ನೆಲದ ಕವಿ ಜಂಬಣ್ಣ ಅಮರಚಿಂತ

-ಕುಮಾರ್ ಬುರಡಿಕಟ್ಟಿ

amarachintaನೆಲದ ಕವಿ ಜಂಬಣ್ಣ ಅಮರಚಿಂತ ಇಂದು ಬೆಳಿಗ್ಗೆ 4 ಗಂಟೆಗೆ ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಸುಮಾರು 8 ವರ್ಷಗಳ ಹಿಂದೆ ದಾಳಿಮಾಡಿದ ಪಾರ್ಶ್ವವಾಯು ಅವರನ್ನು ಬಹುತೇಕ ಗೃಹಬಂಧನದಲ್ಲಿಟ್ಟಿತ್ತು. ಆಗಾಗ ಹೈದರಾಬಾದಿನ ಇದೇ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಬರುತ್ತಿದ್ದರು. ಇತ್ತೀಚೆಗಂತೂ ಅವರು ಗಾಲಿಜುರ್ಚಿಯಲ್ಲೇ ಬದುಕು ಸಾಗಿಸುತ್ತಿದ್ದರು. ಮೊನ್ನೆ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ಬಿಳಿಗ್ಗೆ ಇಹಲೋಕವನ್ನು ತ್ಯಜಿಸಿದರು. ಅವರು ಹೆಂಡತಿ, ಇಬ್ಬರು ಗಂಡು ಮಕ್ಕಳು, ಒಬ್ಬ ಮಗಳು, ಮೊಮ್ಮಕ್ಕಳು ಮತ್ತು ಅಪಾರ ಸಂಖ್ಯೆಯ ಓದುಗ ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ರಾಯಚೂರು ಹೊರವಲಯದ ಅಸ್ಕಿಹಾಳ್ ಬಳಿಯ ಸ್ವಂತ ಜಮೀನಿನಲ್ಲಿ ನಡೆಯಿತು. ಕುಂಟುಂಬದ ಸಂಪ್ರದಾಯದಂತೆ ಅವರನ್ನು ಇಂದು ಸಂಜೆ 6 ಗಂಟೆಗೆ ಭೂಮಿಯಲ್ಲಿ ಹೂಳಲಾಯಿತು.

1945ರ ಏಪ್ರಿಲ್ 7ರಂದು ಜನಿಸಿದ ಅಮರಚಿಂತರು ಮೂವತ್ತೈದು ವರ್ಷಗಳ ಕಾಲ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದರು. ಮೊದಲು ಪ್ರಥಮ ದರ್ಜೆ ಗುಮಾಸ್ತರಾಗಿ ಇಲಾಖೆ ಸೇರಿದ ಅವರು ನಂತರದ ದಿನಗಳಲ್ಲಿ ಭಡ್ತಿ ಪಡೆದು ಆರೋಗ್ಯ ನಿರೀಕ್ಷರಾಗಿ ಕೆಲಸ ಮಾಡಿದರು. ಮೂಲತಃ ಆಂಧ್ರಪ್ರದೇಶ ಮೂಲದವರಾದ ಅಮರಚಿಂತರ ಅಜ್ಜ ಸುಮಾರು 130 ವರ್ಷಗಳ ಹಿಂದೆ ಉದ್ಯೋಗ ಉದ್ಯೋಗ ಅರಸಿಕೊಂಡು ರಾಯಚೂರಿಗೆ ಬಂದು ರಸ್ತೆ ಬದಿಯಲ್ಲಿ ಸಣ್ಣದೊಂದು ಟೆಂಟ್ ಹೊಟೆಲ್ ಇಟ್ಟು ಬದುಕು ಕಟ್ಟಿಕೊಂಡವರು. ಅಮರಚಿಂತರ ಅಪ್ಪ ತಮ್ಮ ಮಡಿವಾಳ ಸಮುದಾಯದ ಪಾರಂಪರಿಕ ವೃತ್ತಿಯಾದ ಬಟ್ಟೆತೊಳೆಯುವ, ಇಸ್ತ್ರಿ ಮಾಡುವ ಕಾಯಕವನ್ನು ಮುಂದುವರೆಸಿದರು.

ಬಯಲಾಟದ ಕಲಾವಿದರೂ ಆಗಿದ್ದ ಅಮರಚಿಂತರ ಅಜ್ಜ ಲಕ್ಷ್ಮಯ್ಯನವರು ಅಮರಚಿಂತರ ಮೇಲೆ ಅಗಾಧ ಪ್ರಭಾವ ಬೀರಿದ್ದಾರೆ. ಬಾಲ್ಯದ ದಿನಗಳಲ್ಲಿ ಸಾಹಿತ್ಯದ ಕಡೆ ಆಕರ್ಷಣೆಗೊಳ್ಳಲು ತಾತನೇ ಕಾರಣ ಎಂದು ಹಲವು ಬಾರಿ ಅಮರಚಿಂತರು ಹೇಳಿದ್ದುಂಟು. ನಿಧಾನವಾಗಿ ಕವಿತೆ ಬರೆಯಲು ಪ್ರಾರಂಭಿಸಿದ ಅವರು ಮುಂದಿನ ದಿನಗಳಲ್ಲಿ ತಳಸಮುದಾಯದ ನೋವನ್ನು ಅಭಿವ್ಯಕ್ತಿಸುವ ಕನ್ನಡದ ಬಹುಮುಖ್ಯ ಸಂವೇದನಾಶೀಲ ಬರಹಗಾರರಾಗಿ ಹೊರಹೊಮ್ಮಿದರು. ತುಳಿತಕ್ಕೊಳಗಾದ ಸಮುದಾಯಗಳ ಬದುಕೇ ಅವರ ಸಾಹಿತ್ಯದ ಮೂಲದ್ರವ್ಯವಾಗಿತ್ತು. ಅವರ ಬರಹಗಳು ಉಳ್ಳವರ ಶೋಷಣೆ, ದಬ್ಬಾಳಿಕೆಗಳ ವಿರುದ್ಧ ಕೆಂಡಕಾರುತ್ತಿದ್ದವು.

1970ರ ದಶಕದ ಕೊನೆಯ ಹೊತ್ತಿಗೆ ಕನ್ನಡ ಸಾಹಿತ್ಯದಲ್ಲಿ ದೊಡ್ಡ ಮಟ್ಟದ ದೃವೀಕರಣ ನಡೆಯುತ್ತಿದ್ದಾಗ ಅಮರಚಿಂತರು ಸಹಜವಾಗಿ ತಳಸಮುದಾಯಗಳ ನೋವುನಲಿವುಗಳ ಬಗ್ಗೆ ಬರೆಯುತ್ತಿದ್ದ ಎಡಪಂಥೀಯ ವಿಚಾರಧಾರೆಯ ವಲಯದಲ್ಲಿ ತಮ್ಮನ್ನು ಗುರುತಿಸಿಕೊಂಡರು. ಈ ಧ್ರುವೀಕರಣ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಒಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿತು. ಸಮ್ಮೇಳನದಲ್ಲಿ ಚೆನ್ನಣ್ಣ ವಾಲೀಕರಾರರು ಸೂಚಿಸಿದ ದಲಿತ ಸಾಹಿತ್ಯದ ಚರ್ಚೆಗೆ ಅವಕಾಶ ಕೊಡದಿದ್ದರೂ “ಒಂದು ಶತಮಾನದ ಕಣ್ಣು ತೆರೆಸಿದ ಕವಿ” ಎಂ. ಗೋಪಾಲಕೃಷ್ಣ ಅಡಿಗರು ಸಮ್ಮೇಳನದ ಸರ್ವಾಧ್ಯಕ್ಷರಾಗಲು ಒಪ್ಪಿಕೊಂಡಾಗ ಬರಗೂರು ರಾಮಚಂದ್ರಪ್ಪ, ಚೆನ್ನಣ್ಣ ವಾಲೀಕಾರ, ದೇವನೂರು ಮಹಾದೇವ, ಸಿದ್ಧಲಿಂಗಯ್ಯ, ಚಂದ್ರಶೇಖರ ಪಾಟೀಲ ಬಂಡಾಯವೆದ್ದಾಗ ಅಮರಚಿಂತರು ಸಹಜವಾಗಿ ಈ ಬಂಡಾಯ ಗುಂಪಿನಲ್ಲಿದ್ದರು. ಕೊನೆಗೆ ಅತ್ತ ಧರ್ಮಸ್ಥಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂಘಟಿಸಿದರೆ ಅದೇ ದಿನ ಇತ್ತ ಬೆಂಗಳೂರಿನಲ್ಲಿ ಈ ಬಂಡಾಯ ಬರಹಗಾರರು ಮೊದಲ ಬಂಡಾಯ ಸಾಹಿತ್ಯ ಸಂಘಟನೆಯನ್ನು ಸಂಘಟಿಸಿದರು. ‘‘ಖಡ್ಗವಾಗಲಿ ಕಾವ್ಯ: ಜನರ ನೋವಿಗೆ ಮಿಡಿವ ಪ್ರಾಣಮಿತ್ರ’’ ಎಂಬ ಘೋಷಣೆಯೊಂದಿಗೆ ಪ್ರಾರಂಭವಾದ ಈ ಬಂಡಾಯ ಚಳವಳಿಯನ್ನು ಹೈದರಾಬಾದ್ ಕರ್ನಾಟಕದಲ್ಲಿ ಮುನ್ನಡೆಸಿ ಗಟ್ಟಿಗೊಳಿಸಿದ ಚೆನ್ನಣ್ಣ ವಾಲೀಕಾರ, ಬಸವರಾಜ ಸಬರದ, ಬೋಲುಬಂಡೆಪ್ಪ, ಚೆನ್ನಬಸಪ್ಪ ಬೆಟ್ಟದೂರು, ಅಲ್ಲಮಪ್ರಭು ಬೆಟ್ಟದೂರು, ವೀರನಗೌಡ ನೀರಮಾನ್ವಿ, ರಾಜಶೇಖರ ನೀರಮಾನ್ವಿ, ಚಂದ್ರಕಾಂತ ಕುಸನೂರು ಮಂತಾದ ಬರಹಗಾರರ ತಂಡದಲ್ಲಿ ಅಮರಚಿಂತರೂ ಮುಂಚೂಣಿಯಲ್ಲಿದ್ದರು.

ಅಮರಚಿಂತರು ಕೇವಲ ಬರಹಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡ ಪ್ರತಿಭೆಯಲ್ಲ. ಶೋಷಣೆಯ ವಿರುದ್ಧ ಎಲ್ಲೇ ದನಿಯೆದ್ದರೂ ಅಲ್ಲಿ ಅವರು ಹಾಜರಾಗುತ್ತಿದ್ದರು. ದಲಿತರ ಮೇಲಿನ, ದಮನಿತರ ಮೇಲಿನ, ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ನಿರಂತರವಾಗಿ ಹೋರಾಡಿದರು. ಊಳಿಗಮಾನ್ಯ ಭೂಮಾಲಿಕರ ಶೋಷಣೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆ ಮುಂತಾದ ಅನಿಷ್ಠ ಪದ್ಧತಿಗಳ ವಿರುದ್ಧ ಅವರದ್ದು ನಿರಂತರ ಸಮರವಾಗಿತ್ತು.

ಅಮರಚಿಂತರು ತಮ್ಮ ಬರವಣಿಗೆಯಲ್ಲಿ ದಮನಿತರ ದನಿಯಾದ ಸಾರ ಮತ್ತು ಓದುಗಸ್ನೇಹಿಯಾದ ರೂಪಗಳಿಂದ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ಕನ್ನಡದಲ್ಲಿ ಘಜಲ್ ಬರವಣಿಗೆಗಳಿಗೆ ಹೊಸ ಮಜಲನ್ನು ಸೃಷ್ಟಿಸಿದ ಕೆಲವೇ ಬರಹಗಾರರಲ್ಲಿ ಅಮರಚಿಂತರು ಪ್ರಮುಖರು. “ಮುಂಜಾವಿನ ಕೊರಳು”, “ಅಧೋಜಗತ್ತಿನ ಅಕಾವ್ಯ”, “ಮಣ್ಣಲ್ಲಿ ಬಿರಿದ ಅಕ್ಷರ”, “ಅಮರಚಿಂತ ಕಾವ್ಯ”, “ಪದಗಳು ನಡೆದಾಡುತ್ತಿವೆ ಪಾದಗಳಾಗಿ” ಮುಳ್ಳಿನ ಬಾಯಲ್ಲಿ ಹೂ ನಾಲಿಗೆ”, ಬೋಧಿಯ ವೃಕ್ಷದಲ್ಲಿ ಬಾಧೆಯ ಪರಿಮಳ”, ಹರಿವ ನದಿಗೆ ಮೈಯೆಲ್ಲ ಕಾಲು” ಮುಂತಾದವುಗಳು ಅವರ ಕವನ ಸಂಕಲನಗಳು.

ಅವರು ಎರಡು ಕಾದಂಬರಿಗಳನ್ನು ಬರೆದಿದ್ದಾರೆ. ತೊಂಬತ್ತರ ದಶಕದ ಕೊನೆಯಲ್ಲಿ ಬರೆದ “ಕುರುಮಯ್ಯ ಮತ್ತು ಅಂಕುಶದೊಡ್ಡಿ” ಕಾದಂಬರಿಯು ಕೊರವ ಸಮುದಾಯದ ದಾರುಣ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುತ್ತದೆ. ಕಷ್ಟಬಂದಾಗ ಸ್ವಂತ ಹೆಂಡತಿಯನ್ನೇ ಮಾರುವ ಅನಿಷ್ಟ ಪದ್ಧತಿಯ ಮೇಲೆ ಅಮರಚಿಂತರು ಈ ಕಾದಂಬರಿಯಲ್ಲಿ ಬೆಳಕು ಚೆಲ್ಲಿದ್ದಾರೆ. ಇತ್ತೀಚೆಗೆ ಪ್ರಕಟಗೊಂಡ ಅವರ “ಬೂಟುಗಾಲಿನ ಸದ್ದು” ಕಾದಂಬರಿಯು ದೇಶವು ಸ್ವಾತಂತ್ರ್ಯ ಪಡೆಯುತ್ತಿದ್ದ ಸಂದರ್ಭದಲ್ಲಿ ಹೈದರಾಬಾದಿನ ನಿಜಾಮನ ರಜಾಕಾರರು (ನಿಜಾಮನ ಖಾಸಗಿ ಮಿಲಿಷಿಯ) ಹೈದರಾಬಾದ್ ಕರ್ನಾಟಕದ ಜನರ ಮೇಲೆ ಹರಿಬಿಟ್ಟಿದ್ದ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ.

ಅಮರಚಿಂತರ ತಮ್ಮ ಹರಿತವಾದ ಭಾಷಾಪ್ರಯೋಗ ಮತ್ತು ಅಭಿವ್ಯಕ್ತಿಗಳಿಗೆ ಹೆಸರುವಾಸಿಯಾದವರು. ತಮ್ಮನ್ನು ಯಾವಾಗಲೂ “ಬೇಟೆಯೊಂದಿಗೆ ಗುರುತಿಸಿಕೊಂಡಿದ್ದರೇ ಹೊರತು ಬೇಟೆಗಾರನೊಂದಿಗೆ ಅಲ್ಲ”. “ರಕ್ತಸಿಕ್ತ ಖರ್ಡ ನಿಮ್ಮ ಒರೆಯಲ್ಲಿ, ಹಂತಕರು ಯಾರೆಂದು ಮತ್ತೆ ಕೇಳುವಿರಿ; ಬಿತ್ತುವ ಬೀಜ ನಿಮ್ಮ ಉಗ್ರಾಣದಲ್ಲಿ, ಬೆಳೆಯಾಕ ಬರಲಿಲ್ಲವೆಂದು ಮತ್ತೆ ಕೇಳುವಿರಿ” ಎಂದು ನೇರವಾಗಿ ಪ್ರಶ್ನಿಸುವ ಪ್ರವೃತ್ತಿಯನ್ನು ಅಮರಚಿಂತರು ಮೈಗೂಢಿಸಿಕೊಂಡಿದ್ದರು.  “ಹುಟ್ಟು ಕುರುಡರ ಓಣಿಯಲ್ಲಿ ಚಾಳಿಸು ಮಾರಿದವನು” ಎಂದು ಗಾಂಧಿಯನ್ನು ಕರೆದಿದ್ದರು. “ರೊಟ್ಟಿ ಭೂಮಿಗಿಂತ ಮಿಗಿಲು, ಅದರ ಎತ್ತರ ಎವರೆಸ್ಟಿಗೂ ದಿಗಿಲು” ಎಂದು ಹಸಿವು ಮತ್ತು ಅನ್ನದ ಹಿರಿಮೆಯನ್ನು ಎತ್ತಿಹಿಡಿದಿದ್ದರು. “ಬೆಂಕಿಗೆ ಸುಡದ ಮನೆಗಳು ಹಿಮದಲ್ಲಿ ಸುಟ್ಟವು; ಎಣ್ಣೆಯಲ್ಲಿ ಸುಡದ ಮನೆಗಳು ರಕ್ತದಲ್ಲಿ ಸುಟ್ಟವು” ಎಂದು ಅವರು ಬಡವರ ಮೇಲಿನ ಹಿಂಸೆಯನ್ನು ಕುರಿತು ಹೇಳಿದ್ದರು.

1994ರಲ್ಲಿ ತಾರಾಸು ಪ್ರಶಸ್ತಿ ಮತ್ತು ಆರ್ಯಭಟ ಪ್ರಶಸ್ತಿಗಳು, 1997ರಲ್ಲಿ ಕಾಯಕ ಸಮ್ಮಾನ್ ಪ್ರಶಸ್ತಿ, 2002ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2012ರಲ್ಲಿ ಕನ್ನಡ ನಾಡು ಸಾಹಿತ್ಯ ಪ್ರಶಸ್ತಿಗಳಿಂದ ಸನ್ಮಾನಿತರಾದ ಅಮರಚಿಂತರು 1997ರಲ್ಲಿ ನಡೆದ 4ನೇ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. 2006ರ ಡಿಸೆಂಬರ್ 2, 3 ಮತ್ತು 4ರಂದು ರಾಯಚೂರಿನಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಾದಾಗ ಅಮರಚಿಂತರೇ ಸರ್ವಾಧ್ಯಕ್ಷರಾಗಬೇಕೆಂದು ಸಾಹಿತ್ಯ ವಲಯದಲ್ಲಿ ದೊಡ್ಡ ಆಗ್ರಹ ಕೇಳಿಬಂದಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ಅಧಿಕೃತವಾಗಿ ತೀರ್ಮಾನ ತೆಗೆದುಕೊಳ್ಳುವ ಮೊದಲೇ ಅಮರಚಿಂತರು ರಾಯಚೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ತನ್ನನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ನೋಡಬೇಕೆಂದು ಬಯಸುವ ಎಲ್ಲಾ ಅಭಿಮಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಲೇ ಅನಾರೋಗ್ಯದ ಕಾರಣವೊಡ್ಡಿ ಆ ಜವಾಬ್ದಾರಿಯನ್ನು ನಿರ್ವಹಿಸಲು ತಮಗೆ ಆಗುವುದಿಲ್ಲ ಎಂದು ನಯವಾಗಿ ನಿರಾಕರಿಸಿದರು. ಬಂಡಾಯ ಸಾಹಿತ್ಯ ಚಟುವಟಿಕೆಗಳಲ್ಲಿ ಅವರ ಒಡನಾಡಿಯೇ ಆದ ಬರಗೂರು ರಾಮಚಂದ್ರಪ್ಪನವರನ್ನು ಆ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಮಾಡುವ ಮೂಲಕ ಸಾಹಿತ್ಯ ಪರಿಷತ್ತು ಅಮರಚಿಂತರ ಭಾವನೆಗಳಿಗೆ ನ್ಯಾಯವೊದಗಿಸಿತು. ಯಾವುದೇ ಕನ್ನಡ ಸಾಹಿತಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗುವುದು ಒಂದು ಅವಿಸ್ಮರಣೀಯ ಕ್ಷಣ. ಆದರೆ, ಅಂತಹ ದೊಡ್ಡ ಗೌರವವನ್ನು ನೈಜ ಕಾರಣಗಳಿಗಾಗಿ ಪ್ರಾಮಾಣಿಕವಾಗಿ ನಿರಾಕರಿಸಿದ ಅಮರಚಿಂತರದ್ದು ನಿಜಕ್ಕೂ ದೊಡ್ಡಗುಣ.

(ಫೋಟೋ: ಸಂತೋಷ್ ಸಾಗರ್, ರಾಯಚೂರು. ಮಾಹಿತಿ ನೆರವು: ದಸ್ತಗೀರ್ ಸಾಬ್ ದಿನ್ನಿ, ರಾಯಚೂರು ಮತ್ತು ಶಿವಮೂರ್ತಿ ಹಿರೇಮಠ, ರಾಯಚೂರು)

Leave a Reply

Your email address will not be published.