ನಮ್ಮೂರು ಮತ್ತು ಹೋಟೆಲ್‍ಗಳು

-ಗುಂಡುರಾವ್ ದೇಸಾಯಿ

baalikeಈ ಲೇಖನ ಬರಿಬೇಕಾದ್ರ ಬೇಂದ್ರೆಯವರ ಅವರ ಮಾತಗಳನ್ನು ನೆನೆಸಿಕೊಳ್ಳಬೇಕನಸ್ತಾದ. ಸಮಾರಂಭವೊಂದರಲ್ಲಿ ಮಾತಾಡಿದ ಅವರ ಮಾತಿನಾಂಗ ಹೇಳೋದಾದ್ರೆ ‘ನಮ್ಮ ಕನ್ನಡಿಗರು ಏನೇ ಮಾಡಿದ್ರೂ ದೊಡ್ಡ ಪ್ರಮಾಣದಾಗ ಮಾಡ್ತಾರ. ಹಳೇಬೀಡು-ಬೇಲೂರಿನ ಶಿಲ್ಪ ಕೆತ್ತನೆ ನೋಡ್ರಿ, ಅಧ್ಭುತ! ಗೊಲಗುಮ್ಮಟ ವಿಶ್ವವಿಸ್ಮಯಗಳಲ್ಲಿ ಒಂದು. ಶ್ರವಣಬೆಳಗೋಳದ ಗೋಮ್ಮಟೇಶ್ವರ, ಬಾದಾಮಿಯ ಗುಹೆಗಳು, ಪಟ್ಟದಕಲ್ಲಿನ ಗುಡಿಗಳು, ಹಂಪಿಯ ವಿಜಯ ವಿಠ್ಠಲ ಗುಡಿಯ ಕಂಬಗಳಲ್ಲಿ ಹರಿಯುವ ನಾದ! ಒಂದೆ ಎರಡೆ ಹೀಗೆ ಕರ್ನಾಟಕದವರು ಏನೇ ಮಾಡಿದರೂ ದೊಡ್ಡ ಪ್ರಮಾಣದಾಗ ಮಾಡತಾರ..!’ ಎಲ್ಲರೂ ಮಾತಿನ ಮಧ್ಯದಲ್ಲೆ ಚಪ್ಪಾಳೆ ತಟ್ಟಿದರು. ಬೇಂದ್ರೆ ಮಾತು ಮುಂದುವರೆಸಿ ಈಗ ನಮ್ಮ ಕನ್ನಡಿಗರು; ನಿದ್ದಿ ಮಾಡತಾ ಇದ್ದಾರಾ, ಅದೂ ದೊಡ್ಡ ಪ್ರಮಾಣದಾಗ ನಡದಾದ……….; ಅಂತ ಅವರ ಮುಂದುವರೆಸಿದ ಭಾಷಣಕ್ಕ ವಿರಾಮ ನೀಡತಾ ಪ್ರಸ್ತುತ ಪ್ರಬಂಧದ ವಿಷಯಕ್ಕ ಬರತೀನಿ. ನಮ್ಮ ಊರ ಮಂದಿ ಬೇಂದ್ರೆ ಅನ್ನೊ ಹಾಂಗ ಅಲ್ಲದಿದ್ದರೂ ಬೇರೆ ತರದವರು. ಒಂದು ಲೆಕ್ಕದಲ್ಲಿ ಕಲ್ಲಹಾಕೋರು. ಒಂದಕ್ಕ ಹತ್ತತ್ತು ಮಾಡೋರು. ಯಾವನರ ಒಬ್ಬ ಹೊಸದು ಸ್ಟಾರ್ಟ ಮಾಡಿದನಿಲ್ಲ, ಅವನ ಗಳಿಕೆ ಛಲೋ ಕಾಣಿಸ್ತೋ ಮುಗದು ಹೋತು ಹೊತ್ತ ಏರದ್ರಾಗ ದುಬುದುಬು ಅಂತ ಎಬಿಸಿರತಾರ. ಹೀಗಾಗಿ ಪುಟ್ಟ ಊರಾದ ನಮ್ಮ ಮಸ್ಕಿಯಾಗ ಹದಿನೈದಕ್ಕೂ ಹೆಚ್ಚೂ ಸಹಕಾರಿ ಬ್ಯಾಂಕಗಳೂ, ಮೂವತ್ತಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳೂ, ಅರ್ಧ ಜಿಲ್ಲೆಗೆ ಸಪ್ಲೈ ಮಾಡೋ ಹೋಲ ಸೇಲ್ ಹತ್ತಾರು ತರಾವರಿ ಅಂಗಡಿಗಳು. ಅದು ಬಿಡಿ ನಾಲ್ಕೂ ಸಾವಿರ ಇರೋ ವಸತಿ ಹೊಂದಿರುವ ಕುಟುಂಬ ಇರೋ ಊರಲ್ಲಿ ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಪ್ಲಾಟಗಳು ಎಷ್ಟು ತಲೆ ಎತ್ತಬೇಕು? ಬರೋಬ್ಬರಿ ನಾಲ್ಕೂ ಸಾವಿರಕ್ಕೂ ಅಧಿಕ. ಇನ್ನೂ ಎನ್.ಎ ಮಾಡಿಸೋ ಪ್ರಕ್ರಿಯೆ ನಡಿತಾ ಇದೆ. ಬಾಂಬೆ ಮಾರ್ಕೆಟ್ ಬಿದ್ದಿದ್ದರೂ, ಷೇರು ಮಾರ್ಕೆಟ್ ಎಕ್ಕುಟ್ಟಿ ಹೋಗಿದ್ರೂ ಮಸ್ಕಿಯ ರಿಯಲ್ ಎಸ್ಟೇಟ್ ಮಾರ್ಕೆಟ್ ಏರತಾನೆ ಇದೆ. ಬೆಂಗಳೂರಿನ ಸಾಕ್ವಾಯರ್ ಫೀಟ್ ರೇಟ್ ಯಾವೂದೆ ಸೌಲಭ್ಯವಿರದ ನಮ್ಮೂರಲ್ಲಿ ಇದೆ.

