ನಿಜದ ನೆರಳು: ಬುದ್ಧನ ನಡಿಗೆಯ ಧ್ಯಾನ

ಡಾ.ಸುಭಾಷ್ ರಾಜಮಾನೆ

“ಹಿರಿಯ ಜೆನ್ ಮಾಸ್ಟರ್‍ನ ಬಳಿ ಒಬ್ಬ ಯುವಕ ಬಂದು ‘ನಾನು ಬುದ್ಧನಾಗಬೇಕು ಹೇಗೆ ಹೇಳಿ?’ ಎಂದು ಕೇಳುತ್ತಾನೆ. ಜೆನ್ ಮಾಸ್ಟರ್ ಅವನ ಕೆನ್ನೆಗೊಂದು ಸರಿಯಾಗಿ ಬಾರಿಸಿ ಹೊರದೂಡುತ್ತಾನೆ. ಆ ಯುವಕನಿಗೆ ಅವಮಾನ, ಗೊಂದಲಗಳಿಂದ ತುಂಬಾ ನೋವಾಗಿ ಅಲ್ಲಿಯೇ ಇದ್ದ ಇನ್ನೊಬ್ಬ ಗುರುವಿನ ಬಳಿ ಬಂದು ‘ನಾನು ಮಾಸ್ಟರ್‍ನಲ್ಲಿ ಕೇಳಿದ್ದರಲ್ಲಿ ಏನು ತಪ್ಪಿದೆ. ಅವರು ನನ್ನೊಂದಿಗೆ ಅಷ್ಟೊಂದು ಕಠೋರವಾಗಿ ನಡೆದುಕೊಂಡದ್ದೇಕೆ’ ಎಂದು ತನ್ನ ಉರಿವ ಕೆನ್ನೆಯನ್ನು ತೋರುತ್ತಾನೆ. ಅದಕ್ಕೆ ಈ ಗುರು ‘ಈ ನಿನ್ನ ಕೆನ್ನೆಗಿಂತಲೂ ನಿನಗೆ ಹೊಡೆದ ಆ ಕೈ ಹೆಚ್ಚು ಉರಿಯುತ್ತಿರುತ್ತದೆ’ ಎಂದು ಹೇಳುತ್ತಾನೆ.

IMG_20170510_094244ಯುವಕನಿಗೆ ಇನ್ನಷ್ಟು ಗೊಂದಲವಾಗುತ್ತದೆ. ‘ಹಾಗಾದರೆ ಮಾಸ್ಟರ್‍ನ ಈ ಪ್ರತಿಕ್ರಿಯೆಯ ನೀತಿ ಪಾಠವೇನು?’ ಎನ್ನುತ್ತಾನೆ. ಆಗ ಗುರು ಆ ಯುವಕನಿಗೆ ‘ಬುದ್ಧನೇ ಬಂದು ನಾನು ಬುದ್ಧನಾಗಬೇಕು ಹೇಗೆ? ಎಂದು ಯಾರಾದರೂ ತೊಂಬತ್ತು ವರ್ಷ ಧ್ಯಾನಸ್ಥನಾದ ಜೆನ್ ಮಾಸ್ಟರ್‍ಗೆ ಪ್ರಶ್ನೆ ಕೇಳಿದರೆ ಏನೆನ್ನಿಸಬಹುದು. ಅದಕ್ಕೆ, ಮಾಸ್ಟರ್ ಈಗಾಗಲೇ ಅದು ನಿನ್ನಲ್ಲಿ ಪ್ರಾರಂಭವಾಗಿದೆ. ಇಲ್ಲಿ ಬಂದು ಸಿದ್ಧಮಾದರಿಯ ಇಂತಹ ಪ್ರಶ್ನೆ ಕೇಳಬೇಡ ಎಂದು ನಿನ್ನನ್ನು ಆಚೆಗೆ ದೂಡಿದ್ದಾರೆ; ಇಷ್ಟೇ ಅದರ ಅರ್ಥ’ ಎಂದು ವಿವರಿಸುತ್ತಾನೆ.”

