ನಾದಲೀಲೆ-5 : ಸುರೇಲಿ ಸ್ವರದ ಸರದಾರ ಬಡೆ ಗುಲಾಂ ಆಲಿ ಖಾನ್

-ಶ್ರೀಮತಿದೇವಿ ಸಾಲ್ಟ್ ಲೇಕ್ ಸಿಟಿ.

bg1ಸರಿಸಮವಿಲ್ಲದ ತಮ್ಮ ಸುಮಧುರ ಧ್ವನಿಯಿಂದ ಇಡೀ ಸಂಗೀತ ಕ್ಷೇತ್ರವನ್ನು ಕೊಳ್ಳೆಹೊಡೆದವರು ಉ.ಬಡೆ ಗುಲಾಂ ಅಲಿ ಖಾನ್. ಲೀಲಾಜಾಲವಾಗಿ, ಅನಾಯಾಸವಾಗಿ ಮೂರೂ ಸಪ್ತಕಗಳಲ್ಲಿ ಸಂಚರಿಸಿ, ವಿಹರಿಸಬಲ್ಲ ಧ್ವನಿ ಅವರದ್ದು. ಈ ಅತಿ ಮಧುರ ದನಿಯಿಂದ ಅತಿ ಅಪೂರ್ವವಾದ ಸಂಗೀತವನ್ನು ನಿರ್ಮಿಸಿ, ಸಂಗೀತ ಪ್ರೇಮಿಗಳೆಲ್ಲರ ಕಿವಿಯನ್ನು ಅವರು ತುಂಬಿಸಿ ಬಿಟ್ಟರು.

‘ಸಂಗೀತವೆಂಬುದು ಉಸಿರಾಡಿದಂತೆ’ ಎಂಬ ಮಾತನ್ನು ಬೇರೆ ಯಾವ್ಯಾವುದೋ ಸಂದರ್ಭಗಳಲ್ಲಿ ಕೇಳಿದ್ದರೂ ಅದರ ನಿಜವಾದ ಅರ್ಥ ನನಗಾದದ್ದು, ಖಾನ್ ಸಾಹೇಬರ ಬಗ್ಗೆ ತಿಳಿದುಕೊಳ್ಳಲು ಹೊರಟ ನಂತರ. ಖಾನ್ ಸಾಹೇಬರಲ್ಲಿ ಸಂಗೀತವೆಂಬುದು ಅಪ್ರಜ್ನಾಪೂರ್ವಕವಾಗಿ, ಸಹಜವಾಗಿ ಒಡಮೂಡಿತ್ತು. ಸಂಗೀತವನ್ನು ಬಿಟ್ಟು ಬೇರೆ ಏನು ಮಾಡಲೂ ಅವರಿಗೆ ಸಾಧ್ಯವಿರಲಿಲ್ಲ. ಸ್ವರಮಂಡಲವನ್ನು ಯಾವಾಗಲೂ ಕೈಯಲ್ಲಿ ಹಿಡಿದುಕೊಂಡೇ ಇರುತ್ತಿದ್ದ ಅವರಿಗೆ ಮಾತಿನ ನಡುವೆಯೂ ಸಂಗೀತದ ಝಲಕ್‍ನ್ನು ತೋರಿಸದೆ ಇರಲಾಗುತ್ತಿರಲಿಲ್ಲ. ಸಂಗೀತದ ಅಭ್ಯಾಸವೆಂಬುದು ಅವರಿಗೆ ಬಿಡಲಾಗದ ಚಟ. ಗಂಟೆಗಟ್ಟಲೆ ಪಲ್ಟಾ, ತಾನುಗಳ ಅಭ್ಯಾಸ ಮಾಡುತ್ತಿದ್ದರು. ಹೀಗಿದ್ದರೂ ಅಪ್ರಜ್ನಾಪೂರ್ವಕವಾಗಿ ಅವರಲ್ಲಿದ್ದ ಸಂಗೀತವನ್ನು ಅವರು ಪ್ರಜ್ನೆಯಿಂದ ತಿಳಿದುಕೊಳ್ಳಲು ಹೊರಟ ಬಗೆ ಆಸಕ್ತಿ ಮೂಡಿಸುವಂಥದ್ದು.

