ನಾದಲೀಲೆ-6 ಉತ್ತರ- ದಕ್ಷಿಣದ ನಡುವೆ ಸೇತುವೆ ಕಟ್ಟಿದ ಅಬ್ದುಲ್ ಕರೀಂ ಖಾನರು

-ಶ್ರೀಮತಿದೇವಿ ಸಾಲ್ಟ್ ಲೇಕ್ ಸಿಟಿ.

abdul karim khan‘ಪಿಯಾ ಕೆ ಮಿಲನ ಕಿ ಆಸ…’ ಜೋಗಿಯಾ ರಾಗದ ಈ ಠುಮ್ರಿಯನ್ನು ಕೇಳದ ಸಂಗೀತ ಪ್ರೇಮಿಗಳಿರಲಿಕ್ಕಿಲ್ಲ. ಅದರ ಮಧುರತೆ, ಉತ್ಕಟತೆ ಒಂದೇ ಬಾರಿಗೆ ಎಂಥವರನ್ನೂ ಹಿಡಿದಿಟ್ಟುಕೊಳ್ಳುತ್ತದೆ. ಕಿರಾಣಾ ಘರಾಣೆಯ ಪ್ರವರ್ತಕರಾದ ಉಸ್ತಾದ್.ಅಬ್ದುಲ್ ಕರೀಂ ಖಾನ್‍ರ ಅಪೂರ್ವ ಕಲಾಕೃತಿ ಇದು. ಅವರು ತಮ್ಮ ನವೀನ ಶೈಲಿಯ ಮೂಲಕ ಘರಾಣೆಯೊಂದನ್ನು ರೂಪಿಸಿ, ಈ ಘರಾಣೆಯನ್ನು ಹೆಸರುವಾಸಿ ಮಾಡಿದರು.

ಕರ್ನಾಟಕದಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಜನಪ್ರಿಯಗೊಳಿಸಲು ಹಾಗೂ ಈ ಸಂಗೀತ ಕರ್ನಾಟಕದಲ್ಲಿ ನೆಲೆಯೂರಲು ಕಾರಣರಾದವರಲ್ಲಿ ಕರೀಂ ಖಾನರು ಪ್ರಮುಖರು. ಅದರಲ್ಲೂ ಪ್ರಮುಖವಾಗಿ ಕಿರಾಣಾ ಘರಾಣಾದ ‘ಆಲಾಪ ಪ್ರಧಾನ’ ಗಾಯನ ಇಂದಿಗೂ ಇಲ್ಲಿ ಗಾಢವಾಗಿ ನೆಲೆಯಾಗಲು ಖಾನ್ ಸಾಹೇಬರ ಗಾಯನ ಶೈಲಿಯೇ ಕಾರಣ. ಕರೀಂಖಾನರ ಶಿಷ್ಯರಾದ ಸವೈ ಗಂಧರ್ವರು ಹಾಗೂ ಅವರ ಶಿಷ್ಯರುಗಳಾದ ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್, ಫಿರೋಜ್ ದಸ್ತೂರ್, ಶ್ರೀಪತಿ ಪಾಡಿಗಾರ್ ಮುಂತಾದವರು ಹಾಕಿಕೊಟ್ಟ ಗಾಯನದ ಚೌಕಟ್ಟು-ಭಾವಪೂರ್ಣತೆಗಳನ್ನು, ಇವತ್ತಿಗೂ ಹುಬ್ಬಳ್ಳಿ-ಧಾರವಾಡದ ಸಂಗೀತದಲ್ಲಿ ಕಾಣಬಹುದು. ಕನ್ನಡಿಗರಿಗೆ ಇಷ್ಟವಾದ, ಹಿತವೆನಿಸಿದ ಶೈಲಿಯಿದು. ಕಿರಾಣಾ ಘರಾಣೆಯ ಗಾಯಕರು ರೂಪಿಸಿದ ಸಂಗೀತ ಅಭ್ಯಾಸ ಕ್ರಮ(ಮುಂಜಾವಿನ ಮಂದ್ರ ಸಾಧನೆ, ಪಲ್ಟಾ ಇತ್ಯಾದಿ) ಇಂದಿಗೂ ಅಲ್ಲಿ ಅಭ್ಯಾಸದ ಮಾನದಂಡವಾಗಿದೆ.