ಇದೊಂದು ಜೆನ್ ಕತೆ. ಕಲಾವಿದ, ಲೇಖಕ, ಅಂಕಣಕಾರರಾದ ಎಂ.ಎಸ್. ಮೂರ್ತಿ ಅವರ ಇತ್ತೀಚಿನ ‘ನಿಜದ ನೆರಳು’ ಕೃತಿಯ ಲೇಖನವೊಂದರಲ್ಲಿ ಜೆನ್ ಕುರಿತು ಚರ್ಚಿಸುವಾಗ ಪ್ರಾಸಂಗಿಕವಾಗಿ ಈ ಕತೆ ಪ್ರಸ್ತಾಪಿತವಾಗಿದೆ. ಜೆನ್ ಮಾಸ್ಟರ್‍ನ ನಿಷ್ಠುರವಾದ, ಸರಳವಾದ, ವರ್ತನೆಯನ್ನು ಮುಗ್ಧ ಯುವಕ ತನ್ನ ಬದುಕಿಗೆ ಹೇಗೆ ಅನುವಾದಿಸಿಕೊಂಡ ಎನ್ನುವ ಪ್ರಶ್ನೆಯನ್ನು ಮೂರ್ತಿಯವರು ಆ ಲೇಖನದಲ್ಲಿ ಕೇಳುತ್ತಾರೆ. ಇಂತಹ ಸರಳವಾದ ಪ್ರಶ್ನೆಗಳಿಗೆ ಮನುಷ್ಯ ಬದುಕಿನ ‘ಒಳಗಿನ ವಿವೇಕ’ದಿಂದಲೇ ಉತ್ತರಗಳನ್ನು ಕಂಡುಕೊಳ್ಳುವ ನಿಟ್ಟಿನಿಂದ ಮೂರ್ತಿಯವರ ಬಹುತೇಕ ಲೇಖನಗಳು ರೂಪತಾಳುತ್ತವೆ. ಲೋಕದ ಪ್ರತಿಕ್ರಿಯೆ, ನೋವು, ಸಂಕಟ, ಹಿಂಸೆ, ತಲ್ಲಣಗಳನ್ನು ತಮ್ಮ ಸ್ವಂತ ಪ್ರಜ್ಞೆಗೆ ಮತ್ತು ಬದುಕಿಗೆ ಅನುವಾದಿಸಿಕೊಳ್ಳುತ್ತಲೇ ಬರವಣಿಗೆಯ ದಾರಿಯನ್ನು ಕಂಡುಕೊಳ್ಳುತ್ತಾರೆ. ತನ್ನತನದ ಅರಿವಿನ ಬೆಳಕಿನಲ್ಲೇ ಜೀವನ, ಸಮಾಜ, ಕಲೆ, ಕಾವ್ಯ, ಜೆನ್, ಅಧ್ಯಾತ್ಮ, ಅನುಭಾವಗಳನ್ನು ಬಹುಮುಖಿ ಆಯಾಮಗಳಲ್ಲಿ ಶೋಧಿಸಲು ತೊಡಗುತ್ತಾರೆ. ಮೂರ್ತಿಯವರು ಸರಳತೆಯ ತತ್ವದಡಿಯಿಂದಲೇ ಜೀವನ ಮೀಮಾಂಸೆಯನ್ನು ಕಟ್ಟಿಕೊಳ್ಳುತ್ತಾರೆ; ತಾನು ‘ಕಾಣು’ವ ಲೋಕದ ಯಾವುದೇ ಸಂಗತಿಗಳನ್ನಾದರೂ ಕೂಡ ತಮ್ಮ ‘ಖಾಲಿತನ’ದಲ್ಲಿ ತುಂಬಿಸಿಕೊಂಡು ಸ್ವ ಅನುಭವದ ಮೂಸೆಯಿಂದ ಅವುಗಳಿಗೊಂದು ಸಾಮಾಜಿಕ, ಸಾಂಸ್ಕøತಿಕ, ಕಲಾತ್ಮಕ ಲೋಕದ ಮರು ರೂಪಾಂತರ ಹೊಂದುವಂತೆ ಮಾಡುತ್ತಾರೆ. ಮೇಲುನೋಟಕ್ಕೆ ಸರಳವಾಗಿ ಕಾಣುವ ಹಾಗೂ ವ್ಯಕ್ತಿಗತ ನೆಲೆಯಿಂದ ಆರಂಭವಾಗುವ ಲೇಖನಗಳು ಅವು ಬೆಳೆದಂತೆ ಲೋಕೋತ್ತರ ಗಂಭೀರ ಚಿಂತನೆಗಳಾಗಿಯೂ ಮಾರ್ಪಡುತ್ತವೆ.

ಮೂರ್ತಿಯವರಿಗೆ ಬರವಣಿಗೆ ಎನ್ನುವುದು ಬರಿ ಅಬ್ಬರದ, ಕಿರುಚಾಟದ ಮಾಧ್ಯಮವಲ್ಲ; ಅಕ್ಷರಲೋಕ ಅವರಿಗೆ ಶಬ್ದದೊಳಗಣ ನಿಶ್ಯಬ್ದದ ಕಡೆಗಿನ ಪಯಣವೂ ಆಗಿದೆ. ಯಾವುದೇ ಅತ್ಯುತ್ತಮ ಬರವಣಿಗೆಗಳು ಲೇಖಕನ ಧ್ಯಾನಸ್ಥ, ಏಕಾಂತ ಮನೋಧರ್ಮದ ಕೂಸುಗಳೇ ಆಗಿರುತ್ತವೆ. ಒಂದು ಬರಹವನ್ನೊ ಕಲಾಕೃತಿಯನ್ನೊ ಅತ್ಯುತ್ತಮವೆಂದೂ, ಶ್ರೇಷ್ಠವೆಂದೂ ಹೇಳುವಾಗ ಅದಕ್ಕೆ ಹಲವು ರೀತಿಯ ಮಾನದಂಡಗಳನ್ನು ಬಳಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೂರ್ತಿಯವರ ಬರಹಗಳನ್ನು ಯಾವುದೇ ಬಗೆಯ ಮಾನದಂಡಗಳಿಂದಲೊ, ಸೈದ್ಧಾಂತಿಕ ಪಡಿನೆಳಲುಗಳಿಂದಲೊ ನೋಡಲಾಗದು. ಅವರು ಸಿದ್ಧಮಾದರಿಯ ಚೌಕಟ್ಟುಗಳಿಂದ, ಸಿದ್ಧಾಂತಗಳಿಂದ, ಥಿಯರಿಗಳಿಂದ ಮೂರ್ತಿಯವರು ತಮ್ಮನ್ನು ಸಂಪೂರ್ಣವಾಗಿ ವಿಸರ್ಜಿಸಿಕೊಂಡಿದ್ದಾರೆ. ಎರವಲು ಸಿದ್ಧಾಂತಗಳಲ್ಲಿ ಅವರಿಗೆ ನಂಬಿಕೆಯಿಲ್ಲ. ಪ್ರಾಮಾಣಿಕತೆ, ಸರಳತೆ, ಸಹಜತೆ, ಸಜ್ಜನಿಕೆಗಳೇ ಮೂರ್ತಿಯವರ ಜೀವನದ ಪರಮ ತತ್ವಗಳಾಗಿವೆ; ಇವೇ ಅವರ ಬರವಣಿಗೆಯ ಪ್ರಮಾಣಗಳೂ ಆಗಿವೆ. ಅವರು ತಮ್ಮ ಜೀವನದ ಒಳಗಿನಿಂದಲೇ ತಾತ್ವಿಕತೆಯನ್ನು ಕಟ್ಟಿಕೊಳ್ಳುತ್ತಾರೆ. ಆದ್ದರಿಂದ ಅವರ ಬರವಣಿಗೆಯನ್ನು ಅವರ ಸಹಜ ಬದುಕಿನಿಂದ ಬೇರ್ಪಡಿಸಿ ನೋಡಲಾಗದು.

