ದೊಡ್ಡೇಗೌಡರ ಛೇರ್ಮನ್ ಮೂಗು

-ಡಾ. ರಾಜೇಗೌಡ ಹೊಸಹಳ್ಳಿ

ನಾನು : ಎಲಾ ಗೋಪಾಲ ಈಗ ಯಾರೋ ಊರಲ್ಲಿ ಮೆಂಬರು? ಎಲೆಕ್ಷನ್ನು ಮತ್ತೆ ಬಂತಲ್ಲಾ? ಅಂದೆ.
pinocchioಅವನು : ಅದ್ಯಾಕಣ್ಣ ಹಂಗಂತೀಯಾ! ನಮ್ಮ ಜಡ್ಡಣ್ಣನ ಮನೆ ದೊಡ್ಡಣ್ಣ ಈಗ ಛೇರ್ಮೆನಲ್ಲವೆ. ನಮ್ಮೂರು ಅಂದ್ರೆ ಏನಂತ ತಿಳಿದಿದಿಯಣ್ಣಾ! ಬ್ಯಾರೆ ಊರರಿಗೆ ಬುಡಕಾದೀತೆ! ಅಂದ.
ನಾನು : ಅಲ್ಲಾ ಕಣೋ ಅವನಿಗೇನು ತಿಳಿತದೆ ಅಂತಾ ಮಾಡಿದಿರೋ! ಪಾಪ ಸುಮ್ಮನಿದ್ದೊನ ಹಳ್ಳಕ್ಕೆ ಕೆಡವಿದರೇನಲೋ!.
ಅವನು : ಅಯ್ ಪಂಚಾಯ್ತಿ ಸೇರಿದಾಗ ನೋಡಬೇಕಾಗಿತ್ತು. ಅವನ ಪರವೇ ಅರ್ಧ ಊರಿಗೂ ಜಾಸ್ತಿ ಇತ್ತು ಅನ್ತೀನಿ. ಅವರ ಮನೆತನದೋರೆ ಅರ್ಧ ಊರಲ್ಲವೆ!
ನಾನು : ಅವನು ಒಪ್ಪಿದನೋ ಬಲವಂತ ಮಾಡಿದರೋ! ಏನಪ್ಪಾ!
ಅವನು : ಒಪ್ಪದೆ ಏನಣ್ಣೊ ಬರೀ ಮೆಂಬರಾದಾಗಲೇ ಆನೆ ಮ್ಯಾಲೆ ಕುಂತಂಗೆ ಆಡ್ತಿದ್ದ ಅಂತೀನಿ.

