ಧ್ವನಿವರ್ಧಕದ ಹಾವಳಿ ತಪ್ಪಲಿ ಮೌಢ್ಯದ ಹಾವಳಿಯೂ

-ನಾ ದಿವಾಕರ

nigamಖ್ಯಾತ ಬಾಲಿವುಡ್ ಗಾಯಕ ಸೋನು ನಿಗಮ್ ಧಾರ್ಮಿಕ ಕೇಂದ್ರಗಳಲ್ಲಿ ಬಳಸುವ ಧ್ವನಿವರ್ಧಕಗಳ ಬಗ್ಗೆ ಆಕ್ಷೇಪದ ದನಿ ಎತ್ತಿದ್ದಾರೆ. ಪರಿಣಾಮ ಅವರ ತಲೆ ಬೋಳಾಗಿದೆ. ತಲೆಯ ಮೇಲೆ ಹತ್ತು ಲಕ್ಷದ ಬಹುಮಾನ ಇಡಲಾಗಿದೆ. ಖ್ಯಾತನಾಮರ ಹೇಳಿಕೆಗಳು ಅನಗತ್ಯ ವಿವಾದ ಸೃಷ್ಟಿಸುವುದು ಆಧುನಿಕ ಸಂವಹನ ಮಾಧ್ಯಮ ಲೋಕದ ಒಂದು ವೈಶಿಷ್ಟ್ಯ. ಸಾಮಾಜಿಕ ತಾಣಗಳು ವಿಚಾರ ವಿನಿಮಯ ಮಾಡಲೆಂದೇ ಇದ್ದರೂ ನಮ್ಮ ದೇಶದಲ್ಲಿ ಹೆಚ್ಚು ಬಳಕೆಯಾಗುತ್ತಿರುವುದು ಕೋಳಿ ಕಾಳಗಗಳಿಗಾಗಿ, ಕ್ಷುಲ್ಲಕ ಕಲಹಗಳಿಗಾಗಿ, ಪರಸ್ಪರ ದೋಷಾರೋಪಗಳಿಗಾಗಿ. ಕೆಲವೊಮ್ಮೆ ಆತ್ಮರತಿಗಾಗಿಯೂ ಹೌದು. ಸೋನು ನಿಗಮ್ ಹೊಸತೇನನ್ನೂ ಹೇಳಿಲ್ಲ. ಬಹುಶಃ ಮಸೀದಿಗಳಲ್ಲಿ ಮುಂಜಾನೆಯ ವೇಳೆ ಪ್ರಾರ್ಥನೆಗ ಕರೆಯುವ ಅಝಾನ್ ಕುರಿತು ಪ್ರಸ್ತಾಪಿಸಿರುವುದರಿಂದ ವಿವಾದ ಸೃಷ್ಟಿಯಾಗಿದೆ. ಇಲ್ಲಿ ಮತ ಧರ್ಮದ ಪ್ರಶ್ನೆಗಿಂತಲೂ ನಾಗರಿಕ ಪ್ರಜ್ಞೆ ಮತ್ತು ಶಬ್ದ ಮಾಲಿನ್ಯದ ಪ್ರಶ್ನೆ ಮುಖ್ಯವಾಗುತ್ತದೆ. ಅದರೆ ಮತಾಂಧರಿಗೆ ಇಂತಹ ಸನ್ನಿವೇಶಗಳು ಪ್ರಚಾರದ ಹಲಗೆಗಳಿದ್ದಂತೆ. ಜನಪ್ರಿಯತೆಯ ಚಿಮ್ಮು ಹಲಗೆ ಇದ್ದಂತೆ. ತಮ್ಮ ಅಸ್ತಿತ್ವವನ್ನು ನಿರೂಪಿಸಲು ದೊರೆಯುವ ಸದವಕಾಶದಂತೆ.

