ನಾನು ಮಾಡಿದುದೆಲ್ಲ ತಲೆಕೆಳಗಾಯಿತು 

-ಮೀರ್ ತಖಿ ಮೀರ್ , ಅನುವಾದ: ನಟರಾಜ್ ಹುಳಿಯಾರ್

ಗಜಲ್: 

ನಾನು ಮಾಡಿದುದೆಲ್ಲ ತಲೆಕೆಳಗಾಯಿತು
ಯಾವ ಮದ್ದು ಗುಣವ ತರದಾಯಿತು.
ನೋಡಿದೆಯಾ ನನ್ನೆಡೆಗೆ ಹಬ್ಬಿದಿ ಖಾಯಿಲೆಯ
ಅದು ಕಡೆಗೆ ನನ್ನನ್ನೇ ಕಬಳಿಸಿದ ಪರಿಯ.
ಹರೆಯದಾ ದಿನಗಳು ಅಳುವಿನಲಿ ಕಳೆದವು
ಮುಪ್ಪಿನಲಿ  ಕಣ್ಣುಗಳ ರೆಪ್ಪೆಗಳು ಬಿಗಿದವು.
ಮುಚ್ಚಲಾರದೆ ಕಣ್ಣು ಇರುಳಿಡೀ ತೆರೆದಿದ್ದವು
ಬೆಳಕು ಹರಿಯುವ ಗಳಿಗೆ ಎವೆ ಮುಚ್ಚಿಕೊಂಡವು
ಸೂತ್ರದಾರಿಯ ನೀನು ನಮ್ಮಂಥ ದುರ್ಬಲರ ಸುಮ್ಮನೆ  ದೂರುತ್ತೀಯ
ನಿನ್ನಿಷ್ಟ ಬಂದಂತೆ ನೀನು ಮಾಡುತ್ತೀಯಾ
ಅಪ ಕೀರ್ತಿ ಹೊರೆ ಮಾತ್ರ ನಮಗೆ ಹೇರುತ್ತೀಯ.
ದಟ್ಟ ಹುಚ್ಚಿನೊಳಗೂ ಕೂಡ ಸಭ್ಯತೆಯ ಗೆರೆ ಮೀರಿದವನಲ್ಲ ನಾನು
ಸಖಿಗಾಗಿ ಮೈಲಿ ಅಲೆದಾಡಿದೆ ನಾನು
ಹೆಜ್ಜೆ ಹೆಜ್ಜೆಗೂ ಮಂಡಿಯೂರಿ ಅಂಗಲಾಚಿದೆ ನಾನು
ಇರುಳು ಮದಿರಾಗೃಹದಲಿ ಕಳೆದ ಶೇಕ್ಜಿ ಬೆತ್ತಲೆ ಹೋಗಿದ್ದಾನೆ ಮಸೀದೆಗೆ
ಕುಡಿಕುಡಿದು ಚಿತ್ತಾಗಿ ಜುಬ್ಬಾ ಶಾಲು ಕುರ್ತಾ ಟೋಪಿ ಹಂಚಿಬಿಟ್ಟಿದ್ದಾನೆ ಕಂಡಕಂಡೋರಿಗೆ.
ಜಗದ ಕಾರುಬಾರಲ್ಲಿ ಇಷ್ಟು ಮಾತ್ರವೇ ನನ್ನ ಪಾತ್ರವಿಹುದು
ಅಳುತಲುತ ರಾತ್ರಿಯನು ಬೆಳಗಾಗಿಸುವುದು,
ಹೇಗೋ ದಿನದೂಡಿ ಸಂಜೆಯಾಗುವುದು.
ಇನ್ನು, ಏನು ಕೇಳುತ್ತೀರಿ ಮೀರನ ಧರ್ಮವ ಕುರಿತು
ಇಸ್ಮಾಮನ್ನೆಂದೋ ತೊರೆದು ವಿಭೂತಿ ಬಳಿದಿದ್ದಾನೆ ಗುಡಿಯೊಳಗೆ ಕೂತು. !
ಕೃಪೆ: ಉರ್ದು ಸಾಹಿತ್ಯ , ಕುವೆಂಪು ಭಾಷಾಭಾರತಿ ಪ್ರಾಧಿಕಾರ 

Leave a Reply

Your email address will not be published.