ನೀತಿ ಆಯೋಗ : ನಿರಂಕುಶಾಧಿಕಾರದ ಹೊಸ ಅಸ್ತ್ರ

-ವೇಣುಗೋಪಾಲ್ ಬಿ. ಎನ್.

IndiaTv411416_Nitiದೇಶದ ಆಡಳಿತದ ಚುಕ್ಕಾಣಿ ಹಿಡಿದವರು ತಳಮಟ್ಟದಿಂದ ಮೇಲ್ಮಟ್ಟದವರೆಗೆ ಸಮಿತಿ, ಆಯೋಗಗಳನ್ನು ರಚಿಸುವುದರಲ್ಲಿ ನಿಸ್ಸೀಮರು. ಹಾಗೆ ರಚನೆಯಾದ ಸಂಸ್ಥೆಗಳ ಕಾರ್ಯವೈಖರಿ ಪ್ರಶ್ನಾರ್ಹ. ಯಾರ ಉದ್ದಾರಕ್ಕೆ ಇಂತಹ ಸಂಸ್ಥೆಗಳನ್ನು ರಚಿಸಲಾಗುವುದೋ? 1950ರಲ್ಲಿ ಸಂವಿಧಾನ ಬದ್ಧವಾಗಿ ಒಪ್ಪಿ ಜಾರಿಗೆ ತರಲಾದ “ಯೋಜನಾ ಆಯೋಗವನ್ನು ಇಂದಿನ ಪ್ರಧಾನಿಗಳು ಅದನ್ನು ಕಿತ್ತೊಗೆದು ಅಲ್ಲಿ ‘ನೀತಿ’ ಆಯೋಗವನ್ನು ಪ್ರತಿಷ್ಟಾಪಿಸಿದ್ದಾರೆ. ಭಾರತ ರಾಷ್ಟ್ರಿಯ ಪರಿವರ್ತನಾ ಸಂಸ್ಥೆ ಎಂಬುದು ಅದರ ಪೂರ್ಣ ಹೆಸರು. ಈ ನೀತಿ ಆಯೋಗದಲ್ಲಿ ಅತಿ ಬುದ್ಧಿವಂತರ ಸಮೂಹವೊಂದಿದೆ. ಅದು ಪ್ರಧಾನಿಯ ತಾಳಕ್ಕೆ ತಕ್ಕಂತೆ ಕುಣಿಯಬೇಕು. ಹಿಂದಿನ ಯೋಜನಾ ಆಯೋಗದಲ್ಲಿ ಅಭಿವೃದ್ಧಿ ಕಾರ್ಯಗಳು ಮೇಲ್ಮಟ್ಟದಿಂದ ತಳಮಟ್ಟಕ್ಕೆ ಸಮರ್ಪಕವಾಗಿ ಹರಿದು ಬರುತ್ತಿವೆಯೆಂದು ಪ್ರಧಾನಿ ಆರೋಪ. ಆದ್ದರಿಂದಲೇ ನೀತಿ ಆಯೋಗದಡಿಯಲ್ಲಿ ಅಭಿವೃದ್ಧಿಯನ್ನು ತಳಮಟ್ಟದಿಂದ ಮೇಲ್ಮಟ್ಟಕ್ಕೆ ಕೊಂಡೊಯ್ಯಲು ತವಕಿಸುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಅದು ತಳಕೆಳಗಾಗುವುದಲ್ಲಿ ಅನುಮಾನವಿಲ್ಲ.

ನವದೆಹಲಿಯಲ್ಲಿರುವ ರಾಷ್ಟ್ರಿಯ ಸಾಂಖ್ಯಿಕ ಆಯೋಗದ ಅಧ್ಯಕ್ಷರಾದ ಡಾ. ಪ್ರನೋಬ್ ಸೇನ್‍ರವರು ಯೋಜನಾ ಆಯೋಗವನ್ನು ರದ್ದುಪಡಿಸಿ ಅಲ್ಲಿ ನೀತಿ ಆಯೋಗವನ್ನು ರಚಿಸಿರುವುದರ ಬಗೆಗೆ ಪ್ರಧಾನಿಯ ನಿಲುವನ್ನು ಖಂಡಿಸುತ್ತ ಹೀಗೆ ಹೇಳಿದ್ದಾರೆ: “ಯೋಜನಾ ಆಯೋಗದ ಮೂಲಕಾರ್ಯವು ಭಾರತದಂತಹ ವಿಶಾಲ ಆರ್ಥಿಕಾಭಿವೃದ್ಧಿಯ ಪ್ರಕ್ರಿಯೆಯಲ್ಲಿ ಸರ್ಕಾರ ಮತ್ತು ಅದರ ವಿವಿಧ ಮಂತ್ರಾಲಯಗಳು ನಿರೂಪಿಸುವ ಕಾರ್ಯಕ್ರಮ, ಅದಕ್ಕೆ ಅವಶ್ಯವಿರುವ ಹಣಕಾಸು ನಿಧಿ, ಮತ್ತು ಅದರ ವಿತರಣಾ ಕೆಲಸಗಳಲ್ಲಿ ಅರ್ಥಪೂರ್ಣ ಮಧ್ಯಪ್ರವೇಶದೊಂದಿಗೆ ರೂಪುರೇಶಗಳನ್ನು ಸಿದ್ದಪಡಿಸುವುದೇ ಆಗಿದೆ. ಜೊತೆಗೆ ಯೋಜನಾ ಆಯೋಗದ ಮತ್ತೊಂದು ಪ್ರಮುಖ ಕೆಲಸವೆಂದರೆ ಹಣಕಾಸಿನ ಹಂಚಿಕೆಯಲ್ಲ. ಆದರೆ ಅದಕ್ಕೊಂದು ದಿಕ್ಕನ್ನು ಸೂಚಿಸುವುದು”- ಸೆನ್ ವ್ಯಕ್ತಪಡಿಸಿರುವ ಇನ್ನೊಂದು ಅನಿಸಿಕೆಯಲ್ಲಿ ಹುರುಳಿದೆ, ಅದೆಂದರೆ ಯೋಜನಾ ಆಯೋಗವನ್ನು ರದ್ದುಪಡಿಸಿರುವುದರಿಂದ ಇಂದು ನಾವು ಮಾತನಾಡುವ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೇವೆ ಎಂದಿದ್ದಾರೆ. ಈಗ ಅಲ್ಲಿ ಮಾತನಾಡುವವರು ಕೇವಲ ಪ್ರಧಾನಿ ಮತ್ತವರ ಆಶಯಗಳು ಮಾತ್ರ. ಇನ್ನು ಅಲ್ಲಿರುವ ನೂರಾರು ಕಿವಿಗಳು ಆಶಯಗಳನ್ನು ಕೇಳಿಸಿಕೊಂಡು ಅದರ ಅಣತಿಯಂತೆ ಕೆಲಸ ಮಾಡುವುದಷ್ಟೇ. ಕೇಂದ್ರ ಸರ್ಕಾರವು ನೀತಿ ಆಯೋಗಕ್ಕೆ ಬುದ್ಧಿವಂತ ಮಹಾಶಯರನ್ನೆಲ್ಲ ಜರಡಿ ಹಿಡಿದು ಅದರಲ್ಲಿ ಅತಿ ಬುದ್ಧಿಜೀವಿಗಳನ್ನು ಆಯ್ದು ನಿಯೋಜಿಸಿದೆ. ಅವರನ್ನು ಕೇಳುಜೀವಿಗಳು ಎನ್ನುವುದೇ ಹೆಚ್ಚು ಅರ್ಥಪೂರ್ಣ-‘ರಂಗನ ಮುಂದೆ ಸಿಂಗನೆ’ ಎಂದು ಕೂರುವುದು ಇವರ ಕೆಲಸ. ಎಂತಹ ಅವಕಾಶ! ಎಂತಹ ಪುಣ್ಯ!

ಪ್ರಧಾನಿಯವರಿಗೆ ಈ ನೀತಿ ಆಯೋಗವನ್ನು ಸ್ಥಾಪಿಸಲು ಚೀನಾದ ‘ರಾಷ್ಟ್ರಿಯ ಅಭಿವೃದ್ಧಿ ಹಾಗೂ ಆಯೋಗ ಸುಧಾರಣೆ’ಯು ಪ್ರೇರಣೆಯಂತೆ. ಆ ದೇಶಕ್ಕೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಎಂತಹ ಗಹನವಾದ ಪಾಠ ಕಲಿತ ಬಂದಿದ್ದಾರಲ್ಲವೇ! ಅವರು ಕೋಶ ಓದಿದ್ದು ಕಡಿಮೆ. ದೇಶ ವಿದೇಶ ಅಲೆದದ್ದು ಹೆಚ್ಚು. ಆದರೆ ಹಿಂದಿದ್ದ ಪ್ರಧಾನಿ ಓದಿದ್ದು ಹೆಚ್ಚು. ಅಲೆದದ್ದು ಕಡಿಮೆ.

ನಮ್ಮ ಸಂವಿಧಾನವು ಕೇಂದ್ರ ಹಾಗೂ ರಾಜ್ಯಗಳಿಗೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳಡಿಯಲ್ಲಿ ದೊರಕಲೇ ಬೇಕಾದ ಸ್ವಾತಂತ್ರ್ಯವನ್ನು ವಿವರವಾಗಿ ಬರೆದಿಟ್ಟಿದೆ. ಅದರ ಪ್ರಕಾರ ನಡೆದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಕ್ಷೇಮ. ರಾಜ್ಯಗಳು ತಮ್ಮ ಜವಾಬ್ದಾರಿಯನ್ನು ಅರಿತು ಅಭಿವೃದ್ದಿ ಕೆಲಸಗಳನ್ನು ಸ್ವತಂತ್ರವಾಗಿ ಆಯೋಜಿಸಿಕೊಳ್ಳಬಹುದು. ಅಭಿವೃದ್ಧಿಯ ಭರಾಟೆಯಲ್ಲಿ ವೈವಿಧ್ಯಮಯವಾದ ಸಂಪನ್ಮೂಲ ಸಂಪತ್ತು; ಉತ್ಪಾದನೆ ಇತ್ಯಾದಿಗಳನ್ನು ಹೊಂದಿರುವ ರಾಜ್ಯಗಳು ಕೇಂದ್ರ ಸರ್ಕಾರ ನಿರೂಪಿಸುವ ನೀತಿಗಳ ಮುಂದೆ ಮಂಡಿಯೂರಿ ಕೂರಲಿ ಎಂದು ಪ್ರಧಾನಿ ಆಶಿಸುವುದು ಎಷ್ಟು ಸರಿ? ಇದು ಪ್ರಜಾಪ್ರಭುತ್ವವನ್ನು ವ್ಯಕ್ತಿಪ್ರಭುತ್ವವನ್ನಾಗಿ ಬದಲಿಸಿಕೊಳ್ಳುವ ನಯವಾದ ಹುನ್ನಾರವೆಂದರೆ ತಪ್ಪಾಗಲಾರದು. ಜರ್ಮನಿಯಲ್ಲಿ ಹಿಟ್ಲರ್ ಇದನ್ನು ಒತ್ತಾಯಪೂರ್ವಕವಾಗಿ ಅಮಾನುಷವಾಗಿ ಮಾಡಿದ್ದು ಇತಿಹಾಸ. ಆದರೆ ಚಾರಿತ್ರಿಕ ಸಂಗತಿಗಳು ಪುನರಾವರ್ತನೆಯಾಗುವ ಸಾಧ್ಯತೆಗಳು ಇಲ್ಲದಿಲ್ಲ. ಇಂದು ಹಿಂದಿನ ವಿರೋಧಿಗಳು ಅವಿರೋಧವಾಗಿ ಒಗ್ಗೂಡಿ ಸಿಕ್ಕಟ್ಟು ಬಾಚಿಕೊಳ್ಳುವ ತವಕದಲ್ಲಿದ್ದಾರೆ. ನೀತಿಗಳಡಿಯಲ್ಲಿ ಬುದ್ದಿವಂತರನ್ನು ಅತಿಬುದ್ದಿವಂತರನ್ನಾಗಿಸುವ ಒಳಗೊಳ್ಳುವ ಬೆಳವಣಿಗೆಯ( ಇನ್‍ಕ್ಲುಸೀವ್ ಗ್ರೋತ್) ಪ್ರಕ್ರಿಯೆ ವಿಧಾನವಿದು. ನೀತಿ ಆಯೋಗದ ಬಗೆಗಿನ ಬಣ್ಣ ಬಣ್ಣದ ಮಾತುಗಳು ಹೀಗಿವೆ:

  • ಸರ್ಕಾರವು ಅನುಕೂಲದ ಆಧಾರದ ಮೇಲೆ ಕಾರ್ಯಪ್ರವೃತ್ತವಾಗುತ್ತ ದೇಶವನ್ನು ಅಭಿವೃದ್ಧಿ ಪಡಿಸುವುದು
  • ಆಹಾರ ಭದ್ರತೆಯೊಂದಿಗೆ ಮಿಶ್ರಕೃಷಿ ಉತ್ಪಾದನೆಗೆ ಉತ್ತೇಜನ
  • ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರಗತಿಪರ ದೇಶವನ್ನಾಗಿಸುವುದು
  • ಮಧ್ಯಮ ವರ್ಗದ ಕುಟುಂಬಗಳನ್ನು ಹೆಚ್ಚು ಸಮರ್ಥರನ್ನಾಗಿಸುವುದು
  • ಸಂಘಟನಾತ್ಮಕ ಹಾಗೂ ಮಾವನ ಬುದ್ಧಿಮತ್ತೆಯನ್ನು ಬಂಡವಾಳವನ್ನಾಗಿ ಪೋಷಿಸುವುದು
  • ಅನಿವಾಸಿ ಭಾರತೀಯರನ್ನು ಜಾಗತಿಕ ಆರ್ಥಿಕ ಹಾಗೂ ಜಾಗತಿಕ ರಾಜಕೀಯರಂಗದಲ್ಲಿ ಬಲಗೊಳಿಸುವುದು

ಇನ್ನು ಬಡತನ ನಿವಾರಣೆ, ಉದ್ಯೋಗ ಸೃಷ್ಟಿ, ಲಿಂಗಸಮಾನತೆ, ಮಹಿಳಾ ಸಬಲೀಕರಣ, ಹಳ್ಳಿಗಳ ಸಮಗ್ರ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಇತ್ಯಾದಿ ಎಂದು ಘೋಷಿಸಿಕೊಂಡಿದೆ. ಆದರೆ ಅವುಗಳನ್ನು ಸಾಧಿಸುವ ಬಗೆ ಅಳವಳಿಸಿಕೊಳ್ಳಬಹುದಾದ ವಿಧಾನಗಳ ಬಗೆಗೆ ಮಾತ್ರ ಮೌನ ವಹಿಸಲಾಗಿದೆ. ನೀತಿ ಆಯೋಗದಲ್ಲಿರುವ ಸದಸ್ಯ ಬಿಬೇಕ್ ಡೆಬ್ರಾಯ್ ರವರು ಈ ಅಂಶಗಳನ್ನು ಪ್ರಶ್ನಿಸಿದ್ದಾರೆ. ಪ್ರಧಾನಿಯವರು ರಾಯ್ ಅವರನ್ನು ಮುಕ್ತವಾಗಿ ಮಾಧ್ಯಮಗಳಲ್ಲಿ ಅಂತಹ ಪ್ರಶ್ನೆಗಳನ್ನು ಕೇಳಬಾರದೆಂದು ತಾಕೀತು ಮಾಡಿದ್ದಾರೆ. ಅದಕ್ಕೆ ಹೇಳುವುದು: ಪೀಪಲ್ ಹೂ ಹ್ಯಾವ್ ಸೆನ್ಸ್ ಆರ್ ಪವರ್ ಲೆಸ್ , ಅಂಡ್ ಪವರ್‍ಫುಲ್ ಪೀಪಲ್ ಆರ್ ಸೆನ್ಸ್ ಲೆಸ್ ಎಂದು!

ಕೇಂದ್ರದಲ್ಲಾಗಲಿ ರಾಜ್ಯಗಳಲ್ಲಾಗಲಿ ಇತ್ತೀಚಿನ ವರ್ಷಗಳಲ್ಲಿ ಅಧಿಕಾರ ಮಾಡುವವರು ಒಂದು ತೆರನಾದ ಅಸಹ್ಯ ಚಾಳಿಗೆ ಬಿದ್ದಂತಿದೆ. ಅದೆಂದರೆ ತಮ್ಮ ಇಚ್ಚೆಗೆ ತಕ್ಕಂತೆ ಸಂವಿಧಾನ ಬದ್ದವಾದ ಸಂಸ್ಥೆಗಳನ್ನು ತಮ್ಮ ಮನಬಂದಂತೆ ಮರುಸಂಘಟಿಸುವುದು ಇಲ್ಲವೆ ಅವುಗಳನ್ನು ಕಿತ್ತೊಗೆಯುವುದು. ಇಂದಿನ ಪ್ರಧಾನಿ ಮಾಡಿರುವುದು ಅದನ್ನೇ. ಸಂವಿಧಾನ ಮತ್ತದರ ಮೂಲ ಆಶಯಗಳೊಂದಿಗೆ ವಿರುದ್ಧವಾಗಿ ವರ್ತಿಸುವುದೆಂದರೆ ಇದೇ ಅಲ್ಲವೆ? ಅಸ್ತಿತ್ವದಲ್ಲಿರುವ ಒಂದು ಸಾಂಸ್ಥಿಕ ಸಂಸ್ಥೆಯನ್ನು ಅನೇಕ ಮಗ್ಗಲುಗಳಿಂದ ಜರಿದು ಅದರ ಸ್ಥಾನದಲ್ಲಿ ಮತ್ತೊಂದನ್ನು ನಿರ್ಮಿಸುವುದು. ಈ ರೀತಿಯ ನಿಲುವು ಖಂಡನಾರ್ಹ.

ಇರುವ ವ್ಯವಸ್ಥೆಯನ್ನು ಸೂಕ್ತವಾದ ಮಧ್ಯಪ್ರವೇಶದಿಂದ ಹೆಚ್ಚು ಸಶಕ್ತವನ್ನಾಗಿ ಮಾಡುವುದನ್ನು ಬಿಟ್ಟು ಇನ್ನೇನೋ ಮಾಡಲು ಹೋಗಿ ಅದರ ಮಹತ್ತರವಾದ ಆಶಯವನ್ನು ಬಲಿಕೊಡುವುದು ಹುಂಬತನದ ಹಾಗೂ ಅಶಕ್ತಿಯ ಸಂಕೇತ. ಈ ಅಂಶವಿರುವುದು ಪ್ರಧಾನಿಯವರ ಮನಸ್ಸಿನಲ್ಲಿ- ಆಧ್ದರಿಂದಲೇ ಯಾವಾಗಲೂ ಅವರು ‘ಮನಸ್ಸಿನ ಮಾತು’(ಮನ್ ಕಿ ಬಾತ್) ಮಾಡುವುದು. ಮನಸ್ಸಿಗೆ ಬಂದಂತೆ ಮಾತು ಮತ್ತು ಆಲೋಚನೆ ಇಲ್ಲದ(ಮಸ್ತಿಷ್ಕ ರಹಿತ್ ಕಿ ಬಾತ್) ಕೆಲಸ ಎಂದು ಹೇಳುವುದು ಉಚಿತವಾದುದೇನೋ?

ನೀತಿ ಆಯೋಗದಿಂದ ಹೊರಹೊಮ್ಮಿ ಬಂದಂತಹ ಫಲ ಯಾರ ಆಶಯಗಳನ್ನು ನೀಗಿಸುತ್ತವೆಂಬುದು ಪ್ರಶ್ನಾರ್ಹ. ಆದರೆ ಅದಕ್ಕೆ ಉತ್ತರವೂ ಬಹಳ ಸುಲಭ. ಅವು ಕೇವಲ ಮಂತ್ರಿಗಳ ಅವರ ಆಪ್ತ ಬಂಡವಾಳಿಗರ ಮತ್ತು ಅವರ ಹಿಂಬಾಲಕರನ್ನು ತೃಪ್ತಿಪಡಿಸುವುದು ಮಾತ್ರವೇ ಆಗಿರುತ್ತದೆ. ಅದಕ್ಕೆ ಕನ್ನಡಿ ಹಿಡಿದಂತೆ ನಮ್ಮಲ್ಲಿರುವ ಹಗರಣಗಳೇ ಸಾಕ್ಷಿ. ಮುಂದಿನ ದಿನಗಳಲ್ಲಿ ಈ ಹಗರಣಗಳಿಗಿಂತ ಹೆಚ್ಚು ಸಂಖ್ಯೆ ಮತ್ತದರ ಗಾತ್ರವನ್ನು ಊಹಿಸಲು ಸಾಧ್ಯ. ನೀತಿಯು ಅನೀತಿಗೆ ದಾರಿ ಮಾಡಿಕೊಡುವ ಬಗೆಯಿದು. ಇದರಿಂದ ಭವಿಷ್ಯದ ಸಮಾಜವು ರೋಗಗ್ರಸ್ತವಾಗುತ್ತದೆ. ಬುದ್ಧಿ ಭ್ರಮಿಸುತ್ತದೆ, ಮನಸ್ಸು ಕೊಳಕಾಗುತ್ತದೆ. ದೇಶ ಕಟ್ಟುವುದು ಎಂದರೆ ಇದೆ ಏನು?

ಯೋಜನಾ ಆಯೋಗವನ್ನು ನೀತಿ ಆಯೋಗವನ್ನಾಗಿ ಪರಿವರ್ತಿಸಿದ ರೀತಿಯಲ್ಲಿಯೇ ‘ ಭಾರತದಲ್ಲಿ ಮಾಡಿದ್ದು’ ಎಂಬುದನ್ನು ‘ಭಾರತಕ್ಕೆ ಬಂದು ಮಾಡಿ’ ಎಂಬುದಾಗಿ ಸ್ವಾಭಿಮಾನವನ್ನು ಕಳೆದುಕೊಳ್ಳುವ ನೀತಿಯಾಗಿರುವುದೇ ದುರಂತ. ದೇಶದ ಅಮೂಲ್ಯ ಸಂಪತ್ತನ್ನು ಪರಕೀಯರಿಗೆ ಧಾರೆಯೆರದು ಅವರು ಹೂಡುವ ಬಂಡವಾಳಕ್ಕೆ ಹಾಗೂ ನೀಡುವ ಪುಡಿಗಾಸಿಗೆ ಕೈಚಾಚಬೇಕೇ? ಬರುವವರು ಯಾರು? ಅವರ ಉದ್ದೇಶವೇನು? ಎಂಬ ಪ್ರಶ್ನೆಗಳಿಗೆ ಆಯೋಗದಲ್ಲಿ ಉತ್ತರಗಳು ಸಿಗಲಾರವು. ಒಂದು ದೇಶದಲ್ಲಿ ಇರುವ ಸಂಪನ್ಮೂಲಗಳನ್ನು ಸಂಚಯಿಸುವ, ಉತ್ಪಾದಿಸುವ ಮತ್ತದರಿಂದ ನಿರೀಕ್ಷಿಸಬಹುದಾದ, ಫಲಗಳನ್ನು ಹಂತಹಂತವಾಗಿ ಚರ್ಚಿಸುವ ಹಾಗೂ ಅದರ ಸಾಧಕ ಬಾಧಕಗಳನ್ನು ಮುಂದಂದಾಜಿಸುವ ಕೆಲಸವು ಯೋಜನಾ ಆಯೋಗಕ್ಕೆ ಇರುತ್ತಿತ್ತು. ಆದರೆ ಅದನ್ನು ತಿರಸ್ಕರಿಸಿ ನೇರವಾಗಿ ನೀತಿಯನ್ನು ಅಳವಡಿಸಿಕೊಳ್ಳುವುದು ದೇಶದ ಅಭಿವೃದ್ಧಿಗೆ ಹಾಗೂ ಬೆಳವಣಿಗೆಗೆ ಶ್ರೇಯಸ್ಕರವಲ್ಲ.

Leave a Reply

Your email address will not be published.