ಪುರುಷ ಪ್ರಧಾನ ಅಧಿಪತ್ಯಕ್ಕೆ ಕ್ರೌರ್ಯ ಅನಿವಾರ್ಯ

ನಾ ದಿವಾಕರ

ಹಿಂಸಾತ್ಮಕ ಪ್ರವೃತ್ತಿಯನ್ನು ಮುಕ್ತವಾಗಿ ಪ್ರದರ್ಶಿಸುವ ಯಾವುದೇ ಸಾಂಸ್ಕøತಿಕ ವಿದ್ಯಮಾನವನ್ನು ಆಧುನಿಕ ನಾಗರೀಕ ಸಮಾಜ ಒಪ್ಪಲಾಗುವುದಿಲ್ಲ. ಹಿಂಸೆ ದೈಹಿಕವಾಗಿಯೇ ಇರಬೇಕಿಲ್ಲ. ಅಥವಾ ಬೌದ್ಧಿಕ ಕಸರತ್ತುಗಳಿಗೆ ಸೀಮಿತವಾಗಬೇಕಿಲ್ಲ. ಮಾನವ ಇತಿಹಾಸದ ಅಭ್ಯುದಯದ ಮಾರ್ಗವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಚರಿತ್ರೆಯ ಪ್ರತಿಯೊಂದು ಹಂತದಲ್ಲೂ ಜನಸಂಸ್ಕøತಿಯನ್ನು ನಿಯಂತ್ರಿಸುವ ಶಕ್ತಿಗಳು ಹಿಂಸೆಯ ಭೂಮಿಕೆಯ ಮೇಲೆ ನಿರ್ಮಾಣವಾಗಿರುವುದನ್ನು ಕಾಣಬಹುದು. ಸಮಾಜದ ಕೆಳಸ್ತರದ ಜನಸಮುದಾಯಗಳ ಮೇಲೆ ನಿಯಂತ್ರಣ ಸಾಧಿಸಲು ಮೇಲ್ವರ್ಗಗಳು ಸೃಷ್ಟಿಸಿದ ಸಾಮಾಜಿಕ ಪರಿಸರದಲ್ಲಿ ದೈವೀಕ, ಪೈಶಾಚಿಕ ಶಕ್ತಿಗಳು ಸಾಂಸ್ಕøತಿಕ ಸ್ವರೂಪ ಪಡೆದಿರುವುದನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ಮಾನವ ಸಮಾಜ ಎಷ್ಟೇ ಆಧುನಿಕತೆಯತ್ತ ಸಾಗಿದ್ದರೂ ತನ್ನ ಪ್ರಾಚೀನ ಪರಂಪರೆಯಿಂದ ಹೊರತಾಗಿಲ್ಲ ಎನ್ನಲು ಇಂದಿಗೂ ಸಾರ್ವತ್ರಿಕ ಮಾನ್ಯತೆ ಪಡೆದಿರುವ ಶ್ರೇಣೀಕೃತ ಜಾತಿ ವ್ಯವಸ್ಥೆಯ ಅಧಿಪತ್ಯ ರಾಜಕಾರಣವೇ ಸಾಕ್ಷಿ. ಸಾಮಾಜಿಕ ವಲಯದಲ್ಲಿ ಇಡೀ ಸಮಾಜದ ಅಗುಹೋಗುಗಳನ್ನು ತನ್ನ ಇಚ್ಚಾನುಸಾರ ನಿರ್ವಹಿಸುವ ಪಿತೃಪ್ರಧಾನ ವ್ಯವಸ್ಥೆ ಈ ಬೆಳವಣಿಗೆ ಏಕೈಕ ಫಲಾನುಭವಿಯಾಗಿರುವುದೂ ಅಷ್ಟೇ ಸತ್ಯ.

