ಪಾತಾಳ ಗಂಗೆ ಹಾಗೂ ನೀರ ನೆಮ್ಮದಿ

ಡಾ.| ರಾಜೇಗೌಡ ಹೊಸಹಳ್ಳಿ

‘ಪಾತಾಳಗಂಗೆ ಯೋಜನೆಯನ್ನು ಕೂಡಲೇ ಕೈಬಿಡಬೇಕು’ ಎಂದು ಆಗ್ರಹಿಸುತ್ತಿರುವ ಎಸ್.ಆರ್. ಹಿರೇಮಠ ಅವರಷರತ್ತಿನಮಾತು (ಪ್ರ.ವಾ.23 ಮೇ) ನಾಗೇಶಹೆಗಡೆಯವರು ಹಲವರ ಅಭಿಪ್ರಾಯಗಳಲ್ಲಿ ಸರಣಿಯಾಗಿ ಒತ್ತಾಯಿಸುತ್ತಿರುವ ವೈಜ್ಞಾನಿಕ ನಿರೂಪಣೆಗಳೇ ಆಗಿವೆ. ಸರ್ಕಾರಕ್ಕೆ ಇನ್ನೂ ಹಠ ಸಲ್ಲದು. ಸಮಾಲೋಚನೆಗೆ ಕರೆದ ಸಭೆಯಲ್ಲಿ ಒಪ್ಪಂದ ನಿರತ ವಾಟರ್‍ಕ್ವೆಸ್ಟ್ ಕಂಪೆನಿಯ ಪ್ರತಿನಿಧಿಗಳಿಲ್ಲದೆ ಸರ್ಕಾರಿ ಅಧಿಕಾರಿಗಳು ಕಂಪೆನಿ ಪರ ವಹಿಸುವುದು, ಸಚಿವರು ಬಹುಶ್ರುತ ಭಾರತ ವಿಜ್ಞಾನಿ ಡಾ. ರಘುನಾಥ್ ಮಶೇಲ್ಕರ್ ಶಿಫಾರಸು ಇರುವುದನ್ನು ಸೂಚಿಸುವುದು ಅನುಮಾನಕ್ಕೆಡೆ ಮಾಡುತ್ತದೆ. ಯಾಕೆಂದರೆ ಆ ವಿಜ್ಞಾನಿ ಎರಡು ಕೃತಿ ಚೌರ್ಯ ಆಪಾದನೆಗೆ ಸಿಕ್ಕಿಬಿದ್ದವರಂತೆ. ದಿನ ಬೆಳಗಾದರೆ ಯೋಜನೆಗಳನ್ನು ಹುಡುಕಿ ಅಪಾರ ಹಣ ಖರ್ಚು ಮಾಡಿ ಅನಂತರ ಪರಿಸರ ನ್ಯಾಯಾಲಯವನ್ನು ಒತ್ತಡ ತಂತ್ರಕ್ಕೆ ಸಿಲುಕಿಸುವುದು ಕಾರ್ಯಾಂಗ, ಶಾಸಕಾಂಗಗಳ ತಂತ್ರ. ಅದು ‘ಪಾತಾಳಗಂಗೆ ಯೋಜನೆ ಇರಬಹುದು, ಹುಬ್ಬಳ್ಳಿ-ಅಂಕೋಲಾ ರೈಲು ರಸ್ತೆ ಇರಬಹುದು, ರಾಷ್ಟ್ರೀಯ ಹೆದ್ದಾರಿಗಳಿರಬಹುದು ಎಲ್ಲವೂ ಅಷ್ಟೆ.

