ದೊಡ್ಡಬಳ್ಳಾಪುರದ ಸ್ಥಳೀಯ ಚರಿತ್ರೆಯಲ್ಲಿ ದೇಶಪ್ರೇಮಿ ಟಿಪ್ಪು ಮತ್ತು ದ್ರೋಹಿ ಪೂರ್ಣಯ್ಯ -ಮೀರ್ ಸಾದಿಕ್

ಡಾ. ಎಸ್ .ವೆಂಕಟೇಶ್

ಡಾ. ಎಸ್ .ವೆಂಕಟೇಶ್ ಚರಿತ್ರೆಯ ಬರೆಹಗಳು, ಚಿತ್ರಕಲೆ, ಕಲಾವಿಮರ್ಶೆಯಲ್ಲಿ ಪ್ರಸಿದ್ದರು. ಅವರು `ದೊಡ್ಡಬಳ್ಳಾಪುರದ ಚರಿತ್ರೆ’ ಬಗೆಗೆ ಕ್ಷೇತ್ರಕಾರ್ಯ ಮಾಡಿ ಕೃತಿ ರಚಿಸಿದ್ದಾರೆ. ಇದರಲ್ಲಿ ಟಿಪ್ಪು ಬಗೆಗೆ ಬರೆದ್ದಿದ್ದಾರೆ. ಇದು ಟಿಪ್ಪುವನ್ನು ಅರ್ಥಮಾಡಿಕೊಳ್ಳಲು ನೆರವುನೀಡುತ್ತದೆ. ಅದರ ಒಂದು ಭಾಗವನ್ನು ನಿಮಗಾಗಿ ಇಲ್ಲಿ ಪ್ರಕಟಿಸಿದ್ದೇವೆ. ಅವರ ಕೃತಿಗಾಗಿ ಸಂಪರ್ಕ ಸಂಖ್ಯೆ -೯೮೪೫೩೦೭೩೪೨ 

ಟಿಪ್ಪು ಸುಲ್ತಾನ್ (1750-1799)
ಟಿಪ್ಪು  ಕ್ರಿ.ಶ.1750 ನೇ ಇಸವಿಯ ನವೆÀಂಬರ್ 10ರಂದು ಬೆಂಗಳೂರು ಜಿಲ್ಲೆಗೆ ಸೇರಿದ, ದೊಡ್ಡಬಳ್ಳಾಪುರಕ್ಕೆ ಕೂಗಳತೆ ದೂರದಲ್ಲಿರುವ ದೇವನಹಳ್ಳಿಯಲ್ಲಿ ಜನಿಸಿದನು. ಟಿಪ್ಪುವನ್ನು ಅವನ ತಾತ ಫತೇಮಹಮ್ಮದನ ನೆನಪಿಗಾಗಿ ‘ಫತೇ ಅಲಿಖಾನ್’ ಎಂಬ ಹೆಸರಿನಿಂದಲೂ ಕರೆಯಲಾಗಿತ್ತು. ಹೈದರನು ಅನಕ್ಷರಸ್ಥನಾಗಿದ್ದರು ತನ್ನ ಮಗ ಟಿಪ್ಪುವಿಗೆ ಬಾಲ್ಯದಲ್ಲಿ ಉತ್ತಮವಾದ ಉನ್ನತ ಶಿಕ್ಷಣ ಕೊಡಿಸಿದ್ದನು. ಕುದುರೆ ಸವಾರಿ ಮತ್ತು ಶಸ್ತ್ರಾಸ್ತ್ರಗಳ ಬಳಕೆಯಲ್ಲಿ ಪರಿಣತನನ್ನಾಗಿ ಮಾಡಿ, ಆಡಳಿತ ಮತ್ತು ಯುದ್ಧದಲ್ಲಿ ವಿಶೇಷ ತರಬೇತಿಯನ್ನು ನೀಡಿದ್ದನು. ಟಿಪ್ಪು ಅನೇಕ ಭಾಷೆಗಳನ್ನು ಬಲ್ಲವನಾಗಿದ್ದ. ಈ ಪೈಕಿ ಉರ್ದು, ಪಾರ್ಸಿ, ಕನ್ನಡ, ಮರಾಠಿ, ಇಂಗ್ಲೀಷ್, ಫ್ರೆಂಚ್ ಮುಂತಾದ ಭಾಷೆಗಳಲ್ಲಿ ಪಾಂಡಿತ್ಯವಿತ್ತು. ತಂದೆಯಂತೆ ಸಾಹಸಿಯೂ, ಚಾಣಾಕ್ಷನೂ ಆಗಿದ್ದ ಟಿಪ್ಪು  ಬಾಲ್ಯದಿಂದಲೂ ತಂದೆಯೊಡನೆ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದನು. ಹೈದರನು ಕ್ರಿ.ಶ.1763ರಲ್ಲಿ ಮಲಬಾರನ್ನು ಆಕ್ರಮಿಸುವಾಗಲೇ ತನ್ನೊಡನೆ ಟಿಪ್ಪು ವನ್ನು ಕರೆದೊಯ್ದಿದ್ದನು. ಒಂದನೇ ಮೈಸೂರು ಯುದ್ಧ (1767-69) ಮತ್ತು ಮೈಸೂರು-ಮರಾಠ ಯುದ್ಧ (1769-72)ಗಳಲ್ಲಿ ಟಿಪ್ಪು  ಭಾಗವಹಿಸಿ ಪರಾಕ್ರಮವನ್ನು ಮೆರೆದಿದ್ದನು. ಕ್ರಿ.ಶ.1780ರಲ್ಲಿ ಆರಂಭವಾದ ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಹೈದರನೊಡನೆ ಭಾಗವಹಿಸಿ ಕರ್ನಲ್ ಬೇಲಿ ಮತ್ತು ಕರ್ನಲ್ ಬ್ರೆತ್‍ವೈಟರನ್ನು ಸೋಲಿಸಲು ತನ್ನ ತಂದೆಗೆ ನೆರವಾಗಿದ್ದನು.

Doddaballapur Cover Pageಕ್ರಿ.ಶ.1782ರಲ್ಲಿ ಎರಡನೇ ಆಂಗ್ಲೋ-ಮೈಸೂರು ಯುದ್ಧ ನಡೆಯುತ್ತಿರುವಾಗಲೆ ಹೈದರ್ ಸಾವಿಗೀಡಾದನು. ಕೂಡಲೇ ಅಧಿಕಾರವನ್ನು ವಹಿಸಿಕೊಂಡು ಯುದ್ಧವನ್ನು ಮುಂದುವರೆಸಿದ ಟಿಪ್ಪು  ಬ್ರಿಟೀಷ್ ಜನರಲ್ ಸ್ಟೂಯರ್ಟನನ್ನು ವಾಂಡಿವಾಷ್ ಬಳಿಯಲ್ಲಿ ಸಂಪೂರ್ಣವಾಗಿ ಸೋಲಿಸಿದನು. ಇದರಿಂದ ಕಂಗೆಟ್ಟ ಬ್ರಿಟೀಷರು ಟಿಪ್ಪು ವಿನೊಡನೆ ಮಂಗಳೂರು ಶಾಂತಿಒಪ್ಪಂದ ಮಾಡಿಕೊಂಡರು. ನಂತರ ಟಿಪ್ಪು ಸುಲ್ತಾನನು ಮರಾಠರು ಮತ್ತು ನಿಜಾಮನೊಂದಿಗೆ ಯುದ್ಧಮಾಡಿ ಅವರನ್ನು ಸೋಲಿಸಿದನು. ಟಿಪ್ಪು  ಇಂಗ್ಲೀಷರನ್ನು ಸೋಲಿಸಲು ಇವರಿಬ್ಬರ ಸಹಾಯವನ್ನು ನಿರೀಕ್ಷಿಸಿ, ಅವರೊಡನೆ ಉದಾರವಾಗಿ ನಡೆದುಕೊಂಡನಾದರು ಪ್ರಯೋಜನವಾಗಲಿಲ್ಲ.

ಮರಾಠರು ಮತ್ತು ನಿಜಾಮನು ಬ್ರಿಟೀಷರೊಡನೆ ಸೇರಿ ಟಿಪ್ಪು ವಿಗೆ ಭಾರೀ ನಿರಾಸೆಯನ್ನು ಉಂಟುಮಾಡಿದರು. ಹೀಗಾಗಿ ಅವನು ಆಂಗ್ಲರನ್ನು ಭಾರತದಿಂದ ಹೊರಗಟ್ಟಲು ಹೊರರಾಷ್ಟ್ರಗಳ ನೆರವು ಪಡೆಯಲು ಯತ್ನಿಸಿದನು. ಅವನು ಈ ನಿಟ್ಟಿನಲ್ಲಿ ಪರ್ಷಿಯ, ಆಫ್ಘಾನಿಸ್ತಾನ, ಟರ್ಕಿ, ಫ್ರಾನ್ಸ್ ಮುಂತಾದ ರಾಷ್ಟ್ರಗಳಿಗೆ ರಾಯಭಾರಿಗಳನ್ನು, ನಿಯೋಗವನ್ನು ಕಳುಹಿಸಿದನಾದರು ಅದು ಫಲಕಾರಿಯಾಗಲಿಲ್ಲ.  ಟಿಪ್ಪುವಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ನೆರವು ದೊರೆಯದಂತೆ ಬ್ರಿಟೀಷರು ನೋಡಿಕೊಂಡರು. ಆಂಗ್ಲರ ಪರಮ ವಿರೋಧಿಯಾಗಿದ್ದ ಟಿಪ್ಪು ಸುಲ್ತಾನನು ಕ್ರಿ.ಶ.1790ರಲ್ಲಿ ಅವರ ಮಿತ್ರರಾಜ್ಯ ತಿರುವಾಂಕೂರಿನ ಮೇಲೆ ದಾಳಿಮಾಡುವುದರ ಮೂಲಕ ಮೂರನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣನಾದನು. ಇದಕ್ಕಾಗಿ ಬಕಪಕ್ಷಿಯಂತೆ ಕಾಯುತ್ತಿದ್ದ ಬ್ರಿಟೀಷರು ಟಿಪ್ಪು ವಿನ ಮೇಲೆ ಸೇಡು ತೀರಿಸಿಕೊಳ್ಳಲು ಯುದ್ಧ ಸಾರಿದರು. ಹೀಗೆ ಮರಾಠರು, ನಿಜಾಮ ಮತ್ತು ಬ್ರಿಟೀಷರು ಒಟ್ಟಾಗಿ ಟಿಪ್ಪು ವಿನ ವಿರುದ್ಧ ಹೋರಾಡಿದರು. ಆದರೆ ಅವನು ಇದರಿಂದ ಎಳ್ಳಷ್ಟೂ ವಿಚಲಿತನಾಗದೆ ಈ ಮೂವರ ವಿರುದ್ಧ ಸೆಣಸಾಡಿದನು. ಜನರಲ್ ಮೆಡೋಸ್ ಎಂಬುವನು ಟಿಪ್ಪು ವಿನ ವಿರುದ್ಧ ಆಕ್ರಮಣ ಮಾಡಿದನಾದರು ಅವನ ಪ್ರಯತ್ನ ವ್ಯರ್ಥವಾಯಿತು. ಇದರಿಂದ ರೊಚ್ಚಿಗೆದ್ದ ಗೌರ್ನರ್ ಲಾರ್ಡ್ ಕಾರ್ನ್‍ವಾಲೀಸನು ತಾನೇ ಸೈನ್ಯದ ನಾಯಕತ್ವವಹಿಸಿಕೊಂಡು ಯುದ್ಧಭೂಮಿಗಿಳಿದನು. ಈ ಸಂದರ್ಭದಲ್ಲಿ (1790-92) ಆಂಧ್ರದ ಚಿತ್ತೂರಿನಿಂದ ಬೆಂಗಳೂರಿನತ್ತ ಮುಗಳಿ ಪರ್ವತ ಶ್ರೇಣಿಯ ಮೂಲಕ ಸಾಗುತ್ತಿದ್ದ ಕಾರ್ನ್‍ವಾಲೀಸನು ಮಾರ್ಗಮಧ್ಯದಲ್ಲಿದ್ದ ಕೋಲಾರ, ಚಿಕ್ಕಬಳ್ಳಾಪುರ, ನಂದಿದುರ್ಗ ಮತ್ತು ದೇವನಹಳ್ಳಿಗಳನ್ನು ವಶಪಡಿಸಿಕೊಂಡನು. ಚಿಕ್ಕಬಳ್ಳಾಪುರವನ್ನು ಅದರ ಪಾಳೆಯಗಾರನಿಗೆ ವಹಿಸಿಕೊಡಲಾಯಿತು. ಆದರೆ ಟಿಪ್ಪು ಕಳಿಸಿದ ಸೇನೆಯ ತುಕಡಿಯೊಂದು ಅದನ್ನು ಅನಿರೀಕ್ಷಿತವಾಗಿ ಲಗ್ಗೆಹಾಕಿ ಪುನರ್ವಶಪಡಿಸಿಕೊಂಡಿತು. ಇದೇ ಸಮಯದಲ್ಲಿ ಸಂಚಿನ ಆಪಾದನೆಗಳ ಮೇಲೆ ಅನೇಕ ಪಾಳೆಯಗಾರರನ್ನು ತುಂಡರಿಸಲಾಯಿತು.