ಖುದಾನ ‘ದೇಣಿಗೆ’ಯಾಗಿ ತಾವು ಪಡೆದಿದ್ದ ಜೇನಿನಂಥಹ ಕಂಠಕ್ಕೆ ಹಲವು ರೀತಿಯ ಸಂಸ್ಕಾರ ನೀಡಿ, ತೀಡಿ-ತಿದ್ದಿ ಅದರ ಮೇಲೆ ಸಂಪೂರ್ಣವಾದ ಪ್ರಭುತ್ವವನ್ನು ಪಡೆದರು. ಖಾನ್ ಸಾಹೇಬರ ಈ ಸ್ವರದ ಒಳಹೊಕ್ಕು ನೋಡುವ ಗುಣವೇ ಅವರನ್ನು ‘ಸುರ ಕಾ ಬಾದಶಹ’ನನ್ನಾಗಿ ಮಾಡಿತು. ಸಂಗೀತದಲ್ಲಿ, ತಂತ್ರಗಾರಿಕೆ ಹಾಗೂ ಭಾವವೆರಡನ್ನೂ ಬೆರೆಸಿ ಅವರು ಮಾಡಿದ ಆವಿಷ್ಕಾರ ಹೊಸ ಅಲೆಯನ್ನೇ ಎಬ್ಬಿಸಿತು. ಈ ಕಾರ್ಯ ಬಹಳ ಪೂರ್ವತಯಾರಿ, ಆಲೋಚನೆ ಹಾಗು ಧೈರ್ಯವನ್ನು ಬಯಸುವಂಥದ್ದು. ‘ಪಟಿಯಾಲಾ ಘರಾಣೆ’ಯ ಸಂಗೀತಕ್ಕೆ ಗೌರವವನ್ನು ತಂದುಕೊಟ್ಟ, ಖಾನರ ಸಂಗೀತದ ಪ್ರಭಾವದಿಂದ ಪಾರಾದ ಸಂಗೀತಗಾರರು ಇರಲಿಕ್ಕಿಲ್ಲ.

‘20ನೇ ಶತಮಾನದ ತಾನಸೇನ್’ ಎಂದೇ ಹೆಸರಾದ ಉ.ಬಡೆ ಗುಲಾಂ ಅಲಿ ಖಾನ್ ಅವರು 1902ರಲ್ಲಿ ಪಂಜಾಬ್‍ನ ಕಾಸೂರ್ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಅಲಿ ಭಕ್ಷ ಖಾನ್ ಹಾಗೂ ಚಿಕ್ಕಪ್ಪ ಕಾಲೇ ಖಾನ್ ಇಬ್ಬರೂ ಉತ್ತಮ ಗಾಯಕರಾಗಿದ್ದರು. ಬಾಲ್ಯದಲ್ಲೇ ತಮ್ಮ ಚಿಕ್ಕಪ್ಪ ಕಾಲೇ ಖಾನ್‍ರಿಂದ ಸಂಗೀತದ ಶಿಕ್ಷಣವನ್ನು ಪಡೆಯಲಾರಂಭಿಸಿದ, ಬಡೆ ಗುಲಾಂ ಅಲಿ ಸಾರಂಗಿಯನ್ನೂ ಚೆನ್ನಾಗಿ ನುಡಿಸುತ್ತಿದ್ದರು. ಹೊಟ್ಟೆಪಾಡಿಗಾಗಿ ಸಾರಂಗಿಯನ್ನೇ ಜಾಸ್ತಿ ಆಶ್ರಯಿಸಿದ್ದ ಖಾನರ ಒಲವು ಮಾತ್ರ ಗಾಯನದ ಕಡೆಗೇ ಇತ್ತು. ತಮ್ಮ ಚಿಕ್ಕಪ್ಪನ ಮರಣಾನಂತರ, ಪಟಿಯಾಲಾ ಘರಾಣೆಯ ಉತ್ತಮ ಗಾಯಕರಾದ ಉ.ಅಖ್ತರ್ ಹುಸ್ಸೇನ್ ಖಾನ್ ಹಾಗೂ ಉ.ಆಶೀಖ್ ಅಲಿ ಖಾನ್ ಅವರ ಬಳಿ ಸಂಗೀತ ಕಲಿಕೆಯನ್ನು ಮುಂದುವರಿಸಿದರು.

