ಧರ್ಮ ಮತ್ತು ಪ್ರಭುತ್ವ ! ಜೊತೆಯಲಿ, ಜೊತೆಜೊತೆಯಲಿ?  

-ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

 

 ಗೋರಖ್ ಪುರದ ಪ್ರಮುಖ ಮಹಾಂತರಾದ ಆದಿತ್ಯನಾಥ್ ಯೋಗಿಯವರು ಉತ್ತರಪ್ರದೇಶದ ನೂತನ ಮುಖ್ಯಮಂತ್ರಿಗಳಾಗಿದ್ದಾರೆ. ಬಹುತೇಕ ಮಾಧ್ಯಮಗಳು ಇದೊಂದು ಅಚ್ಚರಿಯ ಅನಿರೀಕ್ಷಿತ ಬೆಳವಣಿಗೆಯೆಂದು ಹೊಸ ಹವಾ ಸೃಷ್ಠಿಸುತ್ತಿವೆ. ಆದರೆ ನನಗನ್ನಿಸುವಂತೆ ಇದೇನು ಅಚ್ಚರಿಯ ಅಥವಾ ಅನಿರೀಕ್ಷಿತವಾದ ಬೆಳವಣಿಗೆಯೇನೂ ಅಲ್ಲ. ಯಾವಾಗ 2014ರ ಮೇ ತಿಂಗಳಲ್ಲಿ ನಡೆದ ರಾಷ್ಟ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಜಪ ಅಭೂತಪೂರ್ವ ಬಹುಮತ ಪಡೆದು ಸರಕಾರ ರಚಿಸುವಲ್ಲಿ ಯಶಸ್ವಿಯಾಯಿತೊ ಆ ಕ್ಷಣದಿಂದಲೇ ಇಂತಹುದೊಂದು ಪ್ರಕ್ರಿಯೆ ಪ್ರಾರಂಭವಾಯಿತೆನ್ನಬುದು.

