ನಿನಗೆ ಅಲ್ವಿದಾ ಹೇಳಲು ಸಾಧ್ಯವೇ ?

ನಾ ದಿವಾಕರ

(ಅಕ್ಟೋಬರ್ 13 1987ರಂದು ಇಹಲೋಕ ತ್ಯಜಿಸಿದ ವೈವಿಧ್ಯಮಯ ಗಾಯಕ, ನಟ , ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ವಿದೂಷಕ ಇತ್ಯಾದಿ ಇತ್ಯಾದಿ , ಕಿಶೋರ್ ಕುಮಾರ್ ಅವರ 30ನೆಯ ವರ್ಷದ ಸ್ಮರಣೆಯಲ್ಲಿ ಈ ಲೇಖನ )

ಮುಂಜಾವಿನ ಸೂರ್ಯೋದಯ ನೋಡುತ್ತಲೇ ನಿನ್ನ “ ಸವೇರೇ ಕಾ ಸೂರಜ್ ತುಮ್ಹಾರೇ ಲಿಯೇ ಹೈ ” ಮನದಾಳದಲ್ಲಿ ಗುನುಗುನಿಸುತ್ತದೆ. ನಿತ್ಯ ಚಟುವಟಿಕೆಗಳು ಆರಂಭವಾಗುತ್ತಲೇ “ ಜಿಂದಗೀ ಕೆ ಸಫರ್ ಮೆ ಗುಜರ್ ಜಾತೆ ಹೈ ಜೋ ಮಖಾಂ ಓ ಫಿರ್ ನಹೀಂ ಆತೇ ” ನೆನಪಾಗುತ್ತದೆ. ಕಚೇರಿಗೆ ಹೋಗುವ ಮುನ್ನ “ ಆನೇ ವಾಲಾ ಪಲ್ ಜಾನೇ ವಾಲಾ ಹೈ ನೆನಪಾಗುತ್ತದೆ ”. ದ್ವಿಚಕ್ರ ವಾಹನದಲ್ಲಿ ಚಲಿಸುವಾಗ “ ಜಿಂದಗಿ ಏಕ್ ಸಫರ್ ಹೈ ಸುಹಾನ ” ನೆನಪಾಗುತ್ತದೆ. ಸುತ್ತಲಿನ ಸಮಾಜದ ಕಷ್ಟ ಕಾರ್ಪಣ್ಯಗಳನ್ನು ಕಂಡಾಗ ನೀನು ಅಮಿತಾಬ್‍ಗಾಗಿಯೇ ಹಾಡಿದ “ ರೋತೆ ಹುವೆ ಆತೇ ಹೈ ಸಬ್ ಹಸ್ತಾ ಹುವಾ ತೋ ಜಾಯೇಗಾ ” ಮನದಲ್ಲಿ ಹಾದುಹೋಗುತ್ತದೆ. ಜೀವನದ ಸಂಕಷ್ಟಗಳ ನೆನಪಾದಾಗ “ ಜಿಂದಗೀ ಕಾ ಸಫರ್ ಹೈ ಎ ಕೈಸಾ ಸಫರ್ ” ಸ್ಮರಿಸುವಂತಾಗುತ್ತದೆ. ಸುತ್ತಲಿನ ಜನರ ಗಾಸಿಪ್ಪುಗಳು ಕೇಳ್ಪಟ್ಟಾಗ “ ಕುಚ್ ತೋ ಲೋಗ್ ಕಹೇಂಗೆ ಲೋಗೋಂಕಾ ಕಾಮ್ ಹೈ ಕೆಹನಾ ಛೋಡೋ ಬೇಕಾರ್ ಕಿ ಬಾತೇ ” ಕಿವಿಗೆ ಅಪ್ಪಳಿಸುತ್ತದೆ.
ಪ್ರೀತಿ ವಾತ್ಸಲ್ಯಗಳಿಂದ ವಂಚಿತರಾದಾಗ ನಿನ್ನ ಹಾಸ್ಯಭರಿತ ಹಾಡು “ ಪ್ಯಾರ್ ಹಮೇ ಇಸ್ ಮೋಡ್ ಪೆ ಲೇ ಆಯಾ” ನೆನಪಾಗುತ್ತದೆ. ಸುಂದರ ಕಂಗಳ ಚೆಲುವೆ ಎದುರಾದಾಗ “ ಜೀವನ್ ಸೆ ಭರಿ ತೆರೀ ಆಂಖೇ ಮಜಬೂರ್ ಕರೇ ಜೀನೇ ಕೇ ಲಿಯೇ ” ಹಾಡೂ ನೆನಪಾಗುತ್ತದೆ. ಮನಸು ಉಲ್ಲಾಸದಿಂದಿದ್ದಾಗ ನಿನ್ನ “ ಎಕ್ ಚತುರ್ ನಾರ್ ಬಡಿ ಹೋಷಿಯಾರ್ ” ನೆನಪಾಗುತ್ತದೆ. ಸಂಜೆಯಾದೊಡನೆ ಮದ್ಯ ಸೇವಿಸದಿದ್ದರೂ ನಿನ್ನ ಅಧ್ಬುತ ಹಾಡು “ ಏ ಶ್ಯಾಂ ಮಸ್ತಾನಿ ಮದ್‍ಹೋಷ್ ಪಿಯೆ ಜಾಯ್ ” ನೆನಪಾಗುತ್ತದೆ. ಆಗೊಮ್ಮೆ ಈಗೊಮ್ಮೆ ಮನದಾಕೆಯನ್ನು ನೆನೆಯುವಾಗ “ಮೇರೆ ಸಪ್ನೋಂಕಿ ರಾಣಿ ಕಬ್ ಆಯೇಗಿ ತೂ” ನೆನಪಾಗುತ್ತದೆ. ರಾತ್ರಿಯಾದೊಡನೆ “ ರಾತ್ ಕಲಿ ಎಕ್ ಖ್ವಾಬ್ ಮೆ ಆಯಿ ಔರ್ ಗಲೇ ಕಾ ಹಾರ್ ಹುಯಿ ” ನೆನಪಾಗುತ್ತದೆ. ಮಲಗುವ ಮುನ್ನ ಖಂಡಿತವಾಗಿಯೂ ನಿನ್ನ ಮತ್ತೊಂದು ಅಧ್ಬುತ ಗೀತೆ “ ಚಲ್ತೇ ಚಲ್ತೇ ಮೇರೆ ಏ ಗೀತ್ ಯಾದ್ ರಖ್‍ನಾ ಕಭಿ ಅಲ್ವಿದ ನಾ ಕೆಹನಾ ” ನೆನಪಾಗುತ್ತದೆ.