‘ಕಾನೂನ್’ ಎಂಬ ಹೆಸರಿನಿಂದ ಗುರುತಿಸಲಾಗುತ್ತಿದ ಸ್ಥಳೀಯ ಸ್ವರವಾದ್ಯವನ್ನು ತಮಗೆ ಬೇಕಾದಂತೆ ಬದಲಿಸಿ ‘ಸ್ವರಮಂಡಲ’ವನ್ನಾಗಿ ಮಾಡಿದರು. ಶ್ರುತಿಬದ್ಧವಾದ ಸ್ವರಮಂಡಲವೊಂದು ಯಾವಾಗಲೂ ಅವರ ಕೈಯಲ್ಲಿರುತಿತ್ತು. ಇದೇ ವಾದ್ಯದಿಂದ ಅವರನ್ನು ಗುರುತಿಸುವಷ್ಟು ಸ್ವರಮಂಡಲ ಅವರ ಜೊತೆಯಾಯಿತು. ಬಡೆ ಗುಲಾಂ ಅಲಿ ಎಂದ ಕೂಡಲೆ, ದೊಡ್ಡ ಮೀಸೆಯ, ಚಕ್ಕಳ-ಮಕ್ಕಳ ಹಾಕಿ ಕೂರಲೂ ತೊಂದರೆ ಮಾಡುವಷ್ಟು ದೊಡ್ಡ ಹೊಟ್ಟೆಯ, ಸ್ವರಮಂಡಲ ಹಿಡಿದು ಕುಳಿತ ಧಡೂತಿ ವ್ಯಕ್ತಿಯ ಚಿತ್ರ ಕಣ್ಣ ಮುಂದೆ ಬರುತ್ತದೆ.

ಸ್ವಾತಂತ್ರ್ಯಾನಂತರ, ವಿಭಜನೆಯಲ್ಲಿ ಅವರು ವಾಸವಾಗಿದ್ದ ಲಾಹೋರ್ ಪಾಕಿಸ್ಥಾನಕ್ಕೆ ಸೇರಿದರೂ, ಬಡೆ ಗುಲಾಂ ಅಲಿ ಆಗಾಗ ಭಾರತಕ್ಕೆ ಭೇಟಿ ನೀಡುತ್ತಿದ್ದರು. 1958ರಲ್ಲಿ ಮೊರಾರ್ಜಿ ದೇಸಾಯಿ ಅವರು ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ ಭಾರತ ದೇಶದ ಪ್ರಜೆಯಾದರು. ಸರಕಾರದಿಂದ ಅವರಿಗೆ ಮಲಬಾರ್ ಬೆಟ್ಟದಲ್ಲಿ ಬಂಗಲೆಯನ್ನೂ ನೀಡಲಾಗಿತ್ತು.

