ಪೂನಾ ಒಪ್ಪಂದ : ದಲಿತರು ಕಳೆದುಕೊಂಡಿದ್ದೇನು? ಪಡೆದುಕೊಂಡಿದ್ದೇನು?

ಪ್ರೊ. ಎಂ. ನಾರಾಯಣಸ್ವಾಮಿ

ಇದೇ ಸೆಪ್ಟೆಂಬರ್ 24 ಕ್ಕೆ ಪೂನಾ ಒಪ್ಪಂದವಾಗಿ 85 ವರ್ಷಗಳಾಗುತ್ತಿವೆ. ದುಂಡು ಮೇಜಿನ ಪರಿಷತ್ತಿನ ಚರ್ಚೆಯ ಫಲಿತಾಂಶವಾಗಿ ಡಾ. ಅಂಬೇಡ್ಕರರು ಬ್ರಿಟಿಷರಿಂದ ದಲಿತರಿಗಾಗಿ ಪ್ರತ್ಯೇಕ ಮತಕ್ಷೇತ್ರಗಳನ್ನು ಪಡೆದುಕೊಂಡಿದ್ದರು. ಆದರೆ, ಗಾಂಧಿಯವರ ವಿರೋಧದಿಂದಾಗಿ ಅವನ್ನು ಪೂನಾ ಒಪ್ಪಂದದಲ್ಲಿ ಕಳೆದುಕೊಂಡು, ಜಂಟಿ ಮೀಸಲು ಕ್ಷೇತ್ರಗಳನ್ನು ಪಡೆದುಕೊಳ್ಳಬೇಕಾಯಿತು.

ಭಾರತ ಸರ್ಕಾರದ ಕಾಯಿದೆ 1919 ರಂತೆ 10 ವರ್ಷಗಳಾದ ನಂತರ ದೇಶಕ್ಕೆ ಸ್ವಾತಂತ್ರ್ಯ ಕೊಡುವ ನಿಟ್ಟಿನಲ್ಲಿ ವಿಧಿವಿಧಾನಗಳನ್ನು ಪೂರೈಸಲು ಒಂದು ಆಯೋಗವನ್ನು ರಚಿಸಬೇಕೆಂದು ತೀರ್ಮಾನಿಸಲಾಗಿತ್ತು. ಅದರಂತೆ, 1928 ರಲ್ಲಿ ಸರ್ ಜಾನ್ ಸೈಮನ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಂಸದೀಯ ಆಯೋಗವನ್ನು ರಚಿಸಲಾಯಿತು. ಸೈಮನ್ ಆಯೋಗದಲ್ಲಿ ಭಾರತೀಯರಾರೂ ಇರಲಿಲ್ಲ. ಕಾಂಗ್ರೆಸ್ ಇದನ್ನು ಪ್ರತಿಭಟಿಸಿತು. ಪ್ರತಿಭಟನೆಗೆ ಉತ್ತರವಾಗಿ ಬ್ರಿಟಿಷ್ ಸರಕಾರವು ಆಯೋಗದ ಕೆಲಸವಾದ ಮೇಲೆ ರಾಜ್ಯಾಂಗ ರಚನೆಗೆ ಪೂರಕವಾಗಿ ಭಾರತೀಯ ಪ್ರತಿನಿಧಿಗಳ ಜೊತೆ ಚರ್ಚಿಸಲಾಗುವುದು ಎಂಬ ವಾಗ್ದಾನ ಕೊಟ್ಟಿತು. ಅದಕ್ಕಾಗಿ 1930 ರಿಂದ 32 ರವರೆಗೆ ಲಂಡನ್ನಿನಲ್ಲಿ ಮೂರು ದುಂಡುಮೇಜಿನ ಸಭೆಗಳು ನಡೆದವು.
ಪ್ರಥಮ ದುಂಡು ಮೇಜಿನ ಸಭೆಯು ನವೆಂಬರ್ 12, 1930ರಂದು ಪ್ರಾರಂಭವಾಯಿತು. ದೊರೆ ಐದನೆಯ ಜಾರ್ಜ್ ಸಭೆಯನ್ನು ಉದ್ಘಾಟಿಸಿದರು. ಭಾರತದಿಂದ ಅಸ್ಪೃಶ್ಯರ ಪ್ರತಿನಿಧಿಗಳಾಗಿ ಡಾ. ಬಿ. ಆರ್. ಅಂಬೇಡ್ಕರ್ ಮತ್ತು ದಿವಾನ್ ಬಹಾದ್ದೂರ್ ಆರ್. ಶ್ರೀನಿವಾಸನ್ (1860-1945) ರವರು ಭಾಗವಹಿಸಿದ್ದರು. ಶ್ರೀನಿವಾಸನ್ ಅವರು ತಮಿಳುನಾಡಿನವರು. ಪರೈಯನ್ ಜಾತಿಯವರು.
