಹಜವಾಗಿ ಹೆಚ್ಚು ಕಟ್ಟಡ ಕೆಲಸದಂತಹ ಶ್ರಮದಾಯಕ ಕೆಲಸಕ್ಕೆ ಹೋಗುತ್ತಾರೆ. ಅಂತೆಯೇ ಆಯಾ ಕಟ್ಟಡದ ಬುಡದಲ್ಲಿಯೇ ಸಣ್ಣ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಾರೆ. ಕಾರಣ ಈ ಟೆಂಟುಗಳ ಜೀವನಕ್ಕೂ ತಮ್ಮ ಊರಿನ ಮನೆಯ ಪರಿಸರಕ್ಕೂ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಹಾಗಾಗಿ ತಾವಿರುವ ಕಡೆಯೇ ಉತ್ತರ ಕರ್ನಾಟಕವನ್ನೋ ಹೈದರಾಬಾದ್ ಕರ್ನಾಟಕದ ಪರಿಸರವನ್ನೋ ನಿರ್ಮಿಸುತ್ತಾರೆ. ಹಾಗಾಗಿ ನಗರದಲ್ಲಿದ್ದೂ ನಗರಿಗರಾಗದೆ ಬದುಕುತ್ತಾರೆ. ಇದು ನಗರದಲ್ಲಿ ದುಡಿದ ಹಣವನ್ನು ಕೂಡಿಡಲು ಸಹಕಾರಿಯಾಗುತ್ತದೆ. ನಿರಂತರವಾಗಿ ಈ ಭಾಗದ ಜನರು ವಲಸೆಯಲ್ಲಿರುವ ಕಾರಣ ಇದರ ಲಯವೂ ಇವರಿಗೆ ಸಿಕ್ಕಂತಿದೆ.
ಸಾಮಾನ್ಯವಾಗಿ ನೀರಾವರಿಗೆ ಬೆಳೆ ಬೆಳೆಯುವ ರೈತರಲ್ಲಿ ಹೆಚ್ಚಾಗಿ ರೈತರ ಜೀವನ ವಿಧಾನ ತೀರಾ ಕೆಳಮಟ್ಟದ್ದಾಗಿರುವುದಿಲ್ಲ. ಬದಲಾಗಿ ಬಹುಪಾಲು ಮದ್ಯಮವರ್ಗದ ಜೀವನ ವಿಧಾನಕ್ಕೆ ಸಮೀಪವಿರುತ್ತದೆ. ಕೆಲವೊಮ್ಮೆ ಇವರ ಜೀವನ ನಿರ್ವಹಣೆಯ ಖರ್ಚು, ಹೊಲದ ಆದಾಯಕ್ಕಿಂತ ಹೆಚ್ಚಿರುತ್ತದೆ. ಸಹಜವಾಗಿ ಹೊಲಕ್ಕೆ ಮಾಡುವ ಸಾಲದ ಪ್ರಮಾಣವೂ ಹೆಚ್ಚು. ಈ ಸಾಲದಲ್ಲಿ ಮನೆ ಖರ್ಚಿಗೆ ಬಳಸುವ ಪ್ರಮಾಣ ಕೂಡಾ ಅಧಿಕವಾಗಿರುತ್ತದೆ. ಇವರು ಹೊಲದ ಸಾಲವನ್ನು ಅದರ ದುಡಿಮೆಯಿಂದಲೆ ಮರಳಿಸಬೇಕಾಗುತ್ತದೆ. ಹಾಗಾಗಿ ಬೆಳೆ ಬರದಿದ್ದರೆ, ಬಂದ ಬೆಳೆಗೆ ಬೆಲೆ ಸಿಗದಿದ್ದರೆ ಇದ್ದಕ್ಕಿದ್ದಂತೆ ಸಾಲದ ಪ್ರಮಾಣ ಹೆಚ್ಚುತ್ತದೆ. ಈ ಹೆಚ್ಚಳ ಆ ರೈತರನ್ನು ಆತ್ಮಹತ್ಯೆಯೆಡೆಗೆ ಒಯ್ಯುವ ಸಾದ್ಯತೆಯೂ ಇದೆ. ಮಂಡ್ಯ, ಹಾಸನ, ಬೆಳಗಾಂ ಭಾಗದ ರೈತರ ಆತ್ಮಹತ್ಯೆಗಳ ಹಿಂದಣ ಹಲವು ಕಾರಣಗಳಲ್ಲಿ ಈ ಹಿನ್ನೆಲೆಯೂ ಇದೆ.

ಉತ್ತರ ಕರ್ನಾಟಕದ ರೈತಕೂಲಿಗಳು ಹೊಲಕ್ಕೆ ಮಾಡಿದ ಸಾಲವನ್ನು ವಲಸೆಯ ದುಡಿಮೆಯಿಂದ ತೀರಿಸುವ ಮಾದರಿ ನೀರಾವರಿ ರೈತರಿಗೆ ಅನ್ವಯವಾಗುವುದಿಲ್ಲ. ವಲಸೆ ಹೋಗಿ ಹೆಚ್ಚು ಶ್ರಮದಾಯಕ ಕೆಲಸ ಮಾಡಿ ಬಯಲಲ್ಲೆ ಜೀವಿಸಲು ಇವರ ಸ್ಥಾನಮಾನ ಮತ್ತು ಜೀವನ ವಿಧಾನ ಸಹಕರಿಸುವುದಿಲ್ಲ. ಹಾಗಾಗಿ ನೀರಾವರಿ ಭಾಗದ ರೈತರು ಹೊಲದ ಸಾಲವನ್ನು ಸಾಧ್ಯವಾದಲ್ಲಿ ಕೃಷಿಯೇತರ ಕೆಲಸಗಳಿಂದ ತೀರಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಉತ್ತರ ಕರ್ನಾಟಕದ ರೈತಕೂಲಿಗಳ ವಲಸೆಯನ್ನು ತಪ್ಪಿಸಲು ಅನ್ಯ ಉತ್ಪಾದನಾ ಮಾರ್ಗಗಳು ತಮ್ಮ ಹಳ್ಳಿಗಳಲ್ಲೆ ಸಿಗುವಂತಾಗಬೇಕಿದೆ.

