ನಿಂದನೆಯ ಛಡಿಯೇಟೇ ಲೇಸು, ಆದಾಗ್ಯೂ….!

- ಜಯರಾಮ್ ರಾಯಪುರ

jayaram_photoಇದೇ ಏಪ್ರಿಲ್ ಮೂರರಂದು ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ನಾನು ರಚಿಸಿದ ‘ಸಿರಿಗೆ ಸೆರೆ’ ನಾಟಕ ಕುರಿತು ಸಂವಾದ ಏರ್ಪಡಿಸಲಾಗಿತ್ತು. ಅಂದು ಭಾಗವಹಿಸಿದ್ದ ರಂಗಭೂಮಿ ಹಿನ್ನೆಲೆಯ ಗೆಳೆಯರು ಒಂದು ನಾಟಕ ಕೃತಿಯ ಸಾರ್ಥಕತೆ ಕುರಿತು ಹಲವು ಮಹತ್ವದ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಈ ಪ್ರಶ್ನೆಗಳ ವ್ಯಾಪ್ತಿ ಕೇವಲ ಒಂದು ಕೃತಿಗೆ ಸೀಮಿತವಾಗಿರದೆ ಸಾಹಿತ್ಯ – ರಂಗಭೂಮಿ ವಲಯದಲ್ಲಿ ವ್ಯಾಪಕ ಅವಲೋಕನಕ್ಕೆ ಒಳಪಡಬೇಕಾದ ಹೂರಣ ಮತ್ತು ಅರ್ಹತೆ ಹೊಂದಿವೆ. ಈ ಹಿನ್ನೆಲೆಯಲ್ಲಿ ನನ್ನ ಅರಿವಿಗೆ ದಕ್ಕಿದ ಚಿಂತನೆ ಇಂತಿದೆ :

ಒಂದು ಸಾಹಿತ್ಯ ಕೃತಿಯನ್ನು ಒರೆಗೆ ಹಚ್ಚಿ, ಬಿಸಿಲು-ಮಳೆಗೆ ತೆರೆದಿಟ್ಟು, ಹಿಂದೆ-ಮುಂದೆ ತಿರುಗಿಸಿ… ಎಲ್ಲಾ ಆಯಾಮಗಳಿಂದಲೂ ಅದನ್ನು ಪರಿಶೀಲಿಸಿ ನೋಡುವ ಅಗತ್ಯವಿದ್ದೇ ಇದೆ. ನಮ್ಮ ಜೀವನಕ್ಕೆ ಕನ್ನಡಿಯಾಗಿ, ಆಶಯಗಳ ದನಿಯಾಗಿ ಹಾಗೂ ನಾವು ಸಾಗುವ ದಾರಿಗೆ ದೀಪವಾಗಿ ಸಾಹಿತ್ಯಕ್ಕೆ ಮಹತ್ವದ ಪಾತ್ರವಿದೆ. ಸಾಹಿತ್ಯಕ್ಕೆ ಗುರಿಮುಟ್ಟಿಸುವ ಮುಮ್ಮುಖ ಚಲನೆಯೂ ಇದೆ ಮತ್ತು ಗತಿಸಿದ ಸಂಗತಿಗಳನ್ನು ದಾಖಲಿಸುವ ಹಿಮ್ಮುಖ ದೃಷ್ಟಿಯ ಜವಾಬ್ದಾರಿಯೂ ಇದೆ. ಜೊತೆಗೆ ನಮಗೆ ಕಚಗುಳಿಯಿಟ್ಟು ನಕ್ಕು ನಗಿಸುವ ಮತ್ತು ಆಧುನಿಕ ಜೀವನದ ಬೆಳಗು ಬೈಗುಗಳ ನಡುವಿನ ಏಕತಾನತೆಯಲ್ಲಿ ಮನಸ್ಸು ಹಗುರಾಗಿಸುವ ಗುರುತರ ಹೊಣೆಯೂ ಸಾಹಿತ್ಯಕ್ಕಿದೆ.

ನಾಟಕ ಕೂಡ ಮೂಲತಃ ಸಾಹಿತ್ಯದ ಒಂದು ಪ್ರಕಾರವಷ್ಟೇ. ಕಥೆ-ಕಾದಂಬರಿಗಳಲ್ಲಿ ಗದ್ಯರೂಪಿ ವಿವರಗಳಲ್ಲಿ ವ್ಯಕ್ತವಾಗುವ ಸಾಹಿತ್ಯ, ಕವಿತೆಗಳಲ್ಲಿ ಸೂಕ್ಷ್ಮವಾಗಿ “ರವಿ ಕಾಣದೆ ಕವಿ ಕಂಡ” ಸತ್ಯವಾಗಿ ಹೊರಹೊಮ್ಮುತ್ತದೆ. ನಾಟಕದಲ್ಲಿ ಪಾತ್ರಗಳಾಗಿ, ಸಂಭಾಷಣೆಯಾಗಿ, ಕಣ್ಣಿಗೆ ಕಟ್ಟುವ ದೃಶ್ಯವಾಗಿ ಮತ್ತು ದೃಶ್ಯಗಳು ಹೆಣೆದ ಆಟವಾಗಿ ಸಾಹಿತ್ಯಕ್ಕೆ ರಂಗೇರುತ್ತದೆ. ರಚನಾ ವಿಧಾನಗಳು ಭಿನ್ನವಾದರೂ ಸಾಹಿತ್ಯದ ಈ ಎಲ್ಲ ಪ್ರಕಾರಗಳ ಮೌಲ್ಯಮಾಪನದ ಮಾನದಂಡ ಮಾತ್ರ ಒಂದೇ ಆಗಿದೆ.