ದುಂಡುಮೇಜಿನ ಸಭೆಯಲ್ಲಿ ಅಸ್ಪೃಶ್ಯರ ಬೇಡಿಕೆ ದುಂಡುಮೇಜಿನ ಪರಿಷತ್ತಿನಲ್ಲಿ ಒಟ್ಟು 11 ಸಮಿತಿಗಳಿದ್ದವು. ಅದರಲ್ಲಿ ಅಲ್ಪಸಂಖ್ಯಾತರ ಸಮಿತಿಯೂ ಒಂದು. ಡಾ. ಅಂಬೇಡ್ಕರ್ ಮತ್ತು ಶ್ರೀನಿವಾಸನ್ ಅವರು ಅಲ್ಪಸಂಖ್ಯಾತರ ಸಮಿತಿಗೆ ಒಂದು ಮನವಿಯನ್ನು ಕೊಟ್ಟರು. ಸ್ವತಂತ್ರ್ಯ ಭಾರತದ ರಾಜ್ಯಾಂಗದಲ್ಲಿ ದಲಿತರ ರಾಜಕೀಯ ಹಕ್ಕುಗಳನ್ನು ಪಡೆಯಲು ದಲಿತರಿಗೆ ಪ್ರತ್ಯೇಕ ಚುನಾವಣಾ ವ್ಯವಸ್ಥೆಯನ್ನು ಕಲ್ಪಿಸಲು ಕೋರಲಾಗಿತ್ತು. ಅದಾಗಲೇ, ಮುಸ್ಲಿಂ, ಸಿಖ್ ಮತ್ತು ಆಂಗ್ಲೋ ಇಂಡಿಯನ್ನರಿಗೆ ರಾಜಕೀಯವಾಗಿ ಪ್ರಾಂತೀಯ ಶಾಸನ ಸಭೆಗಳಲ್ಲಿ ಪ್ರಾತಿನಿಧ್ಯ ಕಲ್ಪಿಸಲಾಗಿತ್ತು. ದಲಿತರಿಗೂ ಬಂಗಾಳ ಪ್ರಾಂತ್ಯ, ಕೇಂದ್ರೀಯ ಪ್ರಾಂತ್ಯಗಳು, ಅಸ್ಸಾಂ, ಬಿಹಾರ್ ಮತ್ತು ಒರಿಸ್ಸಾ, ಪಂಜಾಬ್ ಮತ್ತು ಸಂಯುಕ್ತ ಪ್ರಾಂತ್ಯಗಳು, ಮುಂಬೈ ಪ್ರಾಂತ್ಯಗಳಲ್ಲಿ ಸೂಕ್ತ ಪ್ರಾತಿನಿಧ್ಯ ಹಾಗೂ ಮದ್ರಾಸ್ ಪ್ರಾಂತ್ಯದಲ್ಲಿ ಶೇ. 20 ರಷ್ಟು ಪ್ರಾತಿನಿಧ್ಯಕ್ಕಾಗಿ ಬೇಡಿಕೆ ಇಡಲಾಯಿತು.

 

ಅಸ್ಪೃಶ್ಯರ ಸ್ಥಿತಿಗತಿಗಳನ್ನು ಸುಧಾರಿಸಲು ಇಂತಹ ಪ್ರಾತಿನಿಧ್ಯದ ಅಗತ್ಯತೆಯಿದೆಯೆಂದು ಡಾ. ಅಂಬೇಡ್ಕರರು ವಾದಿಸಿದರು. ದಲಿತರು ಗುಲಾಮತನದಲ್ಲಿದ್ದಾರೆ. ಅಸ್ಪೃಶ್ಯತೆಯನ್ನು ಆಚರಿಸಲಾಗುತ್ತಿದೆ. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುತ್ತಿದ್ದಾರೆ. ಆರ್ಥಿಕವಾಗಿ ಹೀನಸ್ಥಿತಿಯಲ್ಲಿದ್ದಾರೆ, ಭೂರಹಿತರಾಗಿದ್ದಾರೆ. ದಲಿತರ ಮೇಲಿನ ದಬ್ಬಾಳಿಕೆ, ದೌರ್ಜನ್ಯಗಳು ಭೀಕರವಾಗಿವೆ. ದಲಿತರಿಗೆ ನ್ಯಾಯಾಲಯಗಳಲ್ಲಿ ನಿಷ್ಪಕ್ಷಪಾತ ನ್ಯಾಯ ದೊರಕುತ್ತಿಲ್ಲ. ನ್ಯಾಯಾಧೀಶರು ತಮ್ಮ ಜನಾಂಗದವರೇ ಆದ ಭೂಮಾಲೀಕ ಸಿರಿವಂತರೊಂದಿಗೆ ಸೇರಿಕೊಂಡು ಭ್ರಷ್ಟರಾಗುತ್ತಿದ್ದಾರೆ. ದಲಿತರಿಗೆ ಸಮಾನ ಪೌರತ್ವ ಬೇಕು, ತಾರತಮ್ಯದ ವಿರುದ್ಧ ರಕ್ಷಣೆ ಬೇಕು, ಬಹಿಷ್ಕಾರ ಹಾಕುವವರಿಗೆ – ಬೆದರಿಸುವವರಿಗೆ ಶಿಕ್ಷೆಯಾಗಬೇಕು. ಇದಕ್ಕಾಗಿ ಶಾಸನ ಸಭೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಬೇಕು. ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಮೇಲ್ಜಾತಿ ಅಧಿಕಾರಿಗಳು ಕಾನೂನನ್ನು ತಿರುಚಿ ದಲಿತರಿಗೆ ಕಿರುಕುಳ ನೀಡುತ್ತಿದ್ದಾರೆ. ಹಿಂದೂಗಳ ಏಕಸ್ವಾಮ್ಯವನ್ನು ನಾಶ ಮಾಡಿ ಎಲ್ಲಾ ಜನಾಂಗಗಳಿಗೂ ಸೂಕ್ತ ಪ್ರಾತಿನಿಧ್ಯ ಕೊಡುವಂತಹ ನೇಮಕಾತಿ ವಿಧಾನವನ್ನು ಜಾರಿಗೆ ತರಬೇಕು. ದಲಿತರಿಗಾಗಿ ಪ್ರತ್ಯೇಕ ಸಚಿವಾಲಯ ಬೇಕು. ಬಾಬಾಸಾಹೇಬ್ ಡಾ. ಅಂಬೇಡ್ಕರರು ದುಂಡುಮೇಜಿನ ಪರಿಷತ್ತಿನಲ್ಲಿ ಮಂಡಿಸಿದ ಭಾರತದ ಸಾಮಾಜಿಕ ಸ್ಥಿತಿಗತಿಗಳ ಸಂಕ್ಷಿಪ್ತ ರೂಪವಿದು.

ಅಸ್ಪೃಶ್ಯರ ಬೇಡಿಕೆಗೆ ಗಾಂಧಿಯವರ ವಿರೋಧ ಕಾಂಗ್ರೆಸ್ ಮೊದಲನೇ ದುಂಡುಮೇಜಿನ ಪರಿಷತ್ತನ್ನು ಬಹಿಷ್ಕರಿಸಿತ್ತು. ಕಾಂಗ್ರೆಸ್ಸಿನ ಪ್ರತಿನಿಧಿಯಾಗಿ ಗಾಂಧಿಯವರು ಸೆಪ್ಟೆಂಬರ್ 1931 ರಲ್ಲಿ ನಡೆದ ಎರಡನೇ ದುಂಡುಮೇಜಿನ ಸಭೆಗೆ ಹಾಜರಾದರು. ಎರಡನೇ ದುಂಡು ಮೇಜಿನ ಅಧಿವೇಶನವು ಡಿಸೆಂಬರ್ 1931 ರವರೆಗೆ ನಡೆಯಿತು. ಗಾಂಧಿಯವರು ಪರಿಷತ್ತಿನ ಚರ್ಚೆಗಳಿಗೆ ಅಡ್ಡಗಾಲಾದರು. ಡಾ. ಅಂಬೇಡ್ಕರ್ ಮತ್ತು ಶ್ರೀನಿವಾಸನ್‍ರವರು ಕೋರಿಕೊಂಡಿದ್ದ ದಲಿತರಿಗೆ ಪ್ರತ್ಯೇಕ ಚುನಾವಣಾ ವ್ಯವಸ್ಥೆಯ ಕೋರಿಕೆಯನ್ನು ಗಾಂಧಿಯವರು ವಿರೋಧಿಸಿದರು. ಅಂಬೇಡ್ಕರ್ ಮತ್ತು ಗಾಂಧಿಯವರ ಮಧ್ಯೆ ವಾದ ವಿವಾದಗಳು ಜರುಗಿದವು.
