ನವವಸಹಾತುಶಾಹಿ ಪ್ರಾಬಲ್ಯ ಮತ್ತು ಆರ್ಥಿಕ ಮುಗ್ಗಟ್ಟು

-ವೇಣುಗೋಪಾಲ್ ಬಿ. ಎನ್.

bnvenuಅಂತಾರಾಷ್ಟ್ರೀಯ ಹಂತದಲ್ಲಿ ಪ್ರಾಮುಖ್ಯತೆ ಗಳಿಸಿದ ಸುದ್ಧಿವಾಹಿನಿಗಳು ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಒಂದಲ್ಲಾ ಒಂದು ದೇಶದ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಮಾಹಿತಿಯನ್ನು ಸುದೀರ್ಘವಾಗಿ ವಿಶ್ಲೇಷಿಸಿ ಬಾಯಿ ನೋಯಿಸಿಕೊಂಡಿವೆ. ಆರ್ಥಿಕ ಮುಗ್ಗಟ್ಟಿನ ಸಾಲಿನಲ್ಲಿ ಗ್ರೀಸ್, ಚೀನಾ, ಫ್ರಾನ್ಸ್ ಇತ್ಯಾದಿ ದೇಶಗಳು ಕಾಲುಮುರಿದು ನಿಂತಿದ್ದವು. ಪ್ರಪಂಚದ ಒಂದಂಚಿನ ಭೂಭಾಗದಲ್ಲಿ ಮುಂದೊಂದು ದಿನ ಇನ್ನೊಂದು ಸ್ವರೂಪದಲ್ಲಿ ನಮ್ಮಲ್ಲೂ ಉದ್ಭವಿಸುವ ಸಾಧ್ಯತೆ-ಸನ್ನಿವೇಶಗಳಿಗೆ ವಿರುದ್ಧವಾಗಿ ಸಜ್ಜುಗೊಳಿಸಿ ಕೊಳ್ಳಬೇಕಾದ ವಿಧಿವಿಧಾನಗಳನ್ನು ಸನ್ನದ್ಧಗೊಳಿಸಿ ಕಾರ್ಯ ಪ್ರವೃತ್ತರಾಗುವುದು ಪ್ರಜ್ಞಾವಂತ ದೇಶದ ದೂರದೃಷ್ಟಿತ್ವವನ್ನು ಸೂಚಿಸುತ್ತದೆ. ಆದರೆ ಆರ್ಥಿಕ ಮುಗ್ಗಟ್ಟಗೆ ಸಿಲುಕದಿರುವ ದೇಶಗಳು ಅಂತಹದೊಂದು ಸ್ಥಿತಿ ಬಂದೊದಿದಾಗ ಪರಿಹರಿಸಿಕೊಂಡರಾಯಿತು ಎಂಬ ಪೊಳ್ಳು ಆಶಾ ಭಾವನೆಯು ಕೇವಲ ತಾತ್ಕಾಲಿಕ ನೆಮ್ಮದಿ ತರಬಲ್ಲದು. ಆದರೆ ಮುಖ್ಯವಾದ ಪ್ರಶ್ನೆ ಈ ಪ್ರಾಬಲ್ಯ ಹಾಗೂ ಮುಗ್ಗಟ್ಟನ್ನು ಶಾಶ್ವತವಾಗಿ ಶಮನಗೊಳಿಸುವುದು ಹೇಗೆ?

