ನಮ್ಮ ಕಾಲದ ಕೆಲವು ಗಪದ್ಯಗಳು

-ಕೆ. ಪಿ. ಸುರೇಶ

  1. ಮಿಂಚುಳ್ಳಿ 

ಮಿಂಚುಳ್ಳಿ ಬಗ್ಗೆ ಹಿಂದೊಮ್ಮೆ ಪದ್ಯ ಬರೆದು

ಭೇಶ್ ಎನ್ನಿಸಿಕೊಂಡಿದ್ದೆ

 ಹತ್ತು ಬೆರಳಿದ್ದರೂ ನಮಗೆ ಮೀನು ಹಿಡಿಯಲಾಗದು

ಮಿಂಚುಳ್ಳಿ ತರ ಎಂಬುದು ಅದರ ಸಾರಾಂಶ

ಮೊನ್ನೆ ನೊರೆ ತುಂಬಿದ ಕೆರೆಯೊಂದರ ಅಂಚಿನ ಮೋಟು ಗಿಡದಲ್ಲಿ

ಪೆಚ್ಚಾಗಿ ಕೂತ ಮಿಂಚುಳ್ಳಿ ಕಂಡು

ಪಿಚ್ಚೆನಿಸಿತು

ಹೆಂಡದ ಬಾಟಲಿ ಬಿಡಿ, ವಿಮಾನದ ಮೇಲೂ ಇದರ ಚಿತ್ರ ಕಂಡು

ಯಲಯಲಾ ಎನ್ನಿಸಿತ್ತು.

ಬಳುಕಿ ಮೀನಿನಂತಾಡುವ ಮಿಂಚುಳ್ಳಿ ಲಲನೆಯರ ಕಂಡಾಗಲೂ.

 ಕಾಲ ಕೆಟ್ಟಿದೆ, ಮಿಂಚುಳ್ಳಿಗೂ ಮೀನಿಲ್ಲ

ಎನ್ನಬಹುದು.

 ಆದರೆ ತುಂಬಾ ಬೇಜಾರು ಮಾಡಬೇಕಿಲ್ಲ.

 ಸ್ವಚ್ಛಂದ ಹಾರುವ ಮಿಂಚುಳ್ಳಿಯನ್ನು ಹಿಡಿದು ಗೂಡಲ್ಲಿಟ್ಟು

  ಕಣ್ಣು ಮೇಲಾಗಿಸಿ, ಅಷ್ಟು ಬಾಯಿ ತೆರೆದ

ಸತ್ತ  ಮೀನು ಹಾಕಬಹುದು.

 ಹಸಿದರೆ ಅದು ತಿನ್ನದಿರದೇ?

 ಮೈಥುನದ ಬಯಕೆಯಾದರೆ ಇನ್ನೊಂದು ಹಿಡಿದು ತಂದು ಗೂಡೊಳಗೆ

 ಇಟ್ಟರಾಯಿತು.

ಮುಂದಿನ ಸಂತತಿಯೂ ಗೂಡಲ್ಲೇ.

ಅಷ್ಟಕ್ಕೂ ಮಿಂಚುಳ್ಳಿ ಹಾರಲೇ ಬೇಕೆಂದು ನಿಯಮವಿದೆಯೇ?

  2. ಅರಿವಿನ ಸ್ಫೋಟ ಇತ್ಯಾದಿ ಬಗ್ಗೆ

ದೀಪಾವಳಿಯ ಸಂಜೆ ಹುಡುಗನೊಬ್ಬ ಪಟಾಕಿಗೆ ಬೆಂಕಿ ಹಚ್ಚಿ

ನಾವೆಲ್ಲಾ ನೋಡಿ ಹುರಿದುಂಬಿಸಿದರೂ

ಪಟಾಕಿ, ಸುರ್ ಸುರ್ ಅಂತ ಸಿಡುಕಿ

ತೆಪ್ಪಗಾಯಿತು

  ಪರೋಪಕಾರಾರ್ಥಂ ಇದಂ ಶರೀರಂ ಎಂದಿಲ್ಲವೇ,

ಎಂದು ನಾನು ಹತ್ತಿರ ಹೋಗಿ ಅದನ್ನು ಎತ್ತಿದೆ

ಢಮಾರ್..!! ಅಂದು..

ಸ್ಫೋಟದ ಅರಿವಾಯಿತು.

 ಅದೇ ಅರಿವಿನ ಸ್ಫೋಟವಲ್ಲವೇ?

ಈಗ ಎಡಕಿವಿ ಅಷ್ಟು ಕಿವುಡು.

ಅನುರಣನ ಇತ್ಯಾದಿ ಪದ ನಾನು ಬಳಸುತ್ತಿದ್ದೆ.