ಇರಲಿ ವಿಷಯಕ್ಕೆ ಬರತೇನೆ. ನಾನು ಬಾಳ ಕಡೇ ನೋಡಿನಿ, ನೀವು ಕೂಡಾ ಅನುಭವಿಸಿರತಿರಿ. ಯಾವುದೋ ಊರಿಗೆ ಹೋಗಿರತೀರಿ. ಹಸಿವು ಆಗಿರುತ್ತೆ ಅಥವಾ ತಲೆ ಸುತ್ತುತ್ತಿರುತ್ತೆ, ಅಂದಾಗ ಸಹಜವಾಗಿ ಏನಾದರೂ ತಿನ್ನಬೇಕು, ಕುಡಿಬೇಕು ಅನಿಸುತ್ತೆ. ನಾನು ಹೀಗೆ ಅನಕೊಂಡಾಗಲೆಲ್ಲ ಅರ್ಧ ಕಿ.ಮಿ ಅಥವಾ ಮುಕ್ಕಾಲು ಕಿ.ಮೀ ತನ ಒಂದರ ಹೋಟಲು, ದರ್ಶಿನಿಗಳೊ ಸಿಕ್ಕರ ಕೇಳಿ. ಇದು ನಗರ ಪಟ್ಟಣಗಳಲ್ಲಿ ನಾನು ಅನುಭವಿಸಿದ್ದು ನೀವು ಅನುಭವಿಸಿರಬಹುದು. ನನಗೆ ಆಗ ಅನಿಸಿದ್ದು ಇದು ಬಾಳ್ವೆಸ್ಥರ ಊರು. ಬಾಳ್ವೆಸ್ಥರ ಊರಲ್ಲಿ ಹೋಟಲ್‍ಗಳು ಕಡಿಮೆಯೇ. ಬಾಳ್ವಸ್ಥರಿಲ್ಲದ ಊರಲ್ಲಿ ಹೋಟಲ್, ಬಾರು ಬಹಳ ಅಂತನೇ ಅರ್ಥ. ನನ್ನ ಗ್ರಹಿಕೆ ಮೇಲೆ ನಿಮ್ಮ ನಿಮ್ಮ ಊರು ಯಾವ ಲೆಕ್ಕದಲ್ಲಿ ಬರುತ್ತಂತ ಊಹಿಸಿಕೊಳ್ರಿ. ಆದರ ನಮ್ಮೂರಿಂದು ಸುದ್ದಿ ಹಾಂಗಿಲ್ಲ ಬಿಡ್ರಿ. ಡೆಡ್ ಅಪೊಜಿಟ್ಟು. ಮುಗ್ಗಲಗೇಡಿ ಹೆಣ್ಣಮಕ್ಕಳಿದ್ರ ಅಂತವರಿಗೆ ಹೇಳಿ ಹಾಸಿ ಕೊಟ್ಟಂಗದ ಊರು. ಎಲ್ಲಿ ದವಾಖಾನಿಗಳು ಬಾಳವಂದ್ರ ಅಲ್ಲಿ ರೋಗಿಗಳು ಹೆಚ್ಚಾರ, ಎಲ್ಲಿ ಸ್ಟೇಶನ್ ದೊಡ್ಡವವ ಅಂದ್ರ ಅಲ್ಲಿ ಕಳ್ಳಕಾಕರು ಜಾಸ್ತಿ ಇರತಾರ, ಎಲ್ಲಿ ಕುಡಿಯುವರು ಜಾಸ್ತಿ ಇದ್ದಾರ ಅಂದ್ರ ಅಲ್ಲಿ ಕುಡಿಯುವ ವಸ್ತುಗಳು ಯಥೇಚ್ಛವಾಗಿ ಇರತಾವ, ಎಲ್ಲಿ ಬಾಯಿ ಬಂದಂಗ ರೇಟಿರತಾವಂದ್ರ ಅಲ್ಲಿ ರೊಕ್ಕ ಇರೋರ ಇದ್ದಾರ ಅಂತಾರಲ್ಲ ಹಾಂಗ ನಮ್ಮೂರಾಗ ಹಾದಿಗೊಂದು ಬೀದಿಗೊಂದು ಹೋಟಲ್ಗಳು ಅವ ಅರ್ಥಾಥ್ ಇಲ್ಲಿ ತಿಂಡಿಪೋತರು ಬಾಳ ಇದ್ದಾರ ಅಂತನೇ ಬಿಡಿಸಿ ಹೇಳಬೇಕಾಗಿಲ್ಲ.

ನಾನು ಎಲ್ಲೇಲ್ಲೊ ಅಡ್ಡಾಡಿನಿ ಈ ಪರಿ ಹೋಟಲ್‍ಗಳು ಇದ್ದದ್ದು ನಾನು ಕಾಣೆ. ಬಂಡಿ ಅಂಗಡಿಯಿಂದ ಹಿಡಿದು ಐಷಾರಾಮಿ ಹೋಟಲ್‍ವರಗೂ ಒಂದೊಂದೊ ಡಿಫಿರೆಂಟ್ ಟೇಸ್ಟ ಇರೋ ಹೋಟಲ್‍ಗಳು. ಒಂದು ಬಿಟ್ಟು ಒಂದು ತಗದ್ಹಾಕಂಗ ಇಲ್ಲ. ಜೊತಿಗೆ ಪಾಳಿ ಪ್ರಕಾರ ಟೈಮು ಟು ಟೈಮ ಟೇಸ್ಟನಲ್ಲಿ ಕಾಂಪಿಟೇಷನ್ ಕೊಡೊ ಅಂಗಡಿಗಳು ಬ್ಯಾರೆ. ನಮ್ಮೂರು ಜನಸಂಖ್ಯೆ ಇಪ್ಪತ್ತು ಸಾವಿರ ಇರಬೇಕು ಹೋಟಲ್ ಖಾನಾವಳಿ ಲೆಕ್ಕನ ಇಲ್ಲ. ಸಂಧಿ ಸಂದ್ಯಾಗ, ಓಣಿ ಓಣ್ಯಾಗ, ರೋಡ್ ರೋಡಿನ್ಯಾಗ ಅತೃಪ್ತ ಆತ್ಮವನ್ನು ತಣಿಸುವ ತಾಣಗಳು ಇವು ಆಗ್ಯಾವ.

ನಾನು ಮೊದಲ ಹೇಳಿದ ಹಾಗೆ ಬೆಳಗಿನ ಆರಂಭನ ಹೊಟಲ್ ತೆಗೆಯುವುದನ್ನು ಕಾಯೋದು ಹಲವು ಜನರ ಕಾಯಕ. ನಮ್ಮದು ರಾಜ್ಯ ಹೆದ್ದಾರಿಯಾಗಿರುವುದರಿಂದ ಬೆಂಗಳೂರು ಬಸ್ಸುಗಳ ಓಡಾಟ ಜೋರಾಗಿರುವುದರಿಂದ ಪೋಲಿಸರು ರಾತ್ರಿ 10ಕ್ಕೆ ಒತ್ತಾಯ ಪೂರ್ವಕ ಬಂದ ಮಾಡಿಸಿದ್ರೂ ಬೆಳಿಗ್ಗೆ 3ಕ್ಕೆ ಶೆಡ್ಡ ಹೊಡೆಯೊರಂಗ ಬಸ್ ಸ್ಟ್ಯಾಂಡಿನ ಸರಹದ್ದಿನ ಹೋಟೆಲ್‍ಗಳು ತೆಗೆದಿರುತಾವ. ಅಲ್ಲಿಂದಲೇ ಹೊಟೆಲ್ ಗಳ ಪರ್ವ ಆರಂಭ. ಈ ಮಂದಿ ಗಳಿಕೆ ಹುಚ್ಚಿನ್ಯಾಗ ನಿದ್ದೇರ ಮಾಡಿರತಾವ ಇಲ್ಲವೋ, ನೀರು ಬಾರದ ಆ ಹೊತ್ತಿನ್ಯಾಗ ಎಲ್ಲಿಂದ ನೀರು ತುಂಬಿರತಾರೋ ಇಡ್ಲಿ ಒಡಾ, ಪಲಾವ್ ಪೂರಿ ತಯಾರಿಸೋ ಕಾಯಕ ಸ್ಟಾರ್ಟ ಆಗಿರತಾದ. ‘ಏನ್ರಿ ಆ ಟೈಮಿನ್ಯಾಗ ಯಾರ ತಿಂತಾರ!’ ಅಂತ ಕೇಳಬಹದು. ನಮ್ಮೂರಿನ ಮಾರ್ಗವಾಗಿ ಸುಮಾರು ಕ್ರೂಸರ್‍ಳು ನಿತ್ಯ ಬೆಂಗಳೂರಿಗೆ ಗುಳೆಗೆ ಹಳ್ಳಿಗರನ್ನು ಕರಕೊಂಡು ಹೋಗತಾವ ಅದೇ ಪ್ರಮಾಣದಾಗ ಕರಕೊಂಡು ಬರತಾವ. ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರ ಅಂತ ಗಾಂಧಿ ಹೇಳಿದ್ರು ಆದರೆ ನಗರಗಳ ಕೆಳಹಂತದ ಕಾರ್ಯಗಳ ಕೆಲಸದಿಂದಾಗಿ ನಗರಗಳೆ ಹಳ್ಳಿಗರಿಂದ ಉದ್ಧಾರವಾಗ್ತಿವೆ. ಆದರೆ ಅವರ ಬದುಕು ಅಂಧಕಾರದಲ್ಲಿ ಮುಳಗತಾನೆ ಇದೆ. ಬೆಳಿಗ್ಗೆ ಬಂದವರು ಒಂದು ಜಗ್ಗು ನೀರಿನ್ಯಾಗ ಎಲ್ಲಾ ಕ್ರಿಯೆ ಮುಗಿಸಿದ್ರನ ಚಾ ಹೀರಕ್ಕ ಕೆಲವರು ನಾಷ್ಟ ಮಾಡಾಕ ಸುರು ಹಚ್ಚಿಗೊಂತಾರ. ಹಾಗಾಗಿ ಅವಗಿನಿಂದನ ಕಾರ್ಯ ನಡೆದಿರುತಾದ. ಮತ್ತೇ ಪರ ಊರಿಗೆ ಹೋಗೊರ ಸರತಿ.