ನಂತರ ಕಾರ್ನ್‍ವಾಲೀಸನು ಅತೀವ ಸಾಹಸದಿಂದ ಟಿಪ್ಪುವಿನ ಅಧೀನದಲ್ಲಿದ್ದ ಬೆಂಗಳೂರು ಕೋಟೆಯನ್ನು ವಶಪಡಿಸಿಕೊಂಡನು. ತದನಂತರ ತನ್ನ ಸೇನೆಗೆ ಜನ, ಧನ ಮತ್ತು ಆಹಾರಪದಾರ್ಥಗಳನ್ನು ತರುತ್ತಿದ್ದ ನಿಜಾಮನ ಅಶ್ವಪಡೆಯನ್ನು ಸೇರುವ ಉದ್ದೇಶದಿಂದ ಬೆಂಗಳೂರಿನಿಂದ ಬಡಗಣದತ್ತ ಹೊರಟನು. ಅದೇ ದಿವಸ ಅಂದರೆ ಮಾರ್ಚ್ 28, 1791ರಂದು ಟಿಪ್ಪು ಸುಲ್ತಾನನು ಪಶ್ಚಿಮಕ್ಕೆ ದೊಡ್ಡಬಳ್ಳಾಪುರದತ್ತ ನಡೆದು ಠಾಣೆ ಹಾಕಿದನು. ಆಗ ಹೈದರನ ಕಾಲದಲ್ಲಿ ಮಾಮ್ಲೇದಾರರಾಗಿದ್ದ ಅರುಣಾಚಲ ಪಂತರು ದೊಡ್ಡಬಳ್ಳಾಪುರದ ಅಮಲ್ದಾರರಾಗಿದ್ದರು (ತಾಲ್ಲೂಕಿನ ಆಡಳಿತಾಧಿಕಾರಿ). ಅವರು ಟಿಪ್ಪುವಿಗೆ ಸಕಲ ನೆರವನ್ನು ನೀಡಿದರು. ಅವನು ಇಲ್ಲಿ ತನ್ನ ಸೈನ್ಯವನ್ನು ವ್ಯವಸ್ಥೆಗೊಳಿಸಿಕೊಂಡು, ಕಾರ್ನ್‍ವಾಲೀಸನನ್ನು ಸೇರಿಕೊಳ್ಳಲೆಂದು ಬರುತ್ತಿದ್ದ ನಿಜಾಮನ ಅಶ್ವಪಡೆಯನ್ನು ತಡೆಯಲೆಂದು ಶಿವಗಂಗೆಯತ್ತ ನಡೆದನು. ಕ್ರಿ.ಶ.1791ರ ಜುಲೈನ ವೇಳೆಗೆ ಮರಾಠರು ದೊಡ್ಡಬಳ್ಳಾಪುರವನ್ನು ಆಕ್ರಮಿಸಿಕೊಂಡು ಇಲ್ಲಿ ಒಂದು ರಕ್ಷಣಾ ಸೇನೆಯನ್ನು ವ್ಯವಸ್ಥೆಗೊಳಿಸಿದರು. ಇದರಿಂದ ಕೆರಳಿದ ಟಿಪ್ಪು ಸುಲ್ತಾನ್ ತನ್ನ ಅಧಿಕಾರಿ ಖಮರುದ್ದೀನ್‍ಖಾನನ ನೇತೃತ್ವದಲ್ಲಿ ಬಲವಾದ ಸೈನ್ಯದ ತುಕಡಿಯೊಂದನ್ನು ಕಳುಹಿಸಿದನು. ಟಿಪ್ಪುವಿನ ಈ ಸೈನ್ಯವು ಮರಾಠ ಸೈನ್ಯಾಧಿಪತಿ ಬಲವಂತರಾಯನ ಅಧಿಪತ್ಯದಲ್ಲಿ ದೊಡ್ಡಬಳ್ಳಾಪುರದಲ್ಲಿ ಇರಿಸಿದ್ದ ರಕ್ಷಣಾಸೇನೆಯನ್ನು ಹೊಡೆದೋಡಿಸಿತು.

TipuSultanಮಾರನೆಯ ವರ್ಷ ಅಂದರೆ ಕ್ರಿ.ಶ.1792ರಲ್ಲಿ ಕಾರ್ನ್‍ವಾಲೀಸನು ಟಿಪ್ಪು ವಿನ ರಾಜಧಾನಿ ಶ್ರೀರಂಗಪಟ್ಟಣವನ್ನು ಆಕ್ರಮಿಸಲು ಮುಂದಾದನು. ಬ್ರಿಟೀಷರು, ಮರಾಠರು ಮತ್ತು ನಿಜಾಮನ ಸೈನ್ಯವು ಸತತವಾಗಿ ಹೋರಾಡಿ ಟಿಪ್ಪು ಸುಲ್ತಾನನು ಶ್ರೀರಂಗಪಟ್ಟಣದ ಕೋಟೆಯಲ್ಲಿ ರಕ್ಷಣೆ ಪಡೆಯುವಂತೆ ಮಾಡಲಾಯಿತು. ನಂತರ ಕಾರ್ನ್‍ವಾಲೀಸನು ಕೋಟೆಯನ್ನು ಸುತ್ತುವರಿದು ಮುತ್ತಿಗೆ ಹಾಕಿದನು. ಕಟ್ಟಕಡೆಗೆ ಟಿಪ್ಪು  ಮಣಿಯಲೇಬೇಕಾಯಿತು. ಅವನು ಸೋತು ಸಂಧಾನ ಮಾಡಿಕೊಂಡನು. ಈ ಶ್ರೀರಂಗಪಟ್ಟಣ ಒಪ್ಪಂದದ ಪ್ರಕಾರ ತನ್ನ ರಾಜ್ಯದ ಅರ್ಧಭಾಗವನ್ನು ಮತ್ತು ಯುದ್ಧವೆಚ್ಚವಾಗಿ ಮೂರುಕೋಟಿ ರೂಪಾಯಿಗಳನ್ನು ಬ್ರಿಟೀಷರಿಗೆ ಕೊಡಬೇಕಾಯಿತು. ಅಷ್ಟು ಹಣವನ್ನು ಒಂದೇ ಕಂತಿನಲ್ಲಿ ಕೊಡಲಾಗದಿದ್ದುದರಿಂದ ಹಣವನ್ನು ಸಂದಾಯ ಮಾಡುವವರೆಗು ತನ್ನ ಇಬ್ಬರು ಮಕ್ಕಳನ್ನು ಟಿಪ್ಪು  ಬ್ರಿಟೀಷರಲ್ಲಿ ಒತ್ತೆಯಾಗಿಡಬೇಕಾಯಿತು. ಈ ಒಪ್ಪಂದದಂತೆ ಕೋಲಾರ, ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರಗಳನ್ನು ಮತ್ತೆ ಟಿಪ್ಪುವಿಗೆ ಹಿಂತಿರುಗಿಸಲಾಯಿತಾದರು, ನಂದಿದುರ್ಗ ಮತ್ತು ನಂದಿಗ್ರಾಮವು ಬ್ರಿಟೀಷರ ಪ್ರಮುಖ ಸೇನಾನೆಲೆಯಾಗಿಯೇ ಮುಂದುವರೆಯಿತು.