ಎಂ.ಎಸ್. ಮೂರ್ತಿಯವರು ಈ ಮೊದಲೇ ‘ದೇಸಿ ನಗು’(2006) ಕೃತಿಯ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾದವರು. ತಮ್ಮ ಸುತ್ತಮುತ್ತಲಿನ ಜಗತ್ತನ್ನು ಅತ್ಯಂತ ಸಂವೇದನಶೀಲ ಪ್ರಜ್ಞೆಯಿಂದ ಕಂಡು ಅಷ್ಟೇ ಉತ್ಕಟವಾಗಿ ಪ್ರಬಂಧಗಳ ರೂಪದಲ್ಲಿ ಕಟ್ಟಿದ್ದರು. ಈಗ ಸುಮಾರು ಒಂದು ದಶಕದ ನಂತರದಲ್ಲಿ ಮೂರ್ತಿಯವರ ಎರಡನೆಯ ಪ್ರಬಂಧ ಸಂಕಲನ ‘ನಿಜದ ನೆರಳು’ ಪ್ರಕಟವಾಗಿದೆ. ಎಷ್ಟೊಂದು ಜೀವಂತಿಕೆ ಮತ್ತು ಲವಲವಿಕೆಯಿಂದ ಬರೆಯುತ್ತಿದ್ದ ಮೂರ್ತಿಯವರು ಇಷ್ಟೊಂದು ದೀರ್ಘಕಾಲ ಯಾಕೆ ಮೌನವಾಗಿದ್ದರು ಎನ್ನುವ ಪ್ರಶ್ನೆಯನ್ನು ಎತ್ತಬಹುದು. ಪ್ರಾಯಶಃ ನನಗೆ ತಿಳಿದ ಮಟ್ಟಿಗೆ ಮೂರ್ತಿಯವರಿಗೆ ತಾನೊಬ್ಬ ಲೇಖಕನೆಂದಾಗಲಿ, ವಿಶೇಷ ವಿದ್ವತ್ತನ್ನು ಪಡೆದವನೆಂಬ ಹಮ್ಮು ಅವರಲ್ಲಿಲ್ಲ; ತಮ್ಮನ್ನು ಜನಪ್ರಿಯ ಲೇಖಕನೆಂದು ತೋರ್ಪಡಿಸಿಕೊಳ್ಳುವ ಯಾವ ಹಪಾಹಪಿತನವೂ ಅವರಿಗಿಲ್ಲ.

ಲೇಖಕನಾಗಲಿ ಕಲಾವಿದನಾಗಲಿ ತಾನು ಸೃಷ್ಟಿಸಿದ ಕಲೆಯ ಹಿಂದಿನ ಬೆಳಕಾಗಿ ಇರಬೇಕೆ ಹೊರತು ತಾನೇ ಉತ್ಸವ ಮೂರ್ತಿಯಾಗಿ ವಿಜೃಂಭಿಸುವಂತಾಗಬಾರದು ಎನ್ನುವ ಮನೋಧರ್ಮ ಅವರಲ್ಲಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ಅವರಿಂದ ‘ಯಶೋಧರೆ ಮಲಗಿರಲಿಲ್ಲ’(2007) ಎಂಬ ಏಕಾಂಕ ನಾಟಕ ಪ್ರಕಟವಾಗಿದೆ; ಪುಸ್ತಕ ಪ್ರಪಂಚದ ಮೊದಲ ಚಿತ್ರ ಕಾದಂಬರಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ‘ದೃಶ್ಯ’(2010) ಕೃತಿಯು ಅವರ ಕ್ರಿಯಾಶೀಲತೆಗೆ, ಪ್ರಯೋಗಶೀಲತೆಗೆ ಸಾಕ್ಷಿಯಾಗಿದೆ. ಸಾವಿರಾರು ಕಲಾಕೃತಿಗಳನ್ನು ರಚಿಸಿದ್ದಾರೆ. ‘ದೇಸಿ ನಗು’ವಿನಿಂದ ಆರಂಭವಾಗಿ ‘ನಿಜದ ನೆರಳು’ ಕಡೆಗಿನ ಮೂರ್ತಿಯವರ ಬದುಕು ಹಾಗೂ ಬರವಣಿಗೆಯ ಪಯಣವು ಬುದ್ಧನ ಸಾವಧಾನದ ನಡಿಗೆಯಂತೆ, ಸ್ವಾಮಿ ವಿವೇಕಾನಂದರ ‘ವಿವೇಕ’ದಂತೆ, ಮಹಾತ್ಮ ಗಾಂಧೀಜಿಯ ಸ್ವಪರಿವರ್ತನೆಯಂತೆ, ರಮಣ ಮಹರ್ಷಿಗಳ ಮೌನದಂತೆ, ಶಿವರಾಮ ಕಾರಂತರ ಜೀವನ ದರ್ಶನದ ಹಾಗೆ ಕಾಣುತ್ತದೆ. ‘ನಿಜದ ನೆರಳು’ ಕೃತಿಯ ಲೇಖನಗಳಲ್ಲಿ ಇವರೆಲ್ಲರ ಪ್ರಸ್ತಾಪ ಅಲ್ಲಲ್ಲಿ ಬರುತ್ತದೆ. ಇವರಲ್ಲಿ ಬುದ್ಧ, ಗಾಂಧಿ ಮತ್ತು ಶಿವರಾಮ ಕಾರಂತ-ಇವರ ಬದುಕಿನ ನಡವಳಿಕೆ ಮತ್ತು ಆದರ್ಶಗಳಿಂದ ಮೂರ್ತಿಯವರು ಪ್ರಭಾವಿತರಾಗಿದ್ದಾರೆ. ಇವರ ನಡಿಗೆಯೊಂದಿಗೆ ತಮ್ಮನ್ನು ನಿರಂತರ ಒರೆಗೆ ಹಚ್ಚಿಕೊಳ್ಳುತ್ತಾರೆ. ಇಂಥವರ ಸಹಚರ್ಯೆದಲ್ಲಿ ಇದ್ದರೂ ಸ್ವ ಹುಡುಕಾಟದ ಹಂಬಲದಲ್ಲಿ ಇರುತ್ತಾರೆ.

