ನಮ್ಮೊಳಗೂ ಮನದ ಮಾತುಗಳಿವೆ ಕೇಳುವಿರಾ ಪ್ರಭೂ: ನರೇಂದ್ರ ಮೋದಿಗೆ ಬಹಿರಂಗ ಪತ್ರ

ನಾ ದಿವಾಕರ


ನಾನು ಪ್ರಜಾತಂತ್ರ ವ್ಯವಸ್ಥೆಯ ಸಮರ್ಥಕನಾಗಿದ್ದರೂ ತಮ್ಮನ್ನು ಪ್ರಭೂ ಎಂದು ವಿನಮ್ರತೆಯಿಂದ ಸಂಭೋಧಿಸುತ್ತಿರುವುದನ್ನು ಕಂಡು ಚಕಿತಗೊಳ್ಳಬೇಕಿಲ್ಲ ಮಾನ್ಯ ಮೋದಿ ಜಿ. ಪ್ರಭೂ ಎನ್ನುವ ಪದ ಊಳಿಗಮಾನ್ಯ ವ್ಯವಸ್ಥೆಯಿಂದ ರಾಜಪ್ರಭುತ್ವ ವ್ಯವಸ್ಥೆಯೆಡೆಗೆ ಚಲಿಸಿ ಸ್ಥಾಪಿತವಾದ ಒಂದು ಗೌರವಯುತವಾದ ಸಂಭೋಧನೆ. ಗೌರವಯುತ ಎನ್ನುವುದಕ್ಕಿಂತಲೂ ಸ್ವಾಮಿನಿಷ್ಠೆಯ ಪ್ರತೀಕವಾಗಿ ಹೊರಹೊಮ್ಮಿದ ಗುಲಾಮಗಿರಿಯ ಸಂಕೇತ. ಆದರೂ ನಿಮ್ಮನ್ನು ಪ್ರಭೂ ಎಂದು ಕರೆಯುತ್ತಿದ್ದೇನೆ. ಕಾರಣವೇನು ಗೊತ್ತೇ ? ನಿಮ್ಮ ಆಡಳಿತ ವೈಖರಿ, ನೀವು ತೆಗೆದುಕೊಳ್ಳುತ್ತಿರುವ ತೀರ್ಮಾನಗಳು ಮತ್ತು ತಮ್ಮ ಸರ್ಕಾರ ಅನುಸರಿಸುತ್ತಿರುವ ಆಡಳಿತದ ಮಾರ್ಗ ಸರ್ವಾಧಿಕಾರಿ ರಾಜಪ್ರಭುತ್ವವನ್ನೇ ನೆನಪಿಸುತ್ತದೆ. ನಿಮ್ಮನ್ನು ಪ್ರಭೂ ಎಂದು ಸಂಭೋಧಿಸುತ್ತಿರುವುದು ನಿಮ್ಮ ಆತ್ಮತೃಪ್ತಿಗಾಗಿ. ಆಗಲಾದರೂ ನಿಮ್ಮ ಸರ್ವಾಧಿಕಾರಿ ಪ್ರಜ್ಞೆ ಪ್ರಜೆಗಳ ವಿನಮ್ರತೆಯನ್ನು ಗುರುತಿಸುತ್ತದೆ ಎಂಬ ಭ್ರಮೆ. ನಿಮ್ಮನ್ನು ಪ್ರಭೂ ಎಂದಾಕ್ಷಣ ನಾನು ನಿಮ್ಮ ಸೇವಕನಲ್ಲ ಅಥವಾ ಗುಲಾಮಗಿರಿಯನ್ನು ಒಪ್ಪುವವನೂ ಅಲ್ಲ. ಈ ಭಾರತದ ಸಂವಿಧಾನಕ್ಕೆ ಬದ್ಧನಾಗಿ ಸಾಂವಿಧಾನಿಕ ಮೌಲ್ಯಗಳ ಭೂಮಿಕೆಯ ಮೇಲೆ ಸಂವಿಧಾನ ನಮಗೆ ನೀಡಿರುವ ಹಕ್ಕುಗಳ ಪ್ರತಿಪಾದನೆಗಾಗಿ ಈ ಸಣ್ಣ ಪ್ರಯತ್ನವಷ್ಟೆ.

ಈ ದೇಶ ಕಳೆದ ಏಳು ದಶಕಗಳಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಮುಗ್ಗರಿಸಿ, ಎಡವಿ ಮತ್ತೊಮ್ಮೆ ಮೈದಡವಿ ನಿಂತಿದೆ. ಈ ಸಾಧನೆಗೆ ಕಾರಣ ಒಂದೆಡೆ ಭಾರತದ ನಿರ್ಮಾಣದಲ್ಲಿ ತಮ್ಮದೇ ಆದ ಪಾತ್ರ ವಹಿಸಿದ ದಾರ್ಶನಿಕ ನಾಯಕರ ಮಾರ್ಗದರ್ಶನವಾದರೆ ಮತ್ತೊಂದೆಡೆ ಭಾವನಾತ್ಮಕ ಭೌಗೋಳಿಕ ದೇಶಭಕ್ತಿಯನ್ನು ಬದಿಗಿಟ್ಟು ತಮ್ಮ ಬೆವರು ನೆತ್ತರು ಹರಿಸಿ ದೇಶದ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವ ದುಡಿಯುವ ವರ್ಗಗಳು. ದುಡಿಯುವ ವರ್ಗಗಳು, ಶ್ರಮಜೀವಿಗಳು ಎಂದಾಕ್ಷಣ ನಿಮ್ಮ ನರನಾಡಿಗಳು ಬೆಚ್ಚಗಾಗಬಹುದು. ಗಾಬರಿ ಬೇಡ. ಈ ದೇಶದ ಎಲ್ಲ ಶ್ರಮಜೀವಿಗಳೂ ಎಡಪಂಥೀಯರಲ್ಲ. ಕೆಂಬಾವುಟದ ಫಲಾನುಭವಿಗಳೆಲ್ಲರೂ ಇಂದು ಆ ಬಾವುಟದ ಹಿಂದಿನ ಧ್ಯೇಯ ಮತ್ತು ಸಿದ್ಧಾಂತಗಳಿಗೆ ಬದ್ಧರಾಗಿದ್ದಿದ್ದರೆ ನೀವು , ನಿಮ್ಮ ಪಕ್ಷ ಮತ್ತು ಸಂಘಟನೆ ಅಸ್ತಿತ್ವದಲ್ಲೇ ಇರುತ್ತಿರಲಿಲ್ಲ. ದುರಾದೃಷ್ಟವಶಾತ್ ಈ ದೇಶದ ಶ್ರಮಜೀವಿಗಳನ್ನು ಜಾತಿ, ಧರ್ಮ, ಭಾಷೆ ಮತ್ತು ಪ್ರಾದೇಶಿಕ ಭಾವನೆಗಳು ಅಡ್ಡಡ್ಡಲಾಗಿ ಸೀಳಿಬಿಟ್ಟಿವೆ. ಒಡೆದು ಆಳುವ ನೀತಿಯನ್ನು ಬ್ರಿಟೀಷರು ನಮಗೆ ಪರಿಚಯಿಸಿದ್ದಾರೆ ಎಂದು ನೀವೂ, ನಿಮ್ಮ ಸಂಘಟನೆಯೂ ಹೇಳುತ್ತಲೇ ಇರುತ್ತೀರಿ. ಆದರೆ ಒಡೆದ ಗಾಜನ್ನು ಮತ್ತೊಮ್ಮೆ ಒಡೆಯಲಾಗುವುದಿಲ್ಲ ಎಂಬ ವಾಸ್ತವ ನಿಮಗೆ ಹೊಳೆಯುವುದೇ ಇಲ್ಲ. ಹಾಗಾಗಿ ನೀವು ವಿಜೃಂಭಿಸಿ ಮೆರವಣಿಗೆ ಮಾಡುವ ಪ್ರಾಚೀನ ಭಾರತೀಯ ಸಮಾಜದ ಜಾತಿ ವ್ಯವಸ್ಥೆ ಸೃಷ್ಟಿಸಿದ್ದ ವಿಘಟಿತ ಸಮಾಜವನ್ನು ಬ್ರಿಟೀಷರು ಮತ್ತೂ ಸುಲಭವಾಗಿ ಒಡೆದು ಆಳಲು ಸಾಧ್ಯವಾಯಿತು ಎಂಬ ಸತ್ಯವನ್ನೂ ನೀವು ಗ್ರಹಿಸುವುದಿಲ್ಲ. ಅಥವಾ ಅದು ನಿಮ್ಮ ಮತ್ತು ನಿಮ್ಮ ಸಂಘಟನೆಯ ಗ್ರಹೀತಗಳಿಗೆ ಮೀರಿದ್ದು ಎನ್ನಬಹುದು.

ರಾಜಕಾರಣದ ವಿಕೃತ ರೂಪಗಳು
ಅಧಿಪತ್ಯ ರಾಜಕಾರಣ, ದಮನಕಾರಿ ಆಡಳಿತ ವ್ಯವಸ್ಥೆ ಮತ್ತು ಶೋಷಣೆಯ ಸಕಲ ಅಸ್ತ್ರಗಳನ್ನು ಶತಮಾನಗಳ ಭಾರತದ ಇತಿಹಾಸದಲ್ಲೇ ಕಾಣಬಹುದು. ಆದರೆ ನಿಮ್ಮ ಇತಿಹಾಸದ ಪರಿಜ್ಞಾನ ಭಿನ್ನ ಮಾರ್ಗದಲ್ಲಿ ಸಾಗುತ್ತದೆ. ಹಾಗಾಗಿಯೇ ನೀವು ಅತ್ಯಾಧುನಿಕ ವೈಜ್ಞಾನಿಕ ಅನ್ವೇಷಣೆಗಳನ್ನು ಪುರಾಣ ಕಥನಗಳಲ್ಲಿ ಕಾಣುವಂತೆಯೇ ಪ್ರಸ್ತುತ ಪ್ರಜಾತಂತ್ರ ವ್ಯವಸ್ಥೆಯ ಮೂಲವನ್ನೂ ಪ್ರಾಚೀನ ಭಾರತದಲ್ಲೇ ಕಾಣುತ್ತೀರಿ. ಪರಿಣಾಮ ನಿಮಗೆ ಶತಮಾನಗಳಿಂದ ತುಳಿತಕ್ಕೊಳಗಾಗುತ್ತಿರುವ ಜನಸಮುದಾಯಗಳ ಆಕ್ರಂದನ ಹರ ಹರ ಮಹದೇವ್ ಎಂಬ ಮಂತ್ರೋಚ್ಚಾರಣೆಗಳಲ್ಲಿ ಕಾಣುತ್ತದೆ. ಪ್ರಾಚೀನ ಭಾರತದಲ್ಲಿ ಆಧುನಿಕ ಸಮಕಾಲೀನ ಸಮಾಜದಲ್ಲಿ ಇರುವುದೆಲ್ಲವೂ ಇತ್ತು ಎನ್ನುವ ನೀವು ಮತ್ತು ನಿಮ್ಮ ಸಂಘಟನೆ ಶೋಷಣೆಯೂ ಆ ಸಮಾಜದ ಒಂದು ಭಾಗವಾಗಿತ್ತು ಎಂದು ವಸ್ತುನಿಷ್ಠವಾಗಿ ಒಪ್ಪುವುದೇ ಇಲ್ಲ. ಏಕೆಂದರೆ ಹಾಗೊಮ್ಮೆ ಒಪ್ಪಿಕೊಂಡರೆ ನಿಮಗೆ ಶೋಷಿತ ವರ್ಗಗಳ ವಿಮೋಚನೆಯ ಅಸ್ತ್ರಗಳನ್ನು, ರೂಪಕ ಪ್ರತಿಮೆಗಳನ್ನು ಆವಾಹನೆ ಮಾಡಲಾಗುವುದಿಲ್ಲ.