ನಾನು : ಅದು ಸರಿ ಕಣಲಾ ಛೇರ್ಮನ್ ಹೆಂಗಾದ? ಅದೇನು ಹುಡುಗಾಟವೇನೋ ಬ್ಯಾರೆ ಊರೋರು ಬಿಟ್ಟರಾ.?
ಅವನು : ಮೆಂಬರಾದಾಗಲೇ ವಾಡೆ ರಾಗಿ ಪೂರಾ ಆಗಿದ್ದವಾ! ನಾಕು ದನ ಸಂತೆಗೆ ಹೋದವಾಃ ಅವನ ಹೆಂಡ್ತಿ ‘ಅಯ್ಯೋ ನನ್ನ ಮಗನೇ! ನಿನ್ನವ್ವನಾ! ಅಂತೆಲ್ಲಾ ಬಾಯಿಗೆ ಬಂದಂಗೆ ಗಂಡಸು ಬಯ್ದಂಗೆ ಬಯ್ದರೂ ಕೇಳ್ತನ ಇವನು! ಲೇ ಸುಮ್ಮನಿರೆ! ಖುರ್ಚಿಮೇಲೆ ಕೂರದಂದ್ರೆ ಸುಮ್ಮನೆ ಆಯ್ತನೇ! ನಿನ್ನ ಅವ್ವನಾ ಅಂದ್ನಾ, ಅವಳು ಸುಮ್ಮನಿದ್ದಾಳಾ : ಕುತ್ತಿಗೆ ಬಗ್ಗಿಸಿ ಎರಡು ಬುಟ್ಟಳು. ಆದರೂ ಕೇಳ್ತನಾ!
ನಾನು ಅಲ್ಲಾ ಕಣಲಾ! ಛೇರ್ಮನ್ ಆಗೋಕೆ ಬ್ಯಾರೆ ಊರೋರು ಬಿಟ್ಟರೇನ್ಲಾ! ಅಲ್ಲಿ ಯಾರೂ ಗಂಡಸರು ಇರಲೇ ಇಲ್ಲವೇ?
ಅವನು : ಯಾಕಿಲ್ಲವಣ್ಣೋ! ನಮ್ಮೂರು ಅಂದ್ರೆ ಸುಮ್ಮನೆ ಆದಾತೇ! ನಾಲ್ಕು ಜನ ತಗಂದು ಹೋಗಿ ‘ಎತ್ತಿನ ಹಳ್ಳ’ ದ ಗೊಳ್ಳದ ಸುಬ್ಬೇಗೌಡ್ರ ಮನೆಲಿಟ್ಟಿರಲಿಲ್ಲವೆ!
ನಾನು ಓಹೋ! ಭಾರಿ ಶೂರಾಧಿಶೂರರು ಅನ್ನಪ್ಪ ಊರೋರು!
ಅವನು : ಅದಿರಲಣ್ಣೋ ದೊಡ್ಡಣ್ಣನ ಮೂಗಿನ ಕತೆ ಕೇಳಲೇ ಇಲ್ಲವಲಣೋ?
ನಾನು : ಅದೆಂತೆದೂ ಮೂಗು?
ಅವನು : ಎತ್ತಾಕ್ಕೊಂಡು ಕರ್ಕೊಂದು ಹೋದರಾ! ಎಲ್ಲರೂ ಏರಿಸಿದ್ರ! ಇವನು ವಾಲಾಡ್ತ ಎದ್ದೋನು, ನಾನು ಹಿತ್ಲಕಡೆಗೆ ಹೋಗಬೇಕು ಅಂದೋನೇ ಕೈಲಿ ದಪ್ಪದು ಬಿಂದಿಗೆಯಂತಾ ಚೆಂಬು ಹಿಡ್ಕಂಡು ಗೊಳ್ಳದ ಕಡೆಗೆ ಹೋದ. ಅದೇನು ನಮ್ಮೂರಂಗೋ! ಕಾಡು ಕಾಡಿನ ಅಂಚಿನ ಗೊಳ್ಳಲ್ಲವೆ! ಬಲಗೈಲಿ ಚೆಂಬು ಹಿಡಿದವನೆ ಎಡಗೈಲಿ ಚೆಡ್ಡಿ ಲಾಡಿ ಎಳೆದೇಟಿಗೆ ದಡಾರನೆ ಉರುಳಿದನಾ! ಎಂತದೋ ದಡ್‍ದಡ್ ಅಂದಂಗಾಯ್ತಂತಪ್ಪಾ! ಚೆಂಬಿನ ಸೌಂಡಿಲ್ಲದೆ ಇದ್ರೆ ಆವೊತ್ತೆ ಹೋಗಿದ್ದ ಬಿಡು.

ನಾನು : ಆಮೇಲೆ ಮುಂದೇನಾಯ್ತಲಾ?
ಅವನು : ಹೋಗಿ ನೋಡ್ತರೆ! ಏನು ಹೇಳೋದು! ಮುಟ್ಟಿ ನೋಡಿದ್ರೆ ಮುಖೆಲ್ಲ ರಕ್ತ. ದೀಪ ಹಿಡಿದು ನೋಡ್ತಾರೆ ಮೂಗೆ ಇಲ್ಲ. ಅಲಲೇ ಅಂತಾ ಮ್ಯಾಲಿಂದ ತಡರಿಸಿ ಮ್ಯಾಲೆ ಹೋಗಿರೋ ಮೂಗು ಕೆಳಗೆ ಎಳೆದು ಬಟ್ಟೆ ಕಟ್ಟಿ ಸಕಲೇಶಪುರ ಆಸ್ಪತ್ರೆಗೆ ಹಾಕಿದರಾ! ಅವನ ತಿಕಾ ತೊಳೆದು ಚಡ್ಡಿಕಟ್ಟಿದ ಕುಂಬಾರಳ್ಳಿ ನಾಗಣ್ಣನ ಕೇಳಬೇಕಣ್ಣೋ! ಎಲಾ ಗೋಪಾಲ ಇದ್ಯಾವ ಕರ್ಮವಲಾ ನಮ್ಮ ಛೇರ್ಮನ್ ದೊಡ್ಡಣ್ಣನವರ ತಿಕ ತೊಳೆದು ಚಡ್ಡಿ ಕಟ್ಟಿದಿನಿ! ಅಂತಾ ನಗ್ತಾನೆ ಕಣಣ್ಣೋ!