ನಾಟಕ ಸಂವಾದದಲ್ಲಿ ಭಾಗವಹಿಸಿದ್ದ ಪ್ರಾಧ್ಯಾಪಕ ರಾಜಪ್ಪ ದಳವಾಯಿಯವರ ಪ್ರಕಾರ ಯಾವುದೇ ನಾಟಕದ ಸಿದ್ಧಿ ಅದರ ಪ್ರಯೋಗದಲ್ಲಿ ಮಾತ್ರ. ಅಂತೆಯೇ ಕನ್ನಡದಲ್ಲಿ ರಂಗಪ್ರಯೋಗಕ್ಕೆ ಒಳಪಡದ ಕಾರಣಕ್ಕಾಗಿ ಹಲವು ಮಹತ್ವದ ನಾಟಕಗಳು ‘ಬೆಳಕಿಗೆ’ ಬಾರದೇ ಮರೆಯಾದ ಬಗ್ಗೆ ಅವರಿಗೆ ವಿಷಾದವಿದೆ. ನಾಟಕದ ಹಸ್ತಪ್ರತಿಯನ್ನು ಪುಸ್ತಕವಾಗಿ ಪ್ರಕಟಿಸುವ ಮೊದಲು ರಂಗ ನಿರ್ದೇಶಕರಿಂದ ವಿಮರ್ಶೆಗೆ ಒಳಪಡಿಸಿ ಅವರ ಸಲಹೆಸೂಚನೆ ಮೇರೆಗೆ ನಾಟಕ ಕೃತಿಗೆ ಅಂತಿಮ ಸ್ಪರ್ಶ, ಸ್ವರೂಪ ಸಂಯೋಜನೆಗೊಳ್ಳಬೇಕೆಂಬುದು ಕೂಡಾ ದಳವಾಯಿಯವರ ಅಭಿಪ್ರಾಯ. ನಾಟಕವನ್ನು ಬರೆಯುವುದೇ ರಂಗ ಪ್ರದರ್ಶನಕ್ಕಾಗಿ ಹಾಗೂ ರಂಗ ಪ್ರವೇಶ ಮಾಡದ ನಾಟಕ ಕೃತಿಗೆ ಮೋಕ್ಷವಿಲ್ಲ ಎಂಬ ಗಟ್ಟಿ ನಂಬಿಕೆಯ ತಳಪಾಯದ ಮೇಲೆ ಅವರ ಈ ವಾದಸರಣಿ ನೆಲೆ ಕಂಡುಕೊಂಡಿದೆ.
ಹಾಗಾದರೆ ರಂಗಭೂಮಿ ಹಂಗಿನಲ್ಲೇ ನಾಟಕ ಕೃತಿ ತನ್ನ ಅಸ್ತಿತ್ವ ಕಂಡುಕೊಳ್ಳಬೇಕೇ ? ಒಂದು ಸೃಜನಶೀಲ ಸಾಹಿತ್ಯ ರೂಪದಲ್ಲಿ ನಾಟಕಕ್ಕೆ ಸ್ವತಂತ್ರ ಅಸ್ತಿತ್ವವೇ ಇಲ್ಲವೇ ?