ಪಾತಾಳಗಂಗೆಯ ಕನ್ನಕ್ಕೆ ಜಲ ವಿಜ್ಞಾನಿಗಳು ಪರಿಸರ ವಿಜ್ಞಾನಿಗಳು ಬೆದರಿದ್ದಾರೆ. ಸರ್ಕಾರ ಸ್ವಾರ್ಥ ಇಲ್ಲವೆ ಪರಿಸರ ಅರಿಯದ ಪೆದ್ದತನದ ಪತನದಲ್ಲಿದೆ. ಅಕ್ವೀಪರ್ ಎನ್ನುವುದು ತಾಂತ್ರಿಕ ಅರ್ಥದಲ್ಲಿ ಪಾತಾಳದಲ್ಲಿನ ನೀರಬಾನಿ. ಅದೊಂದು ರೀತಿಯಲ್ಲಿ ಕಾಶ್ಮೀರದ ದಲ್ ಸರೋವರ ಇಲ್ಲವೇ ಲೇಲಡಾಕ್ ನೆಲದ ಮೇಲಿನ ಬಹುದೊಡ್ಡ ಸರೋವರದ ನೀರಬಾನಿಗಳಂತೆ. ಭೂಮಿಯು ಮಹಾಸ್ಫೋಟದಲ್ಲಿ ನಿಗದಿಯಾಗಿ ತಿರುಗುತ್ತಿರುವ ಬುಗುರಿ. ಚಾಟಿ ಸ್ಫೋಟಿಸಿದ ಗಿರಿಶಂಕರನ ಕೈಲಿದೆ. ಮೇಲುನೀರು ಅಂತರಗಂಗೆಯರೆಲ್ಲ ಈಗ ಮನುಷ್ಯ ಮುಕ್ಕಿ ಬರಿದಾದ ಕೊಡ. ಇಡೀ ಭೂಮಂಡಲ ಕಾದ ಕೆಂಡದ ಮೇಲಿರುವ ಹೆಂಚು. ಜಗದ ಮೇಲಿರುವ ಮರುಭೂಮಿಗಳು ಅಂದೊಮ್ಮೆ ನಿತ್ಯ ಹರಿದ್ವರ್ಣದ ಅಡವಿಗಳಾಗಿದ್ದವು. ಅದನ್ನೆಲ್ಲ ಉರಿವ ಸೂರ್ಯನಿಗೊಡ್ಡಿದ ಮಾನವ ಕುಲವು ಅಳಿದುಳಿದ ಆಫ್ರಿಕಾ ಭರತಖಂಡಗಳಂತಾವನ್ನು ಸಹಾ ಮರುಭೂಮಿಕರಣಕೊಡುತ್ತಿದೆ. ಈಗ ಪಾತಾಳ ಗಂಗೆಯನ್ನು ಸಹಾ ಕೆದಕುತ್ತಾ ಜಗತ್ ಪ್ರಳಯಕ್ಕೆ ತುರ್ತಾಗಿ ಸಾಗುತ್ತಿದೆ.

ಯಾರೋ ಹೇಳಿದರು ಯಾರೋ ಕೇಳಿದರು. ಅದೇ ಈಗ ಬಗೆಯಲು ಹೊರಟಿರುವ ಪಾತಾಳಗಂಗೆಯ ಲೂಟಿ. ಈಗಾಗಲೇ ಅಂತರಗಂಗೆಯ ಲೂಟಿಯನ್ನು ಕೋಲಾರದಂತಹ ಕಡೆ ಮಾಡುತ್ತಾ ರೈತಾಪಿ ದುಶ್ಯಾಸನನು ದ್ರೌಪದಿ ಸೀರೆ ಎಳೆದು ಸುಸ್ತಾದಂತೆ ಕುಳಿತಿದೆ. ಇನ್ನೂ ಆಳಕ್ಕೆ ಡೀಸೆಲ್ಲು ಎಳೆವ ಕೊಳವೆ ಮಾದರಿಯಲ್ಲಿ ಎಳೆದರೆ ಪಾತಾಳಗಂಗೆ ಸಿಗುತ್ತಾಳಂತೆ. ಆಕೆ ಮೇಲೆ ಬಂದು ಎಲ್ಲರ ಮನೆ ಬಾನಿ ತುಂಬಿಸುತ್ತಾಳಂತೆ. ಅಂತರಂತರಕೆ ಅನೇಕ ಭೂಜಲ ಪದರಗಳಿರುತ್ತವೆ ಎಂದು ಜಲತಜ್ಞರು ಹೇಳುತ್ತಾರೆ. ಭೂಮಿ ಮೇಲಿನದು ಮನುಷ್ಯನಿಗೆ ಪ್ರಾಣಿ ಪಕ್ಷಿಗಳಿಗೆ ಅದರಡಿಯದು ಗಿಡಮರಗಳಿಗೆ ಅದರಡಿಯದು ಮರುಭೂಮಿಕರಣದಲ್ಲಿ ಅಳಿದುಳಿದ ಜೀವಗಳಿಗೆ ದಕ್ಕಬೇಕಾದ್ದು ನಿಸರ್ಗ ನಿಯಮ.
ಇದ್ದುದರಲ್ಲಿ ಹೆಚ್.ಕೆ. ಪಾಟೀಲರು, ಕಾಗೋಡು ತಿಮ್ಮಪ್ಪನವರು ಜನರ ಬಗ್ಗೆ ಕಾಳಜಿವುಳ್ಳವರು. ಪಾಟೀಲರು ಪಾತಾಳಗಂಗೆಯ ಬಿಸಿನೀರನ್ನು ಮೇಲೆ ತಂದು ಆರಿಸಿ ಜನರಿಗೆ ಕುಡಿಸುವ ಪ್ರಾಯೋಗಿಕ ಅನುಷ್ಠಾನದಲ್ಲಿದ್ದಾರೆ. ಕಾಗೋಡು ಅವರಂತೂ ಅಡವಿ ಹಾಗೂ ಭೂಮಂಡಲವಿರುವುದೇ ಮಾನವನಿಗೆ ಅವನೇ ಅದರ ಒಡೆಯ; ಪ್ರಾಣಿಪಕ್ಷಿಗಳಿಗೆ ಬದುಕೆಂಬುದೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ‘ಅರಣ್ಯ ಇಲಾಖೆನೆಟ್ಟ ಗಿಡಗಳನ್ನೆಲ್ಲ ಕಡಿದು ಹಾಕಿ’ ಎಂದುಬಿಡುತ್ತಾರೆ. ಇದನ್ನು ದೊಡ್ಡದುಮಾಡಬೇಡಿರೆಂದುಮಾಧ್ಯಮದವರಮುಂದೆಹುಸಿನಗುತ್ತಾರೆ.