Jallikattuಸಮಾಜ ತಾನು ನಿರ್ಧರಿಸಿದ ಹಾದಿಯಲ್ಲೇ ನಡೆಯಬೇಕು, ಸಾಮಾಜಿಕ ಚೌಕಟ್ಟು ತಾನು ನಿರ್ಮಿಸಿದ ಬೇಲಿಯನ್ನು ಮೀರಿ ದಾಟುವಂತಿಲ್ಲ, ಸಮಾಜದ ಕಟ್ಟುಪಾಡುಗಳು ತನ್ನ ಅಣತಿಯಂತೆಯೇ ರೂಪುಗೊಳ್ಳಬೇಕು ಎಂಬ ದಾಷ್ಟ್ರ್ಯತೆಯಿಂದಲೇ ಆಧುನಿಕ ಮಾನವ ಸಮಾಜದ ಮೇಲೆ ತನ್ನ ಹಿಡಿತ ಸಾಧಿಸಿರುವ ಪಿತೃಪ್ರಧಾನ ವ್ಯವಸ್ಥೆಗೆ ತನ್ನ ಅಧಿಪತ್ಯ ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಸಂಪ್ರದಾಯ, ಪರಂಪರೆ ಮತ್ತು ಕೆಲವು ಸಂದರ್ಭಗಳಲ್ಲಿ ಜನಪದ ಅಥವಾ ಜನ ಸಂಸ್ಕøತಿ ನೆರವಾಗುವುದು ದುರಂತವಾದರೂ ಸತ್ಯ. ಈ ಪಿತೃಪ್ರಧಾನ ವ್ಯವಸ್ಥೆ ಮತ್ತು ಅದರ ಅಧಿಕಾರ ಪೀಠದ ಮೂಲವನ್ನು ರೋಮ್ ಸಾಮ್ರಾಜ್ಯದಲ್ಲಿ ಸ್ಪಷ್ಟವಾಗಿ ಕಾಣಬಹುದು. ಶತಮಾನಗಳ ಆಧುನಿಕ ಮಾನವ ಇತಿಹಾಸದಲ್ಲಿ ಈ ಕ್ರೂರ ಅಧಿಪತ್ಯ ರಾಜಕಾರಣದ ವಿರುದ್ಧ ಸಾವಿರಾರು ಸ್ಪಾರ್ಟಕಸ್‍ಗಳು ಹೋರಾಡಿ ಮಡಿದಿದ್ದರೂ ಬೌದ್ಧಿಕವಾಗಿ ಈ ವಿದ್ಯಮಾನವನ್ನು ಅಳಿಸಿಹಾಕಲು ಸಾಧ್ಯವಾಗಿಲ್ಲ. ಹಾಗಾಗಿಯೇ ಜನಪದದ ಚೌಕಟ್ಟಿನಲ್ಲಿ, ನೆಲ ಸಂಸ್ಕøತಿಯ ರೂಪದಲ್ಲಿ, ಜನಸಂಸ್ಕøತಿಯ ರೂಪದಲ್ಲಿ ದೌರ್ಜನ್ಯ ಮತ್ತು ಕ್ರೌರ್ಯವನ್ನು ಬಿಂಬಿಸುವ , ಗಂಡು ಕಲೆ ಎಂದು ಗುರುತಿಸಲ್ಪಡುವ ಕ್ರೀಡೆಗಳು, ಕಲಾ ಪ್ರಕಾರಗಳು ಇಂದಿಗೂ ಜೀವಂತವಾಗಿವೆ. ಆನೆ ತುಳಿದದ್ದೇ ಹಾದಿ ಎಂಬ ಸೊಕ್ಕಿನ ಪ್ರಜ್ಞೆಯೊಂದಿಗೇ ಆಧುನಿಕತೆಯ ಮೆಟ್ಟಿಲುಗಳನ್ನು ಮೆಟ್ಟಿ ಮುನ್ನಡೆದಿರುವ ಪುರುಷ ಪ್ರಧಾನ ವ್ಯವಸ್ಥೆ ತನ್ನ ಹಾದಿಗೆ ಅಡ್ಡಿಯಾಗುವ ಎಲ್ಲ ಪ್ರತಿರೋಧಗಳನ್ನೂ ದಮನಿಸುತ್ತಲೇ ನಡೆದಿದೆ. ಇದರ ಒಂದು ಸ್ವರೂಪವನ್ನು ಪ್ರಭುತ್ವದ ಶರಣಾಗತಿಯ ಮನೋಭಾವದಲ್ಲಿ ಕಾಣಬಹುದು. ಸುಗ್ರೀವಾಜ್ಞೆ ಎನ್ನುವ ಪದವೇ ಪಿತೃಪ್ರಧಾನ ವ್ಯವಸ್ಥೆಯನ್ನು ಬಿಂಬಿಸುವ ಶಕ್ತಿಯ ಸಂಕೇತವಾಗಿ ಕಾಣಬೇಕಲ್ಲವೇ ? ಸುಗ್ರೀವನ ಆಜ್ಞೆಯ ಆಂತರ್ಯದಲ್ಲಿ ಮಾನವೀಯ ಮೌಲ್ಯಗಳಿಗಿಂತಲೂ ಹೆಚ್ಚಾಗಿ ಪುರುಷತ್ವದ ದರ್ಪ ಸಹಜವಾಗಿಯೇ ವ್ಯಕ್ತವಾಗುತ್ತದೆ. ಹಾಗಾಗಿಯೇ ಪ್ರಜ್ಞಾವಂತ ಸಮಾಜದ ಸಾಕ್ಷಿಪ್ರಜ್ಞೆಯಾಗಿರುವ ನ್ಯಾಯಾಂಗವೂ ಸಹ ಕಡೆಗಣಿಸಲ್ಪಡುತ್ತದೆ.