ಸಂಗೀತ ಕ್ಷೇತ್ರದಲ್ಲಿ ಅವರು ತೊಡಗಿದ್ದ ಕಾಲಾವಧಿ ತುಂಬ ಕಡಿಮೆಯಾಗಿದ್ದರೂ, ಅವರು ಸಂಗೀತ ವಿದ್ವಾಂಸರಿಂದ ಹಿಡಿದು, ಜನಸಾಮಾನ್ಯರವರೆಗೆ ತಲುಪಿದ ರೀತಿ ಅಪರೂಪವಾದದ್ದು. 1938ರಲ್ಲಿ ಕಲಕತ್ತಾದಲ್ಲಿ ನಡೆದ ಸಂಗೀತ ಸಮ್ಮೇಳನವೊಂದರಲ್ಲಿ ಅವರು ನೀಡಿದ ಕಾರ್ಯಕ್ರಮ ಅವರ ಜೀವನವನ್ನೇ ಬದಲಾಯಿಸಿತು. ಆ ನಂತರ ಒಂದರಮೇಲೊಂದು ಕಾರ್ಯಕ್ರಮಗಳು ಅವರನ್ನು ಹುಡುಕಿಕೊಂಡು ಬಂದವು. ಅವರ ಭಾವ ಪ್ರಧಾನವಾದ ಸಂಗೀತ, ಉಳಿದ ಸಂಗೀತಗಾರರಿಗಿಂತ ವೇಗವಾಗಿ ಜನರ ಮನಸ್ಸನ್ನು ತಲುಪಿತು. ಬಡೆ ಗುಲಾಂ ಅಲಿ ಅವರಿಗೆ ಶಾಸ್ತ್ರದ ಮಿತಿಯನ್ನು ದಾಟಿ, ಸಂಗೀತದ ಸ್ವರವನ್ನು ತಲುಪುವ ಶಕ್ತಿಯಿತ್ತು. ಸರ್‍ಗಮ್ ಗಳೊಂದಿಗೆ ಆಟವಾಡುತ್ತಾ, ಭಾವ ಹಾಗೂ ಮಧುರತೆಯನ್ನು ಎಲ್ಲೆಡೆ ತುಂಬಿಬಿಡುವ ಮಾಂತ್ರಿಕತೆ ಅವರ ಸಂಗೀತದಲ್ಲಿತ್ತು.

ಸಂಗೀತ ವಿದ್ವಾಂಸರು ಗುರುತಿಸುವಂತೆ ಅವರ ಗಾಯನದಲ್ಲಿ ಪಟಿಯಾಲ-ಕಾಸುರ್ ಘರಾಣೆಯ ಅಂಶಗಳೊಂದಿಗೆ, ಬೆಹರಮ್‍ಖಾನಿ ಧ್ರುಪದ್ ನ ಅಂಶಗಳು, ಜೈಪುರ್ ಘರಾಣೆಯ ಸೂಕ್ಷ್ಮತೆ ಹಾಗೂ ಗ್ವಾಲಿಯರ್ ನ ಬೆಹಲವಾಗಳಿದ್ದವು. ಆದ್ದರಿಂದಲೇ ಅವರಿಗೆ ಶಾಂತವಾದ ಖ್ಯಾಲ್ ಗಯನದೊಂದಿಗೆ ಶೃಂಗಾರ ಭರಿತ ಠುಮ್ರಿ, ದಾದ್ರಾ, ಗಜಲ್ ಹಾಗೂ ಅಷ್ಟೇ ಭಕ್ತಿಭರಿತ ಭಜನ್ ಗಳನ್ನೂ ಸಿದ್ಧಿಸಿಕೊಳ್ಳಲು ಸಾಧ್ಯವಾಯಿತು.