ರೈತ ಆತ್ಮಹತ್ಯೆಗಳು ದಿನದಿನದ ಸಂಕಟಗಳಾಗಿ ಸುದ್ದಿಯಾಗುತ್ತಿವೆ. ಈ ಸಾವುಗಳ ಕಾರಣಗಳು ಚರ್ಚೆಯಾಗುತ್ತಿವೆ. ಹೊರಗಿನ ವಿದ್ವಾಂಸರಾಗಿಯೋ, ಚಳವಳಿಯ ಕಾರ್ಯಕರ್ತರಾಗಿಯೋ, ಸರಕಾರಿ ಅಧಿಕಾರಿಗಳಾಗಿಯೋ ಕೆಲವು ಕಾರಣಗಳನ್ನು ಹುಡುಕಿದಾಗಲೂ, ಕೆಲವು ಸ್ಥಳೀಯ ಕಾರಣಗಳು ನಮಗೆ ತಿಳಿಯುವುದೆ ಇಲ್ಲ. ಅವು ಕಪ್ಪೆಚಿಪ್ಪಿನಲ್ಲಿ ಅವಿತಿಟ್ಟಂತೆ ಕೂತಿರುತ್ತವೆ. ಇಂತಹ ಕೆಲವು ಸಮಸ್ಯೆಗಳು ಆಯಾ ಭಾಗದ ಮೌಖಿಕ ರಚನೆಗಳಲ್ಲಿ, ಮಾತುಕತೆಗಳಲ್ಲಿ ವ್ಯಕ್ತವಾಗುವ ಸಾಧ್ಯತೆ ಇರುತ್ತವೆ. ಇವುಗಳನ್ನು ಸಂಗ್ರಹಿಸಿಯೋ ಅಥವಾ ಆಯಾ ಹಾಡುಗಾರಿಕೆ ಮಾತುಕತೆಯ ಸಂದರ್ಭದಲ್ಲಿ ಹಾಜರಿದ್ದು ಕೇಳಿಸಿಕೊಂಡಾಗ ಇಂತವುಗಳು ಅರಿವಿಗೆ ಬರುತ್ತವೆ. ಮೊಹರಂ ಅಧ್ಯಯನದ ಸಂದರ್ಭದಲ್ಲಿ ಹೈದರಾಬಾದ ಕರ್ನಾಟಕ ಭಾಗದಲ್ಲಿ ಸಿಕ್ಕ ರಿವಾಯತ ಹಾಡೊಂದು ಹೀಗೆ ಭಿನ್ನವಾದ ಚಿಂತನೆಯೊಂದನ್ನು ನನ್ನಲ್ಲಿ ಹುಟ್ಟಿಸಿತು. ಈ ಹಾಡು ಹೈದರಾಬಾದ ಕರ್ನಾಟಕ ಹಿಂದುಳಿಯಲು ಕಾರಣವೊಂದನ್ನು ಶೋಧಿಸಿದಂತಿತ್ತು.

ಅಲ್ಪಪ್ರಮಾಣದ ನೀರಾವರಿ ಇರುವ ಕಡೆಗಳಲ್ಲಿಯೂ, ಹೆಚ್ಚು ಹೊಲವಿದ್ದು ಬೋರ್ ಹಾಕಿಸಿ ನೀರಾವರಿ ಮಾಡದ ಕಡೆಗಳಲ್ಲಿ ನೆಲವನ್ನೆ ಬರಡು ಮಾಡುವ ನೆಲೆಯೊಂದಿದೆ. ಆಂದ್ರದಿಂದ ಬಹುಪಾಲು ರೆಡ್ಡಿ ಒಳಗೊಂಡಂತೆ ಜಮೀನ್ದಾರಿ ಸಮುದಾಯಗಳು ಹೈಕ ಭಾಗಕ್ಕೆ ಕೃಷಿ ಮಾಡಲು ವಲಸೆ ಬರುತ್ತಾರೆ. ಇಲ್ಲಿ ಹತ್ತರಿಂದ ಮೂವತ್ತು ಎಕರೆಯಷ್ಟು ಒಂದೊಂದು ಕುಟುಂಬ ದುಬಾರಿ ಬೆಲೆಗೆ ಹತ್ತು ವರ್ಷಕ್ಕೋ ಹದಿನೈದು ವರ್ಷಕ್ಕೋ ಭೂಮಿಯನ್ನು ಲೀಜಿಗೆ (ಗುತ್ತಿಗೆ) ಹಿಡಿಯುತ್ತಾರೆ. ಹೀಗೆ ಲೀಜಿಗೆ ಹಿಡಿದ ಭೂಮಿಯಲ್ಲಿ ಬೋರ್ ಕೊರೆಸಿ ನೀರಾವರಿ ಮಾಡುತ್ತಾರೆ. (ತುಂಗಭದ್ರ ಕೃಷ್ಣ ಅಲಮಟ್ಟಿ ಡ್ಯಾಂ ನೀರು ಇರುವ ಕಡೆ ಇದು ಅನ್ವಯವಾಗುವುದಿಲ್ಲ) ಈ ಭೂಮಿಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಆರಂಭಿಸುತ್ತಾರೆ. ವಿಪರೀತ ಗೊಬ್ಬರ ಕ್ರಿಮಿನಾಶಕ ಬಳಸಿ ಯಥೇಚ್ಚ ನೀರುಣಿಸಿ ಭೂಮಿಯ ಶಕ್ತಿಯನ್ನೆಲ್ಲಾ ಹೀರುತ್ತಾರೆ. ಹೀಗೆ ಲೀಜಿಗೆ ಕೊಟ್ಟ ರೈತರು ಆರಾಮಾಗಿ ಕೃಷಿ ಕೆಲಸ ಬಿಟ್ಟು ನಗರ ಸುತ್ತುವ, ಕೆಲವರು ವಲಸೆ ಹೋಗುವ ಮೂಲಕ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿ ಹೊಲಗಳ ನಂಟನ್ನು ಕಡಿದುಕೊಳ್ಳುತ್ತಾರೆ.
ಹೀಗೆ ಹೊಲಗಳನ್ನು ಲೀಜಿಗೆ ಪಡೆದ ಜಮೀನ್ದಾರರು ಭೂಮಿಯ ಹೆಸರಿಗೆ ಬ್ಯಾಂಕು ಲೇವಾದೇವಿಯವರ ಹತ್ತಿರ ಸಾದ್ಯವಾದಷ್ಟು ತೆಗೆಯುತ್ತಾರೆ. ಹೀಗೆ ಲೀಜು ಮುಗಿಯುವ ಮೊದಲೆ ಇದ್ದಕ್ಕಿದ್ದಂತೆ ಹೊಲಗಳಿಂದ ಆಂದ್ರದ ಈ ಕುಟುಂಬ ಕಾಣೆಯಾಗುತ್ತದೆ. ಆಗ ಆ ಹೊಲದ ರೈತ ದಿಗ್ಭ್ರಮೆಗೊಳ್ಳುತ್ತಾನೆ. ಕಾರಣ ಹೊಲದ ಹೆಸರಲ್ಲಿ ಸಾಕಷ್ಟು ಸಾಲವಿರುತ್ತದೆ, ಅಂತೆಯೆ ಸದ್ಯಕ್ಕೆ ಬೆಳೆ ಬೆಳೆಯಲು ಸಾದ್ಯವೆ ಇಲ್ಲದಷ್ಟು ಹೊಲ ಬಂಜರಾಗಿರುತ್ತದೆ. ಹೀಗೆ ರೆಡ್ಡಿಗಳು ಬಂಜರು ಮಾಡಿ ಬಿಟ್ಟುಹೋದ ಹೊಲದ ರೈತರು ಸಾಮಾನ್ಯವಾಗಿ ಕಡುಬಡವರಾಗುವ ಸಾದ್ಯತೆಗಳಿರುತ್ತವೆ. ಈ ಸಂಗತಿ ಈ ಭಾಗದಲ್ಲಿ ಜನರಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ ಈ ಬಗ್ಗೆ ಒಂದು ಅಪರೂಪದ ರಿವಾಯತ್ ಪದವನ್ನೂ ಕಟ್ಟಿದ್ದಾರೆ.