ಶೋಷಿತ ಜನಸಮುದಾಯಗಳ ಮೇಲೆ ಅಧಿಪತ್ಯ ಸಾಧಿಸುವುದು ಎಂದರೆ ಆ ಸಮುದಾಯಗಳ ಅಸ್ಮಿತೆಯನ್ನೇ ಅಳಿಸಿ ಹಾಕುವುದು ಮತ್ತು ಶೋಷಣೆಯ ಅಸ್ತ್ರಗಳನ್ನು ಮತ್ತಷ್ಟು ಪ್ರಬಲಗೊಳಿಸುವುದು. ಈ ಆಡಳಿತಾತ್ಮಕ ನೀತಿಯನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಭುತ್ವದ ಶಕ್ತಿಗಳು ಶೋಷಿತರ ಅಸ್ಮಿತೆಯನ್ನು ಸಂರಕ್ಷಿಸುವ ರೂಪಕಗಳನ್ನು, ಪ್ರತಿಮೆಗಳನ್ನು ಮತ್ತು ಅದರ್ಶಗಳನ್ನು ನಿರ್ನಾಮ ಮಾಡುತ್ತಲೇ ಹೋಗುತ್ತವೆ. ಚಾರ್ವಾಕನಿಂದ ಬಸವಣ್ಣನವೆರಗೆ, ಫುಲೆ ಅಂಬೇಡ್ಕರರಿಂದ ಪನ್ಸಾರೆ ಕಲಬುರ್ಗಿ ಮುಂತಾದ ಸಮಕಾಲೀನ ಚಿಂತಕರವರೆಗೆ ಜಾತಿ ವ್ಯವಸ್ಥೆಯ ಸಮರ್ಥಕರು ಶೋಷಿತರ ರೂಪಕ ಪ್ರತಿಮೆಗಳನ್ನು ಧ್ವಂಸ ಮಾಡುತ್ತಲೇ ಬರುತ್ತಿದ್ದಾರೆ. ನಿಮ್ಮ ಆಡಳಿತಾವಧಿಯಲ್ಲಿ ಸ್ವಚ್ಚ ಭಾರತದ ಮೂಲಕ, ಭೀಂ ಆಪ್‍ಗಳ ಮೂಲಕ ನೀವೂ ಸಹ ಇದನ್ನೇ ಮಾಡುತ್ತಿದ್ದೀರಿ. ಮತ್ತೊಂದೆಡೆ ನಿಮ್ಮ ಸಂಘಟನೆ ಮತ್ತು ಸೈದ್ಧಾಂತಿಕ ಸಂಸ್ಥೆಗಳು ಮಂದಿರ-ಮಸೀದಿಗಳ ಮೂಲಕವೇ ಮಾನವ ಸಮಾಜವನ್ನು ಕಾಣುವ ಮೂಲಕ ಶ್ರಮಜೀವಿಗಳನ್ನು ಎಂದೆಂದಿಗೂ ಒಂದಾಗದಂತೆ ಒಡೆದು ಛಿದ್ರಗೊಳಿಸಿವೆ. ನೀವು ಇದಕ್ಕೆ ಮೂಕ ಸಾಕ್ಷಿಯೂ ಆಗಿದ್ದೀರಿ, ಸಕ್ರಿಯ ಪ್ರೇರಕರೂ ಆಗಿದ್ದೀರಿ. ಈಗ ತಪಸ್ವಿಯಂತೆ ವೈರಾಗ್ಯಕ್ಕೆ ಶರಣಾಗಿಬಿಟ್ಟಿದ್ದೀರಿ.

ಆದರೆ ನಿಮ್ಮ ಮೌನ ವೈರಾಗ್ಯವಲ್ಲ. ತಪೋನಿರತ ಧ್ಯಾನಸ್ಥ ಮನಸ್ಥಿತಿಯೂ ಅಲ್ಲ. ಎಲ್ಲವನ್ನೂ ಕಂಡರೂ ಏನೂ ಕಾಣದಂತೆ ಇರುವ ಕಲೆಯನ್ನು ಮಾನವನ ಇತಿಹಾಸದಲ್ಲಿ ರೋಮ್ ಸಾಮ್ರಾಜ್ಯದಿಂದ ನಿಮ್ಮವರೆಗೂ ಕಾಣಬಹುದು. ರೋಮ್ ಹೊತ್ತಿ ಉರಿಯುತ್ತಿದ್ದಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ ಎಂಬ ನಾಣ್ಣುಡಿ ಇದೆ. ಇದರ ಸತ್ಯಾಸತ್ಯತೆಗಳು ಏನೇ ಇರಲಿ, ವಿಶ್ವದ ಇತಿಹಾಸದಲ್ಲಿ ಜನಸಾಮಾನ್ಯರು ಅಸಂಖ್ಯಾತ ನೀರೋಗಳನ್ನು ನೋಡುತ್ತಲೇ ಜೀವನ ಸವೆಸುತ್ತಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲೂ ಇಂತಹ ನೀರೋಗಳನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ, ಕಾಣಲಿದ್ದೇವೆ. ನೀವೂ ಅಂತಹ ನೀರೋಗಳಲ್ಲಿ ಒಬ್ಬರು ಎಂದು ಇತ್ತೀಚಿನ ಎರಡು ವರ್ಷದ ಆಡಳಿತದಲ್ಲಿ ನಿರೂಪಿಸಲು ಯತ್ನಿಸಿದ್ದೀರಿ. ಇಲ್ಲಿ ನೀರೋ ಒಬ್ಬ ವಿಲನ್ ಆಗಬೇಕಿಲ್ಲ. ಅಥವಾ ವಿಕೃತ ಆಡಳಿತದ ರೂಪಕ ಆಗಬೇಕಿಲ್ಲ. ಇಲ್ಲಿ ನೀರೋ ಇತಿಹಾಸದ ಒಂದು ಆಯಾಮವಾಗಿ ನಿಲ್ಲುತ್ತಾನೆ. ಹದಿನೈದು ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ದೇಶದಲ್ಲಿ ಇಂದಿಗೂ ಕೃಷಿಕರ ಸಮಸ್ಯೆಯ ಬಗ್ಗೆ ಒಂದು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ ಆಳುವ ವರ್ಗವನ್ನು ನೋಡಿದಾಗ ಭಾರತದಲ್ಲಿ ನೀರೋಗಳ ಬಹುದೊಡ್ಡ ಸಂತತಿಯೇ ಇರುವುದು ಸ್ಪಷ್ಟವಾಗುತ್ತದೆ. ನೀರೋಗಳು ಹೀರೋಗಳಾಗಿರುವುದೂ ಸ್ಪಷ್ಟವಾಗುತ್ತದೆ. ಪರಿವರ್ತನೆಯ ಭಜನೆ ಮಾಡುತ್ತಾ ಅಧಿಕಾರದ ಗದ್ದುಗೆ ಏರಿದ ನೀವು ಭಿನ್ನವಾಗೇನೂ ಇಲ್ಲ ಅಲ್ಲವೇ ?

ಈಗ ವಿಷಯಕ್ಕೆ ಬರೋಣ. ಈ ದೇಶದ ಜನತೆ ನಿಮ್ಮನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಿಲ್ಲವಾದರೂ ನಿಮ್ಮ ಪಕ್ಷಕ್ಕೆ ನೀವೇ ಅಧಿಪತ್ಯ ವಹಿಸಿದ್ದಿರಿ. ಅಭಿವೃದ್ಧಿ , ಪ್ರಗತಿ ಮತ್ತು ಪರಿವರ್ತನೆಯ ಮಂತ್ರದಂಡವನ್ನು ಬಳಸಿ ಗುಜರಾತ್ ಮಾದರಿಯ ಭೂಮಿಕೆಯ ಮೇಲೆ ಭಾರತವನ್ನು ವಿಶ್ವದ ನಂಬರ್ ಒನ್ ರಾಷ್ಟ್ರವನ್ನಾಗಿ ರೂಪಿಸುವ ನಿಮ್ಮ ಭರವಸೆಯ ಮಾತುಗಳು ದೇಶದ ಜನತೆಯನ್ನು ಆಕರ್ಷಿಸಿತ್ತು. ಈ ಆಕರ್ಷಣೆಗೆ ಕಾರಣ ನೀವು ಜನತೆಯ ಮುಂದಿಟ್ಟ ಅಭಿವೃದ್ಧಿಯ ನೀಲಿ ನಕ್ಷೆ ಮಾತ್ರವೇ ಅಲ್ಲ. ನಿಮ್ಮ ನಕ್ಷೆಗೆ ಪ್ರತಿಯಾದ ಮತ್ತೊಂದು ನೀಲಿನಕ್ಷೆಯನ್ನು ಜನತೆಯ ಮುಂದೆ ಇಡುವವರೇ ಇರಲಿಲ್ಲ , ಇಂದಿಗೂ ಇಲ್ಲ. ನೀವು ಮತ್ತು ನಿಮ್ಮ ಸಂಘಪರಿವಾರದ ಪಡೆಗಳು ಸೃಷ್ಟಿಸುವ ಸಾಂಸ್ಕøತಿಕ ಭ್ರಮಾಲೋಕ ಮತ್ತು ನಿಮ್ಮ ಕಾರ್ಪೋರೇಟ್ ಮಿತ್ರರು ಸೃಷ್ಟಿಸುವ ಅರ್ಥಿಕ ಭ್ರಮಾಲೋಕದ ವಿಹಂಗಮ ನೋಟ ಜನಸಾಮಾನ್ಯರನ್ನು ಮಂತ್ರಮುಗ್ಧರನ್ನಾಗಿ ಮಾಡಿದೆ. ಆದರೆ ಈ ಲೋಕದೊಳಗಿನ ವಿಷವರ್ತುಲಗಳು, ಕಲುಷಿತ ಜೀವಚರಗಳು ಹಾಗೂ ಕಂಟಕದ ಮಾರ್ಗಗಳನ್ನು ಜನತೆಗೆ ತಿಳಿಯಪಡಿಸುವ ಪರ್ಯಾಯ ಚಿಂತನೆಗಳು ಕಾಣುತ್ತಿಲ್ಲ. ಹಾಗಾಗಿ ನೀವು ಗಾಂಧೀಜಿ, ಭಗತ್‍ಸಿಂಗ್, ವಿವೇಕಾನಂದ, ಅಂಬೇಡ್ಕರ್, ಸರದಾರ್ ಪಟೇಲ್ ಎಲ್ಲರನ್ನೂ ಆವಾಹನೆ ಮಾಡಿಕೊಂಡು ಅಧಿಪತ್ಯದ ವಿರಾಟ್ ಸ್ವರೂಪ ಪ್ರದರ್ಶಿಸಿದ್ದೀರಿ.

