ನಯನ ಮನೋಹರ ಬೆಲಂ ಗುಹೆಗಳು

ಚಿತ್ರ-ಲೇಖನ : ಸಿದ್ಧರಾಮ ಹಿರೇಮಠ ಕೂಡ್ಲಿಗಿ.

ಬೆಲಂ ಗುಹೆಗಳ ಪ್ರವೇಶ ದ್ವಾರ.

ಬೆಲಂ ಗುಹೆಗಳ ಪ್ರವೇಶ ದ್ವಾರ.

ಸ್ನೇಹಿತ ಕೆ. ಎಂ. ವೀರೇಶ್ ‘ಸರ್ ನೋಡುವಂತಿದ್ದರೆ ನಿಸರ್ಗ ನಿರ್ಮಿತ ಬೆಲಂ ಗುಹೆಗಳನ್ನು ನೋಡಿ, ಅದ್ಭುತವಾದ ರಚನಾ ವಿನ್ಯಾಸಗಳನ್ನು ಕಾಣುವಿರಿ’ ಎಂದಾಗ, ಅವೆಂತಹ ಗುಹೆಗಳು ನೋಡೋಣವೆಂದು ಹೊರಟೆ. ಬೆಂಗಳೂರಿನಿಂದ ಸುಮಾರು 330 ಕಿ.ಮೀ ದೂರವಿರುವ ಬೆಲಂ ಗುಹೆಗಳು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿನ ಬೆಲಂ ಎಂಬ ಗ್ರಾಮದ ಬಳಿ ಇವೆ. ಈ ಗುಹೆಗಳನ್ನು ಭಾರತದ ಉಪ-ಖಂಡದಲ್ಲಿನ ಎರಡನೇ ಅತಿದೊಡ್ಡ ಸುಣ್ಣಶಿಲೆಯಿಂದ ನಿರ್ಮಿತವಾದ ನಿಸರ್ಗನಿರ್ಮಿತ ಗುಹೆಗಳೆಂದು ಪರಿಗಣಿಸಲಾಗಿದೆ. 

ಗುಹೆಯಲ್ಲಿ ಇಳಿಯಲು ಮೆಟ್ಟಿಲುಗಳು.

ಗುಹೆಯಲ್ಲಿ ಇಳಿಯಲು ಮೆಟ್ಟಿಲುಗಳು.

ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿರುವ ಬೆಲಂ ಗುಹೆಗಳು ಪ್ರವೇಶದ್ವಾರದ ಬಲಗಡೆಯೇ ಬುದ್ಧನ ಬೃಹತ್ ಮೂರ್ತಿಯನ್ನು ನಿರ್ಮಿಸಲಾಗಿದೆ. ಹಿಂದೆ ಈ ಗುಹೆಗಳಲ್ಲಿ ಬೌದ್ಧ ಸನ್ಯಾಸಿಗಳಿದ್ದರೆಂದು ಪುರಾವೆಗಳಿವೆ. ಗುಹೆಗಳೆಂದೊಡನೆ ನಾನು ಬೆಟ್ಟದಲ್ಲಿರುವ ಗುಹೆಗಳೆಂದೇ ಭಾವಿಸಿದ್ದೆ. ಆದರೆ ಮುಂದುವರೆದಂತೆಲ್ಲ ಗುಹೆಗಳು ನೆಲದಾಳದಲ್ಲಿವೆಯೆಂದು ನೋಡಿ ಅಚ್ಚರಿಪಟ್ಟೆ. ಗುಹೆಯ ಒಳಗಡೆ ಇಳಿಯಲು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಗುಹೆಯಲ್ಲಿನ ಪ್ರವೇಶ ದ್ವಾರದ ಕೋಣೇಯಲ್ಲಿಯೇ ಮೇಲ್ಭಾಗದಲ್ಲಿ ನಿಸರ್ಗನಿರ್ಮಿತ ದೊಡ್ಡ ಕಿಂಡಿಯಿದೆ. ಒಳಗಡೆ ಹೋದಂತೆಲ್ಲ ಕಣ್ಮುಂದೆ ಅದ್ಭುತ ಮಾಯಾನಗರಿಯೇ ಮೈದಾಳುತ್ತದೆ. ವಿಶಾಲವಾದ ಪ್ರಾಂಗಣಗಳೂ ಗುಹೆಯಲ್ಲಿವೆ, ಮೇಲ್ಛಾವಣಿಯಿಂದ ಅಲ್ಲಲ್ಲಿ ಆಲದ ಮರದ ಬಿಳಲುಗಳಂತೆ ಇಳಿಬಿದ್ದ ಸುಣ್ಣಶಿಲೆಯ ತೊಂಗಲುಗಳಿವೆ, ಕೆಲವೆಡೆ ನೀರು ಇನ್ನೂ ಜಿನುಗುತ್ತದೆ.