ತಲಾಟಿ ಜನ ಗಿಲಾಟಿ ದುಡ್ಡು…

ತಲಾಟಿ ಜನ ಗಿಲಾಟಿ ದುಡ್ಡು ಈಗಿನ ಜಾಮಾನಾ| ಗಲಾಟಿಮಾಡಿ ಗದ್ದಲೆಬಿಸಿತು ನೀರಾವರಿ ಪೂರಣಾ
ಆಂದರದಿಂದ ಬಂದಿತ್ತು ಬಾಳ ಜನಾ| ಅಳಿಯದು ಬಂತು ಇದ್ದಂತ ಒಕ್ಕಲತನಾ||

ಲೀಜಿಗಂತ ಹಿಡಿದರು ದೊಡ್ಡ ದೊಡ್ಡ ಜಮಿನಾ| ಕೆಡಿಸಿ ಗದ್ದೆ ಮಾಡಿಬಿಟ್ಟರು ಅವರು ಸಂಪುರಣಾ
ಊರು ಬಿಟ್ಟು ದೂರ್ ದೂರ ಹಾಕ್ಯರ ತಮ್ಮಟಿ ಕಣಾ| ಕೌಳಿ ಮಾಡಿ ಕೈತುಂಬಣ ಪಡೆದುಕೊಳ್ಳೋಣಾ||

ದುಡ್ಡಿನ ಆಸೆ ಹಚ್ಚಿಬಿಟ್ಟರು ರೈತರಿಗಿನ್ನಾ| ಅವರದೆಷ್ಟು ಹೇಳಲಿ ವೈಭವತನಾ
ನೋಡಲಿಕ್ಕೆ ಕಾಣವರು ಒಳ್ಳೇ ಜನಾ| ತಿಳಿಯಲಿಲ್ಲೋ ರೈತರಿಗೆ ಅವರ ವರ್ತಮಾನ||

ಇದ್ದ ಜಮೀನು ಎಲ್ಲ ಅವರಿಗೆ ಒತ್ತಿ ಹಾಕೋಣಾ| ದುಡಿಮಿ ಇಲ್ಲದ ಈಗ ನಾವೂ ದುಡ್ಡು ಗಳಿಸೋಣ
ದೊಡ್ಡ ದೊಡ್ಡ ರೈತ ತೆಗೆದ ಒಕ್ಕಲತನಾ| ಕಂತ್ರಿಕವಳಿ ಬಂದು ಮಾಡಿತು ಕಾರಸ್ತಾನ||

ಬಸವನ ಬಾಯಿಗೆ ತುಸುಸೊಪ್ಪು ಇಲ್ಲದಂಗ ಖೂನಾ| ತಿಳಿಯದಿಲ್ಲ ಮುಂದೇನಾ ವರ್ತಮಾನ
ಬೆಳೆಯದುಕಾ ಬೆಲೆಯಿಲ್ಲದಂಗ ಆಗ್ಯದ ಸಂಪುರಣಾ| ಇದರಂತೆ ನಡದಿತ್ತು ಐದಾರು ವರುಷಾದ ತನಾ||

ಕೆಡುಗಾಲಕ ಒದಗಿ ಬಂತು ಕವಳಿ ವರ್ತಮಾನ| ಪೃಥ್ವಿ ಮೇಲೆ ಹುಟ್ಟಿತ್ತು ಬಿಳಿ ದ್ವಾಮಿನ್ನಾ
ಆಂದ್ರ ಜನ ನೋಡಿ ಅಂತಿತ್ತು ಒಂದೇ ಸವನಾ| ತಿಳಿವಲ್ದು ಈ ರೋಗದ ಒಂದು ವರ್ತಮಾನ||

ಬೆಳೆದ ಮಾಲು ನಾಶ ಮಾಡಿ ಹೋದಿತು ಸಂಪುರಣಾ| ಕೊಟ್ಟ ಸವಕಾರ ಬರುತಾನ ಅವರ ಮನೆಯಾ ತನಾ
ಆಂದರ ಜನಕ ಆಗಿಬಿಟ್ಟಿತು ದ್ವಾಮಿ ಹೈರಾಣಾ| ಮಂದಿ ಜಮೀನು ಮೇಲೆ ಅವರು ಸಾಲ ಮಾಡಾಣಾ||

ಸುಳ್ಳು ಮಾತು ಹೇಳಿ ಈಗ ಸಂಸರ ನಡಿಸೋಣಾ| ಮುಂದಿನ ಮಾಲಿಗೆ ತಂದು ಕೊಡ್ತೀವಿ ನಿಮ್ಮ ದುಡ್ಡನ್ನು
ಅಷ್ಟರೊಳಗ ನೀರಿಗೆ ಬಂತು ಬಾಳ ಕಠಿಣಾ| ಗೇಟು ಹಾಕಿ ನೀರಿನ ಕವಲುಗಾರ ಕುಂತಾ ಸುಮ್ಮನಾ||

ಬಂದ ಮಾಲು ಬತ್ತಿ ಹೋಯ್ತು ನೀರಿಲ್ಲದಿನ್ನಾ| ಆಂದರ ಜನರಿಗಾದೀತು ಬಾಳ ಕಠೀಣಾ
ಗೋರಮೆಂಟಕೆ ಬರಲಿಲ್ರೀ ಅಂತಕರುಣಾ| ಆಂದರ ಜನ ಹೌಹಾರಿ ನಿಂತು ಸಂಪುರಣಾ||

ಆಂದರ ಜನ ಕೂಡಿ ಅವರು ಮೀಟಿಂಗು ಮಾಡಾಣಾ| ಸ್ಟ್ರೈಕು ಮಾಡಿ ಗೇಟು ಎತ್ತಿಸಿ ನೀರು ತರುವೋಣಾ
ಹಳ್ಳಿ ಹಳ್ಳಿ ವಾಹನ ಬಿಟ್ಟಾರ ಆಫೀಸತನಾ|ನಡು ದಾರಿಯಲ್ಲಿ ಒಂದು ವಾಹನ ಪಳ್ಟಿ ಆಗೋಣಾ||

