ನೀರತೇಜಿಯನೇರಿದ ಪಯಣ: ಕವಿತಾ ರೈ ಅವರ ಕಾವ್ಯ

ಸುರೇಶ ನಾಗಲಮಡಿಕೆ

ಕವಿತೆಯಲ್ಲಿ ಬದುಕಿನಷ್ಟೇ ಜೀವಚೈತನ್ಯ ಹರಿದಾಡುವುದು ಎಂಥ ಸಮಯಗಳಲ್ಲಿ ಎಂದು ಯೋಚಿಸಿದಾಗ ಹಲ ಬಗೆಯ ಸಂಕೀರ್ಣ ಉತ್ತರಗಳು ಮುಂದೆ ಬರಬಲ್ಲವು. ವ್ಯಕ್ತಿ ಬದುಕಿನುದ್ದಕ್ಕೂ ಅನುಭವಿಸುವ ಕಷ್ಟಪರಂಪರೆಗಳಿಗೆ ಎಡತಾಕುವ ಹಾಗು ಅವುಗಳನ್ನು ಮೀರುವ ಹಂತದಲ್ಲಿ ಅನುಭವಕ್ಕೆ ಬರುವ ಮನಸ್ಥಿತಿಗಳು ಯಾವಗಲೂ ಬಿಕ್ಕಟ್ಟಿನ ಆವರಣದಲ್ಲೆ ಉಸಿರಾಡುತ್ತವೆ. ಮನುಷ್ಯನ ಢೋಂಗೀತನಗಳು, ಅಪ್ರಮಾಣಿಕತೆ, ಸಣ್ಣತನಗಳು ಇಂಥ ಸಂದರ್ಭದಲ್ಲಿ ಮೇಲುಗೈ ಪಡೆಯಲು ಹವಣಿಸುತ್ತವೆ. ಕವಿತೆಗೆ ಇರುವ ಶಕ್ತಿ ಇವುಗಳನ್ನೂ ಕೂಡ ಒಳಕ್ಕೆ ಸ್ವೀಕರಿಸುವುದು. ಯಾವುದೇ ಕವಿತೆ ಬದುಕನ್ನು ಮತ್ತು ಅದರ ಅಭಿವ್ಯಕ್ತಿಗಳನ್ನು ಕೇವಲ ವಿವರಿಸುವ ಹಂತಕ್ಕೆ ತಲುಪಿದರೆ ಅದು ಏಕಮುಖಿಯಾಗುವ ಇಲ್ಲವೆ ರಕ್ತಮಾಂಸಗಳನ್ನು ಕಳೆದುಕೊಂಡ ದೇಹದ ರೂಪದಲ್ಲಿ ಇರಬಹುದು.

ಇಲ್ಲಿಯೇ ಕವಿತೆಯ ನಿಜವಾದ ಭಾಷಿಕ ವಿನ್ಯಾಸಗಳ ಅಂತಃಶಕ್ತಿ ಅರಿವಾಗುವುದು. ವಿವರಿಸುವುದಕ್ಕೆ ಕವಿತೆಯ ರೂಪವೇ ಬೇಕಿಲ್ಲ ಅದಕ್ಕೆ ಗದ್ಯದ ಹಲವು ಮಾದರಿಗಳೂ ಇವೆ. ಸದ್ಯಕ್ಕೆ ಕನ್ನಡಕಾವ್ಯ ಎದುರಿಸುತ್ತರಿವ ಬಿಕ್ಕಟ್ಟುಗಳಲ್ಲಿ ಇದು ಪ್ರಧಾನ ವಾದದ್ದು ಎಂದು ಖಿಚಿತವಾಗಿ ಹೇಳಬಹುದು. ಬದುಕನ್ನು ‘ಕಟ್ಟುವುದಕ್ಕೆ’ ಹೊರಡುವ ಕವಿತೆ ನಿಜವಾದ ಸಂಕಟಗಳನ್ನು ಸವಾಲುಗಳನ್ನು ಎದುರಿಸಬಲ್ಲದು. ತಾನಾಗಿಯೇ ಅದು ಖಿಚಿತವಾದ ತೀರ್ಮಾನಗಳನ್ನು ನೀಡುವುದಿಲ್ಲ.

ಹೀಗಾಗಿಯೇ ಅದು ಕಾಲವನ್ನು ಎದುರಿಗೆ ಇಟ್ಟುಕೊಳ್ಳದೇ ಮನುಷ್ಯನನ್ನು ಬಳಸಿಕೊಳ್ಳುತ್ತದೆ. ಅಂದರೆ ಕವಿತೆ ಸಮಕಾಲೀನಗೊಳ್ಳುವ ಬಗೆ ಇದು. ಪೂರ್ವಸೂರಿಗಳು ನೆನಪಿನ ಲೋಕದಲ್ಲಿ ಇಂದಿಗೂ ಮಿಸುಕಾಡುತ್ತಿರುವುದು ಇದೇ ಕಾರಣಕ್ಕೆ ಅಲ್ಲವೇ? ಇರಲಿ. ನಿಜವಾದ ಕಾವ್ಯ ಎಂದಿಗೂ ಸುಖಾಂತ್ಯವಲ್ಲ ಹಾಗೆ ಆಗುವುದಾರೆ ಚೈತನ್ಯವನ್ನು ಕಳೆದುಕೊಳ್ಳುವ ಅಪಾಯವಿರುತ್ತದೆ. ಅದರ ಆತ್ಯಂತಿಕ ನಿಲುವುಗಳು ಯಾವಾಗಲೂ ದು:ಖದ ಮತ್ತು ತಲ್ಲಣಗಳ ಆವರಣಗಳಲ್ಲಿ ಇರಬಲ್ಲವೇ? ಕವಿತಾ ಅವರ ಇದುವರೆಗಿನ ಕಾವ್ಯ ಈ ಬಗೆಯ ತಲ್ಲಣಗಳ ಕಡೆ ತಾಕುತ್ತಲೇ ಬಂದಿದೆ. ಇವರ ಕವಿತೆಯನ್ನು ಓದುವಾಗ, ಅರಿಯುವಾಗ ನಮ್ಮ ಜನಪದ ಮಹಾಕಥನಗಳು ( ಮೆಗಾ ನರೇಟಿವ್ಸ್) ನೆಮಪಾಗದೇ ಇರವುದಿಲ್ಲ.’ಹಾಲುಮತ ಪುರಾಣ’ದಲ್ಲಿ ಬರುವ ಬಹುಮುಖ್ಯ ಪ್ರತಿಮೆಗಳು ನೀರು, ಮೊಲೆಹಾಲು, ಹೆಣ್ಣಿನ ಬೆವರು. ಜೀವ ಸಂಕುಲದ ಚಲನೆ ಸಾಗುವುದೇ ಇವುಗಳಿಂದ. ಇಲ್ಲಿನ ಗಂಡುಲೋಕ ಆದಿಶಕ್ತಿಯ ಮೊಲೆಹಾಲಿನಿಂದ ಇಲ್ಲವೆ ಬೆವರಿನಿಂದ ಉದ್ಭವಿಸಿದವರು.ಅಮೋಘಸಿದ್ದನೇ ಇದಕ್ಕೆ ನಿದರ್ಶನ. ಆ ಕಾವ್ಯ ಆರಂಭವಾಗುವುದೇ ‘ನೀರೆ ನಿರಾಂಕಾರದೊಳಗೆ ಭೂಮಿನಾರ ಇಲ್ಲಯ್ಯಾ’ ಎಂಬ ರೂಪಕಾತ್ಮಕ ಸಾಲುಗಳಿಂದ. ಮಣ್ಣು ಅಥವ ಆ ಮೂಲಕ ಭೂಮಿಯನ್ನು ತಾಯಿ ಎಂದು ಅವೈದಿಕ ನೆಲೆಗಳು ಒಳಗೊಂಡಂತೆ ಬಹುತೇಕ ನಂಬಿಕೆಗಳಲ್ಲಿ ಸ್ಥಿರವಾಗಿದೆ.

ಆದರೆ ಈ ಪುರಾಣ ಭೂಮಿಗಿಂತ ನೀರು ಮೊದಲು ಎಂದು ವೈಜ್ಞಾನಿಕವಾಗಿ ನಿರೂಪಿಸಿದಂತೆ ಇದೆ. ಈ ಕಾವ್ಯದ ಹೆಣ್ಣು ನೋಟ ಕ್ರಮಗಳಿಗೆ ಇಂದಿನ ಆಧುನಿಕ, ಆಧುನಿಕೋತ್ತರ ಎಂಬ ಪರಿಕಲ್ಪನೆಗಳಿಗೆ ಸೆಡ್ಡುಹೊಡೆಯ ಬಹುದಾದ ಶಕ್ತಿ ಖಂಡಿತ ಇದೆ. ಈ ವಿವರಗಳನ್ನು ನೀಡಿದ್ದು ಕವಿತಾ ಅವರ ಒಟ್ಟು ಕವಿತೆಯ ಕೇಂದ್ರ ಪ್ರತಿಮೆ ‘ನೀರು’ ಎಂದು ಹಲವು ವಿಮರ್ಶಕರು ಗುರುತಿಸಿದ್ದಾರೆ. ಅದು ಸರಿಯೂ ಕೂಡ. ಆದರೆ ಅವರ ಒಳ ಅಭಿವ್ಯಕ್ತಿ ಕ್ರಮಗಳು ಏಕ ನೆಲೆಯದ್ದಲ್ಲ ಎಂಬುದನ್ನೂ ಮನಗಾಣಬೇಕು. ಏಕೆಂದರೆ ಇಂದಿನ ಯಾವೂಬ್ಬ ಕವಿಯ ಕವಿತೆಯಲ್ಲೂ ಏಕ ಬಗೆಯ ತಾತ್ವಿಕತೆ ಅಡಗಿಲ್ಲ.

ಈ ಕಾಲಮಾನದ ಒತ್ತಡವೂ ಇದಕ್ಕೆ ಹೊರತಲ್ಲ.ನವೋದಯದ ಕನಸುಗಾರಿಕೆಯನ್ನು ಹಲಬಗೆಯ ನಿಸರ್ಗ ಪ್ರತಿಮೆಗಳಲ್ಲಿ ತರುವ ಕವಿತಾ ಅವರು ಅಂಥ ಜಾಗಗಳಲ್ಲಿ ಬಹುತೇಕ ಹೆಣ್ಣಿನ ಸ್ವ ಚರಿತೆಗಳನ್ನು ಕಟ್ಟುವ ದಾರಿಯಲ್ಲಿದ್ದಾರೆ. ಇದು ಸಮಗ್ರ ನೆಲೆಯಲ್ಲಿ ಮಾಗಿದೆ ಎಂದು ಹೇಳಲಾರೆ. ಅದು ಸಾಧ್ಯವೂ ಇಲ್ಲ. ಹೆಣ್ಣು ನೋಟಕ್ರಮಗಳು ಎಲ್ಲ ಸಂದರ್ಭಗಳಲ್ಲಿ ಏಕರೀತಿಯಲ್ಲಿರುತ್ತವೆ ಎಂದು ಹೇಳಲು ಬರುವುದಿಲ್ಲ. ದೇಹ ಮೀಮಾಂಸೆ, ಸ್ವಗತಕ್ರಮ, ಇತ್ಯಾದಿಗಳ ಬೆನ್ನಲ್ಲಿ ಹೆಣ್ಣು ಕಾವ್ಯವನ್ನು ಹೆಚ್ಚು ಕಾಣಲಾಗಿದೆ. ಈ ಬಗೆ ಒಂದು ಹಂತಕ್ಕೆ ಸರಿ ಕಾಣಬಹುದು.ಆದರೆ ಕವಿತಾ ಅವರ ಕಾವ್ಯ ಹಲ ಬಗೆಯಲ್ಲಿ ಸ್ವಗತ ಕ್ರಮವನ್ನು ಧಾಟುವುದಕ್ಕೆ ಯತ್ನಿಸಿದೆ. ಇಲ್ಲಿನ ಹೆಣ್ಣು ಬದುಕಿನ ದುಗುಡಗಳೊಂದಿಗೆ, ಮನಸ್ಥಿತಿಯ ತಿಕ್ಕಾಟಗಳ ಜತೆಗಿನ ಗುದ್ದಾಟಗಳು ಉದ್ದಕ್ಕೂ ಕಾಣುತ್ತವೆ. ಇಷ್ಟೇ ಆಗಿದ್ದರೆ ಅವರ ಕವಿತೆಯು ಏಕಮುಖವಾಗುವ ಅಪಾಯವಿತ್ತು. ಆದರೆ ಸಾತತ್ಯ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಸಾಕಷ್ಟು ದೂರ ಕ್ರಮಿಸಿದ್ದಾರೆ.

ಕವಿತಾ ಅವರ ಇದುವರೆಗಿನ ಕಾವ್ಯದಲ್ಲಿ ಹೊಂದಾಣಿಕೆಯ ಬದುಕಿನ ಅರ್ಥವನ್ನು ಹುಡುಕುವ ಮತ್ತು ವಿಸ್ತರಿಸುವ ಕೆಲಸವನ್ನು ಉದ್ದಕ್ಕೂ ಮಾಡುತ್ತಾರೆ.ಇದನ್ನೇ ಆತ್ಮದ ಭಾಷೆ ಎಂದು ಕರೆದಿದ್ದಾರೆ.ಹೆಣ್ಣು ನೋಟ ಕ್ರಮಗಳು ಹಲವು ಬಾರಿ ಸೈದ್ಧಾಂತಿಕ ನೆಲೆಗಳಿಗೆ ಹಾತೊರೆದರೂ ಸ್ವ ಚರಿತೆಯ ಅಲೆಗಳನ್ನು ಮೀರುವುದಿಲ್ಲ. ಮಹಿಳಾ ಕವಿತೆ ಭಿನ್ನವಾಗಿರುವುದಕ್ಕೆ ಇದೂ ಒಂದು ಕಾರಣ. ಸೀಮಿತ ಧೋರಣೆಗಳಿಂದ ಕೂಡಿದ ಕವಿತೆ ಆ ಕ್ಷಣಕ್ಕೆ ಯಶ ಕಾಣಬಹುದಷ್ಟೇ. ಆದರೆ ಯಾವುದೇ ಕಾವ್ಯ ಬಾಳಿನ ಒಳನೆಲೆಗಳನ್ನು ಮೀರುವುದಕ್ಕೆ ಯತ್ನಿಸುವುದಿಲ್ಲ ಅನಿಸುತ್ತದೆ. ಕವಿತಾ ಅವರ ಭಾಷೆ ಸುತ್ತಲ ಬದುಕನ್ನು ಕಾಣಲು ತಕ್ಕ ಹೊಣೆಗಾರಿಕೆಯನ್ನು ರೂಪಿಸಿಕೊಂಡಿದೆ. ದಡದಂಚಿನ ಪ್ರತಿಮೆಗಳು ನಿಸರ್ಗದ ರೊಮಾಂಟಿಕ್ ಆದ ಭಾವನೆಗಳನ್ನೇ ಉಸಿರಾಡುವುದಿಲ್ಲ.ಬಿ.ಎಂ.ಶ್ರೀ, ಪಂಜೆ, ಕಡೆಂಗೋಡ್ಲು ಅವರ ಭಾಷಿಕ ಲಯಗಳು ನೆನಪಾದರೂ ಇಂದಿನ ಭಾಷೆಗೆ ಇರಬಹುದಾದ ಶಕ್ತಿಯನ್ನು ಅವರು ಮರೆಯುವುದಿಲ್ಲ.ತಾನು ನಿಸರ್ಗ ಪ್ರತಿಮೆಗಳನ್ನು ಹೇಗೆ ಬಳಸಬೇಕು? ಆ ಕ್ಷಣಕ್ಕೆ ಹೊಳೆದ ಅನುಭವಕ್ಕೆ ಹೇಗೆ ಬೆಂಬಲ ನೀಡಬಲ್ಲವು?

ಈ ಹಿನ್ನಲೆಯಲ್ಲಿ ಯೋಚಿಸಿದಾಗ ಕವಿತಾ ಅವರ ಕಾವ್ಯದಲ್ಲಿ ‘ಸ್ತೀವಾದಿ ಪರಿಸರವಾದ’ ಎಂಬ ನುಡಿಗಟ್ಟು ನೆನಪಾಗುತ್ತಿದೆ. ಇದನ್ನು ವಿವರಿಸಿಕೊಳ್ಳುವ ಹೊಣೆಗಾರಿಕೆಯೂ ನಮ್ಮ ಮೇಲಿದೆ. ಯಾವುದೇ ಒಂದು ತಾತ್ವಿಕ ಪರಿಭಾಷೆಯನ್ನು ಬಳಸುವಾಗಲೂ ವಿಚಿತ್ರ ಬಗೆಯ ಸಂಕಟಗಳು ಎದುರಾಗುತ್ತವೆ. ಆಧುನಿಕೋತ್ತರವಾದದ ಲಕ್ಷಣಗಳೇ ಹೀಗೆ. ಎಲ್ಲವೂ ಸಂಶಯದಿಂದ ಕಾಣುವುದು. ಇರಲಿ ಯಾಕೆ ಹೀಗೆ ಒಂದು ನುಡಿಗಟ್ಟನ್ನು ಬಳಸುವಾಗ ಗೊಂದಲವಾಗುತ್ತದೆ ಅಂದರೆ ಕಾವ್ಯದ ವಿಚಾರದಲ್ಲಿ ಒಂದೇ ಪ್ರತಿಮೆಯನ್ನು ಬಳಸುವಾಗ ವಿಸ್ತರಿಸುವ ಮತ್ತು ಮುರಿದು ಕಟ್ಟುವ ಧಾವಂತಗಳು ಎದುರಾಗುತ್ತಲೇ ಇರುತ್ತವೆ. ಕವಿತಾ ಅವರೂ ಕೂಡ ಇದನ್ನು ಎದುರಿಸಿದ್ದಾರೆ. ಹೆಣ್ಣು ತನ್ನ ವೈಯಕ್ತಿಕ ಬದುಕನ್ನು ಮತ್ತು ಹೊರಗಿನ ಲೋಕದೃಷ್ಟಿಯನ್ನು ಅಭಿವ್ಯಕ್ತಿಸುವಾಗ ಬಳಸುವ ನಿಸರ್ಗ ಪ್ರತಿಮೆಗಳು ಭಿನ್ನವಾಗಿಯೇ ಇರಬೇಕು ಇಲ್ಲದಿದ್ದರೆ ಕವಿತೆ ತನ್ನ ಒಳ ಚೈತನ್ಯವನ್ನು ಕಳೆದುಕೊಳ್ಳತ್ತದೆ, ಎಷ್ಟೇ ಎಚ್ಚರ ಇದ್ದರೂ ಕವಿತಾ ಅವರು ಇದರಿಂದ ಪಾರಾಗಲೂ ಹೆಣಗಾಡಿದ್ದಾರೆ.

ಈ ಬಗೆಯ ಹೆಣಗಾಟದಲ್ಲೇ ಅವರ ಬೆಳವಣಿಗೆಯೂ ಇದೆ.’ದಡದಲ್ಲಿ ಕಂಡ ದೃಶ್ಯ’ ಎಂಬ ಕವಿತೆಯ ಕಟ್ಟುವಿಕೆಯನ್ನು ಗಮನಿಸಿದರೂ ಅರಿವಾದೀತು.ಕಂಡ ಮತ್ತು ಅನುಭವಿಸಿದ ನಿಸರ್ಗ ಚಿತ್ರಗಳನ್ನು ನೀಡುವಾಗ ಅವರ ಶೈಲಿ ಮಾಗುತ್ತಾ ಹೊಗುತ್ತದೆ. ಇವುಗಳನ್ನು ವಿವರಿಸುದಷ್ಟೇ ಆಗಿದ್ದರೆ ಕವಿತೆ ಬಹುಕಾಲ ಬಾಳುವುದಿಲ್ಲ.ಬದಲಿಗೆ ಅವುಗಳನ್ನು ಉಸಿರಾಟದ ಲಯಗಳನ್ನಾಗಿ ರೂಪಿಸಿಕೊಳ್ಳುವ ರೀತಿ ಹಾಗು ಬದುಕಿನ ದಂದುಗಗಳೊಟ್ಟಿಗೆ ಲೀನಗೊಳಿಸುವ ಪರಿ ಮುಖ್ಯವಾಗಬೇಕು.
‘ಎಲ್ಲ ಮನೆಗಳಲ್ಲೂ ಒಂದೊಂದು ಬಾವಿಕಟ್ಟೆ
ಬಾವಿಕಟ್ಟೆ ಬದುಕು ತಳಕ್ಕೆ
ತೂತು ಮಾಡಿ ನೀರನ್ನೆಲ್ಲಾ
ಹರಿಯಬಿಡಬೇಕೆನಿಸುತ್ತಿಲ್ಲ
ಹರಿದ್ಹರಿದು ಗಂಗೆ ತುಂಗೆ ಯಮುನೆ
ಕಾವೇರಿಯಂತೆ ಸಮುದ್ರ ಸೇರ
ಬೇಕಿನಿಸುತ್ತಿಲ್ಲ. ( ಹಕ್ಕಿ ಹರಿವ ನೀರು)
ಹೆಣ್ಣು ನೋಟಕ್ರಮಗಳು ಸಾಂಸ್ಕøತಿಕ ಪ್ರತಿಮೆಗಳ ಬೆನ್ನು ಹಿಡಿದೇ ನುಗ್ಗಬಲ್ಲವು. ಕವಿತಾ ಅವರ ಮೊದಲ ಕವಿತೆಗಳ ನೀರಿನ ಪ್ರತಿಮೆ ಚಲಿಸುವುದಿಲ್ಲ. ಮೇಲಿನ ಕವಿತೆಯ ಒಳಧ್ವನಿಯನ್ನು ಹೆಚ್ಚು ವಿವರಿಸಬೇಕಿಲ್ಲ.ಹಿರಿತಲೆಮಾರಿನ ಜೀವಗಳೊಂದಿಗಿನ ಸಂವಾದ ಸಂಘರ್ಷಕ್ಕೆ ಎಡೆಮಾಡಿಕೊಡುವ ಧೋರಣೆ ಇವರದ್ದಲ್ಲ. ಹೊರ ಬದುಕನ್ನು ಸ್ವೀಕರಿಸುವದೆಂದರೆ ನಿಂತ ನೀರಲ್ಲ ಬದಲಿಗೆ ಹರಿವ ನೀರು. ;ಹಕ್ಕಿ ಹರಿವ ನೀರು ಎಂಬ ರೂಪಕವೇ ಒಳಬಾಳಿನ ಅಸ್ಮಿತೆಯನ್ನು ಅನಾವರಣ ಮಾಡುತ್ತದೆ. ‘ರುಬ್ಬುಗಲ್ಲು’ ಒಲೆ’ ಕವಿತೆಗಳ ಆತ್ಯಂತಿಕ ನಿಲುವುಗಳು ಕೂಡ ಒಳಸಂವಾದಗಳ ಮೂಖೇನ ಕಾಣಬಲ್ಲವು.

ಈ ಕ್ರಮ ಕೇಶವ ಮಳಿಗಿ ಯವರು ಹೇಳಿದಂತೆ ‘ಮುಗ್ಧತೆಯೊಂದಿಗೆ ಮಾಗಿದ ಮನಸ್ಸು’. ಆದರೆ ಈ ಬಗೆಯ ಮುಗ್ಧತೆಯನ್ನು ಅವರು ಸಮಾಜದಲ್ಲಿನ ತನಗೆ ಒಪ್ಪಿತ ವಲ್ಲದ ನಿಲುವುಗಳ ಜತೆ ರಾಜಿಗೆ ಬಳಸಿಕೊಳ್ಳುವುದಿಲ್ಲ.ತೀರ ಬಿಕ್ಕಟ್ಟಿನ ಹಾಗು ಸಂಘರ್ಷದ ಬದುಕಿನ ಲಯಗಳನ್ನು ಇವರ ಕವಿತೆ ಒಳಗುಮಾಡಿಕೊಳ್ಳುವ ಬಗೆ ಗೊಂದಲದ್ದಲ್ಲ. ಸ್ತ್ರೀವಾದಿ ಪರಿಸರವಾದ ಎಂಬುದಕ್ಕೆ ಕೆಲವು ಸೂಚನೆಗಳು ಇಲ್ಲಿ ಲಭ್ಯವಾಗಬಲ್ಲವು. ಹೆಣ್ಣು ತನ್ನ ವೈಯಕ್ತಿಕ ಚರಿತೆಯನ್ನು ನೀರಿನಂತೆ ಹರಿದು ಬಿಡಲು ಸಾಧ್ಯವೆ? ‘ಕದಡಿದ ನೀರು/ ತಿಳಿಗೊಳ್ಳಲು ಬಿಡು ತಂಗಲಿ/ ಮನ ಏಕಾಂತದಲಿ /ತಪಸ್ಸಾಗಲಿ ಎಲ್ಲ ಕ್ರಿಯೆ.( ನೀರ ತೇರು) ಕದಡಿದ ನೀರು ತಿಳಿಗೊಳ್ಳುವ ಕ್ರಮ ಪ್ರಕ್ಷುಬ್ಧತೆ ಮತ್ತು ಮಾಗುವಿಕೆಗಳ ನಿರಂತರ ಮುಖಾಮುಖಿಯಲ್ಲಿ ಬದುಕು ಹರಿದು ಬಿಡುತ್ತದೆ.
‘ನೇರ ರೇಖೆಗಳಿಲ್ಲ ನಿಸರ್ಗ
ಕಾಣುವುದೇ ಲಯಬದ್ಧ
ತೆರೆಗಳಾಗಿ ಸೇತುವೆಯ
ಮೇಲಷ್ಟೇ ಸ್ಮøತಿಯ ಬಿಂಬ
ದಡ ಬೆಸೆವ ವೈಭವ ( ನೀರತೇರು)
ದಡದಂಚಿನಲ್ಲಿ ಹರಿಯುವ ಚಿತ್ರಗಳು ಕವಿಯ ಮನಸ್ಥಿತಿಯನ್ನು ಎಲ್ಲಿಗೆ ಕೊಂಡೊಯ್ಯಬಹುದು? ಹೀಗೆ ಯೋಚಿಸಿದಾಗ ನೀರಿನ ಚರಿತೆ ಹೆಣ್ಣಿನ ಸ್ವಚರಿತೆಯ ಜತೆಗೆ ಅಧ್ವೈತದಂತೆ ಗೋಚರಿಸಬಲ್ಲದು. ಕನಕನ ಒಂದು ಪ್ರತಿಮೆ ನೆನಪಾಗುತ್ತಿದೆ ‘ ನೀರಿನ ಸಂಗವ ಬಿಟ್ಟು ಆಣಿಮುತ್ತಾದಂತೆ’ ಆದರೆ ಕವಿತಾ ಅವರ ಕಾವ್ಯ ನೀರಿನ ಸಂಗವ ತೊರೆಯಲು ಸಾಕಷ್ಟು ಸವಾಲುಗಳಿವೆ. ಆಣಿಮುತ್ತಾಗುವುದು ಹೆಣ್ಣು ಚರಿತೆಗೆ ಅಷ್ಟು ಸುಲಭವೂ ಅಲ್ಲ.ಏಕೆಂದರೆ ನೀರಿನಲ್ಲಿಯೇ ಹಲಬಗೆಯ ನೋಟಗಳನ್ನು ಇವರ ಕಾವ್ಯ ಒಳಗುಮಾಡಿಕೊಂಡಿದೆ.

ಕವಿತೆ ತನ್ನ ಪಾಡಿಗೆ ತಾನು ಮೈಪಡೆಯುವ ಗುಣವನ್ನು ತಾನಾಗಿಯೇ ಧರಿಸಿರುತ್ತದೆ.ಹೀಗೆ ಒಡಮೂಡುವಾಗ ದಟ್ಟ ಅನುಭವಗಳೇ ಕೇಂದ್ರವಾಗಿ ಸಾಗುತ್ತದೆ. ಈ ಸಾಗುವಿಕೆಯೇ ಲಯಗಳ ಸಾತತ್ಯದ ಜತೆಗೆ ಇಚ್ಛಿತ ವಸ್ತು ಮಾಗುತ್ತದೆ. ಅಂತಹ ಕವಿತೆಗಳನ್ನು ಕೆಲವನ್ನಾದರೂ ರೈ ಅವರಲ್ಲಿ ಕಾಣಬಹುದು.ಬದುಕೇ ಒಂದು ತತ್ವ ಎಂದು ಭಾವಿಸುವ ಕವಿಗಳು ತೀರ ವಿರಳ (ಹೊಸ ತಲೆಮಾರನ್ನು ಅನುಲಕ್ಷಿಸಿ) ಬದುಕಿನಾಚಿಗಿನ ಹೊರ ಜಗತ್ತಿನ ಸಿದ್ಧಾಂತಗಳನ್ನು ಕವಿತೆಯೊಳಗೆ ತರುವುದು ತಪ್ಪಲ್ಲ ಆದರೆ ಅವು ಬದುಕನ್ನು ಹೇಗೆ ಸಹ್ಯವಾಗಿ ಕಾಪಿಡಬಲ್ಲವು ಎಂಬುದನ್ನು ಅರಿಯಬೇಕಲ್ಲವೇ. ಈ ಬಿಕ್ಕಟ್ಟನ್ನು ಅರಿತಿದ್ದರಿಂದಲೇ ಕವಿತಾ ಅವರ ಕಾವ್ಯದಲ್ಲಿ ಧರ್ಮದ ಸಂಕೇತಗಳು ಹೆಚ್ಚು ಮನುಷ್ಯಪರವಾಗಿ ಗೋಚರಿಸತ್ತವೆ. ಕ್ರಿಸ್ತ, ಬುದ್ಧನ ಚಿತ್ರಗಳು ಆಕ್ಟಿವಿಸ್ಟ್ ಧೋರಣೆಗಳ ಕಡೆ ವಾಲಿದರೂ ಕವಿತೆಯ ಒಳನೆಲೆಗಳನ್ನು ಬಿಟ್ಟುಕೊಡಲಾರವು. ಅಂದರೆ ಕವಿತೆಯು ಅಂತಸ್ಥನೆಲೆಯಿಂದಲೇ ಲೋಕದೃಷ್ಟಿಯನ್ನು ಕಂಡುಕೊಳ್ಳುಲು ಹವಣಿಸುತ್ತಿರುತ್ತದೆ.
‘ಬಿಡಿ ಬಿಡಿ ಮನ
ಶಿಲುಬೆಯ ಮೇಲೆ ನರಳುತ್ತಿದೆ
ಕನಸಿನಲಿ ಕಂಡ ಬೆಟ್ಟದ ತುದಿಗೆ
ಬೆಳಕಿನ ಕಿಡಿ ಕೂಡಿಸಿದ ಏಸು
ಅದೇ ಶಿಲುಬೆ
ಮತ್ತದೇ ಕಣ್ಣು
ಹಾಗೇ ಕಂಡ ಹುಡುಗ’ ( ನೀರುಮಾಡು)
ನೋವಿನಲ್ಲಿ ಅದ್ದಿದ ಅಲ್ಲಿಂದ ಮತ್ತೆ ತೇಲಿ ಲೋಕವನ್ನು ಅಪ್ಪುವ, ಅಪ್ಪಿ ಅರ್ಥೈಸಿಕೊಳ್ಳುವ ಇರಾದೆಯನ್ನು ಇವರ ಕೆಲವು ಕವಿತೆಗಳು ಸದಾ ಯತ್ನಿಸುತ್ತಲೇ ಇರತ್ತವೆ.ಕರಾವಳಿಯ ಸಹ್ಯ ಬದುಕನ್ನು ಕಲುಕುತ್ತಿರುವ ಜೀವವಿರೋಧಿಗಳ ಜತೆಗೆ ಕೂಡೊಟ್ಟಿನ ಬದುಕಿನ ಕ್ಷಣಗಳು ವಿಸ್ಮøತಿಗೆ ಸರಿದಿರುವ ಸಂಗತಿಗಳನ್ನು ಅವರ ಕವಿತೆಗಳು ಒಳಗುಮಾಡಿಕೊಂಡಿವೆ. ‘ನಾನಿಲ್ಲಿ ಇದೇ ಬಿರಿವ ನೆಲದಲ್ಲಿ / ಹಿಂಸೆಯ ಶಾಶ್ವತತೆಯ ಅರಿಯಲೆಂದೇ/ ನರಳಬೇಕು ಶಾಂತಿಗಾಗಿಯೇ ಅಲೆಯಬೇಕು.( ನೀರುಮಾಡು) ಎಂಬ ಸಾಲುಗಳು ಇದನ್ನೇ ಹೇಳುತ್ತವೆ. ಧರ್ಮ ಮತ್ತು ಹಿಂಸೆಯ ಒಳನೆಲೆಗಳನ್ನು ಕವಿತೆಯಲ್ಲಿ ಹಿಡಿದಿಡಲು ಸುಲಭವಲ್ಲ. ಅದರ ಭಾಷಿಕ ಲಯಗಳು ಕೇವಲ ವಿವರಗಳಿಗೆ ತಣ್ಣಗಾಗುವ ಅಪಾಯವಿರುತ್ತದೆ.ಸೂರ್ಯನ ಚಿತ್ರಗಳನ್ನು ಅವರು ವಿಚಿತ್ರ ಬಗೆಯಲ್ಲಿ ಬಳಸಿಕೊಳ್ಳವಾಗಲೂ ಇದರ ಅರಿವು ಸಿಗುತ್ತದೆ.

ಇಷ್ಟು ಒಳಗೊಂಡಿದ್ದರೂ ಈಚಿನ ಮಹಿಳಾ ಕಾವ್ಯದ ಅಸ್ಮಿತೆಗಳ ಜತೆಗಿನ ನಂಟನ್ನು ಇವರು ಕಳೆದುಕೊಂಡಿಲ್ಲ. ದೇಹಮೀಮಾಂಸೆ, ಪರಂಪರೆಯ ಜತೆಗಿನ ನಂಬಿಕೆಯ ಹೊಂದಾಣಿಕೆ; ‘ಅವನ’ ನೊಂದಿಗಿನ ಒಳಸಂವಾದದ ತಣ್ಣನೆಯ ಗುದ್ದಾಟಗಳು; ಎಲ್ಲವೂ ತಮ್ಮ ಸರೀಕರಂತೆಯೇ ಕವಿತೆಯನ್ನು ಕಟ್ಟಿದ್ದಾರೆ.ಕುಟುಂಬದಾಚೆಗಿನ ಹೆಣ್ಣಿನ ನಿಲುವುಗಳು ಬಹುತೇಕ ಆಂತರಿಕವಾಗಿಯೇ ಚಲಿಸುತ್ತಿರುತ್ತವೆ. ಈ ದಾರಿಯಲ್ಲಿ ಯೋಚಿಸಿದಾಗ ಸ್ಚಚರಿತೆ ಮತ್ತು ಸಮಾಜದ ತಿಳುವಳಿಕೆಗಳು ಪರಸ್ಪರ ಮುಖಾಮುಖಿಯಾಗುತ್ತಲೇ ಇರುತ್ತವೆ. ಈ ನಿಟ್ಟಿನಲ್ಲಿ ಕನ್ನಡದ ಮಹಿಳಾ ಕಾವ್ಯ ಬಹುಮಟ್ಟಿಗೆ ಒಂದೇ ರೇಖೆಯಲ್ಲಿ ಚಲಿಸುತ್ತದೆ. ದೇಹ ಮೀಮಾಂಸೆಂiÀನ್ನು ವಿವರಿಸುವಾಗ ವೈಯಕ್ತಿಕ ದುಗುಡಗಳು ಹಲವೊಮ್ಮೆ ಏಕವಾಗಿ ಗೋಚರಿಸುತ್ತದೆ. ಭಾಷಿಕ ವಿನ್ಯಾಸಗಳ ದೃಷ್ಟಿಯಿಂದ ಹೊಸದಾಗಿ ಕಾಣಬಹುದಷ್ಟೆ.

ಕವಿತಾ ರೈ ಅವರು ತಮ್ಮ ಹಿಂದಿನ ಹೆಣ್ಣು ಚರಿತೆಯನ್ನು ಆಪ್ತವಾಗಿಯೇ ಕಾಣುತ್ತಾರೆ. ಇದರ ಬೆನ್ನಲ್ಲೇ ಮನಸ್ಸಿನಾಳದ ಅನುಭವಗಳ ಅಭಿವ್ಯಕ್ತಿ ಲೌಕಿಕತೆಯನ್ನು ಮೀರಿದ ಆಲೋಚನೆಗಳ ರೂಪದಲ್ಲಿ ಎದುರಾಗುತ್ತದೆ. ನೀರಿನ ಪ್ರತಿಮೆ, ಹೆಣ್ಣಿನ ಸ್ವ ಬದುಕನ್ನು ಮತ್ತು ಲೋಕಕ್ಕೆ ಸಂಘರ್ಷಗಳ ದಾರಿಗಳನ್ನು ತೋರಿಸುವುದಕ್ಕೂ ಕೆಲವೊಮ್ಮೆ ಬಳಕೆಯಾಗುತ್ತದೆ. ಇಲ್ಲಿನ ಹೆಣ್ಣು ದನಿ ತನ್ನ ಹಾಗೆಯೇ ಲೋಕವಿರಬೇಕೆಂದು ಭಾವಿಸದೆ ತನ್ನ ದನಿಗೆ ಹರಿಯುವ ಗುಣವಿರಬೇಕೆಂದು ಭಾವಿಸುತ್ತದೆ. ‘ ಹೆಣ್ಣ ಕನಸೆಂದರೆ ಮಣ್ಣಿನ ಶಿಶುವಿಹಾರ/ ಬೇರು ಬೇರಿಗೂ ಗೊತ್ತು ಜೀವ ನಳ/ ನಳಿಸುವ ಸೊಗಸು ಜೇನಾಗುವುದು../’ ( ನೀರುಮಾಡು) ನನ್ನದೇ ಬಿಂಬಕ್ಕೆ / ರೂಪವೆಂಬುದು ತೊಡಕು/ಬೆಳಕಿಗೆ ಬರಿಗತ್ತಲೆಯೇ ಹೊರೆ’ ( ನೀರತೇಜಿಯನೇರಿ) ಇಂಥ ಜಾಗಗಳಲ್ಲಿ ತನ್ನ ಗುರುತುಗಳನ್ನು ಕಂಡುಕೊಳ್ಳವುದಷ್ಟೇ ಅಲ್ಲದೇ, ಗಂಡು ಜಗತ್ತಿನ ಇರುವಿಕೆಯ ಗೊಂದಲಗಳನ್ನು, ಹಾಗು ಹೀಗೆ ಇರಬೇಕೆಂಬ ಒತ್ತಾಸೆಯು ಬಯಲಾಗುತ್ತದೆ. ‘ಲಜ್ಜಾಗೌರಿ’ ಯ ಪರಿಕಲ್ಪನೆಯೇ ಈ ಹಾದಿಯನ್ನು ಮತ್ತಷ್ಟು ಸ್ಪಷ್ಟಗೊಳಿಸುತ್ತದೆ.ಹೆಣ್ಣುರೂಪವೇ ಯೋನಿಯಾಗಿ ಯೋನಿಯೇ ಹೆಣ್ಣುರೂಪದ ಕ್ರಮವು ಲೋಕವೇ ತಾನಾದಂತೆ. ಆದರೆ ರೂಪವೇ ತೊಡಕು ಎಂದು ಕರೆದವರು ‘ಲಜ್ಜಾಗೌರಿ’ಯ ಕುರಿತಾಗಿಯೂ ಬರೆಯಬಲ್ಲರು.ಇಲ್ಲೊಂದು ಅವೈದಿಕ ಹೆಣ್ಣಿನ ನೋಟಕ್ರಮಗಳೇ ಗಟ್ಟಿಯಾದಂತೆ ಕಾಣುತ್ತದೆ.
‘ತುಳಿದು ನುಚ್ಚು ನೂರಾಗಿ
ಎದುರಲೆ ಬಿರುಬೀಸಾಗಿ
ಕಂಡವನ ಬಿಸಿರಕ್ತ ಕೊಬ್ಬು ಮಾಂಸ ಮೂಳೆ
ಸರ್ವತ್ರ ಸಿಡಿದು ಖಾಲಿ ಮಾಡಿಟ್ಟ
ಹಸುಬೆ ಚೀಲ ಕಾಮನ ಕಾಯ’ ( ನೀರ ತೇಜಿಯನೇರಿ)
ಈ ಬಗೆಯ ಧೋರಣೆಗಳನ್ನು ಕವಿತಾ ಅವರು ಹಲವು ಬಾರಿ ಅನ್ಯ ಕವಿತೆಗಳಲ್ಲಿ ತೋರುವುದಿಲ್ಲ. ಇವರಷ್ಟೇ ಅಲ್ಲ ಬಹುತೇಕ ಮಹಿಳಾ ಕಾವ್ಯ ತಮ್ಮ ಒಳ ಸಿಟ್ಟನ್ನು, ತಾತ್ವಿಕತೆಯನ್ನು ಪುರಾಣ ಮತ್ತು ಚಾರಿತ್ರಿಕ ಪ್ರತಿಮೆಗಳ ಮೂಲಕ ಬಯಲು ಮಾಡುತ್ತದೆ. ವರ್ತಮಾನದ ಮಹಿಳಾ ಕಾವ್ಯದಲ್ಲಿ ಸ್ತ್ರೀವಾದಿ ನೋಟಗಳನ್ನು ಏಕಮುಖವಾಗಿಯೋ ಅಥವ ತೀರ ಸಕರಾತ್ಮಕವಾಗಿಯೋ ಕಾಣಲು ಸಾಧ್ಯವೆ? ಎಂಬ ದೊಡ್ಡ ಪ್ರಶ್ನೆಯಂತೂ ಇದ್ದೇ ಇದೆ. ಕವಿತೆಯಂತಹ ಸಾಹಿತ್ಯಿಕ ರೂಪವೊಂದರಲ್ಲಿ ಸಹಜವಾಗಿಯೇ ಹೆಣ್ಣು ಸೀಮಿತವಾದ ಹಾಗು ಹಲವೊಮ್ಮೆ ವೈಯಕ್ತಿಕ ನಿಲುವುಗಳಿಗೆ ತಲುಪಬಲ್ಲಳು. ಪುರುಷನ ನಿಲುವುಗಳನ್ನು ಸ್ವ ನೆಲೆಗಳಲ್ಲೇ ಅನಾವರಣ ಮಾಡಬಲ್ಲಳು. ಆದರೆ ಅದರಾಚೆ ಹೆಣ್ಣು ನೋಟದ ಕ್ರಮಗಳು ಸಾಮಾಜಿಕ ವಾಗಿರುತ್ತವೆ. ಹಾಗಾಗಿ ಇಂದಿನ ಹೆಣ್ಣು ನೋಟಗಳು ನಮ್ಮ ತಿಳುವಳಿಕೆಯ ಆವರಣಕ್ಕೆ ಬರುವಾಗ ಹಲ ಬಗೆಯ ಚೌಕಟ್ಟುಗಳಿಗೆ ಮಾರುಹೋಗ ಬೇಕಾಗುತ್ತದೆ.

ನಗರೀಕರಣದ ಆತ್ಯಂತಿಕ ಪ್ರಭಾವಗಳು ಹಲವು ಭಾರಿ ಹೆಣ್ಣನ್ನು ದಿಕ್ಕುಗೆಡಿಸಬಲ್ಲವು. ಕವಿತೆಯ ರೂಪದಲ್ಲಿ ಬರುವ ಹೆಣ್ಣಿನ ಆಲೋಚನೆಗಳು ಮುಗ್ಧವಾಗಿ ಮಗದೊಮ್ಮೆ ಸಂಘರ್ಷದ ನೆಲೆಯಲ್ಲೂ ಕಾಣಬಹುದು. ಮುಕ್ತ ಮಾರುಕಟ್ಟೆಯ ಸಂದರ್ಭಗಳು ಏನಾಗಿವೆ ಎಂದರೆ ಹೆಣ್ಣು ಗಂಡನ್ನು ಹೇಗೆ ಕಾಣಬೇಕು ಎಂಬುದರಲ್ಲೇ ಗೊಂದಲಗಳು ಸೃಷ್ಟಿಯಾಗುತ್ತಿವೆ. ತನ್ನ ಬಾವುಕತೆಯ ನಂಟುಗಳು ಬೇರ್ಪಡುವ ಸಾಧ್ಯತೆಗಳೇ ಹೆಚ್ಚಾಗಿವೆ. ಇಂಥ ಸಮಯಗಳಲ್ಲಿ ಕವಿ ತನ್ನ ನಿಲುವುಗಳನ್ನು ಅಭಿವ್ಯಕ್ತಿಸಲು ಕವಿತಾ ರೂಪವನ್ನು ಆರಿಸಿಕೊಂಡು ಸಮಾಜ ಮತ್ತು ಸ್ವ ಚರಿತೆಯ ನಂಟನ್ನು ಬೆಸೆಯಲು ಯತ್ನಿಸುವುದು ಒಂದು ಆಯಾಮ. ಈ ಆಯಾಮವು ಅಪ್ರಮಾಣಿಕವಾಗಬಾರದು. ವರ್ತಮಾನದ ಮಹಿಳಾ ಕಾವ್ಯದಲ್ಲಿ ಕಾಣಬಹುದಾದ ಸಾಮಾನ್ಯ ತಿಳುವಳಿಕೆ ಎಂದರೆ ಪುರುಷನೊಂದಿಗಿನ ಅತಿಯಾದ ಸಂಘರ್ಷಕ್ಕಿಂತ ಸಾಹಚರ್ಯವೇ ಅಧಿಕ. ಕವಿತಾ ಅವರ ಕವಿತೆಯ ಕೆಲವು ಸಾಲುಗಳನ್ನು ಗಮನಿಸಿ.
‘ಅಹಂಕಾರದ ಮೈದಾನ ಮರೆತು
ನೀರತೇಜಿಯನೇರಿ ಹೊರಟ
ನಮ್ಮಿಬ್ಬರ ನಡುವೆ ಗೆಳೆಯಾ
ಕ್ಯಾಲೇನಾದೇನಾ…..
ಶುದ್ಧ ಪ್ರಮದ ತೋಂಡಿ ಪಯಣ.( ನೀರತೇಜಿಯನೇರಿ)
ನೀರು ಮತ್ತು ತೇಜಿಯ ಚಿತ್ರಗಳು ಕವಿತಾ ಅವರ ಕಾವ್ಯದ ಕೇಂದ್ರ ಕಾಳಜಿಗಳು. ಈಗಾಗಲೇ ಇದರ ಪ್ರಸ್ತಾಪವೂ ಆಗಿದೆ.ಇದೊಂದು ಕಾಲ್ಪನಿಕ ಪ್ರತಿಮೆಯಾದರೂ ಹೆಣ್ಣಿನ ಭಾವುಕ ಮತ್ತು ತನ್ನ ಚರಿತ್ರೆಯ ಸಂಗತಿಗಳನ್ನು ಆತ್ಮದ ಭಾಷೆಯಲ್ಲಿ ನಿರ್ಮಿಸುವ ಹವಣಿಕೆ ಉದ್ದಕ್ಕೂ ಕಾಣುತ್ತದೆ. ನೀರತೇಜಿಯನೇರಿದ ಮೇಲೆ ಇಹದ ಹಂಗುಗಳಿಗೆ ಜಾಗವಿಲ್ಲ. ನಾ-ನೀನೆಂಬ ಹಂಗಂತೂ ಮೊದಲೇ ಇಲ್ಲ. ಇಂಥ ಕಡೆ ಕವಿತಾ ಅವರು ಅನುಭಾವದ ಭಾಷಿಕ ಲಯಗಳಿಗೆ ಮಾರುಹೋಗುವುದು ಸಹಜವೇ. ಆತ್ಮದ ಭಾಷೆಗೆ ಅಹಂಕಾರದ ಸೋಂಕು ಇಲ್ಲ; ಗಂಡು-ಹೆಣ್ಣುಗಳೆಂಬ ದ್ವೈತವೂ ಗೌಣ. ಇಲ್ಲಿನ ದೇಹಮೀಮಾಂಸೆಯೂ ಕೂಡ ಹರಿಯುವ ನದಿಯಂತೆ. ಗಂಡು ಹೆಣ್ಣಿನ ಒಂಟಿ ನಿಲುವುಗಳು ಎಂದಿಗೂ ಜೀವನಕ್ರಮಗಳನ್ನು ಸಹ್ಯವಾಗಿಡುವುದಿಲ್ಲ. ಬದಲಿಗೆ ಅವು ಜೋಡಿನೆರಳಂತೆ ಏಕತ್ರವಾಗಿ ಕಾಣಬೇಕೆಂಬ ಹಂಬಲ ಇವರ ಕವಿತೆಯ ಮತ್ತೊಂದು ಕಾಳಜಿ.
‘ನಮ್ಮೊಳಗೆ ಸರಿವ ಹೆಜ್ಜೆಯನು
ನದಿಯ ಜಾಡನು
ದಾಟೋಣ ಅನುಗೂಡಿ
ಬೀಸುವ ಬಯಲಗಾಳಿಯಲಿ
ಹರಿಯಲಿ ಜೋಡಿನೆರಳು.’( ನೀರುಮಾಡು)
ಬದುಕಿನ ಒಳರಚನೆಯೇ ಹೀಗಲ್ಲವೇ. ಅದು ಏಕಾಂತದಿಂದ ಲೋಕಾಂತಕ್ಕೆ ತೆರೆದುಕೊಳ್ಳುವ ಬಗೆ.ಕವಿತಾ ಅವರ ಕವಿತೆ ಎರಡರಲ್ಲೂ ಅತಿಯಾದ ಸಂಘರ್ಷಕ್ಕೆ ಎಡೆಮಾಡಿಕೊಡುವುದಿಲ್ಲ. ಒಂದು ಧ್ಯಾನಸ್ಥ ಸ್ಥಿತಿಯಲ್ಲೆ ಸಾಗುತ್ತದೆ. ಇಷ್ಟು ಹೇಳಿದರೂ ಇವರ ಕವಿತೆ ಎಲ್ಲ ಕಡೆ ಗೆದ್ದಿದೆ ಎಂದು ಹೇಳಲಾರೆ. ಅದು ಸಾಧ್ಯವೂ ಇಲ್ಲ. ‘ನೀರುಮಾಡು’ ವಿನ ಹಲವು ಕವಿತೆಗಳಲ್ಲಿ ತಮಗೆ ದಕ್ಕಿದ ನುಡಿಗಟ್ಟುಗಳನ್ನು ಮರೆಯುತ್ತಾರೆ. ಮತ್ತೂ ಕೆಲ ಕಡೆ ಸಿನಿಮೀಯ ಶೈಲಿಯಲ್ಲೂ ಬರೆದಿದ್ದಾರೆ.ಸ್ವತಹ ವಿಮರ್ಶಿಕಿಯಾದ್ದರಿಂದ ಅವರಿಗೆ ಹೇಳುವ ಅಗತ್ಯವಿಲ್ಲ. ವಚನ ಪರಿಭಾಷೆಯನ್ನು ಬಳಸುವ ಇವರಿಗೆ ಎಚ್ಚರವಂತೂ ಇರಬೇಕು. ಹೀಗಿದ್ದರೂ ಕವಿತಾ ಅವರ ಕೆಲ ಕವಿತೆಗಳು ತಮ್ಮ ವಿಶಿಷ್ಟ ಪ್ರತಿಮೆಗಳ ಬಲದಿಂದ ಮಹಿಳಾ ಕಾವ್ಯದಲ್ಲಿ ನಿಂತುಕೊಳ್ಳಬಲ್ಲವು.

 

Leave a Reply

Your email address will not be published.