ನಾದಲೀಲೆ-10: ಸಂಗೀತದ ಧ್ರುವತಾರೆ ಡಿ.ವಿ.ಪಲುಸ್ಕರ್

-ಶ್ರೀಮತಿದೇವಿ ಸಾಲ್ಟ್ ಲೇಕ್ ಸಿಟಿ.

ಹಿಂದೂಸ್ಥಾನಿ ಸಂಗೀತದ ‘ಪಂಡಿತ’ (ಬುಜುರ್ಗ್) ವರ್ಗಕ್ಕೆ ಸೇರಿದವರು ದತ್ತಾತ್ರೇಯ ವಿಷ್ಣು ಪಲುಸ್ಕರ್. ಕೇವಲ 34 ವರ್ಷಗಳ ಕಾಲ ಮಾತ್ರ ಬದುಕಿದ್ದರೂ ತಮ್ಮ ಶಾಂತ-ಶಿಸ್ತುಬದ್ಧ ಸ್ವಭಾವdvpaluskar ಹಾಗೂ ಪರಂಪರಾಬದ್ಧ ಗಾಯನದಿಂದ ಅಮರರಾದವರು.

‘ಆಗ್ರಾ ಘರಾಣೆಯ ಹುಲಿ’ ಎಂದೇ ಹೆಸರಾಗಿದ್ದ ಉಸ್ತಾದ್ ಫ಼ಯಾಜ್ ಖಾನ್‍ರ ಕಾಲಘಟ್ಟದ ಕೊನೆಯಲ್ಲಿ ಡಿ.ವಿ ಅವರು ಬೆಳಕಿಗೆ ಬಂದರು. ಹಿಂದೂಸ್ಥಾನಿ ಸಂಗೀತದ ಪುನರುದ್ಧಾರಕರೆಂದೇ ಹೆಸರು ಪಡೆದ ತಮ್ಮ ತಂದೆ ಪಂ.ವಿಷ್ಣು ದಿಗಂಬರ ಪಲುಸ್ಕರ್ ಅವರಿಂದ ಧಾರ್ಮಿಕ, ಅಧ್ಯಾತ್ಮಿಕ, ನೈತಿಕ ಮೌಲ್ಯಗಳನ್ನು ಸಹಜವಾಗಿ ಅವರು ಪಡೆದಿದ್ದರು. ಅವುಗಳ ಜೊತೆ ವಿದ್ಯೆ, ವಿನಯ, ವಿವೇಕ, ಶಿಸ್ತು, ಸರಳತೆ, ಬದ್ಧತೆ ಇವೆಲ್ಲಾ ಗುಣಗಳಿಂದ ಅವರು ಸಂಗೀತ ಲೋಕದಲ್ಲಿ ವಿಶೇಷವಾದ ಸ್ಥಾನವನ್ನು ದೊರಕಿಸಿಕೊಂಡರು.

‘ಬಾಲ ಪ್ರತಿಭೆ’ಯಾಗಿಯೇ ಸಾಕಷ್ಟು ಹೆಸರು ಮಾಡಿದ್ದ, ಡಿ.ವಿ.ಪಲುಸ್ಕರ್ ಅವರು ಸಂಗೀತದ ವಲಯದಲ್ಲಿ ಬಾಪೂ ರಾವ್ ಎಂಬ ಹೆಸರು ಪಡೆದಿದ್ದರು. ಇವರ ಜನನ 1921ರ ಮೇ28ರಂದು ನಾಸಿಕ್‍ದಲ್ಲಾಯಿತು. ತಂದೆ-ತಾಯಿಯರು ಜನ್ಮ ನೀಡಿದ 12ಮಕ್ಕಳಲ್ಲಿ ಉಳಿದ ಒಬ್ಬನೇ ಒಬ್ಬ ಮಗು ಇವರಾಗಿದ್ದರು. ಪದ್ಧತಿಗೆ ಅನುಸಾರವಾಗಿ ಇವರಿಗೆ ಉಪನಯನ ಮಾಡಿ ವಿದ್ಯಾರಂಭ ಮಾಡಲಾಯಿತು. ತಂದೆಯಿಂದ 5ವರ್ಷಗಳವರೆಗೆ ಸಂಗೀತ ಪಾಠ ಸಾಂಗವಾಗಿ ನಡೆಯಿತು. ಅವರು 5 ವರ್ಷದವರಿದ್ದಾಗ ವಿಷ್ಣು ದಿಗಂಬರ ಪಲುಸ್ಕರ್ ಅವರು ನಿಧನರಾದರು. ಇದರಿಂದಾಗಿ ಅಲ್ಲಿಗೇ ನಿಂತ ಅವರ ಸಂಗೀತವನ್ನು ಅವರ ಕುಟುಂಬದವರೇ ಆದ ಚಿಂತಾಮಣ್ ರಾವ್ ಪಲುಸ್ಕರ್ ಅವರು ಮುಂದುವರಿಸಿದರು. ಆದರೆ, ಪಂ.ವಿನಾಯಕರಾವ್ ಪಟವರ್ಧನ್ ಅವರು ಗುರುವಾಗಿ ದೊರೆತ ಮೇಲೆ ಡಿ.ವಿ ಅವರ ನಿಜವಾದ ಕಲಿಕೆ ಆರಂಭವಾದಂತಾಯಿತು. ಡಿ.ವಿ ಅವರು ನಾರಾಯಣ್ ರಾವ್ ವ್ಯಾಸ್ ಹಾಗೂ ಪಂ.ಮಿರಾಶಿ ಬುವಾ ಅವರಿಂದಲೂ ಅನೇಕ ಸಂಗೀತದ ಅಂಶಗಳನ್ನು ಪಡೆದಿದ್ದರು.

