ಪ್ರಗತಿಪರ ಮಹಾರಾಜ ಶಾಹೂ ಛತ್ರಪತಿ

ಪ್ರೊ. ಶಿವರಾಮಯ್ಯ

IMG_2188ಒಬ್ಬ ವ್ಯಕ್ತಿ ಎಷ್ಟೇ ಪ್ರಗತಿಪರ ದೃಷ್ಟಿಯುಳ್ಳವನಾಗಿದ್ದರೂ ಅದನ್ನು ಕಾರ್ಯಗತಗೊಳಸುವಲ್ಲಿ ಅಧಿಕಾರ ಸೂತ್ರ ಅವನ ಕೈಯಲ್ಲಿರದಿದ್ದರೆ ಅದು ಕೇವಲ ಫಲಿಸದೆ ಬಿದ್ದ ಹೂವಿನಂತಾಗುವುದು. ಪ್ರಗತಿಪರ ರಾಜನ ಆಧೀನಕ್ಕೊಳಪಟ್ಟು ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗ ನಡೆದುದಾದರೆ, ಅಂಥ ರಾಜ್ಯ ಸುಖೀ ರಾಜ್ಯವಾಗುವುದರಲ್ಲಿ ಎರಡು ಮಾತಿಲ್ಲ. ಆಗ ಅದು ಅವನ ಇಚ್ಛೆಯಂತೆ ಅಭಿವೃದ್ಧಿಪಥದತ್ತ ಸಾಗುವುದು.

ಆದರೆ ರಾಜ ಲೋಲುಪನೂ ಅಮಾಯಕನೂ ಆಗಿದ್ದು ಮಂತ್ರಿ ಪುರೋಹಿತ ಹಾಗೂ ಅಧಿಕಾರಗಳ ಕೈಗೊಂಬೆಯಾಗಿದ್ದ ಪಕ್ಷದಲ್ಲಿ ಅಂಥ ದೇಶ ಮುಂದುವರಿಯಲು ಸಾಧ್ಯವೇ ಇಲ್ಲ. ಎಂದರೆ ರಾಜನಾದವನಿಗೆ ತಕ್ಕ ಸಮಯದಲ್ಲಿ ತಕ್ಕ ನಿರ್ಧಾರ ತೆಗೆದುಕೊಳ್ಳುವ ವಿವೇಕ ಇದ್ದುದಾರೆ ಆ ರಾಜ್ಯ ಪ್ರಗತಿಯ ಹಾದಿಯಲ್ಲಿದೆ ಎಂದೇ ಹೇಳಬೇಕು. ಪ್ರಜಾಪ್ರಭುತ್ವದ ಇಂದಿನ ಕಾಲಮಾನದಲ್ಲಿ ಇಂಥ ಏಕಾಧಿಪತ್ಯದ ಮಾತೇಕೆ? ಎಂದು ಯಾರಾದರೂ ಹುಬ್ಬೇರಿಸಬಹುದು. ಆದರೆ ಕೊಲ್ಲಾಪುರದ ಶಾಹು ಮಹಾರಾಜ, ಬರೋಡದ ಗಾಯಕವಾಡ್, ಮೈಸೂರಿನ ನಾಲ್ವಡಿಕೃಷ್ಣರಾಜ ಒಡೆಯರ್ ಮುಂತಾದವರು ಎಲ್ಲ ರಾಜರಂತಲ್ಲ. ಈ ರಾಜರುಗಳ ಪ್ರಗತಿಪರ ದೃಷ್ಟಿ, ದುಃಖಾರ್ತರ ಮೇಲಿನ ಕರುಣೆ, ಮತ ಧರ್ಮಗಳ ಮೇಲಿನ ಸಹಿಷ್ಣುತೆ, ಮಹಿಳೆಯರ ಹಾಗೂ ದಲಿತ ವರ್ಗದ ಮೇಲಿನ ಕಾಳಜಿ ಇವು ಅಪೂರ್ವವಾಗಿದ್ದು ಚರಿತ್ರೆಯ ಪುಟಗಳಲ್ಲಿ ಇವರ ಹೆಸರು ಹಸಿರಾಗಿರಲು ಕಾರಣವಾಗಿದೆ.

ಕೊಲ್ಲಾಪುರ, ಮೈಸೂರು, ಬರೋಡ ಮುಂತಾದ ರಾಜ್ಯಗಳು ಬ್ರಿಟಿಷ್ ಸಾಮ್ರಾಜ್ಯದ ಆಧೀನದಲ್ಲಿದ್ದೂ ಸಹ ಲಿಟಲ್ ಥಿಂಗ್ ಈಸ್ ಬ್ಯೂಟಿಫುಲ್ ಎಂಬಂತೆ ಚಿಕ್ಕ ರಾಜ್ಯಗಳಾಗಿದ್ದೂ ಮಾದರಿ ರಾಜ್ಯಗಳೆಂಬಂತಿದ್ದವು. ಇದಕ್ಕೆ ಕಾರಣ ಆಳುವ ಪ್ರಭುಗಳಿಗಿದ್ದ ಕರ್ತೃತ್ವ ಶಕ್ತಿ, ಪ್ರಗತಿಪರದೃಷ್ಟಿ, ವಿವೇಚನಾ ಸಾಮಥ್ರ್ಯ. ರಾಜನಾದವನಿಗೆ ಸಂಕಲ್ಪ ಶಕ್ತಿ ಇರುವುದಾದರೆ ಇಂದಿನ ಪ್ರಜಾಪ್ರತಿನಿಧಿ ಸಚಿವ ಶಾಸಕರುಗಳಿಗಿಂತ ಅತಿಶಯವಾಗಿ ಜನಪರ ಆಡಳಿತವನ್ನು ನೀಡಬಲ್ಲರು ಎಂಬುದಕ್ಕೆ ಇವರು ನಿದರ್ಶನವಾಗಬಲ್ಲರು. ಹೀಗೆ ಜನಮುಖಿ ಆಡಳಿತ ನಡೆಸಿದ ಭಾರತೀಯ ರಾಜರ ಸಾಲಿನಲ್ಲಿ ಕೊಲ್ಲಾಪುರದ ಶಾಹು ಛತ್ರಪತಿ ಮಹಾರಾಜರದು ಮೊದಲ ಹೆಸರು ಎನ್ನಬಹುದು.
“ಭಾರತದಲ್ಲಿಯ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಪ್ರಭುತ್ವದಿಂದ ಬಿಡುಗಡೆ ಪಡೆಯುವುದಕ್ಕಾಗಿ ನಡೆದ ಹೋರಾಟವನ್ನು ಭಾರತೀಯ ಸ್ವಾತಂತ್ರ್ಯ ಸಂಗ್ರಾಮವೆಂದು ಕರೆಯುತ್ತೇವೆ.