ಅದರಲ್ಲಿದ್ದ ನಾಲ್ಕು ಜನ ಮೃತ ಹೊಂದಾಣಾ| ಉಳಿದು ಜನಾ ಗಾಯಗೊಂಡು ನರಳುತ್ತಾವಿನ್ನಾ
ಇಷ್ಟೆಲ್ಲ ಆಂದರ ಜನ ನೋಡ್ಯದ ಸಂಪುರಣಾ| ಸಾಲ ಮಾಡಿ ಹೋಗ್ಯಾರೋ ಸಾವಿರಾರು ಜನಾ||

ದೊಡ್ಡ ಸವುಕಾರ ಬರುತಾನ ಅವರ ಮನಿಯಾತನಾ|ದಿಕ್ಕುತಪ್ಪಿದಂಗ ಬಡಿದು ನಿಂತ ಸುಮ್ಮನಾ
ನಡುಮನಿಯಲ್ಲಿ ತುಪ್ಪದ ದೀಪ ಇಟ್ಟು ಹೋಗೋಣಾ| ಆಂದರ ಜನ ಆದ ಇಂತ ಮೋಸತನಾ||

ಕಂತ್ರಿ ಕೌಳೀದು ಸ್ವಲ್ಪ ತಿಳಿಸಿದೆ ಅದರ ವರ್ತಮಾನಾ|ಆಂದರ ಜನಕ ಆಸ್ಪದ ಗೋರ್ಮೆಂಟ್ ಕೊಡಲಿಲ್ಲಕೂನಾ
ಹೆಸರಾಯ್ತು ಹೆಗ್ಗಣದೊಡ್ಡಿ ಗ್ರಾಮ ವಾಹೀನಾ| ರಾಜಭಕ್ಷರು ನೆಲಸಿದಾ ಸತ್ಯಳ್ಳ ಶರುಣಾ ||
ಅವನ ಕರುಣಾ ನಮ್ಮ ಮ್ಯಾಲ ಅದ ಸಂಪುರುಣಾ| ಹನುಂತರಾಯ ಬರೆದ ಕವನ ಮುತ್ತು ನವರತುನಾ||

ಕವಳಿ-ಬತ್ತ, ನೆಲ್ಲು.

ಈ ರಿವಾಯ್ತು ಹೈದರಾಬಾದ ಕರ್ನಾಟಕ ಭಾಗದ ಕೃಷಿ ಬಿಕ್ಕಟ್ಟುಗಳನ್ನು ಹೇಳುತ್ತಿದೆ. `ಅಳಿಯದು ಬಂತು ಇದ್ದಂತ ಒಕ್ಕಲತನಾ..’ ಎನ್ನುವ ಆತಂಕ ಈ ರಿವಾಯ್ತುಕಾರನದು. ಇಲ್ಲಿ ದುಡಿಯದೆ ಹಣ ಗಳಿಸುವ ಜನರ ಮನಸ್ಥಿತಿಯೇ ಇದಕ್ಕೆ ಕಾರಣ ಎನ್ನುವುದನ್ನೂ ಈ ಹಾಡು ಹೇಳುತ್ತಿದೆ. ಲೀಜಿಗೆ ಭೂಮಿ ಕೊಟ್ಟಾದ ಮನೆಯಲ್ಲಿನ ಜಾನುವಾರಿಗೆ ಮೇವು ಇಲ್ಲದ ವಾತಾವರಣ ಸೃಷ್ಟಿಯಾಗಿದ್ದನ್ನು ಗಮನಿಸಲಾಗಿದೆ. ಅಂದರೆ ಹೊಲ ಕೇವಲ ಮನುಷ್ಯರ ಅಗತ್ಯವನ್ನು ಮಾತ್ರ ತೀರಿಸಲ್ಲ ಬದಲಾಗಿ ಜಾನುವಾರುಗಳ ಅಗತ್ಯವನ್ನೂ ಪೂರೈಸುತ್ತಿತ್ತು ಎನ್ನುವುದು ಇದರಿಂದ ತಿಳಿಯುತ್ತದೆ. ಅಂತೆಯೇ ಭೂಮಿಯಲ್ಲಿ ಹಣದಾಸೆಗೆ ಕೇವಲ ವಾಣಿಜ್ಯ ಬೆಳೆ ಬೆಳೆಯುವ ಬದಲಾದ ಮನಸ್ಥಿತಿಯನ್ನು ಕಾಲದ ಬದಲಾವಣೆ ಎಂಬಂತೆ ಚಿತ್ರಿಸಲಾಗಿದೆ.
**
ಈ ಬಗೆಯ ನಿರಂತರ ವಲಸೆಯಿಂದ ಬರ ಜನರನ್ನು ಕೃಷಿಯಾಚೆಯ ಪರ್ಯಾಯಗಳನ್ನು ರೂಢಿಸಿಕೊಳ್ಳುವ ಒತ್ತಡಗಳನ್ನು ಹೇರುತ್ತಿದೆ. ಹಾಗಾಗಿ ರೈತ ಪರಿವಾರ ಬದುಕಿಗೆ ಹಲವು ಪರ್ಯಾಯಗಳನ್ನು ಸೃಷ್ಠಿಸಿಕೊಂಡಿದೆ. ಉತ್ತರ ಕರ್ನಾಟಕ ಮತ್ತು ಹೈದರಾಬಾದ ಕರ್ನಾಟಕದ ರೈತಪರಿವಾರವನ್ನು ಗಮನದಲ್ಲಿಟ್ಟುಕೊಂಡು ಈ ಬಗೆಯ ಪರ್ಯಾಯಗಳನ್ನು ಗಮನಿಸೋಣ. ಈ ಭಾಗದಲ್ಲಿ ಅಲ್ಪಭಾಗ ತುಂಗಾಭದ್ರ, ಕೃಷ್ಣ, ಅಲಮಟ್ಟಿ ಡ್ಯಾಂ ಪರಿಸರವನ್ನು ಒಳಗೊಂಡಂತೆ ಕೆಲವೆಡೆ ಅರೆಕಾಲಿಕ ನೀರಾವರಿ ಬೆಳೆಪದ್ದತಿಯನ್ನು ಬಿಟ್ಟರೆ ಬಹುಪಾಲು ಮಳೆಯಾಶ್ರಿತ ಕೃಷಿ ಪ್ರಧಾನವಾಗಿದೆ. ಈ ಭಾಗದಲ್ಲಿ ಸರಾಸರಿ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಾ, ಕೆಲವೊಮ್ಮೆ ಅಕಾಲಿಕ ಮಳೆಯಾಗುತ್ತಾ ಬೆಳೆಪದ್ಧತಿಯನ್ನು ಅದಲುಬದಲುಗೊಳಿಸಿದೆ.
ಇದರಿಂದಾಗಿ ಮೊದಲು ಮನೆಯವರೆಲ್ಲರೂ ಕೃಷಿಯನ್ನು ಅವಲಂಬಿಸುವ ನಂಬಿಕೆ ಬದಲಾಗಿ ಕೆಲವರು ಮಾತ್ರ ಕೃಷಿಯನ್ನೂ, ಇನ್ನುಳಿದ ಸದಸ್ಯರು ಕೃಷಿಯೇತರ ಚಟುವಟಿಕೆಗಳನ್ನು ಹಂಚಿಕೊಂಡಿದ್ದಾರೆ. ಹಾಗಾಗಿ ಪ್ರತಿ ಊರುಗಳಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿದವರ ಸಂಖ್ಯೆಯಲ್ಲಿ ಕೃಷಿಕರ ಸಂಖ್ಯೆ ಇಳಿಮುಖವಾಗಿಯೂ, ಕೃಷಿಯೇತರರ ಸಂಖ್ಯೆ ಏರುಮುಖವಾಗಿಯೂ ಚಲಿಸುತ್ತಿದೆ. ಹೀಗೆ ಕೃಷಿ ಮತ್ತು ಕೃಷಿಯೇತರ ವೃತ್ತಿಯನ್ನು ಕೈಗೊಂಡವರ ನಡುವೆ ಹೊಸ ಬಗೆಯ ಶ್ರೇಣೀಕರಣವೂ ಸೃಷ್ಟಿಯಾಗಿದೆ. ಇದರಲ್ಲಿ ಕೃಷಿಕೆಲಸಗಾರರು ಕೆಳದರ್ಜೆಯವರಾಗಿಯೂ, ಕೃಷಿಯೇತರ ದುಡಿಮೆದಾರರು ಮೇಲ್ದರ್ಜೆಯವರಾಗಿಯೂ ಕಾಣತೊಡಗಿದ್ದಾರೆ.