ಈ ಸೋಲಿನಿಂದಾಗಿ ಗಾಯಗೊಂಡ ಹುಲಿಯಂತಾಗಿದ್ದ ಟಿಪ್ಪು ತನ್ನೆಲ್ಲ ಶಕ್ತಿಯನ್ನು ಬ್ರಿಟೀಷರ ವಿರುದ್ಧ ಕ್ರೂಢೀಕರಿಸಲು ನಿರ್ಧರಿಸಿದನು. ಮೊದಲಿಗೆ ಅವರಿಗೆ ನೀಡಬೇಕಾಗಿದ್ದ ಹಣವನ್ನು ಸಲ್ಲಿಸಿ ತನ್ನ ಇಬ್ಬರು ಮಕ್ಕಳನ್ನು ಬಿಡಿಸಿಕೊಂಡು ಮದರಾಸಿನಿಂದ ಕರೆದುಕೊಂಡು ಬಂದನು. ನಂತರ ಆಂಗ್ಲರನ್ನು ಭಾರತದಿಂದ ಹೊಡೆದೋಡಿಸಲೇಬೇಕೆಂಬ ಛಲದಿಂದ ಯೂರೋಪಿನಲ್ಲಿ ಆಂಗ್ಲರ ವಿರೋಧಿಯಾಗಿದ್ದ ಫ್ರಾನ್ಸ್‍ನ ನೆಪೂಲಿಯನ್ನನೊಂದಿಗೆ ಪತ್ರಬರೆದು ನೆರವು ಕೋರಿದನು. ಆದರೆ ಟಿಪ್ಪುವಿನ ಎಲ್ಲ ಪ್ರಯತ್ನವನ್ನೂ ಬ್ರಿಟೀಷರು ಮಣ್ಣುಗೂಡಿಸಿದರು. ಟಿಪ್ಪುಸುಲ್ತಾನನ ಅಂತರರಾಷ್ಟ್ರೀಯ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಬ್ರಿಟೀಷರಿಗೆ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ ಆರಂಭಿಸಲು ಒಂದು ನೆಪಬೇಕಾಗಿತ್ತು. ಅವರು ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆತಂದು ಟಿಪ್ಪುವನ್ನು ಅದಕ್ಕೆ ಒಪ್ಪಿಸಲು ಯತ್ನಿಸಿದರು. ಆದರೆ ಟಿಪ್ಪು  ಸಹಜವಾಗಿಯೇ ಅದನ್ನು ತಿರಸ್ಕರಿಸಿದ. ಬ್ರಿಟೀಷರಿಗೆ ಇಷ್ಟೇ ಸಾಕಾಯಿತು. ಅವರು ಅವನ ವಿರುದ್ಧ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧವನ್ನು ಘೋಷಿಸಿದರು.

ಟಿಪ್ಪು ಅನೇಕ ಸ್ಥಳಗಳಲ್ಲಿ ಬ್ರಿಟೀಷ್ ಸೇನಾ ಪಡೆಗಳನ್ನು ಧೂಳೀಪಟ ಮಾಡಿದನಾದರು ಕಟ್ಟಕಡೆಗೆ ಶ್ರೀರಂಗಪಟ್ಟಣದ ಕೋಟೆಯನ್ನು ಸೇರಿದನು. ಬ್ರಿಟೀಷ್ ಸೈನ್ಯವು ಶ್ರೀರಂಗಪಟ್ಟಣಕ್ಕೆ ಮುತ್ತಿಗೆಹಾಕಿ ಕೋಟೆಯನ್ನು ಸುತ್ತುವರೆಯಿತು. ಕೊನೆಗೆ ಕ್ರಿ.ಶ.1799ರ ಮೇ 4ರಂದು ಬ್ರಿಟೀಷ್ ಸೈನ್ಯವು ಜನರಲ್ ಹ್ಯಾರಿಸ್‍ನ ನೇತೃತ್ವದಲ್ಲಿ ಶ್ರೀರಂಗಪಟ್ಟಣದ ಕೋಟೆಯೊಳಕ್ಕೆ ಪ್ರವೇಶಿಸಿತು. ಟಿಪ್ಪು  ವೀರಾವೇಶದಿಂದ ಹೋರಾಡಿ ಅನೇಕ ಬ್ರಿಟೀಷ್ ಸೈನಿಕರನ್ನು ಕೊಂದನಾದರೂ ಶತ್ರುವೊಬ್ಬನ ಗುಂಡೇಟಿನಿಂದ ನೆಲಕ್ಕುರುಳಿ ವೀರಮರಣವನ್ನಪ್ಪಿದನು. ನಂತರ ಟಿಪ್ಪು ವಿನ ರಾಜ್ಯವು ವಿಭಜಿಸಲ್ಪಟ್ಟು ಬ್ರಿಟೀಷರು ಮತ್ತು ಮರಾಠರು ಹಂಚಿಕೊಂಡರು. ಹೈದರನು ಅಧಿಕಾರಕ್ಕೆ ಬರುವ ಮೊದಲಿದ್ದ ಸಂಸ್ಥಾನದ ಪ್ರದೇಶಗಳನ್ನೆಲ್ಲಾ ಮೈಸೂರು ಅರಸರಿಗೆ ನೀಡುವ ಮೂಲಕ ಸಂಸ್ಥಾನದಲ್ಲಿ ಅವರ ಆಡಳಿತಕ್ಕೆ ಮರುಜೀವ ನೀಡಲಾಯಿತು. ವಿಧವೆ ರಾಣಿ ಲಕ್ಷ್ಮಮ್ಮಣಿ ಅವರ ಸಲಹೆಯಂತೆ ಕ್ರಿ.ಶ.1799ರಲ್ಲಿ ಐದು ವರ್ಷದ ಬಾಲಕ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಅಧಿಕಾರಕ್ಕೆ ತರಲಾಯಿತು. ಅವರು ಇನ್ನೂ ಅಪ್ರಾಪ್ತರಾಗಿದ್ದ ಕಾರಣ ಪೂರ್ಣಯ್ಯನವರನ್ನು ದಿವಾನರನ್ನಾಗಿ ನೇಮಕಮಾಡಿ, ಆಡಳಿತದ ಸಕಲ ಉಸ್ತುವಾರಿಯನ್ನು ನೋಡಿಕೊಳ್ಳಲು ಸೂಚಿಸಲಾಯಿತು. ಅದೇ ರೀತಿ ಲೆಪ್ಟಿನೆಂಟ್ ಕರ್ನಲ್ ಬ್ಯಾರಿಕ್ಲೋಸ್‍ನನ್ನು ಮೈಸೂರಿನ ರೆಸಿಡೆಂಟನನ್ನಾಗಿ ನೇಮಕಮಾಡಲಾಯಿತು.

ಟಿಪ್ಪು ವಿನ ಸಮಕಾಲೀನ ಮರಾಠರ ( ಪೇಶ್ವೆಗಳ) ಸೇನಾಧಿಪತಿಯಾಗಿದ್ದ ಷಾಷ್ಟಿಕ ಮನೆತನದ ಹರಿಪಂತನು (ಇವನಿಗೆ ನರಸಣ್ಣ ಎಂಬ ಹೆಸರೂ ಇದ್ದಿತು.) ದೊಡ್ಡಬಳ್ಳಾಪುರದ ಪಾಳೆಯಗಾರರ ಕಾಲದಲ್ಲಿ ಮಂತ್ರಿಯಾಗಿದ್ದ ನಾಗಪ್ಪನ ವಂಶಸ್ಥನಾಗಿದ್ದನು. ಇವನು ಹೈದರಾಲಿಗು ಪರಮಮಿತ್ರನಾಗಿದ್ದನು. ಇವನ ಮಕ್ಕಳೆಲ್ಲಾ ದೊಡ್ಡಬಳ್ಳಾಪುರದಲ್ಲೇ ನೆಲೆಸಿದ್ದರು. ಮೊದಲ ಮಗ ಭೀಮರಾಯನು ಟಿಪ್ಪು ವಿನ ಅಂತರಂಗ ಮಿತ್ರನೂ, ಅಂಗರಕ್ಷಕನೂ ಆಗಿದ್ದನು. ಈತನು ಹುಲಿಕಾಳಗದಲ್ಲಿ ನಿಪುಣನಾಗಿದ್ದನು. ಕೊನೆಗೆ ಅದರಿಂದಾದ ಗಾಯದಿಂದಲೆ ಮೃತನಾದನು. ಹರಿಪಂತನ ಎರಡನೆಯ ಮಗ ರಾಮರಾಯನೂ ಟಿಪ್ಪು ವಿನ ಪರಮಮಿತ್ರನಾಗಿದ್ದು, ಅವನು ಟಿಪ್ಪು ಸುಲ್ತಾನನಿಗೂ ಕಾಬೂಲಿನ ಅಮೀರರಿಗೂ ಸ್ನೇಹವನ್ನು ಉಂಟುಮಾಡಲು ಕಾಬೂಲಿಗೆ ಹೋಗಿ ಅಲ್ಲಿಂದ ಸ್ವದೇಶಕ್ಕೆ ಹಿಂದಿರುಗಿ ಬರುತ್ತಿರುವಾಗ ಶೀತಜ್ವರ ಪೀಡಿತನಾಗಿ ಅಲ್ಲಿಯೇ ಕಾಲಾಧೀನನಾದನು. ಟಿಪ್ಪು ವಿನ ಸಮಕಾಲೀನ ದೊಡ್ಡಬಳ್ಳಾಪುರದ ರಾಘವೇಂದ್ರ ಕವಿಯು ಈ ಸನ್ನಿವೇಶವನ್ನು ತನ್ನ ವಿಶ್ವಕೋಶದಂತಿರುವ ‘ಸಾರಸ್ವತ ಪರಿಣಯ’ ಎಂಬ ಗ್ರಂಥದಲ್ಲಿ ಈ ರೀತಿ ವರ್ಣಿಸುತ್ತಾನೆ.

“ಪುನಹೆ ರಾಜ್ಯಕೆ ಫಡ್ನವೀಸರು ಮಂತ್ರಿ ಹರಿಪಂತಾಖ್ಯನೇ ಸೇನಾಧೀಶ
ಬಾರಾಭಾಯಿಗಳ ಮೈತ್ರಿಯನು ಜೊತೆಗೊಳಿಸಿ/
ಹೈಂದವರೆ ಭಾರತಕೆ ಚಕ್ರಾಧೀಶರೆಂಬಂತಿರ್ದರೈ-ಮೃತಿ ಬಂದುದವ
ರೀರ್ವರಿಗೆ ಮಾಸ ದ್ವಯದಿ ರವದಿಯಲಿ, ಅತ ನರಸಾಖ್ಯ ಹರಿಪಂತ
ರಿಗೆ ಮಕ್ಕಳು ಮೂವರದರೊಳು ಭೀಮಾಖ್ಯ ಪೆಸರಿನ ರಾಯ
ಟಿಪ್ಪು ಪ್ರಭುವಿಗೆ ಪ್ರಿಯದ ಮಿತ್ರನು ಅಂಗರಕ್ಷಕನು-ಆತ ಹುಲಿ
ಕಾಳಗದಿ ಜಯವನು ಗಳಿಸಿ ತನ್ನ ರಸಂಗೆ ಸಾಹಸದೋರಿರ ವಿಜನಪುರವ ಸೇರ್ದನು !
ಬಹಳ ರೋದನಗೈದರೈ ಸುಲ್ತಾನ್ ಪ್ರಭುವರರು-ಎರಡನೆಯ ರಾಮರಾಯ
ಕಾಬೂಲಿನ ಅಮೀರರ ಮೈತ್ರಿ ಸುಲ್ತಾನರಿಗೆ ಘಟನೆಯ ಗೈವುತಿರ್ಪಾ ರಾಯಭಾರದಲಿ/
ಸೇರಿದನು ಕಾಬೂಲು ನಗರದೊಳಲ್ಲಿ ಕಾರ್ಯ ಸಾಧಿಸಿದ ತರುವಾಯ
ಕಾಶಿಯ ನಗರದಲಿ ಮೃತಿ ಪÉÇಂದಿದನು ಶೀತಜ್ವರದ ತಾಪದಲಿ//”.