ನೀನು ನಿನ್ನ ಕೋಟ್ಯಂತರ ಅಭಿಮಾನಿಗಳನ್ನು ಅಗಲಿ ಮೂವತ್ತು ವರ್ಷಗಳೇ ಸಂದಿವೆ. ಅಕ್ಟೋಬರ್ 13 1987ರಂದು ನೀನು ಇಹಲೋಕ ತ್ಯಜಿಸಿದಾಗ ಚಿತ್ರರಂಗದಲ್ಲಿ ಮತ್ತು ಮನರಂಜನಾ ಕ್ಷೇತ್ರದಲ್ಲಿ ಆವರಿಸಿದ ಶೂನ್ಯ ಮತ್ತು ನೀರವತೆ ಇಂದಿಗೂ ಹಾಗೆಯೇ ಇದೆ. ಕೇವಲ ಆರು ವರ್ಷಗಳ ಹಿಂದೆ ನಿನಗಿಂತಲೂ ಶ್ರೇಷ್ಠ ಎಂದು ನಿನ್ನಿಂದಲೇ ಪ್ರಶಂಸೆಗೊಳಪಟ್ಟಿದ್ದ ರಫಿ ಸಾಬ್ ನಮ್ಮನ್ನಗಲಿದ್ದರು. ನಿನ್ನ ಮತ್ತು ರಫಿಯ ನಡುವೆ ಹೋಲಿಕೆ ಮಾಡುವುದು ಇಬ್ಬರಿಗೂ ಅಪಚಾರ ಮಾಡಿದಂತೆಯೇ ಆದರೂ ನಿಮ್ಮದೇ ಆದ ಶೈಲಿಗಳಲ್ಲಿ ನೀವಿಬ್ಬರೂ ಅಪ್ರತಿಮರೇ, ಅಜರಾಮರರೇ. ರಫಿ ಕೇವಲ ಗಾಯಕರಾಗಿ ತಮ್ಮ ಪ್ರತಿಭೆ ಮೆರೆದವರು. ಆದರೆ ನೀನು, ಭಲೆ ಕಿಶೋರ , ನಟ, ನಿರ್ಮಾಪಕ, ನಿರ್ದೇಶಕ, ಗಾಯಕ, ಸಂಗೀತ ನಿರ್ದೇಶಕ ಇನ್ನೇನು ಬಯಸಲು ಸಾಧ್ಯ ಒಬ್ಬ ಕಲಾವಿದನಿಂದ. ಯಾವುದರಲ್ಲೂ ನೀನು ಹಿಂದೆ ಬಿದ್ದವನಲ್ಲ. ರಾಗಿಣಿ ಚಿತ್ರದ ಸಂಗೀತ ನಿರ್ದೇಶನ ಮಾಡಿದ ನೀನು ನಿನ್ನದೇ ನಟನೆಗೆ ಶಾಸ್ತ್ರೀಯ ರೂಪದಲ್ಲಿನ ಹಾಡನ್ನು ರಫಿಯವರ ಕೈಯ್ಯಲ್ಲಿ ಹಾಡಿಸಿದ ಪ್ರಬುದ್ಧತೆ, ಔದಾರ್ಯ ನಿನ್ನದು. ಇದು ಒಬ್ಬ ಕಲಾವಿದನ ಶ್ರೇಷ್ಠತೆಯ ಸಂಕೇತವಲ್ಲವೇ ?

