ನಾದಲೀಲೆ-7: ಸಂಗೀತಕ್ಕೊಬ್ಬನೇ ಅಮೀರ್ ಖಾನ್

-ಶ್ರೀಮತಿದೇವಿ ಸಾಲ್ಟ್ ಲೇಕ್ ಸಿಟಿ.

ಹಾಡುತ್ತಿರುವ ಲೇಖಕಿ ಶ್ರೀಮತಿ ದೇವಿ

ಹಾಡುತ್ತಿರುವ ಲೇಖಕಿ ಶ್ರೀಮತಿ ದೇವಿ

ಉಸ್ತಾದ್ ಅಮೀರ್ ಖಾನ್‍ರು ಮಧುರ ಕಂಠದ ಗಾಯಕ ಮಾತ್ರವಲ್ಲ, ಸಂಶೋಧಕ, ವಾಗ್ಗೇಯಕಾರ ಹಾಗೂ ರಾಗಧಾರಿ ಸಂಗೀತವನ್ನು ಜನಪ್ರಿಯಗೊಳಿಸಿದ ‘ಟ್ರೆಂಡ್ ಸೆಟ್ಟರ್’.

ಅಮೀರ್ ಖಾನ್‍ರು 1912 ಆಗಸ್ಟ್ 15ರಂದು ಇಂದೋರ್ ನ ಸಂಗೀತ ಪರಿವಾರದಲ್ಲಿ ಜನಿಸಿದರು. ಅವರ ತಂದೆ ಶಾಹ್ಮೀರ್ ಖಾನ್, ಬೆಂಡಿಬಜಾರ್ ಘರಾಣೆಯ ನುರಿತ ಸಾರಂಗಿ ಹಾಗೂ ಬೀನ್ ವಾದಕರಾಗಿದ್ದರು. ಹಾಗೂ ಇಂದೋರ್ ನ ಹೋಳ್ಕರರ ಆಸ್ಥಾನದ ಕಲಾವಿದರಾಗಿದ್ದರು. ದುರ್ದೈವವಶಾತ್ 9 ವರ್ಷದವರಿದ್ದಾಗಲೇ ತಮ್ಮ ತಾಯಿಯನ್ನು ಕಳೆದುಕೊಂಡ ಅಮೀರ್ ಖಾನರ ಸಂಗೀತಾಭ್ಯಾಸ ಸಾರಂಗಿ ಜೊತೆಗೆ ಆರಂಭವಾಯಿತು. ಆದರೆ ಗಾಯನದಲ್ಲಿನ ಇವರ ಆಸಕ್ತಿ ನೋಡಿ, ಇವರ ತಂದೆ ಗಾಯನದ ಶಿಕ್ಷಣವನ್ನು ಆರಂಭಿಸಿದರು. ಅಮೀರ್ ಖಾನರ ಗಾಯನದ ಬಹು ಮುಖ್ಯ ಅಂಶವಾದ ‘ಖಂಡಮೇರು’ ತಂತ್ರಗಾರಿಕೆಯನ್ನು ಅವರು ಕಲಿತದ್ದೇ ಅವರ ತಂದೆಯವರಿಂದ. ಮಾತ್ರವಲ್ಲದೇ ತಬಲಾ ವಾದನದಲ್ಲೂ ಇವರು ಪರಿಣತಿಯನ್ನು ಪಡೆದರು. ಸಂಗೀತದ ಪರಿವಾರ ಇವರದ್ದಾದರಿಂದ ಇಂದೋರ್ ಗೆ ಬರುವ ಎಲ್ಲಾ ಸಂಗೀತಗಾರರೂ ಅವರ ಮನೆಗೆ ಭೇಟಿ ನೀಡದೆ ಇರುತ್ತಿರಲಿಲ್ಲ. ಹೀಗಾಗಿ ಬೇರೆ-ಬೇರೆ ಶೈಲಿಯ ಸಂಗೀತವನ್ನು ಕೇಳುವ ಅವಕಾಶ ಇವರಿಗೆ ದೊರಕಿತ್ತು. ಅಮೀರ್ ಖಾನರ ತಮ್ಮನೂ ಉತ್ತಮ ಸಾರಂಗಿ ವಾದಕರಾಗಿದ್ದು, ನಂತರ ಇಂದೋರ್ ನ ಆಕಾಶವಾಣಿ ಕೇಂದ್ರದಲ್ಲಿ ನಿಲಯ ಕಲಾವಿದರಾದರು.