ಇದು ಪರಿಸರದೊಳಗೆ ಬದುಕಬೇಕಾದ ಕಾಳಿದಾಸ ಹೇಳುವ ‘ಸೋದರಸ್ನೇಹ’ವನ್ನು ಲಘುವಾಗಿ ಹುಸಿನಗೆಬೀರಿ ತೋರಿಸುವ ಆತಂಕದ್ದು. ಇಡೀ ಜನಸಮೂಹ ಈ ಎಪ್ಪತ್ತು ವರ್ಷ ಮಾಡಿದ ಅನಾಚಾರಕ್ಕೆ ಪಶ್ಚಾತ್ತಾಪ ಪಡುತ್ತಿದೆ. ಮರಳಿ ಪರಂಪರೆಯ ಜ್ಷಾನಕ್ಕೆ ಕೈ ಜೋಡಿಸುತ್ತಿದೆ. ಪಾನಿ ಪೌಂಡೇಶನ್ ಅಮೀರ್‍ಖಾನ್ ಕಿರಣರಾವ್ ದಂಪತಿಗಳು ಇದಕ್ಕೊಂದು ಮಾದರಿ. ಪ್ರತಿದಿನ ದೇಶದ ತುಂಬಾ ಅಲ್ಲಲ್ಲಿ ಸಾಧಕರು ಆಕಾಶಗಂಗೆ ಹನಿಯುವುದನ್ನೆ ಕಾಯುತ್ತಾ ಕೆರೆಕಟ್ಟೆ ಕಲ್ಯಾಣಿ ಬಾವಿ ಮುಂತಾದವನ್ನೆಲ್ಲ ತಳಸೋಸಿ ನೀರು ಆಂತು ನಿಲ್ಲಿಸಲು ಅನೇಕ ಜೀವಗಳು ಬಿಸಿಲಲ್ಲಿ ಗುದ್ದಲಿ ಪಿಕಾಸಿ ಹಿಡಿದು ನಿಂತಿವೆ. ಮುಚ್ಚಿದ ಮಣ್ಣು ಎತ್ತಿ ನೀರಬಾನಿಗಳನ್ನು ಮರುಸೃಷ್ಟಿಮಾಡುತ್ತಿರುವುದನ್ನು ಶ್ರೀಪಡ್ರೆ ಅಂತವರೆಲ್ಲ ಪತ್ರಿಕೆಗಳಲ್ಲಿ ಎತ್ತಿ ತೋರಿಸುತ್ತಿದ್ದಾರೆ. ಮಾಧ್ಯಮಗಳು ಬಿಸಿಲ ದಾವಿಗೆ ಬೊಗಸೆ ನೀರು ನೀಡಲು ಸಜ್ಜಾಗಿವೆ. ರಾಜಕಾರಣಿಗಳು ಮತ ಪೆಟ್ಟಿಗೆಗಳು ಮಾತ್ರ ಕಾಪಾಡಬಲ್ಲವು ಎಂಬುದನ್ನು ಮರೆತು; ಆ ಪೆಟ್ಟಿಗೆಗಳಿಗೆ ಜೀವವೈವಿಧ್ಯಗಳ ಬೆರಳ ಸ್ಪರ್ಷಗಳು ಬೇಕು ಎಂಬುದನ್ನು ಅರಿತರೆ ಮಾತ್ರ ದೇಶಕ್ಕೆ ಕ್ಷೇಮ. ಜನಜಾಗೃತಿ ಪ್ರಾರಂಭವಾಗಿದೆ. ಇದು ಆದ ಪ್ರಮಾದವನ್ನು ತಿದ್ದಿಕೊಳ್ಳುವ ಪ್ರಜಾತಂತ್ರದ ವಿಧಾನ ಈ ಕಾಯಕಲ್ಪಕ್ಕೆ ಹಸಿರು ಕ್ರಾಂತಿಯೇ ಮೇಲು ಎಂಬುದನ್ನು ಮರೆತು ಈಗ ಕೃಷಿ ವಿ.ವಿ.ಗಳೂ ಹೊರಳಿರುವುದು ಸರಿಯಾದ ಮಾರ್ಗ.

‘ಮನಪರಿವರ್ತನೆ ಇಲ್ಲದ ಶಾಸನ ಸತ್ತ ಕಾಗದ ಅಷ್ಟೆ’ ಈ ಮಾತು ಗಾಂಧಿ ತಿರುಗಾಟದ ಅನುಭವದ್ದು. ಅದು‘ಧರ್ಮದರ್ಶಿಗೆ ಜನತೆಯಲ್ಲದೆ ಬೇರಾವ ವಾರಸುದಾರರೂ ಇಲ್ಲ’ ಎಂಬ ಮಾತಿನ ಸರ್ಕಾರದ ಆಚೆಯ ಜನರ ಒಟ್ಟುಗೂಡುವಿಕೆಯ ಧರ್ಮದರ್ಶಿತನದ್ದು. ಅದು ಜನಸಮೂಹದಲ್ಲಿ ಪ್ರಾರಂಭವಾಗಿದೆ. ಇದು ಕಾಲಚಕ್ರದ ಉರುಳು. ಗಾಂಧೀಜಿ ಆಧುನಿಕತೆಯ ರಾಕ್ಷಸನಿಗೆಬೆದರಿದ್ದರು. ಬ್ರಿಟನ್-ಅಮೆರಿಕಾ ಜೀವನ ಶೈಲಿಗೆ ಭಾರತದಲ್ಲಿ ಭವಿಷ್ಯವಿಲ್ಲವೆಂದು ನುಡಿದಿದ್ದರು. ಯಾರೂ ಕೇಳಿಸಿಕೊಳ್ಳಲಿಲ್ಲ. ಬಡಭಾರತ ನಡುರಾತ್ರಿಯಲ್ಲಿ ಕೊಡೆಹಿಡಿಯಿತು. ಬಿರುಬಿಸಿಲಲ್ಲಿ ನೆರಳಿಲ್ಲದಂತೆ ಮಾಡಿಕೊಂಡಿತು. ಇದೆಲ್ಲದರ ಪರದಾಟವೇ ಹೆಚ್.ಕೆ. ಪಾಟೀಲರ ಆಲಾಪನೆ. ಕಾಗೋಡು ಅವರ ಒರಟುತನ. ಇವರುಗಳು ಭಾರತ ರಾಜಕಾರಣದ ರೂಪಕಗಳು. ‘ಪ್ರತಿಯೊಬ್ಬನಾಗರೀಕನಿಗೂ ಒಂದೊಂದು ಕಾರುಸಿಗುವಂತೆ ಏರ್ಪಡಿಸುವುದು ಅಮೆರಿಕೆ ಗುರಿ. ನನಗಲ್ಲ ಅದು’ ಎಂಬ ಗಾಂಧಿಮಾತಿನಲ್ಲಿ ರಾಜ-ರಂಕ ಕುರಿತು ಗಾಂಧಿ ಹೇಳುವ ಸೂಕ್ಷ್ಮಗಳಿವೆ. ಅದನ್ನು ಕಾಂಗ್ರೆಸು ಅರ್ಥಮಾಡಿಕೊಳ್ಳಲಿಲ್ಲ. ಸಮಾಜವಾದವೂ ಅರ್ಥಮಾಡಿಕೊಳ್ಳಲಿಲ್ಲ. ಈಗಿನ ಕೇಂದ್ರವೂ ಅರ್ಥಮಾಡಿಕೊಳ್ಳುತ್ತಿಲ್ಲ. ಮತ ನೀಡುವ ಕೈಗಳು ಅರಿಯಬೇಕು, ಅದು ದುಡಿಮೆಗಾರ ಎಂಬ ತತ್ವ ಕುಳಿತುಣ್ಣುವುದರ ವಿರೋಧಿ. ಅಂತರಗಂಗೆ ಪಾತಾಳಗಂಗೆ ಬಗೆವುದು ವಿರೋಧ ಮಾದರಿ. ಅದೇನಿದ್ದರೂ ಆಕಾಶಗಂಗೆಯನ್ನು ಧ್ಯಾನಿಸುವ ಆ ಧ್ಯಾನದಲ್ಲಿ ಮಡಿಲು ತುಂಬಿಸಿಕೊಳ್ಳುವ ಗಂಗೆಗೌರಿಯರ ವ್ರತವಾಗಬೇಕು.

ಡಾ. ರಾಜೇಗೌಡ ಹೊಸಹಳ್ಳಿ
413, ಟೀಚರ್ಸ್ ಕಾಲನಿ, ನಾಗರಭಾವಿ, ಬೆಂಗಳೂರು – 72ಮೊಬೈಲ್ : 9980066070

Leave a Reply

Your email address will not be published.