ನಿರ್ಭಯಾಳಿಂದ ಧಾನೇಶ್ವರಿಯವರೆಗೆ

ನಾ ದಿವಾಕರ

ದೆಹಲಿಯಿಂದ ವಿಜಯಪುರದವರೆಗೆ

ಡಿಸೆಂಬರ್ 16, 2017ಕ್ಕೆ ದೆಹಲಿಯ ಜ್ಯೋತಿ ಸಿಂಗ್ ಅತ್ಯಾಚಾರಕ್ಕೀಡಾಗಿ ಹತ್ಯೆಗೊಳಗಾದ ಘಟನೆ ನಡೆದು ಐದು ವರ್ಷ ಪೂರೈಸಿದೆ. ನಿರ್ಭಯ ಪ್ರಕರಣ ಎಂದೇ ಹೆಸರಾದ ಈ ಘಟನೆಯ ನಂತರ ಭಾರತದ ಆಳುವ ವರ್ಗಗಳು ಎಚ್ಚೆತ್ತವು. ನ್ಯಾಯಾಂಗದಲ್ಲಿ ಆತ್ಮಾವಲೋಕನದ ಛಾಯೆ ಮೂಡಿತು. ರಾಜಕೀಯ ಪಕ್ಷಗಳು ಜಾಗೃತವಾದವು. ಮಹಿಳಾ ಸಂಘಟನೆಗಳು ನಿರಂತರ ಹೋರಾಟದ ಮೂಲಕ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಯತ್ನಿಸಿದವು. ಕೇಂದ್ರ ಸರ್ಕಾರ ನೇಮಿಸಿದ್ದ ವರ್ಮಾ ಸಮಿತಿಯ ಶಿಫಾರಸುಗಳು ಮಹಿಳಾ ಸಮುದಾಯದಲ್ಲಿ ಆಶಾಭಾವನೆಯನ್ನು ಮೂಡಿಸಿದ್ದವು. ನಿರ್ಭಯ ಪ್ರಕರಣದ ಆರೋಪಿಗಳಿಗೆ ಸುಪ್ರೀಂಕೋರ್ಟ್ ಮರಣದಂಡನೆ ಶಿಕ್ಷೆಯನ್ನು ದೃಢಪಡಿಸಿದ ನಂತರ ದೇಶದಲ್ಲಿ ಅಂತಹ ಬರ್ಬರ ಕೃತ್ಯಗಳು ಸಂಭವಿಸುವುದೇ ಇಲ್ಲ ಎನ್ನುವ ಭ್ರಮೆಯೂ ಆವರಿಸಿತ್ತು. ಆದರೆ ನಿರ್ಭಯಳ ನೆನಪು ಮಾಸುವ ಮುನ್ನವೇ ಕರ್ನಾಟಕದ ವಿಜಯಪುರದಲ್ಲಿ ಮತ್ತೊಬ್ಬ ಬಾಲಕಿ ನಿರ್ದಯ ಪುರುಷರ ಅಟ್ಟಹಾಸಕ್ಕೆ ಬಲಿಯಾಗಿದ್ದಾಳೆ. 14 ವರ್ಷದ ಧಾನೇಶ್ವರಿ ಮತ್ತೊಂದು ವಿಕೃತ ಪುರುಷಾಧಿಪತ್ಯಕ್ಕೆ ಬಲಿಯಾಗಿದ್ದಾಳೆ. ಇಲ್ಲಿ ದಾನಮ್ಮಳ ಅಸ್ಮಿತೆಯಾಗಲೀ, ಅತ್ಯಾಚಾರ ಎಸಗಿದ ವಿಕೃತ ಕಾಮಿಯ ಅಸ್ಮಿತೆಯಾಗಲೀ ಮುಖ್ಯವಲ್ಲ.