ನಾನು : ಅದು ಸರಿ ಆಮೇಲೆ ಇವನು ಗೆದ್ದದ್ದ ಹೇಳ್ಲೇ ಇಲ್ಲವಲ್ಲ.
ಅವನು : ಹೇಳ್ತೀನಣ್ಣೋ! ಇಷ್ಟ ಹೇಳ್ದೋನು ಅದು ಬಿಡ್ತೀನಾ! ನಾನು ಆಸ್ಪತ್ರೆಗೆ ಹೋಗಿ ಎಲ್ಲವನೆ ದೊಡ್ಡಣ್ಣ ಅಂತಾ ಹಾಸಿಗೆ ಹಾಸಿದ್ದರಲಾ! ಉದ್ದಕ್ಕೂ ಹುಡುಕ್ತ ಇದೀನಿ! ಕೈ ಹಿಂಗಂತನೆ ಮ್ಯಾಕೆ ಎತ್ತತನೆ ಕೆಳಿಕೆ ಇಳಿಸ್ತನೆ. ಇವನು ಯಾವನಪ್ಪ ನನ್ನ ಕರ್ಯೋನು ಅಂದ್ರೆ. ಇವನೇ ದೊಡ್ಡಣ್ಣ; ಗೋಪಾಲ ಗೋಪಾಲಾ… ಅಂತ ಮ್ಯಾಳಿಂದ ಹೊರಡೊಲ್ಲದು ರಾಗ. ಮುಖ ಇಷ್ಟು ದಪ್ಪ ಅಯ್ ನಿನ್ನ! ಅಂತಾ ಅಂದೆ.
ನಾನು : ಆಮೇಲೆ ಕರ್ಕೊಂಡು ಬಂದ್ರೋ ?
ಅವನು : ಮತ್ತೆ ಬಿಡ್ತಿವಾ! ಮೂಗ ಎಳೆದು ಹೊಲಿಗೆ ಹಾಕಿದ್ದರಲಾ! ಒಂದು ಚೂರು ಏಳಂಗಾದ. ವೊತ್ತರ್ನಾಗ ಕರ್ಕೊಂಬಂದವಪ್ಪಾ. ಕೈ ಎತ್ತಿಸಿದ್ರು, ದೊಡ್ಡಣ್ಣನೇ ಛೇರ್ಮನ್.
ನಾನು : ಅಲ್ಲಾ ಕಣೋ ಪಂಚಾಯ್ತಿ ಅಂದ್ರೆ ಕೆಲಸ ಕಾರ್ಯ, ಸರ್ಕಾರಿ, ಕಛೇರಿ ಎಲ್ಲ ಗೊತ್ತಿರಬೇಕು ಅಲ್ಲವೆ!
ಅವನು : ಗೊತ್ತಿಲ್ಲದೆ ಏನಣ್ಣೋ! ಚಡ್ಡಿ ಹಾಕ್ತಿದ್ದೋನು ಹೆಜ್ಜೆಗಂಟ ಪಂಚೆ ಉಡೋ ಹಂಗಾದನಾ! ಸ್ವಲ್ಪ ದಿನದ ಮ್ಯಾಲೆ ನೋಡ್ತಿವಿ!. ಪ್ಯಾಟೆ ಸ್ವಾಮಣ್ಣಂತವಾ ಪ್ಯಾಂಟು ಹೊಲಿಸಿಬಿಟ್ಟವನೆ! ಮತ್ತೆ ಪ್ಯಾಂಟು ಹಾಕಿದ ಮೇಲೆ ರುಜು ಮಾಡಬೇಕಲಾ! ದಿನಾ ನಮ್ಮೂರ ಗುಜ್ಜಾರಿ ಅವನೇ ಮೇಸ್ಟರು. ಹೆಸರು ಬರೆಯೋದು; ಅದೇ ರುಜು ಮಾಡೋದು ಕಲಿಸಿಬಿಟ್ಟ ಅನ್ನಪ್ಪ.