ಒಮ್ಮೆ ಅದೇನೋ ಹುಡುಗಾಟಿಕೆಯಲ್ಲಿ

ಸಾಸಿವೆ ಆಕಸ್ಮಾತ್ ಕಿವಿಯೊಳಗೆ ಧುಮುಕಿತು

ಎರಡು ದಿನ ಪೂರ್ತಿ ಕಿವಿಯೊಳಗೆ

ನಾದ, ಲಯ, ಅನುರಣನ

ಮೀಮಾಂಸೆ ಎಂಬ ಪದವೂ ಅಷ್ಟೇ

 ಮೀಸೆ, ಮಾಂಸಗಳ ಗೊಂದಲದಲ್ಲಿ

 ಉಚ್ಛರಿಸಲು ಎಡವುತ್ತಿದ್ದೆ

 ನನಗೆ ಈಗ

 ಪದಗಳ ಬಗ್ಗೆ

ಭ್ರಮನಿರಸನವಾಗಿದೆ

3. ಬೀದಿ ಬಾಳು

ಮುದುರಿ ಮಲಗುವ ನಾಯಿಗೂ

ಒಂದು ಸಡಗರವಿದೆ.

ಠಾಕುಠೀಕು ಕುಲೀನ ವಂಶದ ನಾಯಿಗಳ ಬಗ್ಗೆ ಹೇಳಲಾರೆ.

 ಆದರೆ ನಮ್ಮ ನಿಮ್ಮಂತಾ ಬೀದಿ ಬಾಳು

ವಿಧಿಯಾಗಿರುವ ನಾಯಿಗಳ ಬಗ್ಗೆ ಇದು.

ಬೇಕರಿ ಪಕ್ಕ ಕೂತು ಉದುರಿದ ಪಫ್ ತಿಂದು

ಬಾಲವಾಡಿಸಿ ರಷಿದಿ ಸಂದಾಯಿಸಿ,

ಚಿಂದಿ ಆಯುವವ ಬಂದರೆ ಅವನನ್ನಿಷ್ಟು ಹೆದರಿಸಿ

ಇದೆಲ್ಲಾ ನೀವು ನೋಡಿದ್ದೀರಿ.

ಮಲಗಿದಲ್ಲಿಂದ ಎದ್ದು ಮೈ ಮುರಿದು, ಸುಮ್ಮನೆ ಅಷ್ಟು ದೂರ ಹೊಗಿ,

 ಅದೇನೋ ಕಂಡು ಅದಕ್ಕೊಂದು ವಿದಾಯ ಹೇಳಿ,

ಮತ್ತೆ…

ಸಡಗರವೆಂದರೆ

ಛಟ್ಟನೆ ಎದ್ದು ಎಲ್ಲೆಂದರಲ್ಲಿ ಓಡಾಡುವ  ಸುಖ.

ಅದೊಂದಿದ್ದರೆ ಬೇಕಷ್ಟು.

 ಕೇಳಿ ಕಾರಕೂನರಲ್ಲಿ, ಗೃಹಿಣಿಯರಲ್ಲಿ

ನನ್ನಲ್ಲಿ

 4. ಮಾರಿದೇವತೆ 

ಇಲಿಯ ಬಗ್ಗೆ ಭಯ ಗೌರವ

 ಯಾರಿಗಿದೆ, ನಿಜಕ್ಕೂ

ಹಾಲು ಕುಡಿದು ಸೊಂಪಾಗಿರುವ ಬೆಕ್ಕಿನ ಬಗ್ಗೆ

ತಕರಾರು ತೆಗೆಯುವ ಮುಖ್ಯ ಕಾರಣ ಏನು ಹೇಳಿ?

 ಇಲಿ ಹಿಡಿಯಲೂ ಉದಾಸೀನ ಅಂತ

ಇಲಿ ಸ್ನೇಹೀ ಮಾರ್ಜಾಲ ಎಂದೇಕೆ ನಾವು ಕರೆಯುವುದಿಲ್ಲ?

ಇಲಿ ಏನೇನು ಕಡಿಯುತ್ತದೆ  ಎಂಬ ಪಟ್ಟಿ

ನಮ್ಮ ರಾಷ್ಟ್ರ ಮಟ್ಟದ ಯೋಜಕರಲ್ಲೂ ಇದೆ

ಅದೇನಿದ್ದರೂ ಇಲಿಯ ಜರಿದು

ಪ್ರಬಂಧ ಮಂಡಿಸುವ ಹುನ್ನಾರ ಎಂದು ನನಗನ್ನಿಸಿದೆ

ಗಣಪತಿಯ ವಾಹನ ಎಂಬ ಹೆಗ್ಗಳಿಕೆ ಇದೆ

ಆದರೆ

ಅದಕ್ಕೂ ಕಡುಬು ಕಜ್ಜಾಯ ಇಟ್ಟವರಾರು?

ನಿಜಕ್ಕೂ  ಊರ ಮಾರಿದೇವತೆ

ಇಲಿಗೆ ಕೃತಜ್ಞಳಾಗಿರಬೇಕು

ಅದರಲ್ಲು ಪ್ಲೇಗು ಮಾರಿಯಮ್ಮ

ಈಗ ಪ್ಲೇಗಿಲ್ಲ, ಆದರೆ ಚರಿತ್ರೆ ಮರೆಯುವುದು ಸರಿಯೇ?

Leave a Reply

Your email address will not be published.