shahu-maharaj-1ಈ ಹೋರಾಟದ ಸಂದರ್ಭದಲ್ಲಿ ಎರಡು ಪ್ರಧಾನ ವಾಗ್ವಾದಗಳಿದ್ದವು. ಒಂದು ವಿಚಾರಧಾರೆಯಲ್ಲಿ ಸಾಮಾಜಿಕ ಸ್ವಾತಂತ್ರ್ಯಕ್ಕೆ ಆದ್ಯತೆ ಇದ್ದರೆ, ಇನ್ನೊಂದರಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಲಾಗಿತ್ತು. ಜ್ಯೋತಿ ಬಾಫುಲೆ, ಶಾಹು ಛತ್ರಪತಿ, ಡಾ. ಬಿ.ಆರ್. ಅಂಬೇಡ್ಕರ್ ಮೊದಲಾದವರು ಸಾಮಾಜಿಕ ಸ್ವಾತಂತ್ರ್ಯಕ್ಕೆ ಆದ್ಯತೆ ನೀಡಿದ್ದರು. ಅವರ ದೃಷ್ಟಿಯಲ್ಲಿ ಏಣಿ ಶ್ರೇಣಿಯ ಸಾಮಾಜಿಕ ವ್ಯವಸ್ಥೆಯಿರುವಲ್ಲಿ ರಾಜಕೀಯ ಸ್ವಾತಂತ್ರ್ಯವನ್ನು ಬ್ರಿಟಿಷ್ ವಸಾಹತು ಶಾಹಿಯಿಂದ ಪಡೆದರೂ ಅದರಿಂದ ಹೆಚ್ಚು ಪ್ರಯೋಜನ ಆಗಲಾರದು ಎಂದಿತ್ತು. ಅವರ ಅನಿಸಿಕೆ ಬಹುಮಟ್ಟಿಗೆ ಸರಿಯೆಂದು ಈಗ ಕೆಲವರಿಗೆ ಅನಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ” [ರವಿರಾ.ಅಂಚನ್, ಲೇಖಕರ ಮಾತು. ರಾಜರ್ಷಿ ಶಾಹೂ ಛತ್ರಪತಿ, ಪ್ರಸಾರಾಂಗ, ತುಮಕೂರು ವಿಶ್ವವಿದ್ಯಾಲಯ. 2012]
ರವಿ ರಾ. ಅಂಚನ್ ಅವರ ಮಾತು ನಿಜ. ಈಗ್ಗೆ 65 ವರ್ಷಗಳು ಕಳೆದರೂ ಭಾರತ ಗಣರಾಜ್ಯದಲ್ಲಿ ‘ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು’ ಎಂಬ ಮಾತು ಕೇವಲ ಮರೀಚಿಕೆಯಾಗಿ ಉಳಿದಿದೆ. ಇದಕ್ಕೆ ಕಾರಣಗಳನ್ನು ಪಟ್ಟಿ ಮಾಡುವ ಅಗತ್ಯವಿಲ್ಲ. ಹಣ-ಅಧಿಕಾರ ಲಾಲಸೆ, ಸ್ವಾರ್ಥ, ಭ್ರಷ್ಟಾಚಾರ, ಅದಕ್ಷತೆ, ಆಲಸ್ಯ, ಸ್ವಜಾತಿ ಪಕ್ಷಪಾತ, ಮತಮೌಢ್ಯ, ಧಾರ್ಮಿಕ ಅಸಹಿಷ್ಣುತೆ- ಇವು ಸ್ವಾತಂತ್ರೋತ್ತರ ಭಾರತದಲ್ಲಿ ಇನ್ನೂ ಅಧಿಕವಾಗುತ್ತಿವೆ.

ಆದ್ದರಿಂದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಯೇ ಮರುಚಿಂತನೆ ನಡೆಸಬೇಕಾದ ಸಂದರ್ಭ ಉದ್ಭವಿಸುತ್ತಿದೆ. ಯಥಾ ಪ್ರಕಾರ ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯ, ಪಾಳೆಗಾರಿಕೆಯ ಪಿತೂರಿ ಸಂಚು, ಜಾತಿ ಜಗದ್ಗುರುಗಳ ಮತ ಮೌಢ್ಯ ಇವುಗಳ ವಿಜೃಂಭಣೆ ಹೆಚ್ಚಾಗುತ್ತಿದೆ. ದಲಿತರ, ಮಹಿಳೆಯರ ಗೋಳನ್ನು ಕೇಳುವವರೇ ಇಲ್ಲ. ಚರಿತ್ರೆಯಿಂದ ನಾವು ಪಾಠ ಕಲಿಯುತ್ತಿಲ್ಲ. [ಯಾವತ್ತೂ ಕಲಿಯುವುದಿಲ್ಲ] ಇರುಳು ಕಂಡ ಬಾವಿಗೆ ಹಗಲು ಬೀಳುತ್ತಿದ್ದೇವೆ. ಇದಕ್ಕೆ ಕಾರಣ ಆಳುವ ವರ್ಗ ಬಹುಸಂಖ್ಯಾತ ಅಶಿಕ್ಷಿತ ಜನರನ್ನು ಯಾಮಾರಿಸಿ ಮೆರೆಯುತ್ತಿರುವುದು. ಇಂದಿನ ಪರಿಸ್ಥಿತಿಗೆ ಹೋಲಿಸಿದರೆ ಹಿಂದೆ ಕೊಲ್ಲಾಪುರದಂಥ ಪುಟ್ಟ ಭೂಭಾಗವನ್ನು ಆಳಿದ ರಾಜರ್ಷಿ ಬಿರುದಾಂಕಿತ ಶಾಹು ಛತ್ರಪತಿಯವರ ಸಾಮಾಜಿಕ ನ್ಯಾಯಬದ್ಧತೆ ಹಾಗೂ ರಾಜಕೀಯ ಮುತ್ಸದ್ದಿತನ ಎಲ್ಲ ಕಾಲಕ್ಕೂ ಮಾದರಿ ಎಂಬಂತಿದೆ.