ನಾನು : ಮೀಟಿಂಗು ಗೀಟಿಂಗು ಎಲ್ಲಾ ಏನು ಮಾಡೋನು?
ಅವನು : ಅದೆ ಕನಣ್ಣೋ ಮಾವಿನಹಳ್ಳಿ ಕೆಂಪೇಗೌಡ ಮಹಾ ಮಿಂಡ್ರಿ ಅಲ್ಲವೇ! ಅವನೇ ಸೆಕ್ರೆಟರಿ ಅಲ್ಲವೆ. ಒಂದ ದಪ ನಾನು ಮನೆ ಕಟ್ಟಕೆ ಅಂತಾ ಲೈಸೆನ್ಸ್ ಬೇಕು ಅಂತಾ ಹೋಗಿದ್ದೆನಾ! ಅಯ್ಯೋ! ನೀನೇನೋ ಹೇಳ್ತಿಯಪ್ಪಾ ಲೈಸೆನ್ಸ್ ಕೊಡು ಅಂತಾ; ನನ್ನ ಕತೆ ನನಗೆ! ನೋಡಿಲ್ಲಿ! ರುಜು ಮಾಡವರೆ ದೊಡ್ಡೇಗೌಡ್ರು ಈ ಬುಕ್ಕೆ ಸಾಲದು ದೊ-ಡ್ಡೇ-ಗೌ- ಕಡೆಗೆ ‘ಡ’ ಅಕ್ಷರಕ್ಕೆ ಜಾಗೆಲ್ಲಿ ಇದ್ದಾತು! ಬುಕ್ಕು ಮೂರೇ ಅಕ್ಷರಕ್ಕೆ ತುಂಬಿ ಡ ಕೆಳಿಕೆ ಬಿದ್ದುಬಿಟ್ಟಿದೆಯಪ್ಪಾ. ‘ಆಲೂಗಡ್ಡೆ ಮೂಟೆ ಒಟ್ಟವರೆ’ ಬುಕ್ಕೆ ಸಾಲದು ನೀನು ಹೇಳ್ತೀಯಾ ನನ್ನ ಕಷ್ಟ ನನಗೆ ಅಂದ. ಅಂತೀನಿ.