ಹೀಗೆ ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಮೇಲೆ ಚರ್ಚಿಸಿದ ನಗರಗಳ ವಲಸೆಯು ಪ್ರಭಾವಿಯಾಗಿದೆ. ಇದರಲ್ಲಿ ಪೂರ್ಣಪ್ರಮಾಣದ ವಲಸೆ ಒಂದಾದರೆ, ಅರೆಕಾಲಿಕ ವಲಸೆ ಮತ್ತೊಂದಾಗಿದೆ. ಬೆಂಗಳೂರು, ಉಡುಪಿ ಮಂಗಳೂರು ಮುಂಬೈ ಒಳಗೊಂಡಂತೆ ಬೃಹತ್ ನಗರಗಳಿಗೆ ಕೂಲಿ ಅರಸಿ ಹೋಗುವುದಿದೆ. ಅವಿಭಕ್ತ ಕುಟುಂಬಗಳಲ್ಲಿ ಕೆಲವರು ವಲಸೆ ಹೋದರೆ, ವಿಭಕ್ತ ಕುಟುಂಬಗಳಲ್ಲಿ ಇಡೀ ಕುಟುಂಬವೇ ವಲಸೆ ಹೋಗುತ್ತದೆ. ಇನ್ನು ಆಯಾ ಭಾಗದ ನಗರಗಳಿಗೆ ಹಳ್ಳಿಗಳಿಂದ ಕೂಲಿಯರಸಿ ಬೆಳಗ್ಗೆ ನಗರಕ್ಕೆ ಹೋಗಿ ಸಂಜೆ ಮರಳುವುದಿದೆ. ಹೀಗೆ ನಗರವನ್ನು ಆಧರಿಸಿದ ಹೋಟೆಲ್ ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಮಾಡುವುದು, ಪೇಂಟಿಂಗ್, ಕಟ್ಟಡಕೆಲಸ, ಬೇಕರಿ ಮುಂತಾದ ಶಾಪ್‍ಗಳಲ್ಲಿ ದುಡಿಯುವುದು, ಗ್ಯಾರೇಜ್, ಕಾರ್ಪೆಂಟರಿ ಮೊದಲಾದ ಕೌಶಲ್ಯಗಳನ್ನು ಕಲಿಯುವ ಕೆಲಸಗಳಿಗೆ ಹೋಗುತ್ತಿದ್ದಾರೆ.
ಹೀಗಾಗಿ ನಿರಂತರ ನಗರಗಳ ಸಂಪರ್ಕದಿಂದಾಗಿ ಆಯಾ ಕ್ಷೇತ್ರದ ಕೌಶಲ್ಯಗಳನ್ನು ಕಲಿತು ನಗರದಲ್ಲಿ ಬದುಕನ್ನು ಕಟ್ಟಿಕೊಳ್ಳುವ ನೆಲೆಯೊಂದು ರೂಪುಗೊಳ್ಳುತ್ತಿದೆ. ಕಾರ್ಪೆಂಟರಿಯಲ್ಲಿ ಕೆಲಸಕ್ಕಿದ್ದು ಸ್ವತಃ ಕೂಲಿಕಾರನೆ ಸ್ವತಂತ್ರ ಕೆಲಸಗಾರನಾಗುವುದು, ಕಟ್ಟಡ ಕೆಲಸದ ಕೂಲಿಕಾರರಾಗಿ ಸೇರಿ ಕಾಲಾನಂತರ ಸ್ವತಂತ್ರ ಕೆಲಸಗಾರರಾಗುವುದು. ಹೀಗೆ ಕೃಷಿಯೇತರ ವೃತ್ತಿಗಳ ಕೌಶಲ್ಯಗಳನ್ನು ಹಳ್ಳಿಗರು ರೂಢಿಸಿಕೊಳ್ಳುತ್ತಿದ್ದಾರೆ. ಇದರಲ್ಲಿಯೂ ಗ್ರಾಮಗಳಲ್ಲಿ ಹೆಚ್ಚು ಹೊಲವಿರುವ ಜಮೀನ್ದಾರರು ನಗರಗಳಲ್ಲಿ ಮನೆ ಕಟ್ಟಿಸಿಕೊಂಡು ವ್ಯಾಪಾರದಲ್ಲಿ ತೊಡಗಿಕೊಂಡಿರುವುದನ್ನು ನೋಡಿದರೆ, ನಿಧಾನಕ್ಕೆ ಹಳ್ಳಿಗಳ ಜಮೀನ್ದಾರರು ನಗರವಾಸಿಗಳಾಗಿ ಹಳ್ಳಿಗಳನ್ನು ನಿಯಂತ್ರಿಸುವ ಹೊಸ ಆಯಾಮವೊಂದು ರೂಪುಗೊಳ್ಳುತ್ತಿದೆ.
ಬರವು ಶಿಕ್ಷಣದ ಮೇಲೆ ಎರಡು ತೆರನಾದ ಪರಿಣಾಮಗಳನ್ನು ಬೀರುತ್ತಿದೆ. ಕೃಷಿಯ ಅವಲಂಬನೆಯಿಂದ ಬದುಕು ಕಷ್ಟವೆಂದರಿತ ಕೆಲವು ತಂದೆತಾಯಿಗಳು ಮುಂದೆ ಬದುಕಿನ ನಿರ್ವಹಣೆಗಾಗಿ ಶಿಕ್ಷಣಕೊಡಿಸುವುದನ್ನು ಕಡ್ಡಾಯವಾಗಿ ಪಾಲಿಸುವ ಒಂದು ವರ್ಗವಿದ್ದರೆ, ಈ ಬರವೇ ಕಾರಣವಾಗಿ ಹೊಟ್ಟೆಪಾಡಿಗೆ ಮಕ್ಕಳನ್ನು ಶಾಲೆಗೆ ಕಳಿಸದೆ ವಿವಿಧ ಕೆಲಸಗಳಲ್ಲಿ ದುಡಿಯಲು ತೊಡಗಿಸುವ ಒಂದು ವರ್ಗವಿದೆ. ಇನ್ನೊಂದು ವರ್ಗವೆಂದರೆ 10 ನೇ ತರಗತಿಯವರೆಗೆ ಓದು ಮೊಟುಕಾದೊಡನೆ ಓದು ನಿಲ್ಲಿಸಿ ಕೂಲಿಗೆ ಹೋಗುವಂತದ್ದು. ಈ ಎಲ್ಲಾ ಬದಲಾವಣೆಗಳು ಶಿಕ್ಷಣದ ಮೇಲೆ ತುಂಬಾ ಪರಿಣಾಮ ಬೀರುತ್ತಿದೆ.