ಹಲವು ವರ್ಷಗಳ ಕಾಲ, ಸತತ ಅಭ್ಯಾಸ ನಡೆಸಿದ ಅಮೀರ್ ಖಾನರು 1934ರ ಸುಮಾರಿನಲ್ಲಿ ಮುಂಬೈಯಲ್ಲಿ ನೆಲೆನಿಲ್ಲುವ ಪ್ರಯತ್ನ ಮಾಡಿದರು. ಆದರೆ, ಇವರ ಹೊಸದಾದ ಗಾಯನ ಪದ್ಧತಿಯನ್ನು ಒಪ್ಪಿಕೊಳ್ಳುವುದು ಅಲ್ಲಿನ ಸಂಗೀತ ಪ್ರೇಮಿಗಳಿಗೆ ಅಷ್ಟೇನು ಸುಲಭವಾಗಿರದಿದ್ದ ಕಾರಣ, ಸ್ವಲ್ಪಕಾಲ ಮಧ್ಯಪ್ರದೇಶದ ರಾಯಗಢದ ಸಂಸ್ಥಾನದಲ್ಲಿ ಆಶ್ರಯ ಪಡೆದರು. ಆ ನಂತರ ಡೆಲ್ಲಿ ಹಾಗೂ ಕಲ್ಕತ್ತಾಗಳಲ್ಲೂ ಕೆಲವು ಕಾಲ ವಾಸವಾಗಿದ್ದರೂ ದೇಶದ ವಿಭಜನೆಯ ನಂತರ ಮುಂಬೈಯಲ್ಲೇ ನೆಲೆನಿಂತರು. 1974ರ ಫೆಬ್ರವರಿಯಲ್ಲಿ, ಅಕಾಲಿಕವಾಗಿ ಕಾರ್ ಅಫಘಾತವೊಂದರಲ್ಲಿ ನಿಧನರಾಗುವವರೆಗೂ ದೇಶದ ಎಲ್ಲಾ ಕಡೆ ಕಾರ್ಯಕ್ರಮಗಳನ್ನು ನೀಡಿ, ಶೋತೃಗಳ ಮನಸೂರೆಗೊಂಡಿದ್ದರು.

ಅಮೀರ್ ಖಾನರ ಗಾಯನದ ಮೇಲೆ ಬಹುಮುಖ್ಯವಾಗಿ ಮೂವರ ವ್ಯಕ್ತಿಗಳ ಪ್ರಭಾವವಿದೆ. ಅವರೇ ಹೇಳುವಂತೆ, ಅವರ ನಿಧಾನ ಗತಿಯ ಆಲಾಪಕ್ಕೆ ಅಬ್ದುಲ್ ವಹೀದ್ ಖಾನ್ ಕಾರಣರಾದರೆ, ಶರವೇಗದ ತಾನ್ ಗಾಯನಕ್ಕೆ ಕಾರಣ, ರಜಾಬ್ ಅಲಿ ಖಾನ್. ಹಾಗೂ ಅವರ ಗಾಯನದಲ್ಲಿನ ‘ಖಂಡಮೇರು’ ಪ್ರಯೋಗಗಳಿಗೆ ಕಾರಣ ಬೆಂಡಿ ಬಜಾರ್  ಘರಾಣೆಯ ಪ್ರಮುಖ ಗಾಯಕರಾದ ಅಮಾನ್ ಅಲಿ ಖಾನ್.

ಅಮೀರ್ ಖಾನರ ಗಾಯನದ ಅಥವಾ ಅವರು ಹುಟ್ಟುಹಾಕಿದ ‘ಇಂದೋರ್ ಘರಾಣೆ’ಯ ವಿಶೇಷತೆಯನ್ನು ತಿಳಿಯಲು ಹೊರಡುವುದೆಂದರೆ ಖ್ಯಾಲ್ ಗಾಯನದ ಅಧ್ಯಯನವನ್ನೇ ಮಾಡಿದಂತೆ.
1. ಅಮೀರ್ ಖಾನರ ಪ್ರಮುಖ ವಿಶೇಷವೆಂದರೆ, ಅತೀ ವಿಲಂಬಿತ್ ಆಲಾಪ. ಖಂಡಮೇರು ವಿನಾಸಗಳೊಂದಿಗೆ ‘ಸ್ವರಾನುಸಾರಿ’ಯಾದ ಅವರ ಆಲಾಪ, ಶಾಂತಿಯುತವಾದದ್ದು. ಹೆಚ್ಚಾಗಿ ಮಂದ್ರ ಹಾಗೂ ಮಧ್ಯ ಸಪ್ತಕದಲ್ಲೇ ವಿವರವಾದ ಆಲಾಪನೆ ಮಾಡುವ ಅಮೀರ ಖಾನರು ಹಾಡುವಾಗ ಯಾವಾಗಲೂ 6 ತಂತಿಗಳ ತಂಬೂರವನ್ನು ಇಟ್ಟುಕೊಳ್ಳುತ್ತಿದ್ದರು. ಸ್ವತಹ ಸಾರಂಗಿ ವಾದಕರಾದರೂ ಅವರು ಯಾವತ್ತೂ ಸಾರಂಗಿ ಜೊತೆಗೆ ಹಾಡಲಿಲ್ಲ. ಅವರು ಮಾಡುವ ‘ಕಣ್’ ಪ್ರಯೋಗ ಹಾಗೂ ಗಾಯನದ ನಡುವೆ ಅವರು ನೀಡುವ ‘ವಿರಾಮ’ಆಕರ್ಷಕವಾದದ್ದು. ಲಯಕಾರಿಗಳನ್ನು ಮಾಡಬಲ್ಲವರಾದರೂ ಅವರು ಯಾವತ್ತೂ ತಂತ್ರಗಾರಿಕೆಯ ಕಡೆಗೆ ಲಕ್ಷ್ಯ ಕೊಟ್ಟವರಲ್ಲ. ಖಟ್ಗಾ-ಮುರ್ಕಿಗಳ ಪ್ರಯೋಗವೂ ತುಂಬಾ ಕಡಿಮೆ. ಧ್ರುಪದ್ ಗಾಯನದ ಹಲವು ವಿಚಾರಗಳೂ ಅವರ ಗಾಯನದಲ್ಲಿದೆ. ಮಾಧುರ್ಯ ಪ್ರಮುಖವಾದ ಅವರ ನಿಧಾನಗತಿಯ ಗಾಯನ, ಗಂಭೀರವಾದದ್ದು.

2. ಹೆಚ್ಚಾಗಿ ಅವರು ಬಳಸುವ ತಾಳವೆಂದರೆ ವಿಲಂಬಿತ್ ಏಕ್‍ತಾಲ್ ಮತ್ತು ಝೂಮ್ರಾ. ಝೂಮ್ರ ಅತಿ ಸುಂದರವಾದ, ಸಾಮಾನ್ಯವಾಗಿ ಸ್ವಲ್ಪ ವೇಗದ ಗತಿಯಲ್ಲೇ ಬಳಸಲಾಗುವ ತಾಳ. ಗ್ವಾಲಿಯರ್ ಘರಾಣೆಯ ಸಂಗೀತಗಾರರು ಈ ತಾಳವನ್ನು ಬಳಸಿಕೊಂಡು ಅತ್ಯಂತ ಕ್ಲಿಷ್ಟವಾದ ಲಯಕಾರಿಗಳನ್ನು ಮಾಡುತ್ತಾರೆ. ಆದರೆ ಅಮೀರ್ ಖಾನರು ಈ ತಾಳವನ್ನು ವಿಲಂಬಿತ್ ಲಯದಲ್ಲಿ ಇಟ್ಟುಕೊಂಡು ಹಾಡತೊಡಗಿದರು. ಈ ತಾಳದ ಗತಿ ಮುಂದೆ ‘ಅಮೀರ್ ಖಾನರ ಝೂಮ್ರಾ ಲಯ’ ಎಂದೇ ಹೆಸರಾಯಿತು. ಯಾವುದೇ ತಾಳವಿದ್ದರೂ ಅವರಿಗೆ ಅದರ ಸರಳವಾದ ಠೇಕಾ ಇಷ್ಟವಾಗುತ್ತಿತ್ತು.

3. ತರಾನಾ ಪ್ರಕಾರದ ಬಗ್ಗೆ ಅಮೀರ್ ಖಾನರಿಗೆ ವಿಶೇಷವಾದ ಪ್ರೀತಿ ಇತ್ತು. ತರಾನಾ ಎಂಬುದು ಸಾಹಿತ್ಯವಿಲ್ಲದ ಕೆಲವು ಶಬ್ದಗಳ ರಚನೆಯಾಗಿದ್ದರೂ, ಅದರಲ್ಲಿ ಅತೀಂದ್ರಿಯ (mಥಿsಣiಛಿಚಿಟ) ಆದ ಅರ್ಥವಿದೆ, ಈ ಅಮೂರ್ತವಾದ ಶಬ್ದಗಳನ್ನು ಅರ್ಥಹೀನ ಎನ್ನಲಾಗದು ಎಂಬುದು ಅಮೀರ್ ಖಾನರ ಅಭಿಪ್ರಾಯ. ಅದಕ್ಕಾಗಿ ತರಾನಾಗಳ ಬಗ್ಗೆ ಬೇರೆ ಬೇರೆ ರೀತಿಯ ಅಧ್ಯಯನವನ್ನು ಅವರು ಮಾಡಿದರು. ಅಮೀರ್ ಖುಸ್ರೋವಿನ ರುಬಾಯದಾರಿ ತರಾನಾಗಳು ಅವರನ್ನು ಪ್ರಭಾವಿಸಿದವು. ಈ ತರಾನಾಗಳಲ್ಲಿ, ಅಂತರಾದಲ್ಲಿ ಪರ್ಷಿಯನ್ ಭಾಷೆಯಲ್ಲಿ ಅರ್ಥಪೂರ್ಣವಾದ 4ಸಾಲುಗಳ ಸಾಹಿತ್ಯವಿರುತ್ತದೆ. ಮುಂದೆ ಇದೇ ಚೌಕಟ್ಟಿನಲ್ಲಿ ಅಮೀರ್ ಖಾನರು ಪರ್ಷಿಯನ್ ಭಾಷೆಯಲ್ಲಿ ಹಲವು ರುಬಾಯಿದಾರಿ ತರಾನಾಗಳ ರಚನೆ ಮಾಡಿದರು. ಅವರ ಪ್ರಕಾರ ತರಾನ ಎಂಬುದು ನಾಮಸ್ಮರಣೆ ಇದ್ದಂತೆ. ನಾಮಸ್ಮರಣೆ ಮಾಡುವಾಗ ಹೇಗೆ ಕೆಲವು ಶಬ್ದಗಳ ಪುನರಾವೃತ್ತಿ ಆಗುತ್ತದೋ ಹಾಗೆಯೇ ತರಾನಾದಲ್ಲಿ ‘ದಿರ್, ದರಾ, ಯಲಲೋಂ, ಉದತನ’ ಮುಂತಾದ ಶಬ್ದಗಳು ಮತ್ತೆ ಮತ್ತೆ ಬರುತ್ತವೆ. ವಿಲಂಬಿತ್ ಬಂದಿಶ್‍ನ ನಂತರದಲ್ಲಿ, ಅಮೀರ್ ಖಾನರು ಛೋಟಾ ಖ್ಯಾಲ್ ಅಥವಾ ರುಬಾಯಿದಾರಿ ತರಾನವನ್ನು ಹಾಡುವುದು ಸಾಮಾನ್ಯವಾಗಿತ್ತು. ತರಾನಾ ಪ್ರಕಾರವನ್ನು ಅಷ್ಟು ವ್ಯಾಪಕವಾಗಿ ಜನಪ್ರಿಯಗೊಳಿಸಿದ ಕೀರ್ತಿ ಅಮೀರ್ ಖಾನರಿಗೇ ಸಲ್ಲುತ್ತದೆ.

4. ಅಮೀರ್ ಖಾನರ ಗಾಯನದ ಮತ್ತೊಂದು ಪ್ರಮುಖ ಅಂಶವೆಂದರೆ, ಅವರು ಮಾಡುವ ಖಂಡಮೇರು ಪ್ರಯೋಗ. ಲಂಡನ್ ನಲ್ಲಿ ನಡೆದ ಅವರ ಸಂದರ್ಶನವೊಂದರಲ್ಲಿ ಅವರೇ ಇದನ್ನು ವಿಶದವಾಗಿ ವಿವರಿಸುತ್ತಾರೆ. ಖಂಡಮೇರು ಎಂಬುದು ಗಣಿತವನ್ನು ಆಧರಿಸಿದ ಸಂಗೀತದಲ್ಲಿನ ಸ್ವರಗಳ ವಿನ್ಯಾಸ ಅಥವಾ ತತ್ವ. ಇಲ್ಲಿ ಬರುವ 5040 ಸ್ವರ ಜೋಡನೆ-ಸ್ವರ ರಚನೆಗಳು ಯಾವುದೇ ಸ್ವರಗುಂಪು ಎಲ್ಲೂ ಪುನರಾವರ್ತನೆ ಆಗದ ರೀತಿಯಲ್ಲಿರುತ್ತವೆ. ಉದಾಹರಣೆಗೆ ಮೊದಲ 2 ಸ್ವರಗಳಾದ ಸ ರೆ ಗಳಿಂದ 2ರೀತಿಯ ಜೋಡಣೆ ಮಾತ್ರ ಸಾಧ್ಯ. ಅದು; ಸರೆ, ರೆಸ. ಅದೇ ರೀತಿ ಸರೆಗ ದಿಂದ ಸರೆಗ ಸಗರೆ ರೆಸಗ ರೆಗಸ ಗಸರೆ ಗರೆಸ ಎಂಬ 6 ವಿನ್ಯಾಸ ಸಾಧ್ಯ. ಈ ರೀತಿ 7 ಸ್ವರಗಳಿಂದ 5040 ಸಾಧ್ಯ.

ustad-amir-khanಹಾಗೆಯೇ ಸ್ವರಗಳ ಶುದ್ಧ ಹಾಗೂ ವಿಕೃತ ರೂಪಗಳನ್ನು ಬಳಸಿಕೊಂಡು ಇನೂ ಹೆಚ್ಚಿನ ವಿನ್ಯಾಸಗಳನ್ನು ಮಾಡಬಹುದು. ಖಂಡಮೇರು ಪ್ರಯೋಗದಲ್ಲಿ ಬರುವ ಈ ಎಲ್ಲಾ 5040 ತಾನುಗಳು ಅಮೀರ್ ಖಾನರಿಗೆ ಬಾಲ್ಯದಲ್ಲೇ ಕರಗತವಾಗಿತ್ತು. ಬೆಂಡಿ ಬಜಾರ್  ಘರಾಣೆಯ ವಿಶೇಷತೆಯಾದ ಖಂಡಮೇರು ತಾನುಗಳನ್ನು, ಅದೇ ಘರಾಣೆಯ ಗಾಯಕರಾದ ಅವರ ತಂದೆ ಅಭ್ಯಾಸ ಮಾಡಿಸಿದ್ದರು. ಆದರೆ ಇವೆಲ್ಲವನ್ನೂ ಬಳಸುವುದು ಮತ್ತು ಕೇಳುಗರಿಗೆ ಅರ್ಥ ಮಾಡಿಸುವುದು ಕಷ್ಟವೆಂದು ತಮಗೆ ಅನುಕೂಲವಾಗುವಂತೆ 5040ಗಳಿಂದ 168 ತಾನುಗಳನ್ನು ಮಾಡಿಕೊಂಡಿದ್ದರು. ಮತ್ತು ಇವುಗಳನ್ನು ತಮ್ಮ ವಿಲಂಬಿತ್ ಆಲಾಪದಲ್ಲಿ ಕೇವಲ ಗಣಿತದಂತಲ್ಲದೇ ಭಾವಯುಕ್ತವಾಗಿ, ಸೌಂದರ್ಯಾತ್ಮಕವಾಗಿ ಬಳಸುತ್ತಿದ್ದರು. ಇದರಿಂದಾಗಿ ಅವರ ಗಾಯನದಲ್ಲಿ ಎಲ್ಲಿಯೂ ಸ್ವರಗುಂಪುಗಳ ಪುನರಾವೃತ್ತಿ ಆಗುತ್ತಿರಲಿಲ್ಲ. ತುಂಬಾ ದೊಡ್ಡ ಸರಕೇ ಜೊತೆಗಿದ್ದ ಕಾರಣ ನಿಧಾನಗತಿಯ ಆಲಾಪಚಾರಿ ಬೆಳೆಸಲು ಸಾಧ್ಯವಾಗುತ್ತಿತ್ತು. ಜೊತೆಗೆ ಇವುಗಳನ್ನು ಕೈವಶ ಮಾಡಿಕೊಂಡದ್ದರಿಂದ ಅವರು ಪಡೆದಿದ್ದ ಧೈರ್ಯ, ಆತ್ಮವಿಶ್ವಾಸ ಇಡೀ ಗಾಯನದಲ್ಲಿ ಎಲ್ಲಿಯೂ ಅವರ ಕೈ ಬಿಡುತ್ತಿರಲಿಲ್ಲ.

5. ಖಂಡಮೇರು ಅಭ್ಯಾಸದಿಂದ ಅವರಿಗಾದ ಇನ್ನೊಂದು ಲಾಭವೆಂದರೆ ‘ಸರ್‍ಗಮ್’ ಗಾಯನದಲ್ಲಿನ ಪ್ರಾವೀಣ್ಯತೆ. ಅಮೀರ್ ಖಾನರ ಸರ್‍ಗಮ್ ಗಾಯನ ವ್ಶೆಚಿತ್ರ್ಯಪೂರ್ಣವಾದದ್ದು. ನಿಧಾನವಾಗಿ ವೇಗವನ್ನೂ, ಬೆಳವಣಿಗೆಯನ್ನೂ ಹೊಂದುತ್ತಾ ಸಾಗುವ ಅವರ ಸರ್‍ಗಮ್ ಅಲಂಕಾರಿಕವಾದದ್ದು. ಕಿರಾಣಾ ಘರಾಣೆಯ ಪ್ರಸಿದ್ಧ ಗಾಯಕರಾದ ಭೀಮಸೇನ ಜೋಶಿ, ಪ್ರಭಾ ಅತ್ರೆಯವರೂ ಅಮೀರ್ ಖಾನರ ಸರ್‍ಗಮ್ ಗಾಯನದಿಂದ ಪ್ರಭಾವಿತರಾಗಿದ್ದಾರೆ.

6. ಅಮೀರ್ ಖಾನರು ಶುದ್ಧ ಖ್ಯಾಲ್ ಗಾಯಕರು. ಅವರು ಯಾವತ್ತೂ ಠುಮ್ರಿ, ಟಪ್ಪಾ, ಭಜನ್ ಗಳನ್ನು ಹಾಡಿಲ್ಲ. ಉಪಶಾಸ್ತ್ರೀಯ ಪ್ರಕಾರಗಳಲ್ಲಿ ಬಳಸಲಾಗುವ ಪೀಲು, ಪಹಾಡಿ, ಮಾಂಡ್ ಈ ಮೊದಲಾದ ರಾಗಗಳನ್ನೂ ಹಾಡಲಿಲ್ಲ. ಅವರು ಹಾಡಿದ ಮಾರವಾ ರಾಗ ‘ಅಮೀರ ಖಾನರ ಮಾರವಾ’ ಎಂದೇ ಸಂಗೀತ ಕ್ಷ್ಯೇತ್ರದಲ್ಲಿ ಹೆಸರಾಗಿಬಿಟ್ಟಿದೆ. ಮಾರವಾ, ಮಾಲ್‍ಕೌಂಸ್, ತೋಡಿ, ಮೇಘ್, ಲಲತ್, ಯಮನ್ ಮುಂತಾದ ಪಾರಂಪರಿಕ ರಾಗಗಳನ್ನೇ ಹೆಚ್ಚಾಗಿ ಅವರು ಹಾಡುತ್ತಿದ್ದರು. ಹಾಗೂ ಅವರ ಗಾಯನದಲ್ಲಿ ಮುಖ್ಯವಾಗಿ ಕಾಣುತ್ತಿದ್ದದ್ದು, ಅಂತರ್ಮುಖತೆ, ಅವರ ಸಂಗೀತ ಯಾವತ್ತೂ ಪ್ರದರ್ಶನ ಮುಖಿಯಾಗಿರಲಿಲ್ಲ. ಅವರ ಗಾಯಾದಲ್ಲಿರುವುದು ಸಮಾಧಾನ, ಸಂಗೀತದೆಡೆಗಿನ ಆರಾಧನೆ ಮತ್ತು ಸಂಪೂರ್ಣ ಶರಣಾಗತಿ.

7.ಅಮೀರ್ ಖಾನರ ‘ಸೂರ್‍ರಂಗ’ ಎಂಬ ಉಪನಾಮವಿಟ್ಟುಕೊಂಡು ಅನೇಕ ಸುಂದರವಾದ ಬಂದಿಶ್‍ಗಳನ್ನು ರಚಿಸಿದ್ದಾರೆ. ಸಂದರ್ಶನವೊಂದರಲ್ಲಿ ಅವರೇ ಹೇಳುವಂತೆ, ಸಂಗೀತವು ಆಸ್ಥಾನಗಳ ಆಶ್ರಯ ಪಡೆಯಲು ಆರಂಭಿಸಿದ ಮೇಲೆ, ಸಾಹಿತ್ಯದಲ್ಲಿ ಅಶ್ಲೀಲವಾದದ್ದು ಬರತೊಡಗಿತು. ಇದನ್ನು ಹಾಡಲು ಇಷ್ಟವಾಗದೆ ಅವರೇ ಹೊಸ ರಚನೆಗೆ ಮುಂದಾದರು. ಈ ರಚನೆಗಳು ಸಾಹಿತ್ಯದ ಕಲ್ಪನೆಯ ದೃಷ್ಠಿಯಿಂದಲೂ, ರಾಗರೂಪದ ದೃಷ್ಠಿಯಿಂದಲೂ ಶ್ರೀಮಂತವಾಗಿವೆ.
ಈ ಎಲ್ಲಾ ವಿಶೇಷತೆಗಳಿಂದ ಕೂಡಿದ ಅವರ ಗಾಯನ ಶೈಲಿ, ‘ಇಂದೋರ್ ಘರಾಣೆ’ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆಯಿತು.

ಅಮೀರ ಖಾನರ ಈ ಗಾಯನ ಶೈಲಿಯು ಮಾಡಿದ ಮೋಡಿ ಅಂತಿಂಥದ್ದಲ್ಲ. ಸಂಗೀತ ಕ್ಷೇತ್ರದಲ್ಲಿ ಸುಮಾರು ಎರಡು ತಲೆಮಾರುಗಳ ವರೆಗೂ ಅವರ ಪ್ರಭಾವಕ್ಕೆ ಒಳಗಾಗದವರಿಲ್ಲ. ಅವರ ಶಿಷ್ಯರ ಪೈಕಿ ಅಮರನಾಥ್, ಎ.ಕಾನನ್, ಅಕ್ತರ್ ಸಾದ್‍ಮಣಿ, ಹೃದಯನಾಥ ಮಂಗೇಶ್ಕರ್, ಕಂಕಣಾ ಬಾನರ್ಜಿ, ಸಿಂಗ್ ಸಹೋದರರು, ಶ್ರೀಕಾಂತ ಬಾಕ್ರೆ ಮುಂತಾದವರು ಪ್ರಮುಖರು. ಅವರ ನೇರ ಶಿಷ್ಯರು ಇಷ್ಟೇ ಆದರೂ ಅಮೀರ್ ಖಾನರ ಸಂಗೀತದ ಸುಳಿಯಲ್ಲಿ ಸಿಲುಕಿದ ಸಂಗೀತಗಾರರ ಪಟ್ಟಿ ತುಂಬಾ ದೊಡ್ಡದಿದೆ. ಅವರಲ್ಲಿ ಭೀಮಸೇನ ಜೋಷಿ, ಪಿಯು ಸರ್ಕೇಲ್, ಪ್ರಭಾ ಅತ್ರೆ, ರಸಿಕಲಾಲ್ ಅಂಧಾರಿಯಾ, ಶಾಂತಿ ಶರ್ಮಾ, ನಿಖಿಲ್ ಬಾನರ್ಜೀ, ವಿಲಾಯತ್ ಖಾನ್ ಮುಂತಾದ ಬಹು ದೊಡ್ಡ ಕಲಾವಿದರುಗಳೇ ಇದ್ದಾರೆ. ಇತ್ತೀಚಿಗಿನ ಸಂಗೀತಗಾರರಲ್ಲೊಬ್ಬರಾದ ಗೋಕುಲೋತ್ಸವಜೀ ಮಹಾರಾಜ್ ಅವರು, ಅಮೀರ್ ಖಾನರ ಸಂಪೂರ್ಣ ಗಾಯನ ಶೈಲಿಯನ್ನು ಹೊಂದಿರುವುದು ಮಾತ್ರವಲ್ಲದೇ ಅವರ ಕಂಠವೂ ಕೂಡಾ ಖಾನರಂತೆಯೇ ಇದೆ. ಆದರೆ ಅವರು ಒಮ್ಮೆಯೂ ಅಮೀರ್ ಖಾನರನ್ನು ಭೇಟಿಯೂ ಆಗಿರಲಿಲ್ಲ ಎಂಬುದು ವಿಸ್ಮಯಕಾರಿಯಾದ ಅಂಶ.

ಅಮೀರ್ ಕಾನರು ಹಲವಾರು ಚಲನಚಿತ್ರಗಳಲ್ಲಿ ಹಾಡಿದ್ದಾರೆ. ಅವುಗಳಲ್ಲಿ ಬಹು ಮುಖ್ಯವಾದದ್ದು ‘ಬೈಜೂ ಬವರಾ’. ಡಿ.ವಿ.ಪಲುಸ್ಕರ್ ಅವರ ಜೊತೆಗೆ ಈ ಚಲನಚಿತ್ರದಲ್ಲಿ ಅಮೀರ್ ಖಾನರು ಹಾಡಿದ ಹಲವು ಹಾಡುಗಳು ಇತಿಹಾಸವನ್ನೇ ಸೃಷ್ಠಿಸಿವೆ. ಉಳಿದ ಚಿತ್ರಗಳೆಂದರೆ ‘ಕ್ಷುಧಿತ ಪಾಷಾಣ’, ‘ಶಬಾಬ್’, ‘ಝನಕ್ ಝನಕ್ ಪಾಯಲ ಬಾಜೆ’, ‘ಗೂಂಜ ಉಠಿ ಶಹನಾಯಿ’ ಮುಂತಾದವುಗಳು.

ಅಮೀರ್ ಖಾನರ ಗಾಯನದಲ್ಲಿ ರಾಗ ಮಾರವಾ, ಅಢಾಣಾ, ಹಂಸಧ್ವನಿ, ಮುಲ್ತಾನಿ, ಸುಹಾಸುಘರಾಯಿ ಮೊದಲಾದ ಹಲವು ರಾಗಗಳು 78rpm ನಲ್ಲಿ ಬೆಳಕಿಗೆ ಬಂದಿವೆ. ಅಮೀರ್ ಖಾನರು ಭಾರತ ದೇಶದ ಎಲ್ಲಾ ಪ್ರತಿಷ್ಠಿತ ಸಭೆಗಳಲ್ಲಿ ಕಾರ್ಯಕ್ರಮ ನೀಡಿರುವುದು ಮಾತ್ರವಲ್ಲದೆ,ಕಾಬೂಲ್, ಅಮೇರಿಕಾ, ಲಂಡನ್ ಗಳಿಗೂ ಭೇಟಿ ನೀಡಿದ್ದಾರೆ. 1967ರಲ್ಲಿ ಇವರಿಗೆ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಹಾಗೂ 1971ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಸಂದಿವೆ.
ಅಮೀರ್ ಖಾನರು ‘ಸ್ವರವನ್ನಾಧಾರಿಸಿದ’ ಶಾಂತ ಆಲಾಪವನ್ನು ಜನಪ್ರಿಯಗೊಳಿಸಿ, ಖ್ಯಾಲ್ ಸಂಗೀತದ ರೂಪುರೇಷೆಯನ್ನೇ ಬದಲಾಯಿಸಿದರು. ಅಂತರ್ಮುಖಿಯಾದ ಸಂಗೀತದೆಡೆಗೆ ಜನರ ಗಮನ ಸೆಳೆದರು. ಆದರೆ, ಸಂಗೀತ ಸಂಶೋಧಕ ಕೆ.ಪಿ.ಮುಖರ್ಜೀ ಅವರು ಗುರುತಿಸುವಂತೆ “Amir khan’s style without Amir khan can be a pretty boring affair”. ಅವರು ಅರಸಿ ಮೈಗೂಡಿಸಿಕೊಂಡ ಅವರ ಗಾಯನ ಶೈಲಿಯನ್ನು ಅವರಷ್ಟು ಸಮರ್ಪಕವಾಗಿ ಎತ್ತಿ ಹಿಡಿಯಲು ಮತ್ಯಾರಿಗೂ ಸಾಧ್ಯವಾಗಲಿಲ್ಲ. ಆದ್ದರಿಂದಲೇ ಅವರು ‘ಸಂಗೀತಕೊಬ್ಬನೇ ಅಮೀರ್‍ಖಾನ್’ ಎಂಬ ರೀತಿಯಲ್ಲಿ ಇತಿಹಾಸವನ್ನು ಸೇರಿದ್ದಾರೆ.

Leave a Reply

Your email address will not be published.