ಸುಮಾರು ಎರಡು ತಲೆಮಾರುಗಳಷ್ಟು ಕಾಲ, ಹಿಂದೂಸ್ಥಾನಿ ಸಂಗೀತ ಕ್ಷೇತ್ರವನ್ನು ಕೈವಶ ಮಾಡಿಕೊಂಡಿದ್ದ ಕರೀಂ ಖಾನರನ್ನು “ಟ್ರೆಂಡ್ ಸೆಟ್ಟರ್” ಎನ್ನಬಹುದೇನೋ.. ಇವರು 1872 ನಂ11 ರಂದು, ಉತ್ತರ ಪ್ರದೇಶದ ಕಿರಾನಾ ಎಂಬ ಊರಿನಲ್ಲಿ ಸಂಗೀತದ ಪರಿವಾರದಲ್ಲೇ ಜನಿಸಿದರು. ಅವರ ಪೂರ್ವಿಕರು ಹಿಂದೂವೇ ಆಗಿದ್ದು, ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರು ಎನ್ನಲಾಗುತ್ತದೆ. ಇವರ ತಂದೆ ಉ.ಕಾಲೇ ಖಾನರು ಉತ್ತಮ ಸಂಗೀತಗಾರರಾಗಿದ್ದರು. ಆದ್ದರಿಂದ ಕರೀಂ ಖಾನರ ಸಂಗೀತ ಶಿಕ್ಷಣ ತಮ್ಮ ತಂದೆ ಕಾಲೇ ಖಾನ್ ಹಾಗೂ ಚಿಕ್ಕಪ್ಪ ಅಬ್ದುಲ್ ಖಾನ್ ಅವರ ಬಳಿ ನಡೆಯಿತು.

ಮುಂದೆ ಕೆಲವು ಕಾಲ ತಮ್ಮ ಪರಿವಾರದವರೇ ಆಗಿದ್ದ ನಾನ್ಹೆ ಖಾನ್ ಅವರ ಬಳಿಯೂ ಅಭ್ಯಾಸ ನಡೆಸಿದರು. ಬರೋಡಾದ ಸಂಸ್ಥಾನದೊಂದಿಗೆ ನಿಕಟ ಸಂಪರ್ಕ ಹೊಂದಿದ ಕುಟುಂಬ ಇವರದ್ದಾಗಿದ್ದರಿಂದ, ಕರೀಂ ಖಾನರು ಬರೋಡಾದ ಆಸ್ಥಾನ ಕಲಾವಿದರಾಗಿ ನೇಮಕಗೊಂಡರು. ಸಾರಂಗಿ ವಾದನದಲ್ಲೂ ಉತ್ತಮ ಪ್ರಾವೀಣ್ಯತೆ ಹೊಂದಿದ್ದರೂ, ಕರೀಂ ಖಾನರಿಗೆ, ತಾವು ಗಾಯಕರಾಗಿಯೇ ಗುರುತಿಸಿಕೊಳ್ಳುವುದು ಅಪೇಕ್ಷೆಯಾಗಿತ್ತು. ಆದ್ದರಿಂದ ಅವರು ಸಾರಂಗಿ ವಾದನದಿಂದ ಹೊರಬಂದರು. ಅವರು ಬರೋಡಾದಲ್ಲಿದ್ದಾಗಲೇ ತಾರಾಬಾಯಿ ಮ್ಹಾನೆ ಅವರ ಪರಿಚಯವಾಗಿ, ಮುಂದೆ ಅವರನ್ನು ವಿವಾಹವಾಗಿ ಮುಂಬೈಯಲ್ಲಿ ವಾಸವಾದರು. ಮಂಬೈಯಿಂದಲೇ ಸಂಗೀತ ಕಾರ್ಯಕ್ರಮಗಳಿಗಾಗಿ ಊರಿಂದೂರಿಗೆ ಸಂಚರಿಸುತ್ತಲೇ ಇರುತ್ತಿದ್ದರು. ಅದರಲ್ಲೂ ಮದ್ರಾಸ್, ಹೈದ್ರಾಬಾದ್, ಮೈಸೂರು ಪ್ರೆಸಿಡೆನ್ಸಿಗಳಲ್ಲಿ ಅವರ ಕಾರ್ಯಕ್ರಮ ಆಗಾಗ್ಗೆ ಇರುತ್ತಿತ್ತು. ಈ ಪ್ರದೇಶಗಳಲ್ಲಿ ಅಪಾರವಾದ ಅಭಿಮಾನಿಗಳನ್ನು ಕರೀಂ ಖಾನರು ಪಡೆದಿದ್ದರು.