ಮೂರ್ತಿಯವರು ‘ಬುದ್ಧನೆಂಬ ಬೆಳಕು’ ಶೀರ್ಷಿಕೆಯಡಿಯಲ್ಲಿ ಸರಣಿ ಕಲಾಕೃತಿಗಳನ್ನು ರಚಿಸಿದ್ದಾರೆ. ‘ಬುದ್ಧನೆಂಬ ಬೆಳಕು’ ಪ್ರಸಿದ್ಧ ಕಲಾಕೃತಿಗೆ (ಇದನ್ನು ‘ದೇಸಿ ನಗು’ ಪುಸ್ತಕದ ಮುಖಪುಟಕ್ಕೆ ಬಳಸಲಾಗಿದೆ) ಇರಾಣ ದೇಶದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪುರಸ್ಕಾರವೂ ದೊರಕಿದೆ. ಮೂರ್ತಿಯವರು ‘ಬುದ್ಧನ ಭಿಕ್ಷಾಪಾತ್ರೆ’ (ಇದನ್ನು ಕುರಿತ ಲೇಖನ ಈ ಕೃತಿಯಲ್ಲಿ ಸೇರಿಲ್ಲ) ಎನ್ನುವ ಕಲಾಕೃತಿಯ ಮೂಲಕ ಬುದ್ಧನ ‘ಭಿಕ್ಷಾ ಪಾತ್ರೆ’ಯ ಪರಿಕಲ್ಪನೆಯನ್ನು ಗ್ರಹಿಸಿರುವ ಕ್ರಮವೇ ತುಂಬ ವಿಶಿಷ್ಟವಾಗಿದೆ. ‘ಬುದ್ಧನ ಜ್ಞಾನೋದಯದ ಮಾತುಗಳು, ಆತನ ವ್ಯಾಮೋಹಿಗಳಿಗೆ ಮುಖ್ಯವಾದಂತೆ, ಆತನ ‘ಭಿಕ್ಷಾಪಾತ್ರೆ’ ಅವರಿಗೆ ಮುಖ್ಯವಾಗಲಿಲ್ಲ. ಹಸಿದವರ, ನೊಂದವರ, ನಿರ್ಗತಿಕರ ತೀರಾ ಅಗತ್ಯವಾದ ಅನ್ನದ ಪ್ರಶ್ನೆಯ ರೂಪಕದಂತಿರುವ ಮತ್ತು ಬದುಕಿನ ಘನತೆಯನ್ನು ಎತ್ತಿ ಹಿಡಿಯಬಲ್ಲ ‘ಭಿಕ್ಷಾಪಾತ್ರೆ’ಯ ಮೂಲಕ ‘ಬುದ್ಧ’ ತನ್ನ ಮೂಲ ಮಂತ್ರವಾದ–ಆಸೆಯೇ ದುಃಖಕ್ಕೆ ಮೂಲ ಎಂಬ ಸರಳ ವಾಕ್ಯಕ್ಕೆ ಸರಿಸಮಾನವಾಗಿ ತನ್ನ ನಡಾವಳಿಯ ಮೂಲಕ ಬಹು ಸೂಕ್ಷ್ಮವಾಗಿ, ಸರಳವಾಗಿ ಮತ್ತು ಯಶಸ್ವಿಯಾಗಿ ಜನಸಾಮಾನ್ಯರಿಗೆ ಸೂಕ್ತ ಸಂದೇಶ ಮುಟ್ಟಿಸುವ ಅವನ ವಿವೇಕ ವಿಶಿಷ್ಟವಾದುದು. ಶುಚಿ ಮಾಡಿ ತೆರೆದಿಟ್ಟ ‘ಭಿಕ್ಷಾಪಾತ್ರೆ’ಗೆ ಅಂದು ಯಾರಾದರೂ ತಾವಾಗಿಯೇ ಹಾಕಿದ ಆಹಾರವಷ್ಟೇ ಆ ದಿನದ ಅವನ ಆಹಾರ; ತದನಂತರ ಭಿಕ್ಷಾಪಾತ್ರೆಯನ್ನು ಶುಚಿಮಾಡಿ, ಬೋರಲು ಹಾಕಿದರೆ ಮುಗಿಯಿತು-ಮತ್ತೆ ನಾಳೆಗೆ ಯಥಾಪ್ರಕಾರ ಶುಚಿಯಾದ ಭಿಕ್ಷಾಪಾತ್ರೆ ತೆರೆದಿಟ್ಟರೆ ಅಂದಿನ ಆಹಾರ. ಇದು ನಿರತ-ನಿರಂತರ’ ಎಂದು ಗ್ರಹಿಸುವ ಮೂರ್ತಿಯವರು ಇದನ್ನೇ ರೂಪಕವಾಗಿ ‘ತೆರೆದಿಟ್ಟ’, ‘ಬೋರಲು ಹಾಕಿದ’, ಅದರ ಮಗ್ಗುಲಲ್ಲೇ ‘ಮತ್ತೆ ತೆರೆದಿಟ್ಟ’-ಮೂರು ಭಿಕ್ಷಾಪಾತ್ರೆಗಳನ್ನು ಕುರಿತು ಹೇಳುತ್ತಾರೆ.

