ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸ್ಥಾನ

ಡಾ. ಅರುಂಧತಿ ಚಂದ್ರಶೇಖರ್

deepa2016ರ ರಿಯೋ ಒಲಂಪಿಕ್ಸ್‍ನಲ್ಲಿ ಇಬ್ಬರು ಹೆಣ್ಣು ಮಕ್ಕಳು ಭಾರತದ ಧ್ವಜವನ್ನು ಎತ್ತಿ ಹಿಡಿದರು. ಭಾರತಕ್ಕೆ ಕೀರ್ತಿಯನ್ನು ತಂದುಕೊಟ್ಟ ಸಿಂಧು, ಸಾಕ್ಷಿ ಮಲ್ಲಿಕ್ ಹಾಗೂ ದೀಪಾ ಕರಮಾಕರ್ ಬಗ್ಗೆ ಜನರು, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಖ್ಯಾನ ಮಾಡುವುದು, ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಸಾಮಾನ್ಯವಾಯಿತು. ಈ ಸಂದರ್ಭದಲ್ಲಿ ಟಿ.ವಿ. ಚ್ಯಾನಲ್ ಒಂದರಲ್ಲಿ ಮಾಜಿ ಬ್ಯಾಡಮಿಂಟನ್ ಆಟಗಾರ್ತಿ ಅಪರ್ಣಾ ಪೋಪಟ್ ಅವರ ಸಂದರ್ಶನ ಅರ್ಥಗರ್ಭಿತವಾಗಿತ್ತು.

ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಹೆಚ್ಚುವರಿ ಭಾರತದ ಮಹಿಳೆಯರು ಛಾಪು ಮೂಡಿಸಲು ಏಕೆ ವಿಫಲರಾಗುತ್ತಾರೆ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು “ಕ್ರೀಡೆಗಳಲ್ಲಿ ಯಶಸ್ಸು ಹೊಂದಲು ಸ್ಪರ್ಧಾತ್ಮಕ ಹಾಗೂ ಆಕ್ರಮಣಕಾರಿ ಮನೋಭಾವ ಹಾಗೂ ಗೆಲ್ಲಬೇಕೆಂಬ ಛಲದ ಅವಶ್ಯಕತೆ ಇರುತ್ತದೆ. ಮಹಿಳೆಯರು ಈ ಮನೋಭಾವವನ್ನು ರೂಡಿಸಿಕೊಂಡು ಕ್ರೀಡೆಗಳಲ್ಲಿ ಗೆಲ್ಲಲ್ಲಿ ಎಂದು ನಾವೆಲ್ಲರೂ ಆಶಿಸಿದರೂ, ಕ್ರೀಡಾಂಗಣದಿಂದ ಹೊರಗೆ ಕಾಲಿಟ್ಟ ತಕ್ಷಣ ಮಹಿಳೆಯರು ಸೌಮ್ಯ ಹಾಗೂ ವಿಧೇಯರಾಗಿರಬೇಕು, ಅರ್ಥಾತ್ ‘ಭಾರತೀಯ ನಾರಿಯಂತಿರಬೇಕೆಂದು ಅಪೇಕ್ಷಿಸುತ್ತೇವೆ. ಈ ರೀತಿಯ ದ್ವಂದ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಎಲ್ಲರಿಗೂ ಸಾಧ್ಯವಿರುವುದಿಲ್ಲ. ಆದ್ದರಿಂದ ಹೆಚ್ಚು ಭಾರತೀಯ ಮಹಿಳೆಯರಿಗೆ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ.