ನಿರ್ಭಯ ಏಕೆ ಸಂಭವಿಸುತ್ತದೆ ? ಧಾನೇಶ್ವರಿ ಏಕೆ ಸಾಯುತ್ತಾಳೆ ? ಅಥವಾ ಇನ್ನೆಷ್ಟು ನಿರ್ಭಯ ದಾನಮ್ಮಗಳು ಬಲಿಯಾದರೆ ಪುರುಷ ಸಮಾಜದೊಳಗಿನ ಕಾಮದ ಕಿಚ್ಚು ತಣಿಯಲು ಸಾಧ್ಯ ? ನಾಲ್ವರು ಕಾಮುಕರಿಗೆ ಮರಣದಂಡನೆಯಾದರೆ ಪುರುಷ ಸಮಾಜದೊಳಗಿನ ವಿಕೃತಿಗಳು ಅಂತ್ಯವಾಗುತ್ತವೆಯೇ ? ಈ ಪ್ರಶ್ನೆ ನಮ್ಮನ್ನು ಕಾಡುತ್ತಲೇ ಇದೆ. ಶಿಕ್ಷೆ, ಅಪರಾಧ, ಸಂವಿಧಾನ, ಹಕ್ಕು, ಮಾನ್ಯತೆ, ಘನತೆ, ಗೌರವ ಹೀಗೆ ವಿಭಿನ್ನ ಆಯಾಮಗಳಲ್ಲಿ ಮಹಿಳೆಯ ಘನತೆ ಮತ್ತು ಗೌರವವನ್ನು ರಕ್ಷಿಸಲು ಹೆಣಗಾಡುತ್ತಿರುವ ಸಾಂಪ್ರದಾಯಿಕ ಸಮಾಜದಲ್ಲಿ ಸಂವೇದನೆ ಏಕೆ ನಶಿಸಿಹೋಗುತ್ತಿದೆ ಎಂಬ ಪ್ರಶ್ನೆ ಇಂದು ಮೂಡಬೇಕಿದೆ. ನಿರ್ಭಯ ಅರ್ಧರಾತ್ರಿಯಲ್ಲಿ ಪ್ರಯಾಣ ಮಾಡುತ್ತಿದ್ದಳು. ಮತ್ತೊಬ್ಬ ಮಹಿಳೆ ತುಂಡು ಉಡುಪು ಧರಿಸಿದ್ದಳು. ಇನ್ನೊಬ್ಬಳು ಪ್ರಚೋದನಕಾರಿ ಉಡುಪು ಧರಿಸಿದ್ದಳು. ಆದರೆ ಪಾಪ ದಾನಮ್ಮ ಏನು ಮಾಡಿದ್ದಳು. ಶಾಲೆಗೆ ಹೋಗುವ ಬಾಲಕಿ ಹಾಡ ಹಗಲಿನಲ್ಲೇ ಪುರುಷ ವಿಕೃತಿಗೆ ಬಲಿಯಾಗುವುದೆಂದರೆ ನಾವು ನಾಗರಿಕರು ಎಂದು ಗುರುತಿಸಿಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡಬೇಕಿದೆ.

ದೆಹಲಿಯಲ್ಲಿ ಬಲಿಯಾದ ದೇಹ, ವಿಜಯಪುರದಲ್ಲಿ ಸುರುಟಿ ಹೋದ ದೇಹ ಭಿನ್ನವಾಗಿರಬಹುದು. ಆದರೆ ಈ ದೇಹಗಳನ್ನು ಛಿದ್ರಗೊಳಿಸಿದ ಮನಸು ಒಂದೇ ಅಲ್ಲವೇ? ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಅತ್ಯಾಚಾರಿಗಳು, ವಿಜಯಪುರದಲ್ಲಿ ಅಟ್ಟಹಾಸ ಮೆರೆದ ವಿಕೃತ ಕಾಮಿಗಳು ಭಿನ್ನ ವ್ಯಕ್ತಿಗಳಾಗಿರಬಹುದು ಆದರೆ ಇವರಿಂದ ಭಗ್ನಗೊಂಡ ಕನಸು ಒಂದೇ ಅಲ್ಲವೇ ? ಬದುಕನ್ನೇ ಹೊಸಕಿ ಹಾಕುವ ಅನಾಗರಿಕ , ಅಮಾನುಷ ಪ್ರವೃತ್ತಿ ಒಂದು ನಾಗರಿಕ ಸಮಾಜದಲ್ಲಿ ಸುಳಿಯುವುದಾದರೂ ಹೇಗೆ ? ಸಂಸ್ಕøತಿ, ಪರಂಪರೆ, ಇತಿಹಾಸ, ಧರ್ಮ, ಮಾನವತೆ, ವಿಶ್ವಮಾನವ ಧರ್ಮ, ವಸುದೈವ ಕುಟುಂಬಕಂ ಹೀಗೆ ವರ್ಣರಂಜಿತ ಪದಗಳನ್ನು ಬಳಸುತ್ತಲೇ ತನ್ನ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತಿರುವ ಭಾರತೀಯ ಸಮಾಜ ನಿರ್ಭಯಳನ್ನು, ದಾನಮ್ಮಳನ್ನು ಏನೆಂದು ಪರಿಗಣಿಸುತ್ತದೆ. ಎಲುಬಿನ ಹಂದರ ಮಾತ್ರ ಎಂದೋ ಅಥವಾ ಯಾವ ಕ್ಷಣದಲ್ಲಿ ಬೇಕಾದರೂ ಶರಣಾಗಲು ಸಿದ್ಧವಾಗಿರಬೇಕಾದ ನಶ್ವರ ದೇಹ ಎಂದೋ ?