ಟಿಪ್ಪು ಸುಲ್ತಾನನು ರಣರಂಗದಲ್ಲಿ ಸಿಡಿಲಮರಿಯಾಗಿದ್ದಂತೆ ಆಡಳಿತದಲ್ಲೂ ಅನೇಕ ಸುಧಾರಣೆಗಳನ್ನು ತಂದನು. ಅವನು ಮೈಸೂರು ರಾಜ್ಯದಲ್ಲಿ ರೇಷ್ಮೆ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಿದನು. ಇದಕ್ಕಾಗಿಯೇ ಅವನು ಬಾರಾಮಹಲಿನ (ತಮಿಳುನಾಡು) ನಿವಾಸಿಗಳು ಹಿಪ್ಪುನೇರಳೆ ಮರಗಳನ್ನು ನೆಡಬೇಕೆಂದು ಆಜ್ಞಾಪಿಸಿದ್ದನು. ಬಂಗಾಳ ಮತ್ತು ಮಸ್ಕತ್‍ಗಳಿಂದ ರೇಷ್ಮೆಯ ಹುಳುಗಳನ್ನು ತಂದು ಹಾಗೂ ಉಪ್ಪುನೇರಿಳೆ ಮರಗಳನ್ನು ನೆಟ್ಟು, ರೇಷ್ಮೆ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಲಾಯಿತು. ಬೆಂಗಳೂರು ನಗರ ಮೈಸೂರು ಸಂಸ್ಥಾನದ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ದೊಡ್ಡಬಳ್ಳಾಪುರವು ಪಾಳೆಯಗಾರರ ಕಾಲದಿಂದಲೂ ರೇಷ್ಮೆ ನೇಯ್ಗೆಗೆ ಪ್ರಸಿದ್ಧವಾಗಿತ್ತು. ಇದನ್ನು ಮನಗಂಡ ಟಿಪ್ಪುಸುಲ್ತಾನನು ದೊಡ್ಡಬಳ್ಳಾಪುರದ ನೇಕಾರರನ್ನು ಬೆಂಗಳೂರಿನಲ್ಲಿ ನೆಲೆಗೊಳ್ಳುವಂತೆ ಸಕಲ ಏರ್ಪಾಡುಗಳನ್ನು ಮಾಡಿದನು. ಅವರೆಲ್ಲಾ ಈ ಮೊದಲೇ ಕೆಂಪೇಗೌಡನ ಕಾಲಕ್ಕೇ ಬಂದು ಇಲ್ಲಿ ನೆಲೆನಿಂತಿದ್ದ, ತಮ್ಮೂರಿನ ನೇಕಾರರು ಅಧಿಕವಾಗಿದ್ದ ಅವಿನ್ಯೂ ರಸ್ತೆಯ, ರಂಗಸ್ವಾಮಿ ಗುಡಿಬೀದಿಯ ‘ಬಳ್ಳಾಪುರ ಪೇಟೆ’ಯಲ್ಲೇ ನೆಲೆನಿಂತರು. ಅಲ್ಲಿ ಇಂದಿಗೂ ಸಹ ‘ಬಳ್ಳಾಪುರ ಮಾರುಕಟ್ಟೆ’ ಎಂದು ನಾಮಫಲಕವಿರುವ ಕ್ರಿ.ಶ.1830ರ ಸ್ಥಳವನ್ನು ಕಾಣಬಹುದಾಗಿದೆ. ಅಲ್ಲದೆ ಇಂದಿಗೂ ಸಹ ಬೆಂಗಳೂರಿನ ಅವಿನ್ಯೂ ರಸ್ತೆಯ ಇಕ್ಕೆಲಗಳ ಬಡಾವಣೆಗಳಲ್ಲಿರುವ ನೇಕಾರರು, ದೇವಾಂಗ ಜನಾಂಗದವರು ಮೂಲತಃ ದೊಡ್ಡಬಳ್ಳಾಪುರದವರೇ ಆಗಿದ್ದಾರೆಂಬುದು ಗಮನಾರ್ಹ. ಟಿಪ್ಪು ಸುಲ್ತಾನನ ಕಾಲದಲ್ಲಿ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬಂದ ನೇಕಾರರೆಲ್ಲಾ ಉತ್ತಮ ಕಲಾಬತ್ತಿನ, ಸೊಗಸಾದ, ಬೆಲೆಬಾಳುವ ರೇಷ್ಮೆಬಟ್ಟೆಗಳನ್ನು ತಯಾರಿಸುತ್ತಿದ್ದರು.10 ಇದನ್ನುಟಿಪ್ಪು  ಕಚ್, ಮಸ್ಕತ್, ಪೆಗು, ಆರ್ಮೋಸ್, ಜೆಡ್ಡಾ, ಏಡನ್, ಬಾಸ್ರಾ ಮುಂತಾದ ಸ್ಥಳಗಳಲ್ಲಿದ್ದ ತನ್ನದೇ ವ್ಯಾಪಾರದ ಕೋಠಿಗಳಿಗೆ ರಪ್ತು ಮಾಡುತ್ತಿದ್ದನೆಂದು ತಿಳಿಯುತ್ತದೆ.

ಟಿಪ್ಪು ಸುಲ್ತಾನನು ಸತ್ತ ಮರುವರ್ಷವೇ ದೊಡ್ಡಬಳ್ಳಾಪುರಕ್ಕೆ ಬಂದಿದ್ದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ಸೇವಕ ಫ್ರಾನ್ಸಿಸ್ ಬುಕಾನನ್ ತನ್ನ ಪ್ರವಾಸದ ವರದಿಯಲ್ಲಿ ದೊಡ್ಡಬಳ್ಳಾಪುರದ ನೇಕಾರರಿಗೆ ಸಂಬಂಧಪಟ್ಟಂತೆ ಈ ರೀತಿಯಾಗಿ ದಾಖಲಿಸಿದ್ದಾನೆ. “ಟಿಪ್ಪುಸುಲ್ತಾನನ ಕಾಲದಲ್ಲಿ ದೊಡ್ಡಬಳ್ಳಾಪುರದಲ್ಲಿ ಶಾನುಗಾರರು, ಕನ್ನಡ ದೇವಾಂಗದವರು, ತೆಲುಗು ದೇವಾಂಗದವರು ಉತ್ತಮ ಗುಣಮಟ್ಟದ ಹತ್ತಿಬಟ್ಟೆ, ರೇಷ್ಮೆಬಟ್ಟೆ ಮತ್ತು ಕಲಾಬತ್ತಿನಬಟ್ಟೆ ತಯಾರಿಕೆಯಲ್ಲಿ ನಿರತರಾಗಿದ್ದರು. ಇವರಲ್ಲಿ ಶಾನುಗಾರರ ಆರ್ಥಿಕಸ್ಥಿತಿ ಉತ್ತಮವಾಗಿತ್ತು. ಶಾನುಗಾರರು ಮತ್ತು ಪದ್ಮಸಾಲೆಯವರು ಮಸ್ಲಿನ್‍ಬಟ್ಟೆ ತಯಾರಿಕೆಯಲ್ಲಿ ನಿಪುಣರಾಗಿದ್ದರು. ಇವರಲ್ಲಿ ಕೆಲವರು ಬಟ್ಟೆಯನ್ನು ಕಳ್ಳತನದಿಂದ ರಾಜ್ಯದ ಹೊರಗೆ ಹೆಚ್ಚಿನ ಬೆಲೆಗೆ ರವಾನಿಸುತ್ತಿದ್ದರು”.

ಮಾಕಳಿದುರ್ಗ:
ಇದು ಸಾಸಲು ಹೋಬಳಿಗೆ ಸೇರಿದ ಮಾಕಳಿ ಗ್ರಾಮದ ಬೆಟ್ಟದ ಮೇಲಿದೆ. ಇದು ದೊಡ್ಡಬಳ್ಳಾಪುರ ನಗರದಿಂದ (ಗೌರಿಬಿದನೂರು ಮಾರ್ಗ) 15 ಕಿ.ಮೀ. ಮತ್ತು ಬೆಂಗಳೂರಿನಿಂದ 65 ಕಿ.ಮೀ. ದೂರದಲ್ಲಿದೆ. ಈ ದುರ್ಗವು ಸಮುದ್ರಮಟ್ಟದಿಂದ 4430 ಅಡಿ ಎತ್ತರವಿದೆ. ಈ ಬೆಟ್ಟಕ್ಕೆ ಮಾಕಳಿ ಗ್ರಾಮದಿಂದಲೂ ಪ್ರವೇಶಿಸಬಹುದು. ಹಾಗೆಯೇ ಮಾಕಳಿದುರ್ಗ ರೈಲ್ವೇನಿಲ್ದಾಣದ ಪಕ್ಕದಲ್ಲಿರುವ ಬಂಡಿಜಾಡಿನಿಂದಲೂ ಸಂಪರ್ಕವನ್ನು ಪಡೆಯಬಹುದು. ಮಾಕಳಿದುರ್ಗವು ಉತ್ತರ-ದಕ್ಷಿಣದಲ್ಲಿ ಇತರ ಬೆಟ್ಟಗಳಿಂದ ಸೇರಿಕೊಂಡಿರುವಷ್ಟು ಭಾಗವನ್ನು ಬಿಟ್ಟರೆ ಉಳಿದ ಎಲ್ಲ ಭಾಗವು ಕಡಿದಾದ ಊಧ್ರ್ವಗಾಮಿ ಶಿಲಾಮುಖಗಳಿಂದ ಕೂಡಿದೆ. ಬೆಟ್ಟದ ಉತ್ತರಭಾಗವು ಪೆನುಗೊಂಡ ಮತ್ತು ಬಳ್ಳಾರಿ ಜಿಲ್ಲೆಗಳಿಗು ಹಬ್ಬಿದೆ. ಬೆಟ್ಟದ ಬುಡ ಬಿಸಿವಾತಾವರಣದಿಂದ ಕೂಡಿದ್ದರೆ ಮೇಲಕ್ಕೆ ಹೋದಂತೆಲ್ಲಾ ಹವಾಗುಣ ತಂಪಾಗುವುದನ್ನು ಅನುಭವಿಸಬಹುದು. ಸುಮಾರು ಮೂರು ಮೈಲಿಯ ಕುದುರೆಮಾರ್ಗ ಪೂರ್ವದಿಂದ ಪಶ್ಚಿಮಾಭಿಮುಖವಾಗಿ ಮೇಲೇರುತ್ತದೆ. ಈ ಬೆಟ್ಟದ ಮತ್ತು ಸುತ್ತಮುತ್ತಲಿನ ಕಾಡುಗಳಲ್ಲಿ ವಿರಳವಾಗಿ ಚಿರತೆಗಳು ಅಧಿಕವಾಗಿ ಕಾಡುಹಂದಿ, ಮುಳ್ಳುಹಂದಿ, ಮೊಲ, ಕಾಡುಕೋಳಿ, ನರಿ, ನವಿಲು, ತೋಳಗಳು ಕಂಡುಬರುತ್ತವೆ. ಬೆಟ್ಟದ ಮೇಲೆ ನಿಂತು ನೋಡಿದರೆ ವಿಶಾಲವಾದ ಬಯಲು, ಹತ್ತಾರು ಕೆರೆಕುಂಟೆಗಳು, ಹೊಲಗದ್ದೆಗಳು ಹಚ್ಚಹಸಿರಿನಿಂದ ಕಂಗೊಳಿಸುವುದನ್ನು ಕಾಣಬಹುದು. ಅಲ್ಲದೆ ಸುತ್ತಲಿನ ಗ್ರಾಮಗಳಾದ ಮಾಕಳಿ, ಗುಂಡುಮಗೆರೆ, ಘಾಟಿ, ಲಗುಮೇನಹಳ್ಳಿ, ಗುಂಜೂರು, ಸೊಣ್ಣೇನಹಳ್ಳಿ, ದೊಡ್ಡಬಳ್ಳಾಪುರ ಪಟ್ಟಣ ಎಲ್ಲವು ಕಾಣುತ್ತೇವೆ. ಮಾಕಳಿಬೆಟ್ಟವು ಮಾರ್ಕಂಡೇಯ ಋಷಿಮುನಿಗಳ ತಪೂವನ ಆಗಿತ್ತೆಂಬ ನಂಬಿಕೆಯಿದೆ.

