ಪೊಲೀಸ್ ದೌರ್ಜನ್ಯ ಏಕೆ ಹೀಗೆ ?

-ನಾ . ದಿವಾಕರ

ಸೆಕ್ಯುಲರಿಸಂ ತತ್ವಗಳ ನಿಜವಾದ ಅರ್ಥವನ್ನು ಗ್ರಹಿಸದೆಯೇ ಸಾಂವಿಧಾನಿಕವಾಗಿ ಸೆಕ್ಯುಲರ್ ರಾಷ್ಟ್ರ ಎನಿಸಿಕೊಂಡಿರುವ ಹೆಗ್ಗಳಿಕೆ ಭಾರತಕ್ಕೆ ಸಲ್ಲುತ್ತದೆ. ಕಾಂಗ್ರೆಸ್ ಪಕ್ಷದ ಸೆಕ್ಯುಲರಿಸಂ ಮತಗಟ್ಟೆಗಳಲ್ಲಿ ಬಂಧಿತವಾಗಿದ್ದರೆ ಬಿಜೆಪಿಯ ಸೆಕ್ಯುಲರಿಸಂ ಹಿಂದುತ್ವದ ಕೋಟೆಯಲ್ಲಿ ಸುಭದ್ರವಾಗಿದೆ. ಈ ದೇಶದಲ್ಲಿ ಸೆಕ್ಯುಲರ್ ತತ್ಚಗಳನ್ನು ಅಕ್ಷರಶಃ ಪಾಲಿಸುವ ಆಡಳಿತ ವ್ಯವಸ್ಥೆಯ ಅಂಗ ಎಂದರೆ ಅದು ಪೊಲೀಸ್ ಮತ್ತು ಸೇನೆ ಮಾತ್ರವೇ. “ ಕಾನೂನು ಪಾಲನೆ ಮತ್ತು ಕಾನೂನು ಸುವ್ಯವಸ್ಥೆಯ ರಕ್ಷಣೆ ” ಇದು ಸಮಸ್ತ ಭಾರತೀಯ ಪ್ರಜೆಗಳೂ ಬಯಸುವ ಒಂದು ಸ್ಥಿತಿ. ಈ ಸುಸ್ಥಿತಿಯನ್ನು ಕಾಪಾಡುವ ಹೊಣೆಗಾರಿಕೆ ಹೊತ್ತಿರುವ ಪೊಲೀಸ್ ಇಲಾಖೆಗೆ ಜವಾಬ್ದಾರಿಗಳಿವೆ, ಹೊಣೆಗಾರಿಕೆ ಇದೆ, ಕರ್ತವ್ಯ ಪ್ರಜ್ಞೆ ಇರುತ್ತದೆ, “ ಜನಸಾಮಾನ್ಯರ ರಕ್ಷಣೆ ” ಯ ಪ್ರಭುತ್ವ ಪ್ರೇರಿತ ಕಾಳಜಿಯೂ ಇರುತ್ತದೆ . ಆದರೆ ಉತ್ತರದಾಯಿತ್ವ ಇರುವುದಿಲ್ಲ. ಭಾರತದ ಪ್ರಜಾತಂತ್ರ ವ್ಯವಸ್ಥೆಯ ನಿಘಂಟಿನಲ್ಲಿ “ಉತ್ತರದಾಯಿತ್ವ ” ಎಂಬ ಪದಕ್ಕೆ ಸ್ಥಾನವೇ ಇಲ್ಲ. ಅದೇನಿದ್ದರೂ ದುಡಿಯುವ ವರ್ಗಗಳಿಗೆ ಮಾತ್ರ ಮೀಸಲಾಗಿರುವ ಒಂದು ಪ್ರಜ್ಞಾಪೂರ್ವಕ ವಿಧಿ. ಹಾಗಾಗಿ ಪ್ರತಿರೋಧದ ದನಿಗಳನ್ನು ಪ್ರಜಾವಿರೋಧಿ ಎಂದು ವ್ಯಾಖ್ಯಾನಿಸುವ ಪ್ರಭುತ್ವ ತನ್ನದೇ ಆದ ಪರಿಕಲ್ಪನೆಯ “ ಪ್ರಜೆಗಳನ್ನು” ರಕ್ಷಿಸಲು ಉತ್ತರದಾಯಿತ್ವ ಇಲ್ಲದ ಕರ್ತವ್ಯಪಾಲಕರ ಮೂಲಕ ಪ್ರಯತ್ನಿಸುತ್ತದೆ.

navalgund2_2951354gಈ ಪ್ರಯತ್ನದಲ್ಲಿ ಆಳ್ವಿಕರ ಆಜ್ಞಾಪಾಲಕರಾಗಿ ಸೆಕ್ಯುಲರ್ ಪೊಲೀಸರು ತಮ್ಮ ಕರ್ತವ್ಯ ಪ್ರಜ್ಞೆ ಮೆರೆಯುತ್ತಾರೆ. ಹಾಗಾಗಿ ತಮ್ಮಿಂದ ನಿಯಂತ್ರಣಕ್ಕೊಳಗಾಗಬೇಕಾದ ಜನರ ಜಾತಿ,ಧರ್ಮ, ಭಾಷೆಯ ಅಸ್ಮಿತೆಗಳನ್ನು ಲೆಕ್ಕಿಸದೆ ಪೊಲೀಸರು ಲಾಠಿ ಬೀಸುತ್ತಾರೆ, ಅಶ್ರುವಾಯು ಪ್ರಯೋಗಿಸುತ್ತಾರೆ, ಗುಂಡು ಹಾರಿಸುತ್ತಾರೆ. ದೌರ್ಜನ್ಯ ನಡೆಸುತ್ತಾರೆ. ತಮ್ಮ ಒಡೆಯರ (ಕ್ಷಮಿಸಿ: ಆಧುನಿಕ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತಾರೂಢ ಪಕ್ಷವನ್ನು ಬಹುಶಃ ಪೊಲೀಸರು ಒಡೆಯರು ಎಂದೇ ಭಾವಿಸುತ್ತಾರೆ ಎನ್ನವುದು ಸಾಕ್ಷ್ಯಾಧಾರ ಸಮೇತ ಸಾಬೀತಾಗಿದೆ) ಅಣತಿಯಂತೆ ತಮ್ಮ ಬಲ ಪ್ರಯೋಗ ಮಾಡುತ್ತಾರೆ.

ಬಹುತೇಕ ಸಂದರ್ಭಗಳಲ್ಲಿ ಪೊಲೀಸರು ಕಾನೂನು ಪಾಲಕರಾಗಿರುವುದಕ್ಕಿಂತಲೂ ಆಜ್ಞಾಪಾಲಕರಾಗಿರುವುದೇ ಹೆಚ್ಚು. ಹಾಗಾಗಿ ಸರ್ಕಾರದ ವಿರುದ್ಧ, ಆಳುವ ವರ್ಗಗಳ ವಿರುದ್ಧ, ಪ್ರಭುತ್ವದ ವಿರುದ್ಧ ಹಾಗೂ ಪ್ರಭುತ್ವದ ಕೃಪಾಕಟಾಕ್ಷ ಹೊಂದಿರುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಯಾವುದೇ ಪ್ರತಿರೋಧ ವ್ಯಕ್ತವಾದರೂ ಪೊಲೀಸರ ರುದ್ರ ತಾಂಡವ ಸಹಜವಾಗಿ ಅನಾವರಣಗೊಳ್ಳುತ್ತದೆ. ಯಮನೂರು ಗ್ರಾಮದಲ್ಲಿ ಪೊಲೀಸರ ದೌರ್ಜನ್ಯವನ್ನು ಉಗ್ರವಾಗಿ ಖಂಡಿಸುವ ಮೂಲಕ ತಮ್ಮ ಪ್ರಜಾತಂತ್ರ ಪ್ರಜ್ಞೆಯನ್ನು ಬಿಂಬಿಸುವ ವಿರೋಧ ಪಕ್ಷದ ನಾಯಕರು, ವಿಶೇಷವಾಗಿ ಕುಮಾರಸ್ವಾಮಿ, ದೇವೇಗೌಡ ಇತ್ಯಾದಿ, ಬಾಗೂರು ನವಿಲೆ ರೈತರ ಹೋರಾಟದ ಸಂದರ್ಭದಲ್ಲಿ ದೇವೇಗೌಡರ ಆಡಳಿತದಲ್ಲಿ ನಡೆದ ಪೊಲೀಸ್ ದೌರ್ಜನ್ಯಗಳನ್ನು ಮರೆತುಬಿಡುತ್ತಾರೆ. ಅಲ್ಲಿ ಇನ್ನೂ ಬರ್ಬರ ಹಲ್ಲೆ ನಡೆದಿತ್ತು. ಈಗ ಅದು ಇತಿಹಾಸ. ಬಾಗೂರು ನವಿಲೆ ಕಾಲುವೆಯಲ್ಲಿ ಹರಿಯುವ ನೀರಿಗಿಂತಲೂ ಹೆಚ್ಚಿನ ಪ್ರಮಾಣದ ಶ್ರಮಿಕರ ಬೆವರು, ನೆತ್ತರು ಸುತ್ತಲೂ ಹರಿದಿದೆ. ಆದರೆ ಇತಿಹಾಸದ ಪುಟಗಳಲ್ಲಿ ಭೂಗತವಾಗಿದೆ.

