ಪನಾಮಾ ಪೇಪರ್ಸ್ ಲೀಕ್ ಅಲಿಯಾಸ್ ಪಂಗನಾಮ ಪೇಪರ್ಸ್!

-ದೊಡ್ಡಿಪಾಳ್ಯ ನರಸಿಂಹಮೂರ್ತಿ

ಪಂಗನಾಮ ಪೇಪರ್ಸ್!
ಕಳೆದ ಏಪ್ರಿಲ್ ಮೊದಲ ವಾರದಲ್ಲಿ ‘ಪನಾಮಾ ಪೇಪರ್ಸ್ ಲೀಕ್’ ಎಂಬ ರೋಚಕವಾದ ಸುದ್ದಿಯೊಂದು ಸ್ಫೋಟಗೊಂಡಿತು. ಕ್ಷಣಾರ್ಧದಲ್ಲಿ ಈ ಸುದ್ದಿ ಇಡೀ ಜಗತ್ತಿನಾದ್ಯಂತ ಹರಡಿ ಎಲ್ಲೆಡೆ ಸಂಚಲನ ಶುರುವಾಯ್ತು. ಯಾಕೆಂದರೆ ಆ ಪನಾಮಾ ಪೇಪರ್ಸ್‍ನಲ್ಲಿ ಅಡಗಿದ್ದ ರಹಸ್ಯ ಮಾಹಿತಿಗಳೇ ಅಂಥಾದ್ದು. ವಿವಿಧ ದೇಶಗಳ ಪ್ರಭಾವಿ ವ್ಯಕ್ತಿಗಳು, ಶ್ರೀಮಂತರು ಹಾಗೂ ಕಂಪನಿಗಳು ತಮ್ಮ ದಲ್ಲಾಳಿಗಳ ಮೂಲಕ ತೆರಿಗೆ ಸ್ವರ್ಗಗಳೆಂದು ಕರೆಯಲಾಗುವ ದೇಶಗಳಲ್ಲಿ ಬೇನಾಮಿ ಕಂಪನಿಗಳನ್ನು ಆರಂಭಿಸಿ, ಬಿಲಿಯಗಟ್ಟಳೆ ಡಾಲರ್ ಹಣವನ್ನು ಅಕ್ರಮವಾಗಿ ತೊಡಗಿಸಿರುವುದು ಬಟಾಬಯಲಾಯ್ತು.

ಈ ಪಟ್ಟಿಯಲ್ಲಿ ಭಾರತದ ಬಾಲಿವುಡ್ ತಾರೆಯರಾದ ಅಮಿತಾಬ್ ಬಚ್ಚನ್, ಐಶ್ವರ್ಯ ರೈ, ಪ್ರಧಾನಿ ಮೋದಿಯ ಆಪ್ತ ಮಿತ್ರ ಗೌತಮ್ ಅದಾನಿಯ ಅಣ್ಣ ವಿನೋದ್ ಅದಾನಿ, ಭೂಗತ ಪಾತಕಿ ದಾವೂದ್‍ನ ಸಹಚರ ಇಕ್ಬಾಲ್ ಮಿರ್ಚಿ, ಹಲವಾರು ಕಂಪನಿಗಳ ಮುಖಂಡರು, ರಿಯಲ್ ಎಸ್ಟೇಟ್ ಧಣಿಗಳು ಹಾಗೂ ಕೆಲವು ರಾಜಕಾರಣಿಗಳ ಅಕ್ರಮ ಧಂಧೆಗಳೂ ಬಯಲಾದವು. ಹಾಗೆ ರಷ್ಯಾದ ಜನಪ್ರಿಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಐಸ್‍ಲ್ಯಾಂಡ್‍ನ ಅಧ್ಯಕ್ಷ, ಯುನೈಟೆಡ್ ಕಿಂಗ್‍ಡಮ್‍ನ ಪ್ರಧಾನಿ ಡೇವಿಡ್ ಕೆಮರೂನ್ ಹೀಗೆ ಹತ್ತಾರು ದೇಶಗಳ ಪ್ರಮುಖರ ಹೆಸರುಗಳು ಪ್ರಕಟಗೊಂಡು ಹಠಾತ್ತನೆ ಆಯಾ ಕೋಲಾಹಲ ಶುರುವಾಯ್ತು.
ಈ ಗಣ್ಯ ವ್ಯಕ್ತಿಗಳು ಹೀಗೆ ರಹಸ್ಯವಾಗಿ ವಿದೇಶಗಳಲ್ಲಿ ಹಣ ತೊಡಗಿಸಿದ್ದಾದರೂ ಯಾತಕ್ಕೆ? ಒಂದೋ ತಮ್ಮ ದೇಶಕ್ಕೆ ಸಲ್ಲಿಸಬೇಕಿದ್ದ ತೆರಿಗೆಯನ್ನು ಲಪಟಾಯಿಸಲಿಕ್ಕಾಗಿ! ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ಮಾದಕ ದ್ರವ್ಯ ಕಳ್ಳಸಾಗಣೆ, ಆಯುಧ ಮಾರಾಟದ ಅಕ್ರಮ ಜಾಲ ಹೀಗೇ ನಾನಾ ಅಕ್ರಮ ಮಾರ್ಗಗಳಿಂದ ಗಳಿಸಿದ ಕಪ್ಪುಹಣವನ್ನು ತಮ್ಮ ಗುರುತು ಮರೆಮಾಚಿ, ವಿದೇಶಗಳಲ್ಲಿ ತೊಡಗಿಸಿ ಮತ್ತೆ ದುರ್ಲಾಭ ಮಾಡಿಕೊಳ್ಳಲಿಕ್ಕಾಗಿ!!

Aishwarya Rai 4ಭಾರತದ ಮಾಧ್ಯಮಗಳಲ್ಲಿ ಪನಾಮಾ ಪೇಪರ್ಸ್ ಹಗರಣದ ಸುದ್ದಿ ತಣ್ಣಗೆ ಹಾಗೇ ಮರೆಯಾಗಿಬಿಟ್ಟಿದೆ. ಸರಿಯಾಗಿ ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪಿಯುಸಿ ಪ್ರಶ್ನೆ ಪತ್ರಿಕೆ ಕೂಡ ಸೋರಿಕೆಯಾಗಿ, ಮಕ್ಕಳು ಮತ್ತು ಪೋಷಕರು ಆತಂಕದಲ್ಲಿದ್ದ ಸಂದರ್ಭವದು. ಹೀಗಾಗಿ ಕಾರ್ಪೊರೇಟ್ ಹಿಡಿತದಲ್ಲಿರುವ ಎಲ್ಲ ಚಾನೆಲ್‍ಗಳೂ, ಪತ್ರಿಕೆಗಳೂ ಪನಾಮಾ ಪೇಪರ್ಸ್ ಸೋರಿಕೆಯ ಸುದ್ದಿಯನ್ನು ಬದಿಗೆ ಸರಿಸಿ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ 10 ಲಕ್ಷ ಗಳಿಸಿದ ಕಿಂಗ್‍ಪಿನ್‍ನ ಹಿಂದೆ ಓಟಕಿತ್ತವು. ವಾರಗಟ್ಟಳೆ ತಲೆ ಚಿಟ್ಟುಹಿಡಿಯುವಷ್ಟು ಸುದ್ದಿ ಪ್ರಸಾರ ಮಾಡಿದವು. ಅದೇ ಸಂದರ್ಭದಲ್ಲಿ ಲಕ್ಷಾಂತರ ಕೋಟಿಗಳಷ್ಟು ಹಣವನ್ನು ಲಪಟಾಯಿಸಿ ವಿದೇಶಗಳಿಗೆ ಸಾಗಿಸಿದ್ದನ್ನು ಬಹಿರಂಗಪಡಿಸುವ ಪನಾಮಾ ಪೇಪರ್ಸ್ ಸುದ್ದಿಯನ್ನು ವ್ಯವಸ್ಥಿತವಾಗಿ ಸಮಾಧಿ ಮಾಡಿಬಿಟ್ಟವು.