ಅಂಬೇಡ್ಕರರು ತಮ್ಮ ‘ಪೂನಾ ಒಪ್ಪಂದ’ ಕೃತಿಯಲ್ಲಿ ಬರೆದಿರುವಂತೆ, ಕಾಂಗ್ರೆಸ್ ಪಕ್ಷವು ಗಾಂಧಿಯವರನ್ನು ತನ್ನ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿದ್ದೇ ಅಚ್ಚರಿಯ ಸಂಗತಿ. ಗಾಂಧಿಯವರು ಉಳಿದ ಪ್ರತಿನಿಧಿಗಳನ್ನು ಹೀಯಾಳಿಸಿದರು. ಸದಸ್ಯರ ಆಯ್ಕೆಯನ್ನೇ ಪ್ರಶ್ನಿಸಿದರು. ಸಭೆಯಲ್ಲಿ ಸಾಧಾರಣ ಆಕ್ಷೇಪಣೆಗಳನ್ನು ಎತ್ತಿದರು. ನಯವಂಚಕರಂತೆ ವರ್ತಿಸಿದರು. ಪದೇ ಪದೇ ಪ್ರತಿಭಟನೆಯ ಬೆದರಿಕೆಯನ್ನು ಒಡ್ಡಿದರು.  ಗಾಂಧಿಯವರು ದಲಿತರ ಪ್ರತ್ಯೇಕ ಚುನಾವಣಾ ವ್ಯವಸ್ಥೆಯನ್ನು ವಿರೋಧಿಸಿದ್ದರಿಂದ ದುಂಡುಮೇಜಿನ ಪರಿಷತ್ತಿನಲ್ಲಿ ಒಮ್ಮತಕ್ಕೆ ಬರಲಾಗಲಿಲ್ಲ. ಗಾಂಧಿಯವರು ಈ ಕುರಿತು ಅಲ್ಪಸಂಖ್ಯಾತರ ಸಮಿತಿಯಲ್ಲಿ ಚರ್ಚಿಸಲು ಒಂದು ವಾರ ಸಭೆಯನ್ನು ಮುಂದೂಡಿಸಿಕೊಂಡರು. ಆದರೂ ಪರಿಹಾರವನ್ನು ಕಂಡುಕೊಳ್ಳಲಾಗಲಿಲ್ಲ.
ಬ್ರಿಟಿಷ್ ಪ್ರಧಾನಿ ರಾಮ್ಸೆ ಮೆಕ್‍ಡೊನಾಲ್ಡ್ ಅವರ ನಿರ್ಧಾರ  ಅಂತಿಮವಾಗಿ, ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ರಿಟಿಷ್ ಪ್ರಧಾನಿ ರಾಮ್ಸೆ ಮೆಕ್‍ಡೊನಾಲ್ಡ್ ಅವರು ಸಭೆಯನ್ನು ಉದ್ದೇಶಿಸಿ ಹೀಗೆ ಹೇಳಿದರು: ಸ್ವತಂತ್ರ್ಯ ಭಾರತದಲ್ಲಿ ಎಲ್ಲಾ ಜನಾಂಗಗಳಿಗೂ ರಾಜಕೀಯ ಅಧಿಕಾರ ದೊರಕಬೇಕು. ಅದಕ್ಕಾಗಿ ನಾನು ಕೊಡುವ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ಜನಾಂಗೀಯ ವ್ಯತ್ಯಾಸಗಳಿದ್ದರೆ ರಾಜ್ಯಾಂಗ ರಚನೆಗೆ ಅಡ್ಡಿಯಾಗುತ್ತದೆ. ಸರ್ಕಾರದ ನಿರ್ಧಾರಗಳನ್ನು ಕಾರ್ಯಗತಗೊಳಿಸುವುದು ಕಷ್ಟವಾಗುತ್ತದೆ. ಆದ್ದರಿಂದ ನಾನು ಕೊಟ್ಟ ತೀರ್ಪಿಗೆ ನೀವೆಲ್ಲರೂ ಒಪ್ಪಿಕೊಳ್ಳಬೇಕೆಂದರು. ಅದರಂತೆ, ರಾಮ್ಸೆ ಮೆಕ್‍ಡೊನಾಲ್ಡ್ ಅವರು ದಲಿತರಿಗೆ ಪ್ರತ್ಯೇಕ ಚುನಾವಣೆ ವ್ಯವಸ್ಥೆಯ ಸ್ವಯಂ ನಿರ್ಣಯಾಧಿಕಾರವನ್ನು ಆಗಸ್ಟ್ 16, 1932ರಲ್ಲಿ ಘೋಷಿಸಿದರು. ಇದನ್ನು ‘ಕಮ್ಮ್ಯೂನಲ್ ಅವಾರ್ಡ್’ ಎಂಬ ಪರಿಭಾಷೆಯಿಂದ ಕರೆಯಲಾಯಿತು. ಪ್ರಾಂತೀಯ ಶಾಸನಸಭೆಗಳಲ್ಲಿ 78 ಪ್ರತ್ಯೇಕ ಮತಕ್ಷೇತ್ರಗಳನ್ನು ದಲಿತರಿಗೆ ನಿಗಧಿಪಡಿಸಲಾಯಿತು.
ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ಕೊಟ್ಟಿದ್ದರ ವಿರುದ್ಧ ಸೆಪ್ಟೆಂಬರ್ 20, 1932ರಿಂದ ಗಾಂಧಿಯವರು ಪೂನಾದ ಯರವಾಡ ಜೈಲಿನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಹೂಡಿದರು. ಸೆಪ್ಟೆಂಬರ್ 23 ರ ಹೊತ್ತಿಗೆ ಅವರ ಆರೋಗ್ಯದಲ್ಲಿ ಏರುಪೇರಾಯಿತು. ಗಾಂಧಿಯವರ ಮಗನಾದ ದೇವದಾಸ್ ಗಾಂಧಿಯವರು ಅಂಬೇಡ್ಕರರೊಡನೆ ಮಾತನಾಡಿ ತಮ್ಮ ತಂದೆಯ ಪ್ರಾಣ ಉಳಿಸುವಂತೆ ಮನವಿ ಮಾಡಿದರು. ಈ ಮಧ್ಯೆ, ಮದನ ಮೋಹನ ಮಾಳವೀಯ, ಸರ್ ತೇಜ್ ಬಹಾದ್ದೂರ್ ಸಫ್ರು, ಎಂ. ಆರ್. ಜಯಕರ್ ಅವರು ಅಂಬೇಡ್ಕರರನ್ನು ಗಾಂಧಿಯವರ ಜೊತೆ ಚರ್ಚಿಸಿ ಪ್ರತ್ಯೇಕ ಚುನಾವಣಾ ವ್ಯವಸ್ಥೆಯ ವಿಷಯದಲ್ಲಿ ಒಮ್ಮತಕ್ಕೆ ಬರಲು ಒತ್ತಾಯಿಸಿದರು. ಒಂದು ವೇಳೆ ಉಪವಾಸ ಸತ್ಯಾಗ್ರಹದಿಂದಾಗಿ ಗಾಂಧಿಯವರು ಗತಿಸಿ ಹೋದರೆ ದೇಶಾದ್ಯಂತ ದಲಿತರ ಮೇಲೆ ಹಿಂದೂ ಸವರ್ಣೀಯರು ಹಲ್ಲೆ ಮಾಡಬಹುದೆಂದು ಅಂಬೇಡ್ಕರ್ ಚಿಂತಿಸಿದರು. ಯರವಾಡ ಜೈಲಿನಲ್ಲಿ ಸುದೀರ್ಘ ಮಾತಕತೆಯ ನಂತರ ಸೆಪ್ಟೆಂಬರ್ 24, 1932 ರಂದು ನಡೆದ ‘ಪೂನಾ ಒಪ್ಪಂದ’ದಲ್ಲಿ ದಲಿತರಿಗೆ ಬ್ರಿಟಿಷರು ಕೊಟ್ಟಿದ್ದ 78 ಪ್ರತ್ಯೇಕ ಚುನಾವಣಾ ಮತಕ್ಷೇತ್ರಗಳ ಬದಲಿಗೆ 148 ಮೀಸಲು ಮತಕ್ಷೇತ್ರಗಳನ್ನು ಪಡೆಯಲಾಯಿತು.
ಬ್ರಿಟಿಷರು ಕೊಟ್ಟಿದ್ದ ಕಮ್ಮ್ಯೂನಲ್ ಅವಾರ್ಡ್‍ನಂತೆ ದಲಿತರಿಗೆ ಎರಡು ಮತಗಳಿದ್ದವು. ಪ್ರತ್ಯೇಕ ಚುನಾವಣಾ ಮತಕ್ಷೇತ್ರಗಳಲ್ಲಿ ದಲಿತ ಮತದಾರರು ಮಾತ್ರ ದಲಿತ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಪ್ರಥಮ ಮತ ನೀಡಬೇಕಿತ್ತು. ಮತ್ತೊಂದು ಮತವನ್ನು ಸಾಮಾನ್ಯ ಮತದಾರನಿಗೆ ಹಾಕಬಹುದಾಗಿತ್ತು. ಇಂತಹ ಪ್ರತ್ಯೇಕ ಚುನಾವಣಾ ಪದ್ದತಿ ಇರುವುದಾದರೆ, ದಲಿತರು ಹಿಂದೂ ಧರ್ಮದ ಹೊರಗೆ ಹೋಗಿ, ಹಿಂದೂ ಧರ್ಮವನ್ನು ಇಬ್ಬಾಗಿಸಿದಂತಾಗುತ್ತದೆ ಎಂಬ ಆತಂಕ ಗಾಂಧಿಯವರಿಗಿತ್ತು. ಬಾಬಾಸಾಹೇಬ್ ಅಂಬೇಡ್ಕರರಿಗೆ ದಲಿತರ ವಿಮೋಚನೆಗಾಗಿ ದುಡಿಯಲು, ನಿಜವಾದ ದಲಿತ ಪ್ರತಿನಿಧಿಗಳನ್ನು ದಲಿತರೇ ಆಯ್ಕೆ ಮಾಡುವ ಪ್ರತ್ಯೇಕ ಚುನಾವಣಾ ಪದ್ದತಿ ಬೇಕಿತ್ತು. ಜಂಟಿ ಮೀಸಲು ಕ್ಷೇತ್ರಗಳಲ್ಲಿ ಸವರ್ಣೀಯ ಹಿಂದೂ ಮತಗಳ ಆಧಾರದ ಮೇಲೆ ಗೆದ್ದ ದಲಿತ ಪ್ರತಿನಿಧಿಯು ಜೀತದ ರಾಜಕಾರಣ ಮಾಡುತ್ತಾನೆ. ದಲಿತರ ಹಿತಾಸಕ್ತಿಗಳನ್ನು ಕಾಪಾಡುವುದರಲ್ಲಿ ಸೋಲುತ್ತಾನೆ. ಹೀಗಾಗಿ, ಪ್ರತ್ಯೇಕ ಮತಕ್ಷೇತ್ರಗಳ ಮೂಲಕ, ದಲಿತರಿಗೆ ನೈಜ ರಾಜಕೀಯ ಅಧಿಕಾರ ದಕ್ಕಿ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುವುದು ಅಂಬೇಡ್ಕರರ ಆಶಯವಾಗಿತ್ತು.