hotelಹೊರಗಿನಿಂದ ಬಂದವರ ಸುದ್ಯಾತು. ಇನ್ನೂ ಈ ಊರ ಮಂದಿ ಸುದ್ದಿ. ಮೊದಲ ಹೇಳಿದಾಂಗ ನಮ್ಮೂರಲ್ಲಿ ನಾನಾ ನಮೂನಿ ಹೋಟೆಲ್‍ಗಳು ಅವ. ಒಂದು ನೂರ ಮೀಟರ್ ವ್ಯಾಪ್ತ್ಯಾಗ ಎಷ್ಟಿರಬೇಕು ಊಹಿಸಿಕೊಳ್ಳಿ! ಬರೋಬ್ಬರಿ ನಲವತ್ತಕ್ಕಿಂತ ಹೆಚ್ಚಿಗೆ ನೋಡಾಕ ಸಿಗತಾವ. ಮೇನ್ ರೋಡ್ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಹೋಟೆಲ್‍ಗಳು ಸೆಡ್ಡು ಹೊಡದು ನಿಂತುಗೊಂಡಾವ. ಒಂದರಕ್ಕಿಂತಲೂ ಒಂದು ಡಿಫಿರೆಂಟ್ ಟೇಸ್ಟು ವೆರ್ಯಾಟಿದು. ಬೆಳಿಗ್ಗೆ ತಿಟೆ ತೀರಸಾಕ ಬಸ್ಟ ಸ್ಟ್ಯಾಂಡಿನ ಫಾಸ್ಟ ಫುಡ್‍ಗಳು, ಬೀರಲಿಂಗೇಶ್ವರ ಹೊಟೆಲ್ಲು, ಚನ್ನಳ್ಳಿ ಹೊಟೆಲ್, ನ್ಯೂ ಶಾಂತಿಸಾಗರು, ಮಾನ್ವಿರೇ ಹೋಟಲ್, ದೈವದ ಕಟ್ಟಿ ಹತ್ತಿರ ಬುಷಪ್ಪನ ಹೊಟೆಲ್, ಸಂತಿಬಜಾರದ ಒಂದೆರಡು ಹೋಟೆಲಗಳು, ಗಾಂಧಿಚೌಕು, ಹೊಸಬಸ್ ಸ್ಟಾಂಡಿನ ಬಂಡಿಹೋಟಲ್…………. ಪಟ್ಟಿ ಮಾಡಾಕ ದಮ್ಮ ಹತ್ತುವಷ್ಟು! ಹಿಂಗ ಓಣಿ ಓಣಿಗೂ ಒಂದೊಂದು ಸ್ಪೇಷಲ್ಲ ಹೋಟಲ ಅವಾ ಅವ. ಅದರಲ್ಲಿ ಚೆನ್ನಳ್ಳಿ ಹೋಟೆಲಂದು ಸ್ಪೇಷಲ್ ಚಪಾತಿ, ಐದಾರು ಮಂದಿ ಕೂಡಾ ತಟ್ಟಿ ಹೋಟಲ್‍ನ್ಯಾಗ ಕುರುಕುರು ಅನ್ನೊ ಚಪಾತಿ ಜೊತೆ, ಹಾಲು ಹಾಕಿ ಮಾಡಿರೋ ಉಳ್ಳಾಗಡ್ಡಿ ಪಲ್ಯಾ ಚಪಾತಿನ ಸರತಿ ಸಾಲಿನ್ಯಾಗ ನಿಂತು ತಿಂತಿರತಾರ, ಇದಾ ಹೋಟೆಲ್‍ನ ಒಗ್ಗರಣಿ, ಸಂಜೆ ಚೂಡಾನೂ ಡಿಫಿರೆಂಟು., ಓಣಿಯಲ್ಲಿರೋ, ಒಂದೊಂದು ಹೊಟೆಲ್‍ನಲ್ಲೂ ಡಿಫಿರೆಂಟ ವೆರ್ಯಾಟಿ ಟೇಸ್ಟು. ಮಧ್ಯಾಹ್ನ ತೆರೆಯೊ ಹೋಟಲಗಳು ಬ್ಯಾರೆ. ಪೆಟ್ರೋಲ ಬಂಕ್ ಹತ್ತಿರದ ಮಾನ್ವಿರೇ ಹೋಟೆಲ್ಗಳು, ಕೆಂಬಾವಿ, ಏಳಭಾವ್ಯಾರ ಹೋಟೆಲ್ಗಳು. ಅಲ್ಲಿ ಇಡ್ಲಿ, ವಡಾ, ಪಲಾವ್, ಪೂರಿ ದೋಸೆ, ಒಗ್ಗರಣಿ, ಮಿರ್ಚಿ, ಬೊಂಡಾ ಮೊದಲಾದ ವೆರೆಟಿ ತಿಂಡಿಗಳ ಸವಿಗೆ ಜನ ಮನೆಮರತು ಮುಗ್ಗಲ ಬಿದ್ದಿರತಾರ. ಇನ್ನೂ ಸಂಜೆಯಲ್ಲಿ ಸ್ಟಾರ್ಟ ಆಗೋ ಹೋಟಲ್ ಗಳ ಬ್ಯಾರೆ, ಏಳು ಭಾವಿ ಹೋಟೆಲ್ ಅಂತಿದೆ ಆರೇಳ ಜನ ಅಣ್ಣ ತಮ್ಮಂದಿರು, ಆರೇಳು ಕಡೆ ಹೊಟೆಲ್ ಮಾಡಿದ್ದಾರೆ. ಎರಡು ಮೂರು ಬ್ರಾಂಚಿವೆ. ಅವರ ಖಾರ ಬಲು ಫೇಮಸ್. ಸೇವು, ಡಾಣಿ ಅಂತೇನು ಕರಿತಿವಲ್ಲ ಸವಣೂರ ಹುಬ್ಬಳ್ಳಿ ಖಾರನ ಸೈಡ್ ಹೊಡಿಬೇಕು.