ಅವರ ಖ್ಯಾಲ್ ಗಾಯನದಲ್ಲಿನ ಆಲಾಪ ಸೌಖ್ಯದಾಯಕವಾದದ್ದು. ಬಿಹಾಗ್, ದರ್ಬಾರಿ, ತೋಡಿ ಮುಂತಾದ ಪಾರಂಪರಿಕ ರಾಗಗಳನ್ನೇ ಅವರು ಹೆಚ್ಚಾಗಿ ಹಾಡುತ್ತಿದ್ದರು. ರಾಗಗಳ ಹಾಗೂ ಬಂದಿಶ್‍ಗಳ ಅಷ್ಟೇನು ದೊಡ್ಡ ಸಂಗ್ರಹ ಅವರಲ್ಲಿರಲಿಲ್ಲ. ಪಂ.ಜಗನ್ನಾಥ ಬುವಾ ಹಾಗೂ ಪಂ.ದೇವಧರ್ ಅವರ ಬಳಿ ಹಲವಾರು ಬಂದಿಶ್‍ಗಳನ್ನು ಪಡೆದಿದ್ದರು. ಆದರೆ, ರಾಗರಸಕ್ಕೆ ಜೀವ ಕೊಟ್ಟು, ತಾವು ಅದರಲ್ಲಿ ಮೈಮರೆತು ಹಾಡುವ ರೀತಿ ವಿಶೇಷವಾದದ್ದಾಗಿತ್ತು. ಅವರ ಗಾಯನದಲ್ಲಿನ ಸ್ವರಗಳ ಜೋಡಣೆ, ತಾನ್‍ನ ವೇಗ, ಗಮಕ-ಮುರ್ಕಿ-ಝಮಝಮಾ-ಮೀಂಡ್-ಝೂಟ್ ಗಳ ಬಳಕೆ ಕೇಳುಗರಲ್ಲಿ ವಿದ್ಯುತ್ ಸಂಚಾರವನ್ನು ಉಂಟುಮಾಡುತ್ತಿದ್ದವು. ‘ನನ್ನ ಮಟ್ಟಿಗೆ ಸ್ವರದ ಶುದ್ಧತೆಯೇ ಅತ್ಯಂತ ಶ್ರೇಷ್ಠವಾದದ್ದು’, ‘ನಾನು ನನ್ನ ಸಂಗೀತವನ್ನು ನೋಡುತ್ತಾ ಹಾಡುತ್ತೇನೆ’ ಎಂಬ ಅವರ ಮಾತುಗಳು ಅವರ ಸಂಗೀತಕ್ಕೆ ಹಿಡಿದ ಕನ್ನಡಿಯಂತಿವೆ.

ಅವರ ಠುಮ್ರಿ ಗಾಯನದಲ್ಲಿ ಪೂರಬ್ ಹಾಗೂ ಪಂಜಾಬ್ ಈ ಎರಡೂ ಅಂಗಗಳ ಸುಂದರವಾದ ಮಿಶ್ರಣವಿತ್ತು. ಅವರ ಠುಮ್ರಿ ಗಾಯನ ‘ಬೋಲ್ ಬನಾವ್’ಗೆ ಸೀಮಿತವಾಗಿರಲಿಲ್ಲ. ಸಿಂಧ್ ಹಾಗೂ ಪಂಜಾಬ್ ನ ಲೋಕ ಸಂಗೀತದ ಬಗ್ಗೆ ಅವರಿಗಿದ್ದ ಜ್ನಾನ ಅವರ ಗಾಯನದಲ್ಲಿ ವ್ಯಕ್ತವಾಗುತ್ತಿತ್ತು. ಅವರಿಗೆ ಕೇವಲ ಪಹಾಡಿ ರಾಗವೊಂದರಲ್ಲೇ 10ಕ್ಕೂ ಹೆಚ್ಚಿನ ಪ್ರಕಾರಗಳು ತಿಳಿದಿದ್ದವು. ಭಾವಕ್ಕೆ ಹಾನಿಯಾಗದಂತೆ ಲಘುವಾಗಿ ಆದರೆ ಸ್ಪಷ್ಟವಾಗಿ ಅವರು ಸಾಹಿತ್ಯವನ್ನು ಉಚ್ಛರಿಸುತ್ತಿದ್ದ ರೀತಿ ಅವರ ಗಾಯನದ ವೈಶಿಷ್ಟ್ಯವಾಗಿತ್ತು. ಸಂಗೀತ ವಿದ್ವಾಂಸರಾದ ಅಶೋಕ ರಾನಡೆ ಅವರು, ಬಡೆ ಗುಲಾಂ ಅಲಿ ಅವರ ಗಾಯನದ ಮೇಲಿದ್ದ ಟಪ್ಪಾದ ಪ್ರಭಾವವನ್ನು ಗುರುತಿಸುತ್ತಾರೆ. ಟಪ್ಪಾ ಶೈಲಿಯ ತಾನುಗಳನ್ನು ಅವರ ಖ್ಯಾಲ್ ಹಾಗೂ ಠುಮ್ರಿ ಎರಡರಲ್ಲೂ ಕಾಣಬಹುದು. ಅವರು ಹಾಡಿದ ‘ಯಾದ್ ಪಿಯಾಕಿ ಆಯೆ’ ಹಾಗೂ ‘ಕಾ ಕರೂ ಸಜನಿ, ಆಯೆ ನ ಬಾಲಮ’ ಎಂಬ ಎರಡು ಹಾಡುಗಳಂತೂ ಅಜರಾಮರವಾಗಿವೆ.
ಬಡೆ ಗುಲಾಂ ಅಲಿ ಖಾನರ ಶಿಷ್ಯರ ಪೈಕಿ, ಯಾವಾಗಲೂ ಸಹಗಾಯನದಲ್ಲಿ ಜೊತೆಗಿರುತ್ತಿದ್ದ ಅವರ ಮಗ ಮುನವರ್ ಅಲಿ ಖಾನ್ ಪ್ರಮುಖರು. ಪಟಿಯಾಲಾ ಘರಾಣೆಯ ವಾರಸುದಾರರಾದವರು. ಅಲ್ಲದೆ, ಪಂ.ಅಜಯ ಚಕ್ರವರ್ತಿ, ಪ್ರಸೂನ್ ಹಾಗೂ ಮೀರಾ ಬಾನರ್ಜಿ, ಸಿನೆಮಾ ಅಭಿನೇತ್ರಿ ನೂರ್‍ಜಹಾನ್ ಮುಂತಾದವರಿದ್ದಾರೆ.