ನದಿಯ ಸುಳಿಯ ಕೊರೆತದಿಂದಾದ ವಿನ್ಯಾಸ.

ನದಿಯ ಸುಳಿಯ ಕೊರೆತದಿಂದಾದ ವಿನ್ಯಾಸ.

ಗುಹೆ ಎಂಬುದಕ್ಕೆ ಸಂಸ್ಕೃತದಲ್ಲಿ ಬಿಲಂ ಎಂಬ ಹೆಸರಿದ್ದು, ಇದರಿಂದಲೇ ಬೆಲಂ ಗುಹೆಗಳು ತಮ್ಮ ಹೆಸರನ್ನು ಪಡೆದಿವೆ. ತೆಲುಗಿನಲ್ಲಿ ಈ ಗುಹೆಗಳಿಗೆ ಬೆಲಂ ಗುಹಾಲು ಎಂಬ ಹೆಸರಿದೆ. ಸುಣ್ಣಕಲ್ಲಿನ ರಾಸಾಯನಿಕ ಪ್ರಕ್ರಿಯೆಗಳಿಂದ ನಿಸರ್ಗ ನಿರ್ಮಿತವಾಗಿರುವ ಈ ಗುಹೆಗಳು ಮಿಲಿಯಾಂತರ ವರ್ಷದಲ್ಲಿ ರೂಪುಗೊಂಡಿವೆ ಎಂದು ಭೂಗರ್ಭ ಶಾಸ್ತ್ರಜ್ಞರು ತಿಳಿಸುತ್ತಾರೆ. ಬೆಲಂ ಗುಹೆಗಳು 3,229 ಮೀಟರ್‍ನಷ್ಟು ಉದ್ದವಿದ್ದು, ಇದರಿಂದಾಗಿಯೆ ಇವು ಭಾರತದ ಉಪಖಂಡದಲ್ಲಿನ ಎರಡನೇ ಅತಿದೊಡ್ಡ ನೈಸರ್ಗಿಕ ಗುಹೆಗಳೆಂದು ಖ್ಯಾತಿ ಪಡೆದಿವೆ. ಹಿಂದೆ, ಜೈನ, ಬೌದ್ಧ ಸನ್ಯಾಸಿಗಳು ಈ ಗುಹೆಗಳಲ್ಲಿ ವಾಸವಾಗಿದ್ದರೆಂಬ ಕುರುಹು ಇವೆ.

ಗುಹೆಯೊಳಗಡೆಯ ವಿಶಾಲವಾದ ಓಣಿಗಳು.

ಗುಹೆಯೊಳಗಡೆಯ ವಿಶಾಲವಾದ ಓಣಿಗಳು.