ನೀವು ಕಿಂದರಜೋಗಿಯ ಕಥೆ ಕೇಳಿರಬಹುದು. ಬಹುಶಃ ಸಾಮಾಜಿಕ ಅಸಮಾನತೆ, ಸಾಂಸ್ಕøತಿಕ ಅಧಃಪತನ, ರಾಜಕೀಯ ಅರಾಜಕತೆ, ಅರ್ಥಿಕ ಅಸ್ಪಷ್ಟತೆಗಳಿಂದ ಬಳಲುತ್ತಿದ್ದ ಭಾರತೀಯ ಸಮಾಜಕ್ಕೆ ಒಬ್ಬ ಕಿಂದರಜೋಗಿಯ ಅವಶ್ಯಕತೆ ಇತ್ತು. ಕಿಂದರಜೋಗಿ ಶಾಶ್ವತ ಪರಿಹಾರ ಒದಗಿಸುವುದಿಲ್ಲ ಆದರೆ ಸಮಸ್ಯೆ ಇಲ್ಲವೇ ಇಲ್ಲ ಎನ್ನುವ ಮಟ್ಟಿಗೆ ಭ್ರಮೆ ಸೃಷ್ಟಿಸುತ್ತಾನೆ. ಈ ಭ್ರಮೆಯೇ ಜನಸಾಮಾನ್ಯರಿಗೆ ಸ್ವರ್ಗಸದೃಶವಾಗುತ್ತದೆ. ಭಾರತದ ಪ್ರಜೆಗಳ ಪಾಡೂ ಇದೇ ಆಗಿದೆ. ತಮ್ಮ ಮೂಲ ಸಮಸ್ಯೆ ಏನು ಎಂದೇ ಅರಿಯದ ಬಹುಸಂಖ್ಯಾತ ಜನತೆಗೆ ಇಂತಹ ತಾತ್ಕಾಲಿಕ, ಭ್ರಮಾಲೋಕದ ಪರಿಹಾರಗಳು ಅಪ್ಯಾಯಮಾನವಾಗುತ್ತದೆ. ಈ ಚಾಣಕ್ಯ ತಂತ್ರವನ್ನು ನೆಹರೂ ಬಳಸಿದ್ದರು, ಇಂದಿರಾ ಯಶಸ್ವಿಯಾಗಿ ಬಳಸಿದ್ದರು ಈಗ ನಿಮ್ಮ ಸರದಿ. ಕಳೆದ ಮೂರು ವರ್ಷಗಳಲ್ಲಿ ನೀವು ಸವೆಸಿರುವ ಹಾದಿಯನ್ನು, ಚುನಾವಣಾ ರಾಜಕಾರಣದ ಯಶಸ್ಸಿನ ಹಂದರವನ್ನು ಬದಿಗಿಟ್ಟು, ಅವಲೋಕನ ಮಾಡಿ. ಈ ಹಾದಿಯನ್ನು ಕ್ರಮಿಸುವಾಗ ನಿಮ್ಮ ಮನದಾಳದಲ್ಲಿ ಆತ್ಮಾವಲೋಕನದ ಛಾಯೆಯಾದರು ಮೂಡಬೇಕು, ಆತ್ಮವಂಚನೆಗೆ ಅವಕಾಶ ಇಲ್ಲದೆ.

ವಿಕಾಸ ಮತ್ತು ವಿನಾಶ ಒಟ್ಟಾಗಿರಲಾರದು
ನೀವು ನಡೆದು ಬಂದ ಹಾದಿಯನ್ನು ಗಮನಿಸಿದರೆ ಬಹುಶಃ ನಿಮಗೆ ಆತ್ಮಾವಲೋಕನದ ಪರಿವೆಯೇ ಇಲ್ಲ ಎನಿಸುವುದು ಸಹಜ. ಪಶ್ಚಾತ್ತಾಪದ ನುಡಿಗಳು ಆತ್ಮಾವಲೋಕನವಾಗುವುದಿಲ್ಲ . ತಾತ್ಕಾಲಿಕ ಶಮನಕ್ಕೆ ಪೂರಕವಾಗುವುದಷ್ಟೆ. ಹಾಗಾಗಿ ನಿಮ್ಮ ಹೆಜ್ಜೆ ಗುರುತುಗಳನ್ನು ವಸ್ತುನಿಷ್ಠವಾಗಿ ಪರಾಮರ್ಶಿಸುವ ನೈತಿಕ ಹೊಣೆಗಾರಿಕೆ ನಮ್ಮದಾಗುತ್ತದೆ. ವಿಕಾಸ ಪುರುಷ ಎಂದು ಬಿರುದಾಂಕಿತರಾದ ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವಿಕಾಸವಾದದ್ದು ಏನು? ವಿಕಸನದ ಪ್ರಕ್ರಿಯೆಯಲ್ಲಿ ವಿಕಾಸದ ಪರಿಕಲ್ಪನೆಯನ್ನೇ ಕಳೆದುಕೊಂಡ ವಿದ್ಯಮಾನಗಳು ಯಾವುವು ? ಒಮ್ಮೆ ಹಿಂದಿರುಗಿ ನೋಡಿ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಭಿವೃದ್ಧಿ, ಪ್ರಗತಿ, ವಿಕಾಸ ಮತ್ತು ಸಬಲೀಕರಣ ಈ ನಾಲ್ಕೂ ಪದಗಳು ಏಳು ದಶಕಗಳಿಂದಲೂ ರಾರಾಜಿಸುತ್ತಲೇ ಇವೆ. ಈ ಪದಗಳು ಆಳುವ ವರ್ಗಗಳ ಸೈದ್ಧಾಂತಿಕ ನೆಲೆಗಳಲ್ಲಿ ಪಲ್ಲಟಗಳನ್ನು ಎದುರಿಸುತ್ತಿರುವುದೂ ಸತ್ಯ. ಹಾಗಾಗಿಯೇ ನೆಹರೂ ಕಾಲಘಟ್ಟದ ಅಭಿವೃದ್ಧಿ , ಇಂದಿರಾ ಕಾಲಘಟ್ಟದ ಪ್ರಗತಿ ಹಾಗೂ ಸಬಲೀಕರಣ ಮತ್ತು ನಿಮ್ಮ ಕಾಲಾವಧಿಯ ವಿಕಾಸ ಭಿನ್ನ ರೂಪಗಳನ್ನು ಪಡೆದಿವೆ. ಈ ಎಲ್ಲ ಕಾಲಘಟ್ಟಗಳಲ್ಲೂ ಮುನ್ನಡೆಯ ಮಾರ್ಗಗಳು ಈ ದೇಶದ ಶ್ರಮಜೀವಿಗಳ ಪಾಲಿಗೆ ಮರೀಚಿಕೆಯಾಗಿರುವುದು ಅಲ್ಲಗಳೆಯಲಾಗದ ಸತ್ಯ.

ಗಾಬರಿ ಬೇಕಿಲ್ಲ ಮೋದಿ ಜೀ, ಶ್ರಮಜೀವಿ ಎಂದಾಕ್ಷಣ ನಿಮ್ಮ ಮನದಾಳದಲ್ಲಿ ಮಾವೋವಾದದ ಭೀತಿ ಮೂಡಬೇಕಿಲ್ಲ. ಮಾವೋವಾದಿಗಳ ಪಥಸಂಚಲನದಿಂದಾಚೆಗೂ ಶ್ರಮಜೀವಿಗಳ ದನಿ ಈ ದೇಶದಲ್ಲಿ ಶತಮಾನಗಳಿಂದಲೂ ಅಸ್ತಿತ್ವದಲ್ಲಿದೆ ಎನ್ನುವುದನ್ನು ನೀವೂ ಬಲ್ಲಿರಿ, ನಿಮ್ಮ ಅನುಯಾಯಿಗಳೂ ಬಲ್ಲರು. ಶ್ರಮ, ಶ್ರಮಿಕರು, ಶ್ರಮಜೀವಿ ಎಂದ ಕೂಡಲೇ ತಮ್ಮಲ್ಲಿ ಸಂಚಲನ ಮೂಡುತ್ತದೆ. ಏಕೆಂದರೆ ದುಡಿಮೆಯ ಸಾಧನಗಳನ್ನು ತುಂಡುತುಂಡಾಗಿ ಕತ್ತರಿಸಿ ಧರ್ಮದ ಬಾಣಲೆಯಲ್ಲಿ ಹುರಿದು ರಸವತ್ತಾದ ಆಧ್ಯಾತ್ಮವನ್ನು ಸವಿಯುವ ಪರಂಪರೆಯಲ್ಲೇ ತಾವು ವಿಶ್ವಾಸ ಇರಿಸಿದ್ದೀರಿ. ಹಾಗಾಗಿಯೇ ನಿಮ್ಮ ಪೂರ್ವಾಶ್ರಮದಲ್ಲಿ ಕಾರ್ಮಿಕ ಸಂಘಟನೆ ಎಂದರೆ ಹೋರಾಟವೇ ಇಲ್ಲದ ಒಡಂಬಡಿಕೆಗಳ ಸಂಘಟನೆಯಲ್ಲಿ ಪಳಗಿ ಮುನ್ನಡೆದಿದ್ದೀರಿ. ಕಾರ್ಮಿಕರ ಮುಷ್ಕರ ಎಂದರೆ, ಶ್ರಮಿಕರ ಹೋರಾಟ ಎಂದರೆ ಸ್ಥಾಪಿತ ವ್ಯವಸ್ಥೆಯ ದಿಕ್ಕು ತಪ್ಪಿಸುವ ಒಂದು ಹುನ್ನಾರ ಎಂದು ನಂಬಿದ್ದ ಬೃಹತ್ ಕಾರ್ಮಿಕ ಸಂಘಟನೆ ನಿಮ್ಮ ಹೆಜ್ಜೆ ಗುರುತುಗಳನ್ನು ನಿರ್ಧರಿಸಿದೆ. ಹಾಗಾಗಿಯೇ ನೋಟು ರದ್ದತಿ, ಅಮಾನ್ಯೀಕರಣದ ಮೂಲಕ ಶ್ರಮಜೀವಿಗಳ ರಕ್ತ ಹಿಂಡಲು ನೀವು ಹಿಂಜರಿಯಲೇ ಇಲ್ಲ. ಅಷ್ಟೇ ಅಲ್ಲ ಇಲ್ಲದ ಕಪ್ಪುಹಣವನ್ನು ಹೊರತರುವ ಪೊಳ್ಳು ಭರವಸೆ ನೀಡಲೂ ನಿಮ್ಮ ಮನಸ್ಸು ಹಿಂಜರಿಯಲಿಲ್ಲ. ಶ್ರಮಜೀವಿಗಳಿಗೆ ಶ್ರೀಮಂತರ ಶ್ರೀಮಂತಿಕೆಯ ಬಗ್ಗೆ ಇದ್ದ ಆಕ್ರೋಶವನ್ನು ಮಾತ್ರ ನಿಮ್ಮ ಮುನ್ನಡೆಯ ಮಾರ್ಗಕ್ಕೆ ಹಾಸುಗಲ್ಲುಗಳಂತೆ ಬಳಸಿಬಿಟ್ಟಿರಿ. ನಿಮ್ಮ ಪೂರ್ವಿಕರು ಮಾಡಿದ್ದೂ ಇದನ್ನೇ ಅಲ್ಲವೇ ? ಕೆಂಬಾವುಟ ಇರಲಿ ಇಲ್ಲದಿರಲಿ ಶ್ರಮಿಕರ ಆಕ್ರಂದನ ಇಂದಿಗೂ ಅರಣ್ಯ ರೋದನವೇ ಆಗಿದ್ದರೆ ಅದಕ್ಕೆ ಕಾರಣ ನೀವು ಆರಾಧಿಸುವ ಬಂಡವಾಳ ವ್ಯವಸ್ಥೆ ಮತ್ತು ನೀವು ಪೋಷಿಸುವ ಸಾಮಾಜಿಕ ವ್ಯವಸ್ಥೆಯೇ ಆಗಿದೆ.