ಸಂಕ್ಷಿಪ್ತವಾಗಿ ಪೂನಾ ಒಪ್ಪಂದದ ಪ್ರಮುಖ ಅಂಶಗಳು
1. ದಲಿತರಿಗೆ ಪ್ರಾಂತೀಯ ಶಾಸನಸಭೆಗಳಲ್ಲಿ ಮೀಸಲಿಟ್ಟ ಸ್ಥಾನಗಳು: ಮದ್ರಾಸ್ : 20, ಸಿಂದ್ ಮತ್ತು ಮುಂಬಯಿ : 15, ಪಂಜಾಬ್: 18, ಬಿಹಾರ್ ಮತ್ತು ಒರಿಸ್ಸಾ: 18, ಕೇಂದ್ರಿಯ ಪ್ರಾಂತ್ಯಗಳು: 20, ಅಸ್ಸಾಂ: 7, ಬಂಗಾಳ : 30, ಸಂಯುಕ್ತ ಪ್ರಾಂತ್ಯಗಳು: 20, ಒಟ್ಟು: 148.
2. ಪ್ರತಿ ಜಂಟಿ ಮೀಸಲು ಕ್ಷೇತ್ರದಲ್ಲಿ ದಲಿತ ಮತದಾರರು ಮಾತ್ರ ಒಂದು ಚುನಾವಣಾ ಮತಸಮೂಹವಾಗಿ, ಒಂದು ಮತವನ್ನು ಚಲಾಯಿಸುವ ಮೂಲಕ ಒಟ್ಟು ನಾಲ್ಕು ಮಂದಿ ಅಭ್ಯರ್ಥಿಗಳ ಆಯ್ಕೆ ನಡೆಯುವುದು. ಇದು ‘ಪ್ರಾಥಮಿಕ ಚುನಾವಣೆ’. ಅಲ್ಲಿ ಆಯ್ಕೆಯಾದ ನಾಲ್ಕು ಮಂದಿ ಸಾಮಾನ್ಯ ಚುನಾಯಕದ ಅಭ್ಯರ್ಥಿಗಳಾಗಿ ಗೆಲ್ಲಲು ದಲಿತ ಹಾಗೂ ಇತರೆ ಜನಾಂಗಗಳ ಮತಗಳನ್ನು ಬೇಡುತ್ತಾರೆ.
3. ಕೇಂದ್ರ ಶಾಸನ ಸಭೆಯಲ್ಲೂ ಪ್ರಾಥಮಿಕ ಚುನಾವಣೆಯಿರಬೇಕು.
4. ಕೇಂದ್ರ ಶಾಸನ ಸಭೆಯಲ್ಲಿ ಶೇ. 18 ರಷ್ಟು ಸ್ಥಾನಗಳನ್ನು ದಲಿತರಿಗೆ ಮೀಸಲಿಡಬೇಕು.
5. ‘ಪ್ರಾಥಮಿಕ ಚುನಾವಣೆ’ಯು ಹತ್ತು ವರ್ಷಗಳ ನಂತರ ರದ್ದಾಗುತ್ತದೆ.
6. ಕೇಂದ್ರ ಮತ್ತು ಪ್ರಾಂತೀಯ ಶಾಸನಸಭೆಗಳಲ್ಲಿ ದಲಿತರಿಗೆ ಮೀಸಲು ನೀಡುವ ವ್ಯವಸ್ಥೆಯು ಎರಡೂ ಕಡೆಯ ಜನಾಂಗಗಳು ಒಪ್ಪಿಕೊಂಡು ರದ್ದುಮಾಡುವವರೆಗೂ ಮುಂದುವರೆಯುತ್ತದೆ.
7. ಮತದಾನವು ಲೋಧಿಯನ್ ಸಮಿತಿಯ ವರದಿಯಲ್ಲಿರುವಂತೆ ಜಾರಿಗೊಳ್ಳಬೇಕು.