ರಾಜರ್ಷಿ ಶಾಹು ಛತ್ರಪತಿ ಅವರ ಇತಿವೃತ್ತ ತುಂಬ ರೋಚಕವಾದುದು. ಇವರು 26 ಜನವರಿ 1874ರಲ್ಲಿ ಮರಾಠ ಜಹಂಗೀರದಾರ ಮನೆತನದಲ್ಲಿ ಹುಟ್ಟಿದರು. ಕೊಲ್ಲಾಪುರದ ರಾಜವಾಡದ ರಾಧಾಬಾಯಿ ಮತ್ತು ಅಪ್ಪಾ ಸಾಹೇಬ್ ಇವರ ತಂದೆ ತಾಯಿಗಳು. ರಾಧಾಬಾಯಿ ಕರ್ನಾಟಕದ ಮುಧೋಳದ ರಾಜಕುಮಾರಿ. ಹುಟ್ಟು ಹೆಸರು ಯಶವಂತ ಎಂದು. ಬಾಲಕ ಯಶವಂತ ಕೊಲ್ಲಾಪುರ ಸಂಸ್ಥಾನದ ದತ್ತಕ ಪುತ್ರನಾಗಿ ಶಾಹೂ ಛತ್ರಪತಿ ಎಂಬ ಅಭಿಧಾನ ಹೊಂದಿ ತನ್ನ ಹತ್ತನೆಯ ವಯಸ್ಸಿನಲ್ಲಿ (1884) ಅರಮನೆಗೆ ಬಂದರು. ಅವರು ಅಧಿಕಾರದ ಚುಕ್ಕಾಣಿ ಹಿಡಿದಿದ್ದು ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ (1894). ಇಲ್ಲಿಂದ 1922ರವರೆಗೆ ಎಂದರೆ 28 ವರ್ಷಕಾಲ ಆ ಪುಟ್ಟ ಸಂಸ್ಥಾನದ ರಾಜನಾಗಿದ್ದರು. ತನ್ನ ಆಳ್ವಿಕೆಯ ಅವಧಿಯಲ್ಲಿ 450 ಕ್ಕೂ ಹೆಚ್ಚು ಸುಧಾರಣಾತ್ಮಕವಾದ ಕಾನೂನುಗಳನ್ನು ಜಾರಿಗೆ ತಂದರು. ಮತ್ತು ಆ ಕಾನೂನುಗಳು ಕಡತಗಳಲ್ಲಿಯೇ ಉಳಿಯದಂತೆ ಹದ್ದಿನ ಕಣ್ಣಿಟ್ಟು ಅನುಷ್ಠಾನಗೊಳಿಸಲು ಶ್ರಮಿಸಿದರು.

ಇದರಲ್ಲಿ ಬಹುಮುಖ್ಯವಾದುದು ಅಸ್ಪøಶ್ಯತೆ ಆಚರಣೆಯ ನಿಷೇಧ. ಅರಮನೆಯಿಂದ ಗುರುಮನೆಯಿಂದ ಗುಡಿಗಳಿಂದ ಅದನ್ನು ತೊಡೆದು ಹಾಕಲು ಸತತ ಯತ್ನಿಸಿದರು. ‘ಅಲ್ಲೇ ಕುಳಿತ’ ಅಲಕ್ಷಿತ ಜನರ ಬವಣೆ ಬೇಗುದಿಗಳನ್ನು ಕಂಡು ಮರುಗುವ ಸಹೃದಯರು ಶಾಹೂ. ಭಹಿಷ್ಕøತ ಭಾರತದ ಶೋಷಿತ, ಪೀಡಿತ ದುಃಖಾರ್ತರ ಸಂರಕ್ಷಣೆಗಾಗಿ, ಉದ್ಧಾರಕ್ಕಾಗಿ ಮನಃಪೂರ್ವಕ ಶ್ರಮಿಸಿದರು. ಇಡೀ ಭರತಖಂಡದಲ್ಲಿ ಇದೇ ಮೊದಲೆಂಬಂತೆ ದಲಿತರ ದಾಸ್ಯ ವಿಮೋಚನೆಗಾಗಿ ಶಾಸನಗಳನ್ನು ಮಾಡಿ ಅವರ ವಿಮುಕ್ತಿಗೆ ಮುನ್ನುಡಿ ಬರೆದರು. ರವಿ ರಾ. ಅಂಚನ್ ಶ್ರುತಪಡಿಸುವಂತೆ ಕೊಲ್ಲಾಪುರ ಪ್ರದೇಶದಲ್ಲಿ ಇಂದಿಗೂ ಲಿಖಿತ ಮತ್ತು ಅಲಿಖಿತ ಪರಂಪರೆಯಲ್ಲಿ ಶಾಹೂ ಮಹಾರಾಜರ ನಡಿಗೆಗಳು ತನ್ನ ನಿಗೂಢತೆಗಳನ್ನು ನಿಧಾನವಾಗಿಯಾದರೂ ಬಿಟ್ಟು ಕೊಡುತ್ತಲೇ ಇವೆ. ಅವರಿಟ್ಟ ಹೆಜ್ಜೆ ಗುರುತುಗಳ ಅನ್ವೇಷಣೆ ಇನ್ನೂ ನಡೆಯಬೇಕಿದೆ. ಯಾಕೆಂದರೆ ಅಲ್ಲಮಪ್ರಭು ನಿರ್ವಚಿಸಿರುವಂತೆ ಹಿಂದಣ ಹೆಜ್ಜೆಯನರಿತಲ್ಲದೆ ಮುಂದಣಹೆಜ್ಜೆಯನಿರಿಸಲು ಬಾರದು.