ಮೈಸೂರಿಗೆ ಹೋಗುವಾಗೆಲ್ಲಾ, ಧಾರವಾಡದಲ್ಲಿ ವಾಸವಾಗಿದ್ದ ತಮ್ಮ ಸಹೋದರ ಅಬ್ದುಲ್ ಹಕ್ ಅವರ ಜೊತೆ ಸ್ವಲ್ಪ ಕಾಲ ತಂಗುತ್ತಿದ್ದರು. ಅಬ್ದುಲ್ ಹಕ್ ಅವರೊಂದಿಗೆ ಹಲವಾರು ಜುಗಲ್‍ಬಂದಿ ಕಾರಕ್ರಮಗಳನ್ನೂ ಕರೀಂ ಖಾನರು ನೀಡಿದ್ದರು. ಧಾರವಾಡ-ಹುಬ್ಬಳ್ಳಿ ಊರು ಅವರಿಗೆ ಅತ್ಯಂತ ಇಷ್ಟವಾಗಿತ್ತು. ಇದೇ ಸಮಯದಲ್ಲೇ ಕುಂದಗೋಳದ ಸವಾಯಿ ಗಂಧರ್ವ(ರಾಜಾಭಾವೂ ಕುಂದಗೋಳಕರ್)ರು ಕರೀಂ ಖಾನರ ಶಿಷ್ಯರಾದರು.
ಮೈಸೂರು ಸಂಸ್ಥಾನಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದ ಕರೀಂ ಖಾನರ ಗಾಯನ, ಕರ್ನಾಟಕಿ ಸಂಗೀತ ವಿದ್ವಾಂಸರುಗಳಾದ ಟೈಗರ್ ವರದಾಚಾರ್, ಮುತ್ತಯ್ಯ ಭಾಗವತರ್, ವೀಣಾ ಧನಮ್ಮಾಳ್ ಮುಂತಾದವರಿಗೆ ಪ್ರಿಯವಾಗಿತ್ತು.