ಜಲ್ಲಿ ಕಟ್ಟು, ಕಂಬಳ, ಕೋಳಿ ಕಾಳಗ ಈ ಕ್ರೀಡೆಗಳ ಸಾಂಪ್ರದಾಯಿಕ ಸ್ವರೂಪ ನಾಗರೀಕತೆ ಮುನ್ನಡೆದಂತೆಲ್ಲಾ ತನ್ನ ಮೂಲ ಸ್ವರೂಪದ ಪೊರೆಯನ್ನು ಕಳಚುತ್ತಲೇ ಹೊಸ ರೂಪಗಳನ್ನು ಧರಿಸುತ್ತಾ ಬಂದಿರುವುದನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ. ಇಲ್ಲಿ ಪ್ರಾಣಿಗಳ ಬಗ್ಗೆ ಇರುವ ದಯೆ ಮತ್ತು ಅನುಕಂಪ ಹಾಗೂ ಪ್ರಾಣಿ ಹಿಂಸೆಯ ವಿರುದ್ಧ ಇರುವ ನಾಗರಿಕ ಕಾಳಜಿ ಒಂದು ವಿಭಿನ್ನ ಆಯಾಮವಾಗಿ ತೋರುತ್ತದೆ. ಜಲ್ಲಿ ಕಟ್ಟು ಕ್ರೀಡೆ ಮೂಲತಃ ಒಂದು ಪೌರುಷ ಪ್ರಧಾನ ಕ್ರೀಡೆ. ಕೊಬ್ಬಿದ ಗೂಳಿಯನ್ನು ಮಣಿಸುವ ಪುರುಷನೊಬ್ಬ ಕೇವಲ ತನ್ನ ಶೌರ್ಯ ಸಾಹಸವನ್ನು ನಿರೂಪಿಸುವುದೇ ಅಲ್ಲದೆ ಪುರುಷ ಸಮಾಜದ ದರ್ಪ ಮತ್ತು ಸರ್ವಾಧಿಕಾರಿ ಧೋರಣೆಯ ಸಂಕೇತವಾಗಿ ಹೊರಹೊಮ್ಮುತ್ತಾನೆ. ಕೊಬ್ಬಿದ ಗೂಳಿ ತನ್ನ ಪೌರುಷಕ್ಕೆ ಮಣಿಯಲೇ ಬೇಕು ಎಂಬ ಛಲದಿಂದ ಹೋರಾಡುವ ಪಟು ತನ್ನ ಪ್ರಾಣ ಒತ್ತೆ ಇಟ್ಟಾದರೂ ಗೂಳಿಯನ್ನು ಮಣಿಸುತ್ತಾನೆ. ಆದರೆ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಕ ಪ್ರಾಣಿಗೆ ಇದು ಪ್ರಸ್ತುತವೇ ಆಗುವುದಿಲ್ಲ. ತನ್ನೆದುರು ಹೋರಾಟಕ್ಕೆ ನಿಲ್ಲುವ ಮಾನವ ಎಂಬ ಜೀವಿ ತನ್ನ ಜೀವಕ್ಕೆ ಎಲ್ಲಿ ಕಂಟಕಪ್ರಾಯವಾಗುತ್ತಾನೋ ಎಂಬ ಭೀತಿಯಿಂದ ಗೂಳಿ ವರ್ತಿಸುತ್ತದೆ. ತನ್ನ ಸ್ವರಕ್ಷಣೆಗಾಗಿ ಗೂಳಿ ಹೋರಾಡುತ್ತದೆ. ತನ್ನ ಅಧಿಪತ್ಯ ಮತ್ತು “ ಘನತೆಯ ” ರಕ್ಷಣೆಗಾಗಿ ಪುರುಷ ಹೋರಾಡುತ್ತಾನೆ. ಇದನ್ನು ಮನೋರಂಜನೆಯಾಗಿ ನೋಡುವುದಕ್ಕಿಂತಲೂ ಸಮಕಾಲೀನ ಸಂದರ್ಭದ ಜಾತಿ ದೌರ್ಜನ್ಯ, ದಮನಕಾರಿ ವ್ಯವಸ್ಥೆ ಮತ್ತು ಸಾಮಾಜಿಕ-ಸಾಂಸ್ಕøತಿಕ ಕ್ರೌರ್ಯದ ನೆಲೆಯಲ್ಲಿ ನೋಡಬೇಕಿದೆ.

