ನಕ್ಸಲ್ಬರಿ- ಒಂದು ಮುಗಿಯದ ಇತಿಹಾಸ

 ಅನು: ಶಿವಸುಂದರ್

ಭಾರತೀಯ ಬಂಡವಾಳದ ಅತಾರ್ಕಿಕತೆ, ಬರ್ಬರತೆ ಮತ್ತು ಅಮಾನವೀಯತೆಗಳ ಮೇಲೆ ವಿಶ್ವಾಸ, ಪ್ರೀತಿ ಮತು ಭರವಸೆಗಳು ವಿಜಯ ಸಾಧಿಸಬಲ್ಲದೇ?

ಬರ್ನಾಡ್  ಡಿಮೆಲ್ಲೋ ಬರೆಯುತ್ತಾರೆ:

೧೯೪೭ರಲ್ಲಿ ಭಾರತದ ಆಳುವ ವರ್ಗಗಳಿಗೆ ಅಧಿಕಾರ ವರ್ಗಾವಣೆಯಾಯಿತು. ಆದರೆ ಆ ನಂತರ,  ಅತಿ ಸ್ವಲ್ಪ ಸಮಯದಲ್ಲೇ ಭಾರತದ ಹೊಸ ಆಳುವ ವರ್ಗ ೧೯೪೮ರಲ್ಲಿ ತೆಲಂಗಾಣಕ್ಕೆ ಸೈನ್ಯವನ್ನು ಕಳಿಸಿ ತನ್ನ ನಿಜಬಣ್ಣವನ್ನು ಬಯಲುಮಾಡಿಕೊಂಡಿತು. ಹೊಸ ಸರ್ಕಾರದ  ಈ ಸೈನಿಕ ಕಾರ್ಯಾಚರಣೆಗೆ ಇತರ ಉದ್ದೇಶಗಳಿದ್ದವಾದರೂ, ಅದರ ಪ್ರಮುಖವಾದ ಉದ್ದೇಶ ತೆಲಂಗಾಣದಲ್ಲಿ ಅಸ್ಥಿತ್ವದಲ್ಲಿದ್ದ ಅರೆ ಊಳಿಗಮಾನ್ಯತೆಯ ವಿರುದ್ಧದ ಪ್ರಜಾತಾಂತ್ರಿಕ ಕ್ರಾಂತಿಯನ್ನು ಪೂರ್ಣಗೊಳಿಸಬೇಕೆಂದು ಪಣತೊಟ್ಟಿದ್ದ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ರೈತ ಬಂಡಾಯಗಾರರನ್ನು ಮಟ್ಟ ಹಾಕುವುದೇ ಆಗಿತ್ತು. ವಾಸ್ತವವಾಗಿ ಭಾರತೀಯ ಸೈನ್ಯವು ತೆಲಂಗಾಣದ ಗ್ರಾಮೀಣ ಪ್ರದೇಶದಲ್ಲಿ ಅರೆ ಊಳಿಗಮಾನ್ಯತೆಯು ಮತ್ತೆ ನೆಲೆಗೊಳ್ಳಲು ಬೇಕಾದ ಸಕ್ರಿಯ ಸಹಕಾರವನ್ನೆಲ್ಲಾ ನೀಡಿತು. ಅಂದಿನಿಂದಲೂ ಭಾರತದ ಕೋಟ್ಯಾಂತರ ಜನತೆ ಭಾರತೀಯ ಬಂಡವಾಳದ ಅತಾರ್ಕಿಕತೆ, ಬರ್ಬರತೆ ಮತ್ತು ಅಮಾನವೀಯತೆಗಳಿಗೆ ಬಲಿಯಾಗುತ್ತಲೇ ಬಂದಿದ್ದಾರೆ. ಹೀಗಾಗಿ ಕಳೆದ ೫೦ ವರ್ಷಳ ನಕ್ಸಲೈಟರ ಅರ್ಥಾತ್ ಭಾರತೀಯ ಮಾವೋವಾದಿಗಳ ನಡೆಸುತ್ತಿರುವ ನಿರಂತರ ಸಮರ ಭಾರತದ ಈ ದಮನಕಾರಿ ಮತ್ತು ಶೋಷಕ ಸಾಮಾಜಿಕ ವ್ಯವಸ್ಥೆಯನ್ನು ಕ್ರಾಂತಿಕಾರಿಯಾಗಿ ಬದಲಾಯಿಸುವುzಕ್ಕೇ ಆಗಿದೆ. ಹಾಗೂ ಇದರಲ್ಲಿ ಆಶ್ಚರ್ಯವೇನೂ ಇಲ್ಲ.

ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ)ವು ೧೯೬೪ರಲ್ಲಿ ಎರಡಾಗಿ ವಿಭಜನೆಗೊಂಡಿತ್ತು. ಅದರಿಂದ ಹೊರಬಂದ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಎಂ- ನ ಒಳಗಿದ್ದ ಮಾವೋವಾದಿ ಬಣವು ಐವತ್ತು ವರ್ಷಗಳ ಕೆಳಗೆ ಉತ್ತರ ಬಂಗಾಳದ ದುರ್ಗಮ ಪ್ರದೇಶವಾದ ನಕ್ಸಲ್ಬರಿಯಲ್ಲಿ ಒಂದು ಸಶಸ್ತ್ರ ರೈತ ಹೋರಾಟವನ್ನು ಸಂಘಟಿಸಿತು. ಈ ಕಾರಣಕ್ಕೆ ಭಾರತೀಯ ಮಾವೋವಾದಿಗಳಿಗೆ ನಕ್ಸಲೈಟರೆಂಬ ಹೆಸರೂ ಬಂದಿತು. ಅದು ೧೯೬೭ರ ಮಾರ್ಚನಲ್ಲಿ ಪ್ರಾರಂಭವಾದರೂ ಅದೇ ವರ್ಷದ ಜುಲೈ ವೇಳೆಗೆ ಕ್ರೂರವಾಗಿ ದಮನಿಸಲ್ಪಟ್ಟಿತು. ಆ ಸಮಯದಲ್ಲಿ ಆ ಹೋರಾಟಕ್ಕೆ ನಾಯಕತ್ವ ನೀಡಿದ್ದ ಮತ್ತು ನಂತರದಲ್ಲಿ ಇಡೀ ದೇಶದ ನಕ್ಸಲೈಟ್ ಚಳವಳಿಗೆ ಮುನ್ನಡೆಸಿದ ಸಿಪಿಐ (ಮಾರ್ಕ್ಸ್‌ವಾದಿ-ಲೆನಿನ್‌ವಾದಿ) ಪಕ್ಷದ ಕಾರ್ಯದರ್ಶಿಯೂ ಆದ ಚಾರು ಮಜುಂದಾರ್ ಹೀಗೆ ಹೇಳಿದ್ದರು: …ಭಾರತದಲ್ಲಿ ನೂರಾರು ನಕ್ಸಲ್ಬರಿಗಳು ಸಿಡಿದೇಳಲು ಸಿದ್ಧವಾಗಿವೆ…ನಕ್ಸಲ್ಬರಿ ಸತ್ತಿಲ್ಲ..ಸಾಯುವುದೂ ಇಲ್ಲ. ಆ ನಂತರದಲ್ಲಿ ನಡೆದ ಬೆಳವಣಿಗೆಗಳು ಚಾರು ಮಜುಂದಾರ್ ಅವರು ಹಗಲು ಕನಸನ್ನೇನೂ ಕಾಣುತ್ತಿರಲಿಲ್ಲವೆಂಬುದನ್ನು ಸಾಬೀತುಪಡಿಸಿತು. ಏಕೆಂದರೆ ವಸಾಹತು ಕಾಲಘಟ್ಟದಲ್ಲಿ ನಡೆದ ಸಶಸ್ತ್ರ ರೈತ ಬಂಡಾಯಗಳ ನೆನಪುಗಳೂ ಮತ್ತು ಅವು ಹುಟ್ಟುಹಾಕಿದ ಕನಸುಗಳೂ ಚಳವಳಿಗೆ ಹೊಸ ಕಸುವನ್ನೇ ನೀಡಿದವು. ೧೯೬೮-೧೯೭೨ರ ನಡುವೆ  ದೇಶದ ಹತ್ತಾರು ಭಾಗಗಳಲ್ಲಿ ಹಲವಾರು ನಕ್ಸಲ್ಬರಿಗಳು ಸಿಡಿದವು. ಅದರಲ್ಲಿ ಪ್ರಮುಖವಾದವು ಆಂಧ್ರಪ್ರದೇಶದ ಶ್ರೀಕಾಕುಳಂ ಮತ್ತು ಬಿಹಾರದ ಭೋಜ್‌ಪುರ್‌ಗಳಲ್ಲಿ ಸಿಡಿದೆದ್ದ ಹೋರಾಟಗಳು. ಆದರೆ ಅವುಗಳನ್ನೂ ಪ್ರಭುತ್ವವು ಅತ್ಯಂತ ಕ್ರೂರವಾಗಿ ದಮನಮಾಡಿತು.

ಆದರೆ ಒಂದು ಕ್ರಾಂತಿಗೆ ಅತ್ಯಗತ್ಯವಾದ ಭಾವನಾತ್ಮಕ ಸತ್ವಾಂಶಗಳಾದ ವಿಶ್ವಾಸ, ಪ್ರೀತಿ ಮತ್ತು ಭರವಸೆಗಳನ್ನು ತಮ್ಮ ಒಡಲ ತುಂಬಾ ತುಂಬಿಕೊಂಡಿದ್ದ ಕ್ರಾಂತಿಕಾರಿಗಳು ಈ ಹೋರಾಟವನ್ನು ಮುಂದುವರೆಸುತ್ತಾ ತಮ್ಮ ಜೀವಗಳನ್ನೇ ಅಪಾಯಕ್ಕೆ ಒಡ್ಡಿಕೊಂಡರು. ದೇಶದ ಬಡಜನತೆ ಹತ್ತಾರು ಅನ್ಯಾಯ ಮತ್ತು ಅಪಮಾನಗಳನ್ನು ಅನುಭವಿಸುವಂತೆ ಮಾಡಿರುವ ಈ ಶೋಷಕ ವ್ಯವಸ್ಥೆಯ ಎದಿರು ಮೌನವಾಗುಳಿಯಲು ಅವರು ಒಪ್ಪಲಿಲ್ಲ. ಅವರು ತಮ್ಮ ತಮ್ಮ ಒಳಿತಿನ ಬಗ್ಗೆ ಮಾತ್ರ ಕಾಳಜಿ ಮಾಡುವ ಸ್ವಾರ್ಥದ ಸಂಕೋಲೆಗಳನ್ನು ಕಿತ್ತೊಗೆದರು. ಪ್ರಭುತ್ವವು ೧೯೬೦ರ ಮತ್ತು ೧೯೭೦ರ ಕ್ರಾಂತಿಕಾರಿಗಳನ್ನು ಸೋಲಿಸಿದರೂ, ಇಂಥಾ ಕ್ರಾಂತಿಕಾರಿ ಹೋರಾಟವನ್ನು ಹುಟ್ಟುಹಾಕಿದ ಶೋಷಕ ಪರಿಸ್ಥಿತಿಗಳು ಹಾಗೆಯೇ ಮುಂದುವರೆದಿದ್ದರಿಂದ ಶೋಷಿತ ಮತ್ತು ದಮನಿತ ಸಮುದಾಯಗಳ ಹೊಸ ಪೀಳಿಗೆಯು ಕ್ರಾಂತಿಯನ್ನು ಮತ್ತೆ ದೇಶದ ಮುನ್ನೆಲೆಗೆ ತಂದರು. ಹಾಗೆಯೇ ಮೌನದ್ರೋಹ ಮಾಡಲೊಪ್ಪದ ಬುದ್ಧಿಜೀವಿಗಳು ಸಹ ಅವರ ಬೆಂಬಲಕ್ಕೆ ನಿಂತು ನಿಧನರಾದ ಅಥವಾ ನಿವೃತ್ತರಾದವರ ಜಾಗಗಳನ್ನು ಭರ್ತಿಮಾಡಿದರು.

ನಕ್ಸಲೈಟ್ ಚಳವಳಿಯ ಎರಡನೇ ಅವಧಿಯು (೧೯೭೭-೨೦೦೩) ಪ್ರಧಾನವಾಗಿ ಸಮೂಹ ಹೋರಾಟಗಳು ಮತ್ತು ಸಮೂಹ ಸಂಘಟನೆಗಳಿಂದ ಕೂಡಿದ್ದವು. ಇವು ವಿಶೇಷವಾಗಿ ಅಂದಿನ ಅವಿಭಜಿತ ಆಂಧ್ರಪ್ರದೇಶದ ಉತ್ತರ ತೆಲಂಗಾಣ ಮತ್ತು ಇತರ ಪ್ರದೇಶಗಳಲ್ಲಿ, ಅಂದಿನ ಮಧ್ಯ ಬಿಹಾರ ಮತ್ತು ಇಂದು ಜಾರ್ಖಂಡ್ ಎಂದು ಕರೆಸಿಕೊಳ್ಳಲ್ಪಡುವ ದಕ್ಷಿಣ ಬಿಹಾರಗಳಲ್ಲಿ ಹಾಗೂ ದಂಡಕಾರಣ್ಯ ಎಂದು ಕರೆಸಿಕೊಳ್ಳಲ್ಪಡುವ ಆಂಧ್ರಪ್ರದೇಶ, ಒಡಿಶಾ, ಚತ್ತೀಸ್‌ಘಡ್ ಮತ್ತು ಮಹಾರಾಷ್ಟ್ರಗಳ ಆದಿವಾಸಿ ಗಡಿಜಿಲ್ಲೆಗಳಲ್ಲಿ ವ್ಯಾಪಕವಾಗಿತ್ತು. ದಕ್ಷಿಣ ಚತ್ತೀಸ್‌ಘಡ್‌ನ ಬಸ್ತರ್ ಪ್ರದೇಶವು ನಿಧಾನವಾಗಿ ಈ ಚಳವಳಿಯ ಗಟ್ಟಿನೆಲೆಯಾಗತೊಡಗಿತು. ಆತ್ಮ ರಕ್ಷಣೆಗಾಗಿ ಸಶಸ್ತ್ರ ದಳಗಳನ್ನೂ ಮತ್ತು ಗ್ರಾಮ ಮಟ್ಟದ ಮಿಲಿಷಿಯಾಗಳನ್ನು ಸಂಘಟಿಸಲಾಯಿತು. ಉಳುವವನಿಗೆ ಭೂಮಿ ಮತ್ತು ಅರಣ್ಯವಾಸಿಗಳಿಗೆ ಸಂಪೂರ್ಣ ಹಕ್ಕುಗಳು ಎಂಬವು ಪ್ರಮುಖವಾದ ಹಕ್ಕುಪ್ರತಿಪಾದನೆಗಳಾಗಿದ್ದವು.

ಚಳವಳಿಯು ವಿಸ್ತೃತಗೊಳ್ಳುತ್ತಿದ್ದಂತೆ ಭಾರತ ಸರ್ಕಾರವೂ ಸಹ ಅದರ ಮೇಲೆ ಪೂರ್ಣಪ್ರಮಾಣದ ಪ್ರತಿಯುದ್ಧವನ್ನೇ ಸಾರಿತು. ಪಕ್ಷವು ಹಲವಾರು ನಷ್ಟಗಳನ್ನು ಅನುಭವಿಸತೊಡಗಿತಲ್ಲದೆ ತನ್ನ ಅತ್ಯುತ್ತಮ ನಾಯಕರನ್ನು. ಅದರಲ್ಲೂ ವಿಶೇಷವಾಗಿ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ, ಕಳೆದುಕೊಂಡಿತು. ಅದೇನೇ ಇದ್ದರೂ, ಹೊಸ ಶತಮಾನದ ಪ್ರಾರಂಭದೊಂದಿಗೆ ಚಳವಳಿಯನ್ನು ದಮನ ಮಾಡುವುದು ಕಷ್ಟಕರವೇ ಆಗತೊಡಗಿತು. ಜನತಾ ಗೆರಿಲ್ಲಾ ಸೇನೆ (ಪೀಪಲ್ಸ್ ಗೆರಿಲ್ಲಾ ಆರ್ಮಿ)ಯನ್ನು ಕಟ್ಟುವುದರೊಂದಿಗೆ ಎಂಥಾ ಅಸಾಧ್ಯವಾದ ಸಂದರ್ಭಗಳನ್ನೂ ಸಹ ಎದುರಿಸುತ್ತಾ ಮುಂದೆ ನುಗ್ಗಲು ಚಳವಳಿಯು ಸಿದ್ಧವಾಯಿತು. ೧೯೯೮ ಮತ್ತು ೨೦೦೪ರಲ್ಲಿ ಸುದೀರ್ಘ ಪ್ರಜಾ ಯುದ್ಧಕೆ ಬದ್ಧರಾಗಿದ್ದ ಮಾವೋವಾದಿ ಶಕ್ತಿಗಳು ವಿಲೀನವಾಗುವುದರೊಂದಿಗೆ ಚಳವಳಿಯು ಗುರಿತಿಸಲೇ ಬೇಕಾದಂಥ ಗಮನಾರ್ಹ ಶಕ್ತಿಯನ್ನು ಸಂಚಯಿಸಿಕೊಂಡಿತು.

೨೦೦೪ರ ನಂತರದ ಈ ಮೂರನೇ ಅವಧಿಯಲ್ಲಿ ಬಸ್ತರ್ ಪ್ರದೇಶವು ಪುಟಿದೇಳುವ ಮಾವೊವಾದಿ ಪ್ರತಿರೋಧದ ಗಟ್ಟಿನೆಲೆಯಾಗಿ ಪರಿವರ್ತನೆಯಾಗಿದೆ. ಅಲ್ಲಿ ಎರಡು ಗಮನಾರ್ಹವಾದ ಸಮೂಹ ಸಂಘಣೆಗಳು ಅಸ್ಥಿತ್ವದಲ್ಲಿವೆ. ಒಂದು ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆ. ಇದು ಆದಿವಾಸಿ ರೈತರ ಮತ್ತು ಕೃಷಿ ಕಾರ್ಮಿಕರ ಸಂಘಟನೆಯಾಗಿದೆ. ಮತ್ತೊಂದು ಕ್ರಾಂತಿಕಾರಿ ಆದಿವಾಸಿ ಮಹಿಳಾ ಸಂಘ. ಇದು ಆದಿವಾಸಿ ಮಹಿಳಾ ಸಂಘಟನೆಯಾಗಿದೆ. ಇದಲ್ಲದೆ ಭೂಮ್‌ಕಾಲ್ ಮಿಲಿಷಿಯಾ (ಭೂಮ್‌ಕಾಲ್ ಎಂಬುದು ೧೯೧೦ರಲ್ಲಿ ಆ ವಲಯದಲ್ಲಿ ನಡೆದ ಆದಿವಾಸಿ ದಂಗೆಯ ಹೆಸರು) ಕೂಡಾ ಅಸ್ಥಿತ್ವದಲ್ಲಿದ್ದು ಪ್ರಜಾ ವಿಮೋಚನಾ ಗೆರಿಲ್ಲಾ ಸೇನೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.

ಸತತ ಐದು ದಶಕಗಳ ಕಾಲ ಎಡಬಿಡದೆ ಮುನ್ನಡೆಯುತ್ತಲೇ ಬಂದಿರುವ ಈ ಕ್ರಾಂತಿಕಾರಿ ಚಳವಳಿಯನ್ನು ಹೇಗೆ ವಿವರಿಸಿಕೊಳ್ಳಬೇಕು?

ಅಲ್ಪಾ ಶಾ ಎಂಬ ಮಾನವಶಾಸ್ತ್ರಜ್ನರು ಜಾರ್ಖಂಡಿನಲ್ಲಿರುವ ಮಾವೋವಾದಿ ಗೆರಿಲ್ಲಾ ವಲಯದಲ್ಲಿ ಸುದೀರ್ಘ ಕಾಲದಿಂದ ಜನಾಂಗೀಯ ಅಧ್ಯಯನವನ್ನು ಮಾಡುತ್ತಾ ಬಂದಿದ್ದಾರೆ. ಅವರ ಪ್ರಕಾರ ಈ ಕ್ರಾಂತಿಕಾರಿ ಚಳವಳಿಯು ಇಷ್ಟು ಸುದೀರ್ಘ ಕಾಲ ಬಾಳುತ್ತಾ ಬೆಳೆಯುತ್ತಾ ಬಂದಿರಲು ಪ್ರಧಾನವಾದ ಕಾರಣ ಅಲ್ಲಿ ಕೆಲಸ ಮಾಡುತ್ತಿರುವ ಮಾವೋವಾದಿ ಸಂಘಟನೆಗೂ ಮತ್ತು ಅಲ್ಲಿನ ಜನರಿಗೂ ನಡುವೆ ಏರ್ಪಟ್ಟಿರುವ ಆಪ್ತ ಸಂಬಂಧಗಳು. ಮಾವೊವಾದಿಗಳು ಸಾಮಾನ್ಯ ಜನರನ್ನು ಅದರಲ್ಲೂ ನಿರ್ದಿಷ್ತವಾಗಿ ದಮನಿತ ಜಾತಿಗಳ ಜನರನ್ನು ಮತ್ತು ಆದಿವಾಸಿಗಳನ್ನು ಗೌರವ, ಘನತೆ ಮತ್ತು ಸಮಾನತೆಯಿಂದ ಕಾಣುತ್ತಾರೆ.

ಭಾರತದ ಮಾವೊವಾದಿ ಚಳವಳಿ ಎತ್ತ ಸಾಗುತ್ತಿದೆ?

ಭಾರತ ಪ್ರಭುತ್ವವು ಮಾವೋವಾದಿಗಳಿಗೂ ಮತ್ತು ಆ ದಮನಿತ ಜನರಿಗೂ ನಡುವೆ ಏರ್ಪಟ್ಟಿರುವ ಈ  ಆಪ್ತ ಸಂಬಂಧಗಳನ್ನು ಕಡಿದುಹಾಕಲು ಬಯಸುತ್ತಿದೆ. ಮತ್ತು ಮಾವೋವಾದಿ ಚಳವಳಿಯನ್ನು ನಾಶಮಾಡಲು ಎಲ್ಲಾ ಬಗೆಯ ನ್ಯಾಯ ಹಾಗೂ ಅನ್ಯಾಯಯುತ ಕ್ರಮಗಳನ್ನು ಆಕ್ರಮಣಕಾರಿಯಾಗಿ ಬಳಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಅದು ರಾಷ್ಟ್ರವೊಂದರ ಗಡಿಯೊಳಗೆ ನಡೆಯುವ ಸಶಸ್ತ್ರ ಸಂಘರ್ಷದ ಸಂದರ್ಭದಲ್ಲಿ ಅನುಸರಿಸಬೇಕಿರುವ ಜೆನೀವಾ ಒಪ್ಪಂದ ಎರಡನೇ ಪ್ರೊಟೋಕಾಲಿನ ಸಾಮಾನ್ಯ ನಿಬಂಧನೆಗಳನ್ನೂ ಉಲ್ಲಂಘಿಸುತ್ತಿದೆ. ಮತ್ತೊಂದ ಕಡೆ ಮಾವೋವಾದಿ ಚಳವಳಿಯು ಸುದೀರ್ಘ ಪ್ರಜಾ ಯುದ್ದ ಮತ್ತು ಸಮೂಹ ಹೋರಾಟಗಳ ಸಮ್ಮಿಶ್ರಣದಿಂದ ಮತ್ತು ದಮನಿತ ರಾಷ್ಟ್ರೀಯತೆಗಳೊಂದಿಗೆ ವ್ಯೂಹಾತ್ಮಕವಾದ ಮೈತ್ರಿಗಳನ್ನು ಮಾಡಿಕೊಳ್ಳುವ ಮೂಲಕ ಭಾರತ ಪ್ರಭುತ್ವವನ್ನು ಕಿತ್ತೊಗೆಯಲು ಪಣತೊಟ್ಟು ನಿಂತಿದೆ.

ಆದರೆ ವಾಸ್ತವವೆಂದರೆ ಭಾರತ ಪ್ರಭುತ್ವದ ಪ್ರಯತ್ನವಾಗಲೀ, ಮಾವೋವಾದಿಗಳ ಬಯಕೆಗಳಾಗಲಿ ಈ ಕಾಲಘಟ್ಟದಲ್ಲಿ ಈಡೇರುವಂತಾ ಸಾಧ್ಯತೆಗಳಿಲ್ಲ.

ಜಗತ್ತಿನ ಅಭಿವೃದ್ಧಿಶೀಲ ದೇಶಗಳಲ್ಲೇ ಅತ್ಯಂತ ಪ್ರಬಲವಾಗಿರುವ ಭಾರತ ಪ್ರಭುತ್ವ ಮತ್ತು ಆಳುವವರ್ಗಗಳ ಶಕ್ತಿ ಸಾಮರ್ಥ್ಯಗಳಿಗೆ ಸಡ್ಡುಹೊಡೆಯುವ ಪ್ರಕ್ರಿಯೆಯಲ್ಲಿ ಮಾವೋವಾದಿ ಚಳವಳಿಯು ಹೆಚ್ಚೆಚ್ಚು ಸೈನ್ಯೀಕರಣಗೊಳ್ಳುತ್ತಾ ಸಾಗಿದೆ. ಭಾರತ ಪ್ರಭುತ್ವವೂ ಸಹ ಈ ಚಳವಳಿಯನ್ನು ಸಂಪೂರ್ಣವಾಗಿ ಸಶಸ್ತ್ರ ಸಂಘರ್ಷಕ್ಕೇ ಸೀಮಿತಗೊಳಿಸಿಟ್ಟುಕೊಳ್ಳಲು ಪ್ರಯತ್ನಿಸುತ್ತಿದೆ. ಇದರ ಪರಿಣಾಮವಾಗಿ ಚಳವಳಿಯು ಮುನ್ನಡೆಯನ್ನು ಸಾಧ್ಸಿಸುವುದು ಕಷ್ಟವಾಗುತ್ತಿದೆ. ಅಲ್ಲದೆ ಮಾವೋವಾದಿಗಳ ನಿಯಂತ್ರಣದಲ್ಲಿ ಯಾವುದೇ ಸ್ಥಾವರ ಪ್ರದೇಶಗಳು (ಬೇಸ್ ಏರಿಯಾ- ಈ ವ್ಯವಸ್ಥೆಯ ಆಡಳಿತವನ್ನು ಮತ್ತದರ ಸಂಸ್ಥೆಗಳನ್ನು ಕಿತ್ತೊಗೆದು ಅದಕ್ಕೆ ಪರ್ಯಾಯವಾದ ಮಾವೋವಾದಿ ಸರ್ಕಾರ, ಸೇನೆ ಮತ್ತು ಸಂಸ್ಥೆಗಳು ಅಧಿಕಾರ ಚಲಾಯಿಸುವ ಭೌಗೋಳಿ ಪ್ರದೇಶ- ಅನುವಾದಕನ ಟಿಪ್ಪಣಿ ) ಇಲ್ಲದಿರುವುದು ಸಹ ಚಳವಳಿಗೆ ಹಲವಾರು ಸ್ವರೂಪದ ತೊಡರುಗಳನ್ನು ಉಂಟುಮಾಡುತ್ತಿದೆ: ಪ್ರಧಾನವಾಗಿ, ತನ್ನದೆ ಆದ ಒಂದು ಸ್ಥಾವರ ಪ್ರದೇಶವಿಲ್ಲದಿದ್ದರೆ ಪಕ್ಷದ ಪ್ರಜಾತಾಂತ್ರಿಕ ಸಮೂಹ ನೀತಿಯನ್ನು ಆಚರಣೆಗೆ ತರುವ ಸಾಧ್ಯತೆ ಇರುವುದಿಲ್ಲ. ಇದರಿಂದಾಗಿ ಮಾವೋವಾದಿಗಳು ತಮ್ಮ ಪ್ರಜಾತಂತ್ರವು ಈ ವ್ಯವಸ್ಥೆಯ ಕೊಳೆತ ಉದಾರವಾದಿ-ರಾಜಕೀಯ ಪ್ರಜಾತಂತ್ರಕ್ಕಿಂತ ಶ್ರೇಷ್ಠವಾದದ್ದೆಂದು ಜನಮೆಚ್ಚುವ ರೀತಿಯಲ್ಲಿ ನಿರೂಪಿಸುವುದೂ ಕಷ್ಟವಾಗುತ್ತದೆ.

ಇದರ ನಡುವೆಯೂ ಒಂದು ಸಾಧ್ಯತೆಯು ಎದ್ದುಕಾಣುತ್ತಿದೆ. ವಿವಿಧ ಪ್ರದೇಶಗಳ ಸಮಾಜ ರಚನೆಗಳೊಳಗಿಂದ ಏಕಕಾಲದಲ್ಲಿ ಪ್ರತಿರೋಧಗಳು ಭುಗಿಲೆದ್ದು ಉಂಟಾಗುವ ದೊಡ್ಡ ಕೋಲಾಹಲದೊಳಗಿಂದ ಕ್ರಾಂತಿಕಾರಿ ಜನದಂಗೆಗಳು ಸ್ಪೋಟಗೊಳ್ಳಬಹುದು. ಮತ್ತು ಅದು ಕ್ರಾಂತಿಕಾರಿ ಚಳವಳಿಯ ಕೀಲಕ ಮುನ್ನೆಡೆಗೆ ನಾಂದಿ ಹಾಡಬಹುದು.

         ಕೃಪೆ: Economic and Political Weekly                                May 27, 2017. Vol. 52. No.21              

Leave a Reply

Your email address will not be published.