ನಾದಲೀಲೆ-4 : ಠುಮ್ರಿ ಸಂಗೀತದ ಒಡತಿ ಸಿದ್ಧೇಶ್ವರಿ

-ಶ್ರೀಮತಿದೇವಿ ಸಾಲ್ಟ್ ಲೇಕ್ ಸಿಟಿ.

Siddheshwari-Deviಠುಮ್ರಿ ಗಾಯನವನ್ನು ಶಾಸ್ರೀಯ ಸಂಗೀತಕ್ಕೆ ಸರಿ ಸಮಾನವಾಗಿ ನೆಲೆಯಾಗಿಸಿದ ಕೀರ್ತಿ ಸಿದ್ಧೇಶ್ವರಿ ದೇವಿಗೆ ಸಲ್ಲುತ್ತದೆ. ಠುಮ್ರಿ-ದಾದ್ರಾ ಗಾಯನ ಪ್ರಕಾರಗಳಿಗೆ ಹೊಸ ಆಯಾಮ ತಂದುಕೊಡುವುದರೊಂದಿಗೆ, ಈ ಗಾಯಕರಿಗೆ ಸಾಮಾಜಿಕವಾದ ಮನ್ನಣೆಯನ್ನೂ ದೊರಕಿಸಿಕೊಟ್ಟರು.
ಉ.ಫಯ್ಯಾ ಜಖಾನರಿಂದ ‘ಠುಮ್ರಿಯ ರಾಣಿ’ ಎಂದೇ ಕರೆಯಲ್ಪಟ್ಟ ಸಿದ್ಧೇಶ್ವರಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾದ ವಾರಣಾಸಿಯಲ್ಲಿ ಜನಿಸಿದರು. ಅವರು ಜನಿಸಿದ್ದು ಸಂಗೀತದ ಕುಟುಂಬದಲ್ಲೇ ಆದರೂ, ಅವರ ಬಾಲ್ಯ ಮಾತ್ರ ತುಂಬಾ ಕಹಿಯಿಂದ ಕೂಡಿದ್ದಾಗಿತ್ತು. 1907, ಆಗಸ್ಟ್ 8ರಂದು ಜನಿಸಿದ ಸಿದ್ಧೇಶ್ವರಿಯ ಹುಟ್ಟಿದ ಕೂಡಲೇ ತಾಯಿಯನ್ನು ಕಳೆದುಕೊಂಡ ಕಾರಣ, ಪ್ರಸಿದ್ಧ ಗಾಯಕಿಯಾಗಿದ್ದ ತಮ್ಮ ದೊಡ್ಡಮ್ಮ ರಾಜೇಶ್ವರಿ ದೇವಿಯ ಆಶ್ರಯವನ್ನು ಪಡೆಯಬೇಕಾಯಿತು. ಹೊರಗಿನ ಕಾರ್ಯಕ್ರಮಗಳಲ್ಲೇ ಹೆಚ್ಚು ನಿರತಳಾಗಿರುತ್ತಿದ್ದ ರಾಜೇಶ್ವರಿ ದೇವಿಗೆ, ಮನೆವಾರ್ತೆ ನೋಡಿಕೊಳ್ಳಲು ಸಿದ್ಧೇಶ್ವರಿ ದೊರಕಿದ್ದು ನಿರುಮ್ಮಳವಾಗಿತ್ತು.

ಅನಾಥ ಬಾಲಕಿಗೆ ಹೆಸರಿಡುವ ಗೋಜಿಗೂ ಯಾರೂ ಹೋಗದೆ, ‘ಗೋಗೋ’ ಎಂದೇ ಕರೆಯುತ್ತಿದ್ದರು. ಆ ಮನೆಯ ಧಾರ್ಮಿಕ ಗುರುಗಳಾದ ಬಚ್ಚಾ ಮಹಾರಾಜ್ ಅವರು, ಈ ಬಾಲಕಿಯ ಯೋಗ್ಯತೆಯನ್ನು ನೋಡಿ, ಈಕೆ ಸಿದ್ಧಿ ಪಡೆದ ಆತ್ಮ ಎಂದು ತಿಳಿದು, ಸಿದ್ಧೇಶ್ವರಿ ಎಂಬ ಹೆಸರನ್ನಿಟ್ಟಿದ್ದರು. ರಾಜೇಶ್ವರಿ ದೇವಿಗೆ ತನ್ನ ಮಗಳಾದ ಕಮಲೇಶ್ವರಿ, ತಮ್ಮ ಮನೆಯ ಸಂಗೀತ ಪರಂಪರೆಯನ್ನು ಮುಂದುವರಿಸಬೇಕೆಂಬ ಆಸೆ ಇತ್ತು. ಅದಕ್ಕಾಗಿ ಸಿಯಾಜಿ ಮಹಾರಾಜ್ ಎಂಬ ಹಿರಿಯ ಸಂಗೀತಗಾರರೊಬ್ಬರನ್ನು ಮನೆಪಾಠಕ್ಕೆ ಬರುವಂತೆ ಗೊತ್ತು ಮಾಡಲಾಗಿತ್ತು. ಆದರೆ ಕಮಲೇಶ್ವರಿಗೆ ಸಂಗೀತ ಕಲಿಯುವ ಯಾವ ಆಸಕ್ತಿಯೂ ಇರಲಿಲ್ಲ, ಆದರೆ ಮನೆಕೆಲಸ ಮಾಡುತ್ತಲೇ ಇರುತ್ತಿದ್ದ, ಸಿದ್ಧೇಶ್ವರಿ ಮಾತ್ರ ಕಿವಿಗೆ ಬಿದ್ದ ಸಂಗೀತವನ್ನು ಆತ್ಮಗತ ಮಾಡಿಕೊಳ್ಳುತ್ತಾ ಸಾಗುತ್ತಿದ್ದಳು. ಇಷ್ಟೆಲ್ಲಾ ಯೋಗ್ಯತೆ ಇದ್ದರೂ ಸಿದ್ಧೇಶ್ವರಿಗೆ ಗುರು ಮುಖೇನ ಸಂಗೀತ ಕಲಿಯುವ ಅವಕಾಶ ಮಾತ್ರ ದೊರಕಿರಲಿಲ್ಲ.