ವಸಾಹತುಶಾಹಿ ಪ್ರಾಬಲ್ಯಕ್ಕೆ ಒಂದು ಸುದೀರ್ಘವಾದ ಇತಿಹಾಸವೇ ಇದೆ. ಬಹು ಹಿಂದೆ ಕೆಲವೇ ದೇಶಗಳಿಗೆ ಸೀಮಿತವಾಗಿದ್ದ ಈ ಪ್ರಾಬಲ್ಯವು ಪ್ರಸ್ತುತ ಜಾಗತಿಕ ಮಟ್ಟಕ್ಕೆ ವ್ಯಾಪಿಸಿರುವುದು ಅತ್ಯಂತ ಆತಂಕಕಾರಿಯ ಅಂಶ. ಜಾಗತೀಕರಣದ ಪ್ರಕ್ರಿಯೆಯಲ್ಲಿ ಸರಕು, ಸೇವೆ-ಸಂಪನ್ಮೂಲ, ಹಣಬಂಡವಾಳವನ್ನು ಸಂಚಯಿಸುವ ಪ್ರಯತ್ನಗಳು ನಿರಂತರವಾಗಿ ಸಾಗಿದ್ದು ಕೆಲವು ದೇಶಗಳು ಆರ್ಥಿಕವಾಗಿ ಯಶಸ್ಸನ್ನು ಸಾಧಿಸಿವೆ. ಇನ್ನುಳಿದ ದೇಶಗಳಿಗೆ ಜಾಗತಿಕ ಮಟ್ಟದಲ್ಲಾಗುತ್ತಿರುವ ಸಂಗತಿಗಳ ಬಗ್ಗೆ ಪರಿವೇ ಇಲ್ಲದಂತಾಗಿದೆ. ರಾಜಕೀಯವಾಗಿ ದೇಶಗಳಿಂದು ಸರ್ವಸ್ವತಂತ್ರವೆಂದು ಎದೆ ತಟ್ಟಿಕೊಂಡರು ಆರ್ಥಿಕತೆಯ ಒಂದಂಶದಲ್ಲಿ ಬಲೆಗೆ ಬಿದ್ದಿರುವುದು ಸ್ಫಷ್ಟವಾಗಿ ಗೋಚರಿಸುತ್ತಿದೆ.

ಇದನ್ನು ಎಡ್ವರ್ಡೊ ಲಿಯಾನೊನ ಮುಂದಿನ ಸಾಲುಗಳು ಮತ್ತಷ್ಟು ಸ್ಪಷ್ಟಪಡಿಸುತ್ತವೆ. ಅಂದರೆ “ಇಂದಿನ ವಿಶ್ವ ಆರ್ಥಿಕತೆಯು ಅತ್ಯಂತ ದಕ್ಷ ಹಾಗೂ ವ್ಯವಸ್ಥಿತವಾದ ಅಪರಾಧದಿಂದ ಕೂಡಿದೆ, ಆತನು ಮುಂದುವರೆಯುತ್ತಾ, ಅತ್ಯಂತ ಬಡದೇಶಗಳನ್ನು ವಿಶ್ವ ಸಂಸ್ಥೆ ಹಣಕಾಸು, ವ್ಯಾಪಾರ, ಸಾಲ ಹಾಗೂ ಭಯೋತ್ಪಾದನಾ ಚಟುವಟಿಕೆಗಳಿಂದ ನಿಯಂತ್ರಿಸುತ್ತಾ ಹೀನಾಯವಾದ ವೃತ್ತಿಪರತೆಯೊಂದಿಗೆ ಬಹು ಎತ್ತರದಿಂದ ಬಾಂಬುಗಳನ್ನು ಎಸೆಯುವ ಜನರ ರಕ್ತ ಹೀರುವವರ ನೆಲೆವೀಡಾಗಿದೆ” ಎಂದು ಉದ್ಧರಿಸುತ್ತಾನೆ.