1960ರಲ್ಲಿ, ಹಿಂದಿ ಚಲನಚಿತ್ರ ಮುಘಲ್-ಎ-ಆಜಮ್ ನ ತಾನಸೇನ್ ಪಾತ್ರಕ್ಕಾಗಿ ಹಾಡಲು ಕೇಳಿಕೊಂಡಾಗ ಖಾನ್ ಸಾಹೇಬರು ಸುಲಭವಾಗಿ ಒಪ್ಪಿರಲಿಲ್ಲ. ಬಹುರೀತಿಯ ಕೋರಿಕೆಯ ನಂತರ, ಒಂದು ಹಾಡಿಗೆ ಆಗಿನ ಕಾಲದಲ್ಲೇ 25,000ರೂ ಪಡೆದು ಹಾಡಲು ಒಪ್ಪಿದರು. ಆ ಸಮಯದಲ್ಲಿ ಲತಾಜೀ ಹಾಗೂ ರಫಿ ಮುಂತಾದವರ ಒಂದು ಹಾಡಿನ ಸಂಭಾವನೆ ಕೇವಲ 500ರೂ ನಷ್ಟಿತ್ತು. ಆದರೆ ಅವರು ಹಾಡಿದ ರಾಗೇಶ್ರೀ ಹಾಗೂ ಸೋಹನಿಯಲ್ಲಿರುವ ‘ಪ್ರೇಮ ಜೋಗನ ಬನಕೆ’ ಹಾಗೂ ‘ಶುಭದಿನ ಆಯೋ ರಾಜ ದುಲಾರ’ ಎಂಬ ಹಾಡುಗಳು ಇತಿಹಾಸವನ್ನೇ ಸೃಷ್ಠಿಸಿದವು.