ಯೋಚಿಸಿದಾಗ ಇದು ನಿಜವೆನಿಸುವುದಿಲ್ಲವೆ? ಕ್ರೀಡೆಯಲ್ಲಿ ಮಾತ್ರವೇ ಅಲ್ಲ, ಎಲ್ಲಾ ಕ್ಷೇತ್ರಗಳಲ್ಲಿಯೂ ಸಹಾ ಮಹಿಳೆಯರು ತಮ್ಮ ಸಾಮಥ್ರ್ಯ ಹಾಗೂ ಅರ್ಹತೆಯನ್ನು ಎರಡು ಹಂತದಲ್ಲಿ ನಿರೂಪಿಸಬೇಕಾಗುತ್ತದೆ. ಮೊದಲನೆಯ ಹಂತದಲ್ಲಿ ಗಂಡಸರಿಗೆ ಸಮಾನರಾಗಿ ಕಾರ್ಯ ನಿರ್ವಹಿಸಬಲ್ಲರೆಂದು ಹಾಗೂ ಎರಡನೆಯದಾಗಿ ತಮ್ಮಲ್ಲಿ ಗಂಡಸರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುವ ಕ್ಷಮತೆ ಇದೆಯಂದು, ಆದರೆ ಗಂಡಸರ ವಿಷಯದಲ್ಲಿ ಇದರ ಅವಶ್ಯಕತೆಯೇ ಕಂಡುಬರುವುದಿಲ್ಲ. ಇಂದಿರಾ ಗಾಂಧಿ, ಕಿರಣ್ ಬೇಡಿ, ಇಂದಿರಾ ನೂಯಿ, ಅರುಂಧತಿ ಭಟ್ಟಾಚಾರ್ಯ ಇತ್ಯಾದಿ ಎಲ್ಲರು ಈ ಎರಡು ಹಂತಗಳನ್ನು ದಾಟಿ ಬಂದವರೇ.

ಇತ್ತಿಚೆಗೆ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು, ಇನ್ನೊಬ್ಬ ಮಹಿಳೆ ಅಧಿಕಾರಿ ಆತ್ಮಹತ್ಯಗೆ ಪ್ರಯತ್ನಿಸಿದರು. ಸಭೆ ಸಮಾರಂಭ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣಗಳು ಚರ್ಚೆಗೆ ಗ್ರಾಸವಾಯಿತು. ಹೆಂಗಸರಿಗೆ ಮಾನಸಿಕ ಸ್ಥೈರ್ಯವಿಲ್ಲ, ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇಲ್ಲ, ಹುದ್ದೆಯ ಜವಾಬ್ದಾರಿಯನ್ನು ನಿರ್ವಹಿಸುವ ಸಾಮಥ್ರ್ಯವಿಲ್ಲ ಇತ್ಯಾದಿಯಾಗಿ ‘ತಜ್ಞರ’ ಅಭಿಪ್ರಾಯ/ವಿಶ್ಲೇಷಣೆಗಳು ಕೇಳಿಬಂದವು.

ಆದರೆ ಕೆಲದಿನಗಳ ಮುಂಚೆ ಇಬ್ಬರು ಪುರುಷ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಂತಹ ಸಂದರ್ಭದಲ್ಲಿ ಯಾರೊಬ್ಬ ಸ್ವಯಂ ಘೋಷಿತ ತಜ್ಞರು, ಪುರುಷರು ಜವಾಬ್ದಾರಿಯುತ ಹುದ್ದೆಗಳ ನಿರ್ವಹಿಸಲು ಅಸಮರ್ಥರು ಎಂಬ ಅಭಿಪ್ರಾಯ ವ್ಯಕ್ತಪಡಿಸುವುದಿರಲೀ ಆ ನಿಟ್ಟಿನಲ್ಲಿ ಆಲೋಚಿಸಿರುವುದು ಕಂಡುಬರಲಿಲ್ಲ, ಬದಲಾಗಿ ಆ ಅಧಿಕಾರಿಗಳು ವೈಯಕ್ತಿಕ / ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡರೆಂಬ ನಿರ್ಣಯಕ್ಕೆ ಬಂದಿದ್ದರು. ಇಂದಿಗೂ ಸಮಾಜದಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂಶವೆಂದರೆ ಮಹಿಳೆಯರು ತಮ್ಮ ಕಾರ್ಯದಲ್ಲಿ ಯಶ್ವಿಸಿಯಾದರೆ ಅವರೊಂದು Exception, ಅದೇ ವಿಫಲವಾದರೆ ಹೆಂಗಸರಿಂದ ಇನ್ನೇನ್ನನ್ನು ನಿರೀಕ್ಷಿಸಬಹುದು ಎಂಬ ಸಾಮಾನ್ಯೀಕರಣ. ಆದರೆ ಅದೇ ಪುರುಷರ ವಿಷಯಕ್ಕೆ ಬಂದಾಗ ಇದಕ್ಕೆ ಸಂಪೂರ್ಣವಾದ ವ್ಯತಿರಿಕ್ತವಾದ ಅಭಿಪ್ರಾಯ.

