ನಾದಲೀಲೆ-9: ಮರೆಯಬಾರದ ಮಹನೀಯರು

-ಶ್ರೀಮತಿದೇವಿ ಸಾಲ್ಟ್ ಲೇಕ್ ಸಿಟಿ.

ಮೌಖಿಕ ಪರಂಪರೆಯಲ್ಲಿ ನೆಲೆಯಾಗಿದ್ದ ಹಿಂದೂಸ್ಥಾನಿ ಸಂಗೀತಕ್ಕೆ ಶಾಸ್ತ್ರೀಯವಾದ ಸ್ಥಾನಮಾನ ತಂದುಕೊಟ್ಟ ಕೀರ್ತಿ ಭಾತ್ಕಾಂಡೆ ಹಾಗೂ ಪಲುಸ್ಕರ್ ಅವರಿಗೆ ಸಲ್ಲುತ್ತದೆ. ಬಾಯಲ್ಲೇ ಇದ್ದ ಸಂಗೀತವನ್ನು ಬರಹ ರೂಪಕ್ಕಿಳಿಸಲು ಬೇಕಾದ ಸ್ವರಲಿಪಿ(notation) ಪದ್ಧತಿಯನ್ನು ನೀಡುವುದರ ಜೊತೆಗೆ ಸಂಗೀತಕ್ಕೆ ಒಂದು ಕ್ರಮಬದ್ಧವಾದ ಅಭ್ಯಾಸ ಕ್ರಮವನ್ನು, ವ್ಯವಸ್ಥಿತವಾದ ಚೌಕಟ್ಟನ್ನು ಹಾಕಿಕೊಟ್ಟರು.

ಈ ಇಬ್ಬರಲ್ಲೂ ಅನೇಕ ಭಿನ್ನಭಿಪ್ರಾಯಗಳು ಇದ್ದರೂ ಇಬ್ಬರ ಉದ್ದೇಶವೂ ಸಂಗೀತವನ್ನು, ಉಸಿರುಗಟ್ಟಿಸುವ ರಾಜಾಶ್ರಯದಿಂದ ಸಮಾಜದ ಮಧ್ಯಕ್ಕೆ ತರುವುದು ಹಾಗೂ ಸಂಗೀತದ ರಾಷ್ಟ್ರೀಕರಣ ಹಾಗೂ ಸಾಂಸ್ಥೀಕರಣವೇ ಆಗಿತ್ತು. ಭಾತ್ಕಾಂಡೆಯವರು ಸಂಗೀತವನ್ನು ಹೆಚ್ಚು ತರ್ಕಾಧಾರಿತವಾಗಿ ಹಾಗೂ ಜಾತ್ಯಾತೀತವಾಗಿ ನೋಡಬಯಸಿದರೆ, ಪಲುಸ್ಕರ್ ಅವರಿಗೆ ಸಂಗೀತವು ದೇವರನ್ನು ತಲುಪಲು ಇರುವ ದಾರಿ ಹಾಗೂ ಈ ದೇಶದ ಧಾರ್ಮಿಕತೆಯ ಕುರುಹಾಗಿತ್ತು.

bhatkhandeಇವರ ನಂತರ ಅದೆಷ್ಟೋ ವಿಚಾರವಂತ ಸಂಗೀತಗಾರರು ಬಂದರೂ, ಹಲವಾರು ಸಂಗೀತ ಗ್ರಂಥಗಳು ಬಂದರೂ ಅವೆಲ್ಲವೂ ಭಾತ್ಕಾಂಡೆ ಹಾಗೂ ಪಲುಸ್ಕರ್ ಅವರು ಹಾಕಿಕೊಟ್ಟ ಅಡಿಪಾಯದ ಮೇಲೆಯೇ ರೂಪಿತವಾದವುಗಳು. ಹಾಗೂ ಇಂದಿಗೂ ಧ್ರುಪದ್, ಖ್ಯಾಲ್, ಠುಮ್ರಿ, ಟಪ್ಪಾ ಮುಂತಾದ ಎಲ್ಲಾ ಸಮಗ್ರ ಸಂಗೀತಕ್ಕೆ ಮಾನದಂಡವಾಗಿರುವುದು ಇವರಿಬ್ಬರು ನೀಡಿದ ಸಿದ್ಧಾಂತ.

ಆಧುನಿಕ ಸಂಗೀತದ ಸೈದ್ಧಾಂತಿಕತೆಯ ಪ್ರತಿಮೆ ಪಂ.ವಿಷ್ಣು ನಾರಾಯಣ ಭಾತ್ಕಾಂಡೆ
ಹಿಂದೂಸ್ಥಾನಿ ಸಂಗೀತವನ್ನು ಸೈದ್ಧಾಂತಿಕ ದೃಷ್ಠಿಯಿಂದ ನೋಡಿದ ಮೊದಲ ವ್ಯಕ್ತಿ, ಭಾತ್ಕಾಂಡೆ ಅವರು ಆಧುನಿಕ ಸಂಗೀತದ ಮೊದಲ ಶಾಸ್ತ್ರ ಗ್ರಂಥದ ರಚನಾಕಾರರು. ಇವರು ಜನಿಸಿದ್ದು 1860ಆಗಸ್ಟ್ 10ರಂದು. ಮುಂಬೈಯಲ್ಲೇ ಹುಟ್ಟಿ ಬೆಳೆದ ಅವರ ತಮ್ಮ ಶಿಕ್ಷಣವನ್ನೂ ಅಲ್ಲಿಯೇ ಪಡೆದರು. ಕಾನೂನು ಪದವೀಧರರಾದ ಅವರು, ವಕೀಲರಾಗಿ ಸೇವೆ ನೀಡತೊಡಗಿದರು. ಭಾತ್ಕಾಂಡೆಯವರು ಧ್ರುಪದ್ ಶೈಲಿಯ ಗಾಯನವನ್ನು ರಾಜೋಬಾ ಅವರಿಂದ ಪಡೆದರು. ಆ ನಂತರ ಬೆಲಬಾಗ್‍ಕರ್, ಅಲಿ ಹುಸೇನ್ ಖಾನ್, ವಿಲಾಯತ್ ಹುಸೇನ್ ಖಾನ್ ಅವರ ಬಳಿಯೂ ಅಭ್ಯಾಸ ನಡೆಸಿದರು. ಮೊದಲಿನಿಂದಲೂ ಅವರಲ್ಲಿದ್ದ ಸೂಕ್ಷ್ಮ ಗ್ರಹಿಕೆ- ಜಿಜ್ನಾಸೆ-ಸಂಶ್ಲೇಷಣೆಗಳು ಅವರನ್ನು ಜಾಸ್ತಿ ಸಂಗೀತದ ಸಂಶೋಧನೆಯೆಡೆಗೆ ಕರೆದೊಯ್ಯಿತು. ದೇಶದೆಲ್ಲೆಡೆ ಸಂಚರಿಸಿ ಹಲವಾರು ಉಸ್ತಾದ್, ಪಂಡಿತರುಗಳನ್ನು ಸಂಧಿಸಿ ಸಂಗೀತದ ಬಗ್ಗೆ ಚರ್ಚೆ ನಡೆಸಿ, ಸಂಗೀತದ ಮೂಲಭೂತ ವ್ಯಾಕರಣವನ್ನು ದಾಖಲಿಸುವ ಕಾರ್ಯದಲ್ಲಿ ತೊಡಗಿದರು.