ಬಹಳ ಜನಪ್ರಿಯತೆಯನ್ನು ಗಳಿಸಿದ್ದ ಖಾನ್ ಸಾಹೇಬರು, ಮೊದಮೊದಲಿಗೆ ತಮ್ಮ ಜನಪ್ರಿಯತೆಗೆ ಸರಿಯಾದ ಸಂಭಾವನೆ ಬಯಸಿ, ರೆಕಾರ್ಡಿಂಗ್ ಗಾಗಿ ಬಂದ ಅವಕಾಶದ ಬಗ್ಗೆ ಉದಾಸೀನರಾಗಿದ್ದರು. ಮುಂದೆ ದೇಹಾರೋಗ್ಯ ಹದಗೆಡುತ್ತಿದ್ದಾಗ ಹಠವನ್ನು ಬಿಟ್ಟು ರೆಕಾರ್ಡಿಂಗ್‍ಗೆ ಒಪ್ಪಿದರೂ ಆಗ ಅವರ ಕಂಠ ಹಾಗೂ ಆರೋಗ್ಯದ ಸಹಕಾರವಿರಲಿಲ್ಲ. ಆದರೂ ರೆಕಾರ್ಡಿಂಗ್ ಕಂಪೆನಿಯ ಅಧಿಕಾರಿಗಳು ಬಹಳ ತಿಣುಕಾಡಿ ಮಾಡಿದ ಅವರ ರೆಕಾರ್ಡ್‍ಗಳು ಅದೃಷ್ಟವಶಾತ್ ಇಂದಿಗೂ ಲಭ್ಯವಿದೆ. ಆದರೆ ಅವು ಯಾವುವೂ ಅವರ ಯೋಗ್ಯತೆಗೆ ಸರಿಯಾದ ದಾಖಲೆಗಳಲ್ಲ. ಖಾನ್ ಸಾಹೇಬರು,‘ಸಬರಂಗ’ ಎಂಬ ಉಪನಾಮವಿಟ್ಟುಕೊಂಡು ಹಲವಾರು ಬಂದಿಶ್‍ಗಳನ್ನೂ ಅವರು ರಚಿಸಿದ್ದಾರೆ.

ಬಡೆ ಗುಲಾಂ ಅಲಿ ಖಾನರು ಭೋಗ ಜೀವನ ನಡೆಸಿದವರು. ತಿನ್ನುವ ವಿಷಯದಲ್ಲಂತೂ ‘ರಂಗೀಲಾ ಗವಯ್ಯಾ, ರಸೀಲಾ ಖವಯ್ಯಾ’ ಎಂದೇ ಹೆಸರಾದವರು. ಒಂದು ಮದುವೆ ಕಾರ್ಯಕ್ರಮದಲ್ಲಿ ಒಂದೇ ಬಾರಿಗೆ- ಒಂದು ಇಡೀ ಕೋಳಿ, 24ಚಪಾತಿ, 4ಕೆಜಿಯಷ್ಟು ಸಿಹಿತಿಂಡಿಯನ್ನು ತಿಂದು ಕೂಡಲೇ ವೇದಿಕೆಯೇರಿ 4ಗಂಟೆ ಹಾಡಿದ್ದರು ಎಂದು ಹೇಳಲಾಗುತ್ತದೆ. ಮಾಂಸಾಹಾರದ ಊಟ ಹಾಗೂ ಮದ್ಯ ಇವೆರಡೂ ಅವರಿಗೆ ಬಹಳ ಪ್ರಿಯವಾಗಿದ್ದವು.

‘ಸ್ವರದ ನಶೆಯ ಮುಂದೆ ಬೇರೆ ಯಾವ ನಶೆಯೂ ಇಲ್ಲ’ ಎನ್ನುತ್ತಿದ್ದ ಬಡೆ ಗುಲಾಂ ಅಲಿ, ಮಧ್ಯೆ ಪಾಶ್ರ್ವವಾಯುವಿನಿಂದಾಗಿ ಎರಡು ವರ್ಷ ಹಾಸಿಗೆ ಹಿಡಿದರೂ, ಆತ್ಮಬಲದಿಂದ ಬೇಗ ಸುಧಾರಿಸಿಕೊಂಡು ಪುನಃ 5ವರ್ಷಗಳವರೆಗೆ ಕಾರ್ಯಕ್ರಮಗಳನ್ನು ನೀಡಿದರು. ಇವರಿಗೆ 1962ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರಕಿತು. ಮುಂದೆ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರವೂ ಇವರಿಗೆ ಲಭಿಸಿತು.