ಬಹುಹಿಂದೆ ಇಲ್ಲಿ ಚಿತ್ರಾವತಿ ನದಿ ಹರಿಯುತ್ತಿದ್ದು, ನಂತರ ಅದು ಬತ್ತಿಹೋಗಿ, ಭೂಮಿಯ ಆಳದಲ್ಲಿನ ಸುಣ್ಣದ ಕಲ್ಲಿನ ರಾಸಾಯನಿಕ ಪ್ರಕ್ರಿಯೆಯಿಂದಾಗಿ ಗುಹೆಗಳು ನಿರ್ಮಾಣವಾಗಿವೆ ಎಂದು ಸ್ಥಳೀಯರು ತಿಳಿಸುತ್ತಾರೆ. ಗುಹೆಯ ಆಳ ಒಟ್ಟು 120 ಫೀಟ್. 1884ರಲ್ಲಿ ಬ್ರಿಟಿಶ್ ಗೇಣಿದಾರ ರಾಬರ್ಟ್ ಬ್ರೂಸ್‍ಫೂಟೆ ಈ ಗುಹೆಗಳನ್ನು ಗುರುತಿಸಿದ. ನಂತರ 1982-84ರಲ್ಲಿ ಜರ್ಮನ್‍ನ ಎಚ್.ಡೇನಿಯಲ್ ಗೇಬರ್ ತಂಡ ಗುಹೆಗಳನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿತು. ಈತನ ನೆನಪಿಗಾಗಿಯೇ ಗುಹೆಯ ಪ್ರವೇಶದ್ವಾರದಲ್ಲಿನ ಕೋಣೆಗೆ ಗೇಬರ್ ಹಾಲ್ ಎಂದು ಆಂಧ್ರಪ್ರದೇಶ ಸರ್ಕಾರ ನಾಮಕರಣ ಮಾಡಿದೆ. 1988ರಲ್ಲಿ ಈ ಪ್ರದೇಶವನ್ನು ಆಂಧ್ರಪ್ರದೇಶ ಸರ್ಕಾರ ಸಂರಕ್ಷಿತ ಪ್ರದೇಶವೆಂದು ಘೋಷಿಸಿತು. 2002ರಿಂದ ಇದನ್ನು ಪ್ರವಾಸೋದ್ಯಮ ಇಲಾಖೆ ವಹಿಸಿಕೊಂಡು ಇದೀಗ ದೇಶದ ಪ್ರವಾಸಿಗರು ಈ ಗುಹೆಗೆ ಭೇಟಿ ನೀಡುತ್ತಿದ್ದಾರೆ. ಒಟ್ಟು 3.5 ಕಿ.ಮೀ ಉದ್ದವಿರುವ ಈ ಗುಹೆಯಲ್ಲಿ ಇಲಾಖೆಯು ಪ್ರವಾಸಿಗರಿಗಾಗಿ ಕೇವಲ 1.5 ಕಿ.ಮೀ ಮಾತ್ರ ತೆರವುಗೊಳಿಸಿದೆ. ಉಳಿದ ಭಾಗವನ್ನು ಇನ್ನೂ ಸಂಶೋಧಿಸಲಾಗುತ್ತಿದೆ. ಗುಹೆಯ ಒಳಭಾಗದಲ್ಲಿ ಉಸಿರಾಟಕ್ಕೆ ತೊಂದರೆಯಾಗದಿರಲೆಂದು ಪ್ರವಾಸಿಗರ ಅನುಕೂಲಕ್ಕಾಗಿ ಯಂತ್ರಗಳ ಮೂಲಕ ಆಮ್ಲಜನಕದ ಸರಬರಾಜಿದೆ. ಸುಣ್ಣದ ಕಲ್ಲಿನ ವಿವಿಧ ವಿನ್ಯಾಸಗಳನ್ನು ನಯನ ಮನೋಹರವಾಗಿಸಲು ಇಲಾಖೆಯು ಅಲ್ಲಲ್ಲಿ ವಿದ್ಯುತ್‍ನ ಹೊನಲು ಬೆಳಕಿನ ವ್ಯವಸ್ಥೆ ಮಾಡಿದೆ.

ಸುಣ್ಣಶಿಲೆಯ ವಿವಿಧ ಅದ್ಭುತ ವಿನ್ಯಾಸಗಳು.

ಸುಣ್ಣಶಿಲೆಯ ವಿವಿಧ ಅದ್ಭುತ ವಿನ್ಯಾಸಗಳು.

ಮುಖ್ಯ ದ್ವಾರಕ್ಕೆ ಸಿಂಹದ್ವಾರಂ ಎಂದು ನಾಮಕರಣ ಮಾಡಲಾಗಿದೆ. ಒಳಗಡೆ ಸುಣ್ಣದ ಕಲ್ಲಿನ ವಿವಿಧ ವಿನ್ಯಾಸಗಳಿಗೇ ಕೋಟಿಲಿಂಗ, ಧ್ಯಾನಮಂದಿರ, ಆಲದಮರ, ಸಾವಿರಹೆಡೆ, ಮೊಸಳೆ, ಲಿಂಗು, ಮಂಟಪ ಹೀಗೆ ವಿವಿಧ ಹೆಸರುಗಳನ್ನು ಇಡಲಾಗಿದೆ.
ಉದ್ದನೆಯ ನಡುವಣಂಕಗಳು, ವಿಶಾಲವಾದ ಕೋಣೆಗಳು, ಸಿಹಿನೀರಿನ ಓಣಿಗಳು ಮತ್ತು ಕೊಳಾಯಿಗಳನ್ನು ಬೆಲಂ ಗುಹೆಗಳು ಹೊಂದಿವೆ. ಗುಹೆಯ ಆಳವಾದ ಸ್ಥಳವು120 ಫೀಟ್ ಹೊಂದಿದೆ. ಅದನ್ನು ಪಾತಾಳಗಂಗಾ ಎಂದು ಕರೆಯಲಾಗುತ್ತದೆ. ಇಲ್ಲಿ ನೈಸರ್ಗಿಕವಾಗಿ ನೀರು ಹರಿಯುತ್ತಿದ್ದು, ಸುಂದರ ಸ್ಥಳವಾಗಿದೆ. ಪ್ರತಿಯೊಂದು ಕೋಣೆಗೆ ಹೋಗಲೂ ಅಲ್ಲಲ್ಲಿ ಪ್ರವಾಸಿಗರಿಗಾಗಿ ಕಬ್ಬಿಣದ ಸೇತುವೆಗಳನ್ನೂ ನಿರ್ಮಿಸಲಾಗಿದೆ. ಕೆಲವೆಡೆ ತೆವಳಿ, ಬಗ್ಗಿ, ಪ್ರಯಾಸಪಟ್ಟು ಹೋಗಬೇಕಾದ ಕಿರಿದಾದ ದಾರಿಗಳೂ ಇವೆ. ಆದರೆ ಒಳಗಿನ ದೃಶ್ಯಗಳನ್ನು ನೋಡಿದಾಗ ಯಾವುದೋ ಮಾಯಾಲೋಕಕ್ಕೆ ಬಂದಂತೆನಿಸುವುದಂತೂ ಖಂಡಿತ.