ಬಹಳ ಚಿಕ್ಕವರಿದ್ದಾಗಿನಿಂದಾಗಲೇ ಅವರು ವೇದಿಕೆಯೇರಿ ಕಾರ್ಯಕ್ರಮ ನೀಡಲು ಆರಂಭಿಸಿದರೂ 14ವರ್ಷದವರಿದ್ದಾಗ ‘ಹರಿವಲ್ಲಭ ಸಂಗೀತ ಸಮ್ಮೇಲನ’ದಲ್ಲಿ ಹಾಡಿದ ನಂತರ ಒಂದೇ ದಿನದಲ್ಲಿ ಅವರು ಹೆಸರು ದೇಶದೆಲ್ಲೆಡೆ ಹರಡಿತು.

ಗ್ವಾಲಿಯರ ಘರಾಣೆಯ ಎಲ್ಲಾ ಮೂಲೆ-ಮೊಡಕುಗಳನ್ನು ಅರಸಿ, ಪದ್ಧತಿ ಪ್ರಕಾರ ಕಠಿಣವಾದ ತಾಲೀಮು ಪಡೆದ ಅವರ ಸಂಗೀತ ಸುಲಲಿತವಾದದ್ದು. ಅತ್ಯಂತ ಕಡಿಮೆ ಅವಧಿಯಲ್ಲಿ ಒಂದು ರಾಗದ ಸಂಪೂರ್ಣ ಸ್ವರೂಪವನ್ನು ಬಿಚ್ಚಿಡಬಲ್ಲ ಆಕರ್ಷಕ ಶಕ್ತಿ ಅವರ ಸಂಗೀತದಲ್ಲಿತ್ತು. ಧ್ವನಿವರ್ಧಕಕ್ಕೆ ಚೆನ್ನಾಗಿ ಹೊಂದುವ ದನಿ ಅವರದ್ದಾಗಿತ್ತು. ಕೇಳಲು ಅತಿ ಸುಲಭವೆಂದು ಅನಿಸಿದರೂ ಹಾಡಲು ಬಲು ಕಷ್ಟವಾದ ಶೈಲಿ ಅವರದ್ದು. ತಮ್ಮ ಸ್ವಭಾವದಂತೆಯೇ ಅವರ ಗಾಯನವೂ ನೇರ, ದಿಟ್ಟ ಹಾಗೂ ಮನಸ್ಪರ್ಶಿಯಾದದ್ದು. ಮಾಲಗುಂಜಿ, ದೇಸಿ, ಖಂಬಾವತಿ ಮುಂತಾದ ಗ್ವಾಲಿಯರ್ ಘರಾಣೆಯ ವಿಶೇಷ ರಾಗಗಳನ್ನೇ ಅವರು ಹೆಚ್ಚಾಗಿ ಹಾಡುತ್ತಿದ್ದರು. ಸಂಗೀತದಲ್ಲಿನ ವ್ಯಾಕರಣ ಹಾಗೂ ಭಾವ ಎರಡನ್ನೂ ಮೇಳೈಸಿದ ಶಾಂತ ಸಂಗೀತ ಅವರದ್ದು. ವಿನಾಯಕರಾವ್ ಅವರಿಂದ ಮಹಾರಾಷ್ಟದಲ್ಲಿ ಧೃಢವಾಗಿ ನೆಲೆಯಾದ ಗ್ವಾಲಿಯರ್ ಘರಾಣೆಗೆ ಹೊಸ ಸ್ವರೂಪವನ್ನು ತಂದುಕೊಟ್ಟರು.