ಈ ರೀತಿಯ ಮನೋಭಾವ ಕೇವಲ ಪುರುಷರಲ್ಲಿಯೇ ಕಂಡುಬರುತ್ತದೆ ಎಂಬುದೇನಿಲ್ಲ, ಹಲವು ಮಹಿಳೆಯರು ಸಹಾ ಇದೇ ನಿಲುವನ್ನು ತಾಳಿರುತ್ತಾರೆ. ಅಲ್ಲದೆ ಎಲ್ಲಾ ಪುರುಷರಲ್ಲೂ ಈ ಭಾವನೆ ಇದೆಯೆಂದು ಸಾಮಾನ್ಯೀಕರಿಸಲು ಆಗದು, ಏಕೆಂದರೆ ಇಂದು ಹಲವಾರು ಪುರುಷರು ಲಿಂಗಭೇಧದ ಬಗ್ಗೆ ತಮ್ಮ ಧ್ವನಿ ಎತ್ತಿದ್ದಾರೆ, ಹಾಗೂ ಹಲವರು ಸ್ತ್ರೀಯರಿಗೆ ಸಮಾನ ಸ್ಥಾನಮಾನ ನೀಡುತ್ತಿದ್ದಾರೆ, ಆದರೆ ಇಂತಹ ಪುರುಷರು ಇಂದಿನ ಸಮಾಜದಲ್ಲಿ ಅಲ್ಪಸಂಖ್ಯಾತರು ಎಂಬುದು ಮಾತ್ರ ವಿಷಾದನೀಯ.

ಇತ್ತೀಚೆಗೆ ಒಬ್ಬ ಹಿರಿಯ ಅಧಿಕಾರಿ ತಮ್ಮ ಮಹಿಳಾ ಸಹೊದ್ಯೋಗಿಯನ್ನು ‘ಇವರು ಪುರುಷರಿಗಿಂತ ಚೆನ್ನಾಗಿ ತಮ್ಮ ಕಾರ್ಯನಿರ್ವಹಿಸುತ್ತಾರೆ’ ಎಂದು ಪರಿಚಯಿಸಿದಾಗ, ‘ಅಧಿಕಾರಿ ಅಧಿಕಾರಿಯೇ, ಇದರಲ್ಲಿ ಪುರುಷರೇನು ಮಹಿಳೆಯರೇನು? ಇದರ ಬದಲು ಒಬ್ಬರು ಉತ್ತಮ ಅಧಿಕಾರಿಯೊಂದಿಗೆ ಹೊಲಿಕೆ ಮಾಡಿದರೆ ಅದನ್ನು Complement ಆಗಿ ಪರಿಗಣಿಸಬಹುದು’ ಎಂಬ ಆ ಮಹಿಳಾ ಅಧಿಕಾರಿಯ ಮಾತು ಅರ್ಥಪೂರ್ಣವಾಗಿತ್ತು.