ದಳವಾಯಿ ಅವರ ವಾದ ನಾಟಕ ಸಾಹಿತ್ಯದ ಬಗ್ಗೆ ಅವರು ತಳೆದಿರುವ ಸಂಕುಚಿತ ಮತ್ತು ಏಕಮುಖೀ ಅಭಿಪ್ರಾಯ ಎಂದು ಹೇಳದೇ ವಿಧಿಯಿಲ್ಲ. ಎಲ್ಲ ಕವಿತೆಗಳೂ ಹಾಡುಗಳೇ ಆಗಬೇಕು ಹಾಗೂ ಎಲ್ಲ ನಾಟಕಗಳು ರಂಗಸಂಭಾಷಣೆ (Screenplay)ಗಳೇ ಆಗಬೇಕೆನ್ನುವ ಈ ವಾದದ ಹಿಂದೆ ಸಮಗ್ರನೋಟದ ಕೊರತೆ ಎದ್ದು ಕಾಣುತ್ತದೆ. ಕುವೆಂಪು ಮೊದಲಾಗಿ ಕನ್ನಡದ ಹಲವು ಸಾಹಿತಿಗಳು ಶ್ರೇಷ್ಠ ನಾಟಕ ಕೃತಿಗಳನ್ನು ನೀಡಿದ್ದಾರೆ. ಇಂತಹ ಹಲವಾರು ನಾಟಕ ಕೃತಿಗಳು ರಂಗಸಾಧ್ಯತೆ ಮಿತಿಯಿಂದಲೋ ಅಥವಾ ಇನ್ಯಾವುದೋ ಕೊರತೆಯಿಂದಾಗಿಯೋ ರಂಗದ ಮೇಲೆ ಪ್ರದರ್ಶನವಾಗದಿರಬಹುದು. ಹಾಗೆಂದ ಮಾತ್ರಕ್ಕೆ ಈ ನಾಟಕಗಳು ಸಾಹಿತ್ಯ ಕೃತಿಗಳಾಗಿ ತಮ್ಮ ಶ್ರೇಷ್ಠತೆಯನ್ನು ಕಳೆದುಕೊಂಡು ‘ಪ್ರತ್ಯೇಕತೆ’ ಪಡೆಯುತ್ತವೆ ಎನ್ನುವ ವಾದಕ್ಕೆ ಪುಷ್ಟಿ ಸಿಗಲಾರದು.
ಪ್ರದರ್ಶನಗೊಂಡ ನಾಟಕಗಳೇ ‘ಸಿದ್ಧಿ’ ಪಡೆಯುವುದಾದರೆ, ಇವು ಎಷ್ಟುಬಾರಿ ಪ್ರದರ್ಶನಗೊಳ್ಳಬೇಕು? ಸಾವಿರಾರು ಪ್ರದರ್ಶನಗಳನ್ನು ಕಂಡ ಕಂಪನಿ ನಾಟಕ ಅಥವಾ ‘ಲಂಚಾವತಾರ’ದಂತಹ ನಾಟಕಗಳು ಕೆಲವೇ ಪ್ರದರ್ಶನ ಕಂಡ ‘ತಲೆದಂಡ’ ಅಥವಾ ‘ಬೆರಳ್‍ಗೆ ಕೊರಳ್’ ನಾಟಕಗಳಿಂತ ಶ್ರೇಷ್ಠ ನಾಟಕಗಳೇ ? ಪ್ರದರ್ಶನಗೊಳ್ಳುವ ಸಂಖ್ಯೆ ಮತ್ತು ಜನಪ್ರಿಯತೆಯ ಮಾನದಂಡದಲ್ಲಿ ನಾಟಕದ ಮೌಲ್ಯಮಾಪನ ಸಾಧ್ಯವೇ? ಪ್ರದರ್ಶನಗೊಳ್ಳಬೇಕೆನ್ನುವ ಬಯಕೆಯಲ್ಲಿ ನಾಟಕಕಾರ ತನ್ನ ನಾಟಕ ರಚನೆಯ ಕಲ್ಪನಾಲಹರಿಗೆ, ಸೃಜನಶೀಲ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುತ್ತಾ ಹೋದರೆ ನಿಜಕ್ಕೂ ಶ್ರೇಷ್ಠ ನಾಟಕ ಮೂಡಿ ಬಂದೀತೆ ?

sirige_sere_release_photoಸಂವಾದದಲ್ಲಿ ರಾಜಪ್ಪ ದಳವಾಯಿ ಹಾಗೂ ಎಸ್. ಆರ್. ರಮೇಶ್‍ರವರು ಸಂಘರ್ಷವಿಲ್ಲದ ನಾಟಕಗಳು ನೀರಸವೆಂದೂ; ಒಳ್ಳೆಯ ನಾಟಕಗಳಲ್ಲಿ ಪ್ರತಿರೋಧ, ಮುಖಾಮುಖಿ, ಘರ್ಷಣೆಗಳನ್ನು ರಂಗದ ಮೇಲೆ ತರಬೇಕೆಂದೂ ಹೇಳುತ್ತಾರೆ. ದಳವಾಯಿಯವರು ನಾಟಕಗಳು ಪ್ರಶ್ನೆಗಳನ್ನು ಹುಟ್ಟು ಹಾಕಬೇಕು ಮತ್ತು ಲಂಕೇಶರ ಸಂಕ್ರಾಂತಿ ನಾಟಕವು ವಚನಕಾರರ ಸಾಹಿತ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಕ್ಕೆ ಯಶಸ್ವಿಯಾಯಿತು ಎಂದು ಹೇಳಿದ್ದಾರೆ. ರಮೇಶ್ ಅವರು ‘ಸಿರಿಗೆ ಸೆರೆ’ ನಾಟಕವು ಪುರೋಹಿತ, ವ್ಯಾಪಾರಿ ಮತ್ತಿತರ ಪಾತ್ರಗಳಿಂದಾಗಿ ‘ಬೂಜ್ರ್ವಾ’ ಛಾಯೆಗೊಳಪಟ್ಟಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಸಾಹಿತ್ಯ ಚಳುವಳಿಯಾಗಿ ಬಂದ ಬಂಡಾಯ ಸಾಹಿತ್ಯದ ಆಶಯದಲ್ಲಿ ‘ಖಡ್ಗವಾಗಲಿ ಕಾವ್ಯ’ ಎಂಬ ಘೋಷಣೆಯಿದೆ. ಸಾಮಾಜಿಕ-ಆರ್ಥಿಕ ಬದಲಾವಣೆಗೆ ಪೂರಕವಾಗದ ಸಾಹಿತ್ಯಗಳು ‘ಬೂಸಾ’, ‘ಅರ್ಥಹೀನ’ ಹಾಗೂ ‘ಕಸದ ಬುಟ್ಟಿಗೆ ಸೇರಬೇಕಾದ ಅನುಪಯುಕ್ತ’ ಸಾಹಿತ್ಯಗಳೆಂದೂ ವರ್ಣಿಸಲ್ಪಟ್ಟಿವೆ. ಕಳೆದ ಎರಡು-ಮೂರು ದಶಕಗಳಲ್ಲಿ ಈ ವಿಷಯದಲ್ಲಿ ಪರ-ವಿರೋಧಿ ಚರ್ಚೆಗಳು ಬಹಳಷ್ಟು ನಡೆದಿವೆ. ಸಾಹಿತ್ಯವು ನಮ್ಮ ಆಶಯಗಳು ಹಾಗೂ ಹೋರಾಟಗಳ ದನಿಯಾದರೆ ಅತ್ಯಂತ ಸಂತೋಷ. ಅನ್ಯಾಯದ ವಿರುದ್ಧ ಸಿಡಿದೇಳುವ ಆಶಯಗಳು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಳೆದೊಂದು ಸಹಸ್ರ ವರ್ಷಗಳಿಂದಲೂ ಇವೆ. ಪಂಪನಾದಿಯಾಗಿ ಜೈನ ಪರಂಪರೆಯ ಹಾಗೂ ವಚನ ಪರಂಪರೆಯ ಸಾಹಿತ್ಯದಲ್ಲಿ ಈ ತೆರೆನಾದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸಿಡಿದೇಳುವ ನುಡಿ ವಚನಗಳು ಮೊದಲಿನಿಂದಲೂ ಇದೆ. ಕುವೆಂಪು-ಕಾರಂತರ ಸಾಹಿತ್ಯದ ಬಂಡಾಯದ ದನಿ ಆಧುನಿಕ ಕನ್ನಡ ಸಾಹಿತ್ಯಕ್ಕೆ ಪ್ರೇರಣೆಯಾಗಿದೆ.