ಗುಹೆಯ ಒಳಭಾಗದಲ್ಲೆಲ್ಲ ಚಾವಣಿಯಿಂದ ಸುಣ್ಣದ ಕಲ್ಲಿನ ಇಳಿಬಿದ್ದ ಬಿಳಲುಗಳು ಅಪಾರ ಸಂಖ್ಯೆಯಲ್ಲಿವೆ. ಒಂದೊಂದೂ ವಿಭಿನ್ನ ಬಗೆಯಲ್ಲಿ ಕಾಣುತ್ತವೆ. ಅಲ್ಲಲ್ಲಿ ಈಗಲೂ ಸಹ ಸುಣ್ಣಶಿಲೆಯೊಡನೆ ಬೆರೆತ ಇಂಗಾಲಾಮ್ಲ ಸಂಯುಕ್ತ ನೀರು ತೊಟ್ಟಿಕ್ಕುತ್ತಿರುತ್ತದೆ. ಗುಹೆಯ ಸಾಮಾನ್ಯ ಎತ್ತರ 10ರಿಂದ 29 ಮೀ. ಇದೆ. ಇಲ್ಲಿನ ಸುಣ್ಣದ ಕಲ್ಲಿನ ರೇಡಿಯೋ ಕಾರ್ಬನ್ ಡೇಟಿಂಗ್ ಮಾಹಿತಿಗೊಳಪಡಿಸಿದ ತಜ್ಞರು ಇದು ಮಿಲಿಯಾಂತರ ವರ್ಷಗಳ ಹಿಂದೆಯೇ ರೂಪುಗೊಂಡಿರಬಹುದೆಂದು ಅಭಿಪ್ರಾಯಪಟ್ಟಿದ್ದಾರೆ.

ಸುಣ್ಣಶಿಲೆಯ ವಿವಿಧ ಅದ್ಭುತ ವಿನ್ಯಾಸಗಳು.

ಸುಣ್ಣಶಿಲೆಯ ವಿವಿಧ ಅದ್ಭುತ ವಿನ್ಯಾಸಗಳು.

 

ಪ್ರಥಮ ಬಾರಿಗೆ ಭೇಟಿ ನೀಡುವವರು ಇಲಾಖೆಯ ಗೈಡ್‍ಗಳೊಂದಿಗೆ ಹೋಗುವುದು ಸೂಕ್ತ. ಯಾಕೆಂದರೆ ಇಲ್ಲಿನ ಕಿರಿದಾದ ಓಣಿಗಳು, ದ್ವಾರಗಳು ಗೊಂದಲ ಮೂಡಿಸುತ್ತವೆ. ಅಲ್ಲದೆ ಅಲ್ಲಿನ ಪ್ರತಿಯೊಂದು ವಿವರಗಳು ಈ ಗೈಡ್‍ಗಳಿಂದ ತಿಳಿದುಬರುತ್ತದೆ. ಪ್ರವಾಸಿಗರ ಅನುಕೂಲಕ್ಕಾಗಿ ತಂಪಾದ ಗಾಳಿ ಹಾಗೂ ಆಮ್ಲಜನಕವನ್ನು ಯಂತ್ರಗಳಿಂದ ಪೂರೈಸುವ ವ್ಯವಸ್ಥೆ ಮಾಡಲಾಗಿದೆಯಾದರೂ ವಯಸ್ಸಾದವರು ತಮಗೆ ಆಯಾಸವೆನಿಸಿದಲ್ಲಿ ತಕ್ಷಣ ಗುಹೆಯೊಳಗಿನಿಂದ ತಕ್ಷಣ ಹೊರಬರುವುದು ಸೂಕ್ತ.

ಪ್ರತಿದಿನ ಗುಹೆಗಳ ವೀಕ್ಷಣೆ ಬೆಳಿಗ್ಗೆ 10ರಿಂದ ಸಂಜೆ 5-30ರವರೆಗೆ. ಪ್ರವೇಶ ಶುಲ್ಕ 50 ರೂ.ಗಳು. ಮಕ್ಕಳಿಗೆ 30 ರೂ.ಗಳು.

Leave a Reply

Your email address will not be published.