ಆ ನಮೂನಿ ಈ ಹುಡಗರು ಮಾಡ್ತಾವ. ನಾಲ್ಕು ತಾಸಿನ್ಯಾಗ ಪುಟ್ಟಿಗಟ್ಟಲೇ ಮಾಡಿದ ಖಾರ ಖಲಾಸ್. ಅಷ್ಟು ಹವರು ಬಾಯಲ್ಲಿ ಇಟ್ಟುಕೊಂಡರೆ ಕರಗವಂತಹವುದು. ಒಂದು ಪ್ಲೇಟು ಖಾರ ತಿನ್ನಬೇಕೆನ್ನುವವರಿಗೆ ಇನ್ನೊಂದು ತಿಂದು ಹೋಗಲೇಬೇಕು ಅ ನಮೂನಿ ಇರುತ್ತೆ ಅದರ ರುಚಿ. ತಟ್ಟಿ ಹೋಟಲ್ ನೋಡೋಕೆ ಅಸಹ್ಯ ಆದರ ಸಾಹಿತ್ಯಿಕ-ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಬರುವ ಎಲ್ಲರನ್ನೂ ಇಂತಹ ಕಡೆ ಮೊದಲೆ ಎಚ್ಚರಿಸಿ ಕರದುಕೊಂಡು ಹೋಗ್ತೇವೆ. ಅವರು ಆ ಟೇಸ್ಟಗೆ ಫಿದಾ ಆಗಿದ್ದಂತೂ ಸುಳ್ಳಲ್ಲ. ಇನ್ನೂ ಆ ಖಾರಕ್ಕೆ ಸಾಂಬರ್ ಮಾಡಿರತಾರೆ ಅದನ್ನು ಸೇವಿಸುವ ಟೇಸ್ಟೆ ಬೇರೆ. ಇವುಗಳ ಟೇಸ್ಟಿಗೆ ರಂಗು ತರುವವು ಈ ಕರಿದ ಮೆಣಸಿನ ಕಾಯಿ, ಉಳ್ಳಾಗಡ್ಡಿ. ಮಾನವಿರೇ ಹೊಟಲ್ ಇದೆ ಅಲ್ಲಿಯ ಚುಡಾಸ್ಪೇಷಲ್ಲ ಬ್ಯಾರೆ. ಒಣ ಮಂಡಾಳನ್ನೆ ಎಣ್ಣಿಯಲ್ಲಿ ಕರದು ಚುಡುವಾ ಮಾಡಿರತಾರೆ. ಅದನ್ನು ತಿಂದು ಅನುಭವಿಸಲೇಬೇಕು. ಅಲ್ಲಿ ಮಾಡೋ ಗಿರಮಿಟ್ಟು ಸ್ಪೇಷಲ್ಲಾಗಿಯೇ ಇರುತ್ತದೆ. ಅಲ್ಲೆ ಪಕ್ಕದಲ್ಲಿರೋ ಡಾಗ್ ಎಂದು ಕರೆಯಲ್ಪಡುವ ನಾಗರಾಜನ ಹೋಟಲ್ನಲ್ಲಿ ಸಿಗೋ ಸ್ಪೇಷಲ್ ಚುಡಾನ ಬೇರೆ. ಇನ್ನೂ ಪೆಟ್ರೋಲ್ ಪಂಪ್ ದಾಟಿದ ಮೇಲೆ ಹೋಟಲ್ ಒಂದಿದೆ. ಎಗ್ ಬೊಂಡಾ ಜೊತೆಗೆ ಎಗ್ ಹಾಕಿ ಒಗ್ಗರಣಿ ಮಾಡ್ತಾನಂತ. ಅಲ್ಲಿಯೂ ದೊಡ್ಡ ಕ್ಯೂ ಇರುತ್ತೆ. ಮತ್ತೊಂದೆಡೆ ತತ್ತಿ ಹಾಕಿನ ಗಿರಮಿಟಾ ಮಾಡ್ತಾರಂತ. ಇಷ್ಟೊತನ ಉದಾಹರಿಸದೆಲ್ಲ ಕ್ಲಾಸ ಥರ್ಡನಲ್ಲಿ ಸೇರುವ ಹೋಟಲಗಳೆ. ಆದರ ಅವರ ಗಳಿಕೆ ಮಾತ್ರ ಕ್ಲಾಸ್ ಒನ್. ಇನ್ನೂ ನಮ್ಮ ಸುತ್ತಮುತ್ತಲಿನ ನಗರಗಳಲ್ಲಿ ಹೋಲಿಸಿದಾಗ ರೊಕ್ಕ ಕೊಟ್ಟರು ಟೇಸ್ಟ ಇರದ ತಿಂಡಿ ತಿಂದ ಬಂದಿದ್ದ ಹೆಚ್ಚು. ನಮ್ಮೂರಲ್ಲಿ ಹಾಗೇನಿಲ್ಲ. ಕೊಟ್ಟದ್ದು ತುಸು ಹೆಚ್ಚಾಗಬಹುದು ರುಚಿಯಲ್ಲಿ ನೋ ಕಂಪ್ರಾಮೈಜ. ಅಷ್ಟು ರುಚಿಕಟ್ಟಾಗಿರುತ್ತೆ.