ಚಿತ್ರದಲ್ಲಿ ಯಾವ ನಾಯಕ ನಟರು ನಟಿಸಿದ್ದಾರೆ ಎಂದು ತಿಳಿಯಲು ನಿನ್ನ ದನಿಯಲ್ಲಿನ ಹಾಡು ಕೇಳಿದರೆ ತಿಳಿಯುತ್ತಿತ್ತು. ಅಷ್ಟರ ಮಟ್ಟಿಗೆ ಎಲ್ಲ ನಟರ ದನಿಗೆ ಹೋಲುವಂತೆ ನಿನ್ನ ದನಿಯನ್ನು ಬದಲಿಸಿಕೊಳ್ಳುವ ಅಪ್ರತಿಮ ಪ್ರತಿಭೆ ನಿನ್ನದು. ದೇವಾನಂದ್, ರಾಜೇಶ್ ಖನ್ನ, ಅಮಿತಾಬ್ ಬಚ್ಚನ್, ಶಶಿಕಪೂರ್, ಧಮೇರ್ಂದ್ರ ಮತ್ತು ಹೊಸ ಪೀಳಿಗೆಯ ಹಲವು ನಟರಿಗೆ ನಿನ್ನ ದನಿಯನ್ನು ನೀಡುವ ಮೂಲಕ ಅವರನ್ನೂ ಅಜರಾಮರವಾಗಿಸಿದ ಕೀರ್ತಿ ನಿನ್ನದು. ಇಷ್ಟು ವೈವಿಧ್ಯತೆ ನಿನಗೆ ಹೇಗೆ ಸಾಧ್ಯವಾಯಿತು ಎಂಬುದೇ ಸೋಜಿಗ. ಹಾಫ್ ಟಿಕೆಟ್ ಚಿತ್ರದಲ್ಲಿ ಹೆಣ್ಣು ಪಾತ್ರ ವಹಿಸಿದ ನಿನಗೆ ಹೆಣ್ಣು ದನಿಯಲ್ಲಿ ಮತ್ತು ಗಂಡು ಪಾತ್ರದಲ್ಲಿದ್ದ ಪ್ರಾಣ್‍ಗೆ ಗಂಡು ದನಿಯಲ್ಲಿ ನೀನು ಹಾಡಿದ “ ಆಕೆ ಸೀದಿ ಲಗೀ ದಿಲ್‍ಪೆ ಐಸೆ ಗುಜರಿಯ ಹೋ ಸವರಿಯಾ ” ಎಂಬ ಹಾಡು ಈವರೆಗೂ ಎಲ್ಲಿಯೂ ಪ್ರಯೋಗಕ್ಕೊಳಪಡದ ಅದ್ಭುತ ಹಾಡು ಎಂದರೆ ಹೆಮ್ಮೆಯಲ್ಲವೇ ? ಯುಗಳ ಗೀತೆಯನ್ನು ಹೆಣ್ಣು ಮತ್ತು ಗಂಡು ದನಿಯಲ್ಲಿ ಒಮ್ಮೆಲೆ ಹಾಡುವ ಸಾಮಥ್ರ್ಯ ಯಾರಿಗಿತ್ತು ? ಯಾರಿಗಿದೆ ?