ಈ ಪನಾಮಾ ಪೇಪರ್ಸ್‍ಗೆ ಎಷ್ಟೊಂದು ಮಹತ್ವ ಇದೆಯೆಂದರೆ, ಈ ಸುದಿಯನ್ನ್ದು ಹಾಗೆ ಒಮ್ಮೆ ಓದಿ ಮರೆತುಬಿಡುವಂಥದ್ದಲ್ಲ. ಇದುವರೆಗೆ ಇಡೀ ಜಗತ್ತಿನಲ್ಲಿ ಬಯಲಾಗಿರುವ ಹಗರಣಗಳ ಇತಿಹಾಸದಲ್ಲೇ ಅತ್ಯಂತ ವಿಶಿಷ್ಠವಾದದ್ದು; ಭಾರೀ ಅಗಾಧವಾದದ್ದು. ಅಷ್ಟು ಮಾತ್ರವಲ್ಲ; ಇದು ನಮ್ಮ ನಿಮ್ಮೆಲ್ಲರ ಬದುಕಿನ ಮೇಲೆ ಗಂಭೀರ ದುಷ್ಪರಿಣಾಮ ಬೀರುವಂಥದ್ದು. ಆದರಿಂದ ಇದನ್ನು ಸ್ವಲ್ಪ ವಿವರವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಬಂಡವಾಳ ಬಯಲಾದದ್ದು ಹೇಗೆ?
ಇಲ್ಲಿಗೆ ಸುಮಾರು ಒಂದು ವರ್ಷದ ಹಿಂದೆ ಜರ್ಮನಿಯ ‘ಸುಡ್‍ಡೂಯಿಷ್ ಜೈತುಂಗ್’ ಎಂಬ ಪತ್ರಿಕಾ ಕಚೇರಿಗೆ ಜಾನ್ ಡೊ ಎಂಬ ಹೆಸರಿನಲ್ಲಿ ಒಂದು ಕುತೂಹಲಕಾರಿ ಸಂದೇಶ ರವಾನೆಯಾಯ್ತು.
ಅನಾಮಿಕ :- “ಹಲೋ, ನಾನು ಜಾನ್ ಡೋ, ದಾಖಲೆಗಳನ್ನು ಪಡೆದುಕೊಳ್ಳಲು ನಿಮಗೆ ಆಸಕ್ತಿಯಿದೆಯೆ?”
ಜೈತುಂಗ್ ಪತ್ರಿಕೆ :- “ಹೌದು, ಆಸಕ್ತಿ ಇದೆ, ಆದರೆ ಅವು ಎಂಥಾ ದಾಖಲೆಗಳು?”
ಅನಾಮಿಕ :- “ನೀವು ಜೀವನದಲ್ಲಿ ಎಂದೂ ನೋಡದೇ ಇರುವಂಥಾ ರಹಸ್ಯ ದಾಖಲೆಗಳು!”
ಜೈತುಂಗ್ :- “ಅವುಗಳ ಪ್ರಮಾಣ ಎಷ್ಟು ?”
ಅನಾಮಿಕ ;- “ನೀವು ಕನಸು ಮನಸ್ಸಿನಲ್ಲೂ ಊಹಿಸಲಾರದಷ್ಟು ಭಾರಿ ಪ್ರಮಾಣದ ಅಮೂಲ್ಯ ದಾಖಲೆಗಳಿವೆ”
ಜೈತುಂಗ್ :- “ಅಷ್ಟೊಂದು ದಾಖಲೆಗಳನ್ನು ಪಡೆದುಕೊಳ್ಳುವುದು ಹೇಗೆ?”
ಅನಾಮಿಕ:- “ನನ್ನದೊಂದು ಕಂಡಿಷನ್, ನಾವು ಯಾವತ್ತೂ ಪರಸ್ಪರ ಭೇಟಿಯಾಗುವಂತಿಲ್ಲ; ನನ್ನ ಪ್ರಾಣಕ್ಕೆ ಅಪಾಯವಿದೆ. ನಾನು ಏನಿದ್ದರೂ ಎನ್‍ಕ್ರಿಪ್ಟೆಡ್ ಫೈಲ್‍ಗಳನ್ನು ನಿಮಗೆ ಕಳಿಸಿಕೊಡುತ್ತೇನೆ, ಅಷ್ಟೆ. ಅದರಲ್ಲಿರುವ ಮಾಹಿತಿಗಳನ್ನಾಧರಿಸಿ ನೀವು ಯಾವ ರೀತಿಯ ಸ್ಟೋರಿ ಮಾಡುತ್ತೀರಿ ಎಂಬುದು ನಿಮಗೇ ಬಿಟ್ಟದ್ದು.”
ಜೈತುಂಗ್ :- “ಇದನ್ನೆಲ್ಲಾ ನೀವ್ಯಾಕೆ ಮಾಡುತ್ತಿದ್ದೀರಿ?”
ಅನಾಮಿಕ :- “ಈ ಖದೀಮರು, ಕ್ರಿಮಿನಲ್‍ಗಳ ಧಂಧೆಯನ್ನು ಬಯಲುಗೊಳಿಸಬೇಕಿದೆ, ಅದಕ್ಕಾಗಿ”.
ಹೀಗೆ ಅನಾಮಿಕನೊಂದಿಗೆ ಆರಂಭವಾದ ಇಮೇಲ್ ಚಾಟಿಂಗ್‍ನಿಂದ ಶುರುವಾಗಿ ಜರ್ಮನಿಯ ಈ ಪತ್ರಿಕಾ ಕಚೇರಿಯಲ್ಲಿ ಜಮಾವಣೆಗೊಂಡ ಈ ಎಲ್ಲ ದಾಖಲೆಗಳು ಸೋರಿಕೆಯಾಗಿದ್ದು ‘ಮೊಸ್ಸಾಕ್ ಫೊನ್ಸೆಕಾ’ ಎಂಬ ಒಂದು ಪನಾಮಾ ಮೂಲದ ಕಂಪನಿಯ ಕಚೇರಿಯಿಂದ.

ಈ ಕಂಪನಿ ವಿದೇಶಗಳಿಗೆ ಅಕ್ರಮವಾಗಿ ಹಣ ಸಾಗಿಸಿ ಬೇನಾಮಿ ಕಂಪನಿಗಳನ್ನು ಆರಂಭಿಸುವ ಹರಾಮಕೋರರಿಗೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ. ಈ ಎಲ್ಲ ದಾಖಲೆಗಳು ಪನಾಮಾ ದೇಶದಿಂದ ಹೊರಬಿದ್ದಿರುವ ಕಾರಣ ಇವಕ್ಕೆ ‘ಪನಾಮಾ ಪೇಪರ್ಸ್’ ಎಂಬ ಅನ್ವರ್ಥ ನಾಮ ಬಂದಿದೆ. ಹೀಗೆ ಮೊಸ್ಸಾಕ್ ಫೊನ್ಸೆಕಾ ಸಂಸ್ಥೆಯಿಂದ ಸುಡ್‍ಡೂಯಿಷ್ ಜೈತುಂಗ್ ಪತ್ರಿಕಾ ಕಚೇರಿಗೆ ರಾಶಿ ರಾಶಿ ದಾಖಲೆಗಳು ಬಂದು ಜಮಾ ಆದವು. ಸಾಫ್ಟ್ ಕಾಪಿಯಲ್ಲಿ ಎನ್‍ಕ್ರಿಪ್ಟೆಡ್ ಆಗಿದ್ದ (ಬೇರೆಯವರು ಓದಲಾರದಂತೆ ನಿರ್ದಿಷ್ಟ ಕ್ರಮದಲ್ಲಿ ಸಂಕೇತ ಬಾಷೆಗೆ ಬದಲಾಯಿಸಿದ್ದು) ಫೈಲುಗಳ ಒಟ್ಟು ಪ್ರಮಾಣ 2.6 ಟೆರ್ರಾ ಬೈಟ್! ಅಂದರೆ 2600 ಗಿಗಾ ಬೈಟ್‍ನಷ್ಟು! ಒಟ್ಟು 1 ಕೋಟಿ 15 ಲಕ್ಷ ದಾಖಲೆಗಳು! 2,14,488 ಬೇನಾಮಿ ಕಂಪನಿಗಳ (ಅ)ವ್ಯವಹಾರಗಳು!!