ಮಾಕಳಿಬೆಟ್ಟದಲ್ಲಿ ಟಿಪ್ಪು ಸುಲ್ತಾನನು ಕೋಟೆಯನ್ನು ನಿರ್ಮಿಸುವ ಮೊದಲೇ ವಿಜಯನಗರ ಕಾಲಾವಧಿಯಲ್ಲಿ ಆವತಿ ನಾಡಪ್ರಭುಗಳಾದ ದೊಡ್ಡಬಳ್ಳಾಪುರ ಪಾಳೆಯಗಾರರು ದೊಡ್ಡಬಳ್ಳಾಪುರ ಪಟ್ಟಣದಲ್ಲಿ ಕೋಟೆಯನ್ನು ನಿರ್ಮಿಸುವ ಕಾಲಕ್ಕೆ ಇಲ್ಲಿಯೂ ಬೃಹತ್ ಕೋಟೆಯೊಂದನ್ನು ನಿರ್ಮಿಸಿದರು. ಅದು ಇಂದಿಗೂ `ಮಾಕಳಿದುರ್ಗ’ವೆಂದೇ ಪ್ರಸಿದ್ಧವಾಗಿದೆ. ಇದು ಅವರ ಸೈನ್ಯಕ್ಕೆ ತರಬೇತಿ ನೀಡುವ ಕೇಂದ್ರವಾಗಿತ್ತು. ಬಳ್ಳಾಪುರದ ದೊರೆಗಳು ವಿಜಯನಗರ ಶೈಲಿಗನುಗುಣವಾಗಿ ವಿಶಿಷ್ಟ ಕೌಶಲದಿಂದ ಕೂಡಿದ ಭದ್ರವಾದ ಜಿಂಜಾಲು (ಗೋಡೆ)ಗಳನ್ನು ಬೃಹತ್ ಗ್ರಾನೈಟ್ ಶಿಲೆಗಳಿಂದ ನಿರ್ಮಿಸಿದ್ದರು. ಬೆಟ್ಟದ ಮೇಲೆ ಒಂದು ವಿಸ್ತಾರವಾದ ಪ್ರಸ್ತಭೂಮಿಯಿದ್ದು, ಅದು ಪಶ್ಚಿಮಕ್ಕೆ ಇಳಿಜಾರಾಗಿದೆ. ಈ ಜಾಗದಲ್ಲಿ ‘ಮಾಕಳಿ ಮಲ್ಲೇಶ್ವರ’ನೆಂದೇ ಹೆಸರಾಗಿರುವ ಈಶ್ವರನ ಗುಡಿಯೊಂದಿದೆ. ಅದರಲ್ಲಿ ಶಿವಲಿಂಗವಿದ್ದು, ಗುಡಿಯ ಎದುರಿಗೆ ಬಸವನ ವಿಗ್ರಹ ಮತ್ತು ಗರುಡಗಂಬವಿದೆ.ದೇಗುಲದ ಪ್ರವೇಶದ್ವಾರದ ಮೇಲೆ ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಲ್ಪಟ್ಟ ಒಂದು ಗೂಡಿದೆ. ಈಗ ಅದರಲ್ಲಿ ಯಾವುದೇ ವಿಗ್ರಹವಿಲ್ಲ. ಗೂಡಿನ ಇಕ್ಕೆಲಗಳಲ್ಲಿ ಗಾರೆಯಿಂದ ನಿರ್ಮಿಸಿರುವ ಬಸವನ ವಿಗ್ರಹಗಳಿವೆ. ಈ ದೇವಾಲಯದ ಹಿಂಗಡೆ ಸ್ವಲ್ಪ ದೂರದಲ್ಲಿ ಅನೇಕ ಕಡೆ ಕಲ್ಲಿನಿಂದ ನಿರ್ಮಾಣವಾಗಿದ್ದು, ಈಗ ಹಾಳಾಗಿರುವ ವಸತಿ ಸಮುಚ್ಛಯವನ್ನು ಗುರುತಿಸಬಹುದು. ಇದರ ಅನತಿ ದೂರದಲ್ಲಿ ನೀರಿನ ಕೊಳವೊಂದಿದೆ. ಇವೆಲ್ಲಾ ಆವತಿ ನಾಡಪ್ರಭುಗಳ (ದೊಡ್ಡಬಳ್ಳಾಪುರದ ಪಾಳೆಯಗಾರರು) ಕಾಲದ ರಚನೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ದೊಡ್ಡಬಳ್ಳಾಪುರದ ಪಾಳೆಯಗಾರರ ನಂತರ ಈ ಕೋಟೆಯು ಮರಾಠನಾಯಕ ಷಹಜಿಯ ಅಧೀನಕ್ಕೊಳಪಟ್ಟಿತು. ಇವನ ತರುವಾಯ ಕ್ರಿ.ಶ.1761ರ ಹೊತ್ತಿಗೆ ಪೇಶ್ವೆ ಮಾಧವರಾಯನ ವಶಕ್ಕೆ ಬಂದಿತು. ಪರಾಕ್ರಮಿಯಾದ ಮಾಧವರಾಯನು ಕ್ರಿ.ಶ.1767ರ ವೇಳೆಗೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನೆಲ್ಲಾ ಒಂದೊಂದಾಗಿ ವಶಪಡಿಸಿಕೊಂಡು ಹೈದರಾಲಿಯ ನಿದ್ದೆಗೆಡಿಸಿದನು. ಮಾಧವರಾಯನು ತಾನು ಗೆದ್ದ ಚನ್ನರಾಯದುರ್ಗ, ಮಧುಗಿರಿ, ಸಿರಾ, ಹೊಸಕೋಟೆ, ದೊಡ್ಡಬಳ್ಳಾಪುರ ಮತ್ತು ಮಾಕಳಿದುರ್ಗಗಳನ್ನು ನೋಡಿಕೊಳ್ಳಲು ಗುತ್ತಿಯ ಮುರಾರಿರಾಯನನ್ನು ನೇಮಕ ಮಾಡಿದನು. ಆದರೆ ಅತ್ಯಲ್ಪ ಕಾಲದಲ್ಲೇ ಹೈದರನ ಪ್ರಧಾನ ವೆಂಕಪೈಯ್ಯನವರ ತಮ್ಮ ವೆಂಕಟೇಶೈಯ್ಯನವರು ತುಮಕೂರು, ದೇವರಾಯನದುರ್ಗ ಮತ್ತು ಮಾಕಳೀದುರ್ಗವನ್ನು ಮರಾಠರಿಂದ ವಶಪಡಿಸಿಕೊಂಡು ಅವನ್ನು ನೋಡಿಕೊಳ್ಳಲು ತಮ್ಮ ಸಿಬ್ಬಂದಿಯನ್ನು ನೇಮಿಸಿದರು.

ಹೀಗೆ ಮರಾಠರ ವಶದಲ್ಲಿದ್ದ ಮಾಕಳಿದುರ್ಗವು ಹೈದರನ ಕೈಸೇರಿತು. ಅವನ ನಂತರ ಟಿಪ್ಪು ಸುಲ್ತಾನನ ಅಧಿಪತ್ಯಕ್ಕೂ ಒಳಪಟ್ಟಿತು. ಟಿಪ್ಪು  ತಾನು ಗೆದ್ದ ಪ್ರದೇಶಗಳಲ್ಲಿದ್ದ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಕೋಟೆಕೊತ್ತಲುಗಳನ್ನು ನಿರ್ಮಿಸಿದನು. ಹಾಗೆ ಕಟ್ಟಿಸಿದ ಕೋಟೆಗಳಲ್ಲಿ ದೇವನಹಳ್ಳಿ, ಬಳ್ಳಾರಿ, ಬೆಂಗಳೂರು, ಪಾವಗಡ, ಮಿಡಗೇಸಿ, ರಹಮಾನ್‍ದುರ್ಗ, ಶ್ರೀರಂಗಪಟ್ಟಣ, ನಂದಿದುರ್ಗ, ಮುಜರಾಬಾದ್ ಪ್ರಮುಖವಾದವು. ಅಂತೆಯೇ ಟಿಪ್ಪು ವಿನ ಕಾಲದಲ್ಲಿ ದೊಡ್ಡಬಳ್ಳಾಪುರ ಪಟ್ಟಣದ ಕೋಟೆಯನ್ನು ಭದ್ರಪಡಿಸಲಾಯಿತಲ್ಲದೆ, ಇದೇ ತಾಲ್ಲೂಕಿನಲ್ಲಿರುವ ಸಾಸಲು ಹೋಬಳಿಗೆ ಸೇರಿದ ಮಾಕಳಿಬೆಟ್ಟದಲ್ಲಿ ಈ ಹಿಂದೆ ಪಾಳೆಯಗಾರರಿಂದ ನಿರ್ಮಾಣಗೊಂಡಿದ್ದ ಕೋಟೆಯನ್ನು ಮತ್ತಷ್ಟು ಅಭೇದ್ಯಗೊಳಿಸಿದನು. ಅದರ ರಕ್ಷಣೆಗೆ ಬೇಕಾದ ಎಲ್ಲಾ ಏರ್ಪಾಡುಗಳನ್ನು ಮಾಡಿದ್ದನು. ಪೂರ್ವ-ಪಶ್ಚಿಮದ ಕಡೆಯಿಂದ ಬಿಟ್ಟರೆ ಮಾಕಳಿದುರ್ಗವನ್ನು ಬೇರೆಯ ಕಡೆಯಿಂದ ಏರಲು ಸಾಧ್ಯವಿರಲಿಲ್ಲ. ಈ ಭಾಗವನ್ನು ಟಿಪ್ಪು  ಎರಡುಸಾಲಿನ ಆಳುವೇರಿಗಳಿಂದ ಮತ್ತು ಒಂದುಸಾಲು ಅಶ್ವಪಡೆಯಿಂದ ಬಲಪಡಿಸಿದ್ದನು. ಕೋಟೆಯಲ್ಲಿ ಸಾಕಷ್ಟು ಮದ್ದು ಗುಂಡುಗಳ ಸಂಗ್ರಹವಿತ್ತು. ದುರ್ಗದಲ್ಲಿ ಬೆಟ್ಟದ ಮೇಲಿಂದ ಉರುಳಿಸುವುದಕ್ಕಾಗಿ ಸಂಗ್ರಹಿಸಿದ್ದ ದುಂಡನೆಯ ಗ್ರಾನೈಟ್‍ಕಲ್ಲು ಬಹಳವಾಗಿತ್ತು. ಈಗಲೂ ಆ ರಾಶಿಯನ್ನು ಕಾಣಬಹುದು. ಈ ಕೋಟೆಯು ಅಂಡಾಕಾರವಾಗಿದ್ದು, ಒಂದು ಮೈಲಿಗಿಂತ ಸ್ವಲ್ಪ ಹೆಚ್ಚಿನ ಸುತ್ತಳತೆಯುಳ್ಳದ್ದಾಗಿತ್ತು. ಆಳವಾದ ಅಗಳು ಇದ್ದು, ಅದರಲ್ಲಿ ನೀರಿತ್ತು. ಈ ಕಿಲ್ಲೆಗೆ ಎರಡು ಹೆಬ್ಬಾಗಿಲುಗಳಿದ್ದವು.