  yogi ಬಲಪಂಥೀಯ ರಾಜಕಾರಣದ ಬಗ್ಗೆ ಏನೇನು ಆತಂಕಗಳಿದ್ದವೊ ಅವುಗಳೀಗ ಒಂದೊಂದಾಗಿ ನಿಜವಾಗತೊಡಗುವುದು ಖಚಿತ! ಧರ್ಮ ಮತ್ತು ಪ್ರಭುತ್ವಗಳೆರಡೂ ಒಟ್ಟೊಟ್ಟಿಗೆ ಸಾಗುವ ಮತ್ತು ಅಂತಿಮವಾಗಿ ಧರ್ಮವೇ ಪ್ರಭುತ್ವವಾಗಿ ಬಿಡುವ ರೀತಿ ಇತಿಹಾಸದಲ್ಲಿ ಹೊಸದೇನಲ್ಲ. ಇಂಡಿಯಾದಂತ ದೇಶದಲ್ಲಿಯಂತು ಧರ್ಮ ಮತ್ತು ಪ್ರಭುತ್ವದ ನಡುವಿನ ಇಂತಹ ಪೂರಕ ಕಾರ್ಯಚಟುವಟಿಕೆಗಳನ್ನು ಪ್ರತಿಯೊಂದು ಕಾಲಘಟ್ಟದಲ್ಲಿಯೂ ಕಾಣಬಹುದಾಗಿದೆ. ಇಂಡಿಯಾದ ಬೇರೆಬೇರೆ ಭಾಗಗಳನ್ನು ಆಳಿದ ರಾಜರುಗಳ ಕಾಲದ ಇತಿಹಾಸವನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದರೆ ಸಾಕು, ಅಂದಿನ ರಾಜರ ಅರಮನೆಗಳಿಗೂ ಆ ನಾಡಿನ ಬಲಿಷ್ಠ ಧರ್ಮದ ನಡುವೆಯೂ ಒಂದು ಅಲಿಖಿತ ಒಪ್ಪಂದವಿದ್ದಂತೆ  ಕಾಣುತ್ತದೆ. ಅದರ ಪ್ರಕಾರ ರಾಜಪ್ರಭುತ್ವದ ಎಲ್ಲ ನಿರ್ದಾರಗಳಿಗೂ ಧರ್ಮ ತೆರೆಮರೆಯಲ್ಲಿಯೇ ನಿಂತು ಬೆಂಬಲಿಸುವುದನ್ನು ನೋಡಬಹುದಾಗಿದೆ. ಅದಕ್ಕೆ ತಕ್ಕಂತೆ ರಾಜಪ್ರಭುತ್ವವು ಸಹ ಆ ಧರ್ಮದ ಉಳಿವಿಗೆ ಬೆಳವಣಿಗೆಗೆ ಬೇಕಾದ ಸಹಾಯವನ್ನು ನೀಡುತ್ತಲೇ ಬಂದಿವೆ. ಆ ಸಹಾಯ ಯಾವ ರೂಪದಲ್ಲಿಯಾದರು ಆಗಿರಬಹುದು! ಧಾರ್ಮಿಕ ಕೇಂದ್ರಗಳಿಗೆ ಹಣಕಾಸಿನ ನೆರವು ನೀಡುವುದರಿಂದ ಹಿಡಿದು ಸದರಿ ಧರ್ಮವನ್ನೇ ರಾಜಧರ್ಮವನ್ನಾಗಿಸಿ ಜನತೆಯ ಮೇಲೆ ಅದನ್ನು ಹೇರುವುದರ ಮೂಲಕವಾದರು ಸರಿಯೇ. ಇದು ಕೇವಲ ಹಿಂದೂ ರಾಜರುಗಳ ಕಾಲದಲ್ಲಿ ಮಾತ್ರವಲ್ಲದೆ, ಮೊಗಲ್ ದೊರೆಗಳ ಕಾಲದಲ್ಲಿಯೂ ನಡೆದುಕೊಂಡೇ ಬಂದಿತು. ಸಾಮ್ರಾಟ್ ಅಶೋಕನಂತವನು ಸಹ ಬೌದ್ದ ಧರ್ಮಕ್ಕೆ ಆಸರೆಯಾಗಿ ನಿಂತು, ದೇಶವಿದೇಶಗಳಲ್ಲಿಯೂ ಅದು ಹರಡುವಂತೆ ನೋಡಿಕೊಂಡಿದ್ದರ ಹಿನ್ನೆಲೆಯೂ  ಸಹ ಇಂತಹುದೆ ಕೊಡುಕೊಳ್ಳುವ ಸಂಬಂದವೇ.

      ಆದರೆ ಇಪ್ಪತ್ತನೇ ಶತಮಾನದಲ್ಲಿ ಬಹುತೇಕ ರಾಜ್ಯಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪ್ಪಿಕೊಂಡಿದ್ದರ ಪರಿಣಾಮವಾಗಿ ಒಂದಷ್ಟು ಕಾಲ ಪ್ರಭುತ್ವದ ಆಸರೆಯಿಲ್ಲದ ಧರ್ಮಗಳು ನೇಪಥ್ಯಕ್ಕೆ ಸರಿದಿದ್ದವು. ಆದರೆ ಮದ್ಯ ಪ್ರಾಚ್ಯದ ಹಲವು ಮುಸ್ಲಿಂ ರಾಷ್ಟ್ರಗಳು ಮಾತ್ರ ಧರ್ಮವ್ನೇ ಪ್ರಭುತ್ವವನ್ನಾಗಿಸಿಕೊಂಡು ವಿನಾಶದೆಡೆಗೆ ಸಾಗಿದವು. ಇವತ್ತಿನ ಅಂತರರಾಷ್ಟ್ರೀಯ ಭಯೋತ್ಪಾದನೆಯ ಹಿಂದೆ ಹೀಗೆ ಧರ್ಮವನ್ನು ಪ್ರಭುತ್ವವನ್ನಾಗಿಸಿಕೊಂಡ ರಾಷ್ಟ್ರಗಳ ಕೊಡುಗೆಯೇ ಅಪಾರವೆನ್ನಬಹುದು. ಎಲ್ಲ ಕಾಲಕ್ಕೂ ಧರ್ಮಗಳು ರಾಜರ, ಉಳ್ಳವರ, ಮೇಲ್ವರ್ಗದವರ ಆಶ್ರಯದಲ್ಲಿ ನಾಡಿನ ಬಡವರ ಕೆಳಸ್ತರಗಳ ಜನರ ಕಷ್ಟಸುಖಗಳ ಪರಿವೆಯೇ ಇಲ್ಲದೆ ಬೆಳೆಯುತ್ತಿರುತ್ತದೆ. ಅದು ಪ್ರಜಾಪ್ರಭುತ್ವವೇ ಆಗಲಿ ಅಥವಾ ಇನ್ನಾವುದೇ ತೆರನಾದ ಪ್ರಭುತ್ವವೇ ಇರಲಿ ಧರ್ಮ ಪ್ರಭುತ್ವದ ಅದರ ಪರವಾಗಿದ್ದು ತನ್ನ ಹಿತರಕ್ಷಣೆಯನ್ನು ಮಾಡಿಕೊಳ್ಳುತ್ತಲೇ ಇರುತ್ತದೆ. ಜೊತೆಗೆ ಪ್ರಭುತ್ವವನ್ನು ಸಾರ್ವಜನಿಕ ಟೀಕೆಗಳಿಂದ ವಿಮರ್ಶೆಗಳಿಂದ ರಕ್ಷಿಸಲು ಪ್ರಯತ್ನಿಸುತ್ತಿರುತ್ತದೆ. ಅದೇ ರೀತಿ ಪ್ರಭುತ್ವವೂ ಸಹ ಪರೋಕ್ಷವಾಗಿ ಧರ್ಮವನ್ನು ರಕ್ಷಿಸುವ ಮತ್ತು ಜನತೆಯ ವಸ್ತುನಿಷ್ಠ ಟೀಕೆಗಳಿಂದ ಅದನ್ನು ಕಾಪಾಡಲು ಸನ್ನದ್ದವಾಗಿರುತ್ತದೆ.