ಒಂದು ಪ್ರಜ್ಞಾವಂತ ಸಮಾಜ ಯೋಚಿಸಬೇಕಿರುವುದು ಪೊಲೀಸರ ದೌರ್ಜನ್ಯ ಮತ್ತು ಬಲಪ್ರಯೋಗದ ಪ್ರಸಂಗಗಳನ್ನಲ್ಲ. ತಮ್ಮ ಕರ್ತವ್ಯ ಪ್ರಜ್ಞೆಯನ್ನು ಪಾಲಿಸುವ ಪೊಲೀಸರು ಅನೇಕ ಸಂದರ್ಭಗಳಲ್ಲಿ ಜನಸಾಮಾನ್ಯರೊಡನೆ ಮಾನವೀಯತೆಯಿಂದ ನಡೆದುಕೊಂಡಿರುವ ಸಂದರ್ಭಗಳು ಹೇರಳವಾಗಿವೆ. ಸಮವಸ್ತ್ರದೊಳಗಿನ ಪೊಲೀಸ್ ವ್ಯಕ್ತಿತ್ವ ಭಿನ್ನವಾಗಿರಲು ಕಾರಣ ಅವರ ಕರ್ತವ್ಯಪ್ರಜ್ಞೆಯೇ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ವಾಸ್ತವ. ಭಾರತದಲ್ಲಿ ಪೊಲೀಸ್ ವ್ಯವಸ್ಥೆಗೆ ಒಂದು ನಿರ್ದಿಷ್ಟ ಸಂಹಿತೆಯಿಲ್ಲ. ಕಾನೂನು ಪಾಲನೆ, ಸಂವಿಧಾನದ ರಕ್ಷಣೆ ಮತ್ತು ಜನಸಾಮಾನ್ಯರ ಸಂರಕ್ಷಣೆಯೇ ಪೊಲೀಸ್ ವ್ಯವಸ್ಥೆಯ ಪ್ರಧಾನ ಧ್ಯೇಯವಾಗಿರುವುದೇ ಆದಲ್ಲಿ ಆಡಳಿತಾರೂಢ ಪಕ್ಷಗಳ ಆರೋಪಿಗಳ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಅಧಿಕಾರ ಪೊಲೀಸ್ ಇಲಾಖೆಗೆ ಇರಬೇಕಲ್ಲವೇ ? ತಮ್ಮ ಠಾಣಾ ವಲಯದಲ್ಲಿ ಯಾವುದೇ ವಿಐಪಿ ರಾಜಕಾರಣಿ ಪ್ರವೇಶಿಸಲಿ ತನ್ನ ಸಾರ್ವಜನಿಕ ಕರ್ತವ್ಯವನ್ನು ನಿಭಾಯಿಸುವ ಸ್ವಾತಂತ್ರ್ಯ ಇರಬೇಕಲ್ಲವೇ ? ಆದರೆ ಹಾಗಾಗುವುದಿಲ್ಲ. ಕಾನೂನು ಭಂಜಕರನ್ನು ನಿರ್ದಾಕ್ಷಿಣ್ಯವಾಗಿ ಕಾನೂನಿನ ಚೌಕಟ್ಟಿನಲ್ಲೇ ಬಂಧಿಸುವ ಆಯ್ಕೆ ಸ್ವಾತಂತ್ರ್ಯವೇ ಪೊಲೀಸ್ ಇಲಾಖೆಗೆ ಇರುವುದಿಲ್ಲ.