ಡಿ.ವಿ ಅವರ ತಂದೆ, ಪಂ.ವಿಷ್ಣು ದಿಗಂಬರ ಪಲುಸ್ಕರ್ ಅವರು, ತಮ್ಮ ಉನ್ನತವಾದ ಬದುಕು ಹಾಗೂ ಜೀವನದಿಂದಾಗಿ ‘ಮಹರ್ಷಿ’ ಎಂಬ ಗೌರವಕ್ಕೆ ಪಾತ್ರರಾಗಿದ್ದವರು. ಅವರ ಮನೆತನ ಹರಿದಾಸ ಪರಂಪರೆಗೆ ಸೇರಿದ್ದು. ಮನೆಯಲ್ಲಿನ ವಾತಾವರಣದ ಕಾರಣದಿಂದ ಡಿ.ವಿ ಅವರಿಗೆ ದೈವಿಕವಾದ ವಿಚಾರದೆಡೆಗೆ , ನಾಮ ಸಂಕೀರ್ತನೆಯೆಡೆಗೆ ಸೆಳೆತ ತಾನಾಗಿ ಬಂದಿತ್ತು. ಇದನ್ನು ನಾವು ಅವರು ಹಾಡಿ ಸುಪ್ರಸಿದ್ಧಗೊಳಿಸಿದ ಸೂರದಾಸ್, ಕಬೀರ್, ಮೇರಾ, ತುಲಸೀದಾಸ್ ಭಜನ್‍ಗಳಲ್ಲಿ ಕಾಣಬಹುದು. ಭಜನ್ ಪ್ರಕಾರವನ್ನು ಅಷ್ಟು ಜನಜನಿತವಾಗಿಸಿ, ವೇದಿಕೆಯ ಮೇಲಿನ ಕಲೆಯಾಗಿಸಿದ ಕೀರ್ತಿಯೂ ಡಿ.ವಿ ಅವರಿಗೇ ಸಲ್ಲುತ್ತದೆ. ಅವರು ಹಾಡಿದ ‘ರಘುಪತಿ ರಾಘವ’, ‘ಠುಮಕ ಚಲತ’, ‘ಜಬ ಜಾನಕೀನಾಥ ಸಹಾಯ ಕರೆ’ ಮುಂತಾದವುಗಳೆಲ್ಲಾ ಇಂ ದೂ ಜನಮಾನಸದಲ್ಲಿ ನೆಲೆಯಾಗಿವೆ.
ಡಿ.ವಿ.ಪಲುಸ್ಕರ್ ಅವರು ತಮ್ಮ ಗಾಯನ ಹಾಗೂ ವ್ಯಕ್ತಿತ್ವದಿಂದಾಗಿ ಜನರ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು. ಅವರ ಕಾರ್ಯಕ್ರಮ ಮುಗಿದ ಬಳಿಕ ಎಷ್ಟೋ ಜನ ಕಾದು ನಿಂತು, ಅವರ ಕಾಲು ಮುಟ್ಟಿ ನಮಸ್ಕರಿಸುತ್ತಿದ್ದರು. ಅದು, ಸಂಗೀತವನ್ನು ಪುನರುದ್ಧರಿಸಿದ ವಿಷ್ಣು ದಿಗಂಬರ ಪಲುಸ್ಕರ್ ಅವರ ಮಗನಾಗಿದ್ದಕ್ಕೆ ಸಂದ ಗೌರವವೂ ಹೌದು. ಈ ರೀತಿಯಾಗಿ ಜನರ ಆದರನ್ನು ಪಡೆದ ಕಲಾವಿದರೆಂದರೆ ಡಿ.ವಿ ಯವರೊಬ್ಬರೇ.