ಇಂದು ಸಿರಿಯಾ, ಇರಾನ್, ಆಫಘಾನಿಸ್ಥಾನ್‍ಗಳ ಮೇಲೆ ಪಾಶ್ಚಿಮಾತ್ಯ ಹಾಗೂ ಐರೋಪ್ಯ ಕೆಲ ದೇಶಗಳ ಪೈಶಾಚಿಕ ಕೃತ್ಯಗಳಿಗೆ ಪ್ರತಿರೋಧಗಳು ಕಂಡುಬಂದಿವೆ. ಆಕಾಶದಲ್ಲಿ ವಿಮಾನಗಳಿಂದ ಭೂ ಪ್ರದೇಶಗಳ ಮೇಲಿರುವ ತಾಣಗಳ ಮೇಲೆ ಬಾಂಬುಗಳನ್ನು ಬಿಸಾಡಿ ಜಯ ಸಾಧಿಸಿದೆವೆಂದು ಸಾರುವ ಅಮೆರಿಕಾ ದೇಶಕ್ಕೆ ಎನೆನ್ನಬೇಕು. ಬಾಂಬು ಸಿಡಿದದ್ದು ಎಲ್ಲಿ ಎಂಬ ಪ್ರಶ್ನೆಗೆ ಮಿಲಿಟರಿ ಮುಖ್ಯಸ್ಥ ಕಕ್ಕಾಬಿಕ್ಕಿಯಾಗಿ ಕಣ್ಣರಳಿಸಿ ಬಾಯಿ ತೆಗೆದು ಆಕಾಶ ನೋಡಿದ್ದು ಅಮೆರಿಕಾ ಅಧ್ಯಕ್ಷನನ್ನು ಪೇಚಿಗೆ ಸಿಲುಕಿಸಿತ್ತು. ಕೆಲ ದಿನಗಳ ನಂತರ ಬಂದ ಮಾಹಿತಿ ಪ್ರಕಾರ ಬಾಂಬು ಸಿಡಿದದ್ದು ಅಲ್ಲಿನ ಯಾವುದೊ ಒಂದು ಆಸ್ಪತ್ರೆಯೆಂದು ತಿಳಿದು ಅಧ್ಯಕ್ಷ ಕ್ಷಮೆಕೋರಿದ್ದು ಸಮಕಾಲೀನ ವ್ಯಂಗ್ಯಗಳಲ್ಲೊಂದು. ಆರ್ಥಿಕವಾಗಿ ಇತರೆ ದೇಶಗಳೊಂದಿಗೆ ನಡೆದುಕೊಳ್ಳುವ ರೀತಿ. ಆವುದಾದರೂ ಒಂದು ವೇದಿಕೆಯಲ್ಲಿ ಈ ವಿಚಾರಗಳನ್ನು ಕುರಿತು ಪ್ರಶ್ನೆಗಳನ್ನು ಕುರಿತು ಪ್ರಶ್ನಿಸಿದರೆ ಅಂತಹ ದೇಶಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ದಿಗ್ಭಂದನ ಹೇರಿ ಬಾಯಿ ಮುಚ್ಚಿಸಿ ಬಿಡುವುದು ಇದು ನವವಸಾಹತುಶಾಹಿ ಪ್ರಾಬಲ್ಯದ ಒಂದು ತುಣುಕುಮಾತ್ರ.

anti-wtoಜಾಗತಿಕ ಮಟ್ಟದಲ್ಲಿ ನವವಸಾಹತುಶಾಹಿ ಪ್ರಾಬಲ್ಯಕ್ಕೂ ಆರ್ಥಿಕ ಮುಗ್ಗಟ್ಟಿಗೂ ಹತ್ತಿರದ ನಂಟಿದೆ. ಇದರ ನೆಂಟಸ್ಥಿಕೆಯನ್ನು ಬೆಳೆಸಲು ಆರ್ಥಿಕವಾಗಿ ಬಲಿಷ್ಟವಾದ ದೇಶಗಳು ಹೂಡುವ ತಂತ್ರಗಾರಿಕೆಗಳು ಅನೇಕ ಉದಾಹರಣೆಗೆ ಮುಕ್ತ ಮಾರುಕಟ್ಟೆ, ಪ್ರಜಾಪ್ರಭುತ್ವದ ಸೋಗಿನ ವ್ಯವಸ್ಥೆಯ ಸ್ಥಾಪನೆ, ಮತ್ತದರ ನಿರ್ವಹಣೆ, ಮಾನವಹಕ್ಕುಗಳ ರಕ್ಷಣೆ, ಭಯೋತ್ಪಾದನೆಯ ನಿಗ್ರಹ ಇತ್ಯಾದಿ ಉದಾತ್ತ ಚಿಂತನೆಗಳನ್ನು ಪ್ರತಿಪಾದಿಸುತ್ತಾ ಮಾರಾಟಕ್ಕಿಟ್ಟು ಆರ್ಥಿಕವಾಗಿ ಹಿಂದುಳಿದ ದೇಶಗಳಲ್ಲಿರುವ ಸಂಪನ್ಮೂಲಗಳನ್ನು ದೋಚಿ ಲಾಭಗಳಿಸಲು ಮುಂಗಾಲಿನಲ್ಲಿ ನಿಂತು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಇಂಗ್ಲೆಂಡನ್ನು ಹದ್ದುಬಸ್ಥಿನಲ್ಲಿಡಲು ಜರ್ಮನಿಗೆ ಬೆಲ್ಚಿಯಂ ಅವಶ್ಯಕ. ಅದೇ ರೀತಿ ಜರ್ಮನಿಯನ್ನು ನಿಭಾಯಿಸಲು ಇಂಗ್ಲೆಂಡಿಗೆ ದಢೂತಿ ಷಾಗಳ ನೆರವು ಅಗತ್ಯ. ಅದರಂತೆ ಇಂದು ಅಮೆರಿಕಾಕ್ಕೆ ಪಾಕಿಸ್ಥಾನ ಹಾಗೂ ಭಾರತ ದೇಶಗಳು ಲಾಭ ದೋಚಲಿರುವ ಫಲವತ್ತಾದ ಮಾರುಕಟ್ಟೆಗಳಾಗಿ ಪರಿವರ್ತಿತವಾಗಿವೆ. ಭಾರತವು ಮಿಲಿಯಗಟ್ಟಲೆ ಡಾಲರ್‍ಗಳನ್ನು ತೆತ್ತು ಫ್ರಾನ್ಸ್ ಮತ್ತು ಅಮೆರಿಕಾದಿಂದ ಯುದ್ಧವಿಮಾನ ಹಾಗೂ ರಕ್ಷಣಾ ಸಾಮಾಗ್ರಿಗಳನ್ನು ಕೊಂಡು ಶೇಖರಿಸುತ್ತಿವೆ. ಎರಡು ದೇಶಗಳ ನಡುವೆ ಶಾಂತಿ ಮಾತುಕತೆಗಳನ್ನಾಡಲು ಅಮೆರಿಕಾವು ಮಧ್ಯಪ್ರವೇಶಿಸುತ್ತಾ ತನ್ನ ಲಾಭವನ್ನು ಹೆಚ್ಚಿಸಿಕೊಳ್ಳಲು ಹವಣಿಸಿ ಯಶಸ್ವಿಯಾಗುತ್ತದೆ.