ಉತ್ತರ ಪ್ರದೇಶ ನಿಮ್ಮ ಪಾಲಾಗಿದೆ. ನಿಮ್ಮ ಕನಸಿನ ಹಿಂದೂ ರಾಷ್ಟ್ರ ನಿರ್ಮಾಣ ಮತ್ತು ನಿಮ್ಮ ಪೂರ್ವಿಕರ ಸನಾತನ ಧರ್ಮದ ಸ್ಥಾಪನೆಗೆ ಪೂರಕವಾಗಿ ಯೋಗಿಯೊಬ್ಬನಿಗೆ ಅಧಿಕಾರದ ಗದ್ದುಗೆ ನೀಡಿದ್ದೀರಿ. ಉತ್ತರಪ್ರದೇಶದ ಜನತೆ ನಿಮ್ಮೊಡನೆ ನಿಂತಿದ್ದಾರೆ. ಮತಗಳ ಶೇಕಡಾವಾರು ಪಾಲು ಬೇಕಿಲ್ಲ. ನೀವು ಗೆದ್ದಿರುವಿರಿ ಅಷ್ಟೇ ಸತ್ಯ. ಈಗಲಾದರೂ ಹೇಳಿ ನವಂಬರ್ 8 2016ರಂದು ನೀವು ನೋಟು ರದ್ದತಿ ಘೋಷಿಸಿ ಅಮಾನ್ಯೀಕರಣ ನೀತಿಯನ್ನು ಹಠಾತ್ತನೆ ಘೋಷಿಸಿದಾಗ ನಿಮ್ಮ ಉದ್ದೇಶವೇನಿತ್ತು ? ನಗದು ರೂಪದಲ್ಲಿ ಕಪ್ಪು ಹಣ ಇರುವುದಿಲ್ಲ ಎಂಬ ಸತ್ಯ ಅರಿತಿದ್ದರೂ ಏನೂ ಅರಿಯದವರಂತೆ ನಾಟಕವಾಡಿಬಿಟ್ಟಿರಿ. ಎಷ್ಟಾದರೂ ರಂಗಮಂಚದ ಸೂತ್ರದ ಗೊಂಬೆಯಲ್ಲವೇ ತಾವು. ನೀವು ನಿಮ್ಮ ಕಾರ್ಪೋರೇಟ್ ಸ್ನೇಹಿತರಿಗೆ ದೇಶದ ಅರ್ಥವ್ಯವಸ್ಥೆಯನ್ನು ಬಾಗಿಣ ನೀಡಲೇಬೇಕೆಂದಿದ್ದರೆ ಅಮಾನ್ಯೀಕರಣವೇನೂ ಅನಿವಾರ್ಯ ಅಗಬೇಕಿರಲಿಲ್ಲ. ನವ ಉದಾರವಾದ ಈಗಾಗಲೇ ನಿಮ್ಮ ಬತ್ತಳಿಕೆಯಲ್ಲಿತ್ತು. ಕಪ್ಪು ಹಣ ಎಷ್ಟು ಪ್ರಮಾಣದಲ್ಲಿದೆ, ಯಾವ ರೂಪದಲ್ಲಿದೆ, ಯಾವ ಕೂಪಗಳಲ್ಲಿದೆ ಎಂಬ ಸತ್ಯದ ಅರಿವು ಇದ್ದಾಗ, ದೇಶದ ಜನಸಾಮಾನ್ಯರಿಗೆ ಕಪ್ಪುಹಣಮುಕ್ತ ಆರ್ಥಿಕ ವ್ಯವಸ್ಥೆಯನ್ನು ನೀಡುವುದೇ ನಿಮ್ಮ ಧ್ಯೇಯವಾಗಿದ್ದಿದ್ದರೆ, ನೀವು ಆಡಳಿತ ಯಂತ್ರದ ಸದ್ಬಳಕೆಯ ಮೂಲಕ ಎಲ್ಲ ಫಟಿಂಗರನ್ನೂ ಬಯಲಿಗೆಳೆಯುತ್ತಿದ್ದಿರಿ. ಆದರೆ ಹಾಗಾಗಲಿಲ್ಲ. ಏಕೆಂದರೆ ನಿಮ್ಮ ಉದ್ದೇಶ ಬಡ ಜನತೆಯ, ಶ್ರಮಿಕರ ಜೇಬಿನಲ್ಲಿನ ಅಲ್ಪ ಹಣವನ್ನು ಕಾರ್ಪೋರೇಟ್ ತಿಮಿಂಗಿಲಗಳಿಗೆ ಪರಭಾರೆ ಮಾಡುವುದೇ ಆಗಿತ್ತೇ ಹೊರತು ಕಪ್ಪುಹಣ ಹೊರಗೆಳೆಯುವುದಲ್ಲ.

ಒಮ್ಮೆ ಹಿಂದಿರುಗಿ ನೋಡಿ. ನಿಮ್ಮ ಜನಧನ ಯೋಜನೆಯ ಮೂಲ ಉದ್ದೇಶವೇನು ? ಸಮಸ್ತ ಭಾರತೀಯರೂ ಬ್ಯಾಂಕ್ ಖಾತೆ ಹೊಂದಿರಬೇಕು ಎಂದಲ್ಲವೇ ? ಇದನ್ನು ಬ್ಯಾಂಕುಗಳ ಸಹಮತ ಮತ್ತು ಸಹಕಾರದೊಂದಿಗೆ ವ್ಯವಸ್ಥಿತವಾಗಿ ಮಾಡಿದ್ದಿದ್ದಲ್ಲಿ, ಖಾತೆ ಹೊಂದದೆ ಇರುವವರು ಮಾತ್ರ ಜನಧನ್ ಫಲಾನುಭವಿಗಳಾಗುತ್ತಿದ್ದರು. ನಗದು ರಹಿತ ಆರ್ಥಿಕತೆಯ ನಿಘಂಟಿನ ಅರ್ಥ ನಿಮ್ಮ ಮನ್ ಕಿ ಬಾತ್‍ನಲ್ಲಿ ಇರಲಿಲ್ಲ. ಭಾರತದ ದುಡಿಯುವ ಜನತೆ ತಮ್ಮ ಬೆವರಿನ ದುಡಿಮೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳದೆ ನಿಮ್ಮ ಸರ್ಕಾರವನ್ನು ನಿಯಂತ್ರಿಸುವ ಕಾರ್ಪೋರೇಟ್ ಉದ್ಯಮಿಗಳ ಸಾಂಸ್ಥಿಕ ಭಂಡಾರಗಳಲ್ಲಿ ಹಾಕಬೇಕು ಎನ್ನುವುದು ನಿಮ್ಮ ಚಾಣಕ್ಯ ತಂತ್ರವಾಗಿತ್ತು. ಈ ನಿಟ್ಟಿನಲ್ಲಿ ಜನಧನ್ ಒಂದು ದಿಟ್ಟ ಹೆಜ್ಜೆ. ಪಾಪ ಸರ್ಕಾರ ಏನನ್ನೋ ಕೊಡುತ್ತದೆ, ಸತ್ತರೆ 2 ಲಕ್ಷ ದುಡ್ಡು ಬರುತ್ತದೆ ಎಂಬ ಆಮಿಷಕ್ಕೆ ಜನತೆ ಬಲಿಯಾದರು. ಒಮ್ಮೆ ಎದೆ ಮುಟ್ಟಿಕೊಂಡು ಹೇಳಿ. ಸತ್ತರೆ ಇಂತಿಷ್ಟು ದುಡ್ಡು ಬರುತ್ತದೆ ಎಂದು ಹೇಳಿದ ಕೂಡಲೇ ಮೈಲುಗಟ್ಟಲೆ ಕ್ಯೂ ನಿಂತು ಹಣ ಪಾವತಿಸುವ ಜನತೆ ನಮ್ಮ ದೇಶದಲ್ಲಿದ್ದಾರೆ ಎಂದರೆ ಈ ದೇಶದ ಜನತೆಯ ಹತಾಶೆ ಎನಿಸುವುದಿಲ್ಲವೇ ? ಈ ಹತಾಶೆ ನಿಮಗೆ ಬಂಡವಾಳವಾಯಿತು. ಆತ್ಮಾವಲೋಕನದ ಭೂಮಿಕೆ ಆಗಲಿಲ್ಲ. ಇತರ ರಾಜಕೀಯ ಪಕ್ಷಗಳು ಈ ಹತಾಶೆಯನ್ನು ಅದುಮಿಟ್ಟು ಮತ ಗಳಿಸಲು ಯತ್ನಿಸುತ್ತಿದ್ದವು. ನೀವು ಇದನ್ನು ಸಂತೆಯಲ್ಲಿ ಬಿಕರಿ ಮಾಡಿ ಜನಪ್ರಿಯರಾದಿರಿ. ಶ್ರಮಿಕರ ಪಾಡೇನೂ ಬದಲಾಗಲಿಲ್ಲ. ಅಲ್ಲವೇ ಮೋದಿ ಜೀ ?

ನಿಮ್ಮ ಎಲ್ಲ ಯೋಜನೆಗಳ ಹಿಂದೆ ಎರಡು ಉದ್ದೇಶಗಳಿರುತ್ತವೆ. ದೇಶದ ವಿಕಾಸ ನಿಮಗೆ ಅನಿವಾರ್ಯ. ಏಕೆಂದರೆ ಮರಳಿ ಗದ್ದುಗೆ ಏರಬೇಕಲ್ಲವೇ ? ಮತ್ತೊಂದು ಉದ್ದೇಶ ನಿಮ್ಮ ಅಧಿಪತ್ಯ ರಾಜಕಾರಣಕ್ಕೆ ಸಾರ್ವಜನಿಕ ಮನ್ನಣೆ ಗಳಿಸುವುದು. ಸ್ವಚ್ಚ ಭಾರತ ಅಭಿಯಾನ ಇಂತಹ ಒಂದು ಹೆಜ್ಜೆ. ಮೂಲತಃ ನೀವು ಗುಡಿಸಿ ಹಾಕುತ್ತಿರುವುದು ಮಹಾತ್ಮ ಗಾಂಧಿಯ ಮಧುರ ನೆನಪುಗಳನ್ನು, ತ್ಯಾಗ ಬಲಿದಾನದ ಹೆಜ್ಜೆಗಳನ್ನು ಮತ್ತು ಅವರ ತತ್ವ ಸಿದ್ಧಾಂತಗಳ ಪಳೆಯುಳಿಕೆಗಳನ್ನು ಅಲ್ಲವೇ ? ಇದನ್ನು ನೇರವಾಗಿ ಹೇಳಿದರೆ ನೀವು ಗಾಂಧಿ ವಿರೋಧಿ, ಫ್ಯಾಸಿಸ್ಟ್ ಆಗಿಬಿಡುತ್ತೀರಿ. ಅದಕ್ಕೇ ನೀವು ಗಾಂಧಿ ಜಯಂತಿಯ ದಿನ ಇಡೀ ದೇಶದ ಜನ ಗಾಂಧಿ ಸ್ಮøತಿಯನ್ನು ಮರೆತು ಪೊರಕೆ ಹಿಡಿಯುವಂತೆ ಮಾಡಿಬಿಟ್ಟಿರಿ. ಈ ದೇಶಧ ಜನಸಾಮಾನ್ಯರ ಸಾಕ್ಷಿ ಪ್ರಜ್ಞೆಯಂತಿದ್ದು, ಕೋಮು ಸೌಹಾರ್ದತೆ , ಭ್ರಾತೃತ್ವ ಮತ್ತು ನೈಜ ಸೆಕ್ಯುಲರ್ ತತ್ವಗಳನ್ನು ಪ್ರತಿಪಾದಿಸುವ ಎಲ್ಲ ನೆನಪುಗಳನ್ನು ಅಳಿಸಿ ಹಾಕುವ ಅಥವಾ ನುಂಗಿಹಾಕುವ ಪ್ರವೃತ್ತಿಯನ್ನು ನಿಮ್ಮ ಈ ಹೆಜ್ಜೆಗಳಲ್ಲಿ ಕಾಣಬಹುದು. ಸ್ವಚ್ಚ ಭಾರತ್ ಒಂದು ಹೆಜ್ಜೆಯಷ್ಟೆ.
ಅಧಿಪತ್ಯವೇ ಅಂತಿಮವಲ್ಲ