ತಮ್ಮ ತಂದೆ ಸ್ಥಾಪಿಸಿದ “ಗಾಂಧರ್ವ ಮಹಾವಿದ್ಯಾಲಯ”ದ ವಾರಸುದಾರರಾಗಿ ತಾವು ಹಲವು ರೀತಿಯ ಸಂಗೀತ ಸೇವೆಯಲ್ಲಿ ತೊಡಗಿದರು. ತೀಕ್ಷ್ಣಮತಿ, ಹಾಗೂ ಪರಿಶ್ರಮಿ ಎರಡೂ ಆಗಿದ್ದ ಕಾರಣ ಸಂಗೀತವನ್ನು ಬೇರೆಯದೇ ಸ್ಥರದಲ್ಲಿ ಗ್ರಹಿಸಲು ಅವರಿಗೆ ಸಾಧ್ಯವಾಯಿತು ಎಂದೆನಿಸುತ್ತದೆ. ಅದರೊಂದಿಗೆ ವಿನಾಯಕರಾವ್ ಅಂಥಹ ಗುರುಗಳ ಪಾಠ, ಬಾಲ್ಯದಿಂದ ಪಡೆದ ಸಂಸ್ಕಾರ, ಜೀವದಲ್ಲಿದ್ದ ಬದ್ಧತೆ ಇವೆಲ್ಲಾ ಅವರನ್ನು ಕಡೆದಿಟ್ಟ ಮೂರ್ತಿಯಂತಾಗಿಸಿದ್ದವು.
ತಮ್ಮ ತಂದೆ ಬರೆದು, ಪ್ರಕಟವಾಗದೆ ಉಳಿದಿದ್ದ ಪುಸ್ತಕಗಳ ತಿದ್ದುಪಡಿ ಹಾಗು ಅವುಗಳ ಪ್ರಕಟಣೆಯ ಕೆಲಸ ಮಾಡಿದರು. ಆಕಾಲದಲ್ಲಿ ಟೈಪ್ ರೈಟರ್ ಇಟ್ಟುಕೊಂಡು, ಟೈಪ್ ಮಾಡಬಲ್ಲಂಥಹ ಸಂಗೀತಗಾರ ಇವರೊಬ್ಬರೇ ಆಗಿದ್ದರು ಎಂದು ಅವರನ್ನು ಬಲ್ಲವರು ಅಭಿಪ್ರಾಯ ಪಡುತ್ತಾರೆ. ಯಾರೇ ಅವರಿಗೆ ಪತ್ರ ಹಾಕಿದರೂ ತಾವೇ ಖುದ್ದಾಗಿ ಅದಕ್ಕೆ ಪ್ರತಿಕ್ರಿಯೆಯನ್ನು ಟೈಪ್ ಮಾಡಿ ಅತಿ ಶೀಘ್ರವಾಗಿ ಕಳುಹಿಸುತ್ತಿದ್ದರು.

ಯಾವುದೇ ವ್ಯಸನಗಳಿಲ್ಲದ ತುಂಬಾ ಶಿಸ್ತಿನ, ನಿಯಮಬದ್ಧ ಜೀವನ ಅವರದ್ದು. ಯಾರ ಬಗ್ಗೆಯೂ ಒಂದೂ ಕೆಟ್ಟ ಮಾತು ಆಡುತ್ತಿರಲಿಲ್ಲ. ಅವರ ನಿಲುವಿನಲ್ಲಿ ಒಂದು ಸ್ಥಿರತೆ ಇತ್ತು. ಎಲ್ಲಾ ಕಾರ್ಯಕ್ರಮದ ಪೂರ್ವದಲ್ಲಿ ಸರಿಯಾಗಿ ಪ್ಲಾನ್ ಮಾಡುತ್ತಿದ್ದರು. ದಿನಚರಿ ಬರೆಯುವ ಅಭ್ಯಾಸವೂ ಅವರಿಗಿತ್ತು.
ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುವಲ್ಲಿ ಅವರಿಗೆ ಯಾವುದೇ ಪೂರ್ವಾಗ್ರಹ ಇರಲಿಲ್ಲ. ಯಾವತ್ತೂ ಹಣಕಾಸಿನ ಬಗ್ಗೂ ವಿಚಾರ ಮಾಡುತ್ತಿರಲಿಲ್ಲ. ಹೇಳಿದ್ದಕ್ಕಿಂತ ಕಡಿಮೆ ಸಂಭಾವನೆ ಕೊಟ್ಟರೂ ಚರ್ಚೆಗೆ ಹೋಗುತ್ತಿರಲಿಲ್ಲ. ಎಷ್ಟೋ ಬಾರಿ ಉಚಿತವಾಗಿಯೂ ಹಾಡಿ ಬಂದಿದ್ದರು. ಇವೆಲ್ಲಾ ಗುಣಗಳು ಆಗಿನ ಕಾಲದಲ್ಲಿ ಸಂಗೀತಗಾರರಿಂದ ನಿರೀಕ್ಷಿಸಲೂ ಆಗದಂಥವು. ಕಲಾವಿದರೆಲ್ಲಾ ಬೇಶಿಸ್ತಿನವರೇ, ತಮಗೆ ಇಚ್ಚೆ ಬಂದಂತೆ ಇರುವವರು ಎಂಬುದು ಎಲ್ಲರಲ್ಲಿದ್ದ ಸಾಮಾನ್ಯವಾದ ಅಭಿಪ್ರಾಯವಾಗಿತ್ತು. ಸಂಗೀತಗಾರರೆಲ್ಲರೂ ಬುದ್ಧಿಗಿಂತ ಜಾಸ್ತಿ ಹೃದಯದ ಮಾತು ಕೇಳುವವರು ಎಂಬ ಭಾವನೆ ಎಲ್ಲರಲ್ಲಿತ್ತು. ಊಟ-ತಿಂಡಿ-ಕುಡಿತ-ಮಾತು ಇದ್ಯಾವುದರಲ್ಲೂ ನಿಗ್ರಹ ಇರದ ಸಂಗೀತಗಾರರೇ ಇದ್ದ ಕಾಲದಲ್ಲಿ, ಬುದ್ಧಿಯಿಂದಲೂ ಸಂಗೀತವನ್ನು ನೋಡಬಹುದು ಹಾಗೂ ಸಂಗೀತಗಾರರಾಗಿಯೂ ಶಿಸ್ತಿನ ಜೀವನ ನಡೆಸಬಹುದು ಎಂದು ತೋರಿಸಿಕೊಟ್ಟವರು ಡಿ.ವಿ.ಪಲುಸ್ಕರ್.