IMG_20170510_094305ಬುದ್ಧನ ಮಾನವೀಯ ಮತ್ತು ಸಮಾನತೆಯ ಈ ತಾತ್ವಿಕತೆಯನ್ನು ಆಧುನಿಕತೆಯ ಸಂದರ್ಭದಲ್ಲಿ ಮನುಷ್ಯಲೋಕ ತನ್ನ ಬದುಕಿಗೆ ಅನ್ವಯಿಸಿಕೊಳ್ಳುವ ಬಗೆಯನ್ನು ಮೂರ್ತಿಯವರು ‘ಸ್ವೀಕಾರ’, ‘ನಿರಾಕರಣೆ’, ‘ತೃಪ್ತಿ’ ಎಂದು ವಿವರಿಸುತ್ತಾರೆ. ಪ್ರಸ್ತುತ ಕೃತಿಯನ್ನು ಈ ಸಂಗತಿಗಳ ಮೂಲಕವೂ ಅರ್ಥೈಸಿಕೊಳ್ಳಲು ಸಾಧ್ಯವಿದೆ. ‘ಶೀಲಾಘೋಷ್ ಎಂಬ ಮಹಿಳೆಯೂ ರೈತ ಮಿತ್ರರ ಆತ್ಮಹತ್ಯೆಯೂ’ ಎನ್ನುವ ಲೇಖನದಲ್ಲಿ ಎಂಬತ್ತೇಳು ವರ್ಷದ ವಯೋವೃದ್ಧೆ ಶೀಲಾಘೋಷ್ ಕೋಲ್ಕತ್ತಾ ಮಹಾನಗರದಲ್ಲಿ ಇದ್ದೊಬ್ಬ ಮಗನನ್ನು ಕಾರು ಅಪಘಾತದಲ್ಲಿ ಕಳೆದುಕೊಂಡು ಬದುಕನ್ನು ಸವಾಲಾಗಿ ‘ಸ್ವೀಕರಿಸಿ’ ಅನ್ಯರ ನೆರವನ್ನು ‘ನಿರಾಕರಿಸಿ’ ರಸ್ತೆ ಬದಿಯಲ್ಲಿ ಕುರುಕಲು ತಿಂಡಿಗಳನ್ನು ಮಾಡಿ ‘ತೃಪ್ತಿ’ಯಿಂದ ಬದುಕಿದ್ದನ್ನು ಗಮನಿಸಬಹುದು. ರೈತರು, ಕಾರ್ಮಿಕರು, ಕೂಲಿಕಾರರು, ಮನೆಗೆಲಸದವರು, ಸಣ್ಣಪುಟ್ಟ ವ್ಯಾಪಾರಿಗಳು-ಮೊದಲಾದ ಶ್ರಮಿಕ ವರ್ಗದವರು ‘ಬುದ್ಧನ ಭಿಕ್ಷಾಪಾತ್ರೆ’ಯಂತೆ ತಮ್ಮ ದುಡಿಮೆಯಿಂದ ಅವತ್ತೆ ‘ತುಂಬಿ’ ಮತ್ತೆ ರಾತ್ರಿ ಅವತ್ತೆ ‘ಬರಿದಾಗಿಸಿ’ಕೊಂಡು ನೆಮ್ಮದಿಯಿಂದ ನಿದ್ದೆ ಮಾಡುತ್ತಾರೆ. ಅನುದಿನದ ನೂರಾರು ಜಂಜಾಟದ ಬದುಕಿನಲ್ಲೂ ‘ತೃಪ್ತ’ರಾಗುವವರು ನಮ್ಮ ನಡುವೆ ಇದ್ದಾರೆ.

ಬೆಂಗಳೂರಿನಂತಹ ಮಹಾನಗರದಲ್ಲೂ ನೆಲಕ್ಕೆ ಅಂಟಿಕೊಂಡು ದುಡಿಯುತ್ತಿರುವ ಇಂತಹ ಶ್ರಮಜೀವಿಗಳೇ ಮೂರ್ತಿಯವ ಕಣ್ಣಿಗೆ ಬೀಳುತ್ತಾರೆ. ಕಳೆದ ಮುವತ್ತು ವರ್ಷಗಳಿಂದ ಗಾಂಧಿ ಬಜಾರಿನಲ್ಲಿ ಹೂ ಮಾರುವವರು, ಹಣ್ಣು ಮಾರುವವರು, ಪೇಪರ್ ಮಾರುವವರು, ಕ್ಷೌರಿಕರು, ಕಸಗೂಡಿಸುವವರು, ಜಾಡಮಾಲಿಗಳು, ಪಾಣಿಪುರಿ ಅಂಗಡಿಯವರು, ತೋಟದ ಕೆಲಸಗಾರರು-ಜನಸಾಮಾನ್ಯರು ಎಂದು ಕರೆಯಲ್ಪಡುವ ಇಂಥವರನ್ನೆಲ್ಲ ಮೂರ್ತಿಯವರು ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತ ಬಂದಿದ್ದಾರೆ. ದುಡಿಮೆ, ಘನತೆ, ನೈತಿಕತೆಯಿಂದ ಬದುಕುವ ಇಂತಹ ವ್ಯಕ್ತಿಗಳೇ ಮೂರ್ತಿಯವರ ದೃಷ್ಟಿಯಲ್ಲಿ ಅಸಾಮಾನ್ಯ ಕ್ರಿಯಾಶೀಲರಂತೆ, ಕಲೆಗಾರರಂತೆ, ಧ್ಯಾನಿಗಳಂತೆ ಕಾಣುತ್ತಾರೆ. ಇಂತಹ ಅಲಕ್ಷಿತ ಸಮುದಾಯಗಳನ್ನು ಕಂಡು ಎಲ್ಲೂ ಹುಸಿ ಅನುಕಂಪವನ್ನು ತೋರಲಾರರು; ಅವರ ಬದುಕಿನ ನಿಜವಾದ ಚೈತನ್ಯಶೀಲತೆಯನ್ನು, ಅದಮ್ಯ ಶಕ್ತಿಯನ್ನು ಗುರುತಿಸುವುದರಿಂದಲೇ ‘ನಿಜದ ನೆರಳು’ ಕೃತಿ ಸಮಕಾಲೀನ ಸಂದರ್ಭದಲ್ಲಿ ಕಾಡುವಂತಾಗಿದೆ.

