ನಂಬಿಕೆ ಮೂಢನಂಬಿಕೆ ಮತ್ತು ವರ್ಗ ತಾರತಮ್ಯ

ನಾ ದಿವಾಕರ

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಸೂದೆಯೊಂದು ಕೊನೆಗೂ ವಿರೂಪಗೊಂಡು ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದಿದೆ. ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ನಡೆದುಕೊಳ್ಳುತ್ತಲೇ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದರಲ್ಲಿ ನಾವು ನಿಸ್ಸೀಮರು ಎಂದು ರಾಜ್ಯ ಸರ್ಕಾರ ಮತ್ತೊಮ್ಮೆ ನಿರೂಪಿಸಲು ಹೊರಟಿದೆ. ನಮ್ಮಲ್ಲಿ ಏನೆಲ್ಲಾ ಶಾಸನಗಳಿಲ್ಲ. ಕೌಟುಂಬಿಕ ದೌರ್ಜನ್ಯ ನಿಯಂತ್ರಣ, ಜಾತಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆ, ಬಾಲಕಾರ್ಮಿಕ ನಿಯಂತ್ರಣ ಕಾಯ್ದೆ, ಅತ್ಯಾಚಾರ ನಿಯಂತ್ರಣ ಕಾಯ್ದೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹೀಗೆ ಹತ್ತು ಹಲವಾರು. ಇವೆಲ್ಲವೂ ಅಲಂಕಾರಿಕ ವಸ್ತುಗಳಂತೆ ಸಂವಿಧಾನದ ಪೀಠಗಳಲ್ಲಿ ಹೊಳೆಯುತ್ತವೆ. ಆದರೆ ಕಾರ್ಯಾಂಗದಿಂದ ನ್ಯಾಯಾಂಗದ ಅಂಗಳವನ್ನು ಪ್ರವೇಶಿಸುತ್ತಲೇ ಈ ಎಲ್ಲಾ ಕಾಯ್ದೆಗಳು ತಮ್ಮ ಪೊರೆ ಕಳಚಿ ಅಸಲಿಯತ್ತನ್ನು ನಿರೂಪಿಸುತ್ತವೆ. ಆರೋಪಿಗೆ ಶಿಕ್ಷೆಯಾಗುವುದಕ್ಕಿಂತಲೂ ಹೆಚ್ಚಾಗಿ ಅಪರಾಧಿಗಳು ಸಾಕ್ಷ್ಯಾಧಾರದ ಕೊರತೆಯಿಂದ ಮುಕ್ತರಾಗುವ ಸಂಭವವೇ ಹೆಚ್ಚಾಗಿರುತ್ತದೆ.

ಇಂತಹ ಶಾಸನಗಳ ಸಾಲಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಸನವನ್ನು ಸೇರಿಸಿದೆ. “ ಕರ್ನಾಟಕ ಮೂಢನಂಬಿಕೆ ಆಚರಣೆ ಪ್ರತಿಬಂಧಕ ಮಸೂದೆ ”ಗೆ ಅನುಮೋದನೆ ನೀಡಲು ಸಾಕಷ್ಟು ಸಮಯ ವ್ಯಯಿಸಿದ ರಾಜ್ಯ ಸಚಿವ ಸಂಪುಟ ಕೊನೆಗೂ ತನ್ನ ಮುದ್ರೆಯನ್ನು ಒತ್ತಿದೆ.ಆದರೆ ನೂತನ ಮಸೂದೆಯಿಂದ ಆಳುವ ವರ್ಗಗಳ ನಂಬಿಕೆಗಳಿಗೆ (ಅಧಿಕಾರ, ಅಧಿಪತ್ಯ ಮತ್ತು ಆಡಳಿತ ವ್ಯವಸ್ಥೆಯ ನಿಯಂತ್ರಣ) ಚ್ಯುತಿ ಬಾರದಂತೆ ಎಚ್ಚರ ವಹಿಸಲಾಗಿದೆ. ಹಾಗಾಗಿ ನೂತನ ಮಸೂದೆಯಲ್ಲಿ ಮೂಢನಂಬಿಕೆ ಎಂಬ ಪದವನ್ನೇ ಕೈಬಿಡಲಾಗಿದೆ. ಈಗ ರಾಜ್ಯದ ಪ್ರಜ್ಞಾವಂತ, ವಿಚಾರಶೀಲ ಜನತೆಗೆ ದಕ್ಕಿರುವುದು “ ಕರ್ನಾಟಕ ನರಬಲಿ ನಿರ್ಮೂಲನ, ಅಮಾನವೀಯ, ದುಷ್ಟ , ಅಘೋರಿ ಆಚರಣೆ ಮತ್ತು ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನಾ ಮಸೂದೆ ”.
ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆ ಇರುವ ಅಂತರ ಎಷ್ಟು ಕಿರಿದಾದುದೋ ಅಷ್ಟೇ ಸೂಕ್ಷ್ಮ ಮತ್ತು ಅಷ್ಟೇ ಕ್ಲಿಷ್ಟ. ಎಲ್ಲ ನಂಬಿಕೆಗಳನ್ನು ಮೂಢನಂಬಿಕೆ ಎನ್ನಲಾಗುವುದಿಲ್ಲ ನಿಜ, ಹಾಗೆಯೇ ತಾತ್ವಿಕವಾಗಿ ಮೂಢ ನಂಬಿಕೆಯ ವ್ಯಾಪ್ತಿಗೊಳಗಾಗುವುದೆಲ್ಲವೂ ನಂಬಿಕೆಗಳಾಗಿರುವುದಿಲ್ಲ. ನಂಬಿಕೆ ಮಾನವ ಸಮಾಜವನ್ನು ಬೆಸೆಯುವ ಕೊಂಡಿಯಾಗಿಯೂ ಪರಿಣಮಿಸುತ್ತದೆ.

ಆದರೆ ಮೂಢನಂಬಿಕೆ ಈ ಕೊಂಡಿಯನ್ನು ಭದ್ರವಾಗಿರಿಸಿಕೊಂಡೇ ಸಮಾಜದಲ್ಲಿ ಅಸ್ಥಿರತೆ ಮತ್ತು ಪ್ರಕ್ಷುಬ್ಧತೆಯನ್ನು ಹರಡುತ್ತದೆ. ನರಬಲಿ, ಮಡೆಸ್ನಾನ, ವಾಮಾಚಾರ, ಅಘೋರಿ ಆಚರಣೆ ಈ ಎಲ್ಲ ಅನಿಷ್ಟಗಳು ಭಾರತೀಯ ಸಮಾಜವನ್ನು ಶತಮಾನಗಳಿಂದಲೂ ಕಾಡುತ್ತಿರುವ ಗಂಭೀರ ಸಮಸ್ಯೆಗಳು. ಈ ಅನಿಷ್ಟಗಳನ್ನು ನಿರ್ಮೂಲನ ಮಾಡುವ ಹೊಣೆಗಾರಿಕೆ ನಮ್ಮ ಸುಶಿಕ್ಷಿತ ಪ್ರಜ್ಞಾವಂತ ಸಮಾಜದ ಮೇಲಿದೆ. ಈ ಪ್ರಜ್ಞೆ ವ್ಯಕ್ತಿಗತ ನೆಲೆಯಲ್ಲಿ ಮೂಡಿದಾಗ ಸಮಾಜ ಇನ್ನೂ ಹೆಚ್ಚು ಪ್ರಬುದ್ಧತೆಯತ್ತ ಸಾಗುತ್ತದೆ. ಆದರೆ ನಂಬಿಕೆಗಳನ್ನು ಗಟ್ಟಿಗೊಳಿಸುವ ನೆಪದಲ್ಲಿ ಇಂತಹ ಮೂಢನಂಬಿಕೆಗಳನ್ನು ಶಾಶ್ವತವಾಗಿ ಸ್ಥಾಪಿಸುವ ಪಟ್ಟಭದ್ರ ಹಿತಾಸಕ್ತಿಗಳು ಈ ಪ್ರಬುದ್ಧತೆಗೆ ಅಡ್ಡಿ ಮಾಡುತ್ತಿವೆ. ಈ ಹಿತಾಸಕ್ತಿಗಳು ಯಾವುವು ಎಂದು ಗುರುತಿಸುವುದು ಪ್ರಭುತ್ವ ಅಥವಾ ಸರ್ಕಾರದ ಜವಾಬ್ದಾರಿ.

ಧಾರ್ಮಿಕ, ಸಾಂಪ್ರದಾಯಿಕ ಮತ್ತು ಸಾಂಸ್ಕøತಿಕ ನೆಲೆಯಲ್ಲಿ ನಂಬಿಕೆಗಳನ್ನು ವಿಶ್ಲೇಷಿಸುವಾಗ ವರ್ಗದ ನೆಲೆಗಳನ್ನು ಅಲಕ್ಷಿಸಲಾಗುವುದಿಲ್ಲ. ಶೋಷಿತ ಸಮುದಾಯಗಳಿಗೆ, ದಮನಿತ ಶ್ರಮಜೀವಿಗಳಿಗೆ ನಂಬಿಕೆಗಳು ಜೀವನವನ್ನು ನಿರ್ಧರಿಸುವ ಆಕರಗಳಾಗಿ ಕಾಣುತ್ತವೆ. ತಮ್ಮ ನಿತ್ಯ ಜೀವನದ ಜಂಜಾಟ, ಬಾಳಿನ ಸಂಕಷ್ಟಗಳು, ನಾಳಿನ ಕೂಳಿನ ಚಿಂತೆ ಮತ್ತು ಭವಿಷ್ಯದ ಅನಿಶ್ಚಿತತೆ ಈ ಸಮುದಾಯದ ಜನರನ್ನು ನಂಬಿಕೆಯ ಚೌಕಟ್ಟುಗಳಲ್ಲಿ ಬಂಧಿಸುತ್ತವೆ. ಹಾಗಾಗಿಯೇ ವಾಮಾಚಾರ, ಅಘೋರಿ ಮತ್ತಿತರ ನಂಬಿಕೆಗಳಿಗೆ ಅಮಾಯಕ ಜನತೆ ಬಲಿಯಾಗುತ್ತಾರೆ. ಈ ಜನತೆಯನ್ನು ಮೂಢನಂಬಿಕೆ ಮತ್ತು ಅಮಾನವೀಯ ಆಚರಣೆಗಳಿಂದ ಹೊರತರುವ ಗುರುತರ ಹೊಣೆಗಾರಿಕೆ ಮೇಲ್ವರ್ಗದ ಮೇಲಿರುತ್ತದೆ. ಆದರೆ ಮೇಲ್ಜಾತಿಯ ಮೇಲ್ವರ್ಗಗಳು ಈ ಅಮಾಯಕರ ನಂಬಿಕೆಗಳನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ದೇವಸ್ಥಾನಗಳ ಮೂಲಕ, ಆಧ್ಯಾತ್ಮ, ಜ್ಯೋತಿಷ್ಯ, ವಾಸ್ತು ಮತ್ತಿತರ ಶೋಷಕ ಪದ್ಧತಿಗಳ ಮೂಲಕ ಮೌಢ್ಯದ ಕೂಪಕ್ಕೆ ತಳ್ಳುತ್ತಿದ್ದಾರೆ. ತಮ್ಮ ವರ್ಗ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಮೇಲ್ವರ್ಗದ ಜನರು ಅವಕಾಶವಂಚಿತ ಹತಾಶ ಜನಸಮುದಾಯಗಳ ನಂಬಿಕೆಗಳನ್ನೇ ದಾಳದಂತೆ ಬಳಸಿಕೊಂಡು ಮೌಢ್ಯದ ಕೂಪದಲ್ಲಿ ಬಂಧಿಸುತ್ತಿರುವುದನ್ನು ದಿನನಿತ್ಯ ಕಾಣುತ್ತಲೇ ಇದ್ದೇವೆ.

ನರಬಲಿ, ಮಡೆ ಸ್ನಾನ, ವಾಮಾಚಾರ ಮುಂತಾದ ಅನಿಷ್ಟ ಪದ್ಧತಿಗಳು ಅಮಾನವೀಯ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಬಡತನ ಮತ್ತು ದಾರಿದ್ರ್ಯದಿಂದ ಬಳಲಿ ಬೆಂಡಾದ ಶೋಷಿತ ಜನತೆಗೆ ಈ ಆಚರಣೆಗಳೇ ಸಾಂತ್ವನ ನೀಡುವ ಸಾಧನಗಳಾಗುವುದನ್ನೂ ಗಮನಿಸಬೇಕು. ದೈಹಿಕ ರೋಗ ರುಜಿನಗಳ ಶಮನ ಮಾಡಲು ವೈದ್ಯರು ನೀಡುವ ಔಷಧಿ ಸೇವಿಸಿದರೂ ಮರುಕ್ಷಣವೇ ಮಾರಮ್ಮನ ಗುಡಿಗೆ, ದರ್ಗಾಗಳಿಗೆ ಭೇಟಿ ನೀಡಿ ಮಾನಸಿಕ ಖಿನ್ನತೆಯನ್ನು ಪರಿಹರಿಸಿಕೊಳ್ಳಲು ಯತ್ನಿಸುತ್ತಾರೆ. ಇದು ನಮ್ಮ ಕಣ್ಣೆದುರಿನ ಸತ್ಯ. ಈ ಅರೆ ಶಿಕ್ಷಿತ, ಅನಕ್ಷರಸ್ಥ ಜನಸಮುದಾಯಗಳನ್ನು ಮೌಢ್ಯದ ಕೂಪದಿಂದ ಹೊರತಂದು ವೈಚಾರಿಕತೆಯ ನೆಲೆಯಲ್ಲಿ ನಿಲ್ಲಿಸಬೇಕಾದ ಮೇಲ್ವರ್ಗಗಳು ದೇವಾಲಯಗಳ ಪೂಜಾ ಕೈಂಕರ್ಯಗಳ ಮೂಲಕ, ಬೊಗಳೆ ಜ್ಯೋತಿಷ್ಯ ಶಾಸ್ತ್ರದ ಮೂಲಕ, ಅವಾಸ್ತವಿಕ ವಾಸ್ತು ಶಾಸ್ತ್ರದ ಮೂಲಕ ಈ ಜನಸಮುದಾಯಗಳನ್ನು ಮತ್ತಷ್ಟು ಕತ್ತಲಲ್ಲಿರಿಸಲು ಸತತ ಪ್ರಯತ್ನ ನಡೆಸುತ್ತಿರುವುದನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲೇ ಕಾಣುತ್ತಿದ್ದೇವೆ. ಬಡತನದ ಬೇಗೆಯಲ್ಲಿ ಬೇಯುವ ಶ್ರಮಜೀವಿಗಳ ನಂಬಿಕೆಗಳು ತಮ್ಮದೇ ಜೀವನ ನಿರ್ವಹಣೆಯ ಒಂದು ತಂತ್ರವಾಗಿಯೂ ಇರುತ್ತವೆ. ಆದರೆ ಶ್ರಮಜೀವಿಗಳ ಬೆವರಿನ ಹನಿಗಳ ಮೇಲೆ ಸೌಧಗಳನ್ನು ನಿರ್ಮಿಸುವ ಮೇಲ್ವರ್ಗಗಳ ನಂಬಿಕೆಗಳು ಮತ್ತೊಬ್ಬರ ಜೀವನವನ್ನು ಅತಂತ್ರವಾಗಿಸುತ್ತವೆ. ಇದು ದುರಂತವಾದರೂ ಸತ್ಯ.

ವರ್ಗದ ನೆಲೆಯಲ್ಲಿ ನೋಡಿದಾಗ ಜ್ಯೋತಿಷ್ಯ, ವಾಸ್ತು ಮತ್ತು ಆಧುನಿಕ ದೇವಾಲಯಗಳ ಪೂಜಾ ಕೈಂಕರ್ಯಗಳು ವಾಮಾಚಾರಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿ ಕಾಣುತ್ತದೆ. ಏಕೆಂದರೆ ಈ ಬೊಗಳೆ ಶಾಸ್ತ್ರಗಳು ಮಾನವ ಸಮಾಜದ ಮನಸ್ಥಿತಿಯನ್ನೇ ಭ್ರಷ್ಟಗೊಳಿಸುತ್ತವೆ. ಸಮಾಜದ ಆತ್ಮ ಸ್ಥೈರ್ಯವನ್ನು ಭಂಗಗೊಳಿಸುತ್ತವೆ. ಜನಸಾಮಾನ್ಯರಲ್ಲಿನ ಆತ್ಮವಿಶ್ವಾಸವನ್ನು ಕೊಂದುಹಾಕುತ್ತವೆ. ಮೇಲ್ವರ್ಗಗಳು ಕೆಳವರ್ಗದ ಜನತೆಯ ಮೇಲೆ ಅಧಿಪತ್ಯ ಸಾಧಿಸುವ ಸಾಧನಗಳಾಗಿ ಪರಿಣಮಿಸುತ್ತವೆ. ಒಂದು ಇಡೀ ಪೀಳಿಗೆಯನ್ನೇ ಅವರಿಸುವ ಜ್ಯೋತಿಷ್ಯ, ವಾಸ್ತು ಮತ್ತು ಪೂಜಾ ವಿಧಾನಗಳು ಜನಸಾಮಾನ್ಯರಲ್ಲಿ ಸೃಷ್ಟಿಸುವ ಭ್ರಮೆ ಇಡೀ ಸಮಾಜವನ್ನು ನಿಷ್ಕ್ರಿಯಗೊಳಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಸಂಕಷ್ಟಿ ಪೂಜೆ, ಗಣಹೋಮ, ಸತ್ಯನಾರಾಯಣ ಪೂಜೆ, ವರಮಹಾಲಕ್ಷ್ಮಿ ವ್ರತ, ಹುಣ್ಣಿಮೆ ಪೂಜೆ, ಗ್ರಹಣದ ಸಂದರ್ಭದಲ್ಲಿನ ಹೋಮ, ಶನಿದೇವರ ಪೂಜೆ, ನವಗ್ರಹ ಪೂಜೆ ಇವೇ ಮುಂತಾದವು ವಿದ್ಯಾವಂತ , ಸುಶಿಕ್ಷಿತ ಸಮಾಜವನ್ನೂ ಆವರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ನಿತ್ಯ ಮುಂಜಾನೆ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ತಮ್ಮ ಬೊಗಳೆ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಮೌಢ್ಯದ ಬೀಜಗಳನ್ನು ಬಿತ್ತುವುದರ ಮೂಲಕ ಜನಸಾಮಾನ್ಯರನ್ನು ವೈಚಾರಿಕ ನೆಲೆಯಿಂದ ದೂರ ಸೆಳೆಯುತ್ತಿರುವುದನ್ನು ಗಮನಿಸಬೇಕು. ಈ ಮೌಢ್ಯ ಬಿತ್ತನೆ ಯೋಜನೆ ಭವಿಷ್ಯದ ಪೀಳಿಗೆಯನ್ನು ಮೌಢ್ಯದ ಕೂಪದಲ್ಲಿ ಬಂಧಿಸುವ ಒಂದು ಸಾಧನವಾಗಿದೆ. ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಜ್ಯೋತಿಷಿಗಳು, ಬ್ರಹ್ಮಾಂಡ ಗುರುಗಳು, ವಾಸ್ತು ಪಂಡಿತರು ಮಧ್ಯಮ ವರ್ಗಗಳ ಹತಾಶೆಯನ್ನು, ಬಡ ಜನತೆಯ ಬೇಗುದಿಯನ್ನು, ಶ್ರೀಮಂತ ವರ್ಗದ ಆತಂಕಗಳನ್ನು ತಮ್ಮ ಲಾಭಗಳಿಕೆಯ ದಾಳಗಳಂತೆ ಬಳಸುತ್ತಿರುವುದನ್ನು ಗಮನಿಸಬೇಕು. ದೇವಾಲಯಗಳಲ್ಲಿ ಭೂಗತವಾಗಿರುವ ಅಕ್ರಮ ಧನ ಸಂಪತ್ತಿನ ವೃದ್ಧಿಗೆ ಟಿವಿ ಪರದೆಗಳ ಮೇಲೆ ರಾರಾಜಿಸುವ ಪ್ರಭೃತಿಗಳು ಏಜೆಂಟರಂತೆ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಬೇಕು. ಈಗಾಗಲೇ ಜಾಗತೀಕರಣ ಮತ್ತು ನವ ಉದಾರವಾದದ ಭ್ರಮೆಯಲ್ಲಿ ತೇಲಾಡುತ್ತಾ ತಮ್ಮ ಅಡಿಪಾಯ ಕುಸಿಯುತ್ತಿದ್ದರೂ ಅರಿಯದೆ ತೊಳಲಾಡುತ್ತಿರುವ ಯುವ ಸಮಾಜವನ್ನು ಮೌಢ್ಯಾಧಿಪತಿಗಳು ಮತ್ತಷ್ಟು ಅಂಧಕಾರಕ್ಕೆ ತಳ್ಳುತ್ತಿರುವುದನ್ನು ಗಮನಿಸಬೇಕು.

ಈ ದೃಷ್ಟಿಕೋನದಿಂದ ಗಮನಿಸುವಾಗ ರಾಜ್ಯ ಸರ್ಕಾರದ ಮೌಢ್ಯ ಪ್ರತಿಬಂಧಕ ಕಾಯ್ದೆಯ ವ್ಯಾಪ್ತಿಯಿಂದ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರವನ್ನು ಹೊರಗಿಟ್ಟಿರುವುದು ಸರ್ಕಾರದ ಅಪ್ರಬುದ್ಧತೆ ಮತ್ತು ಸಾಂಪ್ರದಾಯಿಕ ಮನೋಭಾವವನ್ನು ತೋರುತ್ತದೆ. ಮಾನವ ಸಮಾಜವನ್ನು ವೈಚಾರಿಕತೆಯ ನೆಲೆಯಲ್ಲಿ, ವೈಜ್ಞಾನಿಕ ಪ್ರಜ್ಞೆಯ ನೆಲೆಯಲ್ಲಿ ಸುಸ್ಥಿತಿಯಲ್ಲಿರಿಸಬೇಕಾದರೆ ವಾಮಾಚಾರ, ನರಬಲಿಗಳಷ್ಟೇ ಅಪಾಯಕಾರಿಯಾದ ಜ್ಯೋತಿಷ್ಯ, ವಾಸ್ತು ಮತ್ತು ನೂತನ ಪೂಜಾ ಕೈಂಕರ್ಯಗಳಿಗೂ ಅಂತ್ಯ ಹಾಡಬೇಕಿದೆ. ಇಲ್ಲವಾದಲ್ಲಿ ಮೌಢ್ಯವೂ ಜಾತಿ ಪ್ರಜ್ಞೆಯಂತೆ ವರ್ಗದ ನೆಲೆಯಲ್ಲಿ ಗುಪ್ತ ನದಿಯಂತೆ ಹರಿಯುತ್ತಲೇ ಇರುತ್ತದೆ.

Leave a Reply

Your email address will not be published.