ಹಳೆಯ ಎಲ್ಲಾ ಪ್ರಮುಖ ಗ್ರಂಥಗಳ ಸಾದ್ಯಂತವಾದ ಅಧ್ಯಯನ ನಡೆಸಿ, ಅವುಗಳಲ್ಲಿನ ಸಂಗೀತದ ವಿಚಾರಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಸುಲಭವಾದ ಆಡುಭಾಷೆಯಲ್ಲಿ ಹೊರತಂದರು. ತಮ್ಮ ಜೀವನದುದ್ದಕ್ಕೂ ಸಂಗೀತಕ್ಕೆ ಗೌರವಾನ್ವಿತ ಸ್ಥಾನವೊಂದನ್ನು ತಂದುಕೊಡಲು ಹೋರಾಡಿದ ಭಾತ್ಕಾಂಡೆಯವರು, ತಾವು ಪತ್ನಿ ಹಾಗೂ ಮಗಳನ್ನು ಕಳೆದೊಕೊಂಡ ನಂತರ ವಕೀಲ ವೃತ್ತಿಯನ್ನು ಬಿಟ್ಟು ಸಂಗೀತದ ಕೆಲಸಕ್ಕೆ ಉಳಿದ ಬದುಕನ್ನು ಮೀಸಲಿಟ್ಟರು. ಚಾಲ್ತಿಯಲ್ಲಿದ್ದ ಹಿಂದೂಸ್ಥಾನಿ ಸಂಗೀತ ಪದ್ಧತಿಯ ಸ್ವರೂಪವನ್ನು ಕ್ರಮಬದ್ಧಗೊಳಿಸುವುದು ಹಾಗೂ ಅದರ ಆಧಾರದ ಮೇಲೆ ಸಂಘಟಿತವಾದ (co-ordinated) ಸಿದ್ಧಾಂತ ಹಾಗೂ ಗಾಯನದ ಪರಿಪಾಠವನ್ನು ರೂಪಿಸುವುದು ಅವರ ಏಕ ಮನಸ್ಸಿನ ಗುರಿಯಾಗಿತ್ತು.

ಅದಕ್ಕಾಗಿ ಅವರು ನಡೆಸಿದ ಆಲೋಚನಾ ಸರಣಿಯನ್ನು, ಸುಸಜ್ಜಿತವಾದ ಕೆಲಸದ ಮಾದರಿಗಳನ್ನು ಗಮನಿಸಬಹುದು.
• ಸಂಸ್ಕೃತದಲ್ಲಿದ್ದ ಹಳೆಯ ಗ್ರಂಥಗಳಾದ ‘ನಾಟ್ಯ ಶಾಸ್ತ್ರ’ ಹಾಗೂ ‘ಸಂಗೀತ ರತ್ನಾಕರ’, ‘ಸಂಗೀತ ಪಾರಿಜಾತ’ ಎಲ್ಲವುಗಳ ಅಧ್ಯಯನ ಮಾಡಿ, ಅವುಗಳಲ್ಲಿನ ‘ರಾಗ-ರಾಗಿಣಿ-ಪುತ್ರ’ ರಾಗಗಳನ್ನು 10ಥಾಟ್ ಗಳಲ್ಲಿ ವಿಂಗಡಿಸಿದರು. ಇಂದಿಗೂ ಸರ್ವಸಮ್ಮತವಾಗಿರುವ ಈ ಥಾಟ್ ವರ್ಗೀಕರಣ, ಕರ್ನಾಟಕಿ ಪದ್ಧತಿಯ ಮೇಳಕರ್ತವನ್ನು ಹೋಲುತ್ತದೆ.

• ಹಳೆಯ ಸಂಗೀತ ಗ್ರಂಥಗಳು ಹೇಳುವ ಬಹುತೇಕ ಅಂಶಗಳು ಪ್ರಚಲಿತದಲ್ಲಿರುವ ಸಂಗೀತದೊಂದಿಗೆ ಹೊಂದಿಕೆಯಾಗದ ಕಾರಣ, ಆಧುನಿಕ ಸಂಗೀತಕ್ಕೆ ಬೇಕಾದ, ಪ್ರಮಾಣಬದ್ಧ ವಾದ ಹೊಸ ಶಾಸ್ತ್ರ ಗ್ರಂಥವನ್ನು ಬರೆಅ ಹೊರಟರು. ಈ ನಿಟ್ಟಿನಲ್ಲಿ ಅವರು ಬರೆದ ಮೊದಲ ಗ್ರಂಥ, ಸಂಸ್ಕೃತದಲ್ಲಿ ರಚಿಸಿದ ‘ಶ್ರೀಮಲ್ಲಕ್ಷ್ಯ ಸಂಗೀತಂ’. ಚತುರ ಪಂಡಿತ ಎಂಬ ಉಪನಾಮದಲ್ಲಿ ಬರೆದ ಈ ಗ್ರಂಥವನ್ನು ನಂತರ ಅವರ ಮರಾಠಿಯಲ್ಲಿ ‘ಹಿಂದೂಸ್ಥಾನಿ ಸಂಗೀತ ಪದ್ಧತಿ’ ಎಂಬ ಹೆಸರಿನಲ್ಲಿ 4ಭಾಗಗಳಲ್ಲಿ ಪ್ರಕಟಿಸಿದರು. ಇದು ಗುರು-ಶಿಷ್ಯರ ನಡುವಿನ ಸಂಭಾಷಣೆಯ ರೂಪದಲ್ಲಿದ್ದು, ಇಂದಿಗೂ ಹಿಂದೂಸ್ಥಾನಿ ಸಂಗೀತದಲ್ಲಿನ ಪ್ರಮಾಣ ಗ್ರಂಥವಾಗಿದೆ.