sindhuಭಾರತೀಯ ಸಮಾಜದಲ್ಲಿ ಏಕೆ ಈ ರೀತಿ ಮನೋಭಾವ ಬೆಳೆದು ಬಂದಿವೆ ಎಂಬುದನ್ನು ಅರ್ಥೈಸಿಸಲು ಪ್ರಯತ್ನಿಸಿದಲ್ಲಿ ಕೆಲವೊಂದು ಕುತೂಹಲಕಾರಿ ಅಂಶಗಳು ಕಂಡುಬರುತ್ತದೆ. ಯುಗಾಂತರಗಳಿಂದ ನಮ್ಮದು ಪುರುಷ ಪ್ರಧಾನ ರಾಷ್ಟ್ರ. ಹೆಂಗಸರನ್ನು ಒಂದು ವಸ್ತು / ಸ್ವತ್ತೆಂದು ಪರಿಗಣಿಸುವ ಮನೋಭಾವ ಅನಾಧಿಕಾಲದಿಂದಲೂ ನಡೆದುಕೊಂಡು ಬಂದಿದೆ. ತ್ರೇತಾಯುಗದಲ್ಲಿ ರಾಮ ಒಬ್ಬ ಅಗಸನ ಮಾತು ಕೇಳಿ ತನ್ನ ಹೆಂಡತಿಯನ್ನು ಕಾಡಿಗೆ ಕಳಿಸಿದರೆ, ದ್ವಾಪರಯುಗದಲ್ಲಿ ಧರ್ಮರಾಯ ತನ್ನ ಪತ್ನಿಯನ್ನು ಪಗಡೆಯಾಟದಲ್ಲಿ ಒತ್ತೆ ಇಡುತ್ತಾನೆ. ಇನ್ನೂ ಮನುಸ್ಮøತಿಯಲ್ಲಂತೂ ಹೆಣ್ಣಿನ ಬಗೆಗಿನ ಉಲ್ಲೇಖಗಳು ಚಿಂತಾಜನಕ, ಉದಾಹರಣೆಗೆ ಹೆಣ್ಣುಮಗು, ಯುವತಿ, ವೃದ್ಧೆ ತಮ್ಮ ಮನೆಯಲ್ಲಿಯೂ ಸಹಾ ಸ್ವತಂತ್ರವಾಗಿ ಕೆಲಸ ಮಾಡಬಾರದು, ಮಗುವಿದ್ದಾಗ ಹೆಣ್ಣು ತನ್ನ ತಂದೆಯ ಆಶ್ರಯದಲ್ಲಿ, ಮದುವೆಯಾದ ಮೇಲೆ ಗಂಡನ ಆಶ್ರಯದಲ್ಲಿ ಹಾಗೂ ವಿಧವೆ ತನ್ನ ಮಗನ ಆಶ್ರಯದಲ್ಲಿಯೇ ಬಾಳಬೇಕು ಇತ್ಯಾದಿ. ಇನ್ನು ಕಲಿಯುಗದಲ್ಲಿ ಇದರ ಸಂಸ್ಕರಿಸಿದ ಆವೃತ್ತಿಯನ್ನು ಕಾಣುತ್ತಿದ್ದೇವೆ, ಕಠಿಣ ಕಾನೂನುಗಳಿದ್ದರೂ ಸಹಾ ಹೆಣ್ಣು ಭ್ರೂಣಹತ್ಯೆಯಿಂದ ಭಾರತದಲ್ಲಿ ಕುಸಿಯುತ್ತಿರುವ ಲಿಂಗ ಅನುಪಾತವೇ ಇದಕ್ಕೆ ಉತ್ತಮ ನಿದರ್ಶನ, 1941 ರಲ್ಲಿ 1000 ಗಂಡು ಮಕ್ಕಳಿಗೆ ಎದುರಾಗಿ 1010 ಹುಡುಗಿಯರಿದ್ದರೆ, 2011ರ ಜನಗಣತಿಯಲ್ಲಿ ಈ ಸಂಖ್ಯೆ 1000 ಹುಡುಗರಿಗೆ ಎದುರಾಗಿ 943 ಹೆಣ್ಣು ಮಕ್ಕಳಾಗಿದೆ.