ಕನ್ನಡದ ಬಹುತೇಕ ಲೇಖಕರ ಧೋರಣೆ ನಿಲುವುಗಳು ಪಟ್ಟಭದ್ರರ ವಿರೋಧವಾಗಿ ಹಾಗೂ ಬದಲಾವಣೆಯ ಪರವಾಗಿಯೇ ಇವೆ. ಆದರೆ ಸಹೃದಯಿ ಸಾಹಿತ್ಯಾಸಕ್ತರಲ್ಲಿ ಈ ಬಂಡಾಯದ ಎಳೆಗಳನ್ನು ಕಾಣುವ ಸೂಕ್ಷ್ಮತೆ ಬೇಕು. ಕೇವಲ ಘೋಷಣೆ ಕೂಗುವ ಸಾಹಿತ್ಯ ಶ್ರೇಷ್ಠವಾಗಲಾರದು. ಬದಲಿಗೆ ಘೋಷಣೆ ಕೂಗಬಯಸುವ ಸಹಸ್ರಾರು ಬಾಯಿಗಳಿಗೆ ಉಸಿರು ತುಂಬಿ ದನಿಯಾಗುವ ಶಕ್ತಿ ನೀಡಿದ ಸಾಹಿತ್ಯ ಪರಂಪರೆ ನಮ್ಮಲ್ಲಿದೆ. ಇಂತಹ ಸಾಹಿತ್ಯದ ವೈಚಾರಿಕ ಸೂಕ್ಷ್ಮತೆ ಮತ್ತು ಕಥಾನಕದ ಸಂಕೀರ್ಣತೆಯನ್ನು ಗ್ರಹಿಸುವ ತಾಳ್ಮೆ, ಹೆಜ್ಜೆಹೆಜ್ಜೆಗೂ ಸಂಘರ್ಷ ಬಯಸುವವರಲ್ಲಿರಬೇಕು. ಪೊಳ್ಳು ಘರ್ಷಣೆಯ ಘೋಷಣೆಗಳಿಗಿಂತ ಗಟ್ಟಿ ವೈಚಾರಿಕ ಪ್ರತಿರೋಧದ ಸಾತ್ವಿಕತೆ ಹೆಚ್ಚು ಪರಿಣಾಮಕಾರಿಯಾಗಬಲ್ಲದೆಂಬ ತಿಳಿವಳಿಕೆಯೂ ಜರೂರಾಗಿ ಬೇಕು. ಸಂದರ್ಭಕ್ಕನುಗುಣವಾಗಿ ಅಬ್ಬರಕ್ಕಿರುವಷ್ಟೇ ತಾಕತ್ತು ಮೆಲುದನಿಗೆ, ಮಾತಿಗೆ ನಿಲುಕದ ಸಂವಹನ-ಸಂವೇದನೆ ಮೌನಕ್ಕೆ ಇರಲು ಸಾಧ್ಯವೆಂಬುದನ್ನು ಗ್ರಹಿಸದಿದ್ದರೆ ಹೇಗೆ ?