ನಾನೊಬ್ಬ ದಿಟ್ಟ ನಾಯಕ ಅಥವಾ ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡಲು ಸಮರ್ಥನಾದ ಏಕೈಕ ನಾಯಕ ಎಂದು ಬಿಂಬಿಸಲು ನೀವು ಪಟ್ಟ ಸಾಹಸಗಳಲ್ಲಿ ಉರಿ ಸರ್ಜಿಕಲ್ ಸ್ಟ್ರೈಕ್ ಒಂದು ಉತ್ತಮ ಪ್ರಹಸನ. ಹಿಂದೆ ಯಾವ ಸರ್ಕಾರವೂ ಮಾಡದ ಘನಕಾರ್ಯವನ್ನೇನೂ ನೀವು ಇಲ್ಲಿ ಮಾಡಲಿಲ್ಲ. ಆಗ ದೊರೆಯದ ಪ್ರಚಾರ ನಿಮಗೆ ದೊರೆಯಿತಷ್ಟೇ. ಏಕೆಂದರೆ ಕಾರ್ಪೋರೇಟ್ ಮಾಧ್ಯಮಗಳು ನಿಮ್ಮ ಬೆಂಗಾವಲು ಪಡೆಗಳಾಗಿದ್ದವು. 1971ರ ಯುದ್ಧದ ಸಂದರ್ಭದಲ್ಲೂ ಸೃಷ್ಟಿಯಾಗದಂತಹ ಉನ್ಮಾದ ಸೃಷ್ಟಿಸಿ ನಿಮ್ಮನ್ನು ವೈಭವೀಕರಿಸುವುದರಲ್ಲಿ ಮಾಧ್ಯಮಗಳು ಯಶಸ್ವಿಯಾಗಿದ್ದವು. ನೋಟು ರದ್ದತಿ ಮತ್ತು ಅಮಾನ್ಯೀಕರಣದಂತಹ ಜನವಿರೋಧಿ ನೀತಿಯನ್ನು ಜಾರಿಗೊಳಿಸುವ ಮುನ್ನ ನಿಮಗೆ ಅಗತ್ಯವಾಗಿ ಬೇಕಿದ್ದ ರಾಷ್ಟ್ರೀಯ ಮಾನ್ಯತೆ ಈ ಪ್ರಸಂಗದಿಂದ ಲಭಿಸಿತ್ತು. ಇದನ್ನೇ ಆಡಳಿತ ಎನ್ನುವುದು ಅಲ್ಲವೇ? ವಂಚನೆ ಅರಿಯದ ವ್ಯಕ್ತಿ ಉತ್ತಮ ವ್ಯಾಪಾರಿಯಾಗಲಾರ. ಕುಹಕತೆ ಅರಿಯದ ವ್ಯಕ್ತಿ ರಾಜಕೀಯ ನಾಯಕನೂ ಆಗಲಾರ. ಈ ಚಾರಿತ್ರಿಕ ಸತ್ಯವನ್ನು ನೀವು ಚೆನ್ನಾಗಿ ಅರಿತಿದ್ದೀರಿ. ಸರ್ಜಿಕಲ್ ಸ್ಟ್ರೈಕ್‍ನಿಂದ ಭಾರತ ಸುರಕ್ಷಿತವಾಯಿತೋ ಇಲ್ಲವೋ ಬೇರೆ ಮಾತು, ನಿಮ್ಮ ಗದ್ದುಗೆಯಂತೂ ಸುರಕ್ಷಿತವಾಯಿತು. ಈ ಹುಮ್ಮಸ್ಸಿನಿಂದಲೇ ನೀವು ಅಮಾನ್ಯೀಕರಣ ಘೋಷಿಸಿಬಿಟ್ಟಿರಿ.

ಏನೆಲ್ಲಾ ಸುಳ್ಳು ಹೇಳಿದಿರಿ ಪ್ರಭೂ !!! ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ವಿದೇಶಗಳಲ್ಲಿರುವ ಅಕ್ರಮ ಹಣವನ್ನು ತಂದು ದೇಶದ ಜನತೆಗೆ ಹಂಚುವುದಾಗಿ ಹೇಳಿದಿರಿ. ಮೂರು ವರ್ಷ ಕಳೆದಿದೆ. ನಿಮಗೆ ನಿಮ್ಮ ಸರ್ಕಾರಕ್ಕೆ ಅಕ್ರಮ ಸಂಪತ್ತಿನ ವಾರಸುದಾರರ ಕೂದಲು ಕೋಂಕಿಸಲೂ ಸಾಧ್ಯವಾಗಿಲ್ಲ. ಅಕ್ರಮ ಸಂಪತ್ತು ಹೊಸ ಆಯಾಮಗಳನ್ನು ಕಂಡುಕೊಳ್ಳುತ್ತಿದೆ. ಸ್ವಿಸ್ ಬ್ಯಾಂಕುಗಳಲ್ಲಿರುವ ಅಕ್ರಮ ಸಂಪತ್ತು ಇರಲಿ, ನಮ್ಮ ದೇಶದಲ್ಲೇ ಇರುವ ಧಾರ್ಮಿಕ ಸ್ವಿಸ್ ಬ್ಯಾಂಕುಗಳು ಶ್ರೀಮಂತಿಕೆಯಿಂದ ಮೆರೆಯುತ್ತಲೇ ಇವೆ. ಒಂದು ಮಾತನ್ನು ನೆನಪಿಡಿ, ಭಾರತದಲ್ಲಿ ನಿಜಕ್ಕೂ ಸೆಕ್ಯುಲರಿಸಂ ಎಂಬ ತತ್ವ ಪ್ರಾಮಾಣಿಕವಾಗಿ ಇದ್ದರೆ ಅದು ಈ ದೇಶದ ಶ್ರೀಮಂತರ, ಅಕ್ರಮ ಸಂಪತ್ತಿನ ವಾರಸುದಾರರ ಮತ್ತು ಧಾರ್ಮಿಕ ಕೇಂದ್ರಗಳ ರಕ್ಷಣೆಯಲ್ಲಿ ಮಾತ್ರ. ಜಾತಿ, ಮತ, ಭಾಷೆಯ ಬೇಧವಿಲ್ಲದೆ ಎಲ್ಲ ಧರ್ಮ ಕೇಂದ್ರಗಳ ಅಕ್ರಮ ಸಂಪತ್ತನ್ನೂ ನಮ್ಮ ದೇಶದ ಪ್ರಭುತ್ವ ರಕ್ಷಿಸುತ್ತದೆ. ಈ ವಿಚಾರದಲ್ಲಿ ನೀವೇನೂ ಭಿನ್ನವಾಗಿ ಕಾಣುವುದಿಲ್ಲ. ಕೊಂಚ ತಾರತಮ್ಯ ತೋರಬಹುದಷ್ಟೆ. ಇದೇ ಧೋರಣೆಯನ್ನು ಕಾರ್ಪೋರೇಟ್ ಉದ್ಯಮಿಗಳ ಅಕ್ರಮ ಸಂಪತ್ತಿನ ರಕ್ಷಣೆಯಲ್ಲೂ ಕಾಣಬಹುದು.

ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದಿರಿ. ಮೂರು ವರ್ಷಗಳ ಅವಧಿಯಲ್ಲೂ ಒಂದು ಕೋಟಿ ಉದ್ಯೋಗವೂ ಸೃಷ್ಟಿಯಾಗಿಲ್ಲ. ಹಣಕಾಸು ಬಂಡವಾಳದ ಅಧಿಪತಿಗಳು ತಮ್ಮ ತಂತ್ರಾಂಶಗಳ ಭಂಡಾರವನ್ನು ವಿಶ್ವದ ದೊಡ್ಡಣ್ಣನ ಬಳಿ ಗಿರವಿ ಇಟ್ಟು ಬಂದಿದ್ದಾರೆ. ಟ್ರಂಪ್‍ನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿರುವ ದೇಶಭಕ್ತ ಉದ್ಯಮಿಗಳು ಭಾರತದ ಫಲಾನುಭವಿಗಳಿಗೆ ತಿರುಪತಿಯ ಲಡ್ಡು ಹಂಚಲು ಮುಂದಾಗಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ದೇಶದ ಜನಸಾಮಾನ್ಯರ ಮೂಲ ನೆಲೆಯಾಗಿರುವ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಒಂದೊಂದಾಗಿಯೇ ನುಂಗಿಹಾಕಲು ಕಾರ್ಪೋರೇಟ್ ಹೆಗ್ಗಣಗಳು ಸಜ್ಜಾಗಿವೆ. ನಿಮ್ಮ ಸರ್ಕಾರ ಈ ಹೆಗ್ಗಣಗಳಿಗೆ ಐಷಾರಾಮಿ ಬಿಲಗಳನ್ನು ನಿರ್ಮಿಸುತ್ತಿದ್ದೀರಿ. ಛತ್ತಿಸ್‍ಘಡದ ಆದಿವಾಸಿಗಳ ಸಮಸ್ಯೆಯನ್ನು ಪ್ರತಿನಿಧಿಸುವವರು ನಿಮ್ಮ ದೃಷ್ಟಿಯಲ್ಲಿ ಕಂಟಕಪ್ರಾಯರಾಗುತ್ತಾರೆ. ಭಾರತೀಯ ನಿವಾಸಿಗಳ ಬದುಕನ್ನು ಮೂರಾಬಟ್ಟೆ ಮಾಡುವ ಔದ್ಯಮಿಕ ದೊರೆಗಳು ಶಿಖರಪ್ರಾಯರಾಗುತ್ತಾರೆ. ಏಕೆಂದರೆ ಇಲ್ಲಿ ಪ್ರಶ್ನೆ ಇರುವುದು ದೇಶಪ್ರೇಮ ಮತ್ತು ದೇಶಭಕ್ತಿಯ ವ್ಯಾಖ್ಯಾನದ್ದು.

ಜನ, ಗಣ ಮತ್ತು ಮನದ ಅಧಿನಾಯಕ ಯಾರು ಎಂಬ ಪ್ರಶ್ನೆಗೆ ನಿಮ್ಮಲ್ಲಿಯೂ ಉತ್ತರ ಇರಲಾರದು ನಮ್ಮಲ್ಲೂ ಇರಲಾರದು. ಏಕೆಂದರೆ ಜನ ನಿಷ್ಕ್ರಿಯರಾಗಿದ್ದಾರೆ, ಗಣ ವಿಘಟನೆಗೊಂಡಿದೆ, ಮನ ಕಲುಷಿತಗೊಂಡಿದೆ. ಹಾಗಾಗಿಯೇ ನಿಮ್ಮ ಇಲ್ಲದ ಸಾಧನೆಗೆ ಸಲ್ಲದ ತುತ್ತೂರಿ ಊದಲು ಮಾಧ್ಯಮಗಳು ಸಜ್ಜಾಗಿವೆ. ಒಂದು ಕೃತಕ ಪ್ರಭಾವಳಿಯನ್ನು ಸೃಷ್ಟಿಸಿ ಆ ಪ್ರಭೆಯ ಆವರಣದಲ್ಲೇ ರಾಜಕೀಯ ಅಧಿಪತ್ಯ ಸಾಧಿಸುವ ಚಾಣಕ್ಯ ತಂತ್ರವನ್ನು ತಾವು ಇಂದಿರಾಗಾಂಧಿಯವರಿಂದ ಯಥಾವತ್ತಾಗಿ ಬಳುವಳಿ ಪಡೆದಿದ್ದೀರಿ. ಇಲ್ಲವಾದರೆ ಕಳೆದ ಮೂರು ವರ್ಷಗಳ ತಮ್ಮ ಸಾಧನೆ ? ಜನಾಂದೋಲನಗಳಿಗೆ ದಾರಿಯಾಗಬೇಕಿತ್ತು. ನಿಮ್ಮ ನೆಚ್ಚಿನ ಯೋಜನೆಗಳಾವುವೂ ಜನಸಾಮಾನ್ಯರ, ಶ್ರಮಜೀವಿಗಳ, ದುಡಿಯುವ ವರ್ಗಗಳ ಬಾಳನ್ನು ಹಸನಾಗಿಸುವ ದಿಕ್ಕಿನಲ್ಲಿ ಇಲ್ಲ. ಮೊದಲೇ ಹೇಳಿದಂತೆ ಸ್ವಚ್ಚ ಭಾರತ ಅಭಿಯಾನ ಒಂದು ರಾಜಕೀಯ ಉದ್ದೇಶದ ಯೋಜನೆ ಇದರಿಂದ ಅಪೌಷ್ಟಿಕತೆ ಕಡಿಮೆಯಾಗುವುದಿಲ್ಲ. ಜನರ ಆರೋಗ್ಯವೇನೂ ಸುಧಾರಿಸಿಲ್ಲ. ಹೆಚ್ಚೆಂದರೆ ವಿದೇಶಿ ಬಂಡವಳಿಗರಿಗೆ ಕೆಲವು ನಗರಗಳು ಕನ್ನಡಿಯಂತೆ ಕಾಣಲು ನೆರವಾಗಿದೆಯಷ್ಟೆ.