ಇಲ್ಲಿ ಕೆಲವು ಸಂಗತಿಗಳನ್ನು, ಭಾರತೀಯರಾಗಿ, ನಾವು ಒಪ್ಪಿಕೊಳ್ಳಲೇಬೇಕು. ಈ ಕೆಲವು ಚಟುವಟಿಕೆಗಳು ಬಹುಶಃ ಭಾರತದಲ್ಲಿ ಮಾತ್ರ ಸಾಧ್ಯ ಎಂದು ನನ್ನ ಭಾವನೆ. (ಅಥವಾ ಸೋದರ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶದಲ್ಲೂ ಇರಬಹುದೇನೋ).
1. ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಅಬ್ಬರದ ಧ್ವನಿವರ್ಧಕಗಳನ್ನು ದಿನವಿಡೀ ಬಳಸುವುದು.
2. ತಮ್ಮ ಖಾಸಗಿ ಸಮಾರಂಭಕ್ಕೆ ರಸ್ತೆಯಲ್ಲಿ ಯಾವುದೇ ಅನುಮತಿ ಪರವಾನಗಿ ಇಲ್ಲದೆ ಶಾಮಿಯಾನಾ ಹಾಕಿ ಏಕಾಏಕಿ ರಸ್ತೆ ಬಂದ್ ಮಾಡುವುದು.
3. ಆಡಳಿತ ವ್ಯವಸ್ಥೆಯ ಅನುಮತಿಯೇ ಇಲ್ಲದೆ ರಸ್ತೆ ಅಗೆಯುವುದು, ವಿದ್ಯುತ್ ಕಂಬಗಳಿಂದ ವಿದ್ಯುತ್ ಕದಿಯುವುದು.
4. ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸಲು ದೊಡ್ಡ ದೊಡ್ಡ ಸರ್ಕಲ್‍ಗಳನ್ನೇ ಬಂದ್ ಮಾಡುವುದು.
5. ಮುಂಜಾನೆಯಿಂದ ರಾತ್ರಿಯವರೆಗೂ ಧ್ವನಿವರ್ಧಕ ಬಳಸಿ ಸಾರ್ವಜನಿಕರ ಶಾಂತಿ ಭಂಗ ಮಾಡುವುದು.
6. ಧಾರ್ಮಿಕ ಚಟುವಟಿಕೆಗಳಿಗೆ ಧ್ವನಿವರ್ಧಕ ಬಳಸುವ ಮೂಲಕ ಬಲವಂತವಾಗಿ ಜನರ ಮೇಲೆ ಮತಧರ್ಮಗಳನ್ನು ಹೇರುವುದು.
7. ಜನನಿಬಿಡ ರಸ್ತೆಗಳಲ್ಲಿ, ಸರ್ಕಲ್‍ಗಳಲ್ಲಿ ನಾಗರಿಕ ಪ್ರಜ್ಞೆಯೇ ಇಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸುವುದು.
8. ರಸ್ತೆಯ ಇಕ್ಕೆಲಗಳಲ್ಲಿ, ಮರಗಳ ಮೇಲೆ, ಕಟ್ಟಡಗಳ ಮೇಲೆ ಬೃಹತ್ ಗಾತ್ರದ ಫ್ಲೆಕ್ಸ್ ಬೋರ್ಡ್‍ಗಳನ್ನು ಜಾಹೀರಾತು ಫಲಕಗಳಂತೆ ಪ್ರದರ್ಶಿಸುವುದು. ಇತ್ಯಾದಿ ಇತ್ಯಾದಿ.,,,,,

ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಅಟ್ಟಹಾಸ ಮೆರೆಯುವುದನ್ನು ಪ್ರಶ್ನಿಸಲೂ ಆಗದಂತೆ ಸಂಘ ಸಂಸ್ಥೆಗಳು ತಮ್ಮದೇ ಆದ ಪ್ರಭಾವಳಿಗಳನ್ನು ಸೃಷ್ಟಿಸಿಕೊಂಡಿರುತ್ತವೆ. ಈ ಎಲ್ಲ ಚಟುವಟಿಕೆಗಳು ಮಾಲಿನ್ಯ ಹರಡುವಂತಹುವೇ. ಆದರೆ ಇದನ್ನು ಪ್ರಶ್ನಿಸುವ ನಾಗರಿಕರು ಕನ್ನಡ ವಿರೋಧಿಗಳೋ, ದೇಶದ್ರೋಹಿಗಳೋ, ಧರ್ಮಭ್ರಷ್ಟರೋ ಆಗಿಬಿಡುತ್ತಾರೆ. ಏಕೆಂದರೆ ಪಟ್ಟಭದ್ರ ಹಿತಾಸಕ್ತಿಗಳು ಈ ಚಟುವಟಿಕೆಗಳ ಮೇಲೆ ತಮ್ಮ ಅಧಿಪತ್ಯ ಸ್ಥಾಪಿಸಿರುತ್ತವೆ. ಮೇಲಾಗಿ ನಾಗರಿಕ ಪ್ರಜ್ಞೆ ಎಂಬ ಪರಿಕಲ್ಪನೆಯೇ ಇಲ್ಲದ ನಮ್ಮ ಆಧುನಿಕ ಸಮಾಜದಲ್ಲಿ ಈ ರೀತಿಯ ಚಟುವಟಿಕೆಗಳು ಸಲ್ಲದು ಎಂಬ ಪರಿಜ್ಞಾನವೇ ಇರುವುದಿಲ್ಲ. ಶಾಲಾ ಮಟ್ಟದಿಂದಲೇ ಕಲಿಯಬೇಕಾದ ಈ ಸಣ್ಣಪುಟ್ಟ ಪಾಠಗಳನ್ನು ಕಲಿಯುವ ಪ್ರಯತ್ನವನ್ನೂ ನಾವು ಮಾಡುತ್ತಿಲ್ಲ. “ ನಮ್ಮ ಮನೆಯ ಮುಂದಿನ ಜಾಗ ನಮ್ಮದು ನಾವು ಏನಾದರೂ ಮಾಡುತ್ತೇವೆ, ನಮ್ಮ ಧರ್ಮದ ಕೇಂದ್ರದಲ್ಲಿ ನಾವು ಏನನ್ನಾದರೂ ಆಚರಿಸುತ್ತೇವೆ, ನಮ್ಮ ಅಸ್ಮಿತೆಯ ರಕ್ಷಣೆಗಾಗಿ ಏನನ್ನಾದರೂ ಮಾಡುತ್ತೇವೆ ” ಹೀಗೆ ಅಹಮಿಕೆಯ ಮನೋಭಾವ ನಮ್ಮ ಸುಶಿಕ್ಷಿತ ಸಮಾಜವನ್ನೂ ಆವರಿಸಿರುವುದು ದುರಂತವಾದರೂ ಸತ್ಯ.