ಇದೇ ಚರ್ಚೆಯನ್ನು ಸ್ವಲ್ಪ ಮುಂದುವರಿಸಿ ನೋಡುವುದಾದರೆ, ವಿಚಾರಮಾಡಬಲ್ಲ ಈ ‘ಪಂಡಿತ’ವರ್ಗ ನಿರ್ಮಾಣದ ಜೊತೆಗೆ, ಜಾತಿಯ ಮೂಲಕ ಸಂಗೀತವನ್ನು ನೋಡುವ ಒಂದು ಹೊಸ ವಿಧಾನವೂ ಹುಟ್ಟಿಕೊಂಡಿತು ಎಂದೆನಿಸುತ್ತದೆ. ಏಕೆಂದರೆ ‘ಪಂಡಿತ’ರೆಂದು ಕರೆಯಲ್ಪಟ್ಟವರು ಬ್ರಾಹ್ಮಣ‹ರೇ ಆಗಿದ್ದರು. ಹೇಗೆ ಅವರುಗಳ ಜೀವನದಲ್ಲಿ ಒಂದು ಶಿಸ್ತು ಇತ್ತೋ ಅದೇ ರೀತಿ ಅವರ ಸಂಗೀತದಲ್ಲೂ ಅದನ್ನು ಕಾಣಬಹುದುದಾಗಿತ್ತು.. ಅವರ ಸಂಗೀತದಲ್ಲಿ ಭಾವವಿದ್ದರೂ ಅದು ಬುದ್ಧಿಯ ಹಿಡಿತದಲ್ಲಿ ಇರುತ್ತದೆ ಎಂದು ನನಗನಿಸುತ್ತದೆ. ಹೆಚ್ಚು ಚಮತ್ಕಾರ, ಹಾಗೂ ರಿಸ್ಕ್‍ಗೆ ಎಡೆಮಾಡಿಕೊಡದ ಸಂಗೀತ ಅವರದ್ದು. ಬಹುಮುಖ್ಯವಾಗಿ ಅವರ ಸಂಗೀತದಲ್ಲಿ, ಅವರು ಪಡೆದ ಕಠಿಣವಾದ ತಾಲೀಮು ಹಾಗೂ ಸಂಗೀತದ ಕುರಿತ ಅವರ ಚಿಂತನೆ ಎದ್ದು ಕಾಣುತ್ತಿರುತ್ತದೆ.

