ನವ ಉದಾರವಾದದ ಭ್ರಮೆ ಮತ್ತು ಪ್ರಜಾತಂತ್ರದ ರಕ್ಷಣೆ

ನಾ ದಿವಾಕರ

“ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೆಡಿಎಸ್ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ ” ಎಂದು ಹೇಳುವ ಮೂಲಕ, ರಾಜ್ಯಪಾಲ, ರಾಷ್ಟ್ರಪತಿ ಮತ್ತು ಸುಪ್ರೀಂಕೋರ್ಟ್ ಈ ಮೂರೂ ಸಾಂವಿಧಾನಿಕ ಸಂಸ್ಥೆಗಳನ್ನು ಒಂದೇ ಏಟಿಗೆ ಖರೀದಿಸಿದಂತೆ ವರ್ತಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕರ್ನಾಟಕದ ರಾಜಕಾರಣ ತಕ್ಕ ಪಾಠ ಕಲಿಸಿರಲೇಬೇಕು. ರಾಜಕೀಯ ಎಂದರೆ ಕೇವಲ ಅಟ್ಟಹಾಸ ಮೆರೆಯುವ ನಾಟಕರಂಗ ಅಲ್ಲ, ಇಲ್ಲಿ ಎಲ್ಲವೂ ಸೂತ್ರಧಾರ-ಪಾತ್ರಧಾರರ ನಡುವಿನ ವ್ಯವಹಾರದ ಅನುಸಾರವಾಗಿಯೇ ನಿರ್ಧಾರವಾಗುತ್ತದೆ ಎಂಬ ಸತ್ಯವನ್ನು ಮೋದಿ ಅರಿತಿರಬೇಕು. ಗೋವಾ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಬಿಜೆಪಿ ಅನುಸರಿಸಿದ ಮಾರ್ಗವನ್ನೇ ಕರ್ನಾಟಕದಲ್ಲಿ ಕಾಂಗ್ರೆಸ್ ಅನುಸರಿಸಿದೆ. ನಿಜ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ, ವಿಶೇಷವಾಗಿ ಜಾತ್ಯಾತೀತ ಜನತಾದಳಕ್ಕೆ ಆಡಳಿತ ನಡೆಸುವ ಜನಾದೇಶ ದೊರೆತಿಲ್ಲ.. ಪ್ರಸ್ತುತ ಸಮ್ಮಿಶ್ರ ಸರ್ಕಾರ ಜನಾದೇಶಕ್ಕೆ ಅನುಗುಣವಾಗಿ ರಚನೆಯಾಗಿಯೂ ಇಲ್ಲ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದಿರುವ ಮೂಲಕ ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುವುದೇ ಅಲ್ಲದೆ, ಬಿಜೆಪಿಯನ್ನೂ ಸಹ ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ.

ಕೊನೆಯ ಗಳಿಗೆಯಲ್ಲಿ ರಾಜ್ಯಾದ್ಯಂತ ಹತ್ತಾರು ಸಾರ್ವಜನಿಕ ಸಭೆ ನಡೆಸುವ ಮೂಲಕ ತಮ್ಮ ವಿಶಿಷ್ಟ “ಮೋದಿ ಅಲೆ” ಸೃಷ್ಟಿಸಲು ಯತ್ನಿಸಿದ ನರೇಂದ್ರ ಮೋದಿ ತಮ್ಮ ಪ್ರಭಾವ ಬೀರುವುದರಲ್ಲಿ ವಿಫಲವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಹಾಗೊಮ್ಮೆ ಮೋದಿ ಅಲೆ ಪ್ರವಹಿಸಿದ್ದಲ್ಲಿ ಬಿಜೆಪಿ 130 ಸ್ಥಾನಗಳನ್ನು ಗಳಿಸಬೇಕಿತ್ತು. ಮೋದಿ ಅಲೆಯ ಪ್ರಭಾವದಿಂದಲೇ ಬಿಜೆಪಿ 104 ಸ್ಥಾನಗಳಿಸಿದೆ ಎಂದು ಹೇಳುವುದಾದರೆ, ಕರ್ನಾಟಕದ ಜನತೆ ಬಿಜೆಪಿಯ ಸ್ಥಳೀಯ ನಾಯಕತ್ವವನ್ನು ತಿರಸ್ಕರಿಸಿದ್ದಾರೆ ಎಂದೇ ಅರ್ಥೈಸಬಹುದು. ಆದರೆ ಬಿಜೆಪಿ ಅಥವಾ ಮೋದಿ ಅಧಿಕಾರ ರಾಜಕಾರಣದಲ್ಲಿ ಸೋತಿದ್ದಾರೆಯೇ ಹೊರತು ವಾಸ್ತವ ರಾಜಕೀಯ ವೈಫಲ್ಯ ಕಂಡಿಲ್ಲ. ಏಕೆಂದರೆ ಈ ಬಾರಿ ಕರ್ನಾಟಕದ ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸಿರುವುದು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಕಾರ್ಪೋರೇಟ್ ಹಿತಾಸಕ್ತಿ. ಅಂತಾರಾಷ್ಟ್ರೀಯ ಬಂಡವಾಳಕ್ಕೆ ಭಾರತದಂತಹ ದೇಶದಲ್ಲಿ ಸ್ಥಿರ ಸರ್ಕಾರ ಮಾತ್ರವೇ ಅಲ್ಲ ನಿಷ್ಠುರವಾದಿ ನಾಯಕನ ಅವಶ್ಯಕತೆಯೂ ಇದೆ. 1970ರ ದಶಕದಲ್ಲಿ ಔದ್ಯಮಿಕ ಬಂಡವಾಳಕ್ಕೆ ಇಂದಿರಾಗಾಂಧಿಯಂತಹ ನಾಯಕಿಯ ಅವಶ್ಯಕತೆ ಇತ್ತು. ಹಾಗಾಗಿಯೇ ತುರ್ತುಪರಿಸ್ಥಿತಿಯನ್ನೂ ಎದುರಿಸಬೇಕಾಯಿತು. 2018ರ ನವ ಉದಾರವಾದದ ಸಂದರ್ಭದಲ್ಲಿ ಮೋದಿಯಂತಹ ಬಲಿಷ್ಠ ನಾಯಕತ್ವದ ಅವಶ್ಯಕತೆ ಇದೆ. ಕಾರ್ಪೋರೇಟ್ ಹಿತಾಸಕ್ತಿಗಳು, ತಮ್ಮದೇ ಹಿಡಿತದಲ್ಲಿರುವ ಮಾಧ್ಯಮಗಳ ಮೂಲಕ ಈ ವಿದ್ಯಮಾನಕ್ಕೆ ಪುಷ್ಠಿ ನೀಡುತ್ತಿರುವುದನ್ನು ರಾಜ್ಯ ಚುನಾವಣೆಗಳಲ್ಲಿ ಕಾಣಬಹುದು. ಸಚಿವ ಸಂಪುಟ ವಿಸ್ತರಣೆಗೆ ರಾಜಕೀಯ ಪಕ್ಷಗಳಿಗಿಂತಲೂ ಮಾಧ್ಯಮಗಳೇ ಹಾತೊರೆಯುತ್ತಿರುವ ವಿಶಿಷ್ಟ ಬೆಳವಣಿಗೆಯನ್ನೂ ಇಲ್ಲಿ ಕಾಣಬಹುದು.

ಐದು ವರ್ಷಗಳ ಪೂರ್ಣಾವಧಿ ಸರ್ಕಾರ ನಡೆಸಿ ಸೋಲುಂಡ ಸಿದ್ಧರಾಮಯ್ಯ ಸರ್ಕಾರದ ಸಮಾಜವಾದಿ ಸ್ವರೂಪ ಕೇವಲ ಹರಿದು ಹಂಚುವುದರಲ್ಲಿಯೇ ಕೊನೆಗೊಂಡಿದ್ದನ್ನು ಗಮನಿಸದೆ ಹೋದರೆ ಬಹುಶಃ ಸಮಾಜವಾದದ ಪರಿಕಲ್ಪನೆಯೇ ಅಪಹಾಸ್ಯಕ್ಕೀಡಾಗುತ್ತದೆ. ಸಂವಿಧಾನ ಉಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಪ್ರಜಾತಂತ್ರ ಮೌಲ್ಯಗಳೇ ಕ್ಷೀಣಿಸುತ್ತಿರುವುದನ್ನೂ ಗಮನಿಸಬೇಕಾಗಿದೆ. ಸಮಾಜವಾದದ ಆಶಯಗಳು ಸಂಪತ್ತಿನ ವಿತರಣೆಯ ಮೂಲಕ ವ್ಯಕ್ತವಾಗುವ ಬದಲು ಊಳಿಗಮಾನ್ಯ ಔದಾರ್ಯತೆಯ ಹಂಚಿಕೆಯ ಮೂಲಕ ವ್ಯಕ್ತವಾಗುತ್ತಿರುವುದು ಭಾರತೀಯ ಸಮಾಜವಾದದ ದುರಂತ. ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಪ್ರಬುದ್ಧ ಸಮಾಜವಾದಿಯಾಗಿ ಕಂಡುಬರುವುದು ಸಹಜವಾದರೂ ಅದು ಅರ್ಧಸತ್ಯ ಮಾತ್ರ. ಭಾರತದಲ್ಲಿ ಪ್ರಜಾತಂತ್ರ ಉಳಿಯಬೇಕಾದರೆ ಸಮಾಜವಾದಿ ತತ್ವಗಳು ಉಳಿಯಬೇಕು ಎನ್ನುವ ವಾಸ್ತವವನ್ನು ಅಲ್ಲಗಳೆಯುವಂತಿಲ್ಲ.

ಆದರೆ ರಾಜ್ಯ ಚುನಾವಣೆಗಳು ಈ ಸವಾಲಿಗೆ ಪಾಟಿ ಸವಾಲಿನಂತೆ ಎದುರಾಗಿದ್ದು ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳು ಮೇಳೈಸಿರುವುದನ್ನು ಗಮನಿಸಬೇಕು. ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ದೇಸೀ ಬಂಡವಾಳಿಗರ ಮೈತ್ರಿಕೂಟ ಯಾವುದೇ ರಾಜಕೀಯ ಮೈತ್ರಿಕೂಟಕ್ಕಿಂತಲೂ ಹೆಚ್ಚು ಪ್ರಬಲವಾಗಿರುವುದು 2014ರ ನಂತರದಲ್ಲಿ ಕಾಣಬಹುದಾದ ಸಂಗತಿ. ರಾಜ್ಯದ ರೈತರು ಎದುರಿಸುತ್ತಿರುವ ಕೃಷಿ ಬಿಕ್ಕಟ್ಟಿಗೆ ಹಲವು ಆಯಾಮಗಳಿವೆ. ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯ ಕೊರತೆ, ಗ್ರಾಮೀಣ ಕೃಷಿಕರ ಸಮಸ್ಯೆಗಳು, ಬೆಂಬಲ ಬೆಲೆಯ ಕೊರತೆ, ನೀರಾವರಿ ಕೊರತೆ, ಬೀಜ ಮತ್ತೊ ರಸಗೊಬ್ಬರದ ಮಾರುಕಟ್ಟೆಯ ಮೇಲೆ ಕಾರ್ಪೋರೇಟ್ ಹಿಡಿತ, ಗ್ರಾಮೀಣ ಯುವ ಜನತೆಯ ವಲಸೆ, ರೈತರಿಗೆ ಅಗತ್ಯವಾದ ಮೊತ್ತದ ಸಾಲ ಸೌಲಭ್ಯ ದೊರೆಯದಿರುವುದು, ಲೇವಾದೇವಿಗಾರರ ಕಿರುಕುಳ ಹೀಗೆ ಹತ್ತು ಹಲವು ಸಮಸ್ಯೆಗಳಿವೆ. ಆದರೆ ರಾಜ್ಯದ ಯಾವುದೇ ಪಕ್ಷದ ಪ್ರಣಾಳಿಕೆಯಲ್ಲೂ ಈ ಸಮಸ್ಯೆಗಳು ಪ್ರಧಾನವಾಗಿ ವ್ಯಕ್ತವಾಗಿಲ್ಲ. ಸಾಲ ಮನ್ನಾ ಮಾಡುವುದೊಂದೇ ರೈತರ ಸಮಸ್ಯೆಗಳಿಗೆ ಪರಿಹಾರ ಎಂಬಂತೆ ಬಿಂಬಿಸಲಾಗಿದೆ. ಇಲ್ಲಿ ನೀರಾವರಿ ಕೃಷಿ ಭೂಮಿಯನ್ನು ಅವಲಂಬಿಸಿದ ರೈತರು ಮತ್ತು ಖುಷ್ಕಿ ಕೃಷಿ ಅವಲಂಬಿಸುವ ರೈತರ ನಡುವಿನ ಅಂತರವನ್ನು ಸೂಕ್ಷ್ಮವಾಗಿ ಪರಾಮರ್ಶಿಸದೆ ಇರಲಾಗುವುದಿಲ್ಲ. ಸಾಲ ಮನ್ನಾ ಯೋಜನೆ ಸಾಲ ಪಡೆದವರ ಸಮಸ್ಯೆ ನೀಗಿಸುತ್ತದೆ ಆದರೆ ಬ್ಯಾಂಕುಗಳಿಂದ ಸಾಲ ಪಡೆಯಲಾಗದ ಅತಿ ಸಣ್ಣ ರೈತರು ಲೇವಾದೇವಿಗಾರರಿಂದ ಪಡೆದಿರುವ ಸಾಲದ ಸಮಸ್ಯೆಯನ್ನು ನೀಗಿಸುವುದಿಲ್ಲ. ನವ ಉದಾರವಾದ ಸೃಷ್ಟಿಸುವ ಭ್ರಮಾಲೋಕದ ಒಂದು ಆಯಾಮವನ್ನು ಇಲ್ಲಿ ಕಾಣಬಹುದು.

ಕರ್ನಾಟಕದ ಜನತೆಯನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಧೃವೀಕರಣ ಮತ್ತು ಕೋಮುವಾದಿ ಫ್ಯಾಸಿಸಂನ ಅಟ್ಟಹಾಸ. ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಕೋಮು ಗಲಭೆಗಳು ನಡೆದಿರುವುದು ಕಡಿಮೆಯೇ ಇರಬಹುದು ಆದರೆ ಕರಾವಳಿಯಲ್ಲಿ ಬಲವಾಗಿ ಬೇರೂರುತ್ತಿರುವ ಮತಾಂಧರನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿರುವುದು ಪ್ರಸ್ತುತ ಚುನಾವಣೆಗಳಲ್ಲೂ ಸ್ಪಷ್ಟವಾಗಿ ವ್ಯಕ್ತವಾಗಿದೆ. ಕೋಮುವಾದವನ್ನು ವಿರೋಧಿಸುವುದೆಂದರೆ ಸೆಕ್ಯುಲರಿಸಂನ ಜಪ ಮಾಡುವುದಲ್ಲ ಎನ್ನುವ ಸತ್ಯವನ್ನು ಇನ್ನಾದರೂ ಕಾಂಗ್ರೆಸ್ ಮತ್ತು ಇತರ ಸೆಕ್ಯುಲರ್ ಪಕ್ಷಗಳು ಅರಿತುಕೊಳ್ಳುವುದು ಒಳಿತು. ಹಿಂದೂ ಮತ್ತು ಮುಸ್ಲಿಂ ಮತಾಂಧತೆ ರಾಜ್ಯದ ಕರಾವಳಿಯ ಜನತೆಯನ್ನು ತಾತ್ವಿಕವಾಗಿ ಅಡ್ಡಡ್ಡಲಾಗಿ ಸೀಳಿರುವುದನ್ನು ಕರಾವಳಿಯಲ್ಲಿನ ಬೆಳವಣಿಗೆಗಳಲ್ಲಿ ಕಾಣಬಹುದು.

ಗೋಹತ್ಯೆ ನಿಯಂತ್ರಣ, ಲವ್ ಜಿಹಾದ್, ಹಿಂದೂ ಸಂಸ್ಕøತಿಯ ರಕ್ಷಣೆ ಈ ಘೋಷಣೆಗಳನ್ನು ಹೊತ್ತು ಜನಸಾಮಾನ್ಯರ ನಡುವೆ ಸುಭದ್ರ ಗೋಡೆಗಳನ್ನು ನಿರ್ಮಿಸುತ್ತಿದ್ದ ಕರಸೇವಕರನ್ನು ನಿಯಂತ್ರಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸೋತಿದೆ. ಇದರ ಫಲ ಚುನಾವಣೆಯ ಫಲಿತಾಂಶದಲ್ಲಿದೆ. ಬಹುಶಃ ನೂತನ ಸಮ್ಮಿಶ್ರ ಸರ್ಕಾರವೂ ಇದೇ ಸೆಕ್ಯುಲರ್ ಜಪದ ಮಾರ್ಗವನ್ನೇ ಅನುಸರಿಸುವ ಸಾಧ್ಯತೆಗಳಿವೆ. ಏಕೆಂದರೆ ನವ ಉದಾರವಾದದ ಮುನ್ನಡೆಗಾಗಿ ಈ ಪಕ್ಷಗಳು ಕೆಲವು ರಾಜೀ ಸೂತ್ರಗಳಿಗೆ ಮೊರೆ ಹೋಗಬೇಕಾಗುತ್ತದೆ. ಕೋಮುವಾದಿ ಫ್ಯಾಸಿಸಂ ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಹೌದು ಆದರೆ ನವ ಉದಾರವಾದ ಎರಡು ಅಲಗಿನ ಕತ್ತಿಯಂತೆ ಇನ್ನೂ ಹೆಚ್ಚು ಅಪಾಯಕಾರಿಯಾದುದು. ಈ ಎರಡರ ಮೈತ್ರಿ ಕೂಟ ಇಂದು ದೇಶದಲ್ಲಿ ನೆಲೆಯೂರುತ್ತಿದೆ.
ಜಾತಿ ಧೃವೀಕರಣ ಮತ್ತು ರಾಜಕಾರಣ ಒಂದಕ್ಕೊಂದು ಬೆಸೆದುಕೊಂಡಿರುವುದೂ ಪ್ರಜಾತಂತ್ರದ ಮೌಲ್ಯಗಳ ನಾಶಕ್ಕೆ ಕಾರಣವಾಗಿದೆ. ದುರ್ಬಲ ಮತ್ತು ಶೋಷಿತ ಸಮುದಾಯಗಳ ರಕ್ಷಣೆಗೆ ಕಿಂಚಿತ್ತೂ ಗಮನ ಹರಿಸದ ಆಳುವ ವರ್ಗಗಳು ಇದೇ ವರ್ಗಗಳನ್ನು ಆಕರ್ಷಿಸಿ ಅಧಿಕಾರದ ಗದ್ದುಗೆ ಏರುತ್ತಿರುವುದು ಅಚ್ಚರಿಯಾದರೂ ಸತ್ಯ. ಆದರೆ ನವ ಉದಾರವಾದದ ಸಂದರ್ಭದಲ್ಲಿ ಇದು ಅಸಂಬದ್ಧ ಎನಿಸುವುದೂ ಇಲ್ಲ.

ರಾಜಕೀಯ ನೆಲೆಯಲ್ಲಿ ಧೃವೀಕರಣವಾಗುತ್ತಿರುವ ಜಾತಿಗಳು ಆರ್ಥಿಕ ನೆಲೆಯನ್ನು ಮಾತ್ರ ಹೊಂದಿವೆ. ಸಾಮಾಜಿಕ-ಸಾಂಸ್ಕøತಿಕ ನೆಲೆಯಲ್ಲಿ ಕಂಡುಬರುವ ಶೋಷಿತ ವರ್ಗಗಳ ಧೃವೀಕರಣ ಆಳುವ ವರ್ಗಗಳಿಗೆ ಕಂಟಕಪ್ರಾಯವಾಗಿ ಕಾಣುತ್ತವೆ. ಏಕೆಂದರೆ ಬಂಡವಾಳದ ಹರಿವಿಗೆ ಯಾವುದೇ ಅಡ್ಡಗೋಡೆಗಳು ರುಚಿಸುವುದಿಲ್ಲ. ಮೆಟ್ರೋ ರೈಲಿನಲ್ಲಿ ಸೃಷ್ಟಿಯಾಗುವ ಭ್ರಮಾ ಲೋಕ ಕೊಳೆಗೇರಿಗಳಲ್ಲೂ ಸೃಷ್ಟಿಯಾಗುವಂತೆ ಶ್ರಮಿಸುವ ಬಂಡವಾಳ ವ್ಯವಸ್ಥೆಗೆ ಶೋಷಿತರ ದನಿ ಪ್ರಗತಿ ವಿರೋಧಿಯಾಗಿ ಕಾಣುತ್ತದೆ. ಹಾಗಾಗಿಯೇ ಸ್ವಚ್ಚ ಭಾರತ ಅಭಿಯಾನ ಭಾರತದ ನಗರ, ಪಟ್ಟಣ, ಗ್ರಾಮಗಳನ್ನು ಹೊಳೆಯುವ ಕನ್ನಡಿಯಂತೆ ಮಾಡಲು ಯತ್ನಿಸುತ್ತದೆ ಮತ್ತೊಂದು ಬದಿಯಲ್ಲಿ ಸ್ವಚ್ಚ ಭಾರತಕ್ಕಾಗಿ ಶ್ರಮಿಸುವ ಪೌರ ಕಾರ್ಮಿಕರ, ಶ್ರಮಜೀವಿಗಳ ಬದುಕಿಗೆ ಒಂದು ಬೆಳಕಿನ ಕಿಂಡಿಯನ್ನೂ ತೋರುವುದಿಲ್ಲ. ಸುಶಿಕ್ಷಿತ , ಪ್ರಜ್ಞಾವಂತ ಸಮಾಜಕ್ಕೆ ಈ ವಾಸ್ತವ ಗೋಚರಿಸದಂತೆ ಮಾಧ್ಯಮಗಳ ಮೂಲಕ ಎಚ್ಚರ ವಹಿಸಲಾಗುತ್ತದೆ.

ಸಂವಿಧಾನ ಈ ದೇಶದ ಜನಸಾಮಾನ್ಯರ ಬದುಕಿನ ಮಾರ್ಗಕ್ಕೆ ಒಂದು ಪ್ರಜಾಸತ್ತಾತ್ಮಕ ಆಯಾಮವನ್ನು ನೀಡುವ ಗ್ರಂಥ. ಇದನ್ನು ಉಳಿಸಲು ಹೋರಾಡುವುದು ನಮ್ಮ ಕರ್ತವ್ಯವೂ ಹೌದು. ಆದರೆ ಈ ಬದುಕಿನ ಮಾರ್ಗ ಸಕಾರಾತ್ಮಕ, ಸೃಜನಾತ್ಮಕ, ಸಂವೇದನಾಶೀಲ ಧೋರಣೆಯಿಂದ ಮಾನವೀಯ ಸಮಾಜದ ನಿರ್ಮಾಣಕ್ಕೆ ನೆರವಾಗಬೇಕಾದರೆ ಪ್ರಜಾತಂತ್ರದ ಉಳಿವು ಹೆಚ್ಚು ಮುಖ್ಯ ಎನಿಸುತ್ತದೆ. ನಶಿಸುತ್ತಿರುವ ಪ್ರಜಾತಂತ್ರ ಮೌಲ್ಯಗಳ ನಡುವೆ ಸಂವಿಧಾನದ ರಕ್ಷಣೆಯ ಕೂಗು ಅಪ್ಯಾಯಮಾನ ಎನಿಸಿದರೂ ತಾರ್ಕಿಕವಾಗಿ ಅತ್ಯವಶ್ಯ ಎನಿಸುವುದಿಲ್ಲ. ಹೋರಾಟದ ಮಾರ್ಗಗಳನ್ನೇ ಅಂತ್ಯಗೊಳಿಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿರುವ ಸಂದರ್ಭದಲ್ಲಿ, ಪ್ರತಿರೋಧದ ದನಿಗಳನ್ನು ಹತ್ತಿಕ್ಕುವ ಅಧಿಕೃತ ನೆಲೆಗಳು ಸೃಷ್ಟಿಯಾಗುತ್ತಿರುವ ಸನ್ನಿವೇಶದಲ್ಲಿ, ಫ್ಯಾಸಿಸ್ಟ್ ಪ್ರವೃತ್ತಿ ಮನೆಯಂಗಳದಲ್ಲಿ, ಮನದಂಗಳದಲ್ಲಿ ಅನಾವರಣಗೊಳ್ಳುತ್ತಿರುವ ಪರಿಸ್ಥಿತಿಯಲ್ಲಿ, ಹೋರಾಟದ ದನಿಗಳು ಕ್ಷೀಣಿಸುತ್ತಿರುವ ಕಾಲಘಟ್ಟದಲ್ಲಿ , ಶೋಷಿತ, ದಮನಿತ ಮತ್ತು ಅವಕಾಶ ವಂಚಿತ ಜನಸಮುದಾಯಗಳ ಹೋರಾಟದ ಗುರಿ ಪ್ರಜಾತಂತ್ರದ ರಕ್ಷಣೆ ಮಾತ್ರವೇ.

ಈ ಸಂದರ್ಭದಲ್ಲಿ ಕೆಲವೇ ಮನಸುಗಳು ಸಂವಿಧಾನ ಉಳಿವಿಗಾಗಿ ಹೋರಾಡುತ್ತಿವೆ. ಹಲವಾರು ಮನಸುಗಳು ಪ್ರಜಾತಂತ್ರದ ಉಳಿವಿಗಾಗಿ ಹಂಬಲಿಸುತ್ತಿವೆ. ನೊಂದ ಮನಸುಗಳು ಮಾನವೀಯ ಜಗತ್ತಿಗಾಗಿ ಹಾತೊರೆಯುತ್ತಿವೆ. ಅಳಿವು ಉಳಿವಿನ ಜಂಜಾಟದಲ್ಲಿ ಪ್ರಭುತ್ವ ಪ್ರತಿರೋಧದ ದನಿಗಳಿಗೆ ದೇಶದ್ರೋಹದ ಲೇಪನ ನೀಡುತ್ತಿದೆ. ಕರ್ನಾಟಕದ ಚುನಾವಣೆಗಳು ಈ ಎಲ್ಲ ಪ್ರಶ್ನೆಗಳ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದೆ. ಉತ್ತರ ನಮ್ಮಲ್ಲಿಯೇ ಇದೆ. ಶೋಧಿಸಬೇಕಷ್ಟೆ.

Leave a Reply

Your email address will not be published.