ಈ ಅವಕಾಶ ಸಿನಿಮೀಯ ರೀತಿಯಲ್ಲಿ ಸ್ವಲ್ಪ ದಿನಗಳಲ್ಲೇ ಸಿದ್ಧೇಶ್ವರಿಗೆ ಪ್ರಾಪ್ತಿಯಾಯಿತು. ಒಂದು ಬಾರಿ ರಾಜೇಶ್ವರಿ ದೇವಿ ತನ್ನ ಮಗಳ ಪ್ರಗತಿಯನ್ನು ತಿಳಿಯಬಯಸಿ ಪಾಠ ನಡೆಯುವಲ್ಲಿ ಬರುತ್ತಾಳೆ. ಟಪ್ಪಾದ ಒಂದು ಸಾಲನ್ನು ಹಾಡಲಾಗದೇ ಒದ್ದಾಡುತ್ತಿದ್ದ ಕಮಲೇಶ್ವರಿಯನ್ನು ಕಂಡು ಸಿಟ್ಟಿನಿಂದ ಹೊಡೆಯತೊಡಗುತ್ತಾಳೆ. ಏಟನ್ನು ತಾಳಲಾರದ ಆಕೆ, ಸಹಾಯಕ್ಕಾಗಿ ಸಿದ್ಧೇಶ್ವರಿಯನ್ನು ಕರೆದಾಗ, ಏಟನ್ನು ತಾನೇ ಪಡೆಯುತ್ತಾ ಸಿದ್ಧೇಶ್ವರಿ, ಆ ಟಪ್ಪಾದ ಸಾಲುಗಳನ್ನು ತಾನೇ ಹಾಡುತ್ತಾ ತಂಗಿಗೆ ಹೇಳಿಕೊಡಲಾರಂಭಿಸುತ್ತಾಳೆ. ಇದನ್ನು ಕೇಳಿ ದಿಗ್ಭ್ರಮೆಗೊಂಡ ಸಿಯಾಜಿ ಮಹಾರಾಜ್ ಅವರು ಮರುದಿನವೇ ರಾಜೇಶ್ವರಿಯ ಬಳಿ ಬಂದು, ಸಿದ್ಧೇಶ್ವರಿಗೆ ಸಂಗೀತವನ್ನು ಕಲಿಸದೇ ಇದ್ದಲ್ಲಿ, ಸರಸ್ವತಿ ತನ್ನ ಮೇಲೇ ಮುನಿಸಿಕೊಂಡಾಳು ಎಂದು ಹೇಳಿ, ಸಂಗೀತ ಪಾಠಕ್ಕೆ ಅವಳನ್ನು ಕಳುಹಿಸುವಂತೆ ಮನವೊಲಿಸುತ್ತಾರೆ. ಅಷ್ಟೇನು ಇಷ್ಟವಿಲ್ಲದಿದ್ದರೂ, ರಾಜೇಶ್ವರಿ ದೇವಿ, ತನ್ನ ಮನೆಯ ಎಲ್ಲಾ ಕೆಲಸಗಳು ಮುಗಿದ ಮೇಲಷ್ಟೇ ಸಂಗೀತ ಪಾಠಕ್ಕೆ ಹೋಗಬಹುದೆಂಬ ಸೂಚನೆಯನ್ನು ನೀಡುತ್ತಾಳೆ. ಹೀಗೆ ಆರಂಭವಾಗುತ್ತದೆ, ಸಿದ್ಧೇಶ್ವರಿಯ ಸಂಗೀತ ಯಾತ್ರೆ….