ನಿಮ್ಮ ಸ್ಮಾರ್ಟ್ ಸಿಟಿ, ಸ್ಟಾರ್ಟಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮುಂತಾದ ಯೋಜನೆಗಳು ದೇಶದೊಳಗೆ ಬಂಡವಾಳ ಪ್ರವೇಶಿಸಲು ನಿರ್ಮಿಸಿದ ಮಹಾದ್ವಾರಗಳು. ವಿದೇಶಿ ಬಂಡವಾಳಿಗರಿಗೆ ಕೆಂಪುಗಂಬಳಿ ಹಾಸಿ ಸ್ವಾಗತಿಸಿದ್ದೀರಿ. ಆದರೂ ಬಂಡವಾಳ ಹರಿದುಬಂದಿಲ್ಲ. ಈಗ ವಿವೇಶಿಗರನ್ನು ಆಕರ್ಷಿಸಲು ಬಿಇಎಂಎಲ್‍ನಂತಹ ಬೃಹತ್ ಸಾರ್ವಜನಿಕ ಉದ್ದಿಮೆಯ ಸಮಾಧಿ ನಿರ್ಮಿಸಲು ಮುಂದಾಗಿದ್ದೀರಿ. ಮುಂಬರುವ ದಿನಗಳಲ್ಲಿ ಸಾರ್ವಜನಿಕ ಬ್ಯಾಂಕುಗಳ ಗೋರಿಗಳೂ ಸಿದ್ಧವಾಗುತ್ತವೆ. ಕಾಂಗ್ರೆಸ್ ಪಕ್ಷದ ಭ್ರಷ್ಟ ಆಡಳಿತದಿಂದ ಬೇಸತ್ತ ಭಾರತದ ಪ್ರಜೆಗಳು ನಿಮ್ಮನ್ನು ಆಯ್ಕೆ ಮಾಡಿರುವುದು ಈ ದೇಶದ ಶ್ರಮಜೀವಿಗಳು ಶತಮಾನಗಳಿಂದ ಬೆವರಿಳಿಸಿ ಉಳಿಸಿಕೊಂಡುಬಂದಿರುವ ಸಂಪನ್ಮೂಲಗಳನ್ನು ಸಂರಕ್ಷಿಸುವ ಸಲುವಾಗಿ. ಆದರೆ ನೀವು ಒಂದು ಪ್ರಾಣಿಯ ರಕ್ಷಣೆಗೆ ದುಂಬಾಲು ಬಿದ್ದಿದ್ದೀರಿ. ದೇಶದ ನೈಸರ್ಗಿಕ, ಮಾನವ ನಿರ್ಮಿತ ಸಂಪನ್ಮೂಲಗಳನ್ನು ಹರಾಜು ಮಾರುಕಟ್ಟೆಯಲ್ಲಿ ಬಿಕರಿ ಮಾಡುತ್ತಿದ್ದೀರಿ. ಈ ಮಹತ್ಕಾರ್ಯಕ್ಕೆ ಆಕರ್ಷಕ ಹೆಸರುಗಳನ್ನಿಟ್ಟು ದೇಶಪ್ರೇಮದ ಮುಸುಕು ಸೃಷ್ಟಿಸುತ್ತಿದ್ದೀರಿ.

ಬಹುಶಃ ನಿಮಗೆ ಅರ್ಥವ್ಯವಸ್ಥೆಯ ವ್ಯಾಕರಣವೇ ತಿಳಿದಿಲ್ಲ ಎನಿಸುತ್ತದೆ. ತಿಳಿದಿದ್ದಲ್ಲಿ ಅಮಾನ್ಯೀಕರಣದಿಂದ ಕಪ್ಪುಹಣ, ಭಯೋತ್ಪಾದನೆ ನಿಯಂತ್ರಿಸಲು ಮುಂದಾಗುತ್ತಿರಲಿಲ್ಲ. ಅಲ್ರೀ, ಕಪ್ಪುಹಣಕ್ಕೂ, ಭಯೋತ್ಪಾದನೆಗೂ ಎತ್ತಲಿಂದೆತ್ತ ಸಂಬಂಧ ಕಲ್ಪಿಸುತ್ತೀರಿ ? ಶೇ 40ಕ್ಕೂ ಹೆಚ್ಚು ಅನಕ್ಷರಸ್ತರೇ ಇರುವ ದೇಶದಲ್ಲಿ, ಶೇ 60ರಷ್ಟು ಬಡತನ ಇರುವ ದೇಶದಲ್ಲಿ ಡಿಜಿಟಲೀಕರಣ, ನಗದು ರಹಿತ ಆರ್ಥಿಕ ವ್ಯವಸ್ಥೆಯನ್ನು ಸಾಧಿಸುವ ನಿಮ್ಮ ಸಾಹಸ ಮೆಚ್ಚಬೇಕಾದ್ದೇ. ಮೂರು ತಿಂಗಳ ಕಾಲ ದೇಶದ ಅರ್ಥವ್ಯವಸ್ಥೆಯನ್ನು ಮತ್ತು ಸಾಮಾಜಿಕ ಜನಜೀವನವನ್ನು ಅಯೋಮಯಗೊಳಿಸಿದ ನಿಮ್ಮ ಸರ್ಕಾರ ಸಾಧಿಸಿದ್ದಾದರೂ ಏನು ? ನವಂಬರ್ 8ರ ಮುನ್ನ ಇದ್ದ ಪರಿಸ್ಥಿತಿ ಮರಳಿದೆ. ಅದೇ ನಗದು ವ್ಯವಹಾರ, ಅದೇ ರಿಯಲ್ ಎಸ್ಟೇಟ್, ಅದೇ ಭ್ರಷ್ಟಾಚಾರ, ಅದೇ ಭಯೋತ್ಪಾದನೆ ಎಲ್ಲವೂ ಇದ್ದಂತೆಯೇ ಇದೆ. ಅಂದರೆ ಅಮಾನ್ಯೀಕರಣದ ಉದ್ದೇಶವಾದರೂ ಏನು ? ನಿಮ್ಮ ಮನ್ ಕಿ ಬಾತ್ ಇದನ್ನು ಹೇಳದಿರಬಹುದು. ಆದರೆ ಪ್ರಜ್ಞೆ ಇರುವ ಯಾರಿಗಾದರೂ ಅರ್ಥವಾಗುತ್ತದೆ. ಭಾರತದ ಅರ್ಥವ್ಯವಸ್ಥೆಯನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ಪರಭಾರೆ ಮಾಡುವ ಮೊದಲ ಮೆಟ್ಟಿಲು ಅಮಾನ್ಯೀಕರಣ ಎಂದು. ಭಾರತದ ಪ್ರಜೆಗಳು ಪ್ರಜ್ಞಾಹೀನರಾಗಬಹುದು ಆದರೆ ಪ್ರಜ್ಞಾಶೂನ್ಯರಲ್ಲ. ನೆನಪಿರಲಿ.

ಸಾಧಕ ಬಾಧಕಗಳ ಪರಾಮರ್ಶೆ
ಮೂರು ವರ್ಷಗಳ ನಿಮ್ಮ ಸಾಧನೆಯಾದರೂ ಏನು ? ಯುಪಿಎ ಸರ್ಕಾರ ರೂಪಿಸಿದ್ದ ಆಧಾರ್ ಯೋಜನೆ, ಉದ್ಯೋಗ ಖಾತರಿ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಶಿಕ್ಷಣ ಹಕ್ಕು, ಆಹಾರದ ಹಕ್ಕು ಕಾಯ್ದೆಗಳು ಮುಂತಾದವುಗಳಿಗೆ ಮರುನಾಮಕರಣ ಮಾಡಿರುವುದಷ್ಟೇ ಅಲ್ಲವೇ ? ಇಂದಿಗೂ ಎಂದಿನಂತೆಯೇ ಜನಸಾಮಾನ್ಯರಿಗೆ, ಶೋಷಿತ ವರ್ಗಗಳಿಗೆ, ಶ್ರಮಜೀವಿಗಳಿಗೆ, ಗ್ರಾಮೀಣ ಬಡಜನತೆಗೆ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆ ಮರೀಚಿಕೆಯಾಗಿಯೇ ಉಳಿದಿದೆ. ರೈತರ ಆತ್ಮಹತ್ಯೆ ಸುದ್ದಿಯೇ ಆಗದಷ್ಟು ಸಾಮಾನ್ಯ ಸಂಗತಿಯಾಗಿದೆ. ಕೃಷಿ ಉತ್ಪಾದನೆ ಕುಂಠಿತವಾಗುತ್ತಲೇ ಇದೆ. ಉತ್ಪಾದನಾ ಕ್ಷೇತ್ರದಲ್ಲಿ ಹಿನ್ನಡೆ ಕಂಡುಬರುತ್ತಿದೆ. ಬಂಡವಾಳಹೂಡಿಕೆ ಹೆಚ್ಚಾಗುತ್ತಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕುಸಿಯುತ್ತಿವೆ. ಒಂದು ವರ್ಷದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿಸುವ ನಿಮ್ಮ ಮಹತ್ತರ ಘೋಷಣೆ ಭ್ರಮೆ ಎಂದು ಸ್ಪಷ್ಟವಾಗುತ್ತಿದೆ. ಉದ್ಯೋಗ ಸೃಷ್ಟಿ ಇರಲಿ, ಇರುವ ಉದ್ಯೋಗ ಉಳಿಯುವುದೇ ಎಂಬ ಅನುಮಾನ ಕಾಡುತ್ತಿದೆ. ನೀವು ಉದ್ಯೋಗ ನೀಡಿದ್ದೀರಿ. ನಿರುದ್ಯೋಗಿಗಳಾಗಿ ಮಸೀದಿ, ಚರ್ಚುಗಳ ಮೇಲೆ ಆಕ್ರಮಣ ಮಾಡುತ್ತಾ ಶಾಲಾ ಕಾಲೇಜುಗಳ ಬಾಲಕ ಬಾಲಕಿಯರ ಮೇಲೆ ಹಲ್ಲೆ ನಡೆಸುತ್ತಾ ಲವ್ ಜಿಹಾದ್ ಹೆಸರಿನಲ್ಲಿ ಗೂಂಡಾಗರ್ದಿ ಮಾಡುತ್ತಿದ್ದ ಯುವಕರಿಗೆ ನೀವು ಗೋರಕ್ಷಣೆ ಮಾಡುವ ಉದ್ಯೋಗ ನೀಡಿದ್ದೀರಿ. ನಿಮ್ಮ ಶಿಷ್ಯ ಯೋಗಿ ಆದಿತ್ಯನಾಥ್ ರೋಮಿಯೋ ನಿಯಂತ್ರಣಪಡೆ ರಚಿಸುವ ಮೂಲಕ ಉದ್ಯೋಗ ನೀಡಿದ್ದಾರೆ. ಅಮಾನ್ಯೀಕರಣದ ಪ್ರಭಾವದಿಂದ ದೇಶದ ಉತ್ಪಾದನೆ, ಮಾರುಕಟ್ಟೆ, ಖರೀದಿ ಸಾಮಥ್ರ್ಯ, ಉದ್ಯೋಗ ಸೃಷ್ಟಿ ಎಲ್ಲವೂ ನೆಲ ಕಚ್ಚಿರುವುದು ಅಂಕಿಅಂಶಗಳ ಸಮೇತ ಸಾಬೀತಾಗುತ್ತಿದೆ. ಆದರೆ ವಂದಿಮಾಗಧ ಮಾಧ್ಯಮಗಳ ತುತ್ತೂರಿಯ ಸದ್ದಿನಲ್ಲಿ ಈ ಕೂಗು ಯಾರಿಗೂ ಕೇಳಿಬರುತ್ತಿಲ್ಲ.