ಹೀಗೆ ಬರ ಕಲಿಸಿದ ಪರ್ಯಾಯಗಳು ಅವರ ವೃತ್ತಿಯ ನಲೆಗಳನ್ನೇ ಬದಲಿಸುತ್ತದೆ. ಅಂದರೆ ಮಾನಸಿಕವಾಗಿ ಕೃಷಿ ವೃತ್ತಿಯ ಜತೆಗೆ ತಮ್ಮ ನಂಟನ್ನು ನಿಧಾನಕ್ಕೆ ಕಳಚಿಕೊಳ್ಳುತ್ತಾರೆ. ನಗರಗಳಲ್ಲಿ ಪರ್ಯಾಯ ಕಂಡುಕೊಂಡವರಿಗೆ ತನ್ನದೇ ಹಳ್ಳಿ ನರಕದಂತೆ ಕಾಣುತ್ತದೆ. ಪರಿಣಾಮ ಅವರು ಹಳ್ಳಿಗಳನ್ನು ನೋಡುವ ನೋಟಕ್ರಮ ಬದಲಾಗುತ್ತದೆ. ಚಿಕ್ಕ ಗುಡಿಸಲುಗಳನ್ನು ಹಾಕಿಕೊಂಡು ದೊಡ್ಡ ಕಟ್ಟಡಗಳ ಎದುರು ಕೆಲಸ ಮಾಡುವ ಕೂಲಿಗಳು ಬದಲಾದ ಮನಸ್ಥಿತಿಗೆ ಹೊಂದಿಕೊಳ್ಳುತ್ತಾರೆ. ಅವರ ಮಕ್ಕಳಿಗೂ ಇದು ಅಭ್ಯಾಸವಾಗುತ್ತದೆ. ಹೀಗೆ ಒಂದು ತಲೆಮಾರು ಕೃಷಿ ಜತೆ ಸಂಬಂಧ ಕಡಿದುಕೊಂಡು, ಇನ್ನೊಂದು ವೃತ್ತಿಯ ಜತೆ ಹೊಸ ಸಂಬಂಧಗಳನ್ನು ಸೃಷ್ಠಿಸಿಕೊಳ್ಳುತ್ತಾರೆ.

ಹೊಸ ಹೊಸ ವೃತ್ತಿಗಳಿಗೆ ಹೊಂದಿಕೊಂಡಂತೆಲ್ಲಾ ಹೊಸ ಬಗೆಯ ಭಾಷೆ ನುಡಿಗಟ್ಟುಗಳು, ಹೊಸಬಗೆಯ ಡ್ರೆಸ್ ಕೋಡ್, ಹೊಸ ದೃಷ್ಟಿಕೋನಗಳೂ ರೂಪುಗೊಳ್ಳುತ್ತವೆ. ಹೀಗಾಗಿ ಕೃಷಿಯ ಜತೆಗೆ ಬೆಸೆದುಕೊಂಡಿದ್ದ ಭಾಷೆ, ಉಡುಗೆ, ನಂಬಿಕೆ, ಆಚರಣೆ, ಜ್ಞಾನಲೋಕ ಮರೆಯಾಗುತ್ತಾ ಹೋಗುತ್ತದೆ. ಇದೆಲ್ಲವೂ ಉಳಿಯಬೇಕೆನ್ನುವುದು ರಮ್ಯ ಆಲೋಚನೆಯಾಗಿ ನಗೆಪಾಟಲಿಗೆ ಈಡಾಗುತ್ತದೆ. ಆ ನಂಬಿಕೆ ಆಚರಣೆಗಳ ಸ್ಥಾನಗಳನ್ನು ಬೇರೆ ಬೇರೆ ಸಂಗತಿಗಳು ಆಕ್ರಮಿಸಿಕೊಳ್ಳುತ್ತವೆ. ಇದು ದೀರ್ಘಕಾಲೀನ ಪ್ರಭಾವವಾಗಿದೆ. ಇದರ ಫಲಗಳನ್ನು ಈಗಾಗಲೇ ಹೈಕ ಮತ್ತು ಉಕ ಕಾಣತೊಡಗಿದ್ದೇವೆ. ಹೀಗೆ ಜನರ ನಂಬಿಕೆ ಲೋಕವೇ ಬದಲಾದಂತೆ ಕೃಷಿಯೂ ಕೂಡ ಒಂದು ಅನ್ಯ ವೃತ್ತಿಯ ಹಾಗೆ ಕಾಣತೊಡಗುತ್ತದೆ.
**
ದಕ್ಷಿಣಕನ್ನಡ ಮತ್ತು ಉತ್ತರಕನ್ನಡ ಭಾಗದ ನಿರಂತರ ಕೋಮು ಸಂಘರ್ಷಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕ ಮತ್ತು ಹೈದರಾಬಾದ ಕರ್ನಾಟಕದಲ್ಲಿ ಕೋಮುಗಲಬೆಗಳು ವಿರಳವಾಗಿದ್ದು ಧಾರ್ಮಿಕ, ಸಾಂಸ್ಕøತಿಕ ಸಾಮರಸ್ಯವಿದೆ. ಈ ಬಗೆಯ ಸಾಮರಸ್ಯಕ್ಕೂ ಈ ಭಾಗದ ಬಡತನ, ನಿರಂತರ ಬರ, ವಲಸೆಗೂ ಒಂದು ನಂಟಿದೆ. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಿದೆ. ಮುಖ್ಯವಾಗಿ ಹಳ್ಳಿಗಳ ಬಹುಪಾಲು ಯುವಕರು ಹೊಟ್ಟೆಪಾಡಿಗೆ ವಲಸೆ ಹೋಗುವ ಕಾರಣಕ್ಕೆ ಆರ್.ಎಸ್.ಎಸ್ ನಂತಹ ಧಾರ್ಮಿಕ ಸಂಘಟನೆಗಳಿಗೆ ಸದಸ್ಯರಾಗುವುದಿಲ್ಲ. ಕಾರಣ ಅವರುಗಳೆಲ್ಲಾ ತಮ್ಮ ಬಡತನ ನೀಗಿಸುವ ಕೆಲಸದ ಮುಂದೆ ಧರ್ಮದ ಚಟುವಟಿಕೆಗಳು ಆಧ್ಯತೆಯಾಗುವುದಿಲ್ಲ. ಅಂತವುಗಳಲ್ಲಿ ತೊಡಗಿಸಿಕೊಳ್ಳಲು ಸಮಯವೂ ಇವರಿಗಿಲ್ಲ.
ಎರಡನೆಯದಾಗಿ ಇಂತಹ ಸ್ಥಳದಲ್ಲಿಯೇ ಬಡತನದ ಅಭದ್ರತೆಯ ಕಾರಣಕ್ಕೇ ಕಷ್ಟಪಟ್ಟು ಓದುವ ವಿದ್ಯಾರ್ಥಿಗಳು ಸಿಗುತ್ತಾರೆ. ಅವರುಗಳಿಗೆ ಕೂಡ ಓದಿ ಒಂದು ಉದ್ಯೋಗ ಗಿಟ್ಟಿಸಿಕೊಳ್ಳುವುದೇ ಮೊದಲ ಆದ್ಯತೆಯಾಗಿರುತ್ತದೆ. ಹಾಗಾಗಿ ಕರ್ನಾಟಕದಲ್ಲಿ ಹೈಕ ಮತ್ತು ಉಕ ಭಾಗದಲ್ಲಿ ಸಿಇಟಿ ಬರೆದು ಉದ್ಯೋಗ ಗಿಟ್ಟಿಸಿಕೊಳ್ಳುವವರ ಸಂಖ್ಯೆ ಹೆಚ್ಚು. ಇದರಿಂದಾಗಿಯೇ ದಾರವಾಡ, ಬಿಜಾಪುರ ಭಾಗದಲ್ಲಿ ಸಿಇಟಿ ತರಬೇತಿ ಕೇಂದ್ರಗಳೂ ಹೆಚ್ಚಿವೆ. ಹೀಗಿರುವಾಗ ಈ ಭಾಗದ ಓದಿದ ಯುವಜನತೆಗೆ ಧಾರ್ಮಿಕ ಸಂಘಟನೆಗಳು ಆಧ್ಯತೆಯಾಗುವುದಿಲ್ಲ.