‘ಸಿರಿಗೆ ಸೆರೆ’ ನಾಟಕದಲ್ಲಿ ಸಾಮ್ರಾಜ್ಯಶಾಹಿ ಚಕ್ರವರ್ತಿ ವಿರುದ್ಧ ಶಾಂತಿ ಬಯಸುವ ಸಾಮಂತ ರಾಜನ ಯುದ್ಧವಿರೋಧಿ ಚಿತ್ರಣವಿದೆ. ಸಮರ ಮತ್ತು ಶಾಂತಿ ನಡುವಿನ ತಾಕಲಾಟವಿದೆ. ಅಪಮಾನ-ವಿನಾಶಗಳ ನಡುವಣ ದ್ವಂದ್ವಗಳಿವೆ. ನಾಗರೀಕತೆಯ ಹುಟ್ಟುಸಾವುಗಳ ಮಧ್ಯೆ ತೆಳುವಾದ ಗೆರೆ ಎಳೆಯುವ ಸನ್ನಿವೇಶದ ಚಿತ್ರಣವಿದೆ. ಮೂಲಭೂತವೆನ್ನಿಸುವ ಪ್ರತಿರೋಧಗಳನ್ನು ತಾರಕಕ್ಕೇರಿಸಿ, ಹಿಂಸೆ-ಕ್ರೌರ್ಯಗಳಿಗೆ ಆಸ್ಪದ ನೀಡಬಯಸದೆ ಸಂಧಾನದ ಮೂಲಕ ಸಮಾಧಾನ ಹುಡುಕುವ ಆಶಯವಿದೆ. ಕನ್ನಡ ನಾಡಿನಲ್ಲಿ ಮೊದಲ ಬಾರಿಗೆ ಸಂಪತ್ತಿನ ಶೇಖರಣೆ ನಡೆಯುವ ಪ್ರಕ್ರಿಯೆಯಲ್ಲಿ ಸಂಪತ್ತಿನ ಸೆರೆ ಹಾಗೂ ಸೂರೆಗಳ ನಡುವಿನ ಹೊಯ್ದಾಟದ ಕಥನವಿದೆ. ಸೈನಿಕ ರಾಜ್ಯ ಹಾಗೂ ಸಂಪತ್ತು ಶೇಖರಣೆಯ ಸಾಮಂತ ರಾಜ್ಯಗಳ ನಡುವಣ ಪರಸ್ಪರ ಅಪನಂಬಿಕೆ ಮತ್ತು ಕೊಡುಕೊಳ್ಳುವಿಕೆಯ ಜಟಿಲ ಸಂಬಂಧಗಳ ಚಿತ್ರಣವಿದೆ. ಪೂರ್ವಾಗ್ರಹಗಳಿಂದ ಬಿಡುಗಡೆಹೊಂದಿ ಮುಕ್ತ ಮನಸ್ಸಿನಿಂದ ನೋಡಿದರೆ ನಾಟಕದಲ್ಲಿನ ಪ್ರತಿರೋಧ -ಸಂಘರ್ಷಗಳು ಹಾಗೂ ಶಾಂತಿ ಬಯಸುವ ಪ್ರಗತಿಪರ ಆಶಯಗಳು ಗಾಢವಾಗಿ ಕಾಣುತ್ತವೆ.

ರಮೇಶ್ ಮತ್ತು ರಾಜಪ್ಪ ದಳವಾಯಿಯವರು ಹೇಳುವಂತೆ ‘ಸಿರಿಗೆ ಸೆರೆ’ ನಾಟಕ ಸಾಮಾನ್ಯ ವರ್ಗದ ಜನರನ್ನು ಒಳಗೊಂಡಿಲ್ಲ ಹಾಗೂ ಈ ನಾಟಕದಲ್ಲಿ ವ್ಯಾಪಾರಿಗಳು, ಪುರೋಹಿತರು, ರಾಜಪರಿವಾರ, ಕೊತ್ವಾಲರಂತಹವರು ಮುಖ್ಯ ಪಾತ್ರ ವಹಿಸಿದ್ದಾರೆ ; ಈ ಕಾರಣಗಳಿಂದಾಗಿ ಕೆಂಪೇಗೌಡರ ಪಾತ್ರ ಗಟ್ಟಿಯಾಗಿಲ್ಲ ಹಾಗೂ ಅಬಲರನ್ನು ಸಬಲರು ಹೀರಿ ಹಾಕುವ ಅಂಶಗಳು ಮೇಳೈಸಿವೆ.

ನನ್ನ ಅಭಿಪ್ರಾಯದಲ್ಲಿ ಯಾವುದೇ ನಾಟಕಕಾರ ಆಯ್ದುಕೊಂಡ ವಸ್ತುವಿಗೆ ಹಾಗೂ ಐತಿಹಾಸಿಕ ಕಾಲಘಟ್ಟಕ್ಕೆ ನಿಷ್ಠವಾಗಿರಬೇಕಾಗಿರುತ್ತದೆ. ಆಧುನಿಕ ಯುಗದ ವಿಚಾರಧಾರೆಗಳನ್ನು ಹಾಗೂ ಆಶಯಗಳನ್ನು ಮಧ್ಯಯುಗದಲ್ಲಿ ಘಟಿಸಿದ ವಿಷಯ ವಸ್ತುವುಳ್ಳ ನಾಟಕಕ್ಕೆ ಹೇರ ಹೊರಟರೆ ಆಭಾಸವಾಗುತ್ತದೆ. 16ನೇ ಶತಮಾನದ ಸಂಗತಿಗಳನ್ನು ನಾಟಕ ರೂಪವಾಗಿಸುವ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೈಮೇಲೆ ಎಳೆದುಕೊಳ್ಳುವುದಕ್ಕಾಗುವುದಿಲ್ಲ. ಆಯಾ ಕಾಲಘಟ್ಟಗಳಿಗೆ ಅಂದಿನ ಸಕಾರಣ ಒತ್ತಡಗಳಿರುತ್ತವೆ ಹಾಗೂ ಅನಿವಾರ್ಯತೆಗಳಿರುತ್ತವೆ. ಮಧ್ಯಯುಗದಲ್ಲಿ ರಾಜ್ಯ ಹಾಗೂ ಕೋಟೆ ಅವಶ್ಯಕತೆ ಇರುವುದು ಅಬಲರನ್ನು ಮತ್ತು ಶ್ರಮಿಕ ವರ್ಗದವರನ್ನು ರಕ್ಷಣೆ ಮಾಡಲೆಂದಲ್ಲ. ಬದಲಿಗೆ ಸಂಪತ್ತಿನ ಶೇಖರಣೆ ಹಾಗೂ ಅಂದಿನ ಅರ್ಥವ್ಯವಸ್ಥೆಗೆ ಆಧಾರ ಸ್ಥಂಭಗಳಾದ ಗಣ್ಯರು, ಕುಶಲಕರ್ಮಿಗಳು, ವ್ಯಾಪಾರಸ್ಥರು ಮತ್ತಿತರರಿಗೆ ರಕ್ಷಣೆ ನೀಡಬೇಕೆಂದು. ಹಿಂಸೆ ಮತ್ತು ಶೋಷಣೆ ಆಧಾರಿತ ಮಧ್ಯಯುಗದ ಐತಿಹಾಸಿಕ ಸಂದರ್ಭದಲ್ಲಿ ಆಧುನಿಕ ಯುಗದ ‘ಜನಸಾಮಾನ್ಯರು’ ಎಂದು ಹೇಳಲ್ಪಡುವ ಜನರಿಗೆ ಯಾವುದೇ ವಿಶೇಷ ಪಾತ್ರವಿಲ್ಲ. ಇವರನ್ನು ಹೇಳಿಕೇಳಿ ಅಂದಿನ ಯಾವುದೇ ಐತಿಹಾಸಿಕ ಘಟನೆ ನಡೆದ ಬಗ್ಗೆ ಪುರಾವೆಗಳಿಲ್ಲ.