ಅದೇ ಹಲವು ದಶಕಗಳ ಕಾಲ, ಇಡೀ ಸಂಗೀತ ವಲಯವನ್ನು ತಮ್ಮ ಸಂಗೀತದ ಪ್ರಭಾವದೊಳಗೇ ಇರಿಸಿಕೊಂಡಿದ್ದ ‘ಖಾನ್ ಸಾಹೇಬರು’ಗಳ ಸಂಗೀತದ ವಿಷಯವೇ ಬೇರೆಯಾದದ್ದು. ಅವರು, ಯಾವತ್ತೂ ತಮ್ಮ ಮನಸ್ಸಿನ ಮಾತು ಕೇಳುವವವರು. ಅಲ್ಲಿ ಸಂಗೀತವು ನಿಯಮದ ಕಟ್ಟೆ ದಾಟಿ ಹೊರಗೆ ಹೋಗದಿದ್ದರೂ ಅತಿಯಾದ ಬಂಧನಕ್ಕ ಒಳಗಾಗಿರುವುದಿಲ್ಲ. ರಾಗದ ಭಾವದ ಮೇಲಾಟವೇ ಹೆಚ್ಚಾಗಿರುತ್ತದೆ. ಅವರು ಹಾಡುವ ಮೂರು ಸಪ್ತಕದ ತಾನುಗಳಲ್ಲಿ, ವೈಚಿತ್ಯಪೂರ್ಣವಾದವ್ ಸರ್‍ಗಮ್ ಗಳ ಮೂಲಕವೇ ಗಾಯಕರುಗಳ ಸ್ವಭಾವವನ್ನು ತಿಳಿಯಬಹುದು. ಆದರೆ, ಭಾರತೀಯ ಸಂಗೀತವೆಂಬ ಹೆಸರಿನಲ್ಲಿ ಕರ್ನಾಟಕೀ ಸಂಗೀತದ ಜೊತೆಗೇ ಸೇರಿ ಒಂದೇ ಆಗಿದ್ದ ಸಂಗೀತವನ್ನು ಪ್ರತ್ಯೇಕವಾದ ಅಸ್ತಿತ್ವದೊಂದಿಗೆ, ಒಂದು ರೂಪು ಪಡೆದು ನೆಲೆಗೊಳಿಸಲು ಕಾರಣರಾದವರೇ ಖಾನ್ ಸಾಹೇಬರುಗಳು.

ಈ ಸಂಗೀತವನ್ನು ಹೃದ್ಯವನ್ನಾಗಿಸಿದವರೂ ಅವರೇ. ಇಂದಿಗೂ ಹಿಂದೂಸ್ಥಾನಿ ಸಂಗೀತ, ಬೇರೆ ಎಲ್ಲಾ ಪ್ರಕಾರಗಳಿಗಿಂತ ಜಾಸ್ತಿ ಜನರ ಮನಸ್ಸಿಗೆ ಹತ್ತಿರವಾಗಿರಲು ಕಾರಣ, ಅದರ ಭಾವ ಪ್ರಾಧಾನ್ಯತೆ ಹಾಗೂ ಜನರ ಮಧ್ಯದಿಂದ ಅದು ಬೆಳೆದು ಬಂದ ರೀತಿಗೆ. ಆದರೆ, ಡಿ.ವಿ.ಪಲುಸ್ಕರ್ ಅವರ ತಂದೆ, ಪಂ.ವಿಷ್ಣು ದಿಗಂಬರ ಪಲುಸ್ಕರ್ ಅವರ ಕಾಲದಲ್ಲಿ, ಸಂಗೀತದಲ್ಲಿನ ಸ್ವಾತಂತ್ರ್ಯ, ಸ್ವಲ್ಪ ಜಾಸ್ತಿಯೇ ಸ್ವೇಚ್ಚಾಚಾರದೆಡೆಗೆ ಸರಿಯತೊಡಗಿತ್ತು. ತಾವು ದೈವಿಕವಾಗಿ ಪರಿಭಾವಿಸಿದ ಸಂಗೀತ ಈ ರೀತಿಯಾಗಿ ತನ್ನ ಬಿಗಿಯ್ಸನ್ನು ಕಳೆದುಕೊಳ್ಳುತ್ತಿರುವುದು ಅವರಿಗೆ ಸಹಿಸಲು ಅಸಾಧ್ಯವಾದ ವಿಷಯವಾಗಿತ್ತು. ಆದ್ದರಿಂದ ಅವರು ಸಂಗೀತವನ್ನು ‘ಶುಚಿ’ಗೊಳಿಸಬಯಸಿದರು. ಈ ನಿಟ್ಟಿನಲ್ಲಿ ಅವರು ಸಂಗೀತವನ್ನು ಔಪಚಾರಿಕ ಶಿಕ್ಷಣವನ್ನಾಗಿ ಮಾಡಲು ಬಯಸಿ “ಗಂಧರ್ವ ಮಹಾವಿದ್ಯಾಲಯ’ವನ್ನು ಸ್ಥಾಪಿಸಿದರು.