8. ದಲಿತರೆಂಬ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಸಾರ್ವಜನಿಕ ಸೇವೆಗಳ ನೇಮಕಗಳಲ್ಲಿ ದಲಿತರಿಗೆ ಅಡ್ಡಿ ಆತಂಕಗಳು ಉಂಟಾಗಬಾರದು.
9. ಪ್ರತಿಯೊಂದು ಪ್ರಾಂತ್ಯದಲ್ಲೂ ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಪ್ರತ್ಯೇಕವಾಗಿ ಮೀಸಲು ಹಣವಿಡಬೇಕು.

ಒಪ್ಪಂದದ ಷರತ್ತುಗಳನ್ನು ಭಾರತ ಸರ್ಕಾರದ ಕಾಯ್ದೆಯನ್ನಾಗಿ ಪ್ರಕಟಿಸÀಲಾಯಿತು. ಪ್ರತ್ಯೇಕ ಚುನಾವಣಾ ಪದ್ದತಿಯಲ್ಲಿ ಪಡೆದುಕೊಂಡಿದ್ದ ದಲಿತರಿಂದಲೇ ಉತ್ತಮ ದಲಿತ ನಾಯಕರು ಆಯ್ಕೆಯಾಗುವ ವಿಧಾನವನ್ನು ಪೂನಾ ಒಪ್ಪಂದದಲ್ಲಿ ಗಾಂಧಿಯವರ ಒತ್ತಡಕ್ಕೆ ಮಣಿದು ಜಂಟಿ ಚುನಾವಣಾ ಪದ್ದತಿಯನ್ನು ಒಪ್ಪಬೇಕಾಯಿತು. ಇಲ್ಲಿ ದಲಿತ ಪರ ಧ್ವನಿಯೆತ್ತುವ ನಾಯಕರ ಆಯ್ಕೆ ಸಾಧ್ಯತೆ ಅಪರೂಪ. ಅದಕ್ಕಾಗಿ ಅಸ್ಪೃಶ್ಯರಿಗೆ ಅಗಾಧ ದುಃಖವಾಯಿತು. ಬಾಬಾಸಾಹೇಬ್ ಡಾ. ಅಂಬೇಡ್ಕರರೂ ಅತೀವವಾಗಿ ನೊಂದುಕೊಂಡರು.
ಡಾ. ಅಂಬೇಡ್ಕರರು ದುಂಡುಮೇಜಿನ ಪರಿಷತ್ತಿನಲ್ಲಿ ದಲಿತರಿಗಾಗಿ ಪ್ರತ್ಯೇಕ ಮತಕ್ಷೇತ್ರಗಳ ಬೇಡಿಕೆ ಇಟ್ಟಿದ್ದನ್ನು, ಬ್ರಿಟಿಷರಿಂದ ಅದನ್ನು ಪಡೆದುಕೊಂಡಿದ್ದನ್ನು, ಪೂನಾ ಒಪ್ಪಂದದಲ್ಲಿ ಅದನ್ನು ಕಳೆದುಕೊಂಡಿದ್ದನ್ನು ಕುರಿತು ‘ಪೂನಾ ಪ್ಯಾಕ್ಟ್’ ಎಂಬ ಕೃತಿಯನ್ನು ಪ್ರಕಟಿಸಿದರು. ರಾಮ್ಸೆ ಮೆಕ್‍ಡೊನಾಲ್ಡ್ ಅವರು ಕೊಟ್ಟಿದ್ದ ಪ್ರತ್ಯೇಕ ಮತಕ್ಷೇತ್ರಗಳ ಮೂಲಕ ಸ್ವಾಭಿಮಾನಿ ದಲಿತ ರಾಜಕೀಯ ಪ್ರತಿನಿಧಿಗಳ ಆಯ್ಕೆಯ ಸಾಧ್ಯತೆಯಿತ್ತು. ಆದರೆ, ಪೂನಾ ಒಪ್ಪಂದದಲ್ಲಿ ಪಡೆದದ್ದೇನೆಂದರೆ, ದಲಿತ ರಾಜಕೀಯ ನಾಯಕರು ‘ಸೂತ್ರದ ಗೊಂಬೆ’ ಗಳಾಗುವ ಜೀತಪದ್ದತಿಯಂತಹ ವ್ಯವಸ್ಥೆಯನ್ನು. ಇದನ್ನು ಅಂಬೇಡ್ಕರರು ಮನಗಂಡಿದ್ದರು. ತಮ್ಮ ಪೂನಾ ಪ್ಯಾಕ್ಟ್ ಕೃತಿಯ ಕೊನೆಯಲ್ಲಿ ಅಂಬೇಡ್ಕರರು ಅತೀವವಾಗಿ ನೊಂದು ಹೀಗೆ ಬರೆಯುತ್ತಾರೆÉ: “ಪೂನಾ ಒಪ್ಪಂದದಲ್ಲಿನ ರಸವನ್ನು ಹೀರಿಕೊಂಡ ಕಾಂಗ್ರೆಸ್ ಪಕ್ಷವು, ಸಿಪ್ಪೆಯನ್ನು ಅಸ್ಪೃಶ್ಯರ ಮುಖದ ಮೇಲೆ ಉಗುಳಿತು ಎಂದು ಹೇಳುತ್ತಾ ಈ ದುರಂತಮಯ ಕಥೆಯನ್ನು ಮುಗಿಸುವೆ”.