shahu-maharajಕೊಲ್ಲಾಪುರ ಸಂಸ್ಥಾನ ಕೇವಲ 2217 ಚದರ ಮೈಲಿ ವಿಸ್ತೀರ್ಣದ ಹಾಗೂ ಏಳೆಂಟು ಲಕ್ಷ ಜನ ಸಂಖ್ಯೆ ಇದ್ದ ಪುಟ್ಟ ಭೂ ತುಣುಕು. ಶಾಹೂ ಛತ್ರಪತಿ ಪಟ್ಟವೇರಿದಾಗ ಅದು ಅಧಿಕಾರ ಕಿತ್ತಾಟದ, ಜಾತಿ ಜಗಳದ ಕದನ ಕ್ಷೇತ್ರವಾಗಿತ್ತು. ಬ್ರಾಹ್ಮಣರ ಹಾಗೂ ಸವರ್ಣೀಯ ಶೂದ್ರರ ಮೇಲಾಟದಲ್ಲಿ, ಕೋಣಗಳೆರಡರ ಹೋರಾಟದಲ್ಲಿ ಕಾಲ್ ತುಳಿತಕ್ಕೆ ಸಿಕ್ಕ ಗರಿಕೆಯಂತಾಗಿತ್ತು ಪಂಚಮರ ಸ್ಥಿತಿ. ಅರಮನೆಗಳಲ್ಲಿ ಏನೂ ನಡೆಯಬಹುದು ಎಂಬ ನಾಣ್ಣುಡಿಯೊಂದಿದೆ. ಹಾಗೆ ಕೊಲ್ಲಾಪುರದ ಗತಿಶೀಲ ಇತಿಹಾಸದಲ್ಲಿ ಛತ್ರಪತಿ ಶಿವಾಜಿಯ ನಂತರ ಅರಮನೆಗೆ ಬಂದ ದತ್ತಕ ಪುತ್ರರು ‘ಪಟ್ಟವೇರುವ ಮೊದಲೆ ಅಥವಾ ಪಟ್ಟವೇರಿದ ಕೆಲ ಸಮಯದಲ್ಲೇ ನಿಗೂಢವೆಂಬಂತೆ ಅಸು ನೀಗುತ್ತಿದ್ದರು. ಶಾಹು ಛತ್ರಪತಿ ಈ ಅರಮನೆಗೆ ದತ್ತಕ ಬಂದ ಸಂದರ್ಭದಲ್ಲಿ ಪೇದೆಯಿಂದ ಮೊದಲುಗೊಂಡು ಹಿರಿಯ ಅಧಿಕಾರಿಯವರೆಗೆ ಚಿತ್ಪಾವನ ಬ್ರಾಹ್ಮಣರದ್ದೇ ಅಲ್ಲಿ ಕಾರುಬಾರಾಗಿತ್ತು.

ಸ್ವಜಾತಿಯ ಪತ್ರಿಕಾ ಮಾಧ್ಯಮ ಕೂಡ ಅವರ ಪರವಾಗಿತ್ತು. ಆದರೆ ಜನಪದ ರಂಗ ಭೂಮಿಯ ‘ತಮಾಷಾ’ ಮತ್ತು ‘ಝಲ್ಸಾ’ ಇವು ಮಾತ್ರ ಜನಜಾಗೃತಿಯ ಪ್ರೇರಣಾ ಕೇಂದ್ರಗಳಾಗಿದ್ದವು. ಬೀದಿ ರಂಗ ಭೂಮಿಯ ಈ ಉರಿ ಚಮ್ಮಾಳಿಗೆ ಕೆಳಗೆ ಸಿಕ್ಕ ಹುಸಿ ನೆಲೆಗಳು ಕುಸಿದು ಕಂಪಿಸುತ್ತಿದ್ದವು. ಹಳ್ಳಿ ಹಳ್ಳಿಗಳಲ್ಲೂ ಆಗಿನ ದಿನಗಳಲ್ಲಿ ಜ್ಯೋತಿ ಬಾಫುಲೆ ಅವರ ಕ್ರಾಂತಿಕಾರ ಜ್ಯೋತಿ ಬೆಳಗುತ್ತ, ಜನಪದ ಕಲೆಗಳಲ್ಲಿ ಅದು ಮರುಹುಟ್ಟು ಪಡೆಯುತ್ತಿತ್ತು. ಮೇಲ್ವರ್ಗದ ಸುದ್ದಿ ಪತ್ರಿಕೆಗಳ ಸುಳ್ಳುಗಳು ತೂರಿ ಹೋಗುತ್ತಿದ್ದವು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬ್ರಿಟಿಷ್ ಸರ್ಕಾರ ಜಯವಂತರಾವ್ ಘಾಡ್ಗೆ ಎಂಬುವವರನ್ನು ರಾಜಪ್ರತಿನಿಧಿಯನ್ನಾಗಿ ನೇಮಿಸಿತು. ಆರಂಭದಲ್ಲಿ ಬಾಲಕ ಶಾಹೂ ಸಹ ಅಂದಿನ ರಾಜಕೀಯ ಪಗಡೆಯಾಟದಲ್ಲಿ ದಾಳವಾಗಿ ಬಿಟ್ಟಿದ್ದರು. ಆದರೆ ಕಾಲಕ್ರಮೇಣ ಅಧಿಕಾರ ಕೈಗೆ ಬಂದ ಮೇಲೆ ಮೆಲ್ಲಗೆ ತಮ್ಮ ಅಸ್ತಿತ್ವವನ್ನು ತೋರಿಸಿಕೊಟ್ಟರು. ಅವರು ತಮ್ಮ ಕೈಗೆ ಬಂದ ರಾಜದಂಡವನ್ನು ಕ್ರಾಂತಿಕಾರಿಯಾಗಿ ಸಮಾಜ ಸುಧಾರಣಾ ಮಾನದಂಡವನ್ನಾಗಿ ಬಳಸಿಕೊಂಡರು. ಸಮಾಜ ಸುಧಾರಕನಾಗಿ, ಜನಾನುರಾಗಿ ರಾಜನಾಗಿ, ಬಡವರ ಬಂಧುವಾಗಿ ಕೀರ್ತಿ ಪಡೆದರು. ಬಡವರ ಪರವಾದ ಅವರ ಆಡಳಿತವು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಲು ಯೋಗ್ಯವಾದುದು.