ದೆಹಲಿಯಿಂದ ವಿಜಯಪುರದವರೆಗಿನ ಪಯಣದಲ್ಲಿ ಬಲಿಯಾಗಿರುವ ಹತಭಾಗ್ಯರ ಬವಣೆಯನ್ನು ಕೆಲವೇ ನಿರ್ದಿಷ್ಟ ಅಸ್ಮಿತೆಗಳಲ್ಲಿ, ಚೌಕಟ್ಟಿನಲ್ಲಿ ಬಂಧಿಸಲಾಗುವುದಿಲ್ಲ. ನಿರ್ಭಯ, ಧಾನೇಶ್ವರಿ ಬಲಿಯಾಗಿರುವುದು ಭಾರತೀಯ ಸಮಾಜ ನಿರ್ಮಿಸಿಕೊಂಡಿರುವ ಒಂದು ಸಂವೇದನಾರಹಿತ ಸಂಸ್ಕøತಿಗೆ. ಮಹಿಳೆಯ ಬದುಕು, ಅಸ್ತಿತ್ವ ಮತ್ತು ಅಸ್ಮಿತೆಯನ್ನು ಒಂದು ನಿರ್ದಿಷ್ಟ ಸಾಂಪ್ರದಾಯಿಕ ಚೌಕಟ್ಟಿನೊಳಗೆ ಬಂಧಿಸಿರುವ ಭಾರತದ ಸಾಂಪ್ರದಾಯಿಕ ಸಮಾಜ, ಸಾಂಸ್ಕøತಿಕ ನೆಲೆಯಲ್ಲಿ ಈ ಚೌಕಟ್ಟಿನ ಅಧಿಪತ್ಯವನ್ನು ಪುರುಷ ಸಮಾಜಕ್ಕೆ ವಹಿಸಿದೆ. ಹಾಗಾಗಿ ಪುರುಷ ಸಮಾಜ ಮತ್ತು ಪಿತೃ ಪ್ರಾಧಾನ್ಯತೆಯನ್ನು ಪೋಷಿಸುವ ಸಾಮಾಜಿಕ ವ್ಯವಸ್ಥೆ ಮಹಿಳೆಯನ್ನು ತನ್ನ ನಿಯಂತ್ರಣದಲ್ಲಿರಿಸಲು ಪಾವಿತ್ರ್ಯತೆ, ಶೀಲ, ಕನ್ಯತ್ವ ಮುಂತಾದ ಅಸ್ತ್ರಗಳನ್ನು ಆಗಾಗ್ಗೆ ಬಳಸುತ್ತಲೇ ಇರುತ್ತದೆ. ಅತ್ಯಾಚಾರಕ್ಕೊಳಗಾಗುವ ಮಹಿಳೆ ತನ್ನ ಶೀಲ ಕಳೆದುಕೊಳ್ಳುತ್ತಾಳೆ ಎಂದು ಸಂಭ್ರಮಿಸುವ ವಿಕೃತ ಪುರುಷ ಸಮಾಜದ ದೃಷ್ಟಿಯಲ್ಲಿ ಶೀಲ ಅಥವಾ ಪಾವಿತ್ರ್ಯತೆ ನಿಯಂತ್ರಿಸಬಹುದಾದ ವಿದ್ಯಮಾನಗಳಾಗಿ ಕಾಣುತ್ತವೆ. ನಿರ್ಭಯ ಅಥವಾ ಧಾನೇಶ್ವರಿ ಘಟನೆಗಳಲ್ಲಿ ಈ ವಿದ್ಯಮಾನಗಳನ್ನು ಭಂಗಗೊಳಿಸುವ ಮೂಲಕ ತನ್ನ ಅಧಿಪತ್ಯ ಸಾಧಿಸಲು ಪುರುಷ ಸಮಾಜ ಯತ್ನಿಸುತ್ತದೆ. ಅತ್ಯಾಚಾರ ಎಸಗುವುದು ವ್ಯಕ್ತಿ ಅಥವಾ ವ್ಯಕ್ತಿಗಳ ಒಂದು ಗುಂಪು ಹೌದಾದರೂ, ಈ ವ್ಯಕ್ತಿಗಳ ಹಿಂದಿರುವ ಸಾಂಸ್ಕøತಿಕ ನೆಲೆಗಳು ಮತ್ತು ಸಾಮಾಜಿಕ ಸಂವೇದನೆ ಸ್ಥಾಪಿತ ವ್ಯವಸ್ಥೆಯಿಂದಲೇ ಸೃಷ್ಟಿಯಾದದ್ದಲ್ಲವೇ ?