ಉಪಸಂಹಾರ: ಡಾ. ಅಂಬೇಡ್ಕರರು ದುಂಡುಮೇಜಿನ ಪರಿಷತ್ತಿನ ಮುಂದೆ ಚರ್ಚಿಸಿದ ಸಮಸ್ಯೆಗಳು ಇಂದಿಗೂ ಇವೆ. ಪ್ರಸ್ತುತದಲ್ಲಿ, ಬಡ್ತಿ ಮೀಸಲಾತಿಯ ಸಮಸ್ಯೆ ತಲೆದೋರಿದೆ. ಸೇವಾಕ್ಷೇತ್ರದಲ್ಲಿ ದಲಿತರ ಪ್ರಾತಿನಿಧ್ಯವನ್ನು ಕಿತ್ತುಕೊಳ್ಳುವ ಕುಟಿಲ ಪ್ರಯತ್ನಗಳು ಜರುಗುತ್ತಿವೆ. ಈ ಹಿಂದೆ ಇದ್ದ 33 ಶಾಸಕರ ಪ್ರಾತಿನಿಧ್ಯ ಇಂದು 51 ಆಗಿದ್ದರೂ ದಲಿತ ಪರ ಗಟ್ಟಿಯಾದ ಧ್ವನಿ ಮೊಳಗುತ್ತಿಲ್ಲ. ದಲಿತ ವಿದ್ಯಾರ್ಥಿಗಳಿಗೆ 1968 ಮತ್ತು 1982 ರ ಸರ್ಕಾರಿ ಆದೇಶಗಳ ಪ್ರಕಾರ ಕಲ್ಪಿಸಲಾಗಿದ್ದ ಸಂಪೂರ್ಣ ಶುಲ್ಕ ವಿನಾಯಿತಿಯನ್ನು 2015 ರಿಂದ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸುಗಳಿಗೆ ‘ಅರೆಶುಲ್ಕ ಭಾಗ್ಯ’ವಾಗಿಸಿ, ಉಳಿದ ಕೋರ್ಸುಗಳಿಗೆ ಅಂತಹ ‘ಭಾಗ್ಯ’ವೂ ಇಲ್ಲದಾಗಿ ದಲಿತರ ಶೈಕ್ಷಣಿಕ ಪ್ರಗತಿಗೆ ಮಾರಕ ಹೊಡೆತ ಕೊಡಲಾಗಿದೆ. ವಿದ್ಯಾರ್ಥಿವೇತನ ಏರಿಕೆಯಾಗಿಲ್ಲ. ವಿದ್ಯಾರ್ಥಿವೇತನದ ಆದಾಯ ಮಿತಿಯೂ ಏರಿಕೆಯಾಗಿಲ್ಲ. ಬ್ಯಾಕ್ ಲಾಗ್ ಹುದ್ದೆಗಳ ಗುರುತಿಸುವಿಕೆ, ಭರ್ತಿಮಾಡುವಿಕೆ ನೆನೆಗುದಿಗೆ ಬಿದ್ದಿದೆ. ಖಾಸಗಿವಲಯದಲ್ಲಿ ಪ್ರಾತಿನಿಧ್ಯ ಪಡೆಯುವುದು ಗಗನಕುಸುಮವಾಗಿದೆ. ದಲಿತರ ಭೂಮಿ ಪರಭಾರೆಯಾಗುತ್ತಿದೆ. ದಬ್ಬಾಳಿಕೆ, ದೌರ್ಜನ್ಯಗಳು ಅವ್ಯಾಹತವಾಗಿವೆ. ಬೆಳಕಿಗೆ ಬಾರದ ತಾರತಮ್ಯಗಳು ಬೆಟ್ಟದಷ್ಟಿವೆ. ಹೀಗಿರುವಾಗ, ಡಾ. ಅಂಬೇಡ್ಕರ್ ರವರ ಸಾಹಿತ್ಯ, ಚಿಂತನೆಗಳ ಮರು ಓದು, ಮರು ಪ್ರವೇಶಿಕೆ, ಮರು ಅಳವಡಿಕೆ, ಮರು ಮಾರ್ಗದರ್ಶನ ಮಾತ್ರ ದಲಿತರಿಗೆ ಕೊಂಚ ನ್ಯಾಯ ಒದಗಿಸಬಲ್ಲುದಾಗಿದೆ.

Leave a Reply

Your email address will not be published.