ಇನ್ನು ಕನಿಷ್ಟ ಎರಡು ದಶಕಗಳಲ್ಲಿ ವಲಸೆಯ ನಿರಂತರತೆಯು ಒಂದು ಬಗೆಯ ಬದಲುಗೊಂಡ ಸಂಸ್ಕøತಿಯನ್ನು ಸೃಷ್ಠಿಸಿದೆ. ಮುಖ್ಯವಾಗಿ ವಲಸೆಗೆ ಹೋದವರು ಊರಿನ ಪ್ರಮುಖ ಹಬ್ಬಗಳಿಗೆ ಮರಳುತ್ತಾರೆ. ಇಂತಹ ಹಬ್ಬಗಳಲ್ಲಿ ಮೊಹರಂ ಪ್ರಮುಖವಾದುದು. ಹೈಕ ಉಕ ಭಾಗದ ದೊಡ್ಡ ಹಬ್ಬವಾಗಿ ಮೊಹರಂ ರೂಪುಗೊಂಡಿರುವುದಕ್ಕೂ ವಲಸೆಹೋದವರೆಲ್ಲಾ ಖಡ್ಡಾಯವಾಗಿ ಮರಳಿ ಬಂದು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದಕ್ಕೂ ಸಂಬಂಧವಿದೆ. ವರ್ಷವಿಡೀ ಬೇರೆ ಬೇರೆ ಕಡೆಗಳಲ್ಲಿ ದೂರವಿದ್ದವರು ಜಾತ್ರೆ ಉರುಸುಗಳಲ್ಲಿ ಜಾತಿ ಧರ್ಮವನ್ನು ಮರೆತು ಬೆರೆಯುತ್ತಾರೆ. ಇಂತಹ ಕಡೆಗಳಲ್ಲಿ ಬಡ ಮುಸ್ಲೀಂ ಮತ್ತು ಹಿಂದುಗಳಿಗೆ ಅವರ ಧರ್ಮಗಳ ಗಡಿಗಳು ಕಾಣುವುದೇ ಇಲ್ಲ. ಇವರನ್ನೆಲ್ಲಾ ಕಡುಬಡತನ ಧರ್ಮದಾಚೆ ಒಂದಾಗಿಸಿರುತ್ತದೆ.

ಈ ಭಾಗದ ಮತ್ತೊಂದು ಮಗ್ಗಲು ಇದಕ್ಕೆ ವ್ಯತಿರಿಕ್ತವಾಗಿದೆ. ಮುಖ್ಯವಾಗಿ ನೀರಾವರಿ ಇರುವ ಕಡೆಗಳಲ್ಲಿ ಸಹಜವಾಗಿ ಯುವಕರು ಮನೆಯ ಉತ್ತಮಸ್ಥಿತಿಯ ಕಾರಣಕ್ಕೆ ಅರ್ಧಕ್ಕೆ ಓದು ನಿಲ್ಲಿಸಿ ಅಂಡಲೆಯುವವರ ಸಂಖ್ಯೆ ಹೆಚ್ಚಿರುತ್ತದೆ. ಇಂತವರು ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯರಾಗುತ್ತಾರೆ. ಬೆಳಗಾಂ, ಬಾಗಲಕೋಟೆ, ಕಂಪ್ಲಿ, ಗಂಗಾವತಿ, ಹೊಸಪೇಟೆ, ಕಮಲಾಪುರ ಭಾಗದಲ್ಲಿ ಧಾರ್ಮಿಕ ಗಲಬೆಗಳು ಆಗಾಗ ಸಂಭವಿಸುವುದಕ್ಕೂ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಸಕ್ರಿಯವಾಗಿರುವುದಕ್ಕೂ ನೇರ ಸಂಬಂಧವಿದೆ.