ಸಿಯಾಜಿ ಮಹಾರಾಜ್ ತುಂಬಾ ಪ್ರೀತಿಯಿಂದ ಸಂಗೀತ ಪಾಠ ಆರಂಭಿಸಿದರು. ಮಕ್ಕಳಿಲ್ಲದ ಕಾರಣ ಸಿದ್ಧೇಶ್ವರಿಯನ್ನು ದತ್ತು ಪಡೆದು, ಶಕ್ತಿಯುತ ಶಾರೀರವನ್ನು ಪಡೆಯಲಿ ಎಂದು ತುಪ್ಪದ ಊಟ ಉಣಬಡಿಸಿ, ಮನೆಮಗಳಾಗಿ ಕಂಡರು. ಸಿಯಾಜಿ ಮಹಾರಾಜ್ ಅವರ ಬಳಿ ಹಲವು ವರ್ಷಗಳ ಕಾಲ ಖ್ಯಾಲ್-ಠುಮ್ರಿ-ಟಪ್ಪಾ ಗಳ ಅಭ್ಯಾಸ ನಡೆಸಿದ, ಸಿದ್ಧೇಶ್ವರಿ ನಂತರ ಕೆಲವು ವರ್ಷ ವಾರಣಾಸಿಯ ಹಿರಿಯ ಸಂಗೀತಗಾರರಾದ, ಬಡೆ ರಾಮದಾಸ್‍ಜೀ ಅವರ ಬಳಿಯೂ ಅಭ್ಯಾಸ ನಡೆಸಿದರು. ಅವರು ರಜಾಬ್ ಅಲಿ ಖಾನ್ ಹಾಗೂ ಇನಾಯತ್ ಖಾನ್ ಅವರ ಬಳಿಯೂ ಕೆಲವು ಕಾಲ ಅಭ್ಯಾಸ ನಡೆಸಿದ್ದಾಗಿ ತಿಳಿದುಬರುತ್ತದೆ. ಆದ್ದರಿಂದ ಸಿದ್ಧೇಶ್ವರಿಯ ಬಳಿ ಬಂದಿಶ್‍ಗಳ ದೊಡ್ಡ ಖಜಾನೆಯೇ ಇತ್ತು. ಖ್ಯಾಲ್, ಠುಮ್ರಿ, ದಾದ್ರಾ ಮಾತ್ರವಲ್ಲದೇ ಟಪ್ಪಾ, ಚೈತಿ, ಭಜನ್ಸ್ ಪ್ರಕಾರಗಳಲ್ಲೂ ಸಿದ್ಧಿಯನ್ನು ಪಡೆದಿದ್ದರು. ಆದರೆ ಇದಾವುದರಿಂದಲೂ ರಾಜೇಶ್ವರಿಗೆ ಸಂತೋಷವಾಗಲಿಲ್ಲ. ಕೆಲವೇ ವರ್ಷಗಳಲ್ಲಿ ಯಾವುದೋ ಕಾರಣ ಹುಡುಕಿ, ಸಿದ್ಧೇಶ್ವರಿಯನ್ನು ಮನೆಯಿಂದ ಹೊರಗಟ್ಟಿದಳು. ಪುನಃ ಅನಾಥಳಾದ ಸಿದ್ಧೇಶ್ವರಿ ಅವರ ಸೋದರಮಾವ ಅಮರನಾಥ ರ ಕುಟುಂಬದ ಆಶ್ರಯ ಪಡೆದು ಸಂಗೀತಾಭ್ಯಾಸ ಮುಂದುವರಿಸಿದರು.

