ಮಹಿಳಾ ಸಂವೇದನೆ, ಅಭಿವ್ಯಕ್ತಿ ಸ್ವಾತಂತ್ರ್ಯ, ನಾಗರಿಕ ಹಕ್ಕು, ಮಾನವ ಹಕ್ಕುಗಳು ಮತ್ತು ವಾಕ್ ಸ್ವಾತಂತ್ರ್ಯ ಇಷ್ಟೂ ವಿಚಾರಗಳನ್ನು ಒಮ್ಮೆಲೆ ಸಾರ್ವಜನಿಕ ಚರ್ಚೆಗೆ ಒಳಪಡಿಸುವಲ್ಲಿ ದೆಹಲಿಯ ಶ್ರೀರಾಮ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಗುರ್ ಮೆಹರ್ ಕೌರ್ ಯಶಸ್ವಿಯಾಗಿದ್ದಾರೆ. ಇದು ಸ್ವಾಗತಾರ್ಹವೂ ಹೌದು. ರಾಮ್ಜಾಸ್ ಕಾಲೇಜಿನಲ್ಲಿ ಸಂಭವಿಸಿದ ವಿದ್ಯಾರ್ಥಿಗಳ ಘರ್ಷಣೆ ಮತ್ತು ತದನಂತರದ ಹಿಂಸಾತ್ಮಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಾಲಕಿ ನೀಡಿರುವ ಒಂದು ಹೇಳಿಕೆ ದೇಶದ ನಾಗರೀಕ ಪ್ರಜ್ಞೆಯನ್ನೇ ಬಡಿದೆಬ್ಬಿಸಿದೆ. ಶಾಂತಿ ಮತ್ತು ಸಂವೇದನೆಗೆ ತದ್ವಿರುದ್ಧವಾಗಿ ನಿಲ್ಲುವ ಯುದ್ಧೋನ್ಮಾದ ಮತ್ತು ದೇಶಭಕ್ತಿ ಸಾರ್ವಜನಿಕ ಚರ್ಚೆಗೊಳಗಾಗಿರುವುದನ್ನು ಎಲ್ಲರೂ ಸ್ವಾಗತಿಸಬೇಕಿದೆ. ಒಂದು ಪ್ರಬುದ್ಧ ಸಮಾಜಕ್ಕೆ ಯುದ್ಧ ಅನಿವಾರ್ಯವಲ್ಲ. ಸೇನೆ ಅವಶ್ಯಕತೆಯೂ ಅಲ್ಲ.
ಆದರೆ ಸಾಮಾಜಿಕ ಪ್ರಬುದ್ಧತೆಯನ್ನು ಪರಿಗಣಿಸದ ಪ್ರಭುತ್ವಕ್ಕೆ ಸೇನೆ ಅನಿವಾರ್ಯ. ಯುದ್ಧ ಸಾಂದರ್ಭಿಕವಾಗಿ ಅತ್ಯವಶ್ಯವಾಗುತ್ತದೆ. ಇದು ಚಾರಿತ್ರಿಕ ಸತ್ಯ. ಎರಡು ದೇಶಗಳ ನಡುವೆ ನಡೆಯುವ ಯುದ್ಧದಲ್ಲಿ ಮಡಿಯುವ ಯೋಧರು ಹುತಾತ್ಮ ಪಟ್ಟ ಪಡೆಯುತ್ತಾರೆ. ಆದರೆ ಯೋಧರ ಸಾವಿಗೆ ಯುದ್ಧ ಕಾರಣವೋ ಅಥವಾ ಶತ್ರು ರಾಷ್ಟ್ರ ಕಾರಣವೋ ಎಂಬ ಪ್ರಶ್ನೆ ಎದುರಾದಾಗ ತಬ್ಬಿಬ್ಬಾಗುತ್ತೇವೆ. ಏಕೆಂದರೆ ಯುದ್ಧ ಅನಿವಾರ್ಯ ಎನ್ನುವ ಸಮೂಹ ಸನ್ನಿ ದೇಶದ ನಾಗರಿಕ ಪ್ರಜ್ಞೆಯನ್ನು ಆವರಿಸಿರುತ್ತದೆ. ಇದು ಸಾರ್ವಕಾಲಿಕ ಸತ್ಯ. ಆದರೆ ಸಾರ್ವತ್ರಿಕ ಸತ್ಯವಲ್ಲ.
ಏಕೆಂದರೆ ಈ ಸಮೂಹ ಸನ್ನಿಗೆ ಒಳಪಡದ ಒಂದು ವರ್ಗ ಪ್ರತಿಯೊಂದು ಯುದ್ಧದ ಸಂದರ್ಭದಲ್ಲೂ, ಪ್ರತಿಯೊಂದು ದೇಶದಲ್ಲೂ ಇದ್ದೇ ಇರುತ್ತಾರೆ. ಎರಡು ಮಹಾಯುದ್ಧಗಳ ಸಂದರ್ಭದಲ್ಲೂ ಯುದ್ಧವಿರೋಧಿ ಕೂಗು ಭುಗಿಲೆದ್ದಿತ್ತು. ವಿಯಟ್ನಾಂ ಯುದ್ಧದ ಸಂದರ್ಭದಲ್ಲಿ ಅಮೆರಿಕದ ಸಾಮ್ರಾಜ್ಯಶಾಹಿ ಆಳ್ವಿಕರು ಪ್ರಬಲವಾದ ವಿಶ್ವವ್ಯಾಪಿ ವಿರೋಧ ಎದುರಿಸಬೇಕಾಯಿತು. ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಕೊಲ್ಲಿ ರಾಷ್ಟ್ರಗಳಲ್ಲೇ ಯುದ್ಧವಿರೋಧಿ ಕೂಗು ಕಂಡುಬಂದಿತ್ತು. 1971ರ ಭಾರತ ಪಾಕ್ ಯುದ್ಧ ನಡೆದಾಗಲೂ ಭಾರತದಲ್ಲಿ ಯುದ್ಧದ ವಿರುದ್ಧ ಪ್ರತಿಭಟನೆ ನಡೆದಿತ್ತು. ಕಾರ್ಗಿಲ್ ಯುದ್ಧದಲ್ಲೂ ಈ ಪ್ರವೃತ್ತಿ ಗೋಚರಿಸಿತ್ತು. ಈ ಯುದ್ಧವಿರೋಧಿ ಕೂಗಿಗೆ ಒಂದು ಅರ್ಥವಿದೆ. ಒಂದು ಚಾರಿತ್ರಿಕ ತರ್ಕವೂ ಇದೆ. ಪ್ರಜಾತಂತ್ರ ಮೌಲ್ಯಗಳು ಬೂಷ್ರ್ವಾ ಕ್ರಾಂತಿ ಮತ್ತು ಸಮಾಜವಾದಿ ಕ್ರಾಂತಿಯ ಘಟ್ಟವನ್ನು ದಾಟಿ ಮುನ್ನಡೆದಿರುವ ಸಂದರ್ಭದಲ್ಲಿ ಮಾನವ ಸಮಾಜ ತನ್ನದೇ ಆದ ಮಾನವೀಯ ಮೌಲ್ಯಗಳನ್ನು ಕಂಡುಕೊಂಡಿದೆ. ಇಂತಹ ಮೌಲ್ಯಗಳಲ್ಲಿ ಮರಣದಂಡನೆ ವಿರೋಧಿ ನೀತಿ, ಯುದ್ಧ ವಿರೋಧಿ ನೀತಿ ಪ್ರಮುಖವಾಗಿ ವ್ಯಕ್ತವಾಗುತ್ತಲೇ ಇದೆ. ಆಧುನಿಕ ಶಸ್ತ್ರಾಸ್ತ್ರಗಳ ಬಳಕೆಯಿಂದ ಭವಿಷ್ಯದ ಹಲವು ಪೀಳಿಗೆಗಳಿಗೆ ಉಂಟಾಗುವ ಜೈವಿಕ, ಮಾನಸಿಕ ಮತ್ತು ಬೌದ್ಧಿಕ ಅಪಾಯಗಳನ್ನು ಅರಿತಿರುವ ಆಧುನಿಕ ಸಮಾಜ ಸಹಜವಾಗಿಯೇ ಯುದ್ಧವಿರೋಧಿ ನಿಲುವು ತಾಳುತ್ತದೆ. ಇದು ನಾಗರಿಕ ಪ್ರಜ್ಞೆಯ ಪ್ರಶ್ನೆಯೇ ಹೊರತು ಭೌಗೋಳಿಕ ದೇಶದ ಸುತ್ತ ಸೃಷ್ಟಿಸಲಾಗುವ ದೇಶಭಕ್ತಿ, ದೇಶಪ್ರೇಮದ ಪ್ರಶ್ನೆಯಲ್ಲ.
ಗುರ್ ಮೆಹರ್ 2016ರ ವಿಡಿಯೋ ಸಂದೇಶದಲ್ಲಿ ಹೇಳಿರುವ ಮಾತುಗಳು ಗಮನಾರ್ಹ – “ ನನ್ನ ತಂದೆಯನ್ನು ಕೊಂದಿದ್ದಕ್ಕಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನೀಯರನ್ನು ಎಷ್ಟು ದ್ವೇಷಿಸುತ್ತಿದ್ದೆ ಎಂದು ನನಗೆ ನೆನಪಿದೆ. ನಾನು ಮುಸ್ಲಿಮರನ್ನು ದ್ವೇಷಿಸುತ್ತಿದ್ದೆ. ಯಾಕೆಂದರೆ ನಾನು ಎಲ್ಲ ಮುಸ್ಲಿಮರೂ ಪಾಕಿಸ್ತಾನೀಯರೇ ಎಂದು ಭಾವಿಸಿದ್ದೆ. ನಾನು ಆರು ವರ್ಷದವಳಾಗಿದ್ದಾಗ ಬುರ್ಖಾ ಧರಿಸಿದ್ದ ಮಹಿಳೆಗೆ ಚೂರಿ ಇರಿಯಲು ಹೋಗಿದ್ದೆ. ನನ್ನ ತಂದೆ ಸಾವಿಗೆ ಅವಳೇ ಕಾರಣ ಎಂದು ನನಗೆ ಅನ್ನಿಸಿತ್ತು. ನನ್ನ ತಾಯಿ ನನ್ನನ್ನು ತಡೆದರು. ನನಗೆ ಅರ್ಥವಾಗುವಂತೆ ಹೇಳಿದ್ದರು. ಪಾಕಿಸ್ತಾನ ನನ್ನ ತಂದೆಯನ್ನು ಕೊಲ್ಲಲಿಲ್ಲ, ಯುದ್ಧ ಕೊಂದಿತು. ಇದು ನನಗೆ ಅರ್ಥವಾಗಲು ಕೆಲ ಸಮಯ ಬೇಕಾಯಿತು ” 20 ವರ್ಷದ ಬಾಲಕಿಯ ಈ ಪ್ರಬುದ್ಧ ಮಾತುಗಳನ್ನು ಸರಿಯಾಗಿ ಗ್ರಹಿಸುವ ವ್ಯವಧಾನವನ್ನೂ ಭಾರತೀಯ ಸಮಾಜ ಕಳೆದುಕೊಂಡಿದೆ ಎಂದರೆ ನಾವು ಬೌದ್ಧಿಕವಾಗಿ ಎಷ್ಟು ದರಿದ್ರರಾಗಿದ್ದೇವೆ ಎಂದು ಅರಿವಾಗುತ್ತದೆ.
ಯುದ್ಧದ ಪರಿಕಲ್ಪನೆಯನ್ನೇ ಪ್ರಶ್ನಿಸುವ ಈ ಮಾತುಗಳ ಹಿಂದೆ ಒಂದು ಮಾನವೀಯ ಸಂವೇದನೆ ಮತ್ತು ಆಳವಾದ ನೋವು ಇರುವುದನ್ನು ನಮ್ಮ ಸುಶಿಕ್ಷಿತ ಸಮಾಜ ಗ್ರಹಿಸಬೇಕಿತ್ತು. ಆದರೆ ಸಮೂಹ ಸನ್ನಿ ಪ್ರಜ್ಞೆಯನ್ನು ಹಂತಹಂತವಾಗಿ ಕೊಲ್ಲುತ್ತಲೇ ಇರುವುದರಿಂದ ನಮ್ಮ ಸಮಾಜ ಈ ಗ್ರಹೀತದಿಂದ ಹೊರತಾಗಿದೆ.
ಒಬ್ಬ ಯುದ್ಧ ನಿರತ ಯೋಧನನ್ನು ಕೊಲ್ಲುವುದು ಯುದ್ಧವೋ ಶತ್ರು ರಾಷ್ಟ್ರವೋ ? ಅಥವಾ ಯುದ್ಧ ಸನ್ನದ್ಧವಾಗಿರುವ ತನ್ನದೇ ರಾಷ್ಟ್ರವೋ ? ಇಲ್ಲಿ ಚರ್ಚೆಗೊಳಗಾಗಬೇಕಿರುವುದು ಯುದ್ಧ ಎನ್ನುವ ವಿಕೃತ ಮನೋಭಾವವನ್ನು ಒಂದು ಪ್ರಜ್ಞಾವಂತ ಸಮಾಜ ಹೇಗೆ ಸ್ವೀಕರಿಸಬೇಕು ಎನ್ನುವ ವಿಚಾರ. ನಿಜ,
ಯೋಧರು ತಮ್ಮ ಪ್ರಾಣ ಒತ್ತೆ ಇಟ್ಟು ದೇಶದ ರಕ್ಷಣೆಗಾಗಿ ಹೋರಾಡುತ್ತಾರೆ. ತಮ್ಮ ಕೌಟುಂಬಿಕ ಐಹಿಕ ಸುಖ ಸಂಪತ್ತುಗಳನ್ನು ತ್ಯಾಗ ಮಾಡಿ ಶ್ರಮಿಸುತ್ತಾರೆ. ಇದು ಭಾರತದ ಯೋಧನಿಗೆ ಎಷ್ಟರ ಮಟ್ಟಿಗೆ ಸಲ್ಲುವುದೋ ಅಷ್ಟೇ ಪಾಕ್ ಯೋಧನಿಗೂ ಸಲ್ಲುವ ಮಾತು. ಆದರೆ ಯೋಧರಿಗೆ ಸದಾ ಯುದ್ಧನಿರತರಾಗಿರುವ ಮನೋಭಾವ ಇರುವುದಿಲ್ಲ. ಏಕೆಂದರೆ ಯುದ್ಧದಿಂದಾಗುವ ಭೀಕರ ಅನಾಹುತಗಳ ಅರಿವು ಅವರಿಗೆ ಇರುತ್ತದೆ. ಆಳುವ ವರ್ಗಗಳಿಗೆ ಯುದ್ಧ ತಮ್ಮ ಅಧಿಕಾರ ರಾಜಕಾರಣದ ಒಂದು ಸಾಧನವಾದರೆ ಯೋಧರಿಗೆ ಯುದ್ಧ ಆಜ್ಞಾಪಾಲನೆಯ ವಿಚಾರವಾಗಿ ಕಾಣುತ್ತದೆ. ಹಾಗಾಗಿಯೇ ವಿಶ್ವದ ಇತಿಹಾಸದಲ್ಲಿ ಸೇನೆಯಲ್ಲಿದ್ದುಕೊಂಡೇ ಯುದ್ಧ ಮಾಡಲು ನಿರಾಕರಿಸಿದ ಒಬ್ಬ ಯೋಧನ ವೃತ್ತಾಂತವೂ ಕಾಣುವುದಿಲ್ಲ. ಹಾಗೊಮ್ಮೆ ನಿರಾಕರಿಸಿದರೆ ಅಂತಹ ಯೋಧ ಬದುಕುಳಿಯುವುದೂ ಕಷ್ಟ. ಇಂತಹ ಒಂದು ಸಂದರ್ಭದಲ್ಲಿ ಯೋಧ ಸಾಯುವುದು ಯುದ್ಧದಿಂದಲೋ ಶತ್ರು ರಾಷ್ಟ್ರದಿಂದಲೋ ? ಇದು ಯೋಚಿಸಬೇಕಾದ ವಿಚಾರ.
ಗುರ್ ಮೆಹರ್ ಈ ಸೂಕ್ಷ್ಮ ವಿಚಾರವನ್ನು ಗಹನವಾಗಿ ಯೋಚಿಸಿಯೇ ತಮ್ಮ ಹೇಳಿಕೆ ನೀಡಿದ್ದಾರೆ. ಒಂದು ಪ್ರಬುದ್ಧ ಸಮಾಜವಾಗಿ ನಾವು ಗಮನಿಸಬೇಕಿರುವುದು ಆ ಹುಡುಗಿಯ ಅಂತಃಕರಣದಲ್ಲಿ ಮಡುಗಟ್ಟಿರುವ ಪಿತೃವಿಯೋಗದ ನೋವು, ಆ ನೋವು ಸೃಷ್ಟಿಸಿರುವ ಮಾನವೀಯ ಸಂವೇದನೆ ಮತ್ತು ಹುಟ್ಟು ಸಾವಿನ ನಡುವೆ ಇರುವ ಸೂಕ್ಷ್ಮ ಗೆರೆಗಳ ಬಗ್ಗೆ ಆ ನೋವುಂಡ ಹೃದಯ ಅನುಭವಿಸಿರುವ ಯಾತನೆಯನ್ನು. ದುರಂತ ಎಂದರೆ ಆಧುನಿಕ ಭಾರತೀಯ ಸಮಾಜ ವಿಕೃತಿಗಳಿಂದ ಆವೃತವಾಗಿದ್ದು ಮಾನವ ಸಂವೇದನೆಯನ್ನೇ ಕಳೆದುಕೊಂಡಿದೆ. ಅಂತಃಕರಣ ಎನ್ನುವ ಪದವೇ ನಿಘಂಟಿನಿಂದ ಮರೆಯಾಗಿದೆ. ಸಂವೇದನೆ ಕೇವಲ ಅಕ್ಷರ ರೂಪದಲ್ಲಿ ಉಳಿದಿದೆ. ಜಗತ್ತಿಗೆ ಕಣ್ಣು ತೆರೆಯುವ ಮುನ್ನವೇ ತನ್ನ ತಂದೆಯನ್ನು ಕಳೆದುಕೊಂಡ ಒಂದು ಮಗುವಿನ ಹೃದಯಾಂತರಾಳದ ವೇದನೆ ನಮ್ಮ ಸಮಾಜದಲ್ಲಿ ಸಂಚಲನ ಉಂಟುಮಾಡುತ್ತಿಲ್ಲ ಎನ್ನುವುದನ್ನು ವಿಷಾದದಿಂದ ಗಮನಿಸಬೇಕಿದೆ. ಇದೇ ಸಮಾಜವೇ ಊನ ಘಟನೆಯನ್ನು ಸಹಜ ಪ್ರಕ್ರಿಯೆಯಂತೆ ಪರಿಗಣಿಸಿದೆ, ದಾದ್ರಿಯನ್ನು ಮರೆತಿದೆ, ಭೂಪಾಲ್ ಅನಿಲ ದುರಂತವನ್ನು ಕಡೆಗಣಿಸಿದೆ, ರೋಹಿತ್ ವೇಮುಲನ ಸಾವಿನ ಹಿಂದೆ ಜಾತಿ ಅಸ್ಮಿತೆಯನ್ನು ಅರಸುತ್ತಿದೆ. ಇದೇ ಸಮಾಜವೇ ಗಾಂಧೀಜಿಯ ಹಂತಕರನ್ನು ಹುತಾತ್ಮ ಎನ್ನುತ್ತಿದೆ, ಹುತಾತ್ಮ ಯೋಧನ ಮಗಳನ್ನು ದೇಶದ್ರೋಹಿ ಎನ್ನುತ್ತಿದೆ.
ಗುರ್ ಮೆಹರ್ ಕೌರ್ ದೇಶಭಕ್ತಿಯ ಸುತ್ತಲಿನ ಸಂಕಥನಕ್ಕೆ ಹೊಸ ಆಯಾಮ ನೀಡಿದ್ದಾರೆ. ದೇಶ ಮತ್ತು ದೇಶಪ್ರೇಮದ ಮರುವ್ಯಾಖ್ಯಾನಕ್ಕೆ ಮುಕ್ತ ಆಹ್ವಾನ ನೀಡಿದ್ದಾರೆ. ಈ ಪಂಥಾಹ್ವಾನವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮನೋಸ್ಥೈರ್ಯ ನಮ್ಮ ಸಮಾಜಕ್ಕೆ ಇದೆಯೇ ? ಇದು ಮೂರ್ತ ಪ್ರಶ್ನೆ.
Hi wow wandarfull