ಹಾಗಾಗಿಯೇ ಪ್ರಜಾಪ್ರಭುತ್ವ ವ್ಯವಸ್ಥೆ ಇರುವಂತಹ ಇಂಡಿಯಾದಂತ ದೇಶದಲ್ಲಿಯೂ ಧರ್ಮವನ್ನು ವಸ್ತುನಿಷ್ಠವಾಗಿ ವಿಮರ್ಶೆಗೊಳಪಡಿಸಲು ಸಾದ್ಯವೇ ಇಲ್ಲದಂತಹ ಪರಿಸ್ಥಿತಿ ಇದೆ. ಈ ಸ್ಥಿತಿ ಇವತ್ತು ನಿನ್ನೆಯದೇನಲ್ಲ. ಯಾವುದೇ ಪಕ್ಷದ ಆಡಳಿತ ನಡೆಯುತ್ತಿದ್ದರೂ ಧರ್ಮಕ್ಕೆ ಯಾವುದು ಒಳ್ಳೆಯದು ಎನಿಸುತ್ತದೆಯೊ ಅದನ್ನೇ ಪ್ರಭುತ್ವ ಮಾಡುತ್ತಿರುತ್ತದೆ ಅದೆಷ್ಟೇ ಜಾತ್ಯಾತೀತ ರಾಜಕಾರಣ ಮಾಡುವ ಪಕ್ಷವೆಂದು ಕೊಚ್ಚಿಕೊಂಡರೂ ಬಹುತೇಕ ಎಲ್ಲ ಪಕ್ಷಗಳೂ ಧರ್ಮದ ಆಣತಿಯಂತೆ ಅದಕ್ಕೆ ಅನುಕೂಲಕರವಾಗಿರಬಹುದಾದಂತಹ ನಿರ್ದಾರಗಳನ್ನು ಮಾತ್ರ ತೆಗೆದುಕೊಳ್ಳುತ್ತಿರುತ್ತದೆ. ಇದಕ್ಕೆ ಬೇಕಾದ ಉದಾಹರಣೆಗಳನ್ನು ನೋಡಲು ನಾವು ಇತಿಹಾಸದ ಗೋರಿಗಳನ್ನೇನು ಅಗೆಯಬೇಕಾಗಿಲ್ಲ. ಎಂಭತ್ತರ ದಶಕದಲ್ಲಿ ನಮ್ಮ ದೇಶದ ಪ್ರದಾನಮಂತ್ರಿಯವರಾಗಿದ್ದ ರಾಜೀವ್ ಗಾಂದಿಯವರು ಶಾಬಾನು ಪ್ರಕರಣದಲ್ಲಿ  ಉಚ್ಚನ್ಯಾಯಾಲಯ ನೀಡಿದ ತೀರ್ಪನ್ನ ನಗಣ್ಯ ಮಾಡುವಂತಹ ನಿರ್ದಾರ ತೆಗೆದುಕೊಂಡಿದ್ದು ಮುಸ್ಲಿಮರನ್ನು ಸಂತುಷ್ಠಗೊಳಿಸಲೆಂದೇ ಆಗಿತ್ತು. ಇಲ್ಲಿಯೂ ಧರ್ಮವೇ ಪ್ರಭುತ್ವದ ನಿರ್ದಾರವನ್ನು ನಿರ್ದೇಶಿಸಿತ್ತು. ನಂತರ ವಿವಾದಿತ ಬಾಬ್ರಿಮಸೀದಿಯ ಬೀಗವನ್ನು ತೆಗೆಸಿ, ಹಿಂದೂಗಳಿಗೆ ಪೂಜೆಯ ಅವಕಾಶವನ್ನು ಮಾಡಿಕೊಟ್ಟಿದ್ದರ ಹಿಂದೆಯೂ ಧರ್ಮಕ್ಕೆ ಪೂರಕವಾದ ವರ್ತನೆಯಿತ್ತು. ಹೀಗೆ ಯಾರೇ ಪ್ರಭುತ್ವದಲ್ಲಿದ್ದರೂ, ಆ ಪ್ರಭುತ್ವದ ಆಯಕಟ್ಟಿನ ವ್ಯಕ್ತಿಗಳನ್ನು ಪ್ರಬಾವಿಸುವ ಧರ್ಮಗಳು ತಮಗೆ ಅನುಕೂಲಕರವಾದಂತಹ ನಿರ್ದಾರಗಳನ್ನು ಮಾತ್ರ ತೆಗೆದುಕೊಳ್ಳುವಂತೆ ಪ್ರಭುತ್ವವನ್ನು ವಶೀಕರಿಸಿಕೊಳ್ಳುತ್ತಲೇ ಬಂದಿವೆ. ವಿಶೇಷವೆಂದರೆ ಮೇಲೆ ನಾನು ಉಲ್ಲೇಖಿಸಿದ ಯಾವುದೇ ಪ್ರಕರಣದಲ್ಲಿಯೂ ಧರ್ಮ ನೇರವಾಗಿ ಪ್ರಭುತ್ವವನ್ನು ನಿಯಂತ್ರಿಸುವಂತೆ ಕಾಣುವುದಿಲ್ಲ.ಇಂಡಿಯಾದಲ್ಲಂತು ಎಲ್ಲವೂ ಧರ್ಮ ನಿರಪೇಕ್ಷ ಆಡಳಿತದಂತೆಯೇ ಕಂಡುಬಂದರೂ ಆಳದಲ್ಲಿ ಪ್ರಭುತ್ವ ಮತ್ತು ಧರ್ಮಗಳು ಒಟ್ಟೊಟ್ಟಿಗೆ ಸಾಗುತ್ತಿರುತ್ತವೆ.