ಮಯೂರ ಅಂತ ಹೋಟಲಿದೆ. ಯಾವುದೆ ಹೋಟಲು ನಗರಗಳಲ್ಲಿ ಇಷ್ಟು ವರ್ಷ ನಡೆದಿದೆಯೋ ಇಲ್ಲವೊ ಗೊತ್ತಿಲ್ಲ. ಸುಮಾರು ಮೂವತ್ತೈದು ವರ್ಷಗಳಿಂದಲೂ ಅದೇ ರೆಂಜನಲ್ಲಿ ನಡಿತಾ ಇದೆ. ಇನ್ನೂ ಕೀರ್ತಿ ಸಾಗರು ಶಾಂತಿ ಸಾಗರು ಅಂತ ಏನೇನೋ ಹೆಸರಿನ ದರ್ಶಿನಿಗಳು ಇವೆ. ಅಸ್ತಿತ್ವ ಉಳಿಸಿಕೊಂಡಿವೆ. ಜಾಸ್ತಿ ದುಡ್ಡು ಹೀರುವ, ರುಚಿಕಟ್ಟಾಗಿ ಮಾಡದ ಹೋಟೆಲಗಳು ಎಲ್ಲಾ ಕಾಲಕಾಲಕ್ಕೆ ಕಾಲ್ಕಿತ್ತಿವೆ. ಖಾನಾವಳಿಗಳು ನಿಜಕ್ಕೂ ಉತ್ತಮವಾಗಿವೆ. ನಾನು ಕೆಲಕಾಲ ಆಡಳಿತಾತ್ಮಕ ಹುದ್ದೆಯಲ್ಲಿದ್ದಾಗ ಶಿಕ್ಷಕರಿಗೆ ತರಬೇತಿ ಸಂಘಟಿಸಬೇಕಿತ್ತು. ಊರಲ್ಲಿ ಹತ್ತೆಂಟು ಖಾನಾವಳಿಗಳು ಇದ್ದರೂ ಒಬ್ಬರೂ ಕೂಡಾ ತರಬೇತಿ ನಡೆಯುವಲ್ಲಿ ಬಂದು ಊಟಾ ಸರ್ವ ಮಾಡುವಷ್ಟು ಆಸಕ್ತಿ ತೋರುತ್ತಿರಲಿಲ್ಲ. ಅಪದ್ಭಾಂದವನಾಗಿ ಸಿಕ್ಕವರು ವೀರೇಶ್ವರ ಖಾನಾವಳಿ ಎಂತಿದೆ. ತರಬೇತಿಗೆ ಬಂದವರು ಎಂತಹ ಊಟಾ ಅನ್ನುವಷ್ಟು ಮಟ್ಟಿಗೆ ಆತ ಸಹನೆಯಿಂದ ಕೊಡತಾ ಇದ್ದ. ಡಯಟನವರು ನಮ್ಮಲ್ಲಿ ತರಬೇತಿಯೊಂದನ್ನು ಸಂಘಟಿಸಿದಾಗ ಅಲ್ಲಿಯ ಊಟದ ಉಸ್ತುವಾರಿಯನ್ನು ಇವರಿಗೆ ವಹಿಸಲಾಗಿತ್ತು. ಇಡಿ ಜಿಲ್ಲೆಯ ಶಿಕ್ಷಕರೆಲ್ಲ ಅವನ ಊಟದ ಜೊತೆಗೆ ಡಯಟ್‍ನ ಘನತೆಯನ್ನು ಹೆಚ್ಚಿಸುವಂತೆ ಮಾಡಿದ್ದ. ಅವನು ಮಾಡಿದ ಹೋಳಿಗೆ ಮೆಚ್ಚಿದ ತರಬೇತಿ ನೋಡಲ್ ಅಧಿಕಾರಿಗಳು ರಾಯಚೂರಿಗೆ 20ಪೀಸ್ ಪಾರ್ಸಲ್ ಒಯ್ದಿದ್ದರು. ಲೆಕ್ಕ ಹಾಕಿ. ಖಾನಾವಳಿಗಳೂ ಪಾಪ ಎಂದು ಹಸಿದು ರೊಕ್ಕ ಹಿಡಿದು ಬಂದವರಿಗೆ ಮೋಸ ಮಾಡಿಲ್ಲ. ಇನ್ನೂ ಡಾಬಾಗಳು ಇವೆ ಅಲ್ಲಿ ಎಲ್ಲಾರೂ ಹೋಗಾಕ ಆಗುವುದಿಲ್ಲವಲ್ಲ.

ಸಾಮ್ರಾಟ ಹೋಟೆಲ ಅಂತಿದೆ. ನಾರ್ಥ ಇಂಡಿಯನ್ ಡಿಶ್. ನನಗೂ ಅರಂಭವಾದ ಮೊದಲ ಅಪಸ್ವರ ಇತ್ತು. ಮುಚ್ಚಿಹೋಗುತ್ತೆ ಅಂತ ಬಾವಿಸಿದ್ರು. ಈಗ ಎಲ್ಲಾ ವರ್ಗದ ತಿಂಡಿಪೋತರ ಆಶ್ರಯ ತಾಣ ಆಗಿದೆ. ನಾನು ಒಮ್ಮೆ ಹೋಗಿ ಮೋಹಕ್ಕೆ ಬಿದ್ದು ಹತ್ತೆಂಟು ಸಲ ಹೋಗುವಂತಾಗಿದೆ. ಅಂತಹ ಟೇಸ್ಟು! ಸ್ಪೇಶಲ್ ಗೆಸ್ಟ ಬಂದಾಗ ಮರ್ಯಾದೆ ಉಳಿಸುವÀ ತಾಣ. ವೆಡ್ಡಿಂಗ ಆನಿವರ್ಸರಿ, ಬರ್ತಡೆ ಇದ್ದಾಗ ಅನಕೂಲಸ್ಥ ಫ್ಯಾಮಿಲಿಗಳು ವಾರಕ್ಕೆ ಹದಿನೈದು ದಿನಕ್ಕೆ ‘ಫಾರ್ ಎ ಚೆಂಜ್’ ಎನ್ನುವಂತೆ ಸಕುಟುಂಬ ಪರಿವಾರ ಸಮೇತ ಹೋಗ್ತಾವೆ. ಮೊನ್ನೆ ನೋಡಿದೆ ನನಗೆ ಗೊತ್ತಿರುವ ಕುಟುಂಬ ವಾರಕ್ಕೆ ಎಂಟು ನೂರೊ ಸಾವಿರೋ ದುಡಿತಿರಬಹುದು. ಅವರು ಈ ಹೋಟಲ್ ಗೆ ಬಂದು ತಿಂದು ದುಡಿದಿದ್ದನ್ನಲ್ಲ ಕಕ್ಕಿ ಹೋದರು. ಅಂತಹ ಕೇಸುಗಳು ಬಾಳ ಅವ. ತಿಂಡಿಗಾಗಿ ಇಂತಹ ಹೋಟಲ್ ಗಳಿಗೆ ಕಕ್ಕಿದರ ಬದುಕು ಗಟ್ಟಿ ಆಗಬಹುದಾದರೂ ಹ್ಯಾಂಗ ಹೇಳಿ. ಸ್ಕೂಲಿಗೆ ಭೇಟಿಗಾಗಿ ಆಗಮಿಸಿದ್ದ ಅಧಿಕಾರಿಗಳು ಹೆಚ್ಚಾಗಿ ಬಿಸಿ ಊಟನೇ ಸ್ವೀಕರಿಸುತ್ತಿದ್ರು. ಒಮ್ಮೆ ಫಾರ್ ಎ ಚೆಂಜ್ ಅಂತ ಈ ಹೋಟೆಲ್ಗೆ ಕರೆದೊಯ್ದಿದ್ದೆ ತಪ್ಪಾಗಿದೆ. ಮಸ್ಕಿ ಬಂದಾಗ ನನಗ ಫೋನ ಹಾಯಿಸ್ತಾರೆ. ಬಿಸಿ ಊಟ ಏನು ಮಾಡೋದ್ರಿ ಅದೆ ಸಾಮ್ರಾಟ ಗೆ ಹೋಗಾಣ ಅಂತಾರೆ. ಯಾರನ್ನೂ ಬಯ್ಯಲಿ ಹೇಳಿ.