ಪ್ರಸ್ತುತ ರಾಜಕೀಯಕ್ಕಿಂತ ಆರ್ಥಿಕವಾಗಿ ಶ್ರೀಮಂತ ದೇಶಗಳು ಸ್ವತಂತ್ರವಾದ ಆದರೆ ಆರ್ಥಿಕವಾಗಿ ಹಿಂದುಳಿದ ದೇಶಗಳನ್ನು ತಮ್ಮ ಅಡಿಯಾಳುಗಳ್ಳಾನ್ನಾಗಿಸಿಕೊಳ್ಳುತ್ತಿವೆ. ಈ ತೆರೆನಾದ ಅಧಿಪತ್ಯವನ್ನು ಜಾಗತಿಕ ಮಟ್ಟಕ್ಕೆ ಆರ್ಥಿಕವಾಗಿ ವಿಸ್ತರಿಸುವ ಮನೋಭೂಮಿಯು ದೇಶಗಳ ನಡುವೆ ಇರುವ ಆರ್ಥಿಕತೆಯ ವಿಭಜನೆ ಹಾಗೂ ಸಂಘರ್ಷಗಳ ಫಲಶೃತಿಯಾಗಿದೆ. ಮಿತಿಮೀರಿದ ಉತ್ಪಾದನೆ, ಶ್ವೇಚ್ಛಾಚಾರದ ಮಾರುಕಟ್ಟೆಗಳ ನೀತಿಗಳು ಮಿತಿಗಿಂತ ಅಧಿಕ ಹೂಡಿಕೆ ಇತ್ಯಾದಿ ದೇಶಗಳನ್ನು ಆರ್ಥಿಕವಾಗಿ ಮುಗ್ಗಟ್ಟಿಗೆ ಸಿಲುಕುವಂತೆ ಮಾಡಿವೆ. ನಾಗರಿಕ ಸಮಾಜ ಅನಾಗರಿಕವಾಗಿಪರಿವರ್ತನೆಯಾಗುವ ಪರಿಯಿದು.