ಬಲಿಷ್ಠ ಭಾರತವನ್ನು ನಿರ್ಮಿಸುವ ನಿಮ್ಮ ಕನಸು ನನಸಾಗಲಿ. ಆದರೆ ಬಲಿಷ್ಠ ಎಂದರೆ ಸೇನಾ ಸಾಮಥ್ರ್ಯದ ಹೆಚ್ಚಳವಲ್ಲ. ಈ ದೇಶದ ಗಡಿ ರಕ್ಷಣೆ ಮಾಡುತ್ತಿರುವುದು ಸೈನಿಕರು. ಅವರಿಗೆ ನಮ್ಮ ಸಾವಿರ ಪ್ರಣಾಮಗಳು ಆದರೆ ಈ ದೇಶದ ಅಂತಃಸತ್ವವನ್ನು ಕಾಪಾಡಿಕೊಂಡು ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ಹಗಲಿರುಳು ದುಡಿಯುತ್ತಿರುವುದು ಭಾರತದ ಶ್ರಮಜೀವಿಗಳು. ಅವರೂ ಗಡಿಯಲ್ಲಿರುವವರಂತೆಯೇ ವೀರ ಯೋಧರು. ಇವರ ಕೈಯ್ಯಲ್ಲೂ ಶಸ್ತ್ರಾಸ್ತ್ರಗಳಿವೆ. ಅವರ ಭುಜಗಳೇ ತುಪಾಕಿಗಳು. ಅವರ ಮೆದುಳೇ ನಿಮ್ಮ ನೆಚ್ಚಿನ ಕ್ಷಿಪಣಿಗಳು. ಈ ಯೋಧರ ರಕ್ಷಣೆಗೆ ನೀವು ಮಾಡುತ್ತಿರುವುದೇನು ? ಬಜೆಟ್ ಮೂಲಕ ಆಯ್ದುಕೊಳ್ಳಲು ಬಿಸಾಡುವ ಔದಾರ್ಯದ ತುಣುಕುಗಳೇ ? ಈ ಶ್ರಮಜೀವಿಗಳು ದಿನನಿತ್ಯ ಸಾವಿನ ಹೊಸ್ತಿಲಲ್ಲಿ ನಿಲ್ಲುತ್ತಿದ್ದಾರೆ. ಒಂದೆಡೆ ನಿಮ್ಮ ಆರ್ಥಿಕ ನೀತಿಗಳು ಅವರ ಬಾಳನ್ನು ಮೂರಾಬಟ್ಟೆ ಮಾಡುತ್ತಿದ್ದರೆ ಮತ್ತೊಂದೆಡೆ ನಿಮ್ಮ ಯುವ ಪಡೆಗಳು ಇವರ ಬದುಕನ್ನು ಕಂಗೆಡಿಸುತ್ತಿವೆ. ರಾಜಕೀಯ ಅಧಿಪತ್ಯ ಮತ್ತು ಆರ್ಥಿಕ ಸಾರ್ವಭೌಮತ್ವ ಸಾಧಿಸಲು ನೀವು ಈ ದೇಶದ ಸಾಂಸ್ಕøತಿಕ ನೆಲೆಗಳನ್ನು ನಾಶಪಡಿಸುವ ಪಡೆಗಳನ್ನು ರೂಪಿಸುತ್ತಿದ್ದೀರಿ. ಇದರ ಫಲವೇ ಊನ, ದಾದ್ರಿ, ಜೆಎನ್‍ಯು, ವೇಮುಲ, ಶಹರನಪುರ ಇತ್ಯಾದಿ ಇತ್ಯಾದಿ.
ಭಾವನಾತ್ಮಕ ಶತ್ರುವನ್ನು ಸೃಷ್ಟಿಸುವ ಮೂಲಕ ಪಾರಮ್ಯ ಮೆರೆಯುವುದು ಹೇಡಿಗಳ ಲಕ್ಷಣ. ಪಲಾಯನವಾದದ ಒಂದು ಆಯಾಮವನ್ನು ಈ ಆಡಳಿತ ವೈಖರಿಯಲ್ಲಿ ಕಾಣಬಹುದು.

ಈ ಆಡಳಿತ ವೈಖರಿಯಲ್ಲಿ ಜನಸಾಮಾನ್ಯರನ್ನು ಭ್ರಮಾಲೋಕದಲ್ಲೆ ಬಂಧಿಸುವ ವಿಕೃತ ನಿಯಮವನ್ನು ಕಾಣಬಹುದು. ಬಹುಶಃ ಈ ವಿಧಾನ ಅನುಸರಿಸುವಲ್ಲಿ ನಿಮ್ಮನ್ನು ಮೀರಿಸುವವರಿಲ್ಲ ಎನಿಸುತ್ತದೆ. ನಾವು ಸೃಷ್ಟಿಸಿದ ಶತ್ರುವಿನ ಛಾಯೆ ವ್ಯಾಪಕವಾದಷ್ಟೂ ನಮ್ಮ ಆಡಳಿತ ಭೂಮಿಕೆ ದೃಢವಾಗುತ್ತದೆ ಅಲ್ಲವೇ ? ನೀವು ವ್ಯವಸ್ಥಿತವಾಗಿ ರೂಪಿಸಿದ ಶತ್ರುಪಾಳಯಕ್ಕೆ ಸೇರ್ಪಡೆಗಳು ಆಗುತ್ತಲೇ ಇವೆ. ಪಾಕಿಸ್ತಾನ ಒಂದು ಬೃಹತ್ ಚೌಕಟ್ಟು. ಈ ಚೌಕಟ್ಟಿನೊಳಗೆ ಏನೆಲ್ಲಾ ತುರುಕಿದ್ದೀರಿ. ಗೋಮಾಂಸ ಸೇವಿಸುವವರು, ಸ್ಥಾಪಿತ ಜಾತಿ ವ್ಯವಸ್ಥೆಯನ್ನು ಒಪ್ಪದವರು, ಮಾಂಸಾಹಾರಿಗಳು, ಜಾತಿ ವ್ಯವಸ್ಥೆಯ ಶ್ರೇಷ್ಠತೆಯನ್ನು ಮೀರುವವರು, ನಿಮ್ಮ ಪರಿಭಾಷೆಯ ದೇಶಪ್ರೇಮವನ್ನು ಒಪ್ಪದವರು, ರಾಷ್ಟ್ರಧ್ವಜಕ್ಕೆ ನಮಿಸದವರು, ನಿಮ್ಮ ಸಂಸ್ಕøತಿಯನ್ನು ವಿರೋಧಿಸುವವರು, ನಿಮ್ಮ ಆಡಳಿತ ನೀತಿಯನ್ನು ಖಂಡಿಸುವವರು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವವರು, ಸಮಾನತೆಗಾಗಿ ಶ್ರಮಿಸುವವರು ಓಹ್ ನಿಮ್ಮ ಶತ್ರುಪಾಳಯ ಹಿಗ್ಗುತ್ತಲೇ ಇದೆ. ನೀವು ಮತ್ತು ನಿಮ್ಮ ಅಯೋಧ್ಯಾ ಪರ್ವದ ಪೂರ್ವಿಕರು ಸೃಷ್ಟಿಸಿದ ಕೂಸುಗಳು ಇಂದು ಪ್ರವರ್ಧಮಾನಕ್ಕೆ ಬಂದು ನಿಮ್ಮ ಶತ್ರುಪಾಳಯವನ್ನು ನಿರ್ನಾಮ ಮಾಡಲು ಸಜ್ಜಾಗುತ್ತಿರುವುದನ್ನು ದಿನನಿತ್ಯ ಕಾಣುತ್ತಿದ್ದೇವೆ.

ಹಾಗಾಗಿಯೇ ನಿಮ್ಮ ಆಡಳಿತದಲ್ಲಿ ಸಾರ್ವಜನಿಕ ವಲಯದಲ್ಲಿ ಒಂದು ಗೂಂಡಾಪಡೆ ಅಮಾಯಕರನ್ನು, ವಿರೋಧಿಗಳನ್ನು, ಪ್ರತಿರೋಧದ ದನಿಗಳನ್ನು ಹಿಂಸಾತ್ಮಕವಾಗಿ ತುಂಡರಿಸುತ್ತಿದ್ದರೂ ಆಡಳಿತ ವ್ಯವಸ್ಥೆ ಮೌನಕ್ಕೆ ಶರಣಾಗಿರುತ್ತದೆ. ನಿಮ್ಮ ಮನ್ ಕಿ ಬಾತ್ ಇದನ್ನು ಗಮನಿಸುವುದೇ ಇಲ್ಲ. ಏಕೆಂದರೆ ನೀವು ಕಣ್ಣು ಮುಚ್ಚಿ ಧ್ಯಾನಸ್ಥರಾಗಿ ಭಾರತವನ್ನು ಮುನ್ನಡೆಸುತ್ತಿದ್ದೀರಿ. ನಿಮ್ಮ ಕಿವಿಗಳಿಗೆ ಓಂಕಾರ ನಾದ ಹೊರತುಪಡಿಸಿ ಮತ್ತೇನೂ ಕೇಳುವುದಿಲ್ಲ. ನಿಮ್ಮ ಹಿಂಬಾಲಕರು ಉನ್ಮತ್ತರಾಗಿ ರುದ್ರತಾಂಡವ ಆಡುತ್ತಿದ್ದಾರೆ. ಆಡಳಿತ ವ್ಯವಸ್ಥೆ ನಿಷ್ಕ್ರಿಯವಾಗಿವೆ. ಪ್ರತಿರೋಧದ ದನಿಗಳನ್ನು ಸಾಯುವಂತೆ ಬಡಿಯುವ ಪ್ರವೃತ್ತಿಗೆ ನಿಮ್ಮ ಆಡಳಿತದಲ್ಲಿ ಅಧಿಕೃತ ಪರವಾನಗಿ ನೀಡಲಾಗಿದೆ. ಇದು ಪ್ರಜ್ಞಾಪೂರ್ವಕವೋ ಪೂರ್ವನಿಯೋಜಿತವೋ ಎಂದು ಇತಿಹಾಸವೇ ನಿರ್ಧರಿಸುತ್ತದೆ. ಸಂಸ್ಕøತಿ ಸಂರಕ್ಷಣೆಯ ಹೆಸರಿನಲ್ಲಿ , ಭೌಗೋಳಿಕ ರಕ್ಷಣೆಯ ಹೆಸರಿನಲ್ಲಿ ನಡೆಸುವ ಎಲ್ಲ ದುಷ್ಕøತ್ಯಗಳಿಗೂ ಮಾನ್ಯತೆ ನೀಡುವ ವಿಕೃತ ಆಡಳಿತ ವ್ಯವಸ್ಥೆ ದೇಶದಲ್ಲಿ ಸೃಷ್ಟಿಯಾಗಿದ್ದರೆ ಅದಕ್ಕೆ ಮೂಲ ಕಾರಣ ಉನ್ಮತ್ತ ರಾಷ್ಟ್ರೀಯತೆಯ ಭಾವನೆಗಳು ಮತ್ತು ಮತೀಯ ರಾಜಕಾರಣದ ಬೇರುಗಳು.