ನಾನು : ಊರಿನ ಕೆಸಲ ಗಿಲಸ ಎಲ್ಲ ಸರಿಯಾಗಿ ನಡಿತಿದ್ದವಾ? ಊರೋರು ಕೇಳೊರಲ್ಲವೆ ಏನು ಊರ ಕೆಲಸ ಮಾಡಿಸಿದಿರಿ ಛೇರ್ಮನ್‍ರೇ ಅನ್ನೋರಲ್ಲವೆ!
ಅವನು : ಬುಡ್ತರಾ! ಆಳು ಬಂದರೆ ಕೂಲಿ ಕೊಡಬೇಕಲ್ಲಾ ಯಾರು ಕೊಡ್ತಾರೆ!. ಪಂಚಾಯ್ತಿಲಿ ದುಡ್ಡು ಎಲ್ಲಿ ಇದ್ದೀತು! ತಾನೇ ಓಣಿಬಾಗಿಲ ಗೆರೆ ಕಡಿಯೋದು ಚರಂಡಿ ಮಾಡೋದು? ಅಲ್ಲಿ ಮಂಜಣ್ಣ ಹೆದರಿಸಿದರೆ ಕೆಳಿಕೆ ಬರೋದು ಬೇಲಿ ಕಡ್ಯೋದು; ರಸ್ತೆ ಮಾಡಿಸ್ತೀನಿ, ಆಳು ಬರ್ತಾರೆ ಅನ್ನೋದು. ಅಲ್ಲಿ ಮಂಜಕ್ಕ ಏನ್ಲಾ ದೊಡ್ಡ ಚಡ್ಡಿ ಬಿಚ್ಚಿ ಬಿಟ್ಟೇನು? ಹೂ ಬಂದುಬಿಟ್ಟ ಬೇಲಿ ಮುಳ್ಳ ಕಡಿಯೋಕೆ ಅಂದ್ರೆ! ಆಯ್ತವ್ವಾ ಹೊಂಟೆ ಅನ್ನೋದು! ಹಿಂಗಿತ್ತು ನೋಡಣ್ಣ ಛೇರ್ಮನ್‍ಗಿರಿ. ಸೆಕೆಟರಿ ಮಾತ್ರ ದೊಡ್ಡೇಗೌಡ್ರ ರುಜು ಇಲ್ನೋಡಪ್ಪ ‘ಆಲ್ಮೆಗೆಂಡೆಯಾ’ ಅಂತಲೇ ಬಿಲ್‍ಮಾಡಿ ಜೇಬಿಗೆ ಹಾಕಂಡವನು; ಮಗನ ಡಾಕ್ಟರು ಓದಿಸಲಿಲ್ಲವೆ. ಈಗ ಅವನ ಮಗ ಡಾಕ್ಟರಣ್ಣೋ.

ನಾನು : ಮತ್ತೆ ಮತ್ತೆ ನಿಲ್ತನಂತೋ ಇನ್ನು ಈ ಎಲೆಕ್ಷನ್‍ಗೆ?
ಅವನು : ಇನ್ನೇನು ಛೇರ್ಮನ್‍ಗಿರಿ ಮುಗಿತಲಾ ದೊಡ್ಡಣ್ಣ ಮುಂದಿನ ಸಾರಿ ನಿಲ್ಲಲ್ಲವೆ ಅಂದೆ ಕಂಡ್ಯಾ! ಅವನು ಏನನ್ನಬೇಕು. ಬುಟ್ಟೇನಾ! ಹೊಲ ಮಾರಿ ಹೋಗಲಿ ಬಿಡು ಅನ್ನೋದೇ! ಅವನ ಹೆಂಡ್ತಿ ಬಂದೋಳೆ ಕರೆಂಟು ಎಳ್ಕಂತಿತಲಾ ಹಂಗೆ ಹಿಂದ್ಗಂಡಿಂದ ಅಂಗಿ ಹಿಡಿದು ಎಳ್ಕೋಂಡು ‘ನಿನ್ನವ್ವನಾ ಹಡ ಮನೆ ತೆಗೆದಯಲ್ಲೋ ಕಳ್ಳ ನನ್ನ ಮಗನೇ ಅಂತಾ ಒಳಿಕೆ ಹೋಗಿ ಬಾಗಿಲ ಹಾಕಿದಳಪ್ಪಾ’. ಅವಳು ಹಂಗೆ ಅಲ್ಲವೆ ಗಂಡಸಿನಂಗೆ ಬಯ್ಯೋದು. ಆವೊತ್ತು ಎರಡು ಬಿಟ್ಟಿರಬೇಕು. ಮತ್ತೆ ಎಲೆಕ್ಷನ್ನು ಅಂದ್ರೆ ಹೋಗಿರ್ಲಾ ನೀವೊಬ್ಬರು ಅಂತಾ ತಲೆ ಬಗ್ಗಿಸ್ಕೊಂಡು ಹೋಗ್ತನೆ. ಇದಪ್ಪ ಛೇರ್ಮನ್ ದೊಡ್ಡೇಗೌಡರ ಕತೆ ಎಂದ ಗೋಪಾಲನು ಮೂಗು ನೋಡಿಲ್ಲವೇನಣ್ಣೋ ‘ಛೇರ್ಮನ್ ಗುರುತಿನ ಮೂಗ’ ಅಂದ.

 

Leave a Reply

Your email address will not be published.