ಒಂದುವೇಳೆ ಇಷ್ಟು ದಾಖಲೆಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿದ್ದರೆ ಅದು ನೂರಾರು ಟ್ರಕ್ಕುಗಳಲ್ಲಿ ತುಂಬಬಹುದಾದಷ್ಟು ಭಾರೀ ಪ್ರಮಾಣದ ರಾಶಿ ಆಗುತ್ತಿತ್ತು!!
ಈ ದಾಖಲಾತಿಗಳ ಮೇಲೆ ಕಣ್ಣಾಡಿಸಿದ ಜೈತುಂಗ್ ಪತ್ರಿಕೆಯ ತಂಡಕ್ಕೆ ಇವು ಮಹತ್ವದ ಆರ್ಥಿಕ ವ್ಯವಹಾರಕ್ಕೆ, ಕ್ಷಮಿಸಿ ಅವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಎಂಬುದನ್ನು ಅರ್ಥ ಮಾಡಿಕೊಳ್ಳಲು ಬಹಳ ಕಾಲ ಹಿಡಿಯಲಿಲ್ಲ. ಜೈತುಂಗ್ ಪತ್ರಿಕೆಯ ನುರಿತ ತಂಡ, ತನ್ನ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ‘ಇಂಟರ್‍ನ್ಯಾಷನಲ್ ಕನ್ಸಾರ್ಷಿಯಮ್ ಫಾರ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ (ಐಸಿಐಜೆ)’ ಸಂಸ್ಥೆಯೊಂದಿಗೆ ಒಂದು ಒಪ್ಪಂದ ಮಾಡಿಕೊಂಡು ಜಂಟಿಯಾಗಿ ಈ ದಾಖಲಾತಿಗಳ ಅಧ್ಯಯನ ಕೈಗೊಂಡಿತು. ಈ ಐಸಿಐಜೆ ಸಂಸ್ಥೆ ಹಲವಾರು ವರ್ಷಗಳಿಂದ ಇಂಥದೇ ತನಿಖೆಯಲ್ಲಿ ತೊಡಗಿಸಿಕೊಂಡಿದ್ದು, ಈ ಹಿಂದೆಯೂ ನಾನಾ ದೇಶಗಳಿಗೆ ಸಂಬಂದಿಸಿದ ಹತ್ತಾರು ಹಗರಣಗಳನ್ನು ಬಯಲಿಗೆಳೆದಿದೆ. ಈ ಪನಾಮಾ ಪೇಪರ್ಸ್ ದಾಖಲೆಗಳಲ್ಲಿರುವ ಮಾಹಿತಿಯನ್ನು ಪರಿಶೀಲಿಸಿ, ಅವುಗಳನ್ನು ಡಿಕೋಡ್ ಮಾಡುವ ಪ್ರಕ್ರಿಯೆಯಲ್ಲಿ ಹತ್ತಾರು ದೇಶಗಳ ನೂರಾರು ಪತ್ರಕರ್ತರನ್ನು ತೊಡಗಿಸಿಕೊಳ್ಳಲಾಗಿದೆ.

ಭಾರತಕ್ಕೆ ಸಂಬಂಧಿಸಿದ ಹಲವಾರು ದಾಖಲಾತಿಗಳು ಕೂಡ ಕಂಡುಬಂದಿದ್ದರಿಂದ ಐಸಿಐಜೆ ಸಂಸ್ಥೆ ಇಂಡಿಯನ್ ಎಕ್ಸ್‍ಪ್ರೆಸ್ ಸಂಸ್ಥೆಯೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡಿತು. ಹೀಗೆ ಭಾರತೀಯ ಪ್ರಜೆಗಳ ದಾಖಲಾತಿಗಳನ್ನು ಜಾಲಾಡಿ, ಅವುಗಳ ಪೂರ್ವಾಪರ ಕೆದಕುವ ಮಹತ್ತರ ಕಾರ್ಯದಲ್ಲಿ ಈ ಪತ್ರಿಕೆಯ ವೈದ್ಯನಾಥನ್ ಅಯ್ಯರ್, ರಿತು ಸರಿನ್, ಜಯ್ ಮಜುಂದಾರ್ ಮುಂತಾದ ನುರಿತ ಪತ್ರಕರ್ತರು ತೊಡಗಿಸಿಕೊಂಡಿದ್ದರು.
ಜಯ್ ಮಜುಂದಾರ್, ಪ್ರಕಾರ ಈ ಒಟ್ಟು ರಾಶಿಯಲ್ಲಿ “36,000 ಫೈಲುಗಳು ಭಾರತಕ್ಕೆ ಸಂಬಂಧಿಸಿದವು. ಅವುಗಳಲ್ಲಿ ಬಾಲಿವುಡ್ ತಾರೆಯರು, ಐಪಿಎಲ್ ಧಣಿಗಳು, ರಿಯಲ್ ಎಸ್ಟೇಟ್ ಕಂಪನಿಗಳು, ಕಂಪನಿ ಬಂಡವಾಳಿಗರು, ರಾಜಕಾರಣಿಗಳು ಇದ್ದಾರೆ. ನಮ್ಮ ತನಿಖಾ ಸಂಶೋಧನೆಯನ್ನು ಈ ಸದ್ಯ 50 ವ್ಯಕ್ತಿಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಲು ಸಾಧ್ಯವಾಗಿದೆ. ಇನ್ನೂ ಕಡತಗಳ ಅಧ್ಯಯನ ಮುಂದುವರೆದಿದೆ. ಹೀಗೆ ತನಿಖೆ ಮುಂದುವರೆದಂತೆಲ್ಲಾ ಮತ್ತಷ್ಟು ಹೆಸರುಗಳು ಸ್ಪೋಟಗೊಳ್ಳಲಿವೆ.”

ಪನಾಮಾ ಪೇಪರ್ಸ್: ಭಾರತದ ಪಾಲೆಷ್ಟು?
ಪನಾಮಾ ಪೇಪರ್ಸ್‍ನಲ್ಲಿ 500ಕ್ಕಿಂತಲೂ ಹೆಚ್ಚು ಭಾರತೀಯ ವ್ಯಕ್ತಿಗಳು ಈ ಪ್ರಥಮ ಕಂತಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಇದು ಮೊದಲ ಸಲವೋ ? ಅಥವ ಅಪರೂಪಕ್ಕೆ ಸಂಭವಿಸುವ ವಿದ್ಯಮಾನವೋ ಆಗಿಲ್ಲ. ಹಲವಾರು ದಶಕಗಳಿಂದಲೇ, ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಜಾಗತೀಕರಣ ಪ್ರಕ್ರಿಯೆ ಆರಂಭವಾದ ನಂತರದಲ್ಲಿ ಇಂಥಾ zಂಧೆಗಳಿಗೆ ಕಡಿವಾಣವೇ ಇಲ್ಲದೆ ಸಾಗಿದೆ.

ತೆರಿಗೆ ಸ್ವರ್ಗ ಎಂದು ಕರೆಯಲಾಗುವ ದೇಶಗಳಲ್ಲಿ ಭಾರತೀಯ ಬಂಡವಾಳಿಗರು, ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸಾವಿರಾರು ಬೇನಾಮಿ ಕಂಪನಿಗಳ ಮಾಲಿಕತ್ವ ಹೊಂದಿರುವುದು ಪತ್ತೆಯಾಗಿದೆ. ಸೀಷೆಲ್ಸ್, ಮಾರಿಷಸ್, ಸಿಪ್ರಸ್, ಕೇಮನ್ಸ್ ಐಲ್ಯಾಂಡ್, ಬ್ರಿಟಿಷ್ ವರ್ಜಿನ್ ಐಲ್ಯಾಂಡ್, ಸಿಂಗಾಪುರ್, ಹಾಂಗ್‍ಕಾಂಗ್, ಬಹಾಮಾಸ್, ಪನಾಮಾ, ಬರ್ಮುಡಾ – ಹೀಗೆ ಸುಮಾರು 60ಕ್ಕೂ ಹೆಚ್ಚು ಪುಟ್ಟಪುಟ್ಟ ದೇಶಗಳೊಂದಿಗೆ ತೆರಿಗೆ ವಿನಾಯತಿ ಒಪ್ಪಂದಗÀಳನ್ನು ಏರ್ಪಡಿಸಿಕೊಂಡು ತಮ್ಮ ದೇಶದ್ರೋಹಿ ಧಂಧೆಗೆ ರಾಜಮಾರ್ಗ ಮಾಡಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಬಂಡವಾಳಿಗರೊಂದಿಗೆ ಭಾರತೀಯ ಬಂಡವಾಳಿಗರು, ಭ್ರಷ್ಟರೂ, ಭೂಗತ ಪಾತಕಿಗಳೂ ಕೂಡ ತಾವು ಯಾರಿಗೇನೂ ಕಮ್ಮಿಯಿಲ್ಲವೆಂಬಂತೆ ಪೈಪೋಟಿ ನಡೆಸಿದ್ದಾರೆ.