ಬಾಗೂರು ನವಿಲೆ ಹೋರಾಟದಲ್ಲಿ, ನರಗುಂದ ಬಂಡಾಯದಲ್ಲಿ, ಖೈರ್ಲಾಂಜಿಯಲ್ಲಿ,, ಕಂಬಾಲಪಲ್ಲಿಯಲ್ಲಿ, ಸಿಖ್ ವಿರೋಧಿ ದಂಗೆಯಲ್ಲಿ, ಅಯೋಧ್ಯಾ ಕಾಂಡದಲ್ಲಿ, ಸೋಮನಾಥ ರಥಯಾತ್ರೆಯ ಮಾರ್ಗದಲ್ಲಿ, ಗೋದ್ರಾ ನಂತರದ ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ, ಮುಝಫರ್‍ಪುರದಲ್ಲಿ ( ಇದು ಮುಗಿಯದ ಪಟ್ಟಿ) ಇಂತಹ ನಿದರ್ಶನಗಳನ್ನು ನೋಡಿದ್ದೇವೆ. ಈ ಎಲ್ಲಾ ಘಟನೆಗಳಲ್ಲೂ ಪೊಲೀಸರು ದೌರ್ಜನ್ಯದ ಪರಾಕಾಷ್ಠೆ ಪ್ರದರ್ಶಿಸಿದ್ದಾರೆ. ಅಮಾನವೀಯತೆಯ ಶಿಖರ ತಲುಪಿದ್ದಾರೆ. ಹಾಗೆಯೇ ಸ್ವಾಮಿ ನಿಷ್ಠೆಯ ಪರಾಕಾಷ್ಠೆಯನ್ನೂ ಪ್ರದರ್ಶಿಸಿದ್ದಾರೆ.
ಈ “ ಸ್ವಾಮಿ ” ಎಂದರೆ ಯಾರು ಎಂಬ ಪ್ರಶ್ನೆ ಇಂದು ಹೆಚ್ಚು ಪ್ರಸ್ತುತ ಎನಿಸುತ್ತದೆ. ಭಾರತದ ಸಂವಿಧಾನ ಮತ್ತು ಕಾನೂನು ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗಿದೆ. ಆದರೆ ನಾಗರಿಕ ಹಕ್ಕುಗಳ ರಕ್ಷಣೆಗೆ ಬೇಕಿರುವುದು ಆಳುವ ವರ್ಗಗಳ ಇಚ್ಚಾಶಕ್ತಿ ಮತ್ತು ಕಾನೂನು ಪಾಲಕರ ಸಂವಿಧಾನ ಪ್ರಜ್ಞೆ. ದುರಂತ ಎಂದರೆ ಭಾರತದ ಆಡಳಿತ ವ್ಯವಸ್ಥೆಯ ಯಾವುದೇ ಕ್ಷೇತ್ರದಲ್ಲಿ ಸಂವಿಧಾನ ಪ್ರಜ್ಞೆಗಿಂತಲೂ ಹೆಚ್ಚಾಗಿ “ ಸ್ವಾಮಿ ನಿಷ್ಠೆ ” ಪ್ರಧಾನವಾಗಿರುತ್ತದೆ. ಇದಕ್ಕೆ ಪೊಲೀಸ್ ಇಲಾಖೆಯೂ ಹೊರತಲ್ಲ.

ಬಹುಶಃ ಪೊಲೀಸ್ ತರಬೇತಿಯ ಸ್ವರೂಪದಲ್ಲೇ ಲೋಪ ಇರಬಹುದೆನಿಸುತ್ತದೆ. ನಿತ್ಯ ಕವಾಯತುಗಳಲ್ಲಿ ಮಿಲಿಟರಿ ಶಿಸ್ತನ್ನು ಭೋಧಿಸಲಾಗುತ್ತದೆ. ಪ್ರಭುತ್ವದ ಚೌಕಟ್ಟಿನಲ್ಲಿ ಸಾರ್ವಜನಿಕರನ್ನು ಹೇಗೆ ಹದ್ದುಬಸ್ತಿನಲ್ಲಿರಿಸಬೇಕೆಂದು ಭೋಧಿಸಲಾಗುತ್ತದೆ. ಕಾನೂನು ಭಂಜಕರನ್ನು ಹೇಗೆ ನಿಯಂತ್ರಿಸಬೇಕೆಂದು ಭೋಧಿಸಲಾಗುತ್ತದೆ ಆದರೆ ಸಂವೇದನಾಶೀಲರಾಗಿ, ತಾಳ್ಮೆ, ಸಹನೆ, ಸಂಯಮದಿಂದ ನಾಗರಿಕ ಸಮಾಜದ ಆಗುಹೋಗುಗಳನ್ನು ಗ್ರಹಿಸುವ ಸೂಕ್ಷ್ಮತೆಗಳನ್ನು ಬಹುಶಃ ಭೋಧಿಸಲಾಗುವುದಿಲ್ಲ. ನಿಜ, ಕೆಲವು ಹೋರಾಟಗಳಲ್ಲಿ ಆಕ್ರೋಶಭರಿತ ಜನರು ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡು ಹಿಂಸಾತ್ಮಕ ಮಾರ್ಗ ಅನುಸರಿಸುತ್ತಾರೆ. ಆದರೆ ಇಂತಹ ಸಂದರ್ಭಗಳಲ್ಲಿ ಜನಸಾಮಾನ್ಯರ ಆಕ್ರೋಶಗಳ ಕಾರಣಗಳನ್ನು ಅರಿತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹೊಣೆಗಾರಿಕೆ ಪೊಲೀಸರ ಮೇಲಿರುತ್ತದೆ. ಲಾಠಿ ಬೀಸುವ ಮೂಲಕವೇ, ಕಂಡಕಂಡವರನ್ನು ಹಿಗ್ಗಾಮುಗ್ಗ ಥಳಿಸುವುದರಿಂದಲೇ ಸಮೂಹ ಸನ್ನಿಯನ್ನು ನಿಯಂತ್ರಿಸಬೇಕಿಲ್ಲ. ಈ ಸೂಕ್ಷ್ಮ ತಂತ್ರಗಾರಿಕೆಯನ್ನು ಪೊಲೀಸ್ ಸಿಬ್ಬಂದಿಗೆ ಕಲಿಸುವುದು ಪ್ರಭುತ್ವದ ಕರ್ತವ್ಯ ಅಲ್ಲವೇ ?

ರಾಜಕೀಯ ಆಯಾಮದಿಂದ ನೋಡಿದಾಗ ಪೊಲೀಸ್ ಸಿಬ್ಬಂದಿ ಯಾವುದೇ ಸಂದರ್ಭದಲ್ಲೂ ನಿಷ್ಪಕ್ಷಪಾತಿಯಾಗಿ ನಡೆದುಕೊಂಡಿರುವುದನ್ನು ಕಾಣಲಾಗುವುದಿಲ್ಲ. ತಮ್ಮ ವ್ಯಕ್ತಿಗತ ರಾಜಕೀಯ-ಸೈದ್ಧಾಂತಿಕ ನಿಲುವುಗಳಿಗೆ ಬದ್ಧರಾಗುವ ಪೊಲೀಸರು ಸಂವಿಧಾನ ಬದ್ಧತೆಯನ್ನು ಮರೆತು ವರ್ತಿಸುವುದನ್ನು ಹಲವಾರು ಸಂದರ್ಭಗಳಲ್ಲಿ ಕಂಡಿದ್ದೇವೆ. ಕರ್ನಾಟಕದಲ್ಲಿ ನಡೆದ ಕ್ರೈಸ್ತರ ಮೇಲಿನ ಹಲ್ಲೆಗಳು , ಗುಜರಾತ್ ಹತ್ಯಾಕಾಂಡ ಮುಂತಾದ ಘಟನೆಗಳು ನಿದರ್ಶನವಷ್ಟೆ. ಇಲ್ಲಿ ಕಾರ್ಯಾಚರಣೆ ನಡೆಸುವ ಪೊಲೀಸರಿಗಿಂತಲೂ ಮೇಲಧಿಕಾರಿಗಳ ಪೂರ್ವಗ್ರಹಗಳು ಸಕ್ರಿಯವಾಗಿರುತ್ತವೆ. ತಮ್ಮ ರಾಜಕೀಯ ನಾಯಕರಿಗೆ ನಿಷ್ಠೆ ತೋರುವ ಹಂಬಲ, ಅಧಿಕಾರದ ಹಪಾಹಪಿ ಮತ್ತು ಸೇವಾ ಪ್ರಗತಿಯ ಆಕಾಂಕ್ಷೆ ಇವೆಲ್ಲವೂ ಪ್ರಧಾನವಾಗುತ್ತದೆ. ಈ ವಿದ್ಯಮಾನಕ್ಕೆ ಪೊಲೀಸ್ ಇಲಾಖೆಯೊಂದನ್ನೇ ದೋಷಿಯನ್ನಾಗಿ ನಿಲ್ಲಿಸುವುದು ಅಪಚಾರವಾಗುತ್ತದೆ. ಇದು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಸಾಂಸ್ಥಿಕ ಪಿಡುಗು. ಕಾನೂನು ಪಾಲನೆ ಎಂದರೆ “ ದಂಡಂ ದಶಗುಣಂ ” ಎಂದೇ ಪರಿಭಾವಿಸುವ ಈ ಆಡಳಿತ ವ್ವವಸ್ಥೆಯಲ್ಲೇ ಪ್ರಜಾತಂತ್ರದ ಬೇರುಗಳು ಕಾಣುತ್ತಿಲ್ಲ. ಹಾಗಾಗಿಯೇ ಉದ್ಯೋಗಕ್ಕಾಗಿ ಹೋರಾಡುವ ಯುವಕರು, ಆಹಾರಕ್ಕಾಗಿ ಹೋರಾಡುವ ಬಡಜನರು, ಕೂಲಿಗಾಗಿ ಬೀದಿಗಿಳಿಯುವ ಶ್ರಮಿಕರು, ಬದುಕಿಗಾಗಿ ಹೋರಾಡುವ ರೈತರು, ತಮ್ಮ ಉಳಿವಿಗಾಗಿ ಹೋರಾಡುವ ಆದಿವಾಸಿಗಳು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗುತ್ತದೆ.