ವಾರಾಣಾಸಿಯಂತಹ ಪವಿತ್ರ ಧಾರ್ಮಿಕ ಸ್ಥಳದಲ್ಲಿ ಜನಿಸಿದ ಸಿದ್ಧೇಶ್ವರಿಗೆ ದೇವರಲ್ಲಿ ಅಪಾರವಾದ ಶ್ರದ್ಧೆ ಹಾಗೂ ತನ್ನ ಊರಿನ ಬಗ್ಗೆ ಅಷ್ಟೇ ಪ್ರೀತಿ ಇತ್ತು. ಬಾಲ್ಯದಿಂದ ಕೊನೆಯವರೆಗೂ ಅವರಲ್ಲಿದ್ದ ಧಾರ್ಮಿಕ ಚಿಂತನೆ, ಆಸ್ಥೆಗಳು ಅವರ ಗಾಯನದ ಮೇಲೆ ಪ್ರಭಾವ ಬೀರಿದ್ದವು. ಸಿಯಾಜಿ ಮಹಾರಾಜ್ ಅವರ ಒಪ್ಪಿಗೆ ಪಡೆದು, 18ವರ್ಷದವರಿದ್ದಾಗ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದ ಸಿದ್ಧೇಶ್ವರಿ ಆ ನಂತರ ಹಿಂತಿರುಗಿ ನೋಡಲಿಲ್ಲ. ವಾರಣಾಸಿ ಮಾತ್ರವಲ್ಲದೇ ಅಲಹಾಬಾದ್, ಕಾಶ್ಮೀರ, ಲಾಹೋರ್, ಮೈಸೂರು, ರಾಂಪುರ, ಜೋಧಪುರ, ಮುಂಬೈ, ದರಭಾಂಗ ಮುಂತಾದ ಹಲವು  ಸಂಸ್ಥಾನಗಳಿಂದ ಕಾರ್ಯಕ್ರಮಗಳಿಗಾಗಿ ಆಹ್ವಾನ ಅವರಿಗೆ ಬರತೊಡಗಿತು. ಕಾರ್ಯಕ್ರಮಗಳನ್ನು ನೀಡುವುದು ಜೀವನೋಪಾಯದ ದೃಷ್ಠಿಯಿಂದಲೂ ಅವರಿಗೆ ಅನಿವಾರ್ಯವಾಗಿತ್ತು. ಅವರ ಮಧುರ ಕಂಠದಿಂದ ಹೊರಹೊಮ್ಮುತ್ತಿದ್ದ ಸಂಗೀತ ಎಂಥವರನ್ನೂ ಮಂತ್ರಮುಗ್ಧಗೊಳಿಸುತ್ತಿತ್ತು.
ಸಿದ್ಧೇಶ್ವರಿ ಹೀಗೆ ಯಶಸ್ಸಿನನ್ನು ಪಡೆಯುತ್ತಾ ಸಾಗುತ್ತಿದ್ದಾಗಲೇ ಒಂದು ಪವಾಡದ ರೀತಿಯ ಘಟನೆ ನಡೆಯಿತು. ದರಭಾಂಗ ಸಂಸ್ಥಾನದಲ್ಲಿ ಕಾರ್ಯಕ್ರಮವೊಂದನ್ನು ನೀಡಿದ ಬಳಿಕ, ಶೋತೃಗಳ ಪೈಕಿ ಯಾರೋ ಒಬ್ಬರು ತಂದುಕೊಟ್ಟ ಪಾನ್ ಒಂದನ್ನು ತಿಂದ ಸಿದ್ಧೇಶ್ವರಿ ತನ್ನ ಕಂಠವನ್ನು ಕಳೆದುಕೊಳ್ಳುತ್ತಾರೆ. ವಿಷಪೂರಿತ ಪಾನ್‍ನಿಂದಾಗಿ ಅವರಿಗೆ ಹಾಡುವುದಿರಲಿ, ಮಾತನಾಡುವುದೂ, ಊಟ ಮಾಡುವುದೂ ಸಾಧ್ಯವಿಲ್ಲದಂತಾಗುತ್ತದೆ.

ಹಲವು ಕಾಲ ಇದೇ ಸ್ಥಿತಿಯಲ್ಲಿ ಒದ್ದಾಡಿದ ಸಿದ್ಧೇಶ್ವರಿ, ಅಘೋರಿ ರಾಜೇಶ್ವರ ರಾಮ್ ಬಾಲಾ ಎಂಬ ಸಾಧು ನೀಡಿದ ಬೂದಿಯ ನೀರು ಕುಡಿzು ಮೇಲೆ, ವಾಂತಿಯೊಂದಿಗೆ ಎಲ್ಲಾ ವಿಷಕಾರಕ ಅಂಶಗಳು ಹೊರಗೆ ಹೋಗಿ ಸಿನಿಮೀಯ ರೀತಿಯಲ್ಲಿ ತಮ್ಮ ಸುಮಧುರ ಕಂಠವನ್ನು ಮತ್ತೆ ಪಡೆಯುತ್ತಾರೆ. ಸಿದ್ಧೇಶ್ವರಿ ದೇವಿಯ ಮಗಳಾದ ಪ್ರಸಿದ್ಧ ಸಂಗೀತಗಾರ್ತಿ ಸವಿತಾ ದೇವಿ, ತಮ್ಮ ತಾಯಿಯ ಬಗ್ಗೆ ಬರೆದ ‘ಮಾ ಸಿದ್ಧೇಶ್ವರಿ’ ಎಂಬ ಪುಸ್ತಕದಲ್ಲಿ ಈ ಘಟನೆಯನ್ನು ವಿವರವಾಗಿ ವರ್ಣಿಸುತ್ತಾರೆ.