ಬೆಳೆವ ಪೈರು ಮೊಳಕೆಯಲ್ಲಿಯೇ ತೋರಿ ಬರುತ್ತದೆ ಎಂಬಂತೆ ಶಾಹು ಛತ್ರಪತಿಯ ಬಾಲ್ಯ ವಿದ್ಯಾಭ್ಯಾಸ ಸಂದರ್ಭದಲ್ಲಿಯೇ ಅವರ ಪ್ರಗತಿಪರ ದೃಷ್ಟಿ ಕಂಡು ಬರುತ್ತದೆ. ಸದ್ವವರ್ತನೆಗೆ ಹೆಸರಾಗಿದ್ದು ಅವರು ತನ್ನ ತಂದೆಗೆ ಕೆಟ್ಟ ಹೆಸರು ತಂದ ಅವರ ಸಹಚರ ಕುಡುಕರನ್ನು ದೂರವಿಟ್ಟು, ಬಡವರ ಪರ ಚಿಂತಿಸುವ ಬಂಡಾಯಗಾರ ಯುವಕನಾಗಿ ಬೆಳೆದರು. ತನ್ನ ಶಿಷ್ಯನ ಪ್ರತಿಭೆಯನ್ನು ಗುರ್ತಿಸಿರುವ ಫ್ರೆಜರ್ ಎಂಬ ಆಂಗ್ಲ ಅಧ್ಯಾಪಕ ‘ಶಾಹೂ ಸರಳನೂ, ಉದಾರಿಯೂ ಆದ ಪ್ರೇಮಮಯಿ ತರುಣನಾಗಿದ್ದಾನೆ. ಆತ ಎತ್ತರದ ದೃಢಕಾಯನಾಗಿದ್ದು, ಮರಾಠರ ವೈಶಿಷ್ಟ್ಯದ ಪ್ರತೀಕದಂತಿದ್ದಾನೆ. ಶಾಲೆಯ ಶಿಕ್ಷಣದ ಮಹತ್ವವನ್ನು ಆತ ಬಲ್ಲವನಾಗಿದ್ದರೂ ಪುಸ್ತಕದ ಜ್ಞಾನಕ್ಕಿಂತ ನಿರೀಕ್ಷಣೆ, ವ್ಯವಹಾರ ಮತ್ತು ಅನುಭವದಿಂದ ಹೆಚ್ಚು ಕಲಿತಿದ್ದಾನೆ’ ಎಂದಿದ್ದಾರೆ. ಮತ್ತು ಅವರ ಗತ್ತುಗಾರಿಕೆ ಹಾಗೂ ಚುರುಕುತನವನ್ನು ಕೊಂಡಾಡಿದ್ದಾರೆ. ಶಾಹೂ ಪಾಶ್ಚಾತ್ಯ ಶಿಕ್ಷಣದ ಜೊತೆಗೆ ಕುಸ್ತಿ, ಬೇಟೆ, ಕೋಣಗಳ ಓಟ, ಸಂಗೀತ, ನಾಟಕ, ಕ್ರೀಡೆ, ಕುದುರೆ ಸವಾರಿ, ಅಸ್ತ್ರ ವಿದ್ಯೆ, ಕೃಷಿ ಶಾಸ್ತ್ರ ಮುಂತಾಗಿ ಎಲ್ಲದರಲ್ಲೂ ಕುತೂಹಲ ತಳೆದಿದ್ದರು.