ಅಂದಿನ ಕೋಟೆಯೊಳಗೆ ಇದ್ದಿರಬಹುದಾದ ಸೈನಿಕರು, ಕಸುಬುದಾರರು, ವ್ಯಾಪಾರಸ್ಥರು ಹಾಗೂ ಗಣ್ಯರಿಗೆ ‘ಸಿರಿಗೆ ಸೆರೆ’ ನಾಟಕದಲ್ಲಿ ಪಾತ್ರ ನೀಡಿದೆ. ಮೇಲಾಗಿ ನಾಟಕದಲ್ಲಿ ಎಲ್ಲಿಯೂ ಅಬಲರನ್ನು ಸಬಲರು ಹೀರುವಂತಹ ಘಟನೆಗಳಾಗಲಿ, ಆಶಯಗಳಾಗಲಿ ಇಲ್ಲ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಕೋಟೆಪೇಟೆಯ 1550 ರ ದಶಕದ ವೇಳೆಯಲ್ಲಿ ದಾಖಲಾಗಿರುವ ಇತಿಹಾಸದ ಘಟನೆಗಳು ನಡೆದಿದ್ದಿರಬಹುದಾದ ಸಂದರ್ಭದ ಕಾಲ್ಪನಿಕ ನಾಟಕೀಯತೆ ಹೇಳುವಾಗ ನಾನು ಕಂಡ ವಿಷಯ ವಸ್ತುವಿನ ‘ಊಹಾ ಸತ್ಯಕ್ಕೆ’ ಆದಷ್ಟು ಮಟ್ಟಿಗೆ ಪ್ರಾಮಾಣಿಕನಾಗಿರಲು ನಾನು ಮುತುವರ್ಜಿ ವಹಿಸಿದ್ದೇನೆ.

ರಂಗಕರ್ಮಿಗಳು ‘ಸಿರಿಗೆ ಸೆರೆ’ ನಾಟಕದಲ್ಲಿ ಕೆಂಪೇಗೌಡರು ಮತ್ತು ಅಳಿಯ ರಾಮರಾಯರ ಮುಖಾಮುಖಿ ಏರ್ಪಡಿಸಬೇಕಿತ್ತೆಂದೂ, ವಾದಿಪ್ರತಿವಾದಿಗಳ ನಡುವಿನ ಸಂಘರ್ಷ ನಾಟಕೀಯ ರೂಪದಲ್ಲಿ ಬರಬೇಕಿತ್ತೆಂದು ಹೇಳಿದ್ದಾರೆ. ಈ ತೆರೆನಾದ ದ್ವಂದ್ವ ನಾಟಕೀಯತೆಗೆ ಪೂರಕವಾಗುತ್ತಿತ್ತಾದರೂ, ಸಾಂದರ್ಭಿಕತೆ ಹಾಗೂ ಚಕ್ರವರ್ತಿಯ ಆಸ್ಥಾನ ಮರ್ಯಾದೆಗಳಿಗೆ ಅನುಗುಣವಾಗಿ ಇರುತ್ತಿರಲಿಲ್ಲ. ಇವರಿಬ್ಬರ ರಾಜಕೀಯ ಅಂತಸ್ತುಗಳಲ್ಲಿ ಸಾಕಷ್ಟು ಅಂತರವಿದೆ. ಅಲ್ಲದೆ ಚಕ್ರವರ್ತಿಯೊಬ್ಬ ಸಣ್ಣ ಮಾಂಡಲಿಕನೊಡನೆ ಮುಖಾಮುಖಿ ಸಂಭಾಷಿಸುವ ಯಾವುದೇ ಸಾಧ್ಯತೆ ಇರಲಿಲ್ಲ. ಇದಕ್ಕೆ ಔರಂಗಜೇಬನ ಒಡ್ಡೋಲಗಲಕ್ಕೆ ಶಿವಾಜಿಯನ್ನು ಕರೆತಂದಾಗ ನಡೆದ ಘಟನೆಗಳೇ ನಿದರ್ಶನ. ಹೆಚ್ಚೆಂದರೆ ಸಾಮಂತ ರಾಜ ಚಕ್ರವರ್ತಿಯ ಆಸ್ಥಾನಿಗನಲ್ಲೊಬ್ಬನನ್ನು ಭೇಟಿಯಾಗಿ ತನ್ನ ಪರವಾಗಿ ವಾದ ಮಂಡಿಸಬೇಕೆಂದು ಕೇಳಿಕೊಳ್ಳಬಹುದಾಗಿತ್ತು. ಅಥವಾ ದೂತ/ಸಂಧಾನಕಾರರ ಮೂಖಾಂತರ ಒಕ್ಕಣೆ ಕಳುಹಿಸಬಹುದಿತ್ತು. ಈ ರೀತಿಯ ಚಕ್ರವರ್ತಿ-ಮಾಂಡಲಿಕನ ಮುಖಾಮುಖಿ ಅಸಂಭವನೀಯ ಆಗಿದ್ದರಿಂದ ನಾಟಕದಲ್ಲಿ ಅದನ್ನು ಪ್ರಯೋಗ ಮಾಡಿಲ್ಲ. ಇಲ್ಲಿ ನಾಟಕೀಯತೆಯ ಅಳವಡಿಕೆಗಿಂತ ನಾಟಕದ ಐತಿಹಾಸಿಕ ಸಂಭವನಿಯತೆಗೆ ಹಾಗೂ ‘ಸಾಧ್ಯತೆಯ ಸನಿಹಕ್ಕೆ’ ನೀಡಿರುವ ಪ್ರಾಮುಖ್ಯ ಗಮನಾರ್ಹ.