ಈ ಸ್ಥಾಪಿತ ವ್ಯವಸ್ಥೆಯ ಮೂಲ ಸಂವೇದನೆಯಲ್ಲಿ ಬದಲಾವಣೆ ಕಾಣದ ಹೊರತು ಮಹಿಳೆಯ ಮೇಲಿನ ದೌರ್ಜನ್ಯ ಕಡಿಮೆಯಾಗುವುದಿಲ್ಲ. ದಲಿತರ ಮೇಲಿನ ದೌರ್ಜನ್ಯವೂ ಕಡಿಮೆಯಾಗುವುದಿಲ್ಲ. ಇಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ ದಲಿತ ಸಮುದಾಯಕ್ಕೆ ಸೇರಿದವಳಾಗಿದ್ದರೂ ಅತ್ಯಾಚಾರಿಗೆ ಜಾತಿಯೊಂದೇ ಗುರಿಯಾಗುವುದಿಲ್ಲ. ಜಾತಿಯ ಅಹಮಿಕೆ, ಪುರುಷ ಸಮಾಜದ ದರ್ಪ ಮತ್ತು ಪೌರುಷದ ವಿಕೃತ ಮನೋಭಾವ ಇವುಗಳ ಮಿಶ್ರಣವನ್ನು ಇಂತಹ ಘಟನೆಗಳಲ್ಲಿ ಕಾಣಬಹುದು. ಸಂಪ್ರದಾಯವಾದಿಗಳಿಗೆ , ಮತಾಂಧರಿಗೆ, ಧರ್ಮದ ಅಫೀಮಿಗೆ ಬಲಿಯಾದ ಸನಾತನಿಗಳಿಗೆ ಅತ್ಯಾಚಾರಕ್ಕೊಳಗಾದ ಮಹಿಳೆ ತನ್ನ ಹಾವಭಾವಗಳಿಂದಲೋ, ವಸ್ತ್ರ ಧಾರಣೆಯಿಂದಲೋ, ಪುರುಷ ಸಮಾಜ ನಿರ್ಮಿಸಿದ ಚೌಕಟ್ಟನ್ನು ಮೀರುವ ವರ್ತನೆಯಿಂದಲೋ ಅಪರಾಧಿ ಸ್ಥಾನದಲ್ಲೋ ನಿಲ್ಲುವುದನ್ನು ಕಂಡಿದ್ದೇವೆ. ಹಾಗಾಗಿಯೇ ಪರೇಶ್ ಮೇಸ್ತಾನ ಸಾವು ರಾಜಕೀಯ ಮೇವು ಆಗುತ್ತದೆ, ಧಾನೇಶ್ವರಿಯ ಹತ್ಯೆ ನಿರ್ಲಕ್ಷ್ಯಕ್ಕೊಳಗಾಗುತ್ತದೆ. ಸಾಂಸ್ಕøತಿಕ ರಾಜಕಾರಣ ಸಂವೇದನೆಯನ್ನು ಕಳೆದುಕೊಂಡರೆ ಏನಾಗುತ್ತದೆ ಎಂದು ಈ ಘಟನೆಗಳು ನಿರೂಪಿಸುತ್ತವೆ.

ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿದಿರುವ ಶಕ್ತಿಗಳು ಸೆಕ್ಯುಲರ್ ಆಗಿರಲಿ, ಮತಾಂಧರೇ ಆಗಿರಲಿ, ಧರ್ಮನಿಷ್ಟರೇ ಆಗಿರಲಿ, ಮಹಿಳೆಯರ, ದಲಿತರ ಮೇಲಿನ ದೌರ್ಜನ್ಯಗಳಿಗೆ ಅಡ್ಡಿಯಾಗುವುದಿಲ್ಲ. ಏಕೆಂದರೆ ದೌರ್ಜನ್ಯ, ಅತ್ಯಾಚಾರಕ್ಕೊಳಗಾಗುವ ಮಹಿಳೆ ಯಾವುದೇ ಜಾತಿಯವಳಾಗಿದ್ದರೂ ದೌರ್ಜನ್ಯ ಎಸಗುವ ಪುರುಷ ಸಮಾಜಕ್ಕೆ ಜಾತಿಯ ಸೋಂಕು ಇರುವುದಿಲ್ಲ. ಏಕೆಂದರೆ ಇದು ಮನೋಭಾವದ ಪ್ರಶ್ನೆ, ಧೋರಣೆಯ ಪ್ರಶ್ನೆ, ಕಣ್ಣೋಟದ ಪ್ರಶ್ನೆ. ಈ ಮನೋಭಾವ ಬದಲಾಗಲು ಕ್ರಾಂತಿಕಾರಿ ಸುಧಾರಣೆಗಳು ಅಗತ್ಯ. ತಮ್ಮ ದೇಹದ ಮೇಲೆ ಕೇವಲ ತಮಗೆ ಮಾತ್ರವೇ ನಿಯಂತ್ರಣದ ಹಕ್ಕು ಇದೆ ಎಂಬ ದಿಟ್ಟ ನಿರ್ಧಾರವನ್ನು ಮಹಿಳೆಯರು ತಾಳಬೇಕಿದೆ. ತಮ್ಮ ಉಡುಪು ತಮ್ಮ ಹಕ್ಕು, ತಮ್ಮ ಆಹಾರ ತಮ್ಮ ಹಕ್ಕು, ತಮ್ಮ ಸಂಪ್ರದಾಯ ತಮ್ಮ ಹಕ್ಕು, ತಮ್ಮ ಜೀವನಶೈಲಿ ತಮ್ಮ ಹಕ್ಕು ಎಂಬ ಘೋಷಣೆಯಡಿ ಮಹಿಳಾ ಸಮುದಾಯ ಮುನ್ನಡೆಯಬೇಕಿದೆ. ಪ್ರತಿಯೊಬ್ಬ ಮಹಿಳೆಯ ಮೇಲೆ ನಡೆಯುವ ದೌರ್ಜನ್ಯ ಮತ್ತು ಅತ್ಯಾಚಾರವನ್ನೂ ಮಹಿಳಾ ಅಸ್ಮಿತೆಯ ನೆಲೆಯಲ್ಲಿಯೇ ವಿರೋಧಿಸುವುರೊಂದಿಗೆ, ಪುರುಷ ಪ್ರಧಾನ ವ್ಯವಸ್ಥೆ ಪೋಷಿಸುತ್ತಿರುವ ವಿಕೃತ ಸಂಸ್ಕøತಿಯ ವಿರುದ್ಧ ನಿರಂತರ ಹೋರಾಟ ಇಂದಿನ ಅಗತ್ಯತೆಯಾಗಬೇಕಿದೆ.

ಈ ಘೋಷವಾಕ್ಯಗಳೊಂದಿಗೆ ಹೋರಾಡೋಣ ನಿರ್ಭಯ ಧಾನೇಶ್ವರಿ ಸಜೀವವಾಗುತ್ತಾರೆ :
“ ನಮ್ಮ ಹಕ್ಕುಗಳನ್ನು ನೀಡಿ ಎಂದು ಕೈಚಾಚುವುದಿಲ್ಲ
ನಮ್ಮ ಘನತೆ ಗೌರವ ಉಳಿಸಿ ಎಂದು ಬೇಡುವುದಿಲ್ಲ
ನಮ್ಮ ಶೀಲ ಕಾಪಾಡಿ ಎಂದು ಕೂಗುವುದಿಲ್ಲ
ನಮ್ಮ ಸ್ಥಾನ ನಮಗೆ ನೀಡಿ ಎಂದು ಗೋಗರೆಯುವುದಿಲ್ಲ
ಈ ಹಕ್ಕುಗಳು ನಮ್ಮವು ನಾವೇ ಪಡೆದೇ ತೀರುತ್ತೇವೆ ”

Leave a Reply

Your email address will not be published.