ಮಸೀದಿಯ ಅಝಾನ್, ದೇವಾಲಯಗಳ ಸುಪ್ರಭಾತ, ಸಾರ್ವಜನಿಕ ಸಮಾರಂಭಗಳ ಸಂದರ್ಭದ ಸಿನಿಮಾ ಹಾಡುಗಳು ಹೀಗೆ ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದು ನಮ್ಮ ಸಾಂವಿಧಾನಿಕ, ಜನ್ಮಸಿದ್ಧ ಹಕ್ಕು ಎಂಬ ಧೋರಣೆಯನ್ನು ಇಲ್ಲಿ ಕಾಣಬಹುದು. ಇಲ್ಲಿ ಮತಧರ್ಮ, ಸೆಕ್ಯುಲರಿಸಂ, ದೇಶಪ್ರೇಮದ ಪ್ರಶ್ನೆ ಉದ್ಭವಿಸುವುದಿಲ್ಲ. ಯಾವುದೇ ಧರ್ಮದಲ್ಲೂ ಪ್ರಾರ್ಥನೆಗಾಗಿ ಭಕ್ತಾದಿಗಳನ್ನು ಆಹ್ವಾನಿಸುವ ಪರಂಪರೆ ಇರುವುದಿಲ್ಲ. ದೈವ ಭಕ್ತಿ ಇರುವವರಿಗೆ ಅಲಾರಂ ಗಂಟೆ ಹೊಡೆದು ಜಾಗೃತಗೊಳಿಸಬೇಕಾದ ಅವಶ್ಯಕತೆಯೂ ಇರುವುದಿಲ್ಲ. ಹಾಗೆ ನೋಡಿದರೆ ಹಿಂದೂ ದೇವಾಲಯಗಳಲ್ಲಿ ನಸು ಮುಂಜಾನೆಯಿಂದಲೇ ಧ್ವನಿವರ್ಧಕಗಳಲ್ಲಿ ಸುಪ್ರಭಾತ ಕೇಳಿಬರುತ್ತಿರುತ್ತದೆ. ಇದೂ ಶಬ್ದ ಮಾಲಿನ್ಯವೇ. ಮಸೀದಿಯ ಅಝಾನ್ ಸಹ ಶಬ್ದ ಮಾಲಿನ್ಯವೇ. ಅಷ್ಟೇ ಅಲ್ಲ ಅನಗತ್ಯವೂ ಹೌದು. ಆದರೆ ಇದನ್ನು ಪ್ರಶ್ನಿಸುವರಾರು ?
ಕನ್ನಡ ರಾಜ್ಯೋತ್ಸವಕ್ಕಾಗಿ, ರಾಮನವಮಿಗಾಗಿ, ತಮ್ಮ ಖಾಸಗಿ ಸಮಾರಂಭಕ್ಕಾಗಿ ರಸ್ತೆ ಬಂದ್ ಮಾಡಿ ಧ್ವನಿವರ್ಧಕಗಳ ಅಬ್ಬರದಿಂದ ಶಾಂತಿ ಕದಡುವ ಸಂಘಟನೆಗಳನ್ನು , ವ್ಯಕ್ತಿಗಳನ್ನು, ರಾಜಕೀಯ ಪಕ್ಷಗಳನ್ನು ಪ್ರಶ್ನಿಸಲಾದೀತೇ ?