ಕೆಂಪೇಗೌಡರ ಪಾತ್ರದಲ್ಲಿ ಗಟ್ಟಿತನವಿಲ್ಲ ಎಂಬ ಹೇಳಿಕೆಗೆ ಪೂರಕವಾಗಿ ಈ ಟೀಕಾಕಾರರು ಯಾವುದೇ ವಿವರಣೆ ನೀಡಿಲ್ಲ. ಇವರು ಅಪೇಕ್ಷಿಸುವ ನಾಲ್ಕಾರು ‘ಸಾಮಾನ್ಯ ಜನರ’ ಪಾತ್ರ ಪೋಷಣೆಯಿಂದ ಕೆಂಪೇಗೌಡರ ಪಾತ್ರ ಹೇಗೆ ಗಟ್ಟಿಗೊಳ್ಳುತ್ತದೆ? ಈ ನಾಟಕ ವಿಶೇಷ ಮಹತ್ವ ಪಡೆದಿರುವುದೇ ಕೆಂಪೇಗೌಡರ ವ್ಯಕ್ತಿತ್ವವನ್ನು ಮರುವಿಮರ್ಶಿಸಿದ ಕಾರಣಕ್ಕಾಗಿ. ಚಂದ್ರಶೇಖರ ಕಂಬಾರರ ಮಾತುಗಳಲ್ಲಿ ಹೇಳುವುದಾದರೆ, “ಇದು ಸ್ವಂತ ಕಾಲ ಮೇಲೆ ನಿಂತು ಪ್ರಜಾನುರಾಗಿಯಾದ ಮಾಂಡಳಿಕನೊಬ್ಬ ಆದರ್ಶ ರಾಜ್ಯ ಕಟ್ಟ ಬಯಸಿ, ದೊರೆಯ ದೌರ್ಜನ್ಯದ ಮುಂದೆ ನಿಲ್ಲಲಾಗದೆ ತನ್ನ ಆದರ್ಶಗಳಿಗೆ ತಾನೇ ಎರವಾದವನ……” ಕಥೆ. “…ಅಸಹಾಯಕ ಮಾಂಡಳಿಕನ ಕರುಣಾಜನಕ ಕಥೆಯಾಗಬೇಕಾದ ವಸ್ತುವನ್ನು ಕೆಂಪೇಗೌಡನ ಔದಾರ್ಯ, ನಿಷ್ಠೆ, ಸಂಸ್ಕøತಿಗಳ ಧೀಮಂತ ನಾಟಕವಾಗಿಸಿದ್ದು….”

ಮೇಲಿನ ಮಾತುಗಳು ಕೇವಲ ಜೈಕಾರ-ವಿಜೃಂಭಣೆಯಿಂದ ಕೆಂಪೇಗೌಡರ ಪಾತ್ರ ಕಟ್ಟಲಾಗಿದೆ ಎಂಬ ಮಾತುಗಳಿಗೂ ಸೂಕ್ತ ಉತ್ತರವಾಗಿದೆ. ಸೋತು ಸೆರೆಹೋದ ಕೆಂಪೇಗೌಡರ ಕಥೆ ಹೇಳುವಲ್ಲಿ ಯಾವ ವಿಜೃಂಭಣೆಯಿದೆ ? ‘ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ’ ಎಂಬ ‘ಆತಂಕಕಾರಿ’ ಮಾತುಗಳಿಗೆ ನಾಟಕದಲ್ಲಿ ಎಲ್ಲಿ ಇಂಬು ನೀಡಲಾಗಿದೆ ಎಂದು ನನಗಂತೂ ತಿಳಿಯದಾಗಿದೆ.