ಕರ್ನಾಟಕಿ ಸಂಗೀತ ವಿದ್ವಾಂಸರ ಸತತ ಒಡನಾಟದಿಂದ, ಈ ಸಂಗೀತದ ಪರಿಚಯ ಉಂಟಾಗಿ, ಕರೀಂ ಖಾನರು ಇಲ್ಲಿನ ಹಲವಾರು ಅಂಶಗಳನ್ನು ತಮ್ಮ ಗಾಯನದಲ್ಲಿ ಅಳವಡಿಸಿಕೊಂಡರು. ಬಹುಮುಖ್ಯವಾಗಿ ‘ಸರ್‍ಗಮ್’ ಹಾಡುವ ವಿಧಾನ. ಮುಂದೆ ಅದು ಕಿರಾಣಾ ಘರಾಣೆಯ ಬಹುಮುಖ್ಯ ವೈಶಿಷ್ಟ್ಯವಾಗಿ ರೂಪುಗೊಂಡಿತು. ಕರೀಂ ಖಾನರ ಕಂಠದಿಂದ ಸುಲಲಿತವಾಗಿ ಹೊರಬರುವ ಸರ್‍ಗಮ್ ಗಳನ್ನು ಕೇಳುವುದೇ ಒಂದು ಪರಮಸುಖ. ಕಿರಾಣಾ ಘರಾಣೆಯ ಪ್ರಸಿದ್ಧ ಗಾಯಕಿ ಡಾ. ಪ್ರಭಾ ಅತ್ರೆ ಅವರು ಈ ಸರ್‍ಗಮ್ ಗಳ ಬಗ್ಗೆಯೇ ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಪಡೆದದ್ದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದು. ಕರ್ನಾಟಕಿ ಸಂಗೀತವನ್ನು ಅಷ್ಟು ಮುಕ್ತವಾಗಿ ಮೆಚ್ಚಿಕೊಂಡು, ಅಲ್ಲಿನ ಹಲವಾರು ಅಂಶಗಳನ್ನು ಹೆಕ್ಕಿ ತಂದ ಪ್ರಥಮ ಹಿಂದೂಸ್ಥಾನಿ ಸಂಗೀತಗಾರ, ಕರೀಂ ಖಾನರು. ಖರಹರಪ್ರಿಯ, ಅಭೋಗಿ, ಸಾವೇರಿ, ಹಂಸಧ್ವನಿ ಮುಂತಾದ ರಾಗಗಳಿಗೆ ಮರುಜೀವ ನೀಡಿ, ಹಿಂದೂಸ್ಥಾನಿ ಪದ್ಧತಿಯಲ್ಲಿ ಪ್ರಚಲಿತಗೊಳಿಸಿದರು.

ಕರೀಂ ಖಾನರ ಗಾಯನದ ವೈಶಿಷ್ಟ್ಯವೆಂದರೆ ಅದರಲ್ಲಿನ ಭಾವಪೂರ್ಣತೆ.ತಂತ್ರಗಾರಿಕೆ ಹಾಗೂ ವಿಪರೀತ ಬೋಲ್ತಾನುಗಳ ಭರಾಟೆಯಿಲ್ಲದ ಆಲಾಪ ಪ್ರಧಾನವಾದ ಸುಖ ನೀಡುವ ಗಾಯನ. ಇಲ್ಲಿ ಯಾವುದೇ ರೀತಿಯ‘ಹೊಡೆದಾಟ’ವಿಲ್ಲ. ಗಾಯನದಲ್ಲಿ ಎಲ್ಲಿಯೂ ಒತ್ತಡ, ನಾಟಕೀಯತೆ, ಸರ್ಕಸ್ ಗಳ ಗಲಾಟೆಯೇ ಇಲ್ಲ. ಮಧುರ, ಕೋಮಲ, ಶ್ರುತಿಶುದ್ಧ ಗಾಯನ. ತಮ್ಮ ಗಾಯನದ ಮೂಲಕ ಕರೀಂ ಖಾನರು ಖ್ಯಾಲ್ ಹಾಗೂ ಠುಮ್ರಿ ಗಾಯನಕ್ಕೆ ಹೊಸ ಆಯಾಮವೊಂದನ್ನೇ ತಂದುಕೊಟ್ಟರು.