• ಸಂಗೀತದ ದಾಖಲೀಕರಣಕ್ಕೆ ಸ್ವರಲಿಪಿ ಪದ್ಧತಿಯೊಂದರ ಅಗತ್ಯವನ್ನು ಮನಗಂಡು, ಅದನ್ನು ರೂಪಿಸಿದ ಮೊದಲ ವ್ಯಕ್ತಿ ಭಾತ್ಕಾಂಡೆ. ಕರ್ನಾಟಕಿ ಸಂಗೀತದ ಹಾಗೂ ಪಾಶ್ಚಿಮಾತ್ಯ ಸಂಗೀತದ ನೊಟೇಷನ್ ಪದ್ಧತಿಯ ಅಧ್ಯಯನ ಮಾಡಿ ಅತ್ಯಂತ ಸರಳವೂ ಆದರೆ ಸಮಗ್ರವೂ ಆದ ಸ್ವರಲಿಪಿಯೊಂದನ್ನು ರೂಪಿಸಿದರು. ಪಲುಸ್ಕರ್ ಅವರೂ ಸ್ವರಲಿಪಿ ಪದ್ಧತಿಯೊಂದನ್ನು ರೂಪಿಸಿದ್ದರೂ ಇಂದು ಹಿಂದೂಸ್ಥಾನಿ ಸಂಗೀತದಲ್ಲಿ ಬಳಕೆಯಲ್ಲಿರುವ ಏಕೈಕ ಸ್ವರಲಿಪಿ, ಭಾತ್ಕಾಂಡೆಯವರದ್ದು.

• ಸಂಗೀತದ ಕ್ಷೇತ್ರದಲ್ಲಿ ಭಾತ್ಕಾಂಡೆಯವರು ಇಟ್ಟ ಮಹತ್ವದ ಹೆಜ್ಜೆಯೆಂದರೆ ‘ಕ್ರಮಿಕ ಪುಸ್ತಕ ಮಾಲಿಕಾ’ ಪುಸ್ತಕ ಸರಣಿ. ದೇಶದೆಲ್ಲೆಡೆ ಸಂಚರಿಸಿ, ಹಲವು ಘರಾಣೆಯ ಬಂದಿಶ್ ಗಳನ್ನು ಒಟ್ಟು ಮಾಡಿ, ಸುಮಾರು 1,800 ಬಂದಿಶ್ ಗಳನ್ನು ಲಿಪಿಬದ್ಧಗೊಳಿಸಿ, 6 ಪುಸ್ತಕಗಳಲ್ಲಿ ಪ್ರಕಟಿಸಿದರು. ಇದು ಮರಾಠಿ ಹಾಗೂ ಹಿಂದಿ ಈ ಎರಡೂ ಭಾಷೆಗಳಲ್ಲಿ ಪ್ರಕಟವಾಯಿತು. ಭಾತ್ಕಾಂಡೆಯವರ ಕಾಲದಲ್ಲಿ ಬಂದಿಶ್ ಎಂಬುದು ‘ಘರಾಣೆಯ ಉಸ್ತಾದ್’ಗಳ ವಶದಲ್ಲಿರುವ ಆಸ್ತಿಯಾಗಿತ್ತು. ಅವರು ತಮ್ಮ ಮಕ್ಕಳಲ್ಲದೇ ಮತ್ಯಾರಿಗೂ ಅವುಗಳನ್ನು ನೀಡಲು ತಯಾರಿರುತ್ತಿರಲಿಲ್ಲ. ಆದರೆ ಸಾಧಿಸಿಯೇ ತೀರುವ ಛಲವುಳ್ಳ ಭಾತ್ಕಾಂಡೆಯವರು ಏನೇನೋ ಕಸರತ್ತುಗಳನ್ನು ಮಾಡಿ, ಎಷ್ಟೋ ಬಾರಿ ಕದ್ದು ಕೂತು, ಕೇಳಿ, ಲಿಪಿಬದ್ಧಗೊಳಿಸಿ ಅವುಗಳನ್ನು ಎಲ್ಲರಿಗೂ ದೊರಕುವಂತೆ ಮಾಡಿದ್ದು ಅಸಾಧಾರಣವಾದ ಕೆಲಸ. ಜೊತೆಗೆ ರಾಗಗಳ ವ್ಯಾಕರಣವನ್ನು ತಿಳಿಸುವ, ‘ರಾಗನಕ್ಷೆ’ಯ ರೂಪದ ಹಲವಾರು ಬಂದಿಶ್ ಗಳನ್ನು ತಾವೇ ರಚಿಸಿ, ಈ ಗ್ರಂಥದಲ್ಲಿ ಸಂಕಲಿಸಿದರು.

Vishnu• ಮೊದಲ ಬಾರಿಗೆ ‘ಅಖಿಲ ಭಾರತೀಯ ಮಟ್ಟದಲ್ಲಿ ಸಂಗೀತದ ಚರ್ಚಾಗೋಷ್ಠಿ’ಗಳನ್ನು ಏರ್ಪಡಿಸಿದವರೂ ಭಾತ್ಕಾಂಡೆಯವರು. ಸಂಗೀತದಲ್ಲೂ ಚರ್ಚೆಗೆ, ವಿಚಾರ ವಿನಿಮಯಗಳಿಗೆ ಅವಕಾಶವಿದೆ ಎಂಬುದನ್ನು ಇದು ತೋರಿಸಿಕೊಡುವುದರ ಜೊತೆಗೆ ಆಲೋಚನಾವಂತ ಸಂಗೀತಗಾರರ ಹೊಸ ಪರಂಪರೆಗೆ ನಾಂದಿ ಹಾಡಿತು. ಕರ್ನಾಟಕಿ, ಹಿಂದೂಸ್ಥಾನಿ ಮಾತ್ರವಲ್ಲದೇ ಪಾಶ್ಚಾತ್ಯ ಸಂಗೀತ ವಿದ್ವಾಂಸರೂ ಈ ಚರ್ಚೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

• ಅವರು ಬರೆದ ಇತರ ಪುಸ್ತಕಗಳು, ‘ಸ್ವರ ಮಾಲಿಕಾ’, ‘ಅಭಿನವ ರಾಗ ಮಂಜರಿ’, ‘ಅಭಿನವ ತಾಲ ಮಂಜರಿ’, 15,16,17,18ನೇ ಶತಮಾನದ ಸಂಗೀತ ಪದ್ಧತಿಯ ಬಗ್ಗಿನ ತುಲನಾತ್ಮಕ ಅಧ್ಯಯನ ಮುಂತಾದವುಗಳು. ಅದಲ್ಲದೇ ಹಳೆಯ ಗ್ರಂಥಗಳ ಮರು ಮುದ್ರಣ ಹಾಗೂ ಅವುಗಳ ಬಗ್ಗೇ ತಾವು ಬರೆದ ಟಿಪ್ಪಣಿಗಳನ್ನೂ ಪ್ರಕಟಿಸಿದರು.