     ಆದರೀಗ ಪರೋಕ್ಷವಾಗಿದ್ದ ಧರ್ಮ ಮತು ಪ್ರಭುತ್ವದ ಸಂಬಂದ  ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳುತ್ತಿದೆ. ಪ್ರಭುತ್ವದ ದೈನಂದಿನ ಆಡಳಿತದಲ್ಲಿ ಕೈ ಹಾಕುತ್ತಿರುವ  ಧರ್ಮ ತನ್ನೆಲ್ಲ ಸಂಕೋಚವನ್ನೂ ತೊರೆದಿದ್ದು,  ಧರ್ಮವೊಂದನ್ನು ಸಾರ್ವಜನಿಕವಾಗಿ ಬೆಂಬಲಿಸಿ ನಿಲ್ಲುತ್ತಿರುವ ಪ್ರಭುತ್ವ ತನ್ನ ಮುಜುಗರವನ್ನೆಲ್ಲ ಬಿಟ್ಟು ಹಾಕಿದೆ. ಈ ಕಾರಣದಿಂದಾಗಿ ಇವತ್ತು ಹಿಂದೆಂದಿಗಿಂತಲೂ ಹೆಚ್ಚಾಗಿ ಧರ್ಮ ಮತ್ತು ಪ್ರಭುತ್ವ ಜೊತೆಯಾಗಿ ಸಾಗುತ್ತಿವೆ. ಇಂಡಿಯಾದ ಮಟ್ಟಿಗೆ ಇಂತಹ ನಿಸ್ಸಂಕೋಚ ಜೊತೆಗಾರಿಕೆ ಪ್ರದರ್ಶನವಾಗುತ್ತಿರುವುದು ಬಲಪಂಥೀಯ ಬಾಜಪ ಬಲಿಷ್ಠವಾಗುವುದರೊಂದಿಗೆ ಎನ್ನುವುದು ಸತ್ಯ.  ಕಳೆದೆರಡು ದಶಕಗಳಿಂದ ಇಂಡಿಯಾದ ರಾಜಕಾರಣದಲ್ಲಿ ನಡೆದದ್ದೇ ಅದು.  ಬಾಜಪವನ್ನು ಪರೋಕ್ಷವಾಗಿ ನಿಯಂತ್ರಿಸುತ್ತಿರುವ ಸಂಘಪರಿವಾರ ತನ್ನ ಗುಪ್ತಕಾರ್ಯಸೂಚಿಯನ್ನು ಆ ಪಕ್ಷದ ಮೂಲಕ ಸಮಾಜದಲ್ಲಿ ಬಿತ್ತಲು ಪ್ರಾರಂಬಿಸಿತು. ಬಾಜಪವು ಸಹ  ಇದಕ್ಕೆ ಪೂರಕವಾಗಿ  ತನ್ನ ತತ್ವ ಸಿದ್ದಾಂತಗಳನ್ನು ರೂಪಿಸಿಕೊಂಡು ರಾಜಕಾರಣ ಮಾಡತೊಡಗಿತು.