ಬಡವರ ಉದ್ಧಾರದ ಬಗ್ಗೆ ಹಲವು ಹತ್ತು ವಿಚಾರಗಳನ್ನು ತಲೆಯಲ್ಲಿ ತುಂಬಿಕೊಂಡು ತಿರುಗುತ್ತಿದ್ದರು. ಯುವಕ ಶಾಹೂ ಅಧಿಕಾರಕ್ಕೆ ಬಂದ ತರುವಾಯ ಮೊದಲು ಮಾಡಿದ ಕೆಲಸವೆಂದರೆ, ತನ್ನ ಸಹೋದರ ಮತ್ತು ಆಪ್ತರೊಂದಿಗೆ ಒಂದು ವರ್ಷ ಪರ್ಯಂತ ತನ್ನ ರಾಜ್ಯದ ಮೂಲೆ ಮೂಲೆಗೂ ಭೇಟಿ ನೀಡಿ ಜನತೆಯ ಕಷ್ಟಸುಖಗಳೇನೆಂಬುದನ್ನು ಅರ್ಥಮಾಡಿಕೊಂಡದ್ದು. ಅಭಿವೃದ್ಧಿ ಪಥದಲ್ಲಿ ಮೊದಲು ಕೃಷಿ, ಉದ್ಯಮ, ಕೈಕಸುಬು, ವಾಣಿಜ್ಯ ಇವುಗಳಿಗೆ ಆದ್ಯತೆ ಇರಬೇಕೆಂಬುದನ್ನು ಅವರು ಬಲ್ಲವರಾಗಿದ್ದರು. ರಾಜ್ಯವು ಸಾಮಾಜಿಕವಾಗಿ ಆರ್ಥಿಕವಾಗಿ ಮುಂದುವರಿಯಬೇಕಾದರೆ ಅಲ್ಲಿ ಉದ್ಯಮಗಳು ಬೆಳೆಯಬೇಕು ಎಂಬುದನ್ನು ಚೆನ್ನಾಗಿ ಮನಗಂಡಿದ್ದರು.
ಶಾಹು ಛತ್ರಪತಿಯವರ ಉದ್ಯಮಶೀಲತೆಗೆ ಒಂದು ಉದಾಹರಣೆ ಅವರು ಗಂಗಾರಾಮ್ ಕಾಂಬ್ಳೆ ಎಂಬ ಅಸ್ಪøಶ್ಯನು ತೆರೆದ ಹೋಟೆಲ್ ಉದ್ಯಮಕ್ಕೆ ನೀಡಿದ ಪ್ರೋತ್ಸಾಹ. ಗಂಗಾರಾಮ್ ಕಾಂಬ್ಳೆಯ ಹೋಟೆಲ್ ಶುಚಿ ಮತ್ತು ರುಚಿಗೆ ಪ್ರಸಿದ್ಧಿಯಾಗಿದ್ದು ಮಹಾರಾಜರು ದಿನಂಪ್ರತಿ ಬೆಳಿಗ್ಗೆ ವಿಹಾರಕ್ಕೆ ಹೋಗಿ ಬರುವಾಗ ಅಲ್ಲಿ ಚಹಾ ಸೇವಿಸಿ ಬರುತ್ತಿದ್ದುದರಿಂದ ಅವನು ಉದ್ಯಮದಲ್ಲಿ ಯಶಸ್ಸು ಪಡೆದನಲ್ಲದೆ, ಅಸ್ಪøಶ್ಯತೆಯ ನಿರ್ಮೂಲನಕ್ಕೂ ಕಾರಣವಾಯಿತು. ಹೀಗೆ ಶಾಹೂ ಮಹಾರಾಜರು ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವ ಚತುರಮತಿಗಳಾಗಿದ್ದರು.

ಶಾಹೂ ಮಹಾರಾಜರ ಪ್ರತ್ಯುತ್ಪನ್ನ ಮತಿ, ಪ್ರಗತಿಪರ ಬುದ್ಧಿ ಇನ್ನೂ ಎದ್ದು ಕಾಣುವುದು ರಾಜಪುರೋಹಿತರ ಕರ್ತವ್ಯಲೋಪ ಪ್ರಸಂಗದಲ್ಲಿ. ಒಮ್ಮೆ ಶಾಹೂ ಮತ್ತು ಅವರ ಬಂಧು ವರ್ಗದವರು ‘ಪಂಚಗಂಗಾ’ ನದಿಯಲ್ಲಿ ಕಾರ್ತೀಕ ಸ್ನಾನಕ್ಕೆಂದು ಹೋದಾಗ ರಾಜಪುರೋಹಿತ ನಾರಾಯಣ ಅಪ್ಪಾ ಸಾಹೇಬ್ ರಾಜೋಪಾಧ್ಯೆ ಎಂಬಾತ ವೇದೋಕ್ತ ಮಂತ್ರವನ್ನು ಹೇಳದೆ ಪುರೋಣೋಕ್ತ ಮಂತ್ರವನ್ನು ಪಠಿಸುತ್ತಾನೆ. ಏಕೆಂದು ಸಹ ಪುರೋಹಿತರು ವಿಚಾರಿಸಿದಾಗ ಮರಾಠರು ಶೂದ್ರರು ಆದ್ದರಿಂದ ವೇದೋಕ್ತ ಮಂತ್ರಕ್ಕೆ ಅನರ್ಹರು ಎಂದು ಬ್ರಾಹ್ಮಣ ಶ್ರೇಷ್ಠತೆಯನ್ನು ಮೆರೆಯುತ್ತಾನೆ. ಆ ಸಂದರ್ಭದಲ್ಲಿ ಶಾಹೂ ಮಹಾರಾಜರು ಕೊಂಚವೂ ತಾಳ್ಮೆಗೆಡದೆ, ಹಿಂದಿರುಗಿ ಬಂದು ಆ ರಾಜ ಪುರೋಹಿತನನ್ನು ಹುದ್ದೆಯಿಂದ ವಜಾ ಮಾಡಿ ಇನ್ನೊಬ್ಬನನ್ನು ನಿಯಮಿಸಿ ಆಜ್ಞೆ ಹೊರಡಿಸುತ್ತಾರೆ.
ಹೀಗೆ ಬ್ರಾಹ್ಮಣ ಶ್ರೇಷ್ಠತೆಯನ್ನು ಧಿಕ್ಕರಿಸಿ ನಿಂತ ಇತಿಹಾಸ ಪುರುಷ ಭಾರತ ಚರಿತ್ರೆಯಲ್ಲಿ ಇನ್ನೊಬ್ಬನಿಲ್ಲ ಎಂದರೆ ಆಶ್ಚರ್ಯ.