ಭಾರತದಲ್ಲಿ ಮುಸಲ್ಮಾನರ ಆಡಳಿತದಿಂದಾಗಿ ಕಥಕ್ ನೃತ್ಯ ಹಾಗೂ ಅದರೊಂದಿಗೆ ಬೆಸೆದುಕೊಂಡ ಠುಮ್ರಿ ಸಂಗೀತಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಕ್ಕಿತು. ಲಖ್ನೋ ಕಥಕ್ ನ ತವರುಮನೆ. ಇಲ್ಲಿನ ರಾಜ ವಾಜಿದ್ ಅಲಿ ಶಾಹ ಕಥಕ್ ಗೆ ಮನಸೋತವನಾಗಿದ್ದನು. ತಾನು ಬ್ರಿಟೀಷರಿಂದ ಸೋತು, ಗಡಿಪಾರು ಆಗುವವರೆಗೂ ಸಂಗೀತ-ನೃತ್ಯದಲ್ಲೇ ಮೈಮರೆತ ಹುಚ್ಚ ವಾಜೀದ್ ಅಲಿ. ಕಲೆಗ ಅಪಾರವಾದ ಪ್ರೋತ್ಸಾಹ ನೀಡಿದ ಇವನ ಬಗ್ಗೆ ಮಾತಾಡದೆ, ಠುಮ್ರಿ ಬಗ್ಗೆ ಮಾತನಾಡುವುದು ಸಾಧ್ಯವಿಲ್ಲ. ಲಖ್ನೋದಿಂದ ಪಶ್ಚಿಮದೆಡೆಗೆ ಸಾಗಿದ ಠುಮ್ರಿ, ಪಂಜಾಬ್ ಅಂಗ ಪಡೆದು ಬೆಳೆದರೆ, ಪೂರ್ವದೆಡೆಗೆ ಸಾಗಿದ ಠುಮ್ರಿ, ವಾರಣಾಸಿಯಲ್ಲಿ ನೆಲೆಯಾಗಿ ಪೂರಬ್ ಅಂಗದ ಠುಮ್ರಿ ಎಂದು ಹೆಸರಾಯಿತು.

ಸಿದ್ಧೇಶ್ವರಿ ತಾನು ಹಾಡಿ ಪ್ರಸಿದ್ಧಗೊಳಿಸಿದ್ದು ಈ ಪೂರಬ್ ಅಂಗದ ಠುಮ್ರಿಯನ್ನು. ಇಲ್ಲಿ ಸಾಹಿತ್ಯದ ಭಾವನೆಗೆ ತುಂಬಾ ಪ್ರಾಧಾನ್ಯತೆ ಇರುತ್ತದೆ. ಖ್ಯಾಲ್ ಗಾಯನದಲ್ಲೂ ಅಷ್ಟೇ ಪರಿಣತಿ ಹೊಂದಿದ್ದ ಸಿದ್ಧೇಶ್ವರಿ ತಮ್ಮ ಠುಮ್ರಿ ಗಾಯನದಲ್ಲೂ ಖ್ಯಾಲ್ ಅಂಗಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಗಡಿಬಿಡಿಯಿಲ್ಲದ ಶಾಂತ ಗಾಯನದಲ್ಲಿ ಪರಿಣಾಮಕಾರಿಯಾಗಿ ಮೀಂಡ್-ಖಟ್ಗಾ-ಮುರ್ಕಿ ಗಳನ್ನು ಬಳಸುತ್ತಿದ್ದರು. ಟಪ್ಪಾ ಅಂಗದ ತಾನ್‍ಗಳನ್ನೂ ತಮ್ಮ ಗಾಯನದಲ್ಲಿ ಉಪಯೋಗಿಸುತ್ತಿದ್ದರು. ‘ಬೋಲ್ ಬನಾವ್ ಕಿ ಠುಮ್ರಿ’, ಸಿದ್ಧೇಶ್ವರಿಯ ಗಾಯನದ ವೈಶಿಷ್ಟ್ಯತೆ. ಇಲ್ಲಿ, ಬಂದಿಶ್‍ನ ಶಬ್ದಗಳನ್ನು ಹಲವು ರೀತಿಯಾಗಿ ಜೋಡಿಸಿ, ಸ್ವರದ ಏರಿಳಿತಗಳೊಂದಿಗೆ ಭಾವಯುಕ್ತವಾಗಿ ಹಾಡಲಾಗುತ್ತದೆ. ಶಬ್ದಗಳಿಂದ ಕೂಡಿದ ಒಂದು ಸಂಗೀತ ವಾಕ್ಯವನ್ನು ಬೇರೆ ಬೇರೆ ರೀತಿಯಲ್ಲಿ ಹೊಂದಿಸುತ್ತಾ, ಆ ಶಬ್ದದ ಭಾವವನ್ನು ಹೊರಹಾಕಲಾಗುತ್ತದೆ.

ಮೂಲತಃ ಹಾವ-ಭಾವಗಳನ್ನು ಮಾಡುತ್ತಾ ಹಾಡಲಾಗುತ್ತಿದ್ದ ಠುಮ್ರಿ ಗಾಯನ ಶೃಂಗಾರ ರಸ ಪ್ರಧಾನವಾದದ್ದು. ಭೋಗ ಪ್ರಧಾನವಾದ ಜೀವನವನ್ನೇ ಮುಂದಿಡುವ ಈ ಸಂಗೀತ ಪ್ರಕಾರ, ಶಾಸ್ತ್ರೀಯ ಸಂಗೀತಗಾರರ ದೃಷ್ಠಿಯಲ್ಲಿ ತುಂಬಾ ಕೀಳಾದದ್ದಾಗಿತ್ತು. ಈ ಉಪೇಕ್ಷೆಯನ್ನು ತಡೆಯಲಾರದ ಉಪ-ಶಾಸ್ತ್ರೀಯ ಸಂಗೀತಗಾರರು ಕಂಡುಕೊಂಡ ಪರಿಹಾರವೇ ‘ಬೋಲ್ ಬನಾವ್ ಕಿ ಠುಮ್ರಿ’. ಇಲ್ಲಿ, ಅಭಿನಯವು ಮಾಡುವ ಕೆಲಸವನ್ನು, ಶಬ್ದದ ಆಟ ಮಾಡುತ್ತದೆ. ಇದನ್ನು ಹುಟ್ಟುಹಾಕಿದವರು ಭಯ್ಯಾ ಗಣಪತರಾವ್, ಮೊಯಿಜುದ್ದೀನ್, ಶಾಮಲಾಲ್ ಖತ್ರಿ ಮುಂತಾದವರಾದರೂ, ಮುಂದುವರಿಸಿ ಪ್ರಸಿದ್ಧಿಗೊಳಿಸಿದವರು- ಸಿದ್ಧೇಶ್ವರಿ ದೇವಿ, ಬಡಿ ಮೋತಿ ಬಾಯಿ, ರಸೂಲನ ಬಾಯಿ, ಬೇಗಂ ಅಖ್ತರ್ ಮೊದಲಾದವರು. ಈ ಪರಂಪರೆಯ ಇತ್ತೀಚಿನ ಹೆಸರಾದ ಗಾಯಕಿ ಎಂದರೆ, ಗಿರಿಜಾ ದೇವಿ. ಆದರೆ, ಈ ಪ್ರಕಾರಕ್ಕೆ ಶಾಸ್ತ್ರೀಯವಾದ ಮನ್ನಣೆ ತಂದುಕೊಟ್ಟ ಕೀರ್ತಿ ಸಲ್ಲಬೇಕಾದದ್ದು, ಸಿದ್ಧೇಶ್ವರಿ ದೇವಿಗೆ. ಇವರ ತಾಯಿ ಮೈನಾ ದೇವಿ, ಮೊಯಿಜುದ್ದೀನರ ಶಿಷ್ಯೆಯಾಗಿದ್ದದ್ದೂ ಇದಕ್ಕೆ ಒಂದು ಕಾರಣ. ಸಿದ್ಧೇಶ್ವರಿ, ತಾನು ಗೌರವಯುತವಾದ ಜೀವನ ನಡೆಸಿ, ಐಹಿಕವಾಗಿದ್ದ ಈ ಸಂಗೀತವನ್ನು ದೈವಭಕ್ತಿಯೊಂದಿಗೆ ಬೆಸೆದು, ಉತ್ತಮ ಕುಲದ ಸ್ತ್ರೀಯರೂ ಈ ಪ್ರಕಾರದ ಸಂಗೀತವನ್ನು ಹಾಡಬದುದಾದಂಥಹ ಪರಿಸ್ಥಿತಿಯನ್ನು ನಿರ್ಮಿಸಿದರು.

ಚಿಕ್ಕಂದಿನಿಂದಲೂ ಅಲ್ಲಿ-ಇಲ್ಲಿ ಹೋಗಿ, ಜಾನಕಿ ಬಾಯಿ, ಗೋಹರ್ ಜಾನ್ ಮೊದಲಾದವರ ಗ್ರಾಮಾ ನ್ ರೆಕಾರ್ಡಿಂಗ್‍ಗಳನ್ನು ಕೇಳುತ್ತಾ ಬೆಳೆದವರು, ಸಿದ್ಧೇಶ್ವರಿ. ಗೋಹರ್ಜಾನ್, ಜೋಹರ್ ಬಾಯಿ, ಮಲಿಕಾ ಜಾನ್ ಇವರುಗಳ ಸಂಗೀತ ಸಿದ್ಧೇಶ್ವರಿಯ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಕಲಕತ್ತಾದ ಸಮ್ಮೇಳನವೊಂದರಲ್ಲಿ, ಓಂಕಾರನಾಥ ಠಾಕೂರ್, ದಿಲೀಪ್ ಚಂದ್ರ ವೇಧಿ, ಫಯ್ಯಾಜಾ ಖಾನ್ ಮುಂತಾದ ದಿಗ್ಗಜರ ಸಮ್ಮುಖದಲ್ಲಿ ಹಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಆ ನಂತರ ಮುಂಬೈಯಲ್ಲಿ ನಡೆದ ‘ಅಖಿಲ ಭಾರತ ಮಟ್ಟದ ಸಂಗೀತ ಸಮ್ಮೇಳನ’ವೊಂದರಲ್ಲಿ ಸಿದ್ಧೇಶ್ವರಿ ಹಾಡಿದ, ‘ಕಾಹೆ ಕೊ ಡಾರಿ ರೆ ಗುಲಾಲ’ ಎಂಬ ಭೈರವಿ ರಾಗದ ಠುಮ್ರಿಯನ್ನು ಕೇಳಿದ ಉ.ಫಯ್ಯಾಜಾಖಾನರು ಸಿದ್ಧೇಶ್ವರಿಯನ್ನು “ನೀನೇ ಠುಮ್ರಿಯ ರಾಣಿ” ಎಂದು ಕೊಂಡಾಡಿದ್ದರು. ಸಿದ್ಧೇಶ್ವರಿ ಆಕಾಶವಾಣಿಯ ನೆಚ್ಚಿನ ಗಾಯಕರೂ ಆಗಿದ್ದರು. ಅವರ ಸಹಜತೆ-ಸರಳತೆಗಳಿಂದ ಕೇವಲ ಸಂಗೀತಗಾರರಿಗೆ ಮಾತ್ರವಲ್ಲದೆ, ಜನ ಸಾಮಾನ್ಯರಿಗೂ ತುಂಬಾ ಹತ್ತಿರವಾಗುತ್ತಿದ್ದರು.

sd001ಕರ್ನಾಟಕಿ ಸಂಗೀತದ ಪ್ರಸಿದ್ಧ ಗಾಯಕಿ ಎಂ.ಎಸ್.ಸುಬ್ಬುಲಕ್ಷ್ಮಿ ಅವರು, ಸಿದ್ಧೇಶ್ವರಿಯನ್ನು ತಮ್ಮ ಗುರು ಎಂದೇ ಭಾವಿಸಿದ್ದರು. ಸಿದ್ಧೇಶ್ವರಿ ಕೆಲವು ಕಾಲ, ಎಂ.ಎಸ್ ಅವರ ಚೆನ್ನೈ ನ ಮನೆಯಲ್ಲಿ ತಂಗಿ, ಅವರಿಗೆ ಹಲವಾರು ಠುಮ್ರಿ ಹಾಗೂ ಭಜನ್ ಗಳನ್ನು ಕಲಿಸಿದ್ದರು. ಸಿದ್ಧೇಶ್ವರಿಯ ಪ್ರಸಿದ್ಧ ಭಜನ್ ‘ಹೆ ಗೋವಿಂದ, ಹೆ ಗೋಪಾಲ್’ನ್ನು, ಎಂ.ಎಸ್ ಅವರು ಕಛೇರಿಗಳಲ್ಲೂ ಹಾಡುತ್ತಿದ್ದರು. ಅವರಿಬ್ಬರ ನಡುವೆ ಅತ್ಯಂತ ಆತ್ಮೀಯವಾದ ಸಂಬಂಧವಿತ್ತು. ಸಿದ್ಧೇಶ್ವರಿಯ ಪುತ್ರಿಯರಾದ ಶಾಂತಾ ದೇವಿ ಹಾಗೂ ಸವಿತಾ ದೇವಿ ಇಬ್ಬರೂ ಉತ್ತಮ ಗಾಯಕಿಯರಾಗಿದ್ದರೂ ಸವಿತಾ ದೇವಿ ಹೆಚ್ಚಿನ ಪ್ರಗತಿ ಸಾಧಿಸಿದರು. ಮುಂದೆ ತಮ್ಮ ತಾಯಿಯ ಹೆಸರಿನಲ್ಲಿ ‘ಸಿದ್ಧೇಶ್ವರಿ ಅಕಾಡೆಮಿ ಆಫ್ ಇಚಿಡಿಯನ್ ಮ್ಯುಸಿಕ್’ ಎಂಬ ಸಂಸ್ಥೆಯನ್ನೂ ಸ್ಥಾಪಿಸಿ, ಸಂಗೀತದ ಕೆಲಸಗಳನ್ನು ಆರಂಭಿಸಿದರು. ಸಿದ್ಧೇಶ್ವರಿ ಇನ್ನೋರ್ವ ಪ್ರಮುಖ ಶಿಷ್ಯೆ ಎಂದರೆ, ರೀಟಾ ಗಂಗೂಲಿ.

ಸಿದ್ಧೇಶ್ವರಿ ದೇವಿ, ತಮ್ಮ ಇಳಿ ವಯಸ್ಸಿನಲ್ಲಿ, ವಾರಣಾಸಿಯನ್ನು ಬಿಟ್ಟು ಡೆಲ್ಲಿಗೆ ಬಂದು ನೆಲೆಯಾಗಬೇಕಾಯಿತು. ಸದಾ ಕ್ರಿಯಾಶೀಲರಾದ ಸಿದ್ಧೇಶ್ವರಿ, ಡೆಲ್ಲಿಯಲ್ಲಿನ ‘ಶ್ರೀ ರಾಮ ಭಾರತೀಯ ಕಲಾ ಕೇಂದ್ರ’ದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಾ ಜನಮನ್ನಣೆಯನ್ನೂ, ವಿಧ್ಯಾರ್ಥಿಗಳ ಪ್ರೀತಿಯನ್ನೂ ಪಡೆದರು. ಶಿಷ್ಯರ ಪ್ರೀತಿಯ ‘ಮಾ’ ಆದರು. 1967ರಲ್ಲಿ ಅವರಿಗ’ಪದ್ಮಶ್ರೀ’  ದೊರಕಿತು. 1973ರಲ್ಲಿ ರಬೀಂದ್ರ ಭಾರತಿ ವಿಶ್ವ ವಿದ್ಯಾಲಯದಿಂದ ಡಿ.ಲಿಟ್ ಪದವಿ ಪ್ರಾಪ್ತವಾಯಿತು. ರೋಮ್, ಕಾಬುಲ್, ಖಾಟ್ಮಂಡುಗಳಿಗೂ ಪ್ರವಾಸ ಮಾಡಿದ ಸಿದ್ಧೇಶ್ವರಿ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವುಗಳ ಪೈಕಿ ಹೆಚ್ಚು ಹೆಸರುವಾಸಿಯಾದದ್ದು ‘ಸೂರ್ಯಕುಮಾರಿ’ ಎಂಬ ಸಿನೆಮಾ.

ಮೂರು ಸಪ್ತಕಗಳಲ್ಲೂ ಆರಾಮವಾಗಿ ಚಲಿಸಬಲ್ಲಂಥ ಅವರ ಕಂಠ, ಅವರ ಹಲವು ವರ್ಷಗಳ ತಪಸ್ಸಿನ ಫಲ. ಜೀವನದುದ್ದಕ್ಕೂ ಕಷ್ಟ, ಸವಾಲುಗಳನ್ನು ಎದುರಿಸುತ್ತಲೇ ಬೆಳೆದ ಅವರ ಜೀವನಾನುಭವದ ಸಾರ ಅವರ ಭಾವಪೂರ್ಣವಾದ ಗಾಯನದಲ್ಲಿ ಎದ್ದು ಕಾಣುತ್ತದೆ. ಇಳಿ ವಯಸ್ಸಿನಲ್ಲೂ ಹಾಡುತ್ತಲೇ ಇದ್ದ ಅವರ ಕೊನೆಯ ಕಾರ್ಯಕ್ರಮ ಆಕಾಶವಾಣಿಯಲ್ಲಾಗಿತ್ತು. ತಾವು ಹಾಡುತ್ತಲೇ ಸಾವು ಪಡೆಯಬೇಕೆಂಬ ಆಸೆಯನ್ನು ಅವರು ಹೊಂದಿದ್ದರು.
ಸಿದ್ಧೇಶ್ವರಿಗೆ ಸಂಗೀತವೆಂಬುದು ಪ್ರಾರ್ಥನೆಯಂತೆ. ಅದು ಅವರ ಅಂತರಂಗದ ಕೂಗಾಗಿತ್ತು. ಠುಮ್ರಿಯಂಥಹ ಐಹಿಕತೆ ಪ್ರಧಾನವಾದ ಸಂಗೀತವನ್ನು, ಪ್ರಾರ್ಥನೆಯೆಂಬಂತೆ ನೋಡಿ, ‘ಸಿದ್ಧಿ’ ಪಡೆದ ಜೀವ, ಸಿದ್ಧೇಶ್ವರಿ ದೇವಿ. ಒಂದು ಕೈಯನ್ನು ಕಿವಿಯ ಮೇಲಿಟ್ಟು, ಕಣ್ಣು ಮುಚ್ಚಿ, ಹಾಡುತ್ತಿದ್ದ ಅವರು, ಹಾಗೆಯೇ ಸ್ವರ-ಸಮಾಧಿಯನ್ನು ಪಡೆಯುತ್ತಿದ್ದರು.

ಕೇಳುಗರಿಗೂ ಆ ದಿವ್ಯವಾದ ಅನುಭೂತಿಯನ್ನು ನೀಡುತ್ತಿದ್ದರು. ಒಬ್ಬ ಅಧ್ಯಾತ್ಮ ಪಿಪಾಸುವಿನ ಜೀವನದ ಆತ್ಯಂತಿಕ ಗುರಿಯಾದ ಈ ‘ಸಮಾಧಿ’ ಸ್ಥಿತಿಯನ್ನು ಸಿದ್ಧೇಶ್ವರಿ ಸಂಗೀತದಲ್ಲಿ ಪಡೆದಿದ್ದರು. ಅದು, ಅವರು ಎಲ್ಲಾ ಬಿಟ್ಟು ಓಡಿ ಹೋಗಿ, ತಪಸ್ಸು ಮಾಡಿ ಪಡೆದದ್ದಲ್ಲ. ಅದು “ಸಂತೆಯಲೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದೊಡೆಂತಯ್ಯಾ” ಎಂಬಂತೆ ದಿನನಿತ್ಯದ ಎಲ್ಲಾ ಗೋಜಲುಗಳನ್ನು ಎದುರಿಸುತ್ತಾ, ಜೀವನದ ಎಲ್ಲಾ ಸಿಹಿ-ಕಹಿಗಳೊಂದಿಗೆ ಓಲಾಡುತ್ತಾ ಪಡೆದ ಅಪೂರ್ವವಾದ ‘ಸಿದ್ಧಿ’.

Leave a Reply

Your email address will not be published.