ಬರದ ವಲಸೆಯು ಗ್ರಾಮಗಳ ಜಾತಿತರತಮದ ಚಹರೆಯನ್ನೂ ಬದಲಿಸಿದೆ. ಕೃಷಿಯಲ್ಲಿ ದುಡಿದು ಹಣ ಹೊಂದಿಸಿ ಮನೆಕಟ್ಟಿಸಿಕೊಳ್ಳದ ಅನೇಕರು ವಲಸೆಯಿಂದ ಹೊಸಮನೆ ಕಟ್ಟಿಸಿಕೊಂಡು ಊರಿನಲ್ಲಿ ತಮ್ಮ ಸ್ಥಿತಿವಂತಿಕೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಹೀಗೆ ತಮ್ಮೂರಿನ ಹೊಸಮನೆಯ ಸಂಭ್ರಮ ನಗರದ ಟೆಂಟುಗಳಲ್ಲಿ ಅಳುಕಿಲ್ಲದೆ ಬದುಕುವುದನ್ನು ಕಲಿಸಿದೆ. ಅಂತೆಯೇ ವಲಸೆಯ ಜಾತಿನೆಲೆಯ ಪ್ರಮಾಣವನ್ನು ನೋಡಿದರೆ ದಲಿತ ಕೆಳಜಾತಿಗಳ ಆರ್ಥಿಕವಾಗಿ ಬಡತನವಿರುವ ಕೂಲಿಕಾರರ ವಲಸೆ ಹೆಚ್ಚಿದೆ. ನಗರದ ಶ್ರೀಮಂತರ ಚಹರೆಗಳನ್ನು ನೋಡಿದ ಇವರುಗಳಿಗೆ ತನ್ನೂರಿನ ಜಮೀನ್ದಾರ, ಧಣಿಗಳು ಪುಟಗೋಸಿಯಂತೆ ಕಾಣುತ್ತಾರೆ. ಹಾಗಾಗಿ ಅವರನ್ನು ನೋಡುವ ಕ್ರಮವೇ ಬದಲಾಗುತ್ತದೆ. ಪರಿಣಾಮ ಊರಿನ ಜತೆ ಆರ್ಥಿಕ ಸಂಬಂಧ ಕಡಿದುಕೊಂಡವರು ಇದೇ ಊರಿನ ಮೇಲುಜಾತಿಗಳ, ಜಮೀನ್ದಾರರ ಎದುರು ತಲೆಯೆತ್ತಿ ನಡೆಯುತ್ತಾ ಎದುರಾಡುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಹೊರಗೆ ದುಡಿದರೂ ಚಿಂತೆಯಿಲ್ಲ ಆಯಾ ಊರಿನ ಧಣಿಗಳ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸುತ್ತಾರೆ.

ಈ ಬಗೆಯ ಸ್ವಾಭಿಮಾನ ಗ್ರಾಮಗಳಲ್ಲಿ ಜಾತಿಗಳನ್ನು ಗಟ್ಟಿಗೊಳಿಸಿ ಕೆಳಜಾತಿ ಮೇಲುಜಾತಿಗಳ ನಡುವಿನ ಸಂಘರ್ಷಗಳಿಗೂ ಕಾರಣವಾಗಿದೆ. ವಲಸೆ ಹೋದ ದಲಿತ ಕೇರಿಗಳ ಹುಡುಗರು ಹೊಸ ಬಗೆಯ ವೃತ್ತಿಬದುಕಿನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ತಮ್ಮ ಕೇರಿಗಳಲ್ಲಿ ಅಂಬೇಡ್ಕರ್ ಜಯಂತಿ ಮಾಡಲು ಶುರುಮಾಡಿದ್ದಾರೆ. ಕುರುಬ ಬೇಡ ಸಮುದಾಯಗಳ ಕನಕ ವಾಲ್ಮೀಕಿ ಜಯಂತಿಗಳಲ್ಲಿಯೂ ಹೀಗೆ ವಲಸೆ ಯುವಕರು ಹೆಚ್ಚಿರುತ್ತಾರೆ. ಈಚೆಗೆ ಹೆಚ್ಚುತ್ತಿರುವ ಮೇಲುಜಾತಿ ಹುಡುಗಿಯರನ್ನು ಕೆಳಜಾತಿ ಹುಡುಗರು ಪ್ರೇಮಿಸಿ ಓಡಿಸಿಕೊಂಡು ಹೋಗುವ ಪ್ರಕರಣಗಳಲ್ಲಿ ವಲಸೆ ಹುಡುಗರ ಸಂಖ್ಯೆ ಹೆಚ್ಚಿದೆ. ಅಂತೆಯೇ ವಲಸೆಗೆ ಹೋಗುವ ಹೆಣ್ಣುಮಕ್ಕಳು ತಮ್ಮದೇ ಹಳ್ಳಿಯ ಕೃಷಿಕೂಲಿ ಮಹಿಳೆಯರಿಗಿಂತಲೂ ಚುರುಕಾಗಿರುತ್ತಾರೆ. ಗಟ್ಟಿಯಾಗಿ ಮಾತನಾಡುವುದನ್ನೂ, ದಿಟ್ಟವಾಗಿ ಅಭಿಪ್ರಾಯ ಮಂಡಿಸುವುದನ್ನೂ ಕಲಿತು ಹಳ್ಳಿಗರ ಹುಬ್ಬೇರಿಸುವಂತೆ ಮಾಡುತ್ತಾರೆ.

ಹೀಗೆ ಗ್ರಾಮದ ಆರ್ಥಿಕ ಅವಲಂಬನೆ ಬದಲಾದ ಕಾರಣ ಇದು ಜಾತಿ ನೆಲೆಯ ಮೇಲುಕೀಳುಗಳ ಭಾವನೆಗಳನ್ನೂ ಬದಲುಗೊಳಿಸಿದೆ. ಅಂಬೇಡ್ಕರ್ ಹೇಳುವ ಹಳ್ಳಿಗಳ ನಗರಗಳತ್ತ ಚಲನೆಯ ಬದಲಾವಣೆಗಳು ಇಲ್ಲಿ ನಗರ ವಲಸಿಗರಲ್ಲಿ ಜಾಗೃತವಾಗಿರುವುದು ಕಾಣುತ್ತದೆ. ಹೀಗೆ ಬರ ಮತ್ತು ವಲಸೆಗಳು ಬಹುರೂಪಿಯಾದ ಅನಪೇಕ್ಷಿತ ಪರಿಣಾಮಗಳನ್ನೂ ಬೀರಿವೆ. ಈ ಬಗ್ಗೆ ಇನ್ನಷ್ಟು ಗಂಭೀರವಾಗಿ ಅಧ್ಯಯನ ಮಾಡಬೇಕಿದೆ.
ಚಿತ್ರಗಳು: ಸಿದ್ಧರಾಮ ಹಿರೇಮಠ.

Leave a Reply

Your email address will not be published.