ಕ್ರಿ.ಶ.1790ರ ಕೊನೆಯ ಹೊತ್ತಿಗೆ ಲಾರ್ಡ್ ಕಾರ್ನ್‍ವಾಲೀಸನು ಟಿಪ್ಪು ಸುಲ್ತಾನನನ್ನು ಮಣಿಸಲು ಬೆಂಗಳೂರಿನ ಸುತ್ತಮುತ್ತಲಿನ ಎಲ್ಲಾ ದುರ್ಗಗಳನ್ನು ವಶಪಡಿಸಿಕೊಳ್ಳಲು ಮೇಜರ್ ಗೌಡಿಯನ್ನು ನೇಮಿಸಿದನು. ಅವನೋ ಗಿರಿದುರ್ಗಗಳಾದ ಹೊಸೂರು, ಅಂಚೆಟ್ನಿದುರ್ಗ, ನೀಲಗಿರಿ, ರುತ್ಲೆಂಗಿರಿ, ರಾಯಕೋಟೆ, ಕೆಂಚುಳ್ಳಿದುರ್ಗ, ಉದಯದುರ್ಗ, ದೇವನಹಳ್ಳಿ ಮುಂತಾದ ಅನೇಕ ಕೋಟೆಕೊತ್ತಲುಗಳನ್ನು ವಶಪಡಿಸಿಕೊಂಡು ಟಿಪ್ಪು ವನ್ನು ಅಧೀರನನ್ನಾಗಿ ಮಾಡಲು ಯತ್ನಿಸಿದನು. ನಂತರ ಅವನು ಬೆಂಗಳೂರಿನ ಉತ್ತರಕ್ಕಿರುವ ಕೋಟೆಗಳತ್ತ ಗಮನವನ್ನಿತ್ತನು. ಅಂತೆಯೇ 1790ರ ಸೆಪ್ಟಂಬರ್ 10ರಂದು ಮೇಜರ್ ಗೌಡೀಯು ಮಾಕಳಿದುರ್ಗದ ಮೇಲೆ ಹಠಾತ್ತನೆ ಎರಗಿದನು. ಇಲ್ಲಿ ಅಂತಹ ದೊಡ್ಡಮಟ್ಟದ ರಕ್ಷಣಾಸೇನೆ ಇರಲಿಲ್ಲ. ಕೋಟೆಯ ಒಳಗಿದ್ದ ಕೆಲವು ಕೋವಿಗರು ಮೊದಲ ಕರೆಯಲ್ಲಿಯೇ ಶರಣಾಗತರಾದರು ಎಂದು ಮೈಸೂರು ಮತ್ತು ಬ್ರಿಟೀಷ್ ದಾಖಲೆಗಳಿಂದ ತಿಳಿಯುತ್ತದೆ.

ಮಾಕಳಿ ಕೋಟೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೋಟೆಯ ಗೋಡೆಯಲ್ಲಿ ಎರಡು ಪದರಗಳಿವೆ. ಕೆಳಗಿನ ಪದರ ದಪ್ಪನಾದ ಗ್ರಾನೈಟ್ ಕಲ್ಲುಗಳಿಂದ ಕೂಡಿದ್ದು, ಅದು ಪಾಳೆಯಗಾರರ ಕಾಲದ ರಚನೆ. ಮೇಲಿನ ಪದರವು ಕೆಳಗಿನ ಪದರಕ್ಕಿಂತ ಸ್ವಲ್ಪ ಚಿಕ್ಕದಾದ ಕಲ್ಲುಗಳಿಂದ ಕಟ್ಟಲ್ಪಟ್ಟಿದ್ದು, ಅದು ಟಿಪ್ಪುವಿನ ಕಾಲದಲ್ಲಿ ರಚನೆಯಾಗಿದೆ. ಅಂದರೆ ಟಿಪ್ಪು ಈ ಹಿಂದೆ ಕಟ್ಟಿದ್ದ ಕೋಟೆಯ ಎತ್ತರವನ್ನು ಮತ್ತಷ್ಟು ಹೆಚ್ಚಿಸಿದ್ದಾನೆ. ಅಲ್ಲದೆ ಕೋಟೆಯ ಗೋಡೆಯ ಮೇಲೆ ಕಾವಲು ಬರುಜುಗಳನ್ನು ಕಟ್ಟಿಸಿರುವನು. ದುರ್ಗದಲ್ಲಿದ್ದ ಸೈನಿಕರು ಮತ್ತು ಕಾವಲುಗಾರರ ವಾಸಕ್ಕಾಗಿ ಕಟ್ಟಿಸಿದ್ದ ಹಲವಾರು ಕೋಣೆಗಳು, ಉಗ್ರಾಣಗಳು ಹಾಗೂ ಮದ್ದಿನಮನೆಗಳ ಅವಶೇಷಗಳನ್ನು ಇಂದಿಗೂ ಕಾಣಬಹುದಾಗಿದೆ. ಇವೆಲ್ಲಾ ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಾಣಗೊಂಡಿದ್ದ ಕಟ್ಟಡಗಳು. ಒಂದೆರಡು ಮದ್ದಿನಮನೆಗಳು ಇಂದಿಗೂ ಸುರಕ್ಷಿತವಾಗಿ ಉಳಿದುಕೊಂಡಿದ್ದು, ಅವು ಗೊಮ್ಮಟದಂತೆ ನಾಲ್ಕೂ ಕಡೆ ಇಳಿಜಾರಾದ ಮಾಡು, ಅತೀ ಚಿಕ್ಕದಾದ ಕಮಾನಿನಾಕಾರದ ಪ್ರವೇಶದ್ವಾರ ಹೊಂದಿವೆ. ಈ ಅವಶೇಷಗಳ ನಡುವೆಯೇ ಒಂದೆಡೆ ಸ್ವಲ್ಪ ಎತ್ತರವಾದ ವೇದಿಕೆಯಂತಹ ಒಂದು ರಚನೆಯು ಕಂಡುಬರುತ್ತಿದ್ದು, ಅದು ಇಂದು ಸಂಪೂರ್ಣವಾಗಿ ಹಾಳಾಗಿದೆ.

ಇದೇನೆಂದು ವಿಚಾರಿಸಲಾಗಿ ಟಿಪ್ಪು  ಮತ್ತಿತರ ಅಧಿಕಾರಿಗಳು ಇಲ್ಲಿಗೆ ಬಂದಾಗ ಇದನ್ನು ಪ್ರಾರ್ಥನೆ ಸಲ್ಲಿಸಲು ಬಳಸುತ್ತಿದ್ದರೆಂದು ಗ್ರಾಮಸ್ಥರು ಹೇಳುತ್ತಾರೆ. ಈ ಕೋಟೆಯಲ್ಲಿ ನೆಲಮಾಳಿಗೆಯೊಂದು ಇದ್ದು, ಅದರಲ್ಲಿನ ಸುರಂಗದಿಂದ ನಂದಿದುರ್ಗಕ್ಕೂ, ದೊಡ್ಡಬಳ್ಳಾಪುರದ ಕೋಟೆಗೂ ತಲುಪಬಹುದಿತ್ತು ಎಂಬ ಪ್ರತೀತಿಯಿದೆ. ಇನ್ನೊಂದೆಡೆ ಎರಡು ಬಂಡೆಗಳ ನಡುವೆ ಗುಹೆಯಂತೆ ಕಂಡುಬರುವ ಸ್ಥಳವೊಂದಿದ್ದು, ಇದು ರಹಸ್ಯ ಮಾರ್ಗವೆಂಬುದು ಸ್ಥಳೀಯರ ಅಭಿಪ್ರಾಯ. ಈ ರಹಸ್ಯ ದಾರಿಯಲ್ಲಿ ಹೋದರೆ ಕೋಟೆಯ ಹೊರಗೆ ಹೋಗಬಹುದಂತೆ. ಮತ್ತೊಂದು ಸ್ಥಳೀಯ ಹೇಳಿಕೆಯ ಪ್ರಕಾರ ಟಿಪ್ಪು ತನಗೆ ಪ್ರಿಯವೆನಿಸಿದ್ದ ಬೇಟೆಗಾಗಿ ಇಲ್ಲಿನ ಅರಣ್ಯಕ್ಕೆ ಬರುತ್ತಿದ್ದನಂತೆ. ಟಿಪ್ಪು ಸುಲ್ತಾನನ ಕಾಲದಲ್ಲಿ ನಂದಿದುರ್ಗ ಮತ್ತು ಮಾಕಳಿದುರ್ಗಗಳೆರಡೂ ಲತೀಫ್ ಅಲಿಬೇಗ್ ಎಂಬ ಅಧಿಕಾರಿಯ ರಕ್ಷಣೆಯಲ್ಲಿತ್ತೆಂದು ಸಮಕಾಲೀನ ದಾಖಲೆಗಳಿಂದ ತಿಳಿಯುತ್ತದೆ.