ಇಲ್ಲಿ ಸಂಘಟನಾತ್ಮಕ ಸಾಮಥ್ರ್ಯ, ಅಧಿಪತ್ಯ ಮತ್ತು ಪ್ರಾಬಲ್ಯ ಮುನ್ನೆಲೆಗೆ ಬರುತ್ತದೆ. ಧರ್ಮಕೇಂದ್ರಗಳ ವಿಚಾರದಲ್ಲೂ ಇದೇ ವಿದ್ಯಮಾನವನ್ನು ಗಮನಿಸಬಹುದು. ಇಂದು ದೇವಾಲಯಗಳು, ಮಸೀದಿಗಳು ಕೇವಲ ಧರ್ಮಕೇಂದ್ರಗಳಾಗಿಲ್ಲ. ಒಂದು ಸಂಘಟನಾತ್ಮಕ ಶಕ್ತಿ ಕೇಂದ್ರಗಳಾಗಿವೆ. ಹಾಗಾಗಿ ಸಾರ್ವಜನಿಕರ ಆಕ್ಷೇಪಗಳಿಗೆ ಉಗ್ರ ರೂಪದ ಪ್ರತ್ಯುತ್ತರ ಸಿದ್ಧವಾಗಿರುತ್ತದೆ. ಸರ್ಕಲ್‍ಗಳಲ್ಲಿ, ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಪಟಾಕಿ ಸಿಡಿಸುವ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು ಪ್ರಶ್ನಿಸಲಾದೀತೇ ? ಕಿವಿ ಕಿತ್ತುಹೋಗುವಂತೆ ಸದ್ದು ಮಾಡುವ ರಾಜ್ಯೋತ್ಸವದ ಸಭೆಗಳ ಧ್ವನಿವರ್ಧಕಗಳನ್ನು ಪ್ರಶ್ನಿಸಲಾದೀತೇ ? ಹಾಗೆ ಪ್ರಶ್ನಿಸಿದಲ್ಲಿ ಫತ್ವಾಗಳೇನೂ ಕೇಳಿಬರುವುದಿಲ್ಲ. ಆದರೆ ಪ್ರಶ್ನಿಸಿದವರ ಅಸ್ತಿತ್ವವೇ ಪ್ರಶ್ನಾರ್ಹವಾಗಿಬಿಡುತ್ತದೆ. ಏಕೆಂದರೆ ಇಲ್ಲಿ ನಾಗರಿಕ ಪ್ರಜ್ಞೆ ನಶಿಸಿಹೋಗಿರುತ್ತದೆ. ಆತ್ಮರತಿ, ಅಹಮಿಕೆ, ಪ್ರತಿಷ್ಠೆ, ಭಾವನೆಗಳು ಪ್ರಧಾನ ಪಾತ್ರ ವಹಿಸುತ್ತವೆ. ಸಂಘಟನಾತ್ಮಕ ಶಕ್ತಿ ಪ್ರಕಟವಾಗುತ್ತದೆ.