ಮಿಸ್ ಮೇರಿ ಚಿತ್ರದ “ ಗಾನಾ ನ ಆಯಾ ಬಜಾನಾನ ಆಯಾ” ಪಡೋಸನ್ ಚಿತ್ರದ “ ಎಕ್ ಚತುರ್ ನಾರ್ ಬಡಿ ಹೋಷಿಯಾರ್ ”, ಈನಾ ಮೀನ ಡೀಕಾ, ಸಿಎಟಿ ಕ್ಯಾಟ್ ಕ್ಯಾಟ್ ಮಾನೆ ಬಿಲ್ಲಿ, ಚಲ್ತಿ ಕಾ ನಾಂ ಗಾಡಿಯ ಹಾಡುಗಳು, ಏಕ್ ರುಪೈಯ್ಯಾ ಬಾರಾ ಅಣಾ ಹಾಡು ಇಂತಹ ಅಸಂಖ್ಯಾತ ಹಾಸ್ಯ ಗೀತೆಗಳು ಇಂದಿಗೂ ಕೇಳುಗರನ್ನು ನಕ್ಕು ನಲಿಯುವಂತೆ ಮಾಡುತ್ತವೆ. ಅಷ್ಟೇ ಪರಿಣಾಮಕಾರಿಯಾಗಿ ನಿನ್ನ ರೊಮ್ಯಾಂಟಿಕ್ ಗೀತೆಗಳಾದ ಏ ಶ್ಯಾಂ ಮಸ್ತಾನಿ, ಜಿಂದಗಿ ಏಕ್ ಸಫರ್, ಚಿಂಗಾರಿ ಕೊಯೀ ಭಡ್ ಕೇ, ನೀಲೆ ನೀಲೆ ಅಂಬರ್ ಪರ್ ಇತ್ಯಾದಿ ಗೀತೆಗಳು ಮನದಾಳದಲ್ಲಿ ಗುನುಗುನಿಸುತ್ತಿರುತ್ತವೆ. 50 ವರ್ಷದ ನಂತರ ನಿನ್ನ ದನಿಯಲ್ಲಿ ಹೆಚ್ಚು ಪುರುಷತ್ವ ಕಂಡುಬಂದಿದ್ದು ನಿಜಕ್ಕೂ ಸೋಜಿಗ. ಶರಾಬಿ ಚಿತ್ರಕ್ಕಾಗಿ ಅಮಿತಾಬ್‍ಗೆ ಹಾಡಿದ ಹಾಡುಗಳು, ಯಾರಾನಾ ಚಿತ್ರದ ಗೀತೆಗಳು ಇಂದಿಗೂ ನಿನ್ನ ಪ್ರತಿಭೆಗೆ ಸಾಕ್ಷಿ. ಕರ್ಜ್ ಚಿತ್ರಕ್ಕಾಗಿ ರಿಷಿಕಪೂರ್‍ಗೆ ನೀನು ಹಾಡಿದ ಹಾಡುಗಳು ನಿನ್ನ ಅದ್ಭುತ ಪ್ರತಿಭೆಗೆ ಸಂಕೇತ.