ಮೂರ್ತಿಯವರೇ ರಚಿಸಿದ ‘ನಿಜದ ನೆರಳು’ ಕೃತಿಯ ಮುಖಪುಟವು ರೂಪಕದ ಬಗೆಯಲ್ಲಿ ಇಡೀ ಕೃತಿಯ ಸ್ವರೂಪವನ್ನು ಸೂಚಿಸುವಂತಿದೆ. ಗಂಭಿರವದನದಲ್ಲಿ ಚಿತ್ರಿತವಾಗಿರುವ ಮನುಷ್ಯ ತಲೆಯ ಆಕೃತಿಗಳು ವೀಕ್ಷಣೆ, ಪರಸ್ಪರ ಅರಿತುಕೊಳ್ಳುವಿಕೆ ಮತ್ತು ಚಿಂತನೆ, ಅಭಿವ್ಯಕ್ತಿಯ ಕಲೆಯನ್ನು ಸಂಕೇತಿಸುತ್ತವೆ. ಯಾರು ಏನನ್ನು ವೀಕ್ಷಿಸುತ್ತಾರೆ ಎನ್ನುವುದು ಎಷ್ಟು ಮುಖ್ಯವೊ ಇನ್ನೊಬ್ಬರ ವಿಚಾರವನ್ನು ಅರಿತುಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ; ಇಲ್ಲವಾದರೆ ಮನುಷ್ಯ ಬಹಳ ಬೇಗ ಪರರ ವಿಚಾರಗಳನ್ನು ಗೌರವಿಸದೆ ಅಸಹನೆಯ ಮೂಟೆಯಾಗುವುದು ಅನಿವಾರ್ಯವಾಗುತ್ತದೆ. ಅತೀರೇಕದ ಯುಗದಲ್ಲಿ ಬದುಕುತ್ತಿರುವ ನಾವು ಸಹನೆಯ ಭಾಗವಾಗಿದ್ದೆವೊ ಅಸಹನೆಯ ಭಾಗವಾಗಿದ್ದೆವೊ ಎಂಬುದನ್ನೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಒಬ್ಬರ ಅಭಿವ್ಯಕ್ತಿಯ ಕ್ರಮ ಮತ್ತು ಸ್ವರೂಪಗಳೇ ಅವರ ಒಟ್ಟಾರೆ ನಡವಳಿಕೆಯನ್ನು ಹಾಗೂ ಅವರ ವ್ಯಕ್ತಿತ್ವವನ್ನು ಧ್ವನಿಸುತ್ತವೆ. ಈ ಹಿನ್ನೆಲೆಯಲ್ಲಿ ಕೃತಿಯ ಮುಖಪುಟವು ಬಹಳ ಅರ್ಥಪೂರ್ಣವಾಗಿದೆ.

ಕಳೆದ ಮೂರುವರೆ ದಶಕದಿಂದ ಕನ್ನಡ ಪುಸ್ತಕಗಳ ಮುಖಪುಟ ವಿನ್ಯಾಸಗಳನ್ನು ಮಾಡುತ್ತ ಬಂದಿರುವ ಮೂರ್ತಿಯವರು ಅದಕ್ಕೊಂದು ನವೀನ ಚಹರೆಯನ್ನು ನೀಡಿದವರಾಗಿದ್ದಾರೆ. ಪುಸ್ತಕದ ಒಳಪುಟಗಳಲ್ಲೂ ಚಿತ್ರಗಳನ್ನು ಬಿಡಿಸುವುದರಲ್ಲಿ ಅವರು ನಿಸ್ಸೀಮರೇ ಸರಿ. ಪ್ರಸ್ತುತ ಕೃತಿಯಲ್ಲಿ ಅವರೇ ಬಿಡಿಸಿರುವ ಹಲವು ಚಿತ್ರಗಳಲ್ಲಿ ಗಾಂಧೀಜಿಯ ತುಂಟ ನಗೆಯ ಭಾವಚಿತ್ರವನ್ನು ನೋಡಿದಾಗಲೆಲ್ಲ ನಮ್ಮನ್ನೇ ದಿಟ್ಟಿಸಿ ನೋಡುತ್ತ ಏನಯ್ಯಾ ಮಹಾನುಭಾವ ಹೇಗಿದ್ದಿಯಾ? ನೀನು ಈಗಷ್ಟೆ ಮಾಡಿದೆಯಲ್ಲ ಆ ಕೆಲಸ ಸರಿಯೇ? ಒಂದು ಸಲವಾದರೂ ನಿನ್ನನ್ನು ಆತ್ಮವಿಮರ್ಶೆ ಮಾಡಿಕೊಂಡಿದ್ದಿಯಾ? ಎಂದೆಲ್ಲ ತುಟಿಯಲ್ಲೇ ನಗೆಯನ್ನು ಬೀರಿ ಮೌನದಲ್ಲೇ ಕೇಳುತ್ತಿರುವಂತೆ ಭಾಸವಾಗುತ್ತದೆ. ಇದು ಮೂರ್ತಿಯವರ ಕಲೆಯ ಶಕ್ತಿ; ಸಾವಿರ ಪದಗಳಲ್ಲಿ ಹೇಳಲಾಗದ್ದನ್ನು ಇಂತಹ ಒಂದು ಚಿತ್ರವು ನಿಶ್ಯಬ್ದವಾಗಿ ಆಂತರ್ಯವನ್ನು ಮುಟ್ಟುತ್ತದೆ.