• ಸಂಗೀತದ ವ್ಯವಸ್ಥಿತ ಶಿಕ್ಷಣಕ್ಕೆ ಸರಿಯಾದ ಅಭ್ಯಾಸಕ್ರಮ ಹಾಗೂ ಸಂಗೀತ ಸಂಸ್ಥೆಗಳು ಬೇಕೆಂದು ಅರಿತು ಶಾಲಾ-ಕಾಲೇಜುಗಳ ಸ್ಥಾಪನೆಗೆ ತೊಡಗಿದರು. ಪಲುಸ್ಕರ್ ಅವರು ಆಗಲೇ ಈ ನಿಟ್ಟಿನಲ್ಲಿ ಯೋಚಿಸಿ, ‘ಗಂಧರ್ವ ಮಹಾವಿದ್ಯಾಲಯ’ವನ್ನು ಆರಂಭಿಸಿ ಬಿಟ್ಟಿದ್ದರು. ಭಾತ್ಕಾಂಡೆಯವರು ಮೊದಲಿಗೆ ಗ್ವಾಲಿಯರ್ ನ ಮಹಾರಾಜರ ನೆರವಿನೊಂದಿಗೆ ಗ್ವಾಲಿಯರ್ ನಲ್ಲಿ ‘ಮಾಧವ ಸಂಗೀತ ವಿದ್ಯಾಲಯ’ವನ್ನು ಸ್ಥಾಪಿಸಿದರು. 1926ರಲ್ಲಿ ಸ್ನೇಹಿತ ರಾಯ್ ಉಮಾಕಾಂತ ಬಾಲಿ ಅವರೊಂದಿಗೆ ಸೇರಿ ಲಖ್ನೋದಲ್ಲಿ ‘ಮಾರಿಸ್ ಕಾಲೇಜ’ನ್ನು ಸ್ಥಾಪಿಸಿದರು. ಇದೇ ಮುಂದೆ ‘ಭಾತ್ಕಾಂಡೆ ಸಂಗೀತ ವಿಶ್ವವಿದ್ಯಾಲಯ’ವೆಂಬ ಹೆಸರು ಪಡೆಯಿತು.

• ಸಂಗೀತದಲ್ಲಿ ಶಿಸ್ತು, ನಿಯಮ, ವ್ಯವಸ್ಥೆ, ಚೌಕಟ್ಟು, ಶಾಸ್ತ್ರ ಇವೆಲ್ಲವುಗಳನ್ನು ಪರಿಚಯಿಸಿದವರೇ ಭಾತ್ಕಾಂಡೆಯವರು. ಮುಂದೆ ಈ ಪರಂಪರೆ ಅವರ ಅಚ್ಚುಮೆಚ್ಚಿನ ಶಿಷ್ಯರಾದ ಶ್ರೀಕೃಷ್ಣ ರಾತಾಂಜನಕರ್ ಅವರ ಮೂಲಕ ಮುಂದಿನ ಪೀಳಿಗೆಗೆ ಹರಿಯಿತು. ರಾತಾಂಜನಕರ್ ಅವರು ಮಾರಿಸ್ ಕಾಲೇಜಿನ ಪ್ರಾಂಶುಪಾಲರಾಗಿ, ಭಾತ್ಕಾಂಡೆಯವದು ಮಾಡಬಯಸಿ, ಇನ್ನೂ ಕಾರ್ಯಗತವಾಗದೇ ಉಳಿದಿದ್ದ ಹಲವು ಕಾರ್ಯಗಳನ್ನು ಪೂರ್ಣಗೊಳಿಸಿದರು.
ಭಾತ್ಕಾಂಡೆಯವರ ಕಾರ್ಯದ ಹಿಂದಿನ ಬಹುದೊಡ್ಡ ಗುರಿಯಾಗಿ ಇದ್ದದ್ದು, ಸಂಗೀತವನ್ನು ರಾಜಾಶ್ರಯದ ಹಂಗಿನಿಂದ ಬಿಡಿಸಿ, ಸಮಾಜದ ಮಧ್ಯಕ್ಕೆ ತರುವುದರ ಜೊತೆ, ವಿಚಾರವಂತರಲ್ಲದ ಕೇವಲ ಚಮತ್ಕಾರಯುತ ಗಂಟಲಿನಿಂದ ಸಂಗೀತವನ್ನು ತಮ್ಮ ಹಿಡಿತದೊಳಗೆ ಇಟ್ಟುಕೊಂಡಿದ್ದ ಉಸ್ತಾದರುಗಳ ‘ಘರಾಣೆ’ಯ ಬಂಧನದಿಂದ ಹೊರಗೆ ತರುವುದಾಗಿತ್ತು. ಇದಕ್ಕಾಗಿ ಅವರು ಹಗಲಿರುಳು ದುಡಿದರು. 1933ರಲ್ಲಿ ಪಾಶ್ರ್ವವಾಯುವಿಗೆ ತುತ್ತಾದ ಭಾತ್ಕಾಂಡೆಯವರು 3 ವರ್ಷಗಳ ಕಾಲ ಓಡಾಡಲಾಗದ ಸ್ಥಿತಿಯಲ್ಲಿದ್ದು, 1936 ಸೆಪ್ಟೆಂಬರ್ 19ರಂದು ನಿಧನರಾದರು.