ಶಾಹೂ ಮಹಾರಾಜರ ಇಂಥ ಕೃತಿಶೀಲ ನಡಿಗೆಯು ಪುರಾಣ ಕಾಲದ ದುರ್ಯೋಧನನ ವರ್ತನೆಯನ್ನು ನೆನಪಿಗೆ ತರುತ್ತದೆ. ಕುಲ ಮೂಲಗಳ ವಿಳಾಸ ತಿಳಿಯದ ಕರ್ಣ ವ್ಯಾಯಾಮ ರಂಗದಲ್ಲಿ ಬ್ರಾಹ್ಮಣರಿಂದ ಅವಮಾನಕ್ಕೆ ಗುರಿಯಾದಾಗ ದುರ್ಯೋಧನ ಅವನನ್ನು ಅಂಗರಾಜ್ಯಕ್ಕೆ ಅಧಿಪತಿಯನ್ನಾಗಿ ಮಾಡಿ ಆ ಬ್ರಾಹ್ಮಣರಿಂದಲೇ ಪಟ್ಟಾಭಿಷೇಕದ ಮಂತ್ರ ಪಠಿಸುವಂತೆ ಏರ್ಪಡಿಸುತ್ತಾನೆ.
ಶಾಹೂ ಮಹಾರಾಜರು ತಮ್ಮ ಅಧಿಕಾರಾವಧಿಯಲ್ಲಿ ಸುಮಾರು 44 ಪ್ರಮುಖ ಜನಮುಖಿ ಕಾಯಿದೆಗಳನ್ನು ಜಾರಿಗೊಳಿಸಿದ್ದಾರೆ. ಅವುಗಳಲ್ಲಿ ಮುಖ್ಯವಾದುವು ಕೆಲವು : ಜಾನುವಾರು ಹರಾಜು ನಿಯಮ, ಬೇಟೆ ನಿಯಮ, ಗಿರಿಜನರ ಸಂರಕ್ಷಣಾ ನೀತಿ, ಹಿಂದುಳಿದ ವರ್ಗಕ್ಕೆ ಶೇ.50 ಭಾಗ ಮೀಸಲಾತಿ, ದುರ್ಬಲ ವರ್ಗದ ಮಕ್ಕಳಿಗೆ ಶಾಲಾ ಶುಲ್ಕ ರದ್ಧತಿ, ಹಳ್ಳಿಗೊಂದು ಶಾಲೆ, ದೇವಳದ ನಿಧಿ ಶೈಕ್ಷಣಿಕ ಪ್ರಸಾರಕ್ಕೆ ವಿನಿಯೋಗ, ವಿಧವಾ ವಿವಾಹ ಕಾನೂನು ಬದ್ಧ, ಜೀತಪದ್ಧತಿ ರದ್ಧತಿ, ಅಂತರ್ಜಾತಿ ಹಾಗೂ ಅಂರ್ಧರ್ಮ ವಿವಾಹಗಳಿಗೆ ಪ್ರೋತ್ಸಾಹ, ಆನುವಂಶಿಕ ಕುಲಕರ್ಣಿ ಹಾಗೂ ಜೋಯಿಷ ವತನ ಪದ್ಧತಿ ರದ್ಧತಿ, ದಲಿತರ ಪರಭಾರೆ ಜಮೀನು ಪುನಃ ಅವರಿಗೆ ನೊಂದಣಿ, ಕುಲಕರ್ಣಿ ಹುದ್ದೆಗೆ ಬದಲಾಗಿ ಸಂಬಳದ ‘ತಲಾಟಿ’ ಹುದ್ದೆ ಜಾರಿ, ಸರ್ಕಾರಿ ಹುದ್ದೆಯಲ್ಲಿ ದಲಿತರಿಗೆ ಆದ್ಯತೆ, ಅಸ್ಪøಶ್ಯತೆ ನಿಷೇಧ, ಬ್ರಾಹ್ಮಣೇತರ ಪೂಜಾರಿಗಳಿಗೆ ಅರಮನೆಗೆ ಪ್ರವೇಶ ಇತ್ಯಾದಿ.

ಈ ಪಟ್ಟಿಯನ್ನು ಗಮನಿಸಿದರೆ ನವಕರ್ನಾಟಕದ ಹರಿಕಾರನೆಂದು ಹೆಸರು ಮಾಡಿದ ಡಿ. ದೇವರಾಜು ಅರಸರ ಪ್ರಗತಿಪರ ಕಾನೂನುಗಳ ಜಾರಿ ಇದ್ದಂತೆ ಕಂಡು ಬರುತ್ತದೆ. ಹಾವನೂರು ಆಯೋಗದ ಅನ್ವಯ ಅರಸು 1970ರ ದಶಕದಲ್ಲಿ ಕರ್ನಾಟಕದಲ್ಲಿ ಇಂಥ ಸುಧಾರಣೆಗಳನ್ನು ತಂದು ದಲಿತರಲ್ಲಿ ಆತ್ಮವಿಶ್ವಾಸ ಹುಟ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೀಗೆ ಜಾತಿಭೇದ, ಸಾಮಾಜಿಕ ಅಸಮಾನತೆ, ಧಾರ್ಮಿಕ ಗುಲಾಮಗಿರಿ, ಮತಮೌಢ್ಯ ಮುಂತಾದ ಸಾಮಾಜಿಕ ಪಿಡುಗುಗಳನ್ನು ಬೇರು ಸಮೇತ ಕಿತ್ತೊಗೆಯಲು ಶಾಹೂ ಛತ್ರಪತಿಯವರು ಫಣ ತೊಟ್ಟು ಕಾರ್ಯರೂಪಕ್ಕೆ ತಂದುದು ತೀರ ಆಧುನಿಕವಾಗಿದೆ. ಸರ್ವರ ಸಬಲೀಕರಣಕ್ಕಾಗಿ ಮರೆವು ಆಲಸ್ಯಕ್ಕೆಡೆ ಇಲ್ಲದೆ ಇವರು ಶ್ರಮಿಸಿದರು. ಪ್ರತಿಯೊಂದು ಜಾತಿ ಜನಾಂಗಕ್ಕೂ ಒಂದೊಂದು ಹಾಸ್ಟಲ್ ತೆರೆದರು, ಪಾಶ್ಚಾತ್ಯ ವಿಜ್ಞಾನ ತಂತ್ರಜ್ಞಾನದೊಂದಿಗೆ ಭಾರತೀಯ ಕುಲ ಮೂಲದ ಪಾರಂಪರಿಕ ಸುಜ್ಞಾನವನ್ನೂ ಬೋಧಿಸುವಂತೆ ನೋಡಿಕೊಂಡರು. ಸಮಾಜಿಕ ಸುಧಾರಣೆಗೆ ಈ ಪೂರಕ ಜ್ಞಾನ ಅಗತ್ಯ ಎಂದು ಬಲ್ಲವರಾಗಿದ್ದರು. ದಲಿತೋದ್ಧಾರದ ಕಾಳಜಿ ಶಾಹು ಅವರಿಗೆ ಎಷ್ಟಿತ್ತೆಂಬುದರ ಬಗ್ಗೆ ಹೇಳಬೇಕೆಂದರೆ ಇವರು 1920 ಮಾರ್ಚ್ 22 ರಂದು ಡಾ. ಅಂಬೇಡ್ಕರ್ ಅವರನ್ನು ಕುರಿತು ಮಾಣಗಾಂವಿನ ಅಸ್ಪøಶ್ಯತಾದಿ ಜನತಾ ಪರಿಷತ್ತಿನಲ್ಲಿ ‘ಇವರೇ ನಿಮ್ಮ ಭಾವಿ ನಾಯಕರು’ ಎಂದು ಅವರತ್ತ ಬೊಟ್ಟು ಮಾಡಿದ್ದು. ಇದು ಬಹಿಷ್ಕøತ ಭಾರತದ ಉದ್ಧಾರ ಶಿಲ್ಪಿಯನ್ನು ಕುರಿತು ಆಡಿದ ದೂರದರ್ಶಿ ಮಾತಲ್ಲದೆ ಮತ್ತೇನು? ಮುಂದೆ ಅಂಬೇಡ್ಕರ್ ಅವರಿಂದಾಗಿಯೆ ನಮ್ಮ ಸಂವಿಧಾನದಲ್ಲಿ ಮೀಸಲಾತಿ ಶೋಷಿತರ ಹಕ್ಕಾಗಿ ಮಾರ್ಪಾಡಾಯಿತು.