03ಕಲೆಯನ್ನು ಕುರಿತು ಆಳವಾಗಿ ಧ್ಯಾನಿಸಿ ಬರೆಯಬಲ್ಲ ಕನ್ನಡದ ಕೆಲವೇ ಕಲಾ ವಿಮರ್ಶಕರಲ್ಲಿ ಮೂರ್ತಿಯವರು ಸಹ ಒಬ್ಬರು. ‘ನಗ್ನತೆ’ ಬಗೆಗಿನ ‘ಸತ್-ಚಿತ್ ಆನಂದದ ನಗ್ನದರ್ಶನ’, ‘ಖಾಸಗಿ ನೋಟ’, ‘ಸಾವಿರ ಬುದ್ಧರ ಬಯಲಿಗೆ’ದಂತಹ ಲೇಖನಗಳು ಕಲೆಯನ್ನು ನೋಡುವವರ, ಕಾಣುವವರ ದೃಷ್ಟಿಕೋನವನ್ನು ಬದಲಿಸಿಕೊಳ್ಳುವ ಅಗತ್ಯವನ್ನು ಸಾರುತ್ತವೆ. ನಮ್ಮ ಜೊತೆಗೇ ಹುಟ್ಟಿನಿಂದ ಸಾವಿನವರೆಗೆ ನಿಗೂಢವಾಗಿದ್ದು, ಕಂಡರೂ ಕಾಣದಂತಿರುವ ನಮ್ಮ ನಗ್ನ ದೇಹ ಅತ್ಯಂತ ಸಂಕೀರ್ಣವಾದ, ಸೂಕ್ಷ್ಮವಾದ ವಿಷಯ; ಕೇವಲ ಜೈವಿಕವಾಗಿ ಅದರ ಸಹಚರ್ಯ ನಮ್ಮೊಂದಿಗಿದ್ದರೂ ಭಾವನಾತ್ಮಕವಾಗಿ, ಅಧ್ಯಾತ್ಮಿಕವಾಗಿ, ಸಹಜವಾಗಿ ನಮ್ಮ ದೇಹವನ್ನು ನಾವು ಕಂಡದ್ದು ಕಡಿಮೆ ಎನ್ನುತ್ತಾರೆ ಮೂರ್ತಿಯವರು. ‘ನೋಟ’ಕ್ಕೂ ‘ನಗ್ನತೆ’ಗೂ ಬಿಡಿಸಲಾಗದ ಅವಿನಾಭಾವ ಸಂಬಂಧವಿರುತ್ತದೆ. ಜಾನ್ ಬರ್ಗರ್ ‘ವೇಸ್ ಆಫ್ ಸೀಯಿಂಗ್’ ಕೃತಿಯಲ್ಲಿ ‘ಹೆಣ್ಣು ತಾನು ತಾನಾಗಿಯೇ ಆಕೆ ನಗ್ನಳಲ್ಲ; ವೀಕ್ಷಕ ಕಂಡಂತೆ ಮಾತ್ರ ಆಕೆ ನಗ್ನಳಾಗಿರುತ್ತಾಳೆ’ ಎನ್ನುತ್ತಾನೆ. ಸಾಮಾನ್ಯವಾಗಿ ಹೆಣ್ಣಿನ ನಗ್ನ ಛಾಯಾಚಿತ್ರಗಳನ್ನು, ನಗ್ನ ರೇಖಾಚಿತ್ರಗಳನ್ನು ನಮ್ಮ ಸಮಾಜದಲ್ಲಿ ಅಸಹ್ಯವೆಂದೂ, ಅಶ್ಲೀಲವೆಂದೂ ಕಾಣಲಾಗುತ್ತದೆ. ಯಾಕೆಂದರೆ ನಮ್ಮ ಸಮಾಜ ನಮಗೆ ಹೆಚ್ಚು ಕಾಣಿಸಿಕೊಳ್ಳುವುದನ್ನು ಕಲಿಸುತ್ತದೆ; ಆದರೆ ಕಲೆ ನಿಜವಾಗಿಯೂ ‘ಕಾಣು’ವುದನ್ನು ಕಲಿಸುತ್ತದೆ; ದರ್ಶನವನ್ನು ಮನಗಾಣಿಸುತ್ತದೆ ಎನ್ನುವ ಮೂರ್ತಿವರು ಗುಸ್ರೋವ್ ಕ್ರಿಮ್ಟ್, ಸ್ಪೆನ್ಸರ್ ಟೂನಿಕ್‍ರಂತಹ ಕಲಾವಿದರ ಉದಾಹರಣೆಗಳ ಮೂಲಕ ‘ನಗ್ನತೆ’ಯನ್ನು ಬಹುಮುಖಿ ಆಯಾಮಗಳಲ್ಲಿ ವಿಶ್ಲೇಷಿಸಿದ್ದಾರೆ.

ಮೂರ್ತಿಯವರು ತಮ್ಮ ಕೃತಿಯನ್ನು ‘ಯಾವುದೇ ವಿಪರೀತಗಳಿಲ್ಲದೆ ಬಾಳಿ, ಬುದುಕಿದ, ನನ್ನನ್ನು ಸರಳವಾಗಿ ಬೆಳೆಸಿದ ನನ್ನ ತಂದೆಯ ನೆನಪಿಗೆ’ ಎಂದು ಅರ್ಪಣೆಯಲ್ಲಿ ಹೇಳಿಕೊಂಡಿದ್ದಾರೆ. ಮೂರ್ತಿಯವರ ಕೌಟುಂಬಿಕ ಹಾಗೂ ಸಾರ್ವಜನಿಕ ಬದುಕಿನ ಹಲವು ಪ್ರಸಂಗಗಳು ಇದರಲ್ಲಿ ಕಾಣುತ್ತೇವೆ. ಸಾಮಾನ್ಯವಾಗಿ ಆತ್ಮಕಥಾನಕ ಧಾಟಿಯ ಬರವಣಿಗೆಯಲ್ಲಿ ‘ಆತ್ಮರತಿ’ಯ ಅಂಶಗಳು ತುಂಬಿರುತ್ತವೆ. ಆದರೆ ಮೂರ್ತಿಯವರು ಬಾಲ್ಯದಿಂದಲೇ ತಮ್ಮ ನಡೆ-ನುಡಿಯನ್ನು ತಿದ್ದಿಕೊಳ್ಳುತ್ತ, ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ, ತಮ್ಮ ಪ್ರಜ್ಞೆಯಲ್ಲಾಗುವ ಬದಲಾವಣೆಗಳಿಗೆ ಕಿವಿಗೊಡುತ್ತ, ‘ಆತ್ಮಸಾಕ್ಷಿ’ಯ ನೆಲೆಯಲ್ಲಿ ಪ್ರತಿಕ್ರಿಯಿಸುವುದನ್ನು ರೂಢಿಸಿಕೊಂಡಿದ್ದಾರೆ. ‘ಎತ್ತರದ ಪ್ರದೇಶಗಳ ಪ್ರಯಾಣ ನನ್ನದಲ್ಲ; ಆದರೆ ಸಮಾನಾಂತರ ನೆಲದ ಮೇಲಿನ ದೂರದ ಪ್ರಯಾಣದಲ್ಲಿ ಸಾಗುವ ಬಹುಸಂಖ್ಯಾತ ಜನರ ಜೊತೆಯ ಸಹ ಪ್ರಯಾಣ ನನ್ನದು’ ಎಂದು ಮೂರ್ತಿಯವರೇ ಹೇಳಿಕೊಂಡಿದ್ದಾರೆ. ನಾವೂ (ಓದುಗರು) ಅವರ ಬರವಣಿಗೆಯ ಪಯಣದಲ್ಲಿ ಸಹ ಪ್ರಯಾಣಿಕರಾಗಿ ಹೆಜ್ಜೆ ಇಡುವಾಗಲೆಲ್ಲ ನಮ್ಮ ಆತ್ಮಾವಲೋಕನಕ್ಕೂ ದಾರಿ ಮಾಡಿಕೊಡುತ್ತವೆ.