 ಸಂತ ಸಂಗೀತಗಾರ ಪಂ.ವಿಷ್ಣು ದಿಗಂಬರ್ ಪಲುಸ್ಕರ್
ಆಧುನಿಕ ಹಿಂದೂಸ್ಥಾನಿ ಖ್ಯಾಲ್ ಸಂಗೀತದ ಮತ್ತೊಬ್ಬ ಮೂಲಪುರುಷ ಪಲುಸ್ಕರ್ ಅವರು ಜನಿಸಿದ್ದು ಹರಿದಾಸರ ಕುಟುಂಬದಲ್ಲಿ. ಆದ್ದರಿಂದ ಸಂಗೀತವೆಂಬುದು ಅವರಿಗೆ ಭಗವಂತನ ನಾಮಸ್ಮರಣೆ ಮಾಡುವ ಪವಿತ್ರವಾದ ಸಾಧನವಾಗಿತ್ತು. ಸಂಗೀತದಲ್ಲಿದ್ದ ದೇವದಾಸಿಯರ ಹಾಗೂ ಮುಸ್ಲಿಂ ಸಂಗೀತಗಾರರ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದು ಅವರಿಗೆ ಕಷ್ಟವಾಯಿತು. ಆದ್ದರಿಂದ ಅವರು ಹೊರಟದ್ದು ಸಂಗೀತದ ‘ಶುದ್ಧೀಕರಣ’ದೆಡೆಗೆ. ಘರಾಣಾ ಉಸ್ತಾದ್‍ಗಳ ವಶದಲ್ಲಿದ್ದ ಸಂಗೀತವನ್ನು ಬಿಡುಗಡೆಗೊಳಿಸಿ, ಅದಕ್ಕಂಟಿದ ಐಹಿಕಕೆಯನ್ನು ದೂರ ಮಾಡಿ, ಧಾರ್ಮಿಕತೆಯನ್ನು ಸಂಗೀತದೊಂದಿಗೆ ಬೆಸೆದವರು ಪಲುಸ್ಕರ್.

Vishnu_Digambar_Paluskarಪಲುಸ್ಕರ್ ಅವರು ಜನಿಸಿದ್ದು 1872 ಆಗಸ್ಟ್ 18ರಂದು, ಸಾಂಗ್ಲಿಯ ಕುರುಂದವಾಡದಲ್ಲಿ. ಅವರ ತಂದೆ ಶ್ರೇಷ್ಠ ಕೀರ್ತನಾಕಾರರಾಗಿದ್ದರು. ಪಲುಸ್ಕರ್ ಅವರು 15ವರ್ಷದವರಿದ್ದಾಗ ದತ್ತ ಜಯಂತಿ ಯಂದು, ಮಕ್ಕಳೆಲ್ಲರೂ ಸೇರಿ ಸಿಡಿಸುತ್ತಿದ್ದ ಸಿಡಿಮದ್ದು ಕಣ್ಣಿಗೆ ಹಾರಿ, ದೃಷ್ಠಿಯನ್ನು ಕಳೆದುಕೊಂಡರು. ಇದರಿಂದಾಗಿ ಶಾಲೆಯ ಶಿಕ್ಷಣ ಪಡೆಯುವುದು ಇವರಿಗೆ ಕಷ್ಟವಾಯಿತು. ಅವರ ತಂದೆ, ಮಿರಜ್ ನ ರಾಜರ ನೆರವು ಪಡೆದು, ಬಾಲಕೃಷ್ಣಬುವಾ ಈಚಲಕರಂಜೀಕರ್ ಅವರ ಬಳಿ ಸಂಗೀತಾಭ್ಯಾಸ ಮಾಡುವ ವವಸ್ಥೆ ಮಾಡಿದರು. ಸುಮಾರು 12ವರ್ಷಗಳ ಕಾಲ ಅಭ್ಯಾಸ ಮಾಡಿದ ಪಲುಸ್ಕರ್ ಅವರು ಮುಂದೆ ದೇಶದಲ್ಲಿನ ಸಂಗೀತದ ಸ್ಥಿತಿಗತಿಯನ್ನು ತಿಳಿಯುವ ಉದ್ದೇಶದಿಂದ ಪರ್ಯಟನೆಗೆ ಮುಂದಾದರು. ಯಾವುದೇ ರಾಜರ ಆಶ್ರಯದಲ್ಲಿರುವುದು ಅವರಿಗೆ ಇಷ್ಟವಿರಲಿಲ್ಲ. ಗ್ವಾಲಿಯರ್, ಮಥುರಾ, ಡೆಲ್ಲಿ, ಅಮೃತಸರ, ಲಾಹೋರ್, ರಾವಲ್ಪಿಂಡಿ, ಮುಲ್ತಾನ್, ಜಮ್ಮು, ಶ್ರೀನಗರ, ಜಲಂಧರ್ ಎಲ್ಲಾ ಕಡೆ ಪ್ರಯಾಣ ಮಾಡಿದರು. ಬೃಜ ಭಾಷೆ ಕಲಿತರು. ರಾಜರ ಆಸ್ಥಾನ, ದೇವಸ್ಥಾನ ಬಿಟ್ಟು ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯೊಂದರಲ್ಲಿ ಹಾಡಿದವರೆಂದರೆ ಪಲುಸ್ಕರ್ ಅವರು ಎಂಬುದಾಗಿ ತಿಳಿದು ಬರುತ್ತದೆ.
ಸಂಗೀತವನ್ನು ‘ಶೃಂಗಾರ’ದ ವಾತಾವರಣದಿಂದ ‘ಭಕ್ತಿ’ಯೆಡೆಗೆ ಕರೆದೊಯ್ಯುವುದರ ಜೊತೆಗೆ, ಸಂಗೀತವನ್ನು ಬಯಸಿದ ಎಲ್ಲರಿಗೆ ದೊರೆಯವಂತೆ ಮಾಡಲು ಸಂಸ್ಥೆಯನ್ನು ಸ್ಥಾಪಿಸುವುದು ಅವರ ಜೀವನದ ಬಹುದೊಡ್ಡ ಗುರಿಯಾಗಿತ್ತು.
ಅದಕ್ಕಾಗಿ ಅವರು ಮಾಡಿದ ಕಾರ್ಯಗಳು ಅನೇಕ.

• ಪಲುಸ್ಕರ್ ಅವರ ಮಟ್ಟಿಗೆ ಸಂಗೀತವೆಂಬುದು ‘ವೇದ’ಗಳಿಂದ ಬಂದದ್ದು. ಅವರಿಗೆ ಪ್ರಾಚೀನ ಸಂಗೀತ ಗ್ರಂಥಗಳ ಬಗ್ಗೆ ಅಪಾರವಾದ ಶೃದ್ಧೆಯಿತ್ತು. ಆದ್ದರಿಂದ ತಮ್ಮ ಸ್ವರಲಿಪಿ ಪದ್ಧತಿಗೆ ಬೇಕಾದ ಚಿನ್ಹೆಗಳನ್ನು ಅವರು ಹಳೆಯ ಗ್ರಂಥಗಳಿಂದಲೇ ಪಡೆದರು. ಪಾಶ್ಚಿಮಾತ್ಯ ಸಂಗೀತದ ಸ್ವರಲಿಪಿಯನ್ನು ಅನುಸರಿಸುವುದಕ್ಕೆ ಅವರ ವಿರೋಧವಿತ್ತು. ಪಲುಸ್ಕರ್ ತಮ್ಮ ಎಲ್ಲಾ ಪುಸ್ತಕಗಳಲ್ಲಿ, ತಾವು ಕಂಡುಹಿಡಿದ ಸ್ವರಲಿಪಿಯನ್ನೇ ಬಳಸಿದ್ದಾರೆ.