ಟಿಪ್ಪು ವಿನ ಪತನಾನಂತರ ಮಾಕಳಿದುರ್ಗವು ಅಕ್ಷರಶಃ ಅನಾಥವಾಯಿತು. ಅದು ಯಾರಿಗೂ ಬೇಡವಾಗಿ ಸಾಧು-ಸನ್ಯಾಸಿಗಳ ತಾಣವಾಯಿತು. ಟಿಪ್ಪÅವಿನ ನಂತರ ಇಲ್ಲಿಗೆ ಬಂದಿದ್ದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯ ಸರ್ವೇ ಅಧಿಕಾರಿ ಫ್ರಾನ್ಸಿಸ್ ಬುಕಾನನ್ ತನ್ನ ವರದಿಯಲ್ಲಿ (ಕ್ರಿ.ಶ.1800ರಲ್ಲಿ) “ಮಾಕಳಿ ಕೊಂಡ(ಬೆಟ್ಟ)ದಲ್ಲಿ ಲಿಂಗವನ್ನು ಧರಿಸುವ ಅನೇಕ ಜಂಗಮ ಗುರುಗಳಿದ್ದು, ಅವರನ್ನೆಲ್ಲಾ ‘ಮಲ್ಲೇಶ್ವರಸ್ವಾಮಿ’ಯೆಂದು ಕರೆಯಲಾಗುತ್ತಿತ್ತು. ಇವರು ಆಗಾಗ್ಗೆ ಗ್ರಾಮ, ಪಟ್ಟಣಗಳಿಗೆ ಬಂದು ತಮ್ಮ ಜಾತಿಯ ಜನರಿಗೆ ಪವಿತ್ರತೀರ್ಥವನ್ನು ನೀಡಿ, ಅವರಿಂದ ಧವಸ-ಧಾನ್ಯಗಳನ್ನು ಪಡೆದು ಮತ್ತೆ ಕೊಂಡಕ್ಕೆ ಹಿಂದಿರುಗುತ್ತಿದ್ದರು” ಎಂದು ಉಲ್ಲೇಖಿಸಿರುವನು. ಒಟ್ಟಾರೆ ಮಾಕಳಿದುರ್ಗವು ಗಿರಿದುರ್ಗವಾಗಿದ್ದು, ಬೆಂಗಳೂರು ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡದಾದ, ಸುಭದ್ರವಾದ ಮತ್ತು ದುರ್ಗಮ ಕೋಟೆಯೆನಿಸಿದೆ. ಆದರೆ ಇಂದು ಈ ಕೋಟೆ ಸರಿಯಾದ ನಿರ್ವಹಣೆಯಿಲ್ಲದೆ ದಟ್ಟಪೂದೆ, ಕುರುಚಲು ಗಿಡಗಂಟಿಗಳಿಂದ ತುಂಬಿದ್ದು ಕಾಡುಪ್ರಾಣಿಗಳ ವಾಸಸ್ಥಳವಾಗಿದೆ.

ಟಿಪ್ಪು  ತನ್ನ ಅಧಿಕಾರಾವಧಿಯಲ್ಲಿ ಸುಂದರ ನಮೂನೆಯ ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಅಚ್ಚು ಹಾಕಿಸಿದನು. ದೊಡ್ಡಬಳ್ಳಾಪುರದಲ್ಲಿ ಕ್ರಿ.ಶ.1980ರ ದಶಕದಲ್ಲಿ ಇಂದಿನ ರಾಜಕಮಲ್ ಚಿತ್ರಮಂದಿರದ ರಸ್ತೆಯಲ್ಲಿ ನೀರಿನ ಪೈಪ್‍ಲೈನ್ ಅಳವಡಿಸಲು ಅಗಿಯುತ್ತಿದ್ದಾಗ ಟಿಪ್ಪು ಸುಲ್ತಾನನ ಕಾಲಕ್ಕೆ ಸೇರಿದ ಆನೆಯ ಚಿತ್ರವಿರುವ ಕೆಲವೊಂದು ತಾಮ್ರದ ನಾಣ್ಯಗಳು ಮತ್ತು ಪಣಂ ಎನ್ನುವ ಚಿಕ್ಕದಾದ ಚಿನ್ನದ ನಾಣ್ಯಗಳು ದೊರೆತಿದ್ದನ್ನು ಇದೇ ಸಮಯದಲ್ಲಿ ಸ್ಮರಿಸಬಹುದಾಗಿದೆ. ಅಲ್ಲದೆ ವಡ್ಡರಹಳ್ಳಿಯಲ್ಲೂ ಸಹ ಟಿಪ್ಪು ವಿನ ಕಾಲದ ಒಂದೆರಡು ಚಿಕ್ಕದಾದ ಚಿನ್ನದ ನಾಣ್ಯಗಳು ಹೊಲವೊಂದರಲ್ಲಿ ನೀರಿನ ತೊಟ್ಟಿ ನಿರ್ಮಿಸಲು ಭೂಮಿ ಅಗಿಯುತ್ತಿದ್ದಾಗ ಪತ್ತೆಯಾಗಿದ್ದವು.

ಟಿಪ್ಪು ಸುಲ್ತಾನನ ಆಸ್ಥಾನದಲ್ಲಿ ಅನೇಕ ಕವಿಗಳು, ವಿದ್ವಾಂಸರು ಸ್ಥಾನ ಪಡೆದಿದ್ದರು. ಅವನು ಅನೇಕ ವಿಷಯಗಳ ಬಗ್ಗೆ ಅವರೊಂದಿಗೆ ಮಾತನಾಡುತ್ತಿದ್ದನು. ಸಂಗೀತ, ಜ್ಯೋತಿಷ್ಯ ಮತ್ತು ಚಿತ್ರಶಿಲ್ಪಗಳಲ್ಲಿ ಅವನಿಗೆ ಆಸಕ್ತಿಯಿತ್ತು. ಸೂಫಿತತ್ವದ ಮೇಲೆ ಅವನಿಗೆ ವಿಶೇಷ ಒಲವಿತ್ತು. ಷಾಷ್ಟಿಕ ಕುಲಭೂಷಣರು, ಭಾಗವತ್ತೋತ್ತಮರು ಆದ ದೊಡ್ಡಬಳ್ಳಾಪುರದ ಕೃಷ್ಣರಾಯರು ಟಿಪ್ಪು ವಿನ ಆಸ್ಥಾನವನ್ನು ಅಲಂಕರಿಸಿದ್ದರೆಂದು ತಿಳಿಯುತ್ತದೆ. ಕ್ರಿ.ಶ.1758ರಲ್ಲಿ ದೊಡ್ಡಬಳ್ಳಾಪುರದಲ್ಲಿ ಜನಿಸಿದ ಕೃಷ್ಣರಾಯರು ಷಾಷ್ಟಿಕರಲ್ಲಿ ‘ಕೂಚರಸ’ ಕುಟುಂಬಕ್ಕೆ ಸೇರಿದವರು. ಇವರದು ಭಾರದ್ವಾಜಗೋತ್ರ. ಇವರ ಮೂಲಪುರುಷನು ದೊಡ್ಡಬಳ್ಳಾಪುರದ ಪಾಳೆಯಗಾರರ ಕಾಲದಲ್ಲಿ ಮಂತ್ರಿಯಾಗಿದ್ದ ನಾಗಪ್ಪನು. ಈ ವಂಶದಲ್ಲಿ ಹುಟ್ಟಿದ ಕೃಷ್ಣರಾಯರು ತಮ್ಮ ಬಾಲ್ಯವನ್ನೆಲ್ಲಾ ದೊಡ್ಡಬಳ್ಳಾಪುರದಲ್ಲೇ ಕಳೆದರು. ಇವರ ಹೆಚ್ಚಿನ ವಿದ್ಯಾಭ್ಯಾಸವು ಮಾನವಿಯಲ್ಲಿ ಜಗನ್ನಾಥದಾಸರ ನೇತೃತ್ವದಲ್ಲಿ ಜರುಗಿತು.

ಅಲ್ಲಿಂದ ಹಿಂತಿರುಗಿದ ಬಳಿಕ ಗೃಹಸ್ಥಾಶ್ರಮ ಧರ್ಮವನ್ನು ಸ್ವೀಕರಿಸಿದರು. ದಾಸಶ್ರೇಷ್ಟರಾದ ಜಗನ್ನಾಥದಾಸರು ದೊಡ್ಡಬಳ್ಳಾಪುರಕ್ಕೆ ಆಗಮಿಸಿ ತಮ್ಮ ಸ್ವಕೀಯರೂ, ಶಿಷ್ಯಾಗ್ರೇಸರರೂ ಆಗಿದ್ದ ಕೃಷ್ಣರಾಯರ ಮನೆಯಲ್ಲಿ ದೀರ್ಘಕಾಲ ವಾಸವಿದ್ದರೆಂತಲೂ, ಅವರು ವಾಸವಿದ್ದ ಮನೆಯ ಆವರಣದಲ್ಲಿ ಅವರ ನೆನಪಿಗೋಸ್ಕರವಾಗಿ ಶ್ರೀಪಾಂಡುರಂಗಸ್ವಾಮಿ ದೇವಾಲಯವನ್ನು, ರಾಘವೇಂದ್ರದಾಸರೆಂಬ (ಮುದ್ದುಮೋಹನದಾಸರು) ಮಹನೀಯರು ನಿರ್ಮಿಸಿದ್ದಾಗಿ ಆಖ್ಯಾಯಿಕೆ ಇರುವುದು. ಕೃಷ್ಣರಾಯರ ಜೀವನಚರಿತ್ರೆ ಮತ್ತು ಗ್ರಂಥಗಳ ವಿಚಾರವಾಗಿ ಆರ್. ನರಸಿಂಹಾಚಾರ್ಯರು ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. “ಕೃಷ್ಣರಾಯನು 1809ನೇ ಶುಕ್ಲ ಸಂವತ್ಸರದಲ್ಲಿ ಪರಂಧಾಮವನ್ನು ಹೊಂದಿದ ಜಗನ್ನಾಥವಿಠಲರನ್ನು ತನ್ನ ಗುರುವೆಂದು ಹೇಳುತ್ತಾನೆ. ಈತನ ಕಾವ್ಯಸರಣಿಯು ಭಕ್ತಿ ಮತ್ತು ಪ್ರಮೇಯ ವಿಚಾರಗಳಲ್ಲಿ ಬಹುಮಟ್ಟಿಗೆ ಜಗನ್ನಾಥವಿಜಯ ಕಾವ್ಯವನ್ನು ಹೋಲುತ್ತದೆಯಾದರು ಈತನು ಸಂಸ್ಕøತ ಮತ್ತು ಹಳೆಗನ್ನಡಗಳಲ್ಲಿ ಉದ್ಧಾಮ ಪಂಡಿತನಾಗಿದ್ದನು. ಈತನು 1758ನೇ ಬಹುಧಾನ್ಯ ಸಂವತ್ಸರದಲ್ಲಿ ಹುಟ್ಟಿ, 1828ನೇ ಸರ್ವಧಾರಿ ಸಂವತ್ಸರದಲ್ಲಿ ನಿರ್ಯಾಣ ಹೊಂದಿದಂತೆ ತಿಳಿಯುತ್ತದೆ. ಜನ್ಮಸ್ಥಳ ದೊಡ್ಡಬಳ್ಳಾಪುರ. ಜೀವಿತಕಾಲ 70 ವರ್ಷಗಳು”. ಕೃಷ್ಣರಾಯರು ಕ್ರಿ.ಶ.1828ರಲ್ಲಿ ಸ್ವರ್ಗಸ್ಥರಾದಂತೆ ತಿಳಿಯುತ್ತದೆ.