ನೀನು ಹಾಡಿದ ಹಾಡುಗಳ ಪಟ್ಟಿ ಮಾಡುತ್ತಾ ಹೋದರೆ ಬೃಹತ್ ಗ್ರಂಥವಾಗುತ್ತದೆ. ನಿನ್ನ ವ್ಯಕ್ತಿಗತ ಜೀವನದಷ್ಟೇ ವೈವಿಧ್ಯಮಯವಾಗಿ ಹಾಡಿ ಮೆರೆದ ನಿನ್ನ ದನಿಯಲ್ಲಿನ ಮಾಧುರ್ಯ ಕಟ್ಟಕಡೆಯವರೆಗೂ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದು ನಿಜಕ್ಕೂ ಅಚ್ಚರಿಯ ಸಂಗತಿ ಅಲ್ಲವೇ ? ವಯಸ್ಸಾಗುತ್ತಿದ್ದಂತೆಲ್ಲಾ ದನಿ ಒಡೆಯುವುದನ್ನು ಕೇಳಿದ್ದೇವೆ. ನಮ್ಮವರೇ ಆದ ಪಿ.ಬಿ. ಶ್ರೀನಿವಾಸ್, ಘಂಟಸಾಲ, ಮುಖೇಶ್ ಇದನ್ನು ಅನುಭವಿಸಿದ್ದಾರೆ. ಆದರೆ ನೀನು ಛಲಬಿಡದ ತ್ರಿವಿಕ್ರಮ. ಮೊಹಮ್ಮದ್ ರಫಿಯವರೊಡನೆ ಸಮಾನವಾಗಿ ನಿಂತು ನಿನ್ನದೇ ಆದ ಲಾಂಛನವನ್ನು ಸಂಗೀತ ಪ್ರೇಮಿಗಳ ಮನದಾಳದಲ್ಲಿ ಬಿತ್ತಿದ ನಿನ್ನ ಪ್ರತಿಭೆಗೆ ಸಾಟಿಯಾರು ? ಬಂಗಾಲಿ, ಹಿಂದಿ, ಮರಾಠಿ, ಕನ್ನಡ ( ಕುಳ್ಳ ಏಜೆಂಟ್ 000 ಚಿತ್ರದ ಆಡೂ ಆಟ ಆಡೂ) ಗುಜರಾತಿ, ಅಸ್ಸಾಮಿ, ಭೋಜಪುರಿ, ಮಲಯಾಳಂ ಮತ್ತು ಒರಿಯಾ ಭಾಷೆಗಳನ್ನು ನಿನ್ನ ದನಿಯ ಹೆಜ್ಜೆ ಗುರುತುಗಳನ್ನು ಶಾಶ್ವತವಾಗಿ ಮೂಡಿಸಿರುವ ನಿನಗೆ ಪ್ರಶಸ್ತಿಗಳು ಎಷ್ಟು ಲಭಿಸಿವೆ ಎಂದು ಎಣಿಸುವುದು ನಿನ್ನ ಮಾಧುರ್ಯಕ್ಕೆ, ನಿನ್ನ ಪ್ರತಿಭೆಗೆ ಅಪಚಾರ ಎಸಗಿದಂತೆ. ನಿನ್ನ ದನಿಯೇ ನಿನಗೆ ಪ್ರಶಸ್ತಿ. ನಿನ್ನ ಅಭಿಮಾನಿಗಳ ಮೆಚ್ಚುಗೆಯೇ ನಿನಗೆ ದೊರೆತ ಪದಕಗಳು.

ನಿನಗೆ ಶ್ರದ್ಧಾಂಜಲಿ ಸಲ್ಲಿಸುವುದಾದರೂ ಹೇಗೆ ಕಿಶೋರ್ ? ನಿನ್ನದೇ ಆದ ಹಾಡುಗಳ ಮೂಲಕವೇ. ನೀನೇ ಹಾಡಿರುವಂತೆ “ ಜಿಂದಗೀ ಕೆ ಸಫರ್ ಮೇ ಗುಜರ್ ಜಾತೆ ಹೈ ಜೋ ಮಖಾಂ ಓ ಫಿರ್ ನಹೀಂ ಆತೇ ” (ಜೀವನದಲ್ಲಿ ಕಳೆದುಹೋದ ಕ್ಷಣಗಳು ಮತ್ತೆಂದೂ ಹಿಂದಿರುಗುವುದಿಲ್ಲ). ನೀನೂ ಹಾಗೆಯೇ ಕಿಶೋರ್ ಮತ್ತೆಂದೂ ಹಿಂದಿರುಗುವುದಿಲ್ಲ. ಆದರೆ ನಿನ್ನ ದನಿ ಎಂದಿಗೂ ನಮ್ಮನ್ನು ಅಗಲುವುದಿಲ್ಲ. ನೀನು ಚಿರಾಯು. ನಿನ್ನ ದನಿಯೂ !

 

Leave a Reply

Your email address will not be published.