ಈ ನೆಲೆಯಲ್ಲಿಯೇ ಅದು ಹಿಂದೂ ಮತಗಳ ದೃವೀಕರಣಕ್ಕೆ ಮುಂದಾಯಿತು.ಹೀಗೆ ದೃವೀಕರಣಗೊಳ್ಳಲು ಪ್ರಬಲವಾದ ನಾಯಕನೊಬ್ಬನ ಅವಶ್ಯಕತೆ ಧರ್ಮಕ್ಕೆ ಇರುತ್ತದೆ. ಅಂತಹ ನಾಯಕನನ್ನು ಅದು ಹುಡುಕಿ ಪ್ರಭುತ್ವದಪಳಗಿಸುವಿಕೆಗೆ  ತೊಡಗಿಸಿಕೊಳ್ಳುತ್ತದೆ.  ನರೇಂದ್ರಮೋದಿಯವರು ಅಂತಹ ಬಲಿಷ್ಠ ನಾಯಕನಾಗಿ ಹೊರಹೊಮ್ಮಿದ್ದರ ಪರಿಣಾಮವಾಗಿ ಬಾಜಪ ಬಹುಮತ ಪಡೆದು ಅಧಿಕಾರ ಹಿಡಿಯಲು ಸಾದ್ಯವಾಯಿತೆಂಬುದೇನೊ ನಿಜ. ಈಗ ಆ ಅಧಿಕಾರವನ್ನು ಇಂಡಿಯಾದ ಎಲ್ಲ ಪ್ರದೇಶಗಳಿಗೂ ವಿಸ್ತರಿಸಬೇಕಾಗಿದೆ ಮಾತ್ರವಲ್ಲ. ಸಿಕ್ಕ ಅದಿಕಾರವನ್ನು ಮುಂದಿನ ವರ್ಷಗಳಲ್ಲಿಯೂ ಉಳಿಸಿಕೊಳ್ಳುವುದು ಧರ್ಮಕ್ಕೆ ಅನಿವಾರ್ಯವಾಗಿದೆ. ಹಾಗಾಗಿಯೇ ಇದೀಗ ಧರ್ಮ ತೀರಾ ಸಕ್ರಿಯವಾಗಿ, ಪ್ರತ್ಯಕ್ಷವಾಗಿಯೇ ಪ್ರಭುತ್ವದ ಒಂದು ಭಾಗವಾಗಿ ಕಾರ್ಯ ನಿರ್ವಹಿಸುವ  ಇರಾದೆಗೆ ಬಂದಿದೆ. ಯಾಕೆಂದರೆ ನಿರಂಕುಶ ಪ್ರಭುತ್ವವೊಂದು ಯಾವಾಗ ಬೇಕಾದರು ಧರ್ಮದ ಕಟ್ಟಳೆಯನ್ನು ಮೀರಿ ನಡೆದುಬಿಡಬಹುದೆಂಬ ಆತಂಕ ಧರ್ಮಕ್ಕೆ ಇದ್ದೇ ಇರುತ್ತದೆ.