ಈ ಹೋರಾಟಗಾರರು ಆಡಳಿತ ವ್ಯವಸ್ಥೆಯ ದೃಷ್ಟಿಯಲ್ಲಿ, ಪ್ರಭುತ್ವದ ದೃಷ್ಟಿಯಲ್ಲಿ ತಮ್ಮ ಹಕ್ಕು ಪ್ರತಿಪಾದಿಸುವ , ನ್ಯಾಯಕ್ಕಾಗಿ ಹೋರಾಡುವ ನಾಗರಿಕ ಪ್ರಜೆಗಳಾಗಿ ಕಾಣುವುದಿಲ್ಲ. ಬದಲಾಗಿ ಪ್ರಭುತ್ವದ ಮತ್ತು ಆಡಳಿತ ವ್ಯವಸ್ಥೆಯ ಸುಭದ್ರ ಬುನಾದಿಯನ್ನು ಅಲುಗಾಡಿಸುವ ವಿಚ್ಚಿದ್ರಕಾರಕ ಶಕ್ತಿಗಳಾಗಿ ಕಾಣುತ್ತಾರೆ. ಹಾಗಾಗಿ ಪ್ರತಿರೋಧದ ದನಿಗಳು ಕಾನೂನು ಭಂಜಕವಾಗಿ ಕಾಣುತ್ತವೆ. ಈ ದನಿಗಳು ಪ್ರಬಲವಾದಂತೆಲ್ಲಾ ಕಾನೂನು ಪಾಲಕರ ಪ್ರಹಾರ ತೀವ್ರವಾಗುತ್ತಾ ಹೋಗುತ್ತದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿರುವ ಊಳಿಗಮಾನ್ಯ ಧೋರಣೆ ಮತ್ತು ರಾಜಪ್ರಭುತ್ವದ ಲಕ್ಷಣಗಳು ಈ ಸಮಸ್ಯೆಗೆ ಕಾರಣ ಎಂದು ಹೇಳಬಹುದು. ಹಾಗಾಗಿಯೇ ಜನಸಾಮಾನ್ಯರ ಅಭ್ಯುದಯಕ್ಕಾಗಿ ರೂಪಿಸಲಾಗಿರುವ ಸಾಂವಿಧಾನಿಕ ನಿಯಮಗಳೂ ಸಹ ಆಡಳಿತ ವ್ಯವಸ್ಥೆಯ ಭದ್ರಕೋಟೆಗಳನ್ನು ರಕ್ಷಿಸುವ ಫಿರಂಗಿಗಳಾಗಿ ಬಿಡುತ್ತವೆ. ಪೊಲೀಸರು ಈ ಫಿರಂಗಿಗಳ ಸಾರಥಿಗಳಾಗಿಬಿಡುತ್ತಾರೆ. ಯಮನೂರು ಒಂದು ನಿದರ್ಶನವಷ್ಟೆ.

Leave a Reply

Your email address will not be published.