nataಇನ್ನೂ ಸಂಜೆಯಲ್ಲಿ ಹುಟ್ಟುವ ಬಂಡಿಗಳಿಗೇನು ಕಮ್ಮಿ ಇಲ್ಲ. ಕಚೋರಿ, ಪಾನಿಪೂರಿ, ಬೇಲ್ ಪೂರಿ ನಮ್ಮೂರಂಗ ಮಾಡೋ ಹಾಂಗ ಯಾವ ಊರಾಗ ಮಾಡಂಗಿಲ್ಲ. ಎಲ್ಲಾ ಕಡೆ ಕಚೋರಿನ ಪುಡಿ ಮಾಡಿ ಅದಕ್ಕೆ ಬ್ಯಾರೆ ಎಂತಹದೋ ಖಾರಪುಡಿ ಮೊಸರು, ಉಳ್ಳಾಗಡ್ಡಿ ಟಮಾಟ, ಯಾವುದೊ ಸಾಸ್ ಹಾಕಿ ಕೊಡತಾರೆ ನಮ್ಮಲ್ಲಿ ಹಾಂಗಿಲ್ಲ. ಅವರು ಏನೇನೋ ತರಕಾರಿ ಇನ್ನಿತರ ಮಿಶ್ರಣ ಹಾಕಿ ಫ್ರೈ ಮಾಡಿಕೊಟ್ಟರ ಕತ್ತರಿಸಿ ತಿನ್ನಬೇಕು. ಐದ ರೂಪಾಯಿಕ್ಕ ಪ್ಲೇಟ ಇದ್ದ ಕಚೋರಿಯನ್ನ ಇಪ್ಪತ್ತು ರೂಪಾಯಿಕ ಏರಿಸ್ಯಾರ ಅಂದ್ರ ಲೆಕ್ಕ ಹಾಕಿ. ದಿನಕ್ಕೆ ನಾಲ್ಕು ಐದು ಸಾವಿರ ಮಾಡಿಕೊಂಡುಹೋಗ್ತಾರೆ. ಇನ್ನೂ ಅಲ್ಲಲ್ಲಿ ಬಜಿ, ಮಿರ್ಚಿ ಹಾಕಿ ಮೂವತ್ತು ನಲವತ್ತು ಕುಟುಂಬಗಳು ಹೊಟ್ಟೆ ಹೊರಿತಾರೆ. ಸಂಜೆಯಾದೊಡನೆ ಊರತುಂಬ ಹತ್ತಾರು ಕಡೆ ನಾನಾ ವೆರೆಟಿ ಬಜಿ, ಮಿರ್ಚಿ ಬದನೆಕಾಯಿ ಬೊಂಡಾ, ಆಲೂಬೊಂಟಾ ತರವರಿ ಮಾಡ್ತಾರೆ ಜಡ್ಡಾದ್ರೂ ಪರ್ವಾಗಿಲ್ಲ ತಿಂದ ಸಾಯಿಬೇಕು ಅನಸದೆ ಇರದು. ರಾತ್ರಿ ಒಂಬತ್ತರವರೆಗೆ ಬಿಡದೆ ಹಾಕ್ತಾರ ಅಂದ್ರ ಲೆಕ್ಕ ಹಾಕ್ರಿ. ಇನ್ನೂ ಹತ್ತರ ತನ ಹಾಕಿದ್ರೂ ಒಯ್ಯರ ಈ ಮಂದಿ. ಚಾ ಕಾಫಿ ವೆರ್ಯಾಟಿ ಇರುವ ಕೇಂದ್ರಗಳಿ ಇವೆ. ಮೂರು ರೂಪಾಯಿಗೂ ಸ್ಪೆಶಲ್ಲ ಟೀ ಸಿಗುತ್ತೆ ಹತ್ತ ರೂಪಾಯಿಗೂ ಸಿಗುತ್ತೆ. ಹೈದ್ರಾಬಾದ ಇರಾನಿ ಟೀ ಅಂತ ಸ್ಟಾರ್ಟ ಮಾಡಿದ ಮೇಲೆ ಹತ್ತಾರು ಇಂಥಹ ಟೀ ಕೆಂದ್ರಗಳು ತಲೆ ಎತ್ತಿವೆ. ಇನ್ನೂ ಬೇಕರಿಗಳನ್ನ ಕೌಂಟಿನಲ್ಲಿ ತೊಂಡಿಲ್ಲಾ ಮತ್ತೆ.

ನಾನು ಗಮನಿಸಿದ ಮಟ್ಟಿಗೆ ನಮ್ಮೂರಲ್ಲಿ ನಾನ್ ವೆಜ್ ಹೊಟಲ್ಗಳು ಕಮ್ಮಿ ಇದ್ದವು. ಒಪನ್ನಾಗಿ ವಿಜಯ ಟಾಕೀಜ ಹತ್ತಿರ ಒಬ್ಬಾತ ತತ್ತಿಯಿಂದ ಮಾಡಿದ ಉತ್ಪನ್ನ ಮಾರತಿದ್ದ. ಬೆರಳಣಿಕೆಯಷ್ಟು ಸಾವಜಿ ಖಾನಾವಳಿಗಳಿದ್ವು. ಈಗ ಮೂವತ್ತು ನಲವತ್ತು ಫುಟ್ ಪಾತ್ ಬಂಡಿಗಳು, ಅದಕ್ಕಿಂತಲೂ ಹೆಚ್ಚು ನಾನ್ವೆಜ್ ಹೋಟೆಲ್‍ಗಳು, ಡಾಬಾಗಳು, ರೆಸ್ಟೋರೆಂಟುಗಳು ಬೇರೆ ಮತ್ತೆ. ಅದರಲ್ಲಿ 15ಕ್ಕಿಂತಲೂ ಹೆಚ್ಚಿನ ಬಾರುಗಳು. ಕಿರಾಣಿ, ಕಾಯಿಪಲ್ಯ ಅಂಗಡಿ ಮುಂಜಾನೆ ಮುಂಜಾನೆ ತೆಗಿತವೋ ಇಲ್ಲೋ ಈ ಬಾರಗಳನ್ನು ಕುಡಿಯೋ ಮಂದಿನ ಹೋಗಿ ಒತ್ತಾಯದಿಂದ ಎಬ್ಬಿಸಿ ತಗಿಸಿ ತಮ್ಮ ಕಾಯಕ ಸುರು ಹಚ್ಚಿಕೊಂಡಿರತಾರ. ಇಷ್ಟೇಲ್ಲ ನಮ್ಮ ಪುಟ್ಟ ಊರಾಗ ಕಾಣ ಸಿಗತಾವ. ನಮ್ಮ ಹಳೆಯ ವಿದ್ಯಾರ್ಥಿಗಳು ಇಂಥ ಬಂಡಿ ಮಾಡಿದ್ದನ್ನು ನೋಡಿ ‘ಅಲ್ಲಪ್ಪ ಇಂತಹ ಎಗ್ ರೈಸು, ನಾನ್ ವೆಜ್ ಪಕೋಡ ಇತ್ಯಾದಿ ಮಾಡುವ ಬಂಡಿಗಳು ನಲವತೈವತ್ತಾದರೂ ಇವೆ. ಇಷ್ಟ ಮಂದಿಗೆ ಗಿಟ್ಟತಾವೇನು?’ ಅಂದಾಗ ‘ಸರ್ ನಮಗ ಗಿರಾಕಿಗಳಿಗೆ ಮಾಡಿ ಮಾಡಿ ಕೊಟ್ಟು ಸಾಕಾಗಿರತ್ತ. ಇನ್ನು ಕಮ್ಮಿ ಬಿದ್ದಾವ’ ಅಂದಾಗ ಮಾತ ಬಾರಲಿಲ್ಲ. ಹೊರಗಿನ ಸುದ್ದಿ ಇದು. ಸಾವಜಿ ಖಾನಾವಳಿಗಳು ಈಗಲೂ ಗತ್ತು ಉಳಿಸಿಕೊಂಡಾವ. ಇತ್ತೀಚಿಗೆ ದಶಕಗಳಿಂದ ಗಡಿಗಿ ಖಾನಾವಳಿ ಅಂತ ಸ್ಟಾರ್ಟ ಆಗ್ಯಾವ. ಅದರಲ್ಲಿ ಗಡಗಿ ರಾಮಣ್ಣ ನ ಖಾನಾವಳಿ ಅಂದ್ರ ಆತನ ಹಿರಿಮೆ ವಿಧಾನಸೌಧದ ವರೆಗೂ ಹೋಗ್ಯಾದ. ರಾಜ್ಯದ ಎಲ್ಲಾ ಮಾಧ್ಯಮಗಳಲ್ಲೂ ಅವನ ಯಶೋಗಾಥೆ ಪ್ರಾಸಾರ ಆಗ್ಯಾದ. ವಿಶೇಷ ಸಂದರ್ಭದಲ್ಲಿ ಬೆಂಗಳೂರಿಗೆ ಬಸ್ಸಿನಲ್ಲಿ ಪಾರ್ಸಲ್ ಆಗತಾವ. ಇಷ್ಟು ವರ್ಷ ಆದ್ರೂ ಆತನ ಖಾನಾವಳಿ ಯಾವುದು ಅಂತ ತಿಳಿದಿರಲಿಲ್ಲ.