ಹಾಗೆಂದ ಮಾತ್ರಕ್ಕೆ ವಿಮರ್ಶಕರ ಮಾತುಗಳನ್ನು ನಾನು ಸಾರಾಸಗಟಾಗಿ ತಿರಸ್ಕರಿಸುತ್ತಿಲ್ಲ. ರಮೇಶ್‍ರವರು ಹೇಳಿದಂತೆ ನಾಟಕದ ದೃಶ್ಯಗಳಲ್ಲಿ ನಾಟಕ ‘ಘಟಿಸುವ’ ಬದಲು ಘಟನೆಯ ವರದಿಯಾಗಿ ನಾಟಕ ಮೂಡಿಬಂದಿದೆ, ಎದುರಾಳಿಯಾಗಿ ಬರುವ ಪಾತ್ರಗಳಿಲ್ಲದೆ ಎಲ್ಲವನ್ನೂ ಒಪ್ಪಿಕೊಂಡು ನಡೆಯುವ ಕ್ರಮದಿಂದ ನಾಟಕದಲ್ಲಿ ಸಂಘರ್ಷವನ್ನು ಬೆಳೆಸಲು ಸಾಧ್ಯವಾಗಿಲ್ಲ; ನಾಟಕದಲ್ಲಿ ಪಾತ್ರಗಳ ಒಳತೋಟಿ ತಿಳಿಹೇಳುವಂತಹ ಸ್ವಗತ ಹಾಗೂ ಕಲ್ಪನಾಭರಿತ (flight of fancy) ಅಂಶಗಳಿಲ್ಲದ ಕಾರಣ ನಾಟಕದಲ್ಲಿ ನಾಟಕೀಯತೆ ಸೊರಗಿದೆ ಎಂಬ ಅಂಶಗಳನ್ನು ನಾನು ಗಂಭೀರವಾಗಿ ಸ್ವೀಕರಿಸುತ್ತೇನೆ. ಈ ವಿಮರ್ಶೆಯಲ್ಲಿ ಬಹುತೇಕ ಸತ್ಯವಿದೆ. ಆದರೆ ‘ಇತಿಹಾಸಕ್ಕೆ ಅಪಚಾರವಾಗದಂತೆ ಹಾಗೂ ಸಾಧ್ಯತೆಯ ಸನಿಹದಲ್ಲಿ’ ಇರುವಂತೆ ನಾಟಕ ಬರೆಯುವ ಚೌಕಟ್ಟಿನಲ್ಲಿ ನಾನು ಪ್ರಯತ್ನಪೂರ್ವಕವಾಗಿ ಕಲ್ಪನಾಭರಿತ ನಾಟಕೀಯತೆಯನ್ನು ತಡೆ ಹಿಡಿದಿದ್ದೇನೆ. ಆದರೂ ‘ಸಾಧ್ಯತೆಯ ಸನಿಹದಲ್ಲಿ’ ಬರೆದ ಈ ನಾಟಕವೇ ಇತಿಹಾಸವೇನೋ ಎಂದು ಬಿಂಬಿಸುವ ಪ್ರಯತ್ನದಲ್ಲಿ ನಾಟಕೀಯತೆ ಕುಂದಿದೆ ಎಂಬ ಮಾತನ್ನು ನಾನು ಒಪ್ಪುತ್ತೇನೆ.

ಆದರೆ ನಾಟಕದಲ್ಲಿಲ್ಲದ ಮುಖಾಮುಖಿ, ನಾಟಕೀಯತೆ, ಸ್ವಗತ ಹಾಗೂ ಕಲ್ಪನಾಯಾನಭರಿತ ಸನ್ನಿವೇಶಗಳು ನಿರ್ದೇಶಕನಿಗೆ ಕಡಿವಾಣ ಹಾಕಬೇಕೆಂದೇನಿಲ್ಲ. ಬದಲಿಗೆ ಇವು ಯಾವುದೇ ಉತ್ತಮ ನಿರ್ದೇಶಕನಿಗೆ ಅನಪೇಕ್ಷಿತವಾಗಿ ಒಡ್ಡಿರುವ ಪಣವೂ ಹೌದು. ದೃಶ್ಯಗಳ ಮಧ್ಯದಲ್ಲಿ ಹಾಗೂ ವಿವರಣೆಗಳಿಗೆ ಪೂರಕವಾಗಿ ರಂಗದ ಮೇಲೆ ಕಲ್ಪನಾಯಾನ ಭರಿತ ಕಣ್ಕಟ್ಟು ನೀಡುವುದು ಅಸಾಧ್ಯವೇನಲ್ಲ. ಮೇಲಾಗಿ ನಾಟಕದಲ್ಲಿ ಬರುವ ಬೇಡಜಂಗಮ ನುಡಿ ಹಾಗೂ ಪೂರಕವಾಗಿ ಬರುವ ಲಾವಣಿಗಳು ನಾಟಕಕ್ಕೆ ಜಾನಪದ ಸೊಗಡು ನೀಡುವ ಆಶಯದ ಕಲ್ಪನೆಯಲ್ಲಿಯೇ ಇವೆ.

ಆದಾಗ್ಯೂ ಹೊಗಳಿಕೆಯ ಹೊನ್ನಶೂಲಕ್ಕಿಂತಲೂ ನಿಂದನೆಯ ಛಡಿಯೇಟೇ ಲೇಸೆಂದು ನಂಬಿರುವ ನಾನು ಒದಗಿಬಂದ ಎಲ್ಲ ಟೀಕೆಗಳನ್ನು ಅನುಭವಿಗಳ ಆಶೀರ್ವಾದ ಎಂದೇ ಭಾವಿಸುತ್ತೇನೆ.

Leave a Reply

Your email address will not be published.