• ಸಂಗೀತದ ಶಿಕ್ಷಣಕ್ಕಾಗಿ ಸಂಸ್ಥೆಯನ್ನು ಸ್ಥಾಪಿಸುವುದು ಅವರು ಕಂಡ ಬಹುದೊಡ್ಡ ಕನಸಾಗಿತ್ತು. 1901ರಲ್ಲಿ ಲಾಹೋರ್‍ನಲ್ಲಿ ಅವರು ‘ಗಂಧರ್ವ ಮಹಾವಿದ್ಯಾಲಯ’ವನ್ನು ಸ್ಥಾಪಿಸಿದರು. ಇದು ಸಂಗೀತ ಕ್ಷೇತ್ರದ ಮಹತ್ವದ ಮೈಲಿಗಲ್ಲು. ಇಲ್ಲಿ ಅಭ್ಯಾಸಕ್ಕೆ ಬೇಕಾದ ನಿಗದಿತವಾದ ಪಾಠಪಟ್ಟಿಯನ್ನು ಗೊತ್ತುಮಾಡಿ, ವಿದ್ಯಾರ್ಥಿಗಳನ್ನು ಹಲವು ಗುಂಪುಗಳಲ್ಲಿ ವಿಂಗಡಿಸಿ, ಸಂಗೀತ ಶಿಕ್ಷಣ ನೀಡಲಾರಂಭಿಸಿದರು. ಸ್ವಲ್ಪ ಸಮಯದಲ್ಲೇ ಮುಂಬೈಯಲ್ಲೂ ಒಂದು ಶಾಖೆಯನ್ನು ಆರಂಭಿಸಿ, ಸ್ವಂತ ಕಟ್ಟಡಗಳನ್ನು ಕಟ್ಟಿ ಸಂಸ್ಥೆಯನ್ನು ಬೆಳೆಸಿದರು.

ಮುಂದೆ ಈ ಸಂಸ್ಥೆಯ ಶಾಖಾ ಸಂಸ್ಥೆಗಳು ದೇಶದ ಎಲ್ಲಾ ಕಡೆ ಅವರ ಶಿಷ್ಯರಿಂದ ನಿರ್ಮಾಣಗೊಂಡು, ಇಂದಿಗೂ ದೇಶದ ಏಕೈಕ ಬಹುದೊಡ್ಡ ಸಂಸ್ಥೆಯಾಗಿ ಸಂಗೀತ ಸೇವೆ ಸಲ್ಲಿಸುತ್ತಿವೆ. ಈಗ ಇದರ ಮುಖ್ಯ ಕಛೇರಿ ಮಿರಜ್ ಗೆ ವರ್ಗಾವಣೆಗೊಂಡಿದೆ. ಸಂಗೀತ ಪರೀಕ್ಷೆ, ಕಛೇರಿಗಳು, ವಿಷಯಾಧಾರಿತ ಸಂಗೀತ ಕಾರ್ಯಕ್ರಮಗಳು, ಪುಸ್ತಕ ಪ್ರಕಟಣೆ ಹೀಗೆ ಹಲವು ರೀತಿಯಲ್ಲಿ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ರೀತಿಯ ರಾಜಾಶ್ರಯ ಹಾಗೂ ಸರಕಾರದ ಸಹಾಯವೂ ಇಲ್ಲದೇ, ಸಂಪೂರ್ಣವಾಗಿ ಜನರ ಬೆಂಬಲದಿಂದ ನಡೆದ ಏಕೈಕ ಸಂಸ್ಥೆ ಇದು. ಈ ಸಂಸ್ಥೆಯಿಂದಾಗಿ ಇದರಿಂದಾಗಿ ಪಲುಸ್ಕರ್ ಅವರು ಸಾಮಾನ್ಯ ಜನರ ಒಲವನ್ನು ದಂಡಿಯಾಗಿ ಪಡೆದರು.

• ಸಂಸ್ಥೆಯ ಮೂಲಕ ಸಂಗೀತ ಶಿಕ್ಷಣ ಪಡೆಯುವುದು ಸಾಧ್ಯವಾದದ್ದರಿಂದ, ಹಾಗೂ ಪುಸ್ತಕಗಳಲ್ಲಿ ಹಾಡುವ ಬಂದಿಶ್ ಗಳು ದೊರೆತದ್ದರಿಂದ ಹೆಚ್ಚು ಹೆಚ್ಚು ಜನ ಸಂಗೀತದೆಡೆಗೆ ಆಕರ್ಷಿತರಾದರು. ಕಲಿಕೆಯ ಕ್ರಮ ಸರಳವಾಯಿತು. ಘರಾಣೆಯ ಸಂಗೀತಗಾರರ ಬಳಿಯೇ ಹೋಗಿ ಗುರುಸೇವೆ ಎಂಬ ಹೆಸರಿನಲ್ಲಿ ಹಗಲು-ರಾತ್ರಿ ಕೆಲಸ ಮಾಡಿಯೂ ಸಂಗೀತವನ್ನು ಪಡೆಯಲು ಹೆಣಗಾಡಬೇಕಾದ ಕಷ್ಟ ತಪ್ಪಿತು.