1967ರ ಸುಮಾರಿಗೆ ಮತ್ತೆ ಆರೋಗ್ಯ ಹದಗೆಟ್ಟಾಗ, ಅವರ ಶಿಷ್ಯರಾದ ಮಾಲತಿ ಗಿಲಾನಿ ಅವರು ಖಾನ್ ಸಾಹೇಬರನ್ನು ಹೈದ್ರಾಬಾದಿಗೆ ಕರೆದೊಯ್ದು ಆರೈಕೆ ಮಾಡಿದರು. ಅಲ್ಲೇ 1968 ಏಪ್ರಿಲ್25ರಂದು ಖಾನ್ ಸಾಹೇಬರು ನಿಧನರಾದರು. ಮಾಲತಿ ಅವರು ತಮ್ಮ ಗುರುಗಳ ಹೆಸರಿನಲ್ಲಿ ‘ಬಡೆ ಗುಲಾಂ ಅಲಿ ಖಾನ್ ಯಾದಗಾರ್ ಸಭಾ’ ವನ್ನು ಸ್ಥಾಪಿಸಿ, ಪ್ರತಿವರ್ಷ ‘ಸಬರಂಗ ಉತ್ಸವ’ ಎಂಬ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ.

ಬಡೆ ಗುಲಾಂ ಅಲಿ ಖಾನರು ಯಾವಾಗಲೂ ಸಾಮಾನ್ಯ ಶ್ರೋತೃಗಳ ಬಗ್ಗೆ ಚಿಂತಿಸುತ್ತಿದ್ದರು. ಪಂಡಿತವರ್ಗವನ್ನು ಖುಷಿ ಪಡಿಸುವ ಬಗ್ಗೆ ಅವರಿಗೆ ಯಾವ ಆಸಕ್ತಿಯೂ ಇರಲಿಲ್ಲ. ಭಾವದ ಮೂಲಕ ಮಾತ್ರ ಜನರ ಮನಸ್ಸನ್ನು ಗೆಲ್ಲಲು ಸಾಧ್ಯ ಎಂಬುದನ್ನು ಅವರು ಕಂಡುಕೊಂಡಿದ್ದರು. ಆದ್ದರಿಂದಲೇ ಯಾವ ಸಂಗೀತಗಾರರು ಪಡೆದಿರದಷ್ಟು ಜನರ ಆದರವನ್ನು ಅವರು ಪಡೆದಿದ್ದರು. ತಮ್ಮ ಸ್ವಭಾವಕ್ಕನುಗುಣವಾಗಿ ಅವರು ಎಲ್ಲಾ ಸಮಯದಲ್ಲೂ ಸಂಗೀತವನ್ನು ಗಂಭೀರವಾಗಿ ನೋಡಲು ಬಯಸುತ್ತಿರಲಿಲ್ಲ. ಬದಲಿಗೆ ಸಂಗೀತವನ್ನು ಬಂಧಮುಕ್ತಗೊಳಿಸಿ ಹೆಚ್ಚು ಆನಂದದಾಯಕವನ್ನಾಗಿಸಲು ಬಯಸಿದ್ದರು.
ಸಂಗೀತದ ಜಾದೂವನ್ನು ತೋರಿಸಿದವರು, ಬಡೆ ಗುಲಾಂ ಆಲಿ ಖಾನರು. ಬದುಕು ಮತ್ತು ಸಂಗೀತವೆರೆಡನ್ನೂ ಪ್ರೀತಿ ಹಾಗೂ ಮಾಧುರ್ಯದ ಉತ್ಕಟತೆಯಲ್ಲಿ ಅದ್ದಿ ತೆಗೆದು ಹರಿಯಬಿಟ್ಟರು. “ಹೈ ರಾಮ್, ಮೈತೋ ಹಾರಗಯಿ………..”

Leave a Reply

Your email address will not be published.