kambalaಸಮಕಾಲೀನ ಸಾಮಾಜಿಕ-ರಾಜಕೀಯ ಮತ್ತು ಸಾಂಸ್ಕøತಿಕ ಪರಿಸರದಲ್ಲಿ ಆಧುನಿಕ ಮಾನವ ಸಮಾಜ ಎದುರಿಸುತ್ತಿರುವ ಮೂಲ ಸಮಸ್ಯೆಗಳೆಂದರೆ ಆಳ್ವಿಕರು ಮತ್ತು ಆಳಲ್ಪಡುವವರ ನಡುವೆ ಇರುವ ಸಂಘರ್ಷ, ಆಳುವ ವರ್ಗಗಳ ಪ್ರಭುತ್ವ ಪ್ರೇರಿತ ದಬ್ಬಾಳಿಕೆ ಮತ್ತು ಅವಕಾಶವಂಚಿತ ಜನಸಮುದಾಯಗಳ ಶೋಷಣೆ. ಈ ಶೋಷಣೆಯ ವಿರುದ್ಧ ದನಿ ಎತ್ತುವ ಪ್ರತಿರೋಧದ ದನಿಗಳನ್ನು ದಮನಿಸುವ ಉನ್ಮತ್ತ ಧೋರಣೆ. ಪ್ರಭುತ್ವದ ಈ ಧೋರಣೆಯನ್ನು ಸಮರ್ಥಿಸಲು ಮತ್ತು ವ್ಯವಸ್ಥೆಯ ನಿಯಂತ್ರಣಾಧಿಕಾರವನ್ನು ರಕ್ಷಿಸಲು ವ್ಯವಸ್ಥೆಯ ವಿರುದ್ಧ ವ್ಯಕ್ತವಾಗುವ ಪ್ರತಿಯೊಂದು ಅಭಿವ್ಯಕ್ತಿಯನ್ನೂ ದಮನಿಸುವ ವ್ಯವಸ್ಥಿತ ಹುನ್ನಾರವನ್ನು ಭಾರತದ ಸಂದರ್ಭದಲ್ಲಿ ಕಾಣುವಂತೆಯೇ ಜಾಗತಿಕ ಸಂದರ್ಭದಲ್ಲೂ ಕಾಣಬಹುದು. ಈ ದರ್ಪ ಮತ್ತು ದಬ್ಬಾಳಿಕೆಯನ್ನು ಸಾಂಕೇತಿಕವಾಗಿ ನಿರೂಪಿಸಲು ಪುರುಷ ಪ್ರಧಾನ ವ್ಯವಸ್ಥೆ ಸದಾ ಹಂಬಲಿಸುತ್ತಿರುತ್ತದೆ. ಮಹಿಳೆಯರ ಸಾಮಾಜಿಕ-ಸಾಂಸ್ಕøತಿಕ ಸ್ಥಾನಮಾನಗಳನ್ನು ತಾವು ನಿರ್ಮಿಸಿದ ಭದ್ರಕೋಟೆಯೊಳಗೇ ಬಂಧಿಸುವ ಪಿತೃಪ್ರಧಾನ ವ್ಯವಸ್ಥೆ ಈ ಹಂಬಲಕ್ಕೆ ಸ್ಪಂದಿಸಲು ಜಲ್ಲಿಕಟ್ಟು ಕ್ರೀಡೆಯನ್ನು ಶಕ್ತಿಯ ಸಂಕೇತವಾಗಿ ಬಳಸುತ್ತದೆ.