ಇಂದಿನ ಮುದ್ರಣ ಮಾಧ್ಯಮದಲ್ಲಿ ‘ಅಂಕಣ’ ಬರಹಗಳೇ ಇಲ್ಲದ ಪತ್ರಿಕೆಗಳೇ ಇಲ್ಲ ಎನ್ನುವಷ್ಟು ವಿಪರೀತವಾಗಿ ಅಂಕಣಗಳು ಆವರಿಸಿಕೊಂಡಿವೆ. ಅಂಕಣ ಬರಹಗಳು ಆಯಾ ಲೇಖಕರ ಸ್ವ ಅಭಿರುಚಿ, ವಿದ್ವತ್ತು, ಚಿಂತನೆಗಳನ್ನು ಅವಲಂಬಿಸಿದ್ದರೂ ಕೂಡ ಅವು ಬಹಳ ವೇಗವಾಗಿ ಓದುಗರನ್ನು ತಲುಪುತ್ತವೆ. ಯಾಕೆಂದರೆ ಅಂಕಣ ಬರಹಗಳಿಗೆ ಸಾಹಿತ್ಯದ ಬಹುರೂಪಗಳನ್ನು ಒಳಗೊಳ್ಳುವ ಒಂದು ವಿಚಿತ್ರವಾದ ಗುಣವಿದೆ; ಅವು ಏನನ್ನು ಬೇಕಾದರೂ ಸಂಕರಗೊಳ್ಳುವ ಸಾಹಿತ್ಯ ಪ್ರಕಾರವಾಗಿ ಜನಪ್ರಿಯವಾಗಿವೆ. ಮೂರ್ತಿಯವರು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಭಾನುವಾರದ ಸಾಪ್ತಾಹಿಕದಲ್ಲಿ ಪ್ರತಿವಾರ ಬರೆಯುತ್ತಿರುವ ‘ಸಂವೇದನೆ’ ಎನ್ನುವ ಅಂಕಣವು ಜನಪ್ರಿಯವಾಗಿದೆ. ಇದರ ಆಯ್ದ ಬರಹಗಳು ಈಗ ‘ನಿಜದ ನೆರಳು’ ಕೃತಿಯ ರೂಪತಾಳಿ ಒಂದೇ ಕಡೆ ಓದಲು ಸಿಗುವಂತಾಗಿದೆ. ಮೂರ್ತಿಯವರು ಎಷ್ಟೇ ಎತ್ತರದ ಕಲಾವಿದರಾಗಿದ್ದರೂ ಕೂಡ ಅವರ ಕಾಲುಗಳು ಈ ನೆಲಕ್ಕೆ ಅಂಟಿಕೊಂಡಿರುತ್ತವೆ; ಅವರ ಮನಸ್ಸು, ಆಲೋಚನೆ, ತುಡಿತಗಳೆಲ್ಲವೂ ಈ ನೆಲದ ಜನ ಸಾಮಾನ್ಯರ ಬದುಕಿನ ಕುರಿತು ಗಿರಕಿ ಹೊಡೆಯುತ್ತಿರುತ್ತವೆ. ಸರಳ, ಸಹಜ ನಿರೂಪಣೆಗಳಿಂದಲೇ ಗಹನವಾದ ಚಿಂತನೆಯನ್ನು ಓದುಗರಿಗೆ ಮುಟ್ಟಿಸುವ ಶಕ್ತಿ ಅವರ ಬರಹಗಳಿಗೆ ಇದೆ. ಆದ್ದರಿಂದಲೇ ಅವು ಎಂತಹ ಸಾಮಾನ್ಯರನ್ನು ಸಹ ಆಕರ್ಷಿಸುವ, ಭಿನ್ನ ಒಳನೋಟಗಳನ್ನು ನೀಡುವ, ಇನ್ನೊಂದು ಮಗ್ಗಲಿನಿಂದ ವಿಮರ್ಶಿಸುವಂತೆ ಮಾಡುವ ಗುಣಗಳನ್ನು ಹೊಂದಿವೆ.

ಡಾ. ಸುಭಾಷ್ ರಾಜಮಾನೆ
# 121, ಎಂ.ಸಿ. ಬಡಾವಣೆ,
13ನೇ ಮುಖ್ಯರಸ್ತೆ, ವಿಜಯನಗರ,
ಬೆಂಗಳೂರು-560040
(ಮೊ) 9481863524

Leave a Reply

Your email address will not be published.