ಶಾಹೂ ಅವರಿಗೆ ಆದರ್ಶವಾಗಿದ್ದ ದೂರದರ್ಶಿ ಚಿಂತಕ, ಸಾಮಾಜಿಕ ಕ್ರಾಂತಿಯ ಆದ್ಯ ಪ್ರವರ್ತಕ ಜ್ಯೋತಿಬಾ ಫುಲೆಯವರು 1890ರಲ್ಲಿ ತೀರಿಕೊಂಡರು. ಶಾಹೂ ಮತ್ತು ಫುಲೆ ಯಾವತ್ತೂ ಸಂಧಿಸಲಾಗಿರಲಿಲ್ಲ. ಆದರೆ ಆ ಮಹಾನ್ ಕ್ರಾಂತಿದರ್ಶಿಯ ಆದರ್ಶಗಳನ್ನು ಶಾಹೂ ತನ್ನ ರಾಜದಂಡವನ್ನು ಚಲಾಯಿಸುತ್ತ ಅನುಷ್ಠಾನದಲ್ಲಿ ತಂದರು. ಮೀಸಲಾತಿಯು ಶೋಷಿತ ಸಮುದಾಯಕ್ಕೆ ಭಿಕ್ಷೆಯಲ್ಲಿ ಅದು ಅವರ ಹಕ್ಕು ಎಂದು ಪ್ರತಿಪಾದಿಸಿದರು.

ಆದರೆ ಇಂದಿನ ನಗರಕೇಂದ್ರಿತ ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ದಲಿತ, ಗಿರಿಜನ, ಅರಣ್ಯವಾಸಿ ಬುಡಕಟ್ಟುಗಳನ್ನು ಅವರ ಪಾರಂಪರಿಕ ನೆಲೆಗಳಿಂದ ವಕ್ಕಲೆಬ್ಬಿಸಿ ಅಲೆಮಾರಿಗಳನ್ನಾಗಿ ಮಾಡುತ್ತಿವೆಯಷ್ಟೆ. ಆದರೆ ಶಾಹೂ ಮಹಾರಾಜರು ಅರಣ್ಯವಾಸಿ ಬುಡಕಟ್ಟು ಜನರಿಗೆ ವಸತಿ ಶಾಲೆಗಳನ್ನು ಈಗ್ಗೆ ಶತಮಾನದ ಹಿಂದೆಯೇ ತೆರೆದಿದ್ದರೆಂದರೆ ಯಾರಿಗಾದರೂ ಬೆರಗು ಬರುವುದು ಸರಿಯೇ. ಅಲ್ಲದೆ ‘ತಲಾಟಿ’ ತರಬೇತಿ ಶಾಲೆಗಳನ್ನು ತೆರೆದು ಬುಡಕಟ್ಟು ಜನರನ್ನು ಪುರ ಜನರತ್ತ ಕರೆದು ತಂದದ್ದೂ ಕೂಡ ಅವರ ಸುಧಾರಣೆಯ ಒಂದು ಭಾಗವಾಗಿತ್ತು. ‘ನನ್ನ ಅರಸೊತ್ತಿಗೆ ನಷ್ಟವಾದರೂ ಪರವಾಗಿಲ್ಲ. ನಾನು ಅಸ್ಪøಶ್ಯರಿಗೆ ಮಾಡಬೇಕಾದುದನ್ನೆಲ್ಲಾ ಅವಶ್ಯವಾಗಿ ಮಾಡುತ್ತೇನೆ’ ಎನ್ನುವುದು ಶಾಹೂ ಮಹಾರಾಜರ ದೃಢ ನಿಲುವಾಗಿತ್ತು. ಪುರಾಣ ಕಾಲದ ಜನಕನಂತೆ ಇವರು ರಾಜರ್ಷಿಯೇ ಸರಿ. ಶಾಹೂ ಅವರು 6 ಮೇ 1922 ರಂದು ನಿಧನ ಹೊಂದಿದರು. ಅವರು ಭಾರತೀಯ ರಾಜ ದಿಗಂತದಲ್ಲಿ ಬೆಳಗುವ ಒಂದು ನಕ್ಷತ್ರ.

One Response to "ಪ್ರಗತಿಪರ ಮಹಾರಾಜ ಶಾಹೂ ಛತ್ರಪತಿ"

  1. k.sateesh  December 22, 2015 at 11:13 pm

    Really good post

    Reply

Leave a Reply

Your email address will not be published.