ಜಲ್ಲಿ ಕಟ್ಟು ಕ್ರೀಡೆಯಲ್ಲಿ ಮೂಕ ಪ್ರಾಣಿಯೊಂದರ ಅವ್ಯಕ್ತ ವೇದನೆ, ನೋವು ಮತ್ತು ಹತಾಶತೆಯನ್ನು ಮನರಂಜನೆಯ ಸರಕಿನಂತೆ ಆಸ್ವಾದಿಸುವ ನಾಗರಿಕ ಸಮಾಜ ಅದೇ ವೇಳೆ ಪುರುಷ ಸಮಾಜದ ಪೌರುಷ ಮತ್ತು ಅಧಿಪತ್ಯವನ್ನೂ ಪಲ್ಲಕ್ಕಿಯಲ್ಲಿ ಹೊತ್ತು ಮೆರೆಸುತ್ತದೆ. ತನ್ನ ಪೌರುಷ ಮತ್ತು ಶಕ್ತಿ ಸಾಮಥ್ರ್ಯವನ್ನು ಪ್ರಶ್ನಿಸುವ ಅಥವಾ ಎದುರಿಸಿ ನಿಲ್ಲುವ ಎಂತಹುದೇ ಪ್ರತಿರೋಧದ ಶಕ್ತಿಯನ್ನು ನಿಯಂತ್ರಿಸಬಲ್ಲೆ ಎಂಬ ಅಹಮಿಕೆಯ ಪರಾಕಾಷ್ಠೆಯನ್ನು ಗೂಳಿ ಕಾಳಗದ ವಿಜಯಿಯಲ್ಲಿ ಕಾಣಬಹುದು. ಇಲ್ಲಿ ಮತ್ತೊಂದು ಸಾಂಸ್ಕøತಿಕ ದುರಂತವನ್ನು ಗಮನಿಸಲೇಬೇಕು. ಜಲ್ಲಿಕಟ್ಟು ಕ್ರೀಡೆಯಲ್ಲಿ ಗೂಳಿಯೊಡನೆ ಸೆಣಸಾಡಿ ಮೃತಪಟ್ಟವರಿರುತ್ತಾರೆ, ಗಾಯಗೊಂಡವರು ಇರುತ್ತಾರೆ, ಕಾಳಗದಿಂದ ಹಿಮ್ಮೆಟ್ಟುವವರೂ ಇರುತ್ತಾರೆ. ಆದರೂ ಗೂಳಿ ವಿಜಯಿ ಆಗುವುದೇ ಇಲ್ಲ. ಅಂತಿಮವಾಗಿ ಸೆಣಸಾಡಿ ಗೆಲ್ಲುವ ಒಬ್ಬ ಧೀರ ಪುರುಷತ್ವದ ಸಂಕೇತವಾಗಿ ಹೊರಹೊಮ್ಮುತ್ತಾನೆ. ಜಾತಿ ವ್ಯವಸ್ಥೆಯ ಕ್ರೌರ್ಯ ಮತ್ತು ಊಳಿಗಮಾನ್ಯ ವ್ಯವಸ್ಥೆಯ ದಬ್ಬಾಳಿಕೆಯ ಒಂದು ಸಾಂಸ್ಕøತಿಕ ಚಿತ್ರಣವನ್ನು ನಾವಿಲ್ಲಿ ಗಮನಿಸದೆ ಇರಲಾಗದು.

“ ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ ” ಎಂಬ ಪುರುಷ ದರ್ಪದ ಘೋಷವಾಕ್ಯ ದೇಶದ ಸಾಂಸ್ಕøತಿಕ ಪರಿಸರವನ್ನು ಆಕ್ರಮಿಸಿರುವ ಸಂದರ್ಭದಲ್ಲಿ ಜಲ್ಲಿಕಟ್ಟು ದಮನಿತ ಜನಸಮುದಾಯಗಳಿಗೆ, ಮಹಿಳಾ ಸಂವೇದನೆಯ ಪ್ರತಿಪಾದಕರಿಗೆ ಎಚ್ಚರಿಕೆಯ ಸಂದೇಶವಾಗಬೇಕೇ ಹೊರತು, ಸಾಂಸ್ಕøತಿಕ ಪರಂಪರೆ ಮತ್ತು ಜನಪದ ಸಂಸ್ಕøತಿಯ ನೆಪದಲ್ಲಿ ಹೆಮ್ಮೆಯ ಸಂಕೇತವಾಗಕೂಡದು.

Leave a Reply

Your email address will not be published.