ನಮ್ಮದು ಹೆಣ್ಣನ್ನು ಪೂಜಿಸುವ ದೇಶ, ಹೆಣ್ಣಿಗೆ ದುರ್ಗೆ, ಚಂಡಿ, ಚಾಮುಂಡಿಯ ದರ್ಜೆ ನೀಡಿ ಆಧಿಶಕ್ತಿಯೆಂದು ಪೂಜಿಸುತ್ತೇವೆ ಹಾಗೂ ಪುರಾಣದಲ್ಲಿಯೇ ಮಹಿಳೆಯರು ಪುರುಷ ಸಮಾನರೆಂದು ಗುರುತಿಸಲಾಗಿತ್ತು, ಆದ್ದರಿಂದಲೇ ಶಿವ ತನ್ನ ದೇಹದ ಅರ್ಧಾಂಗವನ್ನು ಪಾರ್ವತಿಗೆ ನೀಡಿ ಅರ್ಧನಾರೀಶ್ವರನಾಗಿರುತ್ತಾನೆ ಎಂದು ಹಲವರು ವಾದ ಮಂಡಿಸುತ್ತಾರೆ. ಆದರೆ ಶಿವ ಪುರಾಣವನ್ನು ಅಧ್ಯಯನ ಮಾಡಿದಾಗ ತಿಳಿಯುವುದೆನೆಂದರೆ ದುರ್ಗೆ, ಚಂಡಿ, ಚಾಮುಂಡಿಗೆ ಶಕ್ತಿ ಪ್ರಾಪ್ತವಾಗಿರುವುದು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಿಂದ ಹಾಗೂ ದುರ್ಗೆಯ ವಿವಿಧ ಆಯುಧಗಳು, ತ್ರಿಮೂರ್ತಿಗಳು ಹಾಗೂ ಇಂದ್ರ, ಅಗ್ನಿ, ವಾಯು ಹಾಗೂ ಇತರೇ ಪುರುಷ ದೇವತೆಗಳ ಬಳುವಳಿ. ಇನ್ನು ಇಂದು ಶಿವ ದೇಗುಲಗಳಿಗೆದುರಾಗಿ ಎಷ್ಟು ಅರ್ಧನಾರೀಶ್ವರ ದೇವಸ್ಥಾನಗಳಿವೆ ಎಂದು ನೋಡಿದಾಗ ನಮ್ಮ ಸಮಾಜದಲ್ಲಿ ಸಮಾನತೆ ಯಾವ ಹಂತದಲ್ಲಿದೆಯೆಂದು ತಿಳಿದುಬರುತ್ತದೆ. ಇದಕ್ಕೆ ಹೆಚ್ಚಿನ ವಿವರಣೆಯ ಅಗತ್ಯತೆ ಇರುವುದಿಲ್ಲ.

ಈ ಲೇಖನವನ್ನು ಓದುವ ಹಲವರು ಲೇಖಕಿಗೆ ‘ಸ್ತ್ರೀವಾದಿ’  ಎಂಬ ಪಟ್ಟ ಕಟ್ಟಬಹುದು. ಆದರೆ ಸಮಾಜದಲ್ಲಿ ಲಿಂಗತಾರತಮ್ಯವಿರಬಾರದೆಂದು ಪ್ರತಿಪಾದಿಸುವುದು ಸ್ತ್ರೀವಾದವೆ? ಒಂದೇ ವಿದ್ಯಾರ್ಹತೆ, ಪರಿಣಿತಿ ಹಾಗೂ ಅನುಭವ ಹೊಂದಿ ಸಮನಾಂತರ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಇಬ್ಬರನ್ನು ಅವರು ಗಂಡು / ಹೆಣ್ಣು ಎನ್ನುವ ಕಾರಣಕ್ಕೆ ವಿಭಿನ್ನ ರೀತಿಯ ಮಾನದಂಡಗಳನ್ನು ಅಳವಡಿಸಿ ಮೌಲ್ಯಮಾಪನ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಓದುಗರ ವಿವೇಚನೆಗೆ ಬಿಟ್ಟಿದ್ದು.

One Response to "ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸ್ಥಾನ"

  1. Dr.Nagaraj Puttaswamy  October 7, 2016 at 9:06 pm

    It’s very true the the women of the current generation is surging to newer height.
    Hope this improves in bigger volume.
    I am extremely happy to read a beautiful article written by my friend.

    Reply

Leave a Reply

Your email address will not be published.