ಬಸ್ ನಿಲ್ದಾಣದ ಹತ್ತಿ ಒಂದು ಮಿಡ್ಲಕ್ಲಾಸ್ ಹೋಟೆಲ ಇದೆ. ಅದೇನೊ ನಾನ್-ವೆಜ್ ಐಟಮ್ ಗಳನ್ನ ಗಡಿಗಿಯಲ್ಲಿಯೇ ಮಾಡ್ತಾನಂತ. ಗಡಿಗೆ ಮಾಡೋ ಉದ್ಯಮ ಅಧುನಿಕತೆಯಿಂದ ಯಕ್ಕುಟ್ಟಿ ಹೋಗುತ್ತಿದ್ದರೂ ಇಂತಹವರಿಂದ ಉಳಕೊಂಡದ ಅನಸ್ತಾದ. ಪ್ರತಿ ಸಾರಿಯೂ ಅವ ಮಾಡೋದು ಹೊಸ ಗಡಿಗೆಯಲ್ಲಿಯೆ ಅಂತ. ಟೈಮ ಭಾರಿ ಮೆಂಟೇನ್ ಮಾಡ್ತಾನೆ. ಅವನಿಗೆ ಫೋನ ಮೂಲಕ ಆರ್ಡರ್ ಬರತಾವೆ. ರಾಯಚೂರಿನಲ್ಲಿ ಎಲ್ಲೆ ಹೋಗಲಿ, ನಾನು ಮಸ್ಕಿಯವ ಅಂದೊಡನೆ, ನನ್ನದ್ಯಾಕೆ ಮಸ್ಕಿಯವರಿಗೆ ಹೊರಗಿªನವರು ಯಾರೇ ಭೇಟಿಯಾಗಲಿ ಥಟ್ಟನೆ ‘ಗಡಿಗೆ’ ಭಾರಿ ಇರತಾವಂತಲ್ರಿ ಅಂತ ಕೇಳ್ತಾರ. ಮೊನ್ನೆ ಹಿಂಗ ಆತು ನಾನು ಯಾವುದೋ ಕಾರ್ಯಕ್ರಮದಾಗ ಊಟಕ್ಕ ಕೂತಿದ್ದೆ. ರಾಯಚೂರಿನಿಂದ ಮಸ್ಕಿಗೆ ಬಂದ ಗೆಳೆಯಗ ಅಲ್ಲಿಗೆ ಹೋಗಬೇಕಾಗೇದ. ನನ್ನ ಮಗ ಫೋನ ರೀಸಿವಿ ಮಾಡ್ಯಾನ ಅದರಾಗ ಏನೋ ಒತ್ತಿ ಸ್ಪೀಕರ್ ಆನ್ ಮಾಡ್ಯಾನ. ‘ದೋಸ್ತಾ ಬಸ ಸ್ಟ್ಯಾಂಡಿನ್ಯಾಗ ನಿಂತಿನಿ, ಯಾವುದು ರಾಮಣ್ಣ ಗಡಿಗಿ ಮಟನ್ ಖಾನಾವಳಿ? ಎಲ್ಲವೂಕ್ಕೂ ರಾಮಣ್ಣ ಅಂತ ಬೋರ್ಡ ಹಾಕ್ಯಾವ’ ಅನ್ನಬೇಕೆ! ಶಾಂತ ವಾತಾವರಣದಾಗ ಕೈಊರಿ ಹೊಡಿಯುತ್ತಿದ್ದ ಮಂದಿ ಒಮ್ಮೆಲೆ ನನ್ನತ್ತ ದಿಟ್ಟಿಸಿದ್ರು. ಗುಸುಗುಸು ಮಾತಾಡಕತಿದ್ರು, ಅಷ್ಟ ಯಾಕ ದೂರ ಸರಕಳ್ಳಕತ್ರೂ ನನಗಾದ ಮುಜುಗರ ಅಷ್ಟಿಷ್ಟಲ್ಲ, ಮಸ್ಕಿ ಸುತ್ತಮುತ್ತಲಿನ ಯಾರೇ ಇರಲಿ ಪಾರ್ಟಿ ಮಾಡಬೇಕಾದ್ರ ಮುದ್ದಾಂ ಇಲ್ಲೆ ಬಂದು ಮಾಡ್ತಾರ. ವ್ಯವಹಾರ ಕುದರಬೇಕೆಂದಿದ್ರ ಅಂತಹ ಅಧಿಕಾರಿಗಳನ್ನ ಇಲ್ಲಿ ಕರೆಸಿ ಗಡಿಗಿ ತಿನ್ನಿಸಿಬಿಟ್ರ ಮುಗದು ಹೋತು. ಅವ ನಿಮ್ಮ ಋಣದಾಗ ಬಿದ್ದಾಂಗ.