ಭಾರತದ ಕಾನೂನು ಏನನ್ನುತ್ತದೆ?
ನಮ್ಮ ಹಣ(ಸಂಪತ್ತು) ವಿದೇಶಗಳಿಗೆ ಹರಿದು ಹೋಗುವುದನ್ನು ನಿರ್ಬಂಧಿಸಲು ಈ ಹಿಂದೆ ಕೆಲವು ನಿಯಮಗಳನ್ನು ರೂಪಿಸಲಾಗಿತ್ತು. ಜಾಗತೀಕರಣದ ಪ್ರಕ್ರಿಯೆ ಬಿರುಸುಗೊಂಡ ನಂತರ ಈ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ವ್ಯವಸ್ಥಿತವಾಗಿ ಸಡಿಲಗೊಳಿಸುವ ಪ್ರಕ್ರಿಯೆ ಶುರುವಾಯಿತು. ಮೊದಲ ಬಾರಿಗೆ 2004ರಲ್ಲಿ ರಿಜರ್ವ್ ಬ್ಯಾಂಕ್ ಒಂದು ಆದೇಶ ಹೊರಡಿಸಿ, ಯಾವುದೇ ವ್ಯಕ್ತಿ ವಾರ್ಷಿಕ 25 ಸಾವಿರ ಡಾಲರ್, ಅಂದರೆ ಇಂದಿನ ವಿನಿಮಯ ಮೌಲ್ಯದಲ್ಲಿ ಸುಮಾರು 17 ಲಕ್ಷ ರೂಪಾಯಿಗಳನ್ನು ವಿದೇಶಗಳಲ್ಲಿ ತೊಡಗಿಸಲು ಅನುವು ಮಾಡಿಕೊಟ್ಟಿತು. ನಂತರ ಈ ಮಿತಿಯನ್ನು 25 ಸಾವಿರ ಡಾಲರ್‍ಗಳಿಂದ ಏರಿಕೆ ಮಾಡುತ್ತಾ ಸಾಗಿ ಯುಪಿಎ ಸರ್ಕಾರದ ಕೊನೆಯ ವೇಳೆಗೆ 75 ಸಾವಿರ ಡಾಲರ್‍ಗಳ ಮಿತಿಗೆ ಏರಿಸಲಾಗಿತ್ತು. ಈ ಹಣವನ್ನು ಅವರು ಆರೋಗ್ಯ ಚಿಕಿತ್ಸೆಗೋ, ಮಕ್ಕಳ ವಿದ್ಯಾಭ್ಯಾಸಕ್ಕೋ, ಉಡುಗೊರೆ ಕೊಡಲಿಕ್ಕಾಗಿಯೋ, ಷೇರುಗಳನ್ನು ಕೊಳ್ಳಲಿಕ್ಕಾಗಿಯೋ ಅಥವ ತಮ್ಮಿಚ್ಚಾನುಸಾರ ಯಾವುದೇ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸಿತು. ಈಗ ಭಾರತದಲ್ಲಿ ಹೇಳಿಕೇಳಿ ಮೋದಿಯವರ ದರಬಾರು. ಮಾನ್ಯ ಮೋದಿಯ ಆಡಳಿತದ ಈ ಎರಡು ವರ್ಷಗಳಲ್ಲಿ ಈ ಮಿತಿಯನ್ನು 2.5 ಲಕ್ಷ ಡಾಲರ್‍ಗಳಿಗೆ ಅಂದರೆ ಸುಮಾರು 170 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಈ ಹಣವನ್ನು ಹೇಗೆ ಬೇಕಾದರೂ ವಿನಿಯೋಗಿಸಬಹುದು, ಷೇರುಗಳನ್ನು ಬೇಕಾದರೂ ಕೊಳ್ಳಬಹುದು, ಆದರೆ ವಿದೇಶಗಳಲ್ಲಿ ವ್ಯಕ್ತಿಗತವಾಗಿ ಸ್ವತಃ ಕಂಪನಿಗಳನ್ನು ಸ್ಥಾಪಿಸುವಂತಿರಲಿಲ್ಲ. 

ಆದರೆ ಹಲವಾರು ಖತರ್‍ನಾಕ್ ಖದೀಮರು ಈ ಕಾನೂನನ್ನು ಮಣ್ಣುಪಾಲು ಮಾಡಲು ಕಳ್ಳಮಾರ್ಗಗಳನ್ನು ಅನ್ವೇಷಣೆ ಮಾಡಿಕೊಂಡರು. ಅವರ ಪ್ರಕಾರ ಭಾರತೀಯ ವ್ಯಕ್ತಿಗಳು ಹೊಸ ಕಂಪನಿಗಳನ್ನು ಆರಂಭಿಸುವಂತಿಲ್ಲ; ಆದರೆ ಈಗಾಗಲೇ ಅಸ್ತಿತ್ವದಲ್ಲಿರುವ ವಿದೇಶಿ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಯಾವುದೇ ನಿರ್ಬಂಧವಿಲ್ಲವೆಂದು ಅನುಕೂಲ ಸಿಂಧು ವ್ಯಾಖ್ಯಾನ ನೀಡಿ, ‘ಅಸ್ತಿತ್ವದಲ್ಲಿರುವ’ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಆರಂಭಿಸಿದರು. ಹೀಗೆ ತೆರಿಗೆ ಸ್ವರ್ಗಗಳಲ್ಲಿ ಕಂಪನಿಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದರಿಂದ ಹೊಸ ಹೊಸ ಕಂಪನಿಗಳನ್ನು ಉತ್ಪಾದಿಸುವ ಕಾರ್ಖಾನೆಗಳೇ ಆರಂಭವಾಗಿವೆ.
ಕಾನೂನು ಸೇವೆ ಒದಗಿಸುವ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ‘ಮೊಸ್ಸಾಕ್ ಫೊನ್ಸಿಕಾ’ ಕಂಪನಿ ಕೂಡ ಇಂಥಾ ಧಂಧೆಯಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ನಾಲ್ಕು ಕಂಪನಿಗಳಲ್ಲೊಂದು. ಇವರು ಪ್ರತಿನಿತ್ಯ ಹೊಸಹೊಸ ಕಂಪನಿಗಳನ್ನು ತಮ್ಮ ಗಿರಾಕಿಗಳ ಅಗತ್ಯಕ್ಕೆ ಅನುಗುಣವಾಗಿ, ಗಿರಾಕಿಗಳ ಆಯ್ಕೆಯ ಬೇನಾಮಿ ಹೆಸರಿನಲ್ಲೇ ರಿಜಿಸ್ಟರ್ ಮಾಡಿಸುತ್ತಾರೆ. ನಂತರ ಕಾನೂನುಬದ್ಧವಾಗಿಯೇ ಅಂಥ ಕಂಪನಿಗಳ ಷೇರುಗಳನ್ನು ಪರಭಾರೆ ಮಾಡುವ ಮೂಲಕ ಕಂಪನಿಗಳನ್ನು ತಮ್ಮ ಗಿರಾಕಿಗಳಿಗೆ ಸ್ವಾಧೀನ ಮಾಡಿಕೊಡುತ್ತಾರೆ. ಇದು ಈ ಕಂಪನಿಯ ಪ್ರತಿನಿತ್ಯದ ಕಾಯಕ. ಮೊಸ್ಸಾಕ್ ಫೊನ್ಸಿಕ ಕಂಪನಿ ತಾನು 42 ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆಯೆಂದು ಅದರ ವೆಬ್‍ಸೈಟ್‍ನಲ್ಲಿ ಹೇಳಿಕೊಂಡಿದೆ. ಅಂದರೆ ಅದೆಷ್ಟು ಪ್ರಮಾಣದ ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿವೆ ಎಂಬುದನ್ನು ನೀವು ಊಹಿಸಬಹುದು.

ಹೀಗೆ ಧಂಧೆ ರಾಜಾರೋಷವಾಗಿ ನಡೆಯುತ್ತಿರುವುದರಿಂದ ರಿಜರ್ವ್ ಬ್ಯಾಂಕ್ ನಿಯಮಾವಳಿಯ ಸದುದ್ದೇಶವನ್ನೇ ಮಣ್ಣುಪಾಲು ಮಾಡಿದಂತಾಯ್ತು. ತೆರಿಗೆ ಸ್ವರ್ಗಗಳ ಮಾರ್ಗವನ್ನು ಬಳಸಿ, ಸ್ವದೇಶಿ ಸಂಪತ್ತಿಗೆ ವಿದೇಶಿ ಮುಸುಕು ತೊಡಿಸಿ ಭಾರತಕ್ಕೆ ತರುವ ‘ರೌಂಡ್ ಟ್ರಿಪ್ಪಿಂಗ್’ ಧಂಧೆಯೂ ಬಿರುಸಿನಲ್ಲಿ ನಡೆದಿದೆ. ಇಂಥಾ ಘನಘೋರ ದೇಶದ್ರೋಹಿ ಧಂಧೆಯಲ್ಲಿ ತೊಡಗಿಸಿಕೊಂಡಿರುವವರ ವಿವರ ನೋಡಿ.

ರಿಯಲ್ ಎಸ್ಟೇಟ್ ದಿಗ್ಗಜ ಡಿಎಲ್‍ಎಫ್ ಕಂಪನಿ ಎಲ್ಲರಿಗೂ ಗೊತ್ತು. ಅದರ ಮಾಲಿಕ ಕೆಪಿ ಸಿಂಗ್ ಇದೇ ಮಾರ್ಗ ಬಳಸಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್‍ನಲ್ಲಿ ಒಂದು ಕಂಪನಿಯನ್ನು ಸ್ವಾಧಿನ ಪಡಿಸಿಕೊಂಡಿದ್ದ್ದಾರೆ. ಆತನ ಹೆಂಡತಿ ಇಂದಿರಾ ಸಿಂಗ್ ಮತ್ತಿತರ ಕುಟುಂಬ ಸದಸ್ಯರೂ ಕೂಡ ವಿವಿಧ ಕಂಪನಿಗಳಲ್ಲಿ ಷೇರುದಾರರಾಗಿದ್ದಾರೆ.

ಅಪೋಲೋ ಗ್ರೂಪ್‍ನ ಮಾಲಿಕ ಓಂಕಾರ್ ಕನ್ವರ್ 2010ರಲ್ಲಿ ಎರಡು ಕಂಪನಿಗಳನ್ನು, 2014ರಲ್ಲಿ ಎರಡು ಟ್ರಸ್ಟ್‍ಗಳನ್ನು ಬ್ರಿ. ವ. ಐಲ್ಯಾಂಡ್‍ನಲ್ಲಿ ಸ್ಥಾಪಿಸಿದ್ದು ಬೆಳಕಿಗೆ ಬಂದಿದೆ. ಸಿಂಗಾಪುರ್‍ನ ಬರ್ಕಲೇಸ್ ಬ್ಯಾಂಕ್ ಮತ್ತು ಕೇಮನ್ ಐಲ್ಯಾಂಡ್‍ನ ನ್ಯಾಷನಲ್ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವುದು ಬಯಲಾಗಿದೆ.
ವಿಶ್ವಸುಂದರಿ ಐಶ್ವರ್ಯ ರೈ, ಆಕೆಯ ತಂದೆ ಕೆಆರ್ ಕೃಷ್ಣ ರೈ, ತಾಯಿ ವೃಂದಾ ರೈ ಮತ್ತು ಸೋದರ ಆದಿತ್ಯ ರೈ ಇವರು 2005ರ ಮೇ 14ರಂದು ‘ಅಮಿಕ್ ಪಾರ್ಟನರ್ಸ್’ಎಂಬ ವಿದೇಶಿ ಕಂಪನಿಯ ಡೈರೆಕ್ಟರ್‍ಗಳಾಗಿ ನೇಮಕಗೊಂಡಿದ್ದಾರೆ. ಈ ಕಂಪನಿಯ ಆರಂಭಿಕ ಬಂಡವಾಳ 50 ಸಾವಿರ ಡಾಲರ್‍ಗಳು. ಬ್ರಿಟಿಷ್ ವರ್ಜಿನ್ ಐಲ್ಯಾಂಡ್‍ನಲ್ಲಿ ರಿಜಿಸ್ಟರ್ ಆಗಿದ್ದ ಈ ಕಂಪನಿಯನ್ನು 2008ರಲ್ಲಿ ಮುಚ್ಚಿಹಾಕಲಾಗಿದೆ. ನಂತರ ಮತ್ತಾವ ತೆರಿಗೆ ಸ್ವರ್ಗದಲ್ಲಿ, ಯಾವ್ಯಾವ ಹೆಸರಿನಲ್ಲಿ ಬೇನಾಮಿ ಶುರುವಿಟ್ಟುಕೊಂಡಿದ್ದಾರೆಂಬ ವರದಿ ಬಹಿರಂಗಗೊಳ್ಳಬೇಕಿದೆ.

‘ಅಮಿತಾಬ್ ಬಚ್ಚನ್ ಕಾರ್ಪೊರೇಷನ್ ಲಿಮಿಟೆಡ್’ ಎಂಬ ಕಂಪನಿ ಶುರು ಮಾಡುವ ಎರಡು ವರ್ಷ ಮೊದಲೇ ನಮ್ಮ ಬಾಲಿವುಡ್‍ನ ದಿಗ್ಗಜ ಅಮಿತಾಬ್ ನಾಲ್ಕು ಸಾಗರೋತ್ತರ ಶಿಪ್ಪಿಂಗ್ ಕಂಪನಿಗಳಲ್ಲಿ ಡೈರೆಕ್ಟರ್ ಹುದ್ದೆಯಲ್ಲಿದ್ದರು. ಅವುಗಳಲ್ಲಿ ಒಂದು ಬ್ರಿಟಿಷ್ ವರ್ಜಿನ್ ಐಲ್ಯಾಂಡ್‍ನಲ್ಲಿ ರಿಜಿಸ್ಟರ್ ಆಗಿದ್ದರೆ ಉಳಿದ ಮೂರು ಕಂಪನಿಗಳು ಮತ್ತೊಂದು ತೆರಿಗೆ ಸ್ವರ್ಗ ಬಹಮಾಸ್ ದ್ವೀಪದಲ್ಲಿ ರಿಜಿಸ್ಟರ್ ಆಗಿದ್ದವು. ಅಂದಹಾಗೆ ಈ ಯಾವ ವ್ಯವಹಾರದ ಬಗ್ಗೆಯೂ ಅವರು ಸರ್ಕಾರಕ್ಕೆ ಮಾಹಿತಿ ಕೊಟ್ಟಿರಲಿಲ್ಲ.

ಪ್ರಧಾನಿ ಮೋದಿಯವರಿಗೆ ಆಪ್ತರಾಗಿರುವ ಗೌತಮ್ ಅದಾನಿಯ ಅಣ್ಣ ವಿನೋದ್ ಅದಾನಿಯ ಹೂಡಿಕೆಗೆ ಸಂಬಂಧೀಸಿದ ದಾಖಲೆಗಳೂ ಹೊರಬಂದಿವೆ. ಬಿಲಿಯಾಧೀಶ ಸೈರಸ್ ಪೂನಾವಾಲಾನ ತಮ್ಮ ಝವಾರೆ ಪೂನಾವಾಲನ ಕಂಪನಿಗಳು ಕೂಡ ಪಟ್ಟಿಯಲ್ಲಿವೆ. ಕರ್ನಾಟಕದ ಕಾಂಗ್ರೆಸ್ ಮುಖಂಡ, ಹಾಲಿ ಮಂತ್ರಿ ಶಾಮನೂರು ಶಿವಶಂಕರಪ್ಪನ ಅಳಿಯ ರಾಜೇಂದ್ರ ಪಾಟೀಲ್ ಮಾತ್ರವಲ್ಲದೆ ಬೆಂಗಳೂರು ನಿವಾಸಿಗಳಾಗಿರುವ ಹಲವು ಉದ್ಯಮಿಗಳ ಹೆಸರೂ ಕೂಡ ಕೇಳಿ ಬಂದಿದೆ.

ಇನ್ನೂ ಕುತೂಹಲದ ಸಂಗತಿ ಇಲ್ಲಿದೆ ನೋಡಿ. ಸುಪ್ರಿಂ ಕೋರ್ಟ್‍ನ ಖ್ಯಾತ ವಕೀಲ, ಕಾನೂನು ಪಂಡಿತ, ವಾಜಪೇಯಿ ಸರ್ಕಾರದಲ್ಲಿ ಸಾಲಿಸಿಟರ್ ಜನರಲ್ ಹುದ್ದೆಯನ್ನು ಅಲಂಕರಿಸಿದ್ದ ಶ್ರೀಮಾನ್ ಹರೀಶ್ ಸಾಳ್ವೆ ಮತ್ತು ಆತನ ಕುಟುಂಬ ಸದಸ್ಯರು ಇದೇ ಬ್ರಿಟಿಷ್ ಐಲ್ಯಾಂಡ್‍ನಲ್ಲಿ ಕ್ರೆಸ್ಟ್ ಬ್ರೈಟ್ ಲಿಮಿಟಿಡ್, ಪೈಬುಷ್ ಗ್ರೂಪ್ ಲಿ ಮತ್ತು ಎಡೆನ್ವಾಲ್ ಲಿ ಎಂಬ ಮೂರು ಕಂಪನಿಗಳನ್ನು ರಿಜಿಸ್ಟರ್ ಮಾಡಿಸಿದ್ದಾರೆ.

ಮಾಜಿ ಸಾಲಿಸಿಟರ್ ಜನರಲ್ ಸೋಲಿ ಸೊರಾಬ್ಜಿಯವರ ಸುಪುತ್ರ ಜಹಾಂಗೀರ್ ಸೊರಾಬ್ಜಿ ‘ಮೂನ್‍ಗ್ಲೋ ಇನ್‍ವೆಸ್ಟ್‍ಮೆಂಟ್ ಗ್ಲೋಬಲ್ ಲಿಮಿಟೆಡ್’ ಎಂಬ ಕಂಪನಿ ಹೊಂದಿದ್ದಾರೆ. ಈ ಕಂಪನಿಯ ಮೂಲಕ ಯಾವ್ಯಾವ ಬೇನಾಮಿ ಧಂಧೆಗಳಲ್ಲಿ ಹಣ ಹೂಡಿದ್ದಾರೆಂಬುದು ಬಯಲಾಗಬೇಕಿದೆ.
ದಾವೂದ್ ಇಬ್ರಾಹಿಂನ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಇಕ್ಬಾಲ್ ಮಿರ್ಚಿ ಹಾಗೂ ಆತನ ಬಂಧುಗಳ ಹೆಸರಿನಲ್ಲಿರುವ ಕಂಪನಿಗಳನ್ನು ಪನಾಮಾ ಪೇಪರ್ಸ್ ಬಿಚ್ಚಿಟ್ಟಿದೆ. ಈತ ಮುಂಬೈ ಪೊಲೀಸರಿಗೆ ಬಹಳ ಬೇಕಾಗಿದ್ದ ಭೂಗತ ಪಾತಕಿಯಾಗಿದ್ದ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಹೀಗೇ ಏಕಕಾಲದಲ್ಲಿ ಸಿನಿಮಾ ತಾರೆಯರೂ, ಕಂಪನಿ ಮಾಲಿಕರು, ರಾಜಕಾರಣಿಗಳೂ, ಭೂಗತ ಪಾತಕಿಗಳೂ ಎಲ್ಲರೂ ಒಂದೇ ತರದ ಅಕ್ರಮ ಧಂಧೆಯಲ್ಲಿ ತೊಡಗಿರುವುದು ಪತ್ತೆಯಾಗಿರುವುದು ಆಕಸ್ಮಿಕ ಎಂದುಕೊಳ್ಳುವಂತಿಲ್ಲ. ತೆರೆಮರೆಯಲ್ಲಿ ನಡೆಯುತ್ತಿರುವ ಗುಪ್ತ ಸಂಬಂಧ ಈಗ ದಾಖಲೆಗಳಲ್ಲಿ ಹೊರಬಿದ್ದೆದೆ ಅಷ್ಟೆ.

ಭಾರತದ ಹಣಕಾಸು ಸಚಿವ ಅರುಣ್ ಜೈಟ್ಲಿ ಇಂಥ ಅಕ್ರಮಗಳನ್ನು ನಾವು ಸಹಿಸೋದಿಲ್ಲ; ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ – ಇತ್ಯಾದಿ ಮೀಡಿಯಾ ಆರ್ಭಟ ಮಾಡಿದ್ದಾರೆ. ಪ್ರಧಾನಿ ಮೋದಿ ಕೂಡ ಮತ್ತೆ ವೀರಾವೇಶದ ಪೋಸು ತೋರಿಸಿದ್ದಾರೆ. ತನಿಖಾ ತಂಡವನ್ನೂ ರಚಿಸಿದ್ದಾರೆ. ಆದರೆ ವಿಪರ್ಯಾಸವೆಂದರೆ ಬಹಳ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ಅಕ್ರಮಗಳನ್ನು ತಡೆಯಲು ಯಾವ ರೀತಿಯ ನಿಯಮಾವಳಿಗಳನ್ನು ರೂಪಿಸುತ್ತೇವೆಂದಾಗಲಿ, ತೆರಿಗೆ ಸ್ವರ್ಗಗಳೊಂದಿಗಿನ ಒಪ್ಪಂದಗಳನ್ನು ರದ್ದುಪಡಿಸುವ ಅಥವಾ ಕನಿಷ್ಟ ಅವುಗಳನ್ನು ರಿವ್ಯೂಗೆ ಒಳಪಡಿಸುವ ಬಗ್ಗೆಯಾಗಲಿ ಕನಿಷ್ಟ ಒಂದುಮಾತನ್ನೂ ಆಡದಿರುವುದು ಆಶ್ಚರ್ಯದ ಸಂಗತಿಯೇನಲ್ಲ. ಕಪ್ಪುಹಣವನ್ನು ಸ್ವಿಸ್ ಬ್ಯಾಂಕ್‍ನಿಂದ ವಾಪಸ್ ತರಲು ಮೋದಿ ಪಟಾಲಂ “ಹೋರಾಟ ನಡೆಸಿರುವ” ಮಾದರಿಯಲ್ಲೇ ಪನಾಮಾ ಪೇಪರ್ಸ್ ತನಿಖೆಯನ್ನೂ ಕೈಗೊಳ್ಳಲಿದ್ದಾರೆ ಎಂಬುದರಲ್ಲಿ ಯಾರಿಗೂ ಅನುಮಾನ ಬೇಡ. ಕಾರ್ಪೊರೇಟ್ ಮಾಧ್ಯಮಗಳು ಸರ್ಕಾರದ ಗೋಸುಂಬೆ ಮಾತುಗಳನ್ನೇ ಸಾಧನೆಯೆಂಬಂತೆ ಪ್ರಚುರಪಡಿಸಿ ಕೈತೊಳೆದುಕೊಂಡಿವೆ.

ಭವಿಷ್ಯದಲ್ಲಿ ಇಂಥಾ ಅಕ್ರಮಗಳನ್ನು ತಡೆಯಲು ಕನಿಷ್ಟ ಮಾಡಬೇಕಾದುದೇನು? ಮೊದಲಿಗೆ ಭಾರತದಿಂದ ಹೀಗೆ ಹಣವನ್ನು ಸಾಗಿಸುವ ಜಾಲವನ್ನು ಮಟ್ಟಹಾಕಬೇಕು. ತೆರಿಗೆ ಸ್ವರ್ಗಗಳೊಂದಿಗೆ ನಡೆಯುತ್ತಿರುವ ಮುಕ್ತ ವ್ಯವಹಾರಗಳನ್ನು ಕಟ್ಟುನಿಟ್ಟಿನ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥ ಕಂಪನಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಹೀಗೆ ದೇಶದ ಸಂಪತ್ತನ್ನು ನಷ್ಟ ಮಾಡುತ್ತಿರುವ ಈ ನಿಜವಾದ ದೇಶದ್ರೋಹಿಗಳನ್ನು ಜೈಲಿಗೆ ನೂಕುವಂಥಾ ಕಾನುನುಗಳನ್ನು ರೂಪಿಸಬೇಕು. ನ್ಯಾಯಕ್ಕಾಗಿ ಆಗ್ರಹಿಸಿದ ಯುನಿವರ್ಸಿಟಿ ವಿದ್ಯಾರ್ಥಿಗಳ ಮೇಲೆ ಮುಗಿಬಿದ್ದು ದೇಶದ್ರೋಹದ ಕೇಸು ಜಡಿಯುತ್ತಿರುವ ಸರ್ಕಾರ ಇಂಥದ್ದನ್ನೆಲ್ಲಾ ಮಾಡುತ್ತದೆಂದರೆ ಮೊದಿಭಕ್ತರೇ ನಂಬುವ ಸ್ಥಿತಿಯಲ್ಲಿಲ್ಲ, ಆ ಮಾತು ಬೇರೆ.

ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಪನಾಮಾ ಪೇಪರ್ಸ್ ಭಾರೀ ಸಂಚಲನವನ್ನೇ ಉಂಟುಮಾಡಿದೆ.
ಐಸ್‍ಲ್ಯಾಂಡ್‍ನ ಅಧ್ಯಕ್ಷನ ಹೆಸರು ಕೇಳಿಬರುತ್ತಿದ್ದಂತೆಯೇ ಅಲ್ಲಿನ ಜನರು ಚರಿತ್ರೆಯಲ್ಲೇ ಕಂಡುಕೇಳರಿಯದಂತಹ ಭಾರೀ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಸಾವಿರಾರು ಸಂಖ್ಯೆಯಲ್ಲಿ ಪಾರ್ಲಿಮೆಂಟಿನ ಸುತ್ತಲೂ ನೆರೆದು ಪಾರ್ಲಿಮೆಂಟ್ ಭವನವನ್ನು ಮುತ್ತಿಗೆ ಹಾಕಿ, ಅಂತಿಮವಾಗಿ ಅಧ್ಯಕ್ಷ ರಾಜೀನಾಮೆ ಕೊಡುವಂತೆ ಮಾಡಿದರು.

ರಷ್ಯಾದ ಜನಪ್ರಿಯ ಪ್ರಧಾನಿ ವ್ಲಾದಿಮಿರ್ ಪುಟಿನ್‍ನ ಹೆಸರು ಬಂದಿರುವುದರಿಂದ ಆತನ ತಲೆ ಮೇಲೆ ತೂಗುಕತ್ತಿ ತೂಗುತ್ತಿದೆ. ರಷ್ಯಾ ರಾಜಕೀಯದಲ್ಲಿ ಭಾರೀ ಬಿರುಗಾಳಿ ಬೀಸುವ ಲಕ್ಷಣ ತೋರುತ್ತಿದೆ. ಆದರೆ ಪುಟಿನ್ ಮಾತ್ರ ಇದೆಲ್ಲಾ ಅಮೆರಿಕಾದ ಷಡ್ಯಂತ್ರ, ನಾನು ಅಮಾಯಕ ಎಂದು ಮೋದಿ ಮಾದರಿಯಲ್ಲೇ ಗುಟುರು ಹಾಕಿದ್ದ್ದಾರೆ.

david-cameronಯುನೈಟೆಡ್ ಕಿಂಗ್‍ಡಮ್‍ನ ಪ್ರಧಾನಿ ಡೇವಿಡ್ ಕೆಮರೂನ್ ತಮ್ಮ ಪಿತ್ರಾರ್ಜಿತ ಕಂಪನಿಗಳಿಂದ ಲಾಭ ಮಾಡಿಕೊಂಡಿರುವುದು ನಿಜ ಎಂದು ದೇಶದ ಜನತೆಯ ಮುಂದೆ ಒಪ್ಪಿಕೊಂಡಿದ್ದಾರೆ. ಮುಂದೆ ಇದು ಯಾವರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಜರ್ಮನಿಯ ಸರ್ಕಾರ ಈ ತೆರಿಗೆ ಸ್ವರ್ಗಗಳ ಧಂಧೆಯನ್ನು ತಡೆಗಟ್ಟಲು ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ರೂಪಿಸಲು ಮುಂದಾಗಿದೆ. ಬಹುಶಃ ಮುಂದಿನ ದಿನಗಳಲ್ಲಿ ಜರ್ಮನಿ ಕೈಗೊಳ್ಳಲಿರುವ ಕ್ರಮಗಳು ಇತರೆ ದೇಶಗಳ ಮೇಲೆ ಅಂಥದೇ ಕ್ರಮಕ್ಕಾಗಿ ಒತ್ತಡಗಳನ್ನು ಸೃಷ್ಟಿಸಲಿವೆ ಎಂಬ ನಿರೀಕ್ಷೆ ಇದೆ.

ಪನಾಮಾ ಪೂರ್ವಾಪರ
ಇಷ್ಟೆಲ್ಲಾ ಪರಿಣಾಮಕ್ಕೆ ಕಾರಣವಾಗಿರುವ ಪನಾಮಾ ದೇಶದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವುದೂ ಕೂಡ ಸೂಕ್ತ. ಪನಾಮಾ ದೇಶ ಉತ್ತರ ಮತ್ತು ದಕ್ಷಿಣ ಅಮೆರಿಕಾ ಖಂಡಗಳನ್ನು ಕೂಡಿಸುವ ಒಂದು ಸಣ್ಣ ಪಟ್ಟಿಯಂಥಹ ಭೂಭಾಗದಲ್ಲಿರುವ ಪುಟ್ಟ ದೇಶ. ಇದರ ನೆರೆಹೊರೆಯಲ್ಲಿ ಕೊಲಂಬಿಯಾ, ಕೋಸ್ಟರಿಕಾ ಎಂಬ ಪುಟ್ಟ ದೇಶಗಳಿವೆ.

1821ಕ್ಕಿಂತ ಮೊದಲು ಈ ದೇಶ ಸ್ಪ್ಯಾನಿಷರ ಕೈವಶದಲ್ಲಿತ್ತು. ಅಲ್ಲಿಂದ 1903ರವರೆಗೆ ಕೊಲಂಬಿಯಾ ಅಧೀನದಲ್ಲಿತ್ತು. ಈಗ ಸ್ವತಂತ್ರ ದೇಶವಾಗಿ ಪನಾಮಾ ಗಣರಾಜ್ಯ ಎನಿಸಿಕೊಂಡಿದೆ.
ಈಗಿನ ಪನಾಮಾ ಜನಸಂಖ್ಯೆ 40 ಲಕ್ಷಕ್ಕಿಂತ ಸ್ವಲ್ಪ ಕಡಿಮೆ. ಇದರ ರಾಜಧಾನಿ ಪನಾಮಾ ಸಿಟಿಯಲ್ಲಿ ಈ ದೇಶದ ಅರ್ಧದಷ್ಟು ಜನರು ಅಂದರೆ ಸುಮಾರು 20 ಲಕ್ಷ ಮಂದಿ ವಾಸಿಸುತ್ತಾರೆ. ಈ ದೇಶದ ಜನಸಂಖ್ಯೆಯ ಶೇಕಡ 65 ಭಾಗ ಮೆಸ್ಟಿಜೋóಗಳು, ಅಂದರೆ ತಂದೆ ಮತ್ತು ತಾಯಿ ವಿಭಿನ್ನ ಜನಾಂಗಗಳಿಗೆ ಸೇರಿದ ಮಿಶ್ರ ಜನಾಂಗೀಯರು. ಸ್ಥಳೀಯ ಪನಾಮಿಯನ್ನರ ಪ್ರಮಾಣ ಶೇಕಡ 13ಕ್ಕಿಂತಲೂ ಕಡಿಮೆ. ಈಗಲೂ ಸ್ಪ್ಯಾನಿಷ್ ಈ ದೇಶದ ಅಧಿಕೃತ ಭಾಷೆಯೆಂದರೆ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಳ್ಳಬಹುದು.

ಈ ದೇಶದ ಕರೆನ್ಸಿ ಪನಾಮಾ ‘ಬಾಲ್ಬಾ’ಗಿಂತಲೂ ಅಮೆರಿಕದ ಡಾಲರ್ ಇಲ್ಲಿ ಹೆಚ್ಚು ಚಲಾವಣೆಯಲ್ಲಿದೆ. ಭಾರತ, ಬ್ರೆಜಿಲ್, ರಷ್ಯಾ ಮುಂತಾದ ಬೃಹತ್ ದೇಶಗಳ ಕರೆನ್ಸಿಗಳು ಅಮೆರಿಕನ್ ಡಾಲರ್‍ನೆದುರು ವಿನಿಮಯ ಮೌಲ್ಯವನ್ನು ದಿನೇದಿನೇ ಕಳೆದುಕೊಳ್ಳುತ್ತಾ ಸಾಗಿರುವ ಇದೇ ಹೊತ್ತಿನಲ್ಲಿ ಪನಾಮಾದ ಕರೆನ್ಸಿ ಆಶ್ಚರ್ಯಕರವಾಗಿ ದಶಕಗಳಿಂದಲೂ ಅಮೆರಿಕನ್ ಡಾಲರ್‍ಗೆ ಸಮಾನವಾದ ವಿನಿಮಯ ಮೌಲ್ಯವನ್ನು ಹೊಂದಿದೆ.

ಇಂತಿಪ್ಪ ಪನಾಮಾ ದೇಶವನ್ನು ಬಳಸಿಕೊಂಡು ಸ್ವದೇಶಿ – ವಿದೇಶಿ ಬಂಡವಾಳಿಗರು ತಂತಮ್ಮಲ್ಲೇ ಷಾಮೀಲಾಗಿ ಸಾವಿರಾರು ಕೋಟಿ ಅಕ್ರಮ ಸಂಪತ್ತನ್ನು ಗುಪ್ತವಾಗಿ ರಾಶಿ ಹಾಕುವ ಧಂಧೆಯಲ್ಲಿ ತೊಡಗಿದ್ದಾರೆ; ಭಾರತದ ಶತಕೋಟ್ಯಾಧಿಪತಿಗಳ ಸಂಖ್ಯೆಯೂ ಕಂಡಾಪಟ್ಟೆ ಏರಿಕೆಯಾಗುತ್ತಿದೆ. ಆದರೆ ನೆನಪಿರಲಿ, ಇದೇ ಸಂದರ್ಭದಲ್ಲಿ ಭಾರತವನ್ನು ಒಳಗೊಂಡಂತೆ ಹತ್ತಾರು ದೇಶಗಳಲ್ಲಿ ಜನತೆ ತಿನ್ನುವ ಅನ್ನಕ್ಕೆ ಪರದಾಡುತ್ತಿದ್ದಾರೆ. ರೈತರು ಆತ್ಮಹತ್ಯೆಯ ಹಾದಿಯಲ್ಲಿದ್ದಾರೆ. ಬಡಮಕ್ಕಳಿಗೆ ಆಸರೆಯಾಗಿದ್ದ ಶಾಲಾ ಕಾಲೇಜುಗಳು ಮತ್ತೆ ಇಂಥದೇ ಖಾಸಗಿ ಖಧೀಮರ ಕೈವಶವಾಗುತ್ತಿವೆ. ಕೋಟ್ಯಾನುಕೋಟಿ ಜನರಿಗೆ ತಲೆಮೇಲೆ ಸೂರಿಲ್ಲ. ಆರೋಗ್ಯ ಕ್ಷೇತ್ರವಂತೂ ಸಂಪೂರ್ಣ ಸರ್ಕಾರದ ಕೈತಪ್ಪಿ ಬಡಜನತೆಗೆ ಆರೋಗ್ಯ ಸೇವೆ ಕನಸಿನಂತಾಗಿ ಹೋಗಿದೆ.

ಇಂಥಾ ಹತ್ತಾರು ಮೂಲಭೂತ ಸಮಸ್ಯೆಗಳನ್ನು ಇಷ್ಟು ವರ್ಷವಾದರೂ ಯಾಕೆ ಪರಿಹರಿಸಲಾಗಿಲ್ಲ ಎಂದು ಯಾರಾದರೂ ಪ್ರಶ್ನಿಸಿದರೆ ಉತ್ತರ ಸಿದ್ಧವಾಗಿದೆ. “ಏನು ಮಾಡೋದು? ನಮ್ಮ ದೇಶದಲ್ಲಿ ಸಂಪನ್ಮೂಲದ ಕೊರತೆಯಿದೆ.” ಇದೇ ಸಂದರ್ಭದಲ್ಲಿ ಬಯಲಿಗೆ ಬರುತ್ತಿರುವ ಹಗರಣಗಳು ಸಾವಿರಾರು ಕೋಟಿಗಳನ್ನು ಮೀರಿ ಈಗ ಲಕ್ಷ ಕೋಟಿಗಳವರೆಗೂ ತಲುಪಿದೆ. ಹೀಗಿರುವಾಗ ಇದು ಸಂಪನ್ಮೂಲದ ಕೊರತೆಯ ಸಮಸ್ಯೆಯಲ್ಲ ಎಂದಾಯಿತು.
ಹಾಗಾದರೆ ಈ ಸಮಸ್ಯೆಯ ಮೂಲವೇನು? ಅದನ್ನು ಪರಿಹರಿಸಿ ಜನಪರವಾದ, ನ್ಯಾಯೋಚಿತವಾದ ಒಂದು ಪರ್ಯಾಯ ವ್ಯವಸ್ಥೆಯನ್ನು ತರಲು ಪ್ರಜೆಗಳು ಮಾಡಬೇಕಿರುವುದೇನು?

ಮೊಸ್ಸಾಕ್ ಪೊನ್ಸೆಕಾ – ಕಂಪನಿಗಳನ್ನು ಸೃಷ್ಟಿಸುವ ಕಾರ್ಖಾನೆ 
ಪನಾಮಾ ದೇಶವನ್ನು ಕೇಂದ್ರವಾಗಿರಿಸಿಕೊಂಡಿರುವ ಮೊಸ್ಸಾಕ್ ಫೊನ್ಸೆಕಾ ಕಂಪನಿ ವಿವಿಧ ದೇಶಗಳಲ್ಲಿ ರಿಜಿಸ್ಟರ್ ಮಾಡಿಸಿರುವ ಕಂಪನಿಗಳ ಪಟ್ಟಿ ಹೀಗಿದೆ.
ಬ್ರಿಟಿಷ್ ವರ್ಜಿನ್ ಐಲ್ಯಾಂಡ್ – 1,13,648
ಪನಾಮಾ – 48,360
ಬಹಾಮಾಸ್ – 15,915
ಸೀಷೆಲ್ಸ್ – 15,182
ಸಮಾವು _ 5307
ಆಂಗ್ವಿಲಾ – 3258
ಹಾಂಗ್‍ಕಾಂಗ್ – 452
ಯು.ಕೆ – 148
ಕೋಸ್ಟರಿಕಾ – 78
ಸಿಪ್ರಸ್ – 76
ಗುರುತು ಪತ್ತೆಯಾಗದ ದೇಶದಲ್ಲಿ – 854 (ಪಟ್ಟಿ ಅಪೂರ್ಣ)
ಹೀಗೆ ನಾನಾ ದೇಶಗಳಲ್ಲಿ ಕಂಪನಿಗಳನ್ನು ಸೃಷ್ಟಿಮಾಡಿ ಮಾರಾಟ ಮಾಡುವುದೇ ಈ ಮಧ್ಯವರ್ತಿ ಕಂಪನಿಯ ಕಸುಬಾಗಿದೆ. ಹೀಗೆ ಕಾರ್ಯನಿರ್ವಹಿಸುತ್ತಿರುವ ಪ್ರಮುಖ ನಾಲ್ಕು ಕಂಪನಿಗಳಲ್ಲಿ ಇದೂ ಒಂದು. ಇತರೆ ಕಂಪನಿಗಳ ಧಂಧೆಯನ್ನೂ ಲೆಕ್ಕ ಹಿಡಿದರೆ ಈ ಧಂಧೆ ಎಷ್ಟು ವ್ಯಾಪಕವಾಗಿ ನಡೆಯುತ್ತಿದೆ ಎಂಬುದನ್ನು ಊಹಿಸುವುದು ಕಷ್ಟವೇನಲ್ಲ.

Leave a Reply

Your email address will not be published.