ಹಾಗಾಗಿಯೇ ಮಾನವ ಗುರಾಣಿಯೂ ನಿಮಗೆ ಆದರ್ಶಪ್ರಾಯವಾಗಿ, ಸನ್ಮಾನ್ಯ ಪ್ರಕ್ರಿಯೆಯಾಗಿ ಕಾಣುತ್ತದೆ.
ನಿಜ, ಭಾರತದಲ್ಲಿ ಭಯೋತ್ಪಾದನೆಯ ಸಮಸ್ಯೆ ಇದೆ, ಕಾಶ್ಮೀರದ ಸಮಸ್ಯೆ ಇದೆ, ಜಾತಿ ದೌರ್ಜನ್ಯ ಇದೆ, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಹೆಚ್ಚು ಹೆಚ್ಚು ಮುಸ್ಲಿಂ ಯುವಕರು ಭಯೋತ್ಪಾದನೆಗೆ ಬಲಿಯಾಗುತ್ತಿದ್ದಾರೆ ಎನ್ನುವುದೂ ಸತ್ಯ. ಆದರೆ ನಿಮ್ಮ ಆಡಳಿತದಲ್ಲಿ ಈ ಯಾವುದೇ ಸಮಸ್ಯೆಗೂ ಪರಿಹಾರ ಕಂಡುಬರುತ್ತಿಲ್ಲ. ಸಾಂಸ್ಕøತಿಕ ಸಮಸ್ಯೆಗಳಿಗೆ ಅಧಿಪತ್ಯ ರಾಜಕಾರಣದ ಮೂಲಕ ಪರಿಹಾರ ಕಾಣುತ್ತಿದ್ದೀರಿ. ರಾಜಕೀಯ ಸಮಸ್ಯೆಗಳಿಗೆ ಸಾಂಸ್ಕøತಿಕ ನೆಲೆಯಲ್ಲಿ ಪರಿಹಾರ ಹುಡುಕುತ್ತಿದ್ದೀರಿ. ಸಾಮಾಜಿಕ ಸಮಸ್ಯೆಗಳಿಗೆ ಆಡಳಿತಾತ್ಮಕ ಪರಿಹಾರ ಅರಸುತ್ತಿದ್ದೀರಿ. ಈ ಚಾಣಕ್ಯ ನೀತಿ ಜನಸಾಮಾನ್ಯರಲ್ಲಿ ಮಡುಗಟ್ಟಿರುವ ಗೊಂದಲಗಳನ್ನು ಇನ್ನೂ ಗಟ್ಟಿ ಮಾಡುವುದೇ ಅಲ್ಲದೆ ಭಾರತದ ಪ್ರಜೆಗಳನ್ನು ಸದಾ ಗೊಂದಲದಲ್ಲೇ ಇರಿಸುತ್ತದೆ ಎನ್ನುವ ಸತ್ಯ ನಿಮಗೆ ತಿಳಿದಿದೆ. ಈ ಗೊಂದಲ ಮತ್ತು ಭ್ರಮೆ ನಿಮ್ಮ ಅಧಿಕಾರ ರಾಜಕಾರಣದ ಸುಭದ್ರ ವೇದಿಕೆಯಾಗಿ ಪರಿಣಮಿಸುತ್ತದೆ ಎನ್ನುವ ಸತ್ಯವನ್ನೂ ನೀವು ಅರಿತಿದ್ದೀರಿ. ಈ ವೇದಿಕೆಯನ್ನು ಶಾಶ್ವತವಾಗಿ ಕಾಪಾಡಲು ನಿಮಗೆ ಗುರಾಣಿಗಳ ಅವಶ್ಯಕತೆ ಇದೆ.

ಜೀವಂತಿಕೆ ಇಲ್ಲದ ಔನ್ನತ್ಯ ಅನಗತ್ಯ
ಅಮಾಯಕ ಜನತೆಯ ಭಾವನೆಗಳೇ ನಿಮ್ಮ ಸಾಂಸ್ಕøತಿಕ ಅಧಿಪತ್ಯ ಮತ್ತು ರಾಜಕೀಯ ಪಾರಮ್ಯದ ಗುರಾಣಿಗಳಾಗಿ ಪರಿಣಮಿಸಿರುವುದು ದುರಂತವಾದರೂ ಸತ್ಯ. ಧರ್ಮದ ತವರೂರಾದ ಭಾರತದಲ್ಲಿ, ಹಲವು ಧರ್ಮಗಳ ಕರ್ಮಭೂಮಿಯಾಗಿರುವ ಭಾರತದಲ್ಲಿ ಧರ್ಮವನ್ನು ದೇವಾಲಯಗಳಲ್ಲಿ, ಮಸೀದಿ ಚರ್ಚುಗಳಲ್ಲಿ, ಆಹಾರ ಪದ್ಧತಿಯಲ್ಲಿ ಕಾಣುವ ಮಟ್ಟಿಗೆ ಸಾಂಸ್ಕøತಿಕ ಅಧಃಪತನ ಕಂಡಿರುವ ಆಧುನಿಕ ಭಾರತದ ಸಾಮಾಜಿಕ ಪರಿಸರದಲ್ಲಿ ನೀವು ಆಹಾರ ಪದ್ಧತಿಯನ್ನು ನಾಗರೀಕತೆಯ ದ್ಯೋತಕವನ್ನಾಗಿ ಮಾಡುವ ಮೂಲಕ ತಮ್ಮ ಅಧಿಪತ್ಯ ಸಾಧಿಸುತ್ತಿದ್ದೀರಿ. ಹಾಗಾಗಿಯೇ ನಿಮಗೆ ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುವ ಕೊಲೆಗಳು, ಗೋಮಾಂಸದ ತುಂಡು ಸೃಷ್ಟಿಸುವ ಸ್ಮಶಾನಗಳು ಅಪಭ್ರಂಶಗಳಾಗಿ ಕಾಣುತ್ತಿವೆಯೇ ಹೊರತು ಕ್ಷೋಭೆಯಾಗಿ ಕಾಣುತ್ತಿಲ್ಲ. ಪ್ರತಿಯೊಂದು ಸಾವು ಸಂಭ್ರಮದ ಕ್ಷಣವಾಗುತ್ತಿರುವ ವಿಕೃತ ವ್ಯವಸ್ಥೆಯನ್ನು ದೇಶದಲ್ಲಿ ಕಾಣುತ್ತಿದ್ದೇವೆ. ಇದಕ್ಕೆ ನಿಮ್ಮ ಆರಾಧಕರಷ್ಟೇ ಕಾರಣ ಅಲ್ಲ. ಅನ್ಯರೂ ಕಾರಣರಾಗಿದ್ದಾರೆ. ಆದರೆ ಪ್ರಜಾತಂತ್ರ ವ್ಯವಸ್ಥೆಯನ್ನು ಈ ಸ್ಮಶಾನ ಸದೃಶ ಪರಿಸ್ಥಿತಿಯಿಂದ ಹೊರತರುವುದು ಒಬ್ಬ ಚುನಾಯಿತ ನಾಯಕನ ಆದ್ಯತೆಯಾಗಬೇಕಲ್ಲವೆ ? ನಿಮ್ಮ ಮನದ ಮಾತುಗಳಲ್ಲಿ ಈ ಆಶಯ, ಆದ್ಯತೆಯ ನೆರಳೂ ಕಾಣುತ್ತಿಲ್ಲ ಎನ್ನುವುದೇ ವಿಷಾದಕರ ಅಂಶ.

ನಿಮ್ಮ ಮನದೊಳಗೆ ಆತ್ಮರತಿಯ ಮಾತುಗಳಿವೆ. ಕನಸಿನ ಮಾತುಗಳಿವೆ. ಭ್ರಮಾಲೋಕದ ಮಾತುಗಳಿವೆ. ಭವಿಷ್ಯದ ಚಿಂತನೆಯನ್ನು ಸೂಚಿಸುವ ಮಾತುಗಳಿವೆ. ಆದರೆ ಈ ದೇಶದ ನಾಗರೀಕತೆಯಲ್ಲೇ ಹಲವು ತಲೆಮಾರುಗಳಿಂದ ಬೆಳೆದುಬಂದಿರುವ ನಮ್ಮ ಮನದೊಳಗೂ ಮಾತುಗಳಿವೆ ಪ್ರಭೂ. ಈ ಮಾತುಗಳು ನಿಮಗೆ ಅಪ್ಯಾಯಮಾನವಾಗದೆ ಇರಬಹುದು ಆದರೆ ಮಾತಿನ ಹಿಂದಿನ ಮೌಲ್ಯಕ್ಕೆ ಒಂದು ಸಾಮಾಜಿಕ, ಸಾಂಸ್ಕøತಿಕ, ರಾಜಕೀಯ ಭೂಮಿಕೆ ಇದೆ ಅಲ್ಲವೇ ? ಈ ಭೂಮಿಕೆಯೇ ಭಾರತದ ವೈವಿಧ್ಯತೆಗೆ ಆಧಾರ. ಈ ಆಧಾರವನ್ನು ಶಾಶ್ವತವಾಗಿ ನಿರ್ನಾಮ ಮಾಡುವ ಪಡೆಗಳು ನಿಮ್ಮ ಮೂಗಿನಡಿಯಲ್ಲೇ ಸಜ್ಜಾಗುತ್ತಿವೆಯಲ್ಲಾ ! ಈ ಸಶಸ್ತ್ರ ಪಡೆಗಳ ದೌರ್ಜನ್ಯಕ್ಕೆ ಬಲಿಯಾಗುತ್ತಿರುವ ಪ್ರತಿರೋಧದ ದನಿಗಳ ಮಾತುಗಳು ಹುದುಗಿ ಹೋಗುತ್ತಿವೆಯಲ್ಲಾ ! ಮತ್ತೆ ಭುಗಿಲೇಳುವ ಮುನ್ನ ನಿಮ್ಮ ಸುಪ್ತ ಪ್ರಜ್ಞೆ ಜಾಗೃತವಾಗಬೇಕಿದೆ. ಇಲ್ಲವಾದಲ್ಲಿ ನಿಮ್ಮ ಕನಸಿನ ಭಾರತ ಶತಮಾನಗಳ ಸಂಸ್ಕøತಿಯ ಸಮಾಧಿಯ ಮೇಲೆ ನಿರ್ಮಾಣವಾಗುವ ಸಾಧ್ಯತೆಗಳೇ ಹೆಚ್ಚು. ನೀವು ಆರಾಧಿಸುವ ಭಾರತಾಂಬೆಯ ಮನದ ಮಾತು ಇದೇ ಆಗಿರಬಹುದಲ್ಲವೇ ? ಆಲಿಸಿ ನೋಡಿ.

Leave a Reply

Your email address will not be published.