canes raitaಕಬ್ಬನ್ನು ಬೆಳೆದವರ ಸಮಸ್ಯೆ ಎಲ್ಲರಿಗೂ ಗೊತ್ತಿದ್ದ ಅದ. ಆದರೆ ನಮ್ಮ ಮೇಷ್ಟೊಬ್ಬರು ಇಲ್ಲಿ ಕೂತುಗೊಂಡ ತಮ್ಮೂರಿನ ಕಬ್ಬಿನ ವ್ಯವಹಾರ ಡೀಲ್ ಮಾಡ್ತಾರ. ಮೇಲ್ಗಡೆ ಭಾಗದ ಆ ಊರಿನ ಜನರಿಗೆ ಆಶ್ಚರ್ಯ. ‘ನಮಗ ಎಪ್ಪಾ ಎಣ್ಣಾ ಅಂದ್ರೂ ಬರಲೊಲ್ಲರು. ಇವರಿಗೆ ಫೋನ್ ಮಾಡಿ ಕಬ್ಬನ್ನ ತಾವೇ ಕಟ್ ಮಾಡಿಕೊಂಡು ಬಂದು ಹಾಕ್ತಾರ. ಹ್ಯಾಂಗ?’ ಅಂತ. ನನಗ ಆಶ್ಚರ್ಯ ಆಗಿರಬೇಕಾದ್ರ ಪಾಪ ರೈತರಿಗೆ ಇರದೆ ಇರಕಾಗುತ್ತದೆಯೇ. ನಾನು ‘ಹ್ಯಾಂಗ್ರಿ ಇದು?’ ಅಂದೆ. ‘ಎಲ್ಲಾ ಗಡಗಿ ರಾಮಣ್ಣನ ಮಹಿಮೆ’ ಅಂದ. ‘ಅದು ಹ್ಯಾಂಗ’ ಅಂದೆ. ಒಮ್ಮೆ ಕಾರ್ಖಾನೆ ಮಂದಿ ಪಾರ್ಟಿ ಮಾಡಸು ಅಂದ್ರು ಇಲ್ಲಿಗೆ ಕರಕಂಡು ಬಂದು ಮಾಡಿಸಿದೆ. ಚಟಕ್ಕ ಬಿದ್ರು. ತಿಂಗಳಿಗೆ ಎರಡು ಮೂರು ಬ್ಯಾರೆ ಆ ಊಟ ಬಯಸ್ತಾರ, ನಾನು ಆರ್ಡರ್ ತೊಂಡು ರಾಮಣ್ಣಗ ಹೇಳಿ ಬಸ್‍ನ್ಯಾಗ ಇಟ್ಟ ಕಳಸ್ತಿನಿ. ಪಾಪ ಅವರು ಅಕೌಂಟಗೆ ದುಡ್ಡು ಹಾಕ್ತಾರ. ಹಾಗಾಗಿ ನನ್ನ ಕಬ್ಬಿನ ವ್ಯವಹಾರ ಸಲೀಸು ಆಗ್ಯಾದ. ನಾನು ತಿನ್ನದೆ ಇದ್ದರೂ ವ್ಯವಹಾರ ನಡಸೋ ನನ್ನನ್ನು ನೋಡಿ ರಾಮಣ್ಣ ‘ಮೇಷ್ಟ್ರೇ ನಿಮ್ಮ ಋಣ ಬಾಳ ಅದ. ನೀವು ಎಲ್ಲಿಗೆರ ಹೋಗಬೇಕಾದರ ನನ್ನ ಗಾಡಿಗೆ ಡಿಸೈಲ್ ಹಾಕಿಸಿಕೊಂಡು ಹೋಗ್ರಿ ನನಗ ಪ್ರೈಸೆನು ಕೊಡಬ್ಯಾಡ್ರಿ ಅಂತ ಹೇಳ್ಯಾರೊ’ ಅಂದ್ರು. ಆ ರಾಮಣ್ಣ ಏನು ಮೋಡಿ ಮಾಡ್ಯಾನೋ ಏನು ಗೊತ್ತಿಲ್ಲ ಅಂತಹ ಹವಾ ಹುಟ್ಟಾಕ್ಯಾನ. ಅಂಗಡಿಗೆ ಆತ ಬರಬೇಕಾದ್ರ ಕಾರನ್ಯಾಗ ಬರತಾನ ಮತ್ತ.

ಇಂತಿರ್ಪ ಹೋಟೆಲ್ ಗಳು ನಮ್ಮಲ್ಲಿ ಭರ್ಜರಿಯಾಗಿ ನಡಿತಿರಬೇಕಾದ್ರೆ ಇಂತಹ ಉದ್ಯೋಗ ಮಾಡೋರಿಗೆಲ್ಲ ಬಾಳ್ವಸ್ಥರ ಊರೆ. ನಮ್ಮ ಪಕ್ಕದ ಮನೆಯಲ್ಲಿ ಕುಟುಂಬ ಜಗಳಾಡಿಕೊಂಡ್ರು. ಆಕಿ ಸೆಟಗೊಂಡು ತವರಿಗೆ ಹೋದ್ಲು. ಇವ ಆಕಿ ಬಗ್ಗೆ ಚಿಂತಿ ಮಾಡ್ಲಿಲ್ಲ. ಆ ಹುಡುಗಿ ಅಪ್ಪ ಪಕ್ಕದ ಮನೆಯವರನ್ನಾದರೂ ವಿಚಾರ ಮಾಡಿದ್ರಾತು ಅಂತ ನನಗ ಫೋನ ಹಾಯಿಸಿ ‘ಅವಗ ಸೊಕ್ಕುಮರಿಲಿ ಮಾಡಿಕೊಂಡು ತಿನ್ನಲಿ ಕೈ ಸುಟ್ಟಗೊಂಡ್ರ ಗೊತ್ತಾಗತ್ತಂತ ಮಗಳನ್ನ ಮನಿಲಿ ಕೂಡಿಸಿಕೊಂಡು ಕೂತಿನಿ ಅವನ ಹಕಿಕತ್ತ ಗೊತ್ತಾಗವಲ್ತಲ್ಲ. ನಿಮ್ಮ ಮುಂದ ಏನಾದರೂ ಹೇಳ್ಯಾನನೂ…..? ಊಟ ತಿಂಡಿಗೆ ಹ್ಯಾಂಗ ಮಾಡಿಕೊಂತಾನ ಸೊಕ್ಕ ಮುರದಾದನೂ’ ಅಂತ ಕೇಳಿದ್ರು. ನಾನು ‘ಅವ ಗುಂಡುಗುಂಡಗೆ ಇದ್ದಾನ. ಊರಾಗ ಮೂರು ಒಪ್ಪೊತ್ತು ಸ್ವಾದಿಷ್ಟಕರವಾಗಿ ತನುವನ್ನು ತೃಪ್ತಿಪಡಿಸೋ ಹೋಟಲ್ ಖಾನಾವಳಿ ಅವ. ಬ್ಯಾರೆ ಊರಾಗಿದ್ರ ಹ್ಯಾಂಗಿತ್ತನೂ. ಅವನ ತಿಂಡಿ ಮುರುಕೊಳ್ಳುವಂಗ ಅನಿಸಿತ್ತಪ ಅಂದ್ರ ಇಲ್ಲೆ ಇದ್ದು ಮುರುಕೋಬೇಕು. ಶಟಗೊಂಡು ಹೋಗಿ ಅಲ್ಲಾ’ ಎಂದಾಗ ಪಾಪ ಹೌಹಾರಿ ಮರುದಿನನ ಮಗಳೊಂದಿಗೆ ಪ್ರತ್ಯಕ್ಷನಾಗಿದ್ದ ಆ ಮಾವ. ಖರೆ ಅದ ನನ್ನನ್ನು ಹಿಡಕೊಂಡು ಎಲ್ಲರೂ ಮನೆಯಲ್ಲಿ ಇದನ್ನ ಕಾಯ್ತಿರತಿವಿ. ಎಲ್ಲಿಗಾದ್ರೂ ಊರಿಗೆ ಹೋಗ್ತಿನಿ ಅಂದ್ರ ಮನೆಮಂದಿನ್ನ ಸಂತೋಷದಿಂದ ಬೀಳ್ಕೊಡತಿವಿ.

Leave a Reply

Your email address will not be published.