     ಇಂತಹ ಆತಂಕದ ಒಂದು ಭಾಗವಾಗಿಯೇ ಇವತ್ತು ಯೋಗಿ ಆದಿತ್ಯನಾಥ್ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬಹುಶ: ಸದ್ಯಕ್ಕೆ ಇದೊಂದು ಪ್ರಯೋಗದಂತೆ ಕಂಡರೂ ಮುಂದೊಂದು ದಿನ ಇದನ್ನೇ ಯಶಸ್ವಿಯಾಗಿ ಎಲ್ಲೆಡೆ ಜಾರಿಗೊಳಿಸಬಹುದಾಗಿದೆ. ಆದರೆ ಇವತ್ತು ಇದನ್ನು ಖಂಡತುಂಡವಾಗಿ ವಿರೋಧಿಸುವ ಯಾವ ಶಕ್ತಿಗಳೂ ಕಳೆದ ಇಪ್ಪತ್ತು ವರ್ಷಗಳಿಂದ ಯೋಗಿಯವರು ಜನಪ್ರತಿನಿಧಿಯಾಗಿದ್ದನ್ನು ವಿರೋಧಿಸಿದಂತೆ ಕಾಣುತ್ತಿಲ್ಲ.  ನಮ್ಮ ಸಂವಿದಾನದ ಪ್ರಕಾರ ಧಾರ್ಮಿಕ ವ್ಯಕ್ತಿಗಳು ಜನಪ್ರತಿನಿಧಿಗಳಾಗಬಾರದೆಂಬ ಯಾವ ನಿರ್ಬಂದವೂ ಇಲ್ಲ. ಆದ್ದರಿಂದ ಸಾಂವಿದಾನಿಕವಾಗಿ ಮುಖ್ಯಮಂತ್ರಿಯಾಗಿರುವ ಯೋಗಿಯವರನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾಯತೆ ಸೃಷ್ಠಿಯಾಗಿದೆ. ಹೀಗಾಗಿ ಧರ್ಮ ಮತ್ತು ಪ್ರಭುತ್ವ ಬೇರೆಬೇರೆಯಾಗಿಯೇ ಇರಬೇಕೆಂದು ಬಯಸುವ ಶಕ್ತಿಗಳು, ತಳಮಟ್ಟದಲ್ಲಿ ಜನರಲ್ಲಿ ಧರ್ಮವೊಂದು ಪ್ರಭುತ್ವವಾದಾಗ ಘಟಿಸಬಹುದಾದ ಅಪಾಯಗಳ ಬಗ್ಗೆ ಅರಿವು ಮೂಡಿಸಬೇಕೇ ಹೊರತು ವೃಥಾ ಎದೆಬಡಿದುಕೊಂಡು ಅಳುವುದಲ್ಲ!

  ನಮ್ಮ ಜನಪರ ಹೋರಾಟಗಾರರು ಮತ್ತು ಜನಪರವಾಗಿಜಾತ್ಯಾತೀತ ರಾಜಕಾರಣ ಮಾಡುವ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಜನರನ್ನು  ಜಾಗೃತಗೊಳಿಸುವತ್ತ ಚಿಂತಿಸಬೇಕಿದೆ.

Leave a Reply

Your email address will not be published.