ರಾತಾಂಜನಕರ್ ಅವರು ಕರೀಂ ಖಾನರ ಸಂಗೀತವನ್ನು ಕೇಳುವುದೆಂದರೆ, “ಬೆಳದಿಂಗಳು ತುಂಬಿದ, ತಂಪು ಹವೆಯಲ್ಲಿ ,ಹೂವುಗಳ ಸುಮಧುರ ಪರಿಮಳ ಸವಿಯುತ್ತಾ ನಡೆದಂತೆ” ಎಂದಿದ್ದಾರೆ. ಅಂಥಹ ದಿವ್ಯವಾದ, ಅಲೌಕಿಕ ಅನುಭವವನ್ನು ನೀಡುವ ಸಂಗೀತ ಅವರದ್ದು.
ಕರೀಂ ಖಾನರು ಯಾವತ್ತೂ ಗಾಯನದ ಚೌಕಟ್ಟಿನ ಬಗ್ಗೆ ಅಷ್ಟೊಂದು ಗಮನ ಕೊಡುತ್ತಿರಲಿಲ್ಲವೆಂದು ಕಾಣುತ್ತದೆ. ಎಷ್ಟೋ ಬಾರಿ ಹಾಡುವ ಬಂದಿಶ್‍ನ ಆಸ್ಥಾಯಿ-ಅಂತರಾಗಳು ಕೂಡಾ ಇಡಿಯಾಗಿ ಇರುತ್ತಿರಲಿಲ್ಲ. ಅವರ ಗಮನವಿಡೀ ಆ ರಾಗದಿಂದ ರಸಾನುಭವ ಹೇಗೆ ನೀಡಬಹುದು ಎಂಬ ಕಡೆಗೇ ಇರುತ್ತಿತ್ತು. ರಾಗದಲ್ಲಿನ ಸ್ವರಗಳ ಮೇಲೆ ವಿಶ್ರಮಿಸುತ್ತಾ, ನಿಧಾನವಾಗಿ, ವಿಸ್ತಾರವಾಗಿ ಹುಡುಕಾಟ ನಡೆಸುತ್ತಿದ್ದರು. ಕಣ್-ಗಮಕ-ಮೀಂಡ್ ಗಳನ್ನು ಪ್ರಭಾವಶಾಲಿಯಾಗಿ ಬಳಸುವಲ್ಲಿ ಅವರ ಸಾರಂಗಿ ವಾದನದ ಪ್ರಾವೀಣ್ಯತೆ ನೆರವಿಗೆ ಬರುತ್ತಿತ್ತು. ಪ್ರಾಥಃಕಾಲದ ಮಂದ್ರಸಾಧನೆ ಅವರ ಅನುದಿನದ ಸಂಗಾತಿಯಾಗಿತ್ತು. ಮಂದ್ರ ಸಾಧನೆಯಿಂದ ಪಡೆದ ಗಂಭೀರವಾದ ಶಾರೀರ, ಭಾವಾತ್ಮಕತೆಯೊಂದಿಗೆ ಬೆರೆತು ಅದ್ಭುತವನ್ನೇ ಸೃಷ್ಠಿಸುತ್ತಿತ್ತು. ಅವರ ಕಂಠದಿಂದ ಮಾರವಾ, ತೋಡಿ, ಲಲತ್, ಮಾಲ್‍ಕೌಂಸ್, ದರಬಾರಿ ಗಳಂಥಹ ಆಲಾಪಿ ರಾಗಗಳು ಹೇಗೆ ಗಂಭೀರವಾಗಿ ಮೂಡಿ ಬರುತ್ತಿದ್ದವೋ ಅಷ್ಟೇ ಲಾಲಿತ್ಯಪೂರ್ಣವಾಗಿ ಠುಮ್ರಿಗಳೂ ಹೊರಬರುತ್ತಿದ್ದವು. ಆದ್ದರಿಂದಲೇ ‘ಜಮುನಾಕೆ ತೀರ್’, ‘ಪಿಯಾಕೆ ಮಿಲನಕಿ ಆಸ್’, ‘ನೈನಾ ರಸೀಲಿ’ ಮುಂತಾದ ಠುಮ್ರಿಗಳು ಇಂದಿಗೂ ಅಜರಾಮರವಾಗಿವೆ. ಜೊತೆಗೆ ಕರೀಂ ಖಾನರಿಗೆ ‘ಸಚ್ಚೆ ಸ್ವರೋಂಕಾ ದೇವತಾ’ ಎಂಬ ಹೆಸರನ್ನೂ ತಂದುಕೊಟ್ಟಿವೆ.

ಅವರ ಶಿಷ್ಯ ಪರಂಪರೆ ತೊಂಬಾ ದೊಡ್ಡದು. ಅವರಲ್ಲಿ ಪ್ರಮುಖರು ಸವಾಯಿ ಗಂಧರ್ವ, ಬಹ್ರೆ ಬುವಾ, ಸುರೇಶಬಾಬು ಮ್ಹಾನೆ, ಹಿರಾಬಾಯಿ ಬಡೋದೆಕರ್, ದಶರಥಬುವಾ ಮುಳೆ, ರೋಶನಾರಾ ಬೇಗಂ, ಬಾಲಕೃಷ್ಣ ಕಪಿಲೇಶ್ವರಿ ಮುಂತಾದವರು.
ಅತ್ಯಂತ ಸಾಧು ಸ್ವಭಾವದ ಕರೀಂ ಖಾನರು ದಾನ-ಧರ್ಮಗಳಲ್ಲಿ ತುಂಬಾ ಆಸ್ಥೆಯಿಟ್ಟಿದ್ದರು. ದರ್ಗಾಗಳಲ್ಲಿ ಯಾವಾಗಲೂ ಬಡ ಬಗ್ಗರಿಗೆ ದಾನ ಮಾಡುತ್ತಿದ್ದರು. 1913ರಲ್ಲಿ, ಪುಣೆಯಲ್ಲಿ ‘ಆರ್ಯ ಸಂಗೀತ ವಿದ್ಯಾಲಯ’ವನ್ನು ಸ್ಥಾಪಿಸಿ, ಅಲ್ಲಿಯೂ ಬಡ ವಿಧ್ಯಾರ್ಥಿಗಳಿಗೆ ಊಟ-ವಸತಿ ನೀಡಿ ಉಚಿತವಾಗಿ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ತಾವು ಬಲ್ಲ ಸಾರಂಗಿ, ತಬಲಾ, ವೀಣಾ ವಾದ್ಯಗಳನ್ನು ಹೇಳಿಕೊಡುತ್ತಿದ್ದರು. ವಾದ್ಯಗಳ ರಿಪೇರಿ ಕೆಲಸವೆಂದರೆ ಕರೀಂ ಖಾನರಿಗೆ ತುಂಬಾ ಇಷ್ಟ. ತಮ್ಮ ಬಳಿ ಯಾವಾಗಲೂ ರಿಪೇರಿ ಸಾಧನಗಳ ಕಿಟ್ ಒಂದನ್ನು ಇಟ್ಟುಕೊಂಡಿರುತ್ತಿದ್ದರು. ತಂಬೂರಿ ಕೂಡಿಸಿ ‘ಜವಾರಿ’ಹಚ್ಚುವ ಕೆಲಸವನ್ನು ಆಸ್ಥೆಯಿಂದ ಮಾಡುತ್ತಿದ್ದರು. ತಮ್ಮ ಇಳಿ ವಯಸ್ಸಿನಲ್ಲಿ ಮಿರಜ್ ನಲ್ಲಿ ಅವರು ನೆಲೆಸಿದ ಸಮಯದಲ್ಲಿ, ಮಿರಜ್‍ನ ಪ್ರಸಿದ್ಧ ಸಿತಾರ್ ಹಾಗೂ ತಂಬೂರ ತಯಾರಿಸುವವರು ಕರೀಂ ಖಾನರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದರು.

ತಮ್ಮ ಜೀವನವಿಡೀ ಸಂಗೀತಕ್ಕಾಗಿಯೇ ಉಸಿರಾಡಿದ, ಅಬ್ದುಲ್ ಕರೀಂ ಖಾನರು, ತಮ್ಮ ಉಸಿರನ್ನು ಬಿಟ್ಟಿದ್ದೂ ಸಂಗೀತದೊಂದಿಗೇ. ಸಂಗೀತ ಕಾರ್ಯಕ್ರಮಕ್ಕಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕರೀಂ ಖಾನರು ಅಸ್ವಸ್ಥರಾಗಿ, ಮಧ್ಯದ ಯಾವುದೋ ಒಂದು ನಿಲ್ದಾಣದಲ್ಲಿ ವಿಶ್ರಾಂತಿಗಾಗಿ ಇಳಿದರು. ಅಲ್ಲಿದ್ದ ಕಲ್ಲುಬೆಂಚಿನ ಮೇಲೆ ಕುಳಿತು, ಅವರ ಇಷ್ಟದ ದರಬಾರಿ ರಾಗದಲ್ಲಿನ ಪ್ರಾರ್ಥನ ಹಾಡನ್ನು ಹೇಳಿ, ಅಲ್ಲೇ ಚಿರನಿದ್ರೆಗೆ ಜಾರಿದರು. ಜೀವನವಿಡೀ ನಿಶ್ಚಿಂತರಾಗಿ ಬದುಕಿ, ಸಾವನ್ನೂ ನಿರ್ಭೀತಿಯಿಂದ ಪಡೆದರು.

ಹಿಂದೂಸ್ಥಾನಿ ಸಂಗೀತದ ಹಿರಿಯ ವಿದ್ವಾಂಸರಾದ ವಾಮನರಾವ್ ದೇಶಪಾಂಡೆ ಯವರು,ತಮ್ಮ “Indian musical Traditions” ಎಂಬ ಗ್ರಂಥದಲ್ಲಿ, ‘ಪ್ರತೀ ಘರಾಣೆಯ ಉಗಮ, ಆ ಘರಾಣೆಯ ಪ್ರವೃತ್ತಕನ ಕಂಠ ವಿಶೇಷತೆ ಹಾಗೂ ಆ ವಿಶೇಷ ಕಂಠದಿಂದ ಆತ ನಿರ್ಮಿಸುವ ಒಂದು ಹೊಸ ಗಾಯನ ಶೈಲಿಯಲ್ಲಿರುತ್ತದೆ’ ಎಂದು ಅಭಿಪ್ರಾಯ ಪಡುತ್ತಾರೆ.

ಆದರೆ, ಮೇಲಿನ ಈ ಅಂಶಗಳೊಂದಿಗೆ, ಘರಾಣೆಯ ನಿರ್ಮಾತೃವಿನ ವ್ಯಕ್ತಿತ್ವ ಹಾಗೂ ಆತನ ಪ್ರವೃತ್ತಿಗಳು ಕೂಡಾ ಹೇಗೆ ಘರಾಣೆಯೊಂದನ್ನು ರೂಪಿಸುವಲ್ಲಿ ಪಾತ್ರವಹಿಸುತ್ತವೆ ಎಂಬುದನ್ನು ಕರೀಂ ಖಾನರು ಹುಟ್ಟುಹಾಕಿದ ಕಿರಾಣಾ ಘರಾಣೆಯನ್ನು ನೋಡಿ ತಿಳಿಯಬಹುದು. ಇಲ್ಲಿಕರೀಂ ಖಾನರ ವ್ಯಕ್ತಿತ್ವದಲ್ಲಿನ ಗಂಭೀರತೆ-ಅಚಲತೆ-ನಿರ್ಭೀತತೆ-ಸಂತತೆಗಳು ಈ ಘರಾಣೆಯ ಆಲಪ ಪ್ರಾಧಾನ ಗಾಯನದಲ್ಲಿ ಕಾಣುತ್ತದೆ. ಅವರ ಮಧುರ-ಸುಲಲಿತ ಕಂಠದಿಂದ ಮೂಡಿ ಬರುವ ಗಾಯನ, ಹೆಚ್ಚು ವಕ್ರವಿಲ್ಲದೆ, ನಿತಳವಾಗಿ ಹರಿಯುವ ಸ್ಫಟಿಕ ಶುದ್ಧ ನದಿಯಂತೆ ಕಾಣಿಸುತ್ತದೆ ಮತ್ತು ಇದೇ ಕಾರಣಕ್ಕಾಗಿ ಈ ಘರಾಣೆಯ ಗಾಯನ ಬಹುಬೇಗವಾಗಿ ಎಲ್ಲರನ್ನೂ ಸೆಳೆಯುತ್ತದೆ.

Leave a Reply

Your email address will not be published.