ದೊಡ್ಡಬಳ್ಳಾಪುರದ ಕೃಷ್ಣರಾಯರು ಭಾಮಿನೀಷಟ್ಪದಿಯಲ್ಲಿ `ಕೃಷ್ಣಕರ್ಣಾಮೃತ’ ಮತ್ತು `ಸ್ತುತಿಸಾರ’ಗಳೆಂಬ ಗ್ರಂಥಗಳನ್ನು, ಯಕ್ಷಗಾನ ಶೈಲಿಯಲ್ಲಿ `ಭಾಗವತದಶಮಸ್ಕಂದ’ ಮತ್ತು `ಹರಿಸರ್ವೋತ್ತಮಸಾರ’ಗಳೆಂಬ ಆಖ್ಯಾಯಿಕೆಗಳನ್ನು ರಚಿಸಿದ್ದಾರೆ. ಇವರು ತಮ್ಮೆಲ್ಲ ಕೃತಿಗಳಲ್ಲಿ ದೊಡ್ಡಬಳ್ಳಾಪುರದ ಪ್ರಸ್ತಾಪ ಮಾಡಿರುವರು. ಉದಾಹರಣೆಗೆ ಈ ಕೆಳಗಿನ ಕೆಲವನ್ನು ಗಮನಿಸಬಹುದಾಗಿದೆ.
ಹರಿಸರ್ವೋತ್ತಮಸಾರಗ್ರಂಥದ ಪರಿಸಮಾಪ್ತಿಯಲ್ಲಿ:-
ಹರಿಸರ್ವೋತ್ತಮಸಾರವೆಂಬ ಕಥೆಯಂ ಬಳ್ಳಾಪುರೋದ್ಧಾಮದಾ
ಸರದೇಶಾಯಿ ವೆಂಕಟಾರ್ಯತನುಜ ಶ್ರೀಯಾದವಾತ್ಮೋದ್ಭವಂ/
ವರಕೃಷ್ಣಾಖ್ಯನು ಪೇಳ್ದನಿಂತು ಮುದದಿಂ ಶ್ರೀನಾಥಕಾರುಣ್ಯದಿಂ
ಬರದೋದುತ್ತಿಹಲೋಕಕೀವ್ರತ್ತಾನಂದಸಂದೋಹದಂ// ಎಂದು ಪೂರ್ಣಮಾಡಿರುವನು

ಅದೇ ರೀತಿಯಾಗಿ ಇವನ ಇನ್ನೊಂದು ಕೃತಿ “ಕೃಷ್ಣಕರ್ಣಾಮೃತ”ದಲ್ಲಿ ಹದಿನಾರು ಶತಕಗಳಿವೆ. ಅದರಲ್ಲಿ ಪ್ರತೀ ಶತಕದ ಆರಂಭದಲ್ಲಿಯೂ
ಭಾ// ಷ// ಹರಿಯೆ ಹೃದಯಾಂಬುಜದಿ ನಿಂತೀ ಚರಿತೆಯನು ಪೇಳಿಸಿದ
ಬಳ್ಳಾಪುರದ ಯಾದವರಾಯನಾತ್ಮಜಕೃಷ್ಣನಿಂದಿದನು/
ಹರುಷದಿಂದಲಿ ಕೇಳಿ ಸುಜನರು ಇರುವ ತಪ್ಪನು ತಿದ್ದಿ ಶ್ಲಾಘಿಪ
ತೆರನಮಾಳ್ಪುದು ಕೃಷ್ಣಕರ್ಣಾಮೃತವ ನೊಲವಿನಲಿ//
ಎಂಬುದಾಗಿ ಭಗವಂತನ ಗುಣಗಾನ ಮಾಡಿದ್ದಾರೆ.

ಮೀರ್‍ಸಾದಿಕ್:

ಮೀರ್‍ಸಾದಿಕ್‍ನು ಟಿಪ್ಪುವಿನ ರಾಜ್ಯದಲ್ಲಿ ಅತಿಮುಖ್ಯವಾದ ಅಧಿಕಾರಿಯಾಗಿದ್ದು, ಹುಜೂರು ದಿವಾನನ ಹುದ್ದೆಯನ್ನು ಅಲಂಕರಿಸಿದ್ದನು. ಆದರೆ ಬ್ರಿಟೀಷರು ನೀಡುವ ಸಂಪತ್ತಿಗೆ ಆಸೆಬಿದ್ದು, ಟಿಪ್ಪುವಿಗೆ ಬ್ರಿಟೀಷರ ಮುಂದೆ ಭವಿಷ್ಯವಿಲ್ಲವೆಂದು ನಂಬಿ, ಅವನ ವಿರುದ್ಧವಾಗಿ ಇಂಗ್ಲೀಷರೊಂದಿಗೆ ಸಂಪರ್ಕ ಹೊಂದಿದ್ದನು. ಮೈಸೂರಿನಲ್ಲಿದ್ದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯ ರಹಸ್ಯ ವರದಿಯ ಪ್ರಕಾರ ಮೀರ್‍ಸಾದಿಕ್, ಪೂರ್ಣಯ್ಯ ಮತ್ತು ಖಮರುದ್ದೀನ್‍ಖಾನ್‍ರು ಇಂಗ್ಲೀಷರೊಡನೆ ತನ್ನ ಒಡೆಯನ (ಟಿಪ್ಪು ) ವಿರುದ್ಧವಾಗಿ ವ್ಯವಹಾರವನ್ನು ಇರಿಸಿಕೊಂಡಿದ್ದರು. ಮೂರನೇ ಆಂಗ್ಲೋ-ಮೈಸೂರು ಯುದ್ಧದ ನಂತರ ಟಿಪ್ಪುವಿಗೆ ತನ್ನ ವಿರುದ್ಧ ನಡೆಯುತ್ತಿರುವ ಒಳಸಂಚು, ಪಿತೂರಿಗಳು ಗೊತ್ತಾಯಿತು. ಸಂಚಿನಲ್ಲಿ ಸೇರಿದ್ದ ಬ್ರಾಹ್ಮಣರನ್ನು ಗಲ್ಲಿಗೇರಿಸಲಾಯಿತು. ಮೀರ್‍ಸಾದಿಕ್ ಮತ್ತು ಪೂರ್ಣಯ್ಯನನ್ನು ಸೆರೆಯಲ್ಲಿಡಲಾಯಿತು. ಆದರೆ ಇವರಿಬ್ಬರೂ ಟಿಪ್ಪು ಸುಲ್ತಾನನಿಗೆ ನಿಷ್ಟೆಯಿಂದಿರುವುದಾಗಿ ಆಣೆಯಿರಿಸಿದ ಮೇಲೆ ಇವರನ್ನು ಬಿಡುಗಡೆಗೊಳಿಸಿ, ಅವರವರ ಹುದ್ದೆಗಳಲ್ಲಿ ಮುಂದುವರೆಯಲು ಅವಕಾಶ ನೀಡಲಾಯಿತು. ಆದಾಗ್ಯೂ ಅವರು ಮೋಸದ ಚಟುವಟಿಕೆಗಳನ್ನು ನಿಲ್ಲಿಸಲಿಲ್ಲ. ವೆಲ್ಲೆಸ್ಲಿಯೂ ಕೂಡ ಇವರು ಮೈಸೂರಿನ ಒಳದ್ರೋಹಿಗಳೆಂಬುದನ್ನು ಒಪ್ಪಿಕೊಂಡಿದ್ದಾನೆ.

ಕಿರ್ಮಾನಿಯ ಹೇಳಿಕೆಗಳ ಪ್ರಕಾರ “ಟಿಪ್ಪು  ತನ್ನ ಅಧಿಕಾರಿಗಳಲ್ಲಿ ಕೆಲವರು ಎಸಗಿದ್ದ ನೀಚಕಾರ್ಯವನ್ನು ಕಂಡುಹಿಡಿದಿದ್ದನು. ಅವನು ತನ್ನ ದ್ರೋಹಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದಾಗ, ಮೊದಲನೆಯ ಹೆಸರು ಮೀರ್‍ಸಾದಿಕ್‍ನದು. ಮರುದಿವಸ ಸಂಜೆ ಅವರೆಲ್ಲರನ್ನೂ ಗಲ್ಲಿಗೇರಿಸಬೇಕಾಗಿತ್ತು. ಆದರೆ ಅದನ್ನು ತಿಳಿದ ಮೀರ್‍ಸಾದಿಕ್‍ನು ಟಿಪ್ಪು ವಿನ ಆಜ್ಞೆಯು ಪಾಲನೆಯಾಗುವುದರೊಳಗಾಗಿ ಶ್ರೀರಂಗಪಟ್ಟಣದ ಕೋಟೆಯನ್ನು ಬ್ರಿಟೀಷರಿಗೆ ಒಪ್ಪಿಸಿಬಿಡುವ ಏರ್ಪಾಡುಗಳನ್ನು ಮಾಡಿದನು. ಮುಂದೆ ಟಿಪ್ಪು  ತಪ್ಪಿಸಿಕೊಂಡು ಹೋಗದಿರಲೆಂದು ತನ್ನ ಮಾತನ್ನು ಕೇಳುವ ದಳಪತಿ ಮೀರ್‍ನಾದಿಮನಿಗೆ ನೀರಿನ ದಿಡ್ಡಿಬಾಗಿಲನ್ನು ಮುಚ್ಚಿಬಿಡಬೇಕೆಂದು ಅಪ್ಪಣೆ ಮಾಡಿದ್ದನು”.

1799ರ ಮೇ 2ರಂದು ಬ್ರಿಟೀಷ್ ಜನರಲ್ ಹ್ಯಾರಿಸ್ ಶ್ರೀರಂಗಪಟ್ಟಣದ ಕೋಟೆಗೆ ಲಗ್ಗೆಯಿಟ್ಟು, ಮೀರ್‍ಸಾದಿಕ್‍ನ ನೆರವನ್ನು ಅಪೇಕ್ಷಿಸಿದನು. ಆಗಲೇ ಅವನು ