ನಿರ್ಲಕ್ಷಿಸಿರುವ ಈಶಾನ್ಯರಾಜ್ಯಗಳ ಚುನಾವಣೆಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

ಇಂಡಿಯಾದ ರಾಜಕಾರಣವೇ ಅಂತಾದ್ದು. ಅದು ಲೋಕಸಭಾ ಚುನಾವಣೆಗಳಿರಲಿ ಇಲ್ಲ ರಾಜ್ಯ ವಿದಾನಸಭಾ ಚುನಾವಣೆಗಳಿರಲಿ  ಮಾಧ್ಯಮಗಳು ಅವನ್ನು ಒಂದು ಯುದ್ದವೆಂಬಂತೆ ಚಿತ್ರಿಸುತ್ತ ತಿಂಗಳುಗಟ್ಟಳೆ ಚುನಾವಣಾ ವಾತಾವರಣವನ್ನು ದೇಶದಾದ್ಯಂತ ಸೃಷ್ಠಿಸುವುದು ಮಾಮೂಲಿ. ಆದರೆ  ಇದು ಅನ್ವಯವಾಗುವುದು ದೇಶದ ದೊಡ್ಡ ಮತ್ತು ಅಭಿವೃದ್ದಿಯಾದ ಕೆಲವೇಕೆಲವು ರಾಜ್ಯಗಳ ಚುನಾವಣೆಗಳಿಗೆ ಮಾತ್ರ.. ಆಗಾಗ ಇಂಡಿಯಾದ ಕೇಂದ್ರ ಸರಕಾರಗಳು ಮತ್ತು ರಾಷ್ಟ್ರೀಯ ಮಾಧ್ಯಮಗಳು ತಮ್ಮನ್ನು ನಿರ್ಲಕ್ಷಿಸಿವೆ ಎನ್ನುವ ಆರೋಪವನ್ನು  ಈಶಾನ್ಯರಾಜ್ಯಗಳ ಜನತೆ ಮಾಡುತ್ತಾ ಬಂದಿದ್ದರೆ ಅದಕ್ಕೆ ಇದೂ ಒಂದು ಕಾರಣ. ಕೇವಲ ಚುನಾವಣೆಗಳು ಮಾತ್ರವಲ್ಲ, ಈಶಾನ್ಯರಾಜ್ಯಗಳ ಸವರ್ೋತೋಮುಖ ಅಭಿವೃದ್ದಿಯ ಬಗ್ಗೆ, ಅಲ್ಲಿನ ಜನಾಂಗೀಯ ಸಮಸ್ಯೆಗಳ ಬಗ್ಗೆಯೂ ಇಂಡಿಯಾದ ಇತರೇ ಭಾಗದ ಜನರಿಗಿರುವುದು ದಿವ್ಯ ನಿರ್ಲಕ್ಷ್ಯ ಮತ್ತು ನಿರಾಸಕ್ತಿ. ಹೀಗಾಗಿಯೇ ಸ್ವಾತಂತ್ರಬಂದ ನಂತರದಿಂದ ಇವತ್ತಿನವರೆಗು ಆ ಭಾಗದ ಜನರಲ್ಲಿ ಪ್ರತ್ಯೇಕತೆಯ ಬಾವವೊಂದು ಮೂಡಿಬಿಟ್ಟಿದೆ.

ಗೋವಾ, ಪುದುಚೇರಿಯಂತಹ ಪುಟ್ಟ ರಾಜ್ಯಗಳ ರಾಜಕೀಯ  ಬೆಳವಣಿಗೆಗಳಿಗೆ ಮತ್ತು ಅಲ್ಲಿನ ಚುನಾವಣಾ ರಾಜಕೀಯಕ್ಕೆ ನಾವು ನೀಡುತ್ತಿರುವ ಪ್ರಚಾರದ ಮತ್ತು  ಪ್ರಾಮುಖ್ಯತೆಯ ಕನಿಷ್ಠ ಹತ್ತನೇ ಒಂದರಷ್ಟನ್ನಾದರೂ ನಮ್ಮ ಮಾಧ್ಯಮಗಳು ನೀಡಿದ್ದರೆ  ಆ ರಾಜ್ಯಗಳ ಜನತೆಗೆ ಇಂತಹದೊಂದು ತಾರತಮ್ಯದ ಬಾವ ಹುಟ್ಟುತ್ತಿರಲಿಲ್ಲ. ಇವತ್ತಿಗೂ ನಮ್ಮ ಬಹಳಷ್ಟು ಮಾಧ್ಯಮಗಳಲ್ಲಿರುವವರಿಗೆ ಈಶಾನ್ಯರಾಜ್ಯಗಳ ರಾಜಕೀಯ ಪಕ್ಷಗಳ ಬಗ್ಗೆಯಾಗಲಿ, ರಾಜಕೀಯ ನಾಯಕರುಗಳ ಬಗ್ಗೆಯಾಗಲಿ ಹೆಚ್ಚಿನ ಮಾಹಿತಿಯೇ ಇಲ್ಲವೆಂದರೂ ತಪ್ಪೇನಿಲ್ಲ. ಆ ಮಟ್ಟಿಗೆ ನಾವು ಆ ರಾಜ್ಯಗಳನ್ನು ಕಡೆಗಣಿಸಿಬಿಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ  ಇದೇ ಫೆಬ್ರವರಿ ಹದಿನೆಂಟರಂದು ಈಶಾನ್ಯದ ಮೂರು ಮುಖ್ಯರಾಜ್ಯಗಳಾದ ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಗಳ ಬಗ್ಗೆ ಮತ್ತು  ಅಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಒಂದಿಷ್ಟಾದರು ತಿಳಿದುಕೊಳ್ಳುವುದು ಅಗತ್ಯವೆನಿಸುತ್ತಿದೆ.  ಈ ನಿಟ್ಟಿನಲ್ಲಿ  ಮೊದಲಿಗೆ ತ್ರಿಪುರ ರಾಜ್ಯದ ಬಗ್ಗೆ ನೋಡೋಣ:

ತ್ರಿಪುರಾ: ಎಡರಂಗದ ಗೆಲುವು ಮುಂದುವರೆಯಲಿದೆಯೇ?

  ಈ ಬಾರಿಯ ತ್ರಿಪುರಾ ರಾಜ್ಯದ ಚುನಾವಣೆ ಮುಖ್ಯವಾಗುವುದು ಮೂರು ಕಾರಣಗಳಿಗಾಗಿ.  ಮೊದಲನೆಯದು ದೇಶದಲ್ಲಿ  ವರ್ತಮಾನದಲ್ಲಿ ಎಡಪಕ್ಷಗಳು ಆಡಳಿತ ನಡೆಸುತ್ತಿರುವ ಎರಡು ರಾಜ್ಯಗಳಲ್ಲಿ ತ್ರಿಪುರಾ ಸಹ ಒಂದಾಗಿರುವುದು. ಎರಡನೆಯದು, ತ್ರಿಪುರಾದಲ್ಲಿ  ಎಡಪಕ್ಷವು ಕಳೆದ ಐದು ದಾಖಲೆ ಅವಧಿಯ( ಇಪ್ಪತ್ತೈದು ವರ್ಷಗಳು) ಆಡಳಿತ ನಡೆಸುತ್ತಿರುವುದಾಗಿದೆ. ಮೂರನೆಯದು, ತ್ರಿಪುರಾದಲ್ಲಿ ಈಗ ರಾಜ್ಯಬಾರ ನಡೆಸುತ್ತಿರುವ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಇಂಡಿಯಾದ ಅತ್ಯಂತ ಬಡ ಮತ್ತು ಸರಳ ಮುಖ್ಯಮಂತ್ರಿಯಾಗಿರುವುದು.

ತ್ರಿಪುರಾ ವಿದಾಸಭೆಯ ಒಟ್ಟು  ಅರವತ್ತು ಸ್ಥಾನಗಳ ಪೈಕಿ ನಲವತ್ತೊಂಭತ್ತು ಸ್ಥಾನಗಳನ್ನು ಗೆದ್ದು ಅಧಿಕಾರ ನಡೆಸುತ್ತಿರುವ ಸಿ.ಪಿ.ಎಂ. ಈ ಬಾರಿಯೂ ತನ್ನ ಎಡಪಕ್ಷಗಳ ಮೈತ್ರಿಕೂಟದ ನೇತೃತ್ವ ವಹಿಸಿದೆ. ಸಿ.ಪಿ.ಐ. ಮತ್ತು ರೆವಲೂಷನರಿ ಸೋಷಿಯಲಿಸ್ಟ್ ಪಾರ್ಟಿ(ಆರ್.ಎಸ್.ಪಿ.) ಅದರ ಮಿತ್ರ ಪಕ್ಷಗಳಾಗಿವೆ.  ಕಳೆದ ಬಾರಿಯಂತೆ ಈ ಬಾರಿಯೂ ಇದೇ  ಮೈತ್ರಿಕೂಟ ಮಾಣಿಕ್ ಸರ್ಕಾರ್ ಮುಂದಾಳತ್ವದಲ್ಲಿ ಚುನಾವಣೆಗಳನ್ನು ಎದುರಿಸಲು ಸಿದ್ದವಾಗಿವೆ. ಇನ್ನು ಕಳೆದ ಚುನಾವಣೆಗಳಲ್ಲಿ ಕಾಂಗ್ರೇಸ್ ಹತ್ತು ಸ್ಥಾನಗಳನ್ನು ಗೆದ್ದು ಅಧಿಕೃತ ವಿರೋಧಪಕ್ಷವಾಗಿತ್ತು. ಅಲ್ಲಿನ ಇನ್ನೊಂದು ಪ್ರಾದೇಶಿಕ ಪಕ್ಷವಾದ ಐ.ಎನ್.ಪಿ.ಟಿ. ಶೇಕಡಾ7.6 ಮತಗಳನ್ನು ಪಡೆದಿದ್ದರೂ ಒಂದು ಸ್ಥಾನವನ್ನೂ ಗೆಲ್ಲಲಾಗಿರಲಿಲ್ಲ. ಇನ್ನು ಬಾಜಪ ಕೇವಲ ಶೇಕಡಾವಾರು 1.5ರಷ್ಟು ಮತಗಳಿಸಿ ವಿದಾನಸಭೆಯಲ್ಲಿ ತನ್ನ ಖಾತೆ ತೆರೆಯಲು ವಿಫಲವಾಗಿತ್ತು.

ಇಪ್ಪತ್ತೈದು ವರ್ಷಗಳ ಕಾಲ ಆಡಳಿತ ನಡೆಸಿದ ಎಡರಂಗಕ್ಕೆ ಸಹಜವಾಗಿಯೇ ಒಂದಷ್ಟು ಆಡಳಿತವಿರೋಧಿ ಅಲೆಯಿದ್ದು  ಕಾಂಗ್ರೇಸ್ ಅದನ್ನು ಬಳಸಿಕೊಳ್ಳಲು ಪ್ರಯತ್ನ ನಡೆಸಿದೆ.  ಆದರೆ ಈಗಾಗಲೇ ದೇಶದ ಹತ್ತೊಂಭತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಾಜಪ ತ್ರಿಪುರಾವನ್ನು ಗೆಲ್ಲಲು ಎಲ್ಲ ವಿಧದ ಚುನಾವಣಾ ತಂತ್ರಗಳನ್ನು ಮಾಡುತ್ತಿದೆ. ಈಗಾಗಲೆ ತನ್ನ ರಾಜಕೀಯ ತಂತ್ರಗಾರಿಕೆಯಿಂದ ಮಣಿಪುರ ಮತ್ತು ಅರಣಾಚಪ್ರದೇಶದಲ್ಲಿ ಕಾಂಗ್ರೇಸ್ ಮತ್ತಿತರೇ ಪ್ರಾದೇಶಿಕ ಪಕ್ಷಗಳ ಕೈಯಿಂದ ಅಧಿಕಾರ ಕಸಿದುಕೊಂಡು ಈಶಾನ್ಯ ರಾಜ್ಯಗಳಲ್ಲಿಯೂ ತನ್ನ ಬೇರುಗಳನ್ನು ಬಿಡುತ್ತಿರುವ ಬಾಜಪ ತ್ರಿಪುರಾದಲ್ಲೂ ಎಡರಂಗವನ್ನು ಸೋಲಿಸಿ ಅಧಿಕಾರಕ್ಕೆ ಏರುವ ಕನಸು ಕಾಣುತ್ತಿದೆ. ಇದಕ್ಕಾಗಿ ಕಳೆದೊಂದು ವರ್ಷದಿಂದ ಅದು  ಪೂರ್ವಸಿದ್ದತೆಯಲ್ಲಿ ತೊಡಗಿಸಿಕೊಂಡಿರುವುದು ಸುಳ್ಳೇನಲ್ಲ. ಈ ದಿಸೆಯಲ್ಲಿ ಅದು ತ್ರಿಪುರಾದಲ್ಲಿ ನೆಲೆಯಿರುವ ಕಾಂಗ್ರೇಸ್ ಮತ್ತು ತೃಣಮೂಲ ಕಾಂಗ್ರೇಸ್ಸಿನ ಭದ್ರಕೋಟೆಗಳನ್ನು ದುರ್ಬಲಗೊಳಿಸುವತ್ತ ಹೆಜ್ಜೆ ಇಟ್ಟಿದೆ.

ಈ ಹಿನ್ನೆಲೆಯಲ್ಲಿಯೇ ಕಳೆದ ಒಂದು ವರ್ಷದಿಂದ ಬಾಜಪ ತೃಣಮೂಲ ಕಾಂಗ್ರೇಸ್ಸಿನ ನಾಯಕರುಗಳನ್ನು ವಿವಿಧ ಆಮೀಷಗಳನ್ನು ಒಡ್ಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಅದರಲ್ಲಿ ಬಹಳ ಮುಖ್ಯವಾದ ನಾಯಕರೆಂದರೆ ತಿಪುರಾ ತೃಣಮೂಲ ಕಾಂಗ್ರೇಸ್ಸಿನ ರಾಜ್ಯಾದ್ಯಕ್ಷರಾದ ರತನ್ ಚಕ್ರವರ್ತಿ. ಕಳೆದ ವರ್ಷ ಚಕ್ರವರ್ತಿಯವರ ಜೊತೆಗೆ ಸಾವಿರಾರು ತೃಣಮೂಲ ಕಾಂಗ್ರೇಸ್ಸಿನ ಕಾರ್ಯಕರ್ತರು ಬಾಜಪ ಸೇರಿದ್ದರು. ಇವತ್ತಿನವರೆಗು ಕಾಂಗ್ರೇಸ್ ಮತ್ತು ಟಿ.ಎಂ.ಸಿ. ಪಕ್ಷದಿಂದ ಸ್ಥಳೀಯ ನಾಯಕರುಗಳನ್ನು ಬಾಜಪಕ್ಕೆ ಸೆಳೆಯುವ ಕಾರ್ಯ ಚಾಲ್ತಿಯಲ್ಲಿದ್ದು ಅವೆರಡೂ ಪಕ್ಷಗಳನ್ನು ತಳ ಮಟ್ಟದಲ್ಲಿ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಜೊತೆಗೆ ಹಲವು ಮಾಜಿ ಶಾಸಕರುಗಳನ್ನು ಸಹ ಬಾಜಪ  ಪಕ್ಷಕ್ಕೆ ಸೇರಿಸಿಕೊಂಡು ತನ್ನ ಬಲ ಹೆಚ್ಚಿಸಿಕೊಳ್ಳುತ್ತಿದೆ. ಪದೇ ಪದೇ  ಈಶಾನ್ಯರಾಜ್ಯಗಳಿಗೆ ಬೇಟಿ ನೀಡುತ್ತಿರುವ ಬಾಜಪದ ರಾಷ್ಟ್ರಾದ್ಯಕ್ಷರಾದ  ಅಮಿತ್ ಷಾರವರು ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು  ಅಧಿಕಾರ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರಕಾರ ತ್ರಿಪುರಾದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದ್ದು ಇವೆರಡೂ ವಿಷಯಗಳ್ನು ಚುನಾವಣೆಯ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರಂತೆ.ಇದರ ಜೊತೆಗೆ ಈಗಾಗಲೆ ಸಂಘಪರಿವಾರವು ಈಶಾನ್ಯರಾಜ್ಯಗಳಲ್ಲಿ    ತನ್ನ ನೆಲೆ ಕಂಡುಕೊಂಡಿದ್ದು, ಅದರ ಪ್ರಭಾವವೂ ಸಾಕಷ್ಟು ಮಟ್ಟಿಗೆ ಚುನಾವಣೆಯಲ್ಲಿ ಆಗಬಹುದೆಂಬ  ವಿಶ್ವಾಸವೂ ಬಾಜಪದ ನಾಯಕರಲ್ಲಿ ಇರುವಂತಿದೆ.

ತನಗೆ ನೆಲೆಯಿರದ ರಾಜ್ಯಗಳಲ್ಲಿ ಮಾಡಿದಂತೆಯೇ ಇಲ್ಲಿಯೂ ಬಾಜಪ ಸ್ಥಳೀಯ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅದರ ಮೂಲಕ ತನ್ನ ಬಲ ಹೆಚ್ಚಿಸಿಕೊಳ್ಳುವತ್ತಲೂ ಗಮನ ಹರಿಸಿದೆ. ಅದರ ಪರಿಣಾಮವಾಗಿ ಅದು ಈಗಾಗಲೇ ಐ.ಪಿ.ಎಫ್.ಟಿ. ಎನ್ನುವ ಪ್ರಾದೇಶಿಕ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದು ಅದಕ್ಕೆ ಒಂಭತ್ತು ಸ್ಥಾನಗಳನ್ನು ಬಿಟ್ಟುಕೊಟ್ಟು ತಾನು ಐವತ್ತೊಂದು ಸ್ಥಾನಗಳಲ್ಲಿ ಸ್ಪದರ್ಿಸಲು ಸಿದ್ದತೆ ನಡೆಸಿದ್ದು, ಈಗಾಗಲೇ ನಲವತ್ತಕ್ಕೂ ಅಧಿಕ ಕ್ಷೇತ್ರಗಳಿಗೆ ತನ್ನ ಅಭ್ಯಥರ್ಿಗಳ ಪಟ್ಟಿಯನ್ನು ಅಖೈರುಗೊಳಿಸಿದೆ. ಘ್ರಪುರಾದಲ್ಲಿ ಹತ್ತು ಸ್ಥಾನಗಳು ಮೀಸಲು ಸ್ಥಾನವಾಗಿದ್ದರೂ ತಾನು ಇತರೇ ಒಂದು ಸ್ಥಾನದಲ್ಲಿಯೂ ದಲಿತ ಅಭ್ಯಥರ್ಿಯನ್ನು ನಿಲ್ಲಿಸುವುದಾಗಿ ಬಾಜಪ ಹೇಳಿಕೊಂಡಿದೆ. ತನ್ಮೂಲಕ ದಲಿತರ ಮತ ಸೆಳೆಯುವ ಹುನ್ನಾರ ಹೊಂದಿದೆ. ಇದರ ಜೊತೆಗೆ ಹಲವು ಉನ್ನತ ಹುದ್ದೆಗಳಲ್ಲಿರುವ  ಸಂಗಪರಿವಾರದ ಬಗ್ಗೆ ಸಹಾನುಭೂತಿ-ಸಹಮತ ಹೊಂದಿರುವ ಅನೇಕ ಗಣ್ಯರನ್ನು ಚುನಾವಣೆಗೆ ನಿಲ್ಲಿಸುತ್ತಲೂ ಅದು ಮನಸ್ಸು ಮಾಡಿದೆ. ಇದು ಚುನಾವಣಾ ಪೂರ್ವ ಸಿದ್ದತೆಯಾದರೆ ಚುನಾವಣೆಯ ನಂತರ ಯಾವ ಪಕ್ಷಕ್ಕೂ ಬಹುಮತ ಬರದೇ ಹೋದರೆ ಮಣಿಪುರದಲ್ಲಿ ಮಾಡಿದಂತೆ ಇತರೇ ಪಕ್ಷಗಳ ಶಾಸಕರುಗಳನ್ನು ತನ್ನತ್ತ ಸೆಳೆದುಕೊಂಡು ಸರಕಾರ ರಚಿಸಲು ಸಹ ಸಿದ್ದವಾಗಿದೆ. ಅದಕ್ಕಾಗಿಯೇ ಅದು ಗೆಲ್ಲಬಹುದಾದ ಇತರೇ ಪಕ್ಷಗಳ ಕೆಲ ಶಾಸಕರುಗಳನ್ನು ಗುರುತಿಸಿದ್ದು, ಅವರ ಜೊತೆ ಸಂಪರ್ಕ ಸಾಧಿಸಿದೆ. ಆದರೆ ಅಷ್ಟು ಸುಲಭಕ್ಕೆ ಬಾಜಪದ ಈ ತಂತ್ರಗಾರಿಕೆ ಯಶಸ್ವಿಯಾಗುವುದು ಕಷ್ಟ.

ಯಾಕೆಂದರೆ ಇಪ್ಪತ್ತೈದು ವರ್ಷಗಳ ಕಾಲ ಆಡಳಿತ ನಡೆಸಿದ ಎಡರಂಗಕ್ಕೆ ಆಡಳಿತ ವಿರೋಧಿ ಅಲೆ ಇರುವುದು ನಿಜವಾದರೂ, ಯಾವುದೇ ದೊಡ್ಡ ಭ್ರಷ್ಟಾಚಾರದ ಪ್ರಕರಣಗಳು ಸರಕಾರದ ಮೇಲೆ ಇಲ್ಲದಿರುವುದು. ಮಾಣಿಕ್ ಸರಕಾರ್ ಅವರಂತಹ ಅತ್ಯಂತ ಪ್ರಾಮಾಣಿಕ ಮತ್ತು ಸರಳ ಮುಖ್ಯಮಂತ್ರಿಯನ್ನು ಕಳೆದುಕೊಳ್ಳಲು ತ್ರಿಪುರಾ ಜನತೆಗೆ ಸದ್ಯಕ್ಕಂತು ಯಾವ ಕಾರಣಗಳೂ ಇರುವಂತಿಲ್ಲ.ಇದರ ಜೊತೆಯೇ ದೇಶದ ಇತರೇ ಭಾಗದ ರಾಜ್ಯಗಳಲ್ಲಿರುವಂತೆ ತ್ರಿಪುರಾದಂತಹ ರಾಜ್ಯಗಳಲ್ಲಿ  ಬಾಜಪದ ಮತೀಯವಾದ ಕೆಲಸ ಮಾಡುವುದು ಕಷ್ಟ. ಕಾಂಗ್ರೇಸ್, ಬಾಜಪ ಎಡರಂಗಗಳ ನಡುವೆ ತ್ರಿಕೋಣ ಸ್ಪರ್ದೆ ನಡೆಯಲಿದ್ದು ಸ್ಥಳೀಯವಾಗಿ ಕಾಂಗ್ರೇಸ್ ತೆಗೆದುಕೊಳ್ಳಬಹುದಾದ  ನಿಲುವುಗಳು ಪಲಿತಾಂಶಗಳ ಮೇಲೆ ಪರಿಣಾಮ ಬೀರುವುದು  ನಿಶ್ಚಿತ!

ಆದರೆ ಈಗಾಗಲೇ ಅಸ್ಸಾಂ, ಮಣಿಪುರ ಮತ್ತು ಅರುಣಾಚಲಪ್ರದೇಶಗಳನ್ನು  ವಶಪಡಿಸಿಕೊಂಡಿರುವ ಬಾಜಪವಂತು ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ತ್ರಿಪುರಾ ರಾಜ್ಯವನ್ನು ಗೆಲ್ಲಲು ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನೂ ಬಳಸಲು ತಯಾರಾಗಿ ನಿಂತಿದೆ.ಈ ಚುನಾವಣೆಗಳ ಪಲಿತಾಂಶಗಳು ನಮ್ಮ ರಾಜ್ಯದ ಚುನಾವಣೆಗಳ ಮೇಲೆ ಯಾವುದೇ ಪರಿಣಾಮಗಳನ್ನೂ ಬೀರದೇ ಹೋದರೂ ಬಾಜಪದ ವಿಶ್ವಾಸವನ್ನು ಹೆಚ್ಚಿಸುವ ಟಾನಿಕ್ ಆಗಿ  ಕೆಲ ಮಾಡಲಿದೆ.

ಮೇಘಾಲಯ: ಪ್ರಾದೇಶಿಕ ಪಕ್ಷಗಳ ಮರ್ಜಿಯಲ್ಲಿ ರಾಷ್ಟ್ರೀಯ ಪಕ್ಷಗಳು!

ಹಾಗೆ ನೋಡುತ್ತಾ ಹೋದರೆ ಇತರೇ ಈಶಾನ್ಯರಾಜ್ಯಗಳಂತೆಯೇ ಮೇಘಾಲಯವು ಸಹ ಬೌಗೋಳಿಕವಾಗಿ ಚಿಕ್ಕದಾಗಿದ್ದು ಸತತವಾಗಿ ನಮ್ಮ ಸರಕಾರಗಳಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಾ ಬಂದಿರುವ ರಾಜ್ಯವೆನ್ನಬಹುದು. ಫೆಬ್ರವರಿ 27ನೇ ತಾರೀಖಿನಂದು ಮೇಘಾಲಯದ 60 ಸದಸ್ಯರನ್ನೊಳಗೊಂಡ ವಿದಾನಸಭೆಗೆ ಚುನಾವಣೆಗಳು ನಡೆಯಲಿದ್ದು,  ಆಡಳಿತಾರೂಢ ಕಾಂಗ್ರೇಸ್ ಈ ಪುಟ್ಟ ರಾಜ್ಯವನ್ನು ಉಳಿಸಿಕೊಳ್ಳಬಲ್ಲುದೇ ಎಂಬ ಕುತೂಹಲ ಒಂದೆಡೆಯಾದರೆ,  ಸಪ್ತಸೋದರಿಯರು ಎಂದು ಕರೆಸಿಕೊಳ್ಳುವ ಏಳು ಈಶಾನ್ಯರಾಜ್ಯಗಳಲ್ಲಿ ಈಗಾಗಲೇ ಐದು ರಾಜ್ಯಗಳನ್ನು ವಸಪಡಿಸಿಕೊಂಡಿರುವ ಬಾಜಪ ಮೇಘಾಲಯದಲ್ಲಿ ಗೆದ್ದು ಆರನೇ ಸೋದರಿಯನ್ನೂ ವಶಪಡಿಸಿಕೊಳ್ಳಲಿದೆಯೇ ಎನ್ನುವುದು ಮತ್ತೊಂದು ಕುತೂಹಲದ ವಿಷಯ.

2013ರಲ್ಲಿನಡೆದ ಚುನಾವಣೆಗಳಲ್ಲಿ 29 ಸ್ಥಾನಗಳನ್ನು ಗೆದ್ದ ಕಾಂಗ್ರೇಸ್ 8 ಸ್ಥಾನಗಳನ್ನು ಗೆದ್ದ ಯುನೈಟೆಡ್ ಡೆಮೋಕ್ರಾಟಿಕ್ ಪಾರ್ಟಿಯ ಜೊತೆ ಸೇರಿ  ಅಧಿಕಾರದ ಗದ್ದುಗೆಯನ್ನು ಏರಿತು.  ಆ ಚುನಾವಣೆಯಲ್ಲಿ ಅತಿ ಹೆಚ್ಚು ಅಂದರೆ 13 ಜನ ಪಕ್ಷೇತರರು ಗೆದ್ದು ಬಂದಿದ್ದು ವಿಶೇಷವಾಗಿತ್ತು.    ಆದರೆ 2014ರಲ್ಲಿ ಬಾರಿ ಬಹುಮತದೊಂದಿಗೆ ಗೆದ್ದು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಾಜಪ ತದನಂತರದಲ್ಲಿ ಆಕ್ರಮಣಕಾರಿ ರಾಜಕಾರಣ ಶುರು ಮಾಡಿತು.  ಈಶಾನ್ಯದ ಪುಟ್ಟ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ವಾಮಮಾರ್ಗ ಹಿಡಿದ ಬಾಜಪ ಮಣಿಪುರ ಮತ್ತು ಅರುಣಾಚಲ ಪ್ರದೇಶಗಳ ಸರಕಾರಗಳನ್ನುಉರುಳಿಸಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಯಿತು. ಬಾಜಪದ ಶಕ್ತಿರಾಜಕಾರಣದ ಕ್ಷಿಪ್ರ ಕಾಯರ್ಾಚರಣೆಗೆ ಕಾಂಗ್ರೇಸ್ ಸೇರಿದಂತೆ ಅಲ್ಲಿನ ಹಲವು ಪುಟ್ಟ ಪ್ರಾದೇಶಿಕ ಪಕ್ಷಗಳುಪ್ರತಿರೋಧ ಒಡ್ಡಲಾರದೆ ಶರಣಾಗಬೇಕಾಯಿತು.

ನಂತರ ಬಾಜಪದ ಕಣ್ಣು ಮೇಘಾಲಯದತ್ತ ಹೊರಳಿತು. ಹೀಗಾಗಿಕಳೆದ ಡಿಸೆಂಬರಿನಲ್ಲಿ ಬಾಜಪ ಮೇಘಾಲಯದಲ್ಲಿ ತನ್ನ ತಂತ್ರಗಾರಿಕೆಯ ಮೂಲಕ ಕಾಂಗ್ರೇಸ್ಸಿನ ಐದು ಜನ  ಮತ್ತು ಯುನೈಟೆಡ್ ಡೆಮೋಕ್ರಾಟಿಕ್ ಪಾರ್ಟಿಯ ಮೂರುಜನ ಶಾಸಕರುಗಳನ್ನು  ತಮ್ಮ ಮಾತೃಪಕ್ಷಗಳಿಗೆ ರಾಜಿನಾಮೆ ನೀಡಿ ಬಾಜಪ ನೇತೃತ್ವದ ಎನ್.ಡಿ.ಎ. ಸೇರುವಂತೆ ಮಾಡಿತು. ಮೇಘಾಲಯದಲ್ಲಿ ಕ್ರಿಶ್ಚಿಯನ್ ಮತದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ಬಾಜಪ ಇಲ್ಲಿ  ತನ್ನ ಹಿಂದುತ್ವದ  ಅಜೆಂಡಾವನ್ನು ಕೈ ಬಿಟ್ಟು ಅಭಿವೃದ್ದಿಯ ಮಂತ್ರವನ್ನು ಮಾತ್ರ ಜಪಿಸುವ ನಾಟಕವಾಡುತ್ತಿದೆ. ಕ್ರಿಶ್ಚಿಯನ್ ಮತದಾರರನ್ನು ಒಲಿಸಿಕೊಳ್ಳುವ  ಉದ್ದೇಶದಿಂದ ಅದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ರಾಜ್ಯದಲ್ಲಿ 1980ರಿಂದ ಕಾರ್ಯ ನಿರ್ವಹಿಸುತ್ತಿದ್ದು ಅದರ ಸದಸ್ಯರು ಯಾವುದೇ ಪಕ್ಷಕ್ಕೆ ಮತ ನೀಡಲು ಸ್ವತಂತ್ರರಾಗಿದ್ದಾರೆಂದು ಹೇಳುತ್ತಾ ಆರ್.ಎಸ್.ಎಸ್.ನೊಂದಿಗಿನ ತನ್ನ ಸಂಬಂದ ರಾಜಕೀಯವಲ್ಲವೆಂದು  ಜನರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದೆ2018ರ ಚುನಾವಣೆಯ ಹೊತ್ತಿಗೆ ತನ್ನ  ಬಲವನ್ನು ಹೆಚ್ಚಿಸಿಕೊಳ್ಳುವ ದೃಷ್ಠಿಯಿಂದ ಬಾಜಪ ನಡೆಸಿದ ಈ ರಾಜಕೀಯ ತಂತ್ರಗಾರಿಕೆ ಸದ್ಯಕ್ಕಂತು ಯಶಸ್ವಿಯಾದಂತೆ ಕಾಣುತ್ತಿದೆ.

ಮೇಘಾಲಯದ ಇನ್ನೊಂದು ಪ್ರಾದೇಶಿಕ ಪಕ್ಷವಾದ ಎನ್.ಪಿ.ಪಿ. ಕಳೆದ ಚುನಾವಣೆಯಲ್ಲಿ ಶೇಕಡಾ ಎಂಟರಷ್ಟು ಮತಗಳನ್ನು ಪಡೆದು ಕೇವಲ ಎರಡು ಸ್ಥಾನಗಳನ್ನು  ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಅದು ಸಾಕಷ್ಟು ಸದೃಢವಾಗಿ ಬೆಳೆದುನಿಂತಿದೆ. ಕಾಂಗ್ರೇಸ್ ಮುಖ್ಯಮಂತ್ರಿಯಾದ ಶ್ರೀ ಮುಕುಲ್ ಸಂಗ್ಮಾರವರ  ಆಡಳಿತ ಶೈಲಿ ಮತ್ತು ಸವರ್ಾಧಿಕಾರಿ ವರ್ತನೆಯಿಂದ ಕಾಂಗ್ರಸ್ಸಿನ ಒಳಗೇನೆ ಸಾಕಷ್ಟು ಅಂತರೀಕ ಭಿನ್ನಮತ ತಲೆದೋರಿದ್ದು ಜನರಲ್ಲಿಯೂ ಸದರಿ ಸರಕಾರದ ಬಗ್ಗೆ ಅಸಮಾದಾನದ ಛಾಯೆ ಕಂಡು ಬರುತ್ತಿದೆ. ಇದೀಗ ಎನ್.ಪಿ.ಪಿ. ಬಾಜಪದ ಜೊತೆ ಸೇರಿಕೊಂಡಿರುವುದರಿದ  ಎನ್.ಡಿ.ಎ.ಮೈತ್ರಿಕೂಟ ಮೇಘಾಲಯದಲ್ಲಿಯೂ ರಚನೆಯಾಗಿದ್ದು ಇನ್ನೊಂದೆರಡು ಸ್ಥಳೀಯ ಸಣ್ಣ ಪಕ್ಷಗಳು ಈ  ಮೈತ್ರಿಕೂಟವನ್ನು ಸೇರುವ ಹಾದಿಯಲ್ಲಿವೆ.

ಇದರೊಂದಿಗೆ ಕಾಂಗ್ರೇಸ್ ಜೊತೆ ಮುನಿಸಿಕೊಂಡಂತೆ ಕಾಣುತ್ತಿರುವ ಯುನೈಟೆಡ್ ಡೆಮೋಕ್ರಾಟಿಕ್ ಪಾರ್ಟಿ ತಾನು ಏಕಾಂಗಿಯಾಗಿ ಸ್ಪರ್ದಿಸಿ ಅರವತ್ತರಲ್ಲಿ ಅರ್ದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದ ಮಾತುಗಳನ್ನಾಡುತ್ತಿದೆ. ಜೊತೆಗೆ ಅದು ಈಗಾಗಲೆ ‘ಹಿಲ್ ಸ್ಟೇಟ್ ಪೀಪಲ್ಸ್  ಡೆಮಾಕ್ರಾಟಿಕಲ್ ಪೊಲಿಟಿಕಲ್ ಪಾರ್ಟಿ’ಯ ಜೊತೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.   ಇವೆಲ್ಲದರ ಪರಿಣಾಮವಾಗಿ ಕಾಂಗ್ರೇಸ್ ಸ್ವಲ್ಪ ಮಟ್ಟಿಗೆ ಹಿನ್ನಡೆ ಅನುಭವಿಸುತ್ತಿರುವಂತೆ ಒಂದು ಮಸುಕಾದ ಚಿತ್ರಣ ಮೇಘಾಲಯದಲ್ಲಿ  ಕಾಣುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಕಾಂಗ್ರೇಸ್ ಅಧಿಕಾರ ಪಡೆಯಲು ಕೆಲವು ವಿಷಯಗಳು ನೆರವಾಗಬಹುದಾಗಿದೆ. ಅವೆಂದರೆ ಗ್ಯಾರೋ ನ್ಯಾಷನಲಿಸ್ಟ್ ಪಾರ್ಟಿ ಮತ್ತು ಕೆ.ಹೆಚ್.ಎನ್.ಎ.ಎಮ್. ನಂತಹ ಸಣ್ಣ ಪಕ್ಷಗಳ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಾಗಿದೆ.  ಇದು ಸಾದ್ಯವಾಗಬೇಕೆಂದರೆ ಅದು  ವಿದಾನಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿಯಾದರು ಹೊರಹೊಮ್ಮಬೇಕಾಗಿದೆ.ಇದರ ಜೊತೆ ರಾಜ್ಯದ ಬಹುಸಂಖ್ಯಾತ ಕ್ರಿಶ್ಚಿಯನ್  ಸಮುದಾಯವನ್ನು ಅದು ಒಲಿಸಿಕೊಳ್ಳಬೇಕಾಗಿದೆ. ಯಾಕೆಂದರೆ ಈ ಮತಗಳು ಅಂತಿಮವಾಗಿ ನಿರ್ಣಾಯಕ ಪಾತ್ರ ವಹಿಸಲಿವೆ.

ಹೀಗೆ ಅಧಿಕಾರ ರೂಢ ಕಾಂಗ್ರೇಸ್ ಮತ್ತೊಮ್ಮೆ ಅಧಿಕಾರಕ್ಕೆರಲು ಪ್ರಯತ್ನಿಸುತ್ತಿದ್ದರೆ, ಹೇಗಾದರು ಮಾಡಿ ಮೇಘಾಲಯವನ್ನು ಗೆಲ್ಲಲು ಬಾಜಪ ಪ್ರಯತ್ನ ನಡೆಸುತ್ತಿದೆ. ಅಂತಿಮವಾಗಿ ಇವೆರಡೂ ರಾಷ್ಟ್ರೀಯ ಪಕ್ಷಗಳೂ ಪ್ರಾದೇಶಿಕ ಪಕ್ಷಗಳ ಮರ್ಜಿಗನುಗುಣವಾಗಿಯೇ   ರಾಜಕೀಯ ಮಾಡಬೇಕಾದಂತಹ ಪರಿಸ್ಥಿತಿ ಮೇಘಾಲಯದಲ್ಲಿರುವುದೇನು ಸುಳ್ಳಲ್ಲ!

ನಾಗಾಲ್ಯಾಂಡ್: ನಾಗಾ ಜನಾಂಗೀಯ ಸಮಸ್ಯೆಯೇ ಪ್ರಮುಖ ವಿಚಾರ!

ಇತರೇ ಈಶಾನ್ಯ ರಾಜ್ಯಗಳಗೆ ಹೋಲಿಸಿದರೆ ನಾಗಾಲ್ಯಾಂಡ್ ರಾಜ್ಯದ್ದು 1947ರಿಂದಲೂ ರಕ್ತಚರಿತ್ರೆಯೇ!  ಇಂಡಿಯಾದಲ್ಲಿ ಬ್ರಿಟೀಷ್ ಆಳ್ವಿಕೆಯ ಸಮಯದಲ್ಲಿಯೂ ಅವರ  ಅಂಕುಶಕ್ಕೆ ಒಳಪಡದಿರಲು ಇಚ್ಚಿಸಿ  ಬ್ರಿಟೀಷರ ವಿರುದ್ದ ದಶಕಗಳೆ ಹೋರಾಟ ನಡೆಸಿದ ಇತಿಹಾಸ ನಾಗಾ ಜನತೆಯದ್ದು. ಸ್ವಾತಂತ್ರಾನಂತರವೂ ತಾವು ಇಂಡಿಯಾದ ಭಾಗವಾಗಲು ಸಾದ್ಯವಿಲ್ಲ, ತಮ್ಮದು ಸ್ವತಂತ್ರ ನಾಡೆಂದು ಹಟ ಹಿಡಿದು ಕೂತ ನಾಗಾಗಳು ಇಂಡಿಯಾದ ಸೇನೆಯ ವಿರುದ್ದವೇ ತಿರುಗಿ ಬಿದ್ದವರು. ಆದರೆ ನಾಗಾಗಳ ನಾಡು ತೀರಾ ಚಿಕ್ಕದಾಗಿದ್ದು, ತಮ್ಮನ್ನು ತಾವು ಆಳಿಕೊಳ್ಳಲು ಅವರು ಅಸಮರ್ಥರೆಂದು ವಾದಿಸಿದ  ಇಂಡಿಯಾ  ತನ್ನ ಸೇನಾಬಲವನ್ನು ಬಳಸಿ ನಾಗಾಜನಗಳ ನಾಡನ್ನು  ಭಾರತ ಗಣರಾಜ್ಯದ ಒಂದು ರಾಜ್ಯವನ್ನಾಗಿಸಿಕೊಂಡಿತು. ಹೀಗೆ 1963ರ ಡಿಸೆಂಬರ್ಒಂದನೇ ತಾರೀಖಿನಂದು ನಾಗಾಲ್ಯಾಂಡ್ ಎನ್ನುವ ರಾಜ್ಯ ಅಧಿಕೃತವಾಗಿ ಅಸ್ಥಿತ್ವಕ್ಕೆ ಬಂದಿತು.ಇದು ಸಾದ್ಯವಾಗುವಷ್ಟರಲ್ಲಿ ಭಾರತೀಯ ಸೇನೆ ಮತ್ತು ನಾಗಾ ಬಂಡುಕೋರರ ನಡುವೆ ನಡೆದ ಹೋರಾಟದಲ್ಲಿ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದರು.

ನಂತರ 1964ರ ಫೆಬ್ರವರಿಯಲ್ಲಿ ನಾಗಾಲ್ಯಾಂಡಿನ ವಿದಾನಸಭೆಗೆ ಮೊದಲ ಚುನಾವಣೆ ನಡೆಯಿತು.  ಅರವತ್ತು ಸ್ಥಾನಗಳ ನಾಗಾಲ್ಯಾಂಡ್ ಸದಾ ನಾಗಾಗಳ ಪ್ರಾದೇಶಿಕ ಪಕ್ಷಗಳಾದ ನಾಗಾ ನ್ಯಾಷನಿಲಿಸ್ಟಿಕ್ ಆರ್ಗನೈಸೇಷನ್,ನಾಗಾ ನ್ಯಾಷನಲ್ ಡೆಮೋಕ್ರಾಟಿಕ್ ಪಾಟರ್ಿ,ಯುನೈಟೆಡ್ ಡೆಮೋಕ್ರಾಟಿಕ್ ಫ್ರಂಟ್,ನ್ಯಾಷನಲ್ ಪೀಪಲ್ಸ್ ಫ್ರಂಟ್,  ಮತ್ತು ಕಾಂಗ್ರೇಸ್ಸುಗಳು ಅಧಿಕಾರ ನಡೆಸುತ್ತಾ ಬರುತ್ತಿವೆ.1988ರಿಂದ 2003ರವರೆಗು ಕಾಂಗ್ರೇಸ್ ನಾಗಾಲ್ಯಾಂಡಿನಲ್ಲಿ ಶಕ್ತಿಶಾಲಿಯಾಗಿ ಬೆಳದು ಅಧಿಕಾರ ನಡೆಸಿತ್ತು.ಎಸ್.ಸಿ.ಜಮೀರ್ ಅಂತವರು ಕಾಂಗ್ರೇಸ್ಸಿನ ಬಲಾಡ್ಯ ನಾಯಕರಾಗಿದ್ದು ಅದಕ್ಕೆ ಕಾರಣವಾಗಿತ್ತು. ಆದರೆ 2003ರಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದ ಬಾಜಪ ನಾಗಾಲ್ಯಾಂಡ್ ಪೀಪಲ್ಸ್ ಪಾಟರ್ಿ ಜೊತೆ ಮೈತ್ರಿ ಮಾಡಿಕೊಂಡಿತು.ಡೆಮೋಕ್ರಾಟಿಕ್ ಅಲೆಯನ್ಸ್ ಆಫ್ ನಾಗಾಲ್ಯಾಂಡ್ ಹೆಸರಿನ ಈ ಮೈತ್ರಿಕೂಟದಲ್ಲಿ ಸಂಯುಕ್ತ ಜನತಾದಳ ಸಹ ಸೇರಿತ್ತು.

2003ರ ಆ ಚುನಾವಣೆಯಲ್ಲಿ ನಾಗಾ ಪೀಪಲ್ಸ್ ಪಾಟರ್ಿ 19 ಸಾನಗಳನ್ನು, ಬಾಜಪ 7ಸ್ಥಾನಗಳನ್ನು,ಜನತಾದಳ 3 ಸ್ಥಾನಗಳನ್ನು ಗೆದ್ದು(ಒಟ್ಟು29ಸ್ಥಾನ)  ಡೆಮೋಕ್ರಾಟಿಕ್ ಅಲೆಯನ್ಸ್ ಅಧಿಕಾರಕ್ಕೆ ಬಂದಿತು. 27 ಸ್ಥಾನಗಳನ್ನು ಗೆದ್ದ ಕಾಂಗ್ರೇಸ್ ವಿರೋಧಪಕ್ಷದಲ್ಲಿ ಕೂರಬೇಕಾಯಿತು.2008ರಲ್ಲಿಯೂ  ಹೆಚ್ಚೂ ಕಡಿಮೆ ಇದೇ ಪಲಿತಾಂಶ ಪುನರಾವರ್ತನೆಯಾಯಿತು ಆದರೆ 2013ರ ವೇಳೆಗೆ ದೇಶದ ಇತರೆಡೆಯಲ್ಲಾದಂತೆ ನಾಗಾಲ್ಯಾಂಡಿನಲ್ಲೂ ಕಾಂಗ್ರೇಸ್ ದುರ್ಬಲವಾಗುತ್ತ ಹೋಯಿತು. ಹಾಗಾಗಿ ಅದು  ಅಧಿಕಾರ ಹಿಡಿಯುವುದಿರಲಿ ತೀರಾ ಕಳಪೆ ಸಾದನೆ ಮಾಡಿತು.ಡೆಮೋಕ್ರಾಟಿಕ್ ಅಲೆಯನ್ಸ್ 40 ಸ್ಥಾನಗಳನ್ನು ಪಡೆದರೆ ಕಾಂಗ್ರೇಸ್ ಕೇವಲ 8 ಸ್ಥಾನಗಳನ್ನು ಪಡೆಯಲು ಶಕ್ತವಾಯಿತು.

ಇದೀಗ ಫೆಬ್ರವರಿ 27ನೇ ತಾರೀಖು ನಾಗಾಲ್ಯಾಂಡ್ ವಿದಾನಸಭೆಗೆ ಚುನಾವಣೆ ನಡೆಯಲಿದ್ದು  ನಾಗಾ ಸಮಸ್ಯೆಗೆ ಪರಿಹಾರವೊಂದನ್ನು ಚುನಾವಣೆಗೂ ಮುಂಚೆಯೇ ಕಂಡುಹಿಡಿಯಬೇಕೆಂಬ ಒತ್ತಾಯ ಕೇಳಿ ಬಂದಿದ್ದು ನಾಗಾ ಬಂಡುಕೋರರ ಸಭೆಗಳು ತೀವ್ರವಾಗಿ ನಡೆದಿದ್ದು ಮೊದಮೊದಲಿಗೆ ಚುನಾವಣೆಯ ಬಹಿಷ್ಕಾರದ ಮಾತು ಕೇಳಿಬಂದಿದ್ದವು.  ಈಬಂಡುಕೋರರ ಜೊತೆಗಿನ ಮಾತುಕತೆಯ ಕಾರಣ ನೀಡಿ ಬಾಜಪದೊಂದಿಗೆ ಮೈತ್ರಿ ಮುರಿದುಕೊಳ್ಳುವ ನಾಗಾ ಪೀಪಲ್ಸ್ ಪಾಟರ್ಿಯ ನಿಲುವನ್ನು ಇದೀಗ ಬದಲಿಸಲಾಗಿದ್ದು, ಎಂದಿನಂತೆ ಡೆಮೋಕ್ರಾಟಿಕ್ ಅಲೆಯನ್ಸ್ ಮುಂದುವರೆಯಲಿದ್ದು  ಮತ್ತೊಮ್ಮೆ ಅಧಿಕಾರ ಹಿಡುಯುವ ಹಾದಿಯಲ್ಲಿ ಅದು ಕಾರ್ಯಪ್ರವೃತ್ತವಾಗಿದೆ.

ಇನ್ನು ಕಾಂಗ್ರೇಸ್ ತನ್ನ ಪ್ರಚಾರಕ್ಕಾಗಿ ಪಕ್ಷದ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ರಾಹುಲ್ ಗಾಂದಿಯವರನ್ನು ನೆಚ್ಚಿಕೊಂಡಿದ್ದು ಡೆಮೋಕ್ರಾಟಿಕ್ ಅಲೆಯನ್ಸ್ನ ವಿರುದ್ದ ಬೀಸುತ್ತಿರುವ ಆಡಳಿತ ವಿರೋಧಿ ಅಲೆಯನ್ನು ನಂಬಿಕೊಂಡು ಪ್ರಚಾರಕ್ಕೆ ಇಳಿದಿದೆ.  ಕೇಂದ್ರದಲ್ಲಿ ಬಾಜಪ ಅನುಸರಿಸುತ್ತಿರುವ  ಆಥರ್ಿಕ ನೀತಿಗೆ ವಿರುದ್ದವಾಗಿ ನಾಗಾ ಜನರು ಮತ ಚಲಾಯಿಸುತ್ತಾರೆಂದು ಸಹ ಅದು ನಂಬಿದೆ. ಆದರೆ ಕಾಂಗ್ರೇಸ್ಸಿನ ಈ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡುವ ರೀತಿಯಲ್ಲಿ ಕಾಂಗ್ರೇಸ್ಸಿನ ಹಲವು ಹಿರಿಯ ನಾಯಕರುಗಳು ನಾಗಾಲ್ಯಾಂಡ್ ಕಾಂಗ್ರೇಸ್ ಎಂಬ ಪಕ್ಷವೊಂದನ್ನು ಸ್ಥಾಪಿಸಿ ಕಾಂಗ್ರೇಸ್ಸಿಗೆ ಸೆಡ್ಡು ಒಡೆದಿದ್ದಾರೆ.

ಆದರೆ ನಾಗಾಲ್ಯಾಂಡಿನ ಮಟ್ಟಿಗೆ  ಬಾಜಪ ಮತ್ತು ಕಾಂಗ್ರೇಸ್ಸಿನ ತಂತ್ರಗಾರಿಕೆಗಳಾಗಲಿ, ಅವುಗಳು ನೀಡುವ ಪೊಳ್ಳು ಭರವಸೆಗಳಾಗಲಿ ಕೆಲಸ ಮಾಡುವುದಿಲ್ಲ.ಬಹುಪಾಲು ನಾಗಾಗಳು ಇಂಡಿಯಾವನ್ನಾಗಲಿ, ಚೀನಾವನ್ನಾಗಲಿ ಮಯನ್ಮಾರ್ ಅನ್ನಾಗಲಿ ತಮ್ಮ ದೇಶವೆಂದು ಬಾವಿಸುವುದಿಲ್ಲ.ಮಣಿಪುರ, ಅಸ್ಸಾಂ, ಅರುಣಾಚಲಪ್ರದೇಶಗಳ ಕೆಲವು ಭಾಗಗಳನ್ನು ಒಳಗೊಂಡಂತೆ ತಮ್ಮದು ‘ಗ್ರೇಟರ್ ನಾಗಾಲಿಗಂ’ ಎನ್ನುವ ಒಂದು ಸ್ವತಂತ್ರ   ದೇಶವಾಗಬೇಕೆಂಬುದೇ ಅವರ ಕನಸು! ಈ ಕ್ಷಣಕ್ಕೂ ನಾಗಾಲ್ಯಾಂಡಿನ ನಾಗಾ ಜನಾಂಗಕ್ಕೂ ನಮ್ಮದೇ ಸರಕಾರಕ್ಕೂ ನಡೆಯುತ್ತಿರುವ ತಿಕ್ಕಾಟದ ಮೂಲಕಾರಣವೇ ಇದು. ಇವತ್ತಿಗೂ ಅಲ್ಲಿ ಅನೇಕ ನಾಗಾ ಬಂಡಾಯಗಾರರ ಗುಂಪುಗಳು ಸಕ್ರಿಯವಾಗಿದ್ದು, ಅವುಗಳಲ್ಲಿ ಪ್ರಮುಖವಾದವು ಹೀಗಿವೆ:

ನಾಗಾ ನ್ಯಾಷನಲ್ ಕೌನ್ಸಿಲ್,ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್,ನಾಗಾ ಫೆಡರಲ್ ಆಮರ್ಿ. ಹೀಗೆ ಹಲವು ಬಂಡುಕೋರ ಗುಂಪುಗಳು ಇದ್ದು ರಾಜ್ಯದ ಒಂದೊಂದು ಭೂಭಾಗದಲ್ಲಿಯೂ ಒಂದೊಂದು ಗುಂಪುಗಳು ಸಕ್ರಿಯವಾಗಿದ್ದು ಪ್ರಭಾವಶಾಲಿಯಾಗಿವೆ. ಹೀಗಾಗಿಯೇ ನಾನು ಹೇಳಿದ್ದು ದೇಶದ ಇತರೇ ರಾಜ್ಯಗಳ ರೀತಿಯಲ್ಲಿ ನಾಗಾ ಜನತೆ ಯೋಚಿಸಲಾರರು. ಅವರ ಮೇಲೆ ಬಂಡುಕೋರ ಗುಂಪುಗಳ ಪ್ರಭಾವ ಸಾಕಷ್ಟಿದ್ದು, ಚುನಾವಣೆಯ ಸಮಯದಲ್ಲಿ ಈ ಗುಂಪುಗಳು ನಿದರ್ೇಶಿಸುವ ರೀತಿಯಲ್ಲಿ ಮತ ಚಲಾಯಿಸುತ್ತಾರೆ. ಇದಕ್ಕೆ ತಕ್ಕಂತೆ ಅಲ್ಲಿನ ನಮ್ಮ ರಾಜಕೀಯ ಪಕ್ಷಗಳು ಸಹ ಒಂದಲ್ಲೊಂದು ಗುಂಪಿನ ಜೊತೆ ಗುಪ್ತವಾಗಿ ಹೊಂದಾಣಿಕೆ ಮಾಡಿಕೊಳ್ಳುತ್ತಾ ಮತಗಳಿಸುವ  ತಂತ್ರಗಾರಿಕೆಗೆ  ಮೊರೆ ಹೋಗಿವೆ.  ಇದರಿಂದಾಗಿ ಸಾಮಾನ್ಯವಾಗಿ  ನಮ್ಮ ರಾಜಕೀಯ ಪಕ್ಷಗಳು ಪ್ರಸ್ತಾಪಿಸುವ ಪ್ರಗತಿ, ಅಭಿವೃದ್ದಿಯಂತಹ ವಿಷಯಗಳು ಯಾವ ಪರಿಣಾಮವನ್ನೂ ಬೀರುವುದಿಲ್ಲ.

ಹಾಗಾಗಿ ನಾಗಾಲ್ಯಾಂಡಿನ ಜನತೆ ಇದುವರೆಗೂ ತಮ್ಮ ನಾಗಾಐಡೆಂಟಿಟಿಗೆ ಪೂರಕವಾಗಿ  ಮಾತಾಡ. ಇವತ್ತಿಗೂ ನಮ್ಮ ರಾಜಕೀಯ ಪಕ್ಷಗಳು  ನಾಗಾ ಬಂಡುಕೋರ ಗುಂಪುಗಳ ಜೊತೆ ಮಾತನಾಡುವ ವಿಷಯಗಳಾಗಲಿ, ಮಾಡಿಕೊಳ್ಳುವ ಗುಪ್ತ ಹೊಂದಾಣಿಕೆಗಳಾಗಲಿ ಸಾರ್ವಜನಿಕವಾಗಿ ಜನತೆಯ ಅರಿವಿಗೆಬರುವುದೇ ಇಲ್ಲ.

 

 

 

Leave a Reply

Your email address will not be published.