• ಎಲ್ಲಕ್ಕಿಂತ ಮುಖ್ಯವಾಗಿ ಪಲುಸ್ಕರ್ ಅವರು ಸಂಗೀತವನ್ನು ಧಾರ್ಮಿಕತೆಯೆಡೆಗೆ ತಂದದ್ದರಿಂದ, ಮರ್ಯಾದೆಗೆ ಹೆದರಿ ಕುಳಿತ ಸ್ತ್ರೀಯರೆಲ್ಲರೂ ಸಂಗೀತ ಕಲಿಯುವಂತಾಯ್ತು. ಅಲ್ಲಿಯವರೆಗೆ ‘ಬಾಯಿ’ಮನೆತನದವರ ಹಾಗೂ ಮುಸ್ಲಿಂ ಗಾಯಕರ ಬಳಿಯೇ ಕಲಿಯಬೇಕಾಗಿದ್ದ ವಿಚಾರ ಈಗ ಸಂಸ್ಥೆಯಲ್ಲಿ ಕಲಿಯಲು ದೊರಕಿದ ಕಾರಣ ಸ್ತ್ರೀಯರು ಜಾಸ್ತಿ ಜಾಸ್ತಿ ಸಂಖ್ಯೆಯಲ್ಲಿ ಸಂಗೀತ ಕಲಿಯಲಾರಂಭಿಸಿದರು, ಸಂಗೀತ ಕ್ಷೇತ್ರಕ್ಕೆ ಸ್ತ್ರೀಯರ ಪ್ರವೇಶವಾಯಿತು.

• ಪಲುಸ್ಕರ್ ಅವರು ಅನೇಕ ಪುಸ್ತಕಗಳನ್ನು ಸಂಗೀತದ ಬಗ್ಗೆ ಬರೆದಿದ್ದಾರೆ. ಅವುಗಳಲ್ಲಿ ‘ಸಂಗೀತ ಬಾಲ ಪ್ರಕಾಶ’ ಎಂಬ 3 ಭಾಗಗಳಲ್ಲಿ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಬರೆದ ಪುಸ್ತಕಗಳೊಂದಿಗೆ, ಖ್ಯಾಲ್ ಗಾಯನದಲ್ಲಿ ಬಳಸುವ ರಾಗಗಳ ಬಗ್ಗೆ 18 ಭಾಗಗಳಲ್ಲಿ ಬರೆದ ಪುಸ್ತಕಗಳೂ ಇವೆ.
• ಭಾತ್ಕಾಂಡೆ ಅವರಂತೇ ಪಲುಸ್ಕರ್ ಅವರು, ತಮ್ಮ ‘ಗಂಧರ್ವ ಮಹಾವಿದ್ಯಾಲಯ’ದಲ್ಲೇ ಅಖಿಲ ಭಾರತ ಮಟ್ಟದಲ್ಲಿ ಸಂಗೀತದ ಕಾನ್ಫರೆನ್ಸ್ ಗಳನ್ನು ಆಯೋಜಿಸಿದ್ದಾರೆ. ಇದರಿಂದ ಸಂಗೀತದ ಕುರಿತ ಚಿಂತನೆ ಸಮಾಜದಲ್ಲಿ ಹೆಚ್ಚಿತು.

• 1922ರಲ್ಲಿ ನಾಸಿಕ್ ನ ಪಂಚವಟಿಯಲ್ಲಿ ‘ರಾಮನಾಮ ಆಧಾರ ಆಶ್ರಮ’ವನ್ನು ಸ್ಥಾಪಿಸಿ, ತಮ್ಮ ಧಾರ್ಮಿಕತೆಗೆ ಮೂರ್ತರೂಪ ಕೊಟ್ಟರು. ಬಾಲ್ಯದಿಂದ ದತ್ತಾತ್ರೇಯನ ಭಕ್ತನಾಗಿದ್ದ ಪಲುಸ್ಕರ್ ಅವರು ಆ ನಂತರ ರಾಮನ ಧ್ಯಾನವನ್ನೂ ನೆಚ್ಚಿಕೊಂಡರು. ತುಲಸೀದಾಸರು ರಚಿಸಿದ ರಾಮನ ಭಜನೆಗಳನ್ನು ಪರವಶರಾಗಿ ಹಾಡುತ್ತಿದ್ದರು. ‘ರಘುಪತಿ ರಾಘವ ರಾಜಾರಾಮ್’ ಭಜನೆಯನ್ನು ಮೊದಲ ಬಾರಿಗೆ ಹಾಡಿದವರೂ ಅವರೇ.

• ಪಲುಸ್ಕರ್ ಅವರ ಶಿಷ್ಯರಾದ ಅವರ ಮಗ ಡಿ.ವಿ.ಪಲುಸ್ಕರ್, ವಿನಾಯಕರಾವ್ ಪಟವರ್ಧನ್, ನಾರಯಣರಾವ್ ಖರೆ, ಓಂಕಾರನಾಥ್ ಠಾಕೂರ್, ಶಂಕರರಾವ್ ವ್ಯಾಸ್, ಬಿ.ಆರ್.ದೇವಧರ್ ಇವರೆಲ್ಲರೂ ಗುರುಗಳ ಸಮರ್ಥ ರೂವಾರಿಗಳಾಗಿ ಅವರ ಬಯಕೆಯನ್ನು ನನಸಾಗಿಸಿದ್ದಾರೆ.
ಶ್ರೀ ಎಸ್.ಬಿ.ನಯಂಪಳ್ಳಿ ಅವರು 1971ರಲ್ಲಿ ರೂಪಿಸಿದ ಪಲುಸ್ಕರ್ ಅವರ ಬಗ್ಗಿನ ಸಾಕ್ಷಿಚಿತ್ರ, ಪಲುಸ್ಕರ್ ಅವರ ಸಂತನ ವ್ಯಕ್ತಿತ್ವವನ್ನು, ಸಂಗೀತಕ್ಕೆ ಒಂದು ಆದರಣೀಯ ಸ್ಥಾನವನ್ನು ತಂದುಕೊಡಲು ಅವರು ‘ಸರ್ವಸಂಗ ಪರಿತ್ಯಾಗಿ’ಗಳಾಗಿ, ಕೇಸರಿ ಬಟ್ಟೆ ಉಟ್ಟು, ಭಜನೆಗಳನ್ನು ಹಾಡುತ್ತಾ ಸಾಗಿದ ಪರಿಯನ್ನು ಮನೋಜ್ನವಾಗಿ ತೋರಿಸುತ್ತದೆ.

ಮುಂಬೈಯ ಗಂಧರ್ವ ಮಹಾವಿದ್ಯಾಲಯದ ಹೊಸ ಕಟ್ಟಡ, ಸಾಲದ ಕಾರಣದಿಂದ ಹರಾಜಾದಾಗ, ಪಲುಸ್ಕರ್ ಅವರು ಜೋಳಿಗೆ ಹಿಡಿದು, ಊರಿಂದೂರಿಗೆ ಹೋಗಿ, ಭಜನೆಗಳನ್ನು ಹಾಡುತ್ತಾ, ಹಣ ಸಂಗ್ರಹ ಮಾಡಲು ಹೊರಟವರು. ಸತತ ಓಡಾಟದಿಂದ ಪಲುಸ್ಕರ್ ಅವರು ಆರೋಗ್ಯವನ್ನು ಕಳೆದುಕೊಂಡು ಕೊನೆಗಾಲದಲ್ಲಿ, ಮರಳಿ ತಮ್ಮ ಊರಾದ ಮಿರಜನ್ನು ಸೇರಿ, 1931 ಆಗಸ್ಟ್ 21ರಂದು ನಿಧನರಾದರು. ಪಲುಸ್ಕರ್ ಅವರ ಜೀವನವೆಂಬುದು ದೊಡ್ಡದಾದ ಆದರ್ಶ, ಅದನ್ನು ಈಡೇರಿಸಲು ಬೇಕಾದ ಛಲ- ನಿಸ್ವಾರ್ಥತೆ, ಹಾಗೂ ದೇವರನ್ನು ಸೇರುವ ಪರಮ ಗುರಿಯಿಂದ ಕೂಡಿದ್ದಾಗಿತ್ತು.

ಮುಂದಿನ ದಿನಗಳಲ್ಲಿ, ಭಾತ್ಕಾಂಡೆಯವರು ತಮ್ಮ ಅತಿಯಾದ ವಿಚಾರವಾದದಿಂದ ಹಾಗೂ ಪಲುಸ್ಕರ್ ಅವರು ತಮ್ಮ ಧಾರ್ಮಿಕತೆಯ ವ್ಯಾಪ್ತಿಯಿಂದ ಆಚೆ ಹೋಗದ ಸಂಗೀತದಿಂದ ವ್ಯಾಪಕವಾದ ಟೀಕೆಗೂ ಒಳಗಾದರು. ಆ ಕಾಲಘಟ್ಟದಲ್ಲಿ ‘ಮದ್ಯ, ಪಾನ್, ಹಾಗೂ ಹೂವಿ’ನೊಳಗೆ ಬಂಧಿಯಾದ ಸಂಗೀತವನ್ನು ಶುಚಿ ಮಾಡುವ ಭರದಲ್ಲಿ ಅವರು ಕೈಗೊಂಡ ಕಾರ್ಯ, ಕಾಲಾಂತರದಲ್ಲಿ ಮುಸ್ಲಿಂ ಗಾಯಕರನ್ನೇ ಸಂಗೀತದಿಂದ ದೂರ ಉಳಿಯುವಂತೆ ಮಾಡಿತು, ಎಂದು ಜಾನಕಿ ಬಖಲೆ ಅವರು ತಮ್ಮ ‘Two men and music’ ’ ಎಂಬ ಪುಸ್ತಕದಲ್ಲಿ ಅಭಿಪ್ರಾಯ ಪಡುತ್ತಾರೆ.

ಆದರೆ, ಇದರ ಜೊತೆಗೆ ಸಂಗೀತದಲ್ಲಿ ವಿಚಾರ ಮಾಡಿ ಹಾಡುವ ಹೊಸ ಪರಂಪರೆಯೊಂದನ್ನು ಭಾತ್ಕಾಂಡೆಯವರು ಪರಿಚಯಿಸಿದರೆ, ತಾವು ನಂಬಿದ ತತ್ವದೆಡೆಗೆ ಪ್ರಶ್ನಾತೀತವಾದ ನಂಬಿಕೆಯನ್ನಿಟ್ಟು ಸಂಗೀತವನ್ನು ಪ್ರಾರ್ಥನೆಯನ್ನಾಗಿಸುವುದನ್ನು ಪಲುಸ್ಕರ್ ಅವರು ತೋರಿಸಿಕೊಟ್ಟರು ಎಂಬುವುದನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಅಭಿಪ್ರಾಯಗಳು ಬೇರೆ ಬೇರೆಯಾಗಿದ್ದರೂ ಇವರಿಬ್ಬರ ದಣಿವರಿಯದ ಪರಿಶ್ರಮದಿಂದಾಗಿ, ಸಂಗೀತವನ್ನು ಕೇಳುವ-ಕಲಿಯುವ ಅವಕಾಶ ಎಲ್ಲರಿಗೂ ದೊರಕಿತು. ಸಂಗೀತಕ್ಕೆ ಸ್ತ್ರೀಯರ ಪ್ರವೇಶವಾಯ್ತು. ಸಂಗೀತಕ್ಕೆ ಬೇಕಾದ ಆಧಾರ ಗ್ರಂಥ, ಹಾಡಲು ಅನುಕೂಲವಾಗುವಂತೆ ಸ್ವರಲಿಪಿಬದ್ಧಗೊಳಿಸಿ ಬರೆದಿಟ್ಟ ಬಂದಿಶ್‍ಗಳು ಇವೆಲ್ಲವೂ ಲಭ್ಯವಾಯಿತು. ಸಂಗೀತಕ್ಕೊಂದು ಚೌಕಟ್ಟು ಸಿಕ್ಕಿತು. ನಿರ್ವಾತದಿಂದ ಆರಂಭವಾದ ಇವರ ಕಾರ್ಯ, ಸಂಗೀತಕ್ಕೊಂದು ಗೌರವಯುತವಾದ ಸ್ಥಾನ ತಂದುಕೊಡುವಲ್ಲಿ ಕೃತಾರ್ಥತೆಯನ್ನು ಕಂಡಿತು.

2 Responses to "ನಾದಲೀಲೆ-9: ಮರೆಯಬಾರದ ಮಹನೀಯರು"

 1. hamsanandi  June 8, 2016 at 10:50 am

  ಸಂಗೀತದಲ್ಲಿ ಇಲ್ಲದ “ರಾಜಾಶ್ರಯದ ಉಸಿರುಕಟ್ಟುವಿಕೆಯನ್ನೇನೋ” ತಂದ್ರಿ. ಅದು ನಿಮ್ಮ ಐಡಿಯಾಲಜಿ ಇರಬಹುದು ಬಿಡಿ. ಆದರೆ, ಹೆಸರನ್ನಾದರೂ ಸರಿಯಾಗಿ ಬರೆಯಬಾರದೇ? ಭಾತ್ಕಂಡೆ ಅಂತ.

  Reply
 2. Jona  June 16, 2016 at 9:34 am

  Hi there, I check your blog daily. Your story-telling style is awesome,
  keep doing what you’re doing!

  Reply

Leave a Reply

Your email address will not be published.