ಇದರ ಹಿಂದಿನ ಬಹುಮುಖ್ಯ ಉದ್ದೇಶ, ರಾಜರು-ಸಾಮಂತರುಗಳ ಆಶ್ರಯಯದ ಮೇಲೆಯೇ ಸಂಗೀತಗಾರರು ಅವಲಂಬಿತರಾಗಿರುವುದನ್ನು ತಪ್ಪಿಸಿ, ಸಂಗೀತವನ್ನು ಬಯಸಿದವರಿಗೆ ಸುಲಭವಾಗಿ ಸಿಗುವಂತೆ ಮಾಡುವುದಾಗಿತ್ತು. ಜೊತೆಗೆ ‘ಕ್ವಾಟೆ’ ಸಂಗೀತ(ದೇವದಾಸಿಯರ ಸಂಗೀತ) ಹಾಗೂ ಇಲ್ಲಿನ ಸಂಗೀತಕ್ಕೆಅನುಕೂಲವಾಗಿ ಇದ್ದ ಖಾನ್ ಸಾಹೇಬರುಗಳ ಸಂಗೀತಕ್ಕೆ ಸಿಗುತ್ತಿದ್ದ ಪ್ರೋತ್ಸಾಹವನ್ನು ಕಡಿಮೆ ಮಾಡುವುದು ಕೂಡಾ ಆಗಿತ್ತು. ಇಲ್ಲಿನ ಶೃಂಗಾರ ಪ್ರಧಾನವಾದ ಐಹಿಕ ಸಂಗೀತ, ವಿಷ್ಣು ದಿಗಂಬರ ಪಲುಸ್ಕರ್ ಅವರಂಥಹ ಹಲವು ಬ್ರಾಹ್ಮಣ ಸಂಗೀತಗಾರರ ಮನಸ್ಸಿಗೆ ಸರಿಕಾಣುತ್ತಿರಲಿಲ್ಲ. ಕಾಲಾಂತರದಲ್ಲಿ ಈ ವಿಚಾರವೇ ಎಲ್ಲಾ ಕಡೆ ಬೇರೂರಿ, ನಿಧಾನವಾಗಿ ಮುಸ್ಲಿಂ ಗಾಯಕರನ್ನು ಈ ಕ್ಷೇತ್ರದಿಂದ ದೂರ ಸರಿಯುವಂತೆ ಮಾಡಿ, ಈ ಕ್ಷೇತ್ರವು ‘ಒಂದುವರ್ಗ’ದ ಪಾಲಾಗುವಂತೆ ಮಾಡಿತು ಎಂದೆನಿಸುತ್ತದೆ. ಅದರಲ್ಲೂ ಕೆಲವು ಖಾನ್ ಸಾಹೇಬರುಗಳಿಗೆ ಇಲ್ಲಿ ಮನ್ನಣೆ ದೊರಕಿದರೂ ಅವರು ಮೂಲ ಹಿಂದೂ ವೇ ಆಗಿದ್ದು, ಮತಾಂತರಗೊಂಡವರಾಗಿದ್ದರು. ಹಾಗೂ ಹಿಂದೂ ದೇವರ ಆರಾಧಕರಾಗಿದ್ದರು, ನಡವಳಿಕೆ, ಬದುಕುವ ರೀತಿಯಲ್ಲಿ ಹಿಂದೂವೇ ಆಗಿದ್ದರು.
ಆದರೆ, ಇವುಗಳಲ್ಲಿ ಎಲ್ಲವೂ ಉದ್ದೇಶಪೂರ್ವಕ ಹಾಗೂ ಬುದ್ಧಿಪೂರ್ವಕವಾಗಿ ಆದವು ಎಂದು ನನಗನಿಸುವುದಿಲ್ಲ. ಅದರಲ್ಲೂ ಡಿ.ವಿ.ಪಲುಸ್ಕರ್ ಅವರು ಯಾವುದೇ ಪೂರ್ವಾಗ್ರಹಗಳಿಲ್ಲದೇ, ತಾವು ಬದುಕ್ಕಿದ್ದಷ್ಟು ಕಾಲ ಬೆಳೆದು ಬಂದ ಸಂಸ್ಕಾರಕ್ಕೆ ಅನುಸಾರವಾಗಿ ದಿಟ್ಟವಾಗಿ ಬದುಕಿದವರು.

paluskarಹಿಂದಿ ಸಿನೆಮಾದ ಪ್ರಸಿದ್ಧ ಸಂಗೀತ ನಿರ್ದೇಶಕ, ನೌಶಾದ್ ಅವರು ತಮ್ಮ “ಬೈಜೂ ಬವರಾ” ಚಲನಚಿತ್ರಕ್ಕೆ ಡಿ.ವಿ ಅವರ ದನಿಯನ್ನು ಬಳಸಿಕೊಂಡರು. ಉ.ಅಮೀರ್ ಖನ್ ಹಾಗೂ ಡಿ.ವಿ ಅವರು ದೇಸಿ ರಾಗದಲ್ಲಿನ ಜುಗಲ್‍ಬಂದಿ ಇತಿಹಾಸವನ್ನೇ ಸೃಷ್ಟಿಸಿದವು. ಆಕಾಶವಾಣಿಯ ನೆಚ್ಚಿನ ಗಾಯಕರಾಗಿದ್ದ ಅವರು ಅಲ್ಪಕಾಲ ಬದುಕಿದ್ದರೂ ಅದೃಷ್ಟವಶಾತ್ ಅವರ ಹಲವು ರೆಕಾರ್ಡಿಂಗ್ ಗಳು ಲಭ್ಯವಿದೆ. ಅವರ ಮೊದಲ ಗ್ರಾಮಾಫೋನ್ ಡಿಸ್ಕ್ ಹೊರಬಂದದ್ದು 1944ರಲ್ಲಿ. 1955ರಲ್ಲಿ ಸರಕಾರದ ಸೂಚನೆಯ ಮೇರೆಗೆ ಅವರು ಚೀನಾ ದೇಶಕ್ಕೆ ಹೋಗಿ, ಅಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದರು. ಸ್ವದೇಶಕ್ಕೆ ಹಿಂತಿರುಗಿದ ಮೇಲೆ ಅವರು encephalitis ಎಂಬ ಖಾಯಿಲೆಗೆ ತುತ್ತಾಗಿ ಅದೇ ವರ್ಷ ಅಕ್ಟೋಬರ್ 26ರಂದು ನಿಧನರಾದರು. ಅವರ ಅಕಾಲಿಕ ಮೃತ್ಯು ಸಂಗೀತ ಲೋಕವನ್ನೇ ಒಮ್ಮೆ ಬೆಚ್ಚಿ ಬೀಳಿಸಿತ್ತು.

ಕೇವಲ 34ವರ್ಷಗಳ ಕಾಲ ಬದುಕಿದ್ದ ಡಿ.ವಿ ಅವರ ಶಿಷ್ಯರಲ್ಲಿ ಪಂ.ಶರದ್ ಸಾಠೆ ಪ್ರಮುಖರು. ಅತ್ಯ್ಯಂತ ಕಡಿಮೆ ಕಾಲದಲ್ಲಿ ತಮ್ಮತನವನ್ನು ಉಳಿಸಿಕೊಂಡೇ ಅಷ್ಟು ಜನಪ್ರಿಯತೆಯನ್ನು ಗಳಿಸುವುದು ಸುಲಭದ ಮಾತಲ್ಲ. ‘ರಾಜಿಗೆ ಒಪ್ಪದ ಮೌಲ್ಯ’ ಹಾಗೂ ‘ಜನಪ್ರಿಯತೆ’ ಇವೆರಡು ಯವಾಗಲೂ ಒಟ್ಟಿಗೆ ಹೋಗುವ ಅಂಶಗಳೇ ಅಲ್ಲ. ಆದರೆ, ವಿದ್ಫ್ಯೆಯೆಡೆಗಿನ ವಿನಯತೆ, ಗಾಯನದಲ್ಲಿನ ಶುದ್ಧತೆ-ಪ್ರಾಮಾಣಿಕತೆ, ಜೀವನದಲ್ಲಿನ ಬದ್ಧತೆ ಅವರನ್ನು ಅಮರರನ್ನಾಗಿಸಿವೆ.

ಆಧಾರ: ಶ್ರೀ ದೀಪಕ್ ರಾಜ ಅವರು ಪಲುಸ್ಕರ್ ಅವರ ಬಗ್ಗೆ ಬರೆದ ಲೇಖನ.

Leave a Reply

Your email address will not be published.