ಸೋನು ನಿಗಮ್ ಕೇವಲ ಅಝಾನ್ ಕುರಿತು ಪ್ರಸ್ತಾಪಿಸಿಲ್ಲ. ಶಬ್ದ ಮಾಲಿನ್ಯವನ್ನು ತಡೆಗಟ್ಟಬೇಕಾದ ಅನಿವಾರ್ಯತೆಯನ್ನು ಪ್ರಸ್ತಾಪಿಸಿದ್ದಾರೆ. ಮತ್ತಾವುದೋ ಮತಧರ್ಮ ಕೇಂದ್ರಗಳ ಚಟುವಟಿಕೆಗಳನ್ನು ಪ್ರಸ್ತಾಪಿಸಿ ಸೋನು ಅಭಿಪ್ರಾಯಕ್ಕೆ ಆಕ್ಷೇಪ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ ಎನಿಸುತ್ತದೆ. ಧರ್ಮ ಮತ್ತು ಧಾರ್ಮಿಕ ಕೇಂದ್ರಗಳನ್ನು ಬದಿಗಿಟ್ಟು ಸಮಷ್ಟಿ ಪ್ರಜ್ಞೆಯಿಂದ ನೋಡಿದಾಗ ಸೋನು ನಿಗಮ್ ಹೇಳಿಕೆ ಆರೋಗ್ಯಕರ ಚರ್ಚೆಗೆ ಪೂರಕವಾಗಬಹುದು. ಧರ್ಮ ಮತ್ತು ಧಾರ್ಮಿಕ ಆಚರಣೆಗಳು ವ್ಯಕ್ತಿಗತ ನೆಲೆಯುಳ್ಳದ್ದು. ಇದು ವ್ಯಕ್ತಿ ಅಥವಾ ನಿರ್ದಿಷ್ಟ ಕುಟುಂಬದ ಚೌಕಟ್ಟುಗಳನ್ನು ಮೀರಿ ಸಾರ್ವತ್ರಿಕತೆಯನ್ನು ಪಡೆದುಕೊಂಡಾಗ ಇಂತಹ ವಿಕೃತಿಗಳು ಸೃಷ್ಟಿಯಾಗುತ್ತವೆ. ಈ ವಿಕೃತಿಗಳೇ ಸಮಾಜದ ಮೇಲೆ ತಮ್ಮ ಅಧಿಪತ್ಯ ಸಾಧಿಸಲೆತ್ನಿಸುವ ಸಾಂಸ್ಥಿಕ ಶಕ್ತಿಗಳಿಗೆ ಬಂಡವಾಳವೂ ಆಗುತ್ತವೆ. ಮನೆಮನೆಗಳಲ್ಲಿ ಸಣ್ಣಪುಟ್ಟ ಬಟ್ಟಲುಗಳಲ್ಲಿರುತ್ತಿದ್ದ ರಾಮನವಮಿಯ ಪಾನಕ ಇಂದು ರಸ್ತೆ ಬದಿಯಲ್ಲಿ ಬೃಹತ್ ಗಾತ್ರದ ಡ್ರಂಗಳಲ್ಲಿ ಕಾಣುತ್ತಿಲ್ಲವೇ ? ಇದು ಭಕ್ತಿಯ ಸಂಕೇತವಲ್ಲ, ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಶ್ನೆ. ಇದಕ್ಕೆ ಸಾರ್ವಜನಿಕರು ಬಲಿಯಾಗುವ ಅವಶ್ಯಕತೆ ಇಲ್ಲ.

ಆಧುನಿಕ ಭಾರತದ ನಾಗರಿಕ ಸಮಾಜವನ್ನು ಕೇವಲ ಶಬ್ದ ಮಾಲಿನ್ಯ ಬಾಧಿಸುತ್ತಿಲ್ಲ. ನಮ್ಮ ಜ್ಞಾನ ಪರಂಪರೆಯು ಮಲಿನವಾಗುತ್ತಿದೆ. ನಮ್ಮ ನಂಬಿಕೆಗಳೂ ಮಲಿನವಾಗುತ್ತಿವೆ. ಆಚರಣೆಗಳೂ ಮಲಿನವಾಗುತ್ತಿವೆ. ಸಂವಹನ ಮಾಧ್ಯಮಗಳನ್ನು ಮೌಢ್ಯ ಹರಡುವ ವೇದಿಕೆಗಳಂತೆ ಬಳಸುವ ಮೂಲಕ ಜನಸಾಮಾನ್ಯರ ಮನಸ್ಸುಗಳನ್ನೂ ಮಲಿನಗೊಳಿಸಲಾಗುತ್ತಿದೆ. ದಿನಬೆಳಗಾದರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾರಾಜಿಸುವ “ ಗುರೂಜಿ ”ಗಳ ದಂಡು ದೇವಸ್ಥಾನಗಳ ಏಜೆಂಟರಂತೆ ಕೆಲಸ ನಿರ್ವಹಿಸುತ್ತಿರುವುದು ಗುಟ್ಟಿನ ಮಾತೇನಲ್ಲ. ಈ ಅಝಾನ್‍ಗಳ ವಿರುದ್ಧವೂ ದನಿ ಎತ್ತಬೇಕಿದೆ. ಮೌಲ್ವಿಯೊಬ್ಬರ ಫತ್ವಾಗೆ ಪ್ರತಿಕ್ರಯಿಸಿ ಸೋನು ನಿಗಮ್ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ. ಅವರ ಬೋಳುತಲೆ ನಮ್ಮಲ್ಲಿನ ಸಾರ್ವಜನಿಕ ಪ್ರಜ್ಞೆ ಮತ್ತು ನಾಗರಿಕ ಪ್ರಜ್ಞೆಯ ದ್ಯೋತಕವೂ ಆಗಿದೆ.

Leave a Reply

Your email address will not be published.