ಸ್ವತಂತ್ರ ದೇಶಗಳಿಂದು ಜಾಗತಿಕ ನವವಸಾಹತುಶಾಹಿ ಪ್ರಾಬಲ್ಯ ಹಾಗೂ ಮುಕ್ತ ಆರ್ಥಿಕತೆಯಿಂದ ಅಲ್ಲಿನ “ಪ್ರಜೆಗಳು” “ಗ್ರಾಹಕರಾಗಿ” “ಗುಲಾಮರಾಗಿ” ಪರಿವರ್ತಿತರಾಗಿದ್ದಾರೆ. ಈ ಬಲೆಯಲ್ಲಿ ಈಗಾಗಲೇ ಬಿದ್ದಿರುವ ಹಾಗೂ ಮುಂದೊಂದು ದಿನ ಬೀಳಲಿರುವ ದೇಶಗಳು ಮಗ್ಗಟ್ಟು ಬೇಡವೆಂದರೂ ಅದು ಒಂದು ಆತುಕೊಳ್ಳುತ್ತದೆ. ಈ ಒಂದು ಬದಲಾವಣೆ ತರಬಲ್ಲ ಶಕ್ತಿ ಸಾಮಥ್ರ್ಯ ಜಾಗತಿಕ ನವವಸಾಹತುಶಾಹಿ ದೇಶಗಳಿಗಿದೆ. ಅತಿಯಾದ ಬಂಡವಾಳ, ಮದ್ದು-ಗುಂಡು-ಬಾಂಬುಗಳು ಶೇಖರಣೆಯು ಅಧಿಪತ್ಯದ ಪ್ರಾಬಲ್ಯವನ್ನು ಹೆಚ್ಚಿಸುವ ಹಾಗೂ ಆ ಶಕ್ತಿಯನ್ನು ಕಾಯ್ದುಕೊಳ್ಳುವಂತೆ ಪ್ರೇರೆಪಿಸುತ್ತದೆ. ಹಿಂದಿದ್ದ ಹಿಟ್ಲರ್ ಮತ್ತು ಮುಸೊಲಿನಿಗಳಂತಹ ವಿಕೃತ ವ್ಯಕ್ತಿಗಳಿಬ್ಬರು ಈ ರೀತಿಯವರಾಗಿದ್ದರು.

ಆದರೆ ಇಂದು ಇವರೀರ್ವರನ್ನೂ ಮೀರಿಸುವಂತೆ ದೇಶಗಳು ತಮ್ಮ ಹೀನ ತಂತ್ರಗಳಿಂದ ಜಾಗತಿಕವಾಗಿ ಪ್ರಾಬಲ್ಯ ಮೆರೆಯಲು ಹವಣಿಸುತ್ತಿವೆ. ದುರಂತವೆಂದರೆ ಭಾರತ ದೇಶವು ಈ ಅಧಿಪತಿಗಳ ಮುಂದೆ ಸಾಷ್ಟಾಂಗ ಬಿದ್ದು ಉದ್ಧರಿಸಬೇಕೆಂದು ಪ್ರಾರ್ಥಿಸುತ್ತಿದೆ. ಇದನ್ನೆ ತನ್ನ ತನವನ್ನು ಕಳೆದುಕೊಳ್ಳುವ ಹಂತವೆನ್ನುವುದು. ಬೀದಿಯಲ್ಲಿ ದಿಕ್ಕಿಲ್ಲದೆ ಅಲೆದಾಡುವ ಪಿಶಾಚಿಗಳು ಮನೆಗೆ ಹೊಕ್ಕು ಸ್ನೇಹ ಬೆಳೆಸಿ ಠಿಕಾಣಿ ಹೂಡುವ ಸನ್ನಾಹವಿದು. ಆಕರ್ಶಕವಾದ ಅಲ್ಪ ಆಸೆಗಳಿಗೆ ಜೊತು ಬಿದ್ದ ನೆಮ್ಮದಿಯ ನಾಳೆಗಳನ್ನು ಕಳೆದುಕೊಳ್ಳಬೇಕೆ ಎಂಬುದರ ಬಗ್ಗೆ ಆಲೋಚಿಸುವುದು ಕಾಲಹರಣವೆಂದರೆ ಹೇಗೆ? ಅಥವಾ ಕೇಂದ್ರದಲ್ಲಿರುವ ವಿದೇಶಾಂಗ ಖಾತೆ ಮಂತ್ರಿಯಾಗಿರುವ ಶ್ರೀಮತಿ ಸುಸ್ಮಾ ಸ್ವರಾಜ್ ಹೇಳುವಂತೆ ಎಲ್ಲವೂ ಸರಿಯಾಗಿದೆ ಭಗವದ್ಗೀತೆಯ ಅಡಕ ಮುದ್ರಿಕೆ (ಸಿ.ಡಿ) ಯನ್ನೊ ಅಥವಾ ಕೃತಿಯನ್ನೊ ಕೇಳಿಸಿಕೊಂಡು/ಪಠಿಸುತ್ತಾ ರಾಮ ಕೃಷ್ಣ ಎಂದು ಜಪಿಸುತ್ತಾ ಪ್ರಸಾದ ಮೆಲ್ಲಿ ಕೃತಾರ್ಥರಾಗ ಬೇಕೆ! ಇಲ್ಲವೆ ಅಂತಾರಾಷ್ಟ್ರೀಯ ಮಟ್ಟದಲ್ಲಾಗುತ್ತಿರುವ ಆರ್ಥಿಕ, ರಾಜಕೀಯ ಅನಾಹುತ ವಿದ್ಯಮಾನಗಳನ್ನು ತಾತ್ವಿಕವಾಗಿ, ವಸ್ತುನಿಚ್ಟವಾಗಿ ಹಾಗೂ ಚರ್ಚೆಗಳ ಮೂಲಕ ಪರಿಹಾರಗಳನ್ನು ಸೂಕ್ತ ಭಾಗವಹಿಸುವಿಕೆಯಿಂದ ಕಾರ್ಯ ಪ್ರವೃತ್ತರಾಗಬೇಕೆ ಎಂಬುದು ಮುಖ್ಯ ಅಂಶ ಅದಕ್ಕೆ ಬೇಕಾದ ವೇದಿಕೆಯನ್ನು ನಿರ್ಮಿಸಿಕೊಳ್ಳುವುದು ಆಯಾ ಸಂದರ್ಭಕ್ಕನುಗುಣವಾಗಿದ್ದರೆ ಅನುಕೂಲಕರ.

ಚಾರಿತ್ರಿಕವಾಗಿ ನವವಸಾಹತುಶಾಹಿ ಅಧಿನಿಯಮಗಳು ಒಂದೇ ಆಗಿದ್ದರೂ ಅವುಗಳ ಲಕ್ಷಣಗಳು ದೇಶ ಕಾಲಗಳನ್ನಾಧರಿಸಿ ಬದಲಾವಣೆಗೊಳ್ಳುತ್ತಾ ಆರ್ಥಿಕತೆಗಳನ್ನು ಮುಂದು ವರೆಯದಂತೆ ಊನಮಾಡುತ್ತವೆ. ಈ ಹಂತದಲ್ಲಿ ಸುಪ್ತವಾದ ಅಧಿನಿಯಮಗಳನ್ನು ಸೈದ್ದಾಂತಿಕವಾಗಿ ಅರಿತು ಅವುಗಳ ವಿರುದ್ಧವಾಗಿ ಕಾರ್ಯಪ್ರವೃತ್ತರಾಗುವುದು ಅವಶ್ಯಕ. ಇದನ್ನೆ ಪ್ರಗತಿಪರ ಬದಲಾವಣೆ ಎನ್ನುವುದು ಇದಕ್ಕೆ ಮಸಿಬಳಿಯುವ ಹುನ್ನಾರಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಪ್ರಯತ್ನಗಳು ಸ್ಪಷ್ಟವಾಗಿದಲ್ಲಿ ಹುನ್ನಾರಗಳು ಮಣ್ಣುಪಾಲಾಗುತ್ತವೆ.

ವಿಶ್ವದೆಲ್ಲಡೆ ಪ್ರಜಾಪ್ರಭುತ್ವ ಸ್ಥಾಪನೆ ಮಾಡ ಹೊರಟಿರುವ ಕೆಲವು ದೇಶಗಳ ಹಿಂದಿರುವ ಉದ್ಧೇಶವಾದರೂ ಏನು? ಅದನ್ನು ಕಾರ್ಯರೂಪಕ್ಕಿಳಿಸಿ ಇತರೆ ದೇಶಗಳಲ್ಲಿರುವ ಆಂತರಿಕ ಸಂಪನ್ಮೂಲ ಸಾಂಸ್ಕøತಿಕ ಸಾಮಾಜಿಕ ಹಾಗೂ ಆರ್ಥಿಕ ಸಂಬಂಧಗಳನ್ನು ವೈವಿಧ್ಯತೆಯನ್ನು ಮೊಟಕುಗೊಳಿಸುವುದೆ? ಕೆಲವೇ ಕೆಲವು ಪಟ್ಟಭದ್ರ ಹಿತಾಸಕ್ತಿಗಳನ್ನು ಪೋಶಿಸುತ್ತಾ ಸಾಮಾನ್ಯರನ್ನು ಬಲಿಕೊಡುವುದೆ? ಅಥವಾ ಪ್ರಭುತ್ವವನ್ನು ಪ್ರಜೆಗಳಿಂದ ವಿಮುಖಗೊಳಿಸಿ ಶಕ್ತಿಹೀನರನ್ನಾಗಿಸುವುದೆ? ಎಂಬ ಪ್ರಶ್ನೆಗಳಿಗೆ ಸೂಕ್ತ, ವಸ್ತುನಿಷ್ಟವಾದ ಹಾಗೂ ತಾತ್ವಿಕವಾಗಿ ಚಿಂತನೆಗೊಳಪಡಿಸಿಕೊಳ್ಳುವುದು ಆರೋಗ್ಯಕರ ವಾತಾವರಣಕ್ಕೆ ನಾಂದಿಯಾಗುತ್ತದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಕಮ್ಮಟಗಳಲ್ಲಿ ವಿಷಯ ತಜ್ಞರಿಗೆ ಈ ಮೇಲ್ಕಂಡ ಪ್ರಶ್ನೆಗಳು ಮುಜುಗರ ಮೂಡಿಸುವಂತಹದ್ದು. ಬೌದ್ಧಿಕತೆಯಿದ್ದರೂ ಬಾಯಿಬಿಡದ ಸನ್ನಿವೇಶವದು. ಯಾವುದೋ ದೇಶದಲ್ಲಿ ಮುಗ್ಗಟ್ಟಾದರೆ ಅದಕ್ಕೂ ನಮಗೂ ಏನು ಸಂಬಂಧ ಎನ್ನುವ ಧೋರಣೆ!

Greeceಇಂದು ರಾಷ್ಟ್ರ ಅಂತಾರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಮಾಧ್ಯಮಗಳು ಶ್ರೀಮಂತ ಪಟ್ಟಿಯೊಂದನ್ನು ಸಿದ್ಧ ಪಡಿಸಿ ಪ್ರಚುರಪಡಿಸುವ ಮಹತ್ಕಾರ್ಯವನ್ನು ಅತ್ಯಂತ ಮುತುವರ್ಜಿಯಿಂದ ಮಾಡುತ್ತಿವೆ. ಆ ಪಟ್ಟಿಯಲ್ಲಿರುವ ಭೂಪರು ಕೇವಲ ಹತ್ತು ಮಾತ್ರ. ಇದು ಹೆಮ್ಮೆ ಪಡುವ ವಿಚಾರವೆಂಬುದು ಮೊದಲ ಪ್ರಶ್ನೆ? ಈ ಪ್ರಭೃತಿಗಳು ಆ ಪಟ್ಟಿಯಲ್ಲಿರುವ ಸ್ಥಾನಗಳನ್ನು ಗಿಟ್ಟಿಸಿದ್ದು ಹಾಗೂ ಮುಂಬರುವ ದಿನಗಳಲ್ಲಿ ಆ ಸ್ಥಾನವನ್ನು ಕಾಯ್ದಿರಿಸಿಕೊಳ್ಳಲವರು ಮಾಡುವ ಪ್ರಯತ್ನಗಳೇನು ಎಂಬುದು ಎರಡನೆಯ ಪ್ರಶ್ನೆ? 1960 ರಿಂದೀಚೆಗೆ ವಿಶ್ವಬ್ಯಾಂಕ್ ದೇಶಗಳ ಆರ್ಥಿಕ ಸಂಬಂಧಿತ ಸಮೀಕ್ಷೆಯ ಮೂಲಕ ಆರ್ಥಿಕತೆಗಳನ್ನು ವರ್ಗಿಕರಿಸುತ್ತಾ ಬಂದಿವೆ. ಅದರ ಪ್ರಕಾರ ಕೇವಲ ಎಂಟು ದೇಶಗಳು ಅಭಿವೃದ್ಧಿ ಹೊಂದಿರುವಂತಹದ್ದು. ಇನ್ನುಳಿದವು ಸಂಪನ್ಮೂಲಗಳಿದ್ದರೂ ನಿರ್ಗತಿಕರಂತಿರುವ ದೇಶಗಳೆಂದು ಈ ಎಂಟು ಶ್ರೀಮಂತ ದೇಶಗಳ ಮೂದಲಿಕೆ ಐತಿಹಾಸಿಕವಾಗಿ ಅವಲೋಕಿಸಿಕೊಂಡಲ್ಲಿ ಇಂದಿನ ಆರ್ಥಿಕವಾಗಿ ಬಲಿಷ್ಟವಾದ ದೇಶಗಳು ಒಂದು ಕಾಲದಲ್ಲಿಈಗಿರುವ ನಿರ್ಗತಿಕ ದೇಶಗಳಿಂದ ದೋಚಿದ ಸಂಪತ್ತಿನಿಂದ ಶ್ರೀಮಂತವಾದ ಅಂಶವನ್ನು ಅಡಿಗಡಿಗೆ ಮರೆಮಾಚುತ್ತದೆ.

ಆದರೆ ಇತಿಹಾಸದಲ್ಲಿ ದಾಖಲೆಗಳಿವೆ. ಇಂದು ಅದೇ ದೇಶಗಳು ಇತರೆ ದೇಶಗಳನ್ನು ನವವಸಾಹತುಶಾಹಿ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿವೆ. ಈ ಹವಣಿಕೆಯ ಮೂಲ ಉದ್ಧೇಶ ಸಂಪನ್ಮೂಲ ಲೂಟಿಯಲ್ಲದೆ ಮತ್ತೇನು? ಈ ರೀತಿಯ ಬೆಳವಣಿಗೆಗಳು ದೇಶಗಳನ್ನು ಆರ್ಥಿಕ ಮುಗ್ಗಟ್ಟಗೆ ನೇರವಾಗಿ ಗುರಿಮಾಡುತ್ತವೆ. ಅದರ ಫಲಶೃತಿ ಕರಾಳ ಆರ್ಥಿಕವಾಗಿ ಮುಗ್ಗಟ್ಟನ್ನು ಅನುಭವಿಸುವ ದೇಶಗಳು ಅಲ್ಪಾವಧಿಯಲ್ಲಿ ಕೆಲವು ಪರಿಹಾರಗಳಿಂದ ಹೊರಬರುತ್ತವೆಯಾದರೂ ಅವು ಶಾಶ್ವತ ಪರಿಹಾರವಲ್ಲವೆಂಬುದು ಮನಗಾಣಬೇಕು. ಇದಕ್ಕೆ ಕ್ಯೂಬಾವು ಮಾದರಿಯಾಗಬಲ್ಲದು.

ಜಾಗತಿಕವಾಗಿ ಪ್ರಾಬಲ್ಯ ಹಾಗೂ ಆರ್ಥಿಕ ಮುಗ್ಗಟ್ಟುಗಳು ಅವ್ಯಾಹತವಾಗಿ ಪಸರಿಸುತ್ತಿರುವುದು ಮಾನವನ ಮೂಲ ಅಭಿಷ್ಟಗಳಿಗೆ ಹಿಡಿದ ಗ್ರಹಣವಾಗಿದೆ. ಇದು ಅನಾರೋಗ್ಯದ ಒಂದು ಪರಮಾವಧಿ. ಅದಕ್ಕೆ ಪ್ರತಿರೋಧವೆಂಬುದು ಸೂಕ್ತ ಔಷಧಿ ಈ ಔಷಧಿಯೊಂದಿಗೆ ಚೈತನ್ಯಕಾರಕಗಳನ್ನು ವೃದ್ಧಿಸಿಕೊಂಡು ಮುಂದೆ ಸಾಗಬೇಕಿದೆ ಈ ಒಂದು ಪ್ರಕ್ರಿಯೆಯು ಪ್ರಭಲವಾದ ಸಮುದ್ರದಲೆಗಳ ವಿರುದ್ಧ ಈಜಿದಂತೆ. ಈಜದಿದ್ದರೆ ಅವನತಿ ಅಂತಿಮ. ಈ ಹಂತಕ್ಕೆ ತಲುಪಬೇಕೆ ಬೇಡವೆಂದಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಾ ವಸ್ತುನಿಷ್ಟವಾಗಿ ದನಿ ಎತ್ತೊಣ ಗುರಿ ಮುಟ್ಟುವ ತನಕ ನಿರಂತರ ಹೋರಾಟ ಮಾಡೋಣ.

 

Leave a Reply

Your email address will not be published.