ಬರ ಎಂಬ ಎರಡಲಗಿನ ಕತ್ತಿ

-ಡಾ. ರಾಜೇಗೌಡ ಹೊಸಹಳ್ಳಿ

ಅಂದೊಮ್ಮೆ ಮಕ್ಕಳ ಮಾರಿ ರೊಟ್ಟಿ ತಿಂದಿದ್ದರಂತೆ. ಬಿದರಕ್ಕಿ ಗುಡಿಸಿ ಅನ್ನ ಮಾಡಿ ಉಂಡಿದ್ದರಂತೆ. ಕತ್ತಾಳೆ ಗಡ್ಡೆ ಬೇಯಿಸಿ ತಿಂದಿದ್ದರಂತೆ. ಒಂದು ಗುದ್ದಿನೊಳಗೆ ನಾಲ್ಕಾರು ಹೆಣಗಳನ್ನು ಹಾಕಿ ಮುಚ್ಚುತ್ತಿದ್ದರಂತೆ. ಹೀಗೆ ನನ್ನಜ್ಜ ಹೇಳುತ್ತಿದ್ದುದು ನೆನಪು. 1870ರ ಸಮಯ ದಕ್ಷಿಣ ಭಾರತದ ಬರದಲ್ಲಿ 5 ಮಿಲಿಯನ್ ಜನ ಸತ್ತ ಹಾಗೂ ಚೈನಾದಲ್ಲಿ 9 ಮಿಲಿಯನ್ ಜನ ಸತ್ತ ಕಾಲ ಅದೇ ಇರಬೇಕು. ಇದು ಆಗಾಗ್ಗೆ ಬರುತ್ತಿದ್ದ ಪ್ರಕೃತಿ ನಿರ್ಮಿತ ಬರದ ಚಕ್ರ. ಅಂದು ರೈತನ ಸಂತೆಗಳಲ್ಲಿ ಉಲ್ಲಾಸದ ಕೊಡುಕೊಳೆಯಿತ್ತು. ಪೇಟೆಯ ಬಂಗಾರದದಂಗಡಿಗಳಿಗಿಂತ ಸಂತೆಯ ಬೆಲ್ಲ ಬೆಣ್ಣೆ ಆಸರಗಳಲ್ಲಿ ಸುವಾಸನೆಯ ಕಂಪಿತ್ತು. ಆಗೊಮ್ಮೆ ಈಗೊಮ್ಮೆ ಬರ ಕ್ಷಾಮ ಬರುತ್ತಿರಲಿಲ್ಲವೆಂದೂ ಅಲ್ಲ. ನಾನು ಕಂಡಂತೆ 1965 ಆಜುಬಾಜು ಒಮ್ಮೆ ಬರ ಬಂದಿತ್ತು. ಪೇಟೆಯ ಬೀದಿಗಳಲ್ಲಿ ರೈತ ನೀರು ಕಾಯಿಸುವ ಅಂಡೆ, ಕುಡಿಯೋ ನೀರಿನ ಅಂಡೆ ಬಿಂದಿಗೆ ಚೆಂಬುಗಳೆಲ್ಲ ಹೊತ್ತು ನಗರದಂಗಡಿಗಳಿಗೆ ಮಾರುತ್ತಿದ್ದ. ಬಡವಿ ರೈತ ಮಹಿಳೆ ಮುಂಗೈ ಬೆಳ್ಳಿ ಬಳೆ ಮುರ ಬಿಚ್ಚಿ ಮಾರ್ವಾಡಿಗೆ ಮಾರಿ ಹೊಸದಾಗಿ ಬಂದಿದ್ದ ಅಮೆರಿಕೆ ಮೆಕ್ಕೆಜೋಳ ನೀಡುವ ಸರ್ಕಾರಿ ಅಂಗಡಿ ಮುಂದೆ ಸರದಿಗೆ ನಿಲ್ಲುತ್ತಿದ್ದಳು. ಅದು ಕೂಡ ತಾತ್ಕಾಲಿಕ ಬರವಾಗಿತ್ತು.

ಇದಲ್ಲದೆ ಮಾನವನೂ ತಾನಾಗಿ ಬರಮಾಡಿಕೊಂಡ ಬರಗಳೂ ಇವೆ. ಬ್ರಿಟಿಷ್ ಜಮೀನುದಾರರು ಬಡ ಐರ್ಲೆಂಡ್ ರೈತರಿಂದ ಏಕ ರೀತಿಯ ಬೆಳೆ ಒತ್ತಾಯಿಸುತ್ತಿದ್ದ ಪರಿಣಾಮ 1840ರಲ್ಲಿ ‘ಆಲೂಗೆಡ್ಡೆ ಬೆಳೆ ಕ್ಷಾಮ’ ಆವರಿಸಿ ತಿನ್ನಲು ಬೇರೇನೂ ಇಲ್ಲದೆ ಎರಡೂವರೆ ಮಿಲಿಯನ್ ಜನ ಸತ್ತರು. ನಮ್ಮ ಬಂಗಾಳದಲ್ಲಿ ಅತಿವೃಷ್ಟಿಯ ಹಿಂದೆಯೇ ಅನಾವೃಷ್ಟಿಯ ಕ್ಷಾಮ ಆವರಿಸಿ ಭೂ ದಾರಿದ್ರ-ಮೀನುಗಳ ನಾಶ-ಮಲೇರಿಯಾ ಪ್ರವೇಶವಾಗಿ 1943ರಲ್ಲಿ ಒಂದೂವರೆ ಮಿಲಿಯನ್ ಜನ ಸತ್ತರು. ಆಗ ಎರಡನೇ ವಿಶ್ವಸಮರ. ಆಹಾರ ಆಪತ್ತು ದೇಶಕ್ಕೆ ಒದಗಿತ್ತು. ಆಗ ಜಗತ್ತಿನ ನೀರಾವರಿ ತಜ್ಞ ಸರ್ ವಿಲಿಯಂ ವಿಲ್‍ಕಾಕ್ಸ್ ಬಂಗಾಳ ಅಧ್ಯಯನ ಮಾಡಿ ಪರಂಪರೆಯ ಭೂ ವಿಜ್ಞಾನವನ್ನು ಹರಣ ಮಾಡಿಕೊಂಡಿರುವ ಕಾರಣ ಇದೆಂದು ವಿವರಿಸಿದ್ದರು.

4ರಾಜ್ಯದಲ್ಲೀಗ 139 ತಾಲ್ಲೂಕುಗಳಲ್ಲಿ ಬರ ಎನ್ನುತ್ತದೆ ರಾಜ್ಯದ ಅಂಕಿ ಸಂಖ್ಯೆ. ರಾಜ್ಯ-ದೇಶದೆಲ್ಲೆಡೆ ನೀರಿಗೆ ಬರ. ಮೇವಿಗೆ ಬರ. ಬೆಳೆಯಿಲ್ಲದ ಬರ. ಮಳೆಯಾಗದ ಬರ. ಮುಂದೆ ಮಳೆಯಾಗುತ್ತದೆಯೇ ಯಾರೂ ಹೇಳಲಾಗದ ಬರ. ರಾಜಮಹಾರಾಜರು ಪಾಳೇಗಾರರು ಕಟ್ಟಿಸಿದ ಯಾವ ಕೆರೆಕಟ್ಟೆಗಳಲ್ಲೂ ಹಕ್ಕಿಪಕ್ಷಿ ಕುಡಿಯಲು ನೀರಿಲ್ಲದ ಬರ. ಈ ನಡುವೆ ನೂರು ರೂಪಾಯಿಗೆ ಒಂದು ಕೈ ಚೀಲ ತರಕಾರಿ ಹಾಲು ಹಣ್ಣು ಹಂಪಲು ಮಾರ್ಕೆಟಿನಲ್ಲಿ ಸಿಗುತ್ತದಲ್ಲ! ಬೆಳೆದದ್ದನ್ನು ರೈತ ರಸ್ತೆಯಲ್ಲಿ ಚೆಲ್ಲಾಡಿ ಹೋಗುತ್ತಿದ್ದಾನಲ್ಲ! ಇದೇನಿದು ಅತಿ ಬೆಳೆದರೂ ಬರ. ಇದೊಂದು ಎರಡಲಗಿನ ಕತ್ತಿ! ರೈತನ ಕೊಯ್ಯುತ್ತಿದೆ. ಪಾತಾಳಕ್ಕೆ ಅರ್ಜುನನು ಬಾಣ ಹೂಡಿ ನೀರು ಚಿಮ್ಮಿದಂತೆ ರೈತ ಕೊಳವೆ ಬಾವಿಯಿಂದ ತಂದು ಬೆಳೆಯುತ್ತಾನೆ. ಬಾವಿಗೆ ಸಾಲ. ಮೋಟರಿಗೆ ಸಾಲ. ರಸಗೊಬ್ಬರ, ಕೀಟನಾಶಕ ಸಾಲ, ಅವನಿಗೆ ಶೂಲ. ಸಾಲದ ಶೂಲ ಏರಿ ನಿಂತಿರುವ ಇವನೇ ಅನ್ನದಾತ. ‘ಸಂತೋಷ ಮತ್ತು ಸಂಕಟಗಳ ಒಂದು ಸಮತೋಲನ’ ಇದೇ ಬದುಕು ಎನ್ನುತ್ತದೆ ಮನಶಾಸ್ತ್ರಜ್ಞ ಯೂಂಗ್‍ನ ನುಡಿ. ಅದೀಗ ಅಹಿತಕರ ವಿಷಪೂರಿತವಾಗಿದೆಯಲ್ಲ! ಬೆಳೆ ನೀತಿ ಮಾರುಕಟ್ಟೆ ನೀತಿ ರೈತನಿಗೆ ನಿರ್ಮಿಸುವುದು ಸರ್ಕಾರದ ಕರ್ತವ್ಯವಲ್ಲವೆ! ರಾಜ್ಯ ಸರ್ಕಾರ ಶೇ 35 ಸಾಲ ಮನ್ನ ನೀಡುತ್ತೇವೆ ಕೇಂದ್ರ ಶೇ.65 ನೀಡಲಿ ಎಂದು ಸವಾಲು ಹಾಕುತ್ತಿದೆ. ಅನ್ನ ನೀಡುವ ಅನ್ನದಾತನ ಸಾಲ ಮನ್ನದ ಚೆಂಡು ಅತ್ತ ಇತ್ತ ಆಡುತ್ತಲೇ ಇದೆ. ಗಾಂಧಿ ನೋಟುಗಳ ಅದಲು ಬದಲಿನಲ್ಲಿ ದೇಶದ ಬಡವರು ಇನ್ನು ಸುಭಿಕ್ಷ ಎನ್ನುತ್ತದೆ ಕೇಂದ್ರ ಸರ್ಕಾರ. ಈಗಿದು ಬಡದೇಶವಲ್ಲ; ಜಪಾನಿನ ಬುಲೆಟ್ ರೈಲು ಓಡುತ್ತವಂತೆ. ಏಳು ಸಾವಿರ ಕೋಟಿ ಧಣಿಗಳ ಸಾಲ ಮನ್ನಾ ಮಾಡಬಹುದಾದ ಅರ್ಥಶಾಸ್ತ್ರವಿದೆಯಂತೆ. ಇದು ಗ್ರಾಮ-ಭಾರತ-ನಗರ ಭಾರತವೆಂಬ ಭುಂಜಕ ಲೋಕ ನೀತಿ.

ಒಂದು ಶತಮಾನದ ಹಿಂದೆಯೇ ಅಮೆರಿಕೆಯ ತಜ್ಞ ಸ್ಟುವರ್ಟ್ ಚೇಸ್ ‘ನಾವು ವಾಸ್ತವವಾಗಿ ಪ್ರಗತಿಯಿಂದ ಅಸ್ತವ್ಯಸ್ತ ರಾಶಿಯಾಗಿ ಪರಿಣಮಿಸಿದ್ದೇವೆ’ ಎನ್ನುತ್ತಾನೆ. ‘ಹಳ್ಳಿಯು ನಗರದ ಮೇಲೆ ಅತಿಯಾಗಿ ಅವಲಂಬಿಸಬಾರದು’ ಎಂದು ಗಾಂಧಿ ಅರ್ಥಶಾಸ್ತ್ರ ನುಡಿಯುತ್ತದೆ. ಆದರೆ ಕೇಳಿಸಿಕೊಳ್ಳಲು ಅಂದು ನೆಹರೂ ಭಾರತಕ್ಕೂ ಕಿವಿ ಮಂದವಾಗಿದ್ದವು ಇಂದಿನ ವರ್ತಮಾನದ ಭಾರತಕ್ಕೂ ಐಬಾಗಿವೆ. ಅಂದು ರೈತ ಮಳೆ ಬಂದರೆ ಬೆಳೆದು ಮುಂದೆ ಮಳೆ ಬರದಿದ್ದರೆ! ಎಂದು ಹಗೇವಿನಲ್ಲಿ ದಾಸ್ತಾನಿಡುತ್ತಿದ್ದ. ಒಂದು ವರ್ಷ ಕೆರೆ ತುಂಬಿದರೆ ಮತ್ತೊಂದು ವರ್ಷ ಅದೆ ನೀರನ್ನು ಬಂಗಾರದಂತೆ ಉಪಯೋಗಿಸುತ್ತಿದ್ದ. ನೀರಿಗೂ ಬದುಕಿಗೂ ನೇರ ಸಂಬಂಧವಿತ್ತು. ಭೂ ದಾರಿದ್ರ ಬರದಂತೆ ಭೂತಾಯಿ ಸೇವೆ ಸಹಜ ಕೃಷಿ ಮಾದರಿಯಲ್ಲಿತ್ತು. ಪರೀಕ್ಷೆ ಮಾಡಲೋ ಎಂಬಂತೆ ಈ ವರ್ಷ ಹೋದ ಮಳೆ ಮುಂದಿನ ವರ್ಷ ತಣಿಸುತ್ತಿತ್ತು. ಗಾಂಧಿ ಕಾಲದಲ್ಲಿ ಸಹಾ ಬಗ್ಗಿ ಮೊಗೆಯುವಷ್ಟು ನೀರು ಕೈಗೆಟುಕುತ್ತಿತ್ತು. ಈಗೆಲ್ಲಿ ಹೋಯ್ತು ಮಳೆ! ಮಳೆ ನೀರು ಹಿಂಗಿದ ನೀರಬೆಳೆ! ಹುಲುಮಾನವನಿಗೆ ನಿಸರ್ಗ-ಪರಿಸರ ಕಾಲಕಸ. ನಗರ ಎಂಬುದು ಹುಲಿ. ನಿಸರ್ಗ ಗೋವು. ಹುಲಿಯೀಗ ಏಳುಲಕ್ಷ ಭಾರತದ ಹಳ್ಳಿಗಳೆಂಬ ಗೋವುಗಳನ್ನು ನುಂಗುತ್ತಾ ಬರುತ್ತಿದೆ. ನಗರಗಳಿಗೀಗ ಹೊಟ್ಟೆನೋವು. ಹಳ್ಳಿಗಳಿಗೀಗ ಜಠರ ಹುಣ್ಣು. ಶಾಲಾ ಮಕ್ಕಳಿಗೆ ಹೊಂಜಿನ ಮರೆಯ ಬಾಯಿ ಮುಸುಕು. ಇಂದು ದಿಲ್ಲಿಗೆ ನಾಳೆ ಬೆಂಗಳೂರಿಗೆ ನಾಡಿದ್ದು ಹಳ್ಳಿಗೆ ಇದೇ ಮುಸುಕಿನ ಬದುಕು. ಇದೇ ಭಾರತದ ಅಭಿವೃದ್ಧಿ. ಇದು ಜಗದ ನೋವು ಸಹಾ ಹೌದು. ಜಗದ ತುಂಬಾ ಹುಲಿ ಕುರಿ ಚದುರಂಗದಾಟ.

gota1ಹಾಗಾದರೆ ಅಭಿವೃದ್ಧಿ ಹೇಗಾಗಬೇಕು? ಅದು ಹಿತಮಿತ ಜ್ಞಾನಪರಂಪರೆಯ ವಿಜ್ಞಾನವಾಗಿರಬೇಕು ಎಂದು ತ್ರಿಲೋಕದೊಳಗಿರುವ ಭೂಮಿ ಬಯಸುತ್ತದೆ. 2000ನೇ ಇಸವಿಯಲ್ಲಿ ಅಮೆರಿಕೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಆಗಿನ ಅಮೆರಿಕೆ ಉಪಾಧ್ಯಕ್ಷ ಅಲಗೋರ್ ಎಂಬಾತ ಈ ಪೃಥ್ವಿಯ ಮಿತಿಯನ್ನು ಆತಂಕದೊಡನೆ ಕಿರು ಚಿತ್ರ ಮಾಡಿ ತೋರಿಸಿದ್ದರು. ಆತನಿಗೆ ಅಲ್ಲಿನ ಜನ ಗೆಲ್ಲಿಸಲಿಲ್ಲ. ಬುಷ್ ಯುಗ ಪ್ರಾರಂಭವಾಯಿತು. ಈಗ ಟ್ರಂಪಿನ ಯುಗಕ್ಕೆ ಬಂದು ನಿಂತಿದೆ. ಚೈನಾ ಜಪಾನ್ ರಷ್ಯಾ ಇವೆಲ್ಲವೂ ಅಮೆರಿಕೆಯೊಡನೆ ಅಧಿಕಾರದ ಗಡಿ ಗುನ್ನಕ್ಕೆ ಹಾತೊರೆಯುತ್ತಿವೆ. ಭಾರತ ಎಂದೂ ತನ್ನ ಗಡಿಧಾಟದ ಸಂತೃಪ್ತಿಯದು. ಹಾಗೇ ಇರಬೇಕಾಗಿತ್ತು ಎಂದು ಗಾಂಧಿ ಹೆಜ್ಜೆಗಳು ಹೇಳಿದವು. ಅಭಿವೃದ್ಧಿ ಎಂದರೆ ಸಂತೃಪ್ತಿಯಿಂದಿರುವುದು. ಸಂತೃಪ್ತಿ ಎಂದರೆ ನಿಸರ್ಗದೊಡನೆ ಹೊಂದಾಣಿಕೆ. ಪೃಥ್ವಿ ಜಗದಾಟಗಾರನ ಕೈಯ ಗಿಲಿಗಿಚ್ಚಿ. ಅದು ಲಾಲಿ ಹಾಡುತ್ತಿರಬೇಕು. ಮನುಷ್ಯ ಲಾಲಿ ಕೇಳುತ್ತಾ ನಗುತ್ತಿರಬೇಕು. ಆದರೀಗ ಶೀತ ಪರ್ವತಗಳೇ ಕರಗಿ ಮುಳುಗುತ್ತಿವೆ. ಮುಳುಗಿ ಮಹಾ ನೀರು ಮುಕ್ಕುಳಿಸುತ್ತಿದೆ. ಇನ್ನು ಇಪ್ಪತ್ತು ವರ್ಷಗಳಲ್ಲಿ ಸಮುದ್ರ ತಡಿಯ ನಗರಗಳು ಹಲವು ಇರುವುದಿಲ್ಲ. ನಲ್ವತ್ತು ವರ್ಷಗಳಲ್ಲಿ ಬಹುತೇಕ ನಗರಗಳು ಇರುವುದಿಲ್ಲ ಎಂದು ಅಲಗೋರ್ ಅಧ್ಯಯನದ ಕಿರುಚಿತ್ರ ಹೇಳುತ್ತದೆ. ಇದು ಆತ ಹೇಳುವ ‘ನಿಷ್ಠುರ ಸತ್ಯ’. ಹೀಗೆ ಜಗದಣ್ಣನಾಗಿ ತಿಳಿ ಹೇಳುವ ಅರಿವು ಈಗ ಆ ದೇಶದ ಸ್ಥಾನಕ್ಕೂ ಇದ್ದಂತಿಲ್ಲ. ಪ್ರಜಾಪ್ರಭುತ್ವವೀಗ ಕೈಗಾರಿಕಾ ಪ್ರಭುಗಳ ಒಡೆತನದಲ್ಲಿದೆ.

ಎಲ್ಲೆಲ್ಲೂ ಕಾಂಚಾಣವೇ! ನಮ್ಮ ರಾಜ್ಯದಲ್ಲೆ ವಿಜಯನಗರದ ಅರಮನೆ ವೈಭವದ ಮದುವೆ. ಪಕ್ಕದ ರಾಜ್ಯದಲ್ಲೆ ಪ್ರಜಾಪ್ರತಿನಿಧಿಗೆ ಬುಲೆಟ್ ಫ್ರೂಫ್ ಅರಮನೆ. ‘ಬ್ರಿಟಿಷ್ ದರ್ಬಾರಿನ ದುಂದುಗಾರಿಕೆಯನ್ನು ನಾವೂ ಅನುಸರಿಸುತ್ತಿದ್ದೇವೆ. ಈ ದೇಶ ಈ ಭಾರವನ್ನು ಹೊರಲಾರದು’ ಎಂದು ಗಾಂಧೀಜಿ ನೆಹರೂಗೆ ಪತ್ರ ಬರೆದು ಅಂದು ಹೇಳಿದ ಮಾತು ಮುಂದುವರಿಯುತ್ತಲೇ ಇದೆ. ಯಾರು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ. ಮಾನವ ಜಗತ್ತೆ ಭೂಮಿ ನ್ಯಾಯವನ್ನು ನಿರಾಕರಿಸಿ ಹೊರಟಿದೆ. ಒಂದು ವರ್ಷ ಮಳೆ ಹೋಗುವುದು ಬರ ಬರುವುದು ಮನುಷ್ಯನನ್ನು ಅಂಕೆಯಲ್ಲಿಡುವ ಒಂದು ಭೂನ್ಯಾಯ. ಈಗಿನದು ಹಾಗಲ್ಲ. ಮರದ ನೇಲೆ ನಿಂತು ಬುಡಕಡಿವ ಸ್ವಯಂಕೃತ ಅಪರಾಧ. ಅದನ್ನು ಸಹಾ ಭೂತಾಯಿ ಕ್ಷಮಿಸಿಯಾಳು. ಆಕೆ ಸ್ವತಃ ಹುಣ್ಣು ಮಾಯಿಸಿಕೊಳ್ಳುವ ಮಾಯದ ಮಾರ್ಜಾಲ. ಆಕೆಯ ಮಡಿಲಾಸರೆಗೆ ಮನುಷ್ಯ ಸಹಕರಿಸಬೇಕು. ಆ ಸಹಕಾರವೆಂದರೆ ಹೆತ್ತ ತಾಯಿಯನ್ನು ಗೌರವಿಸುವುದು. ಅದೊಂದು ನೀತಿ. ಅದು ಜಗದ ನೀತಿ. ಅದು ನಿಸರ್ಗದೊಡನೆ ಮೌನವನ್ನು ಆಹ್ವಾನಿಸಿಕೊಳ್ಳುವ ಬುದ್ಧ ನೀತಿ. ಅದು ಎರಡಗಲಿನ ಹರಿತವನ್ನು ಸಹಾ ಮಂದಗೊಳಿಸಬಲ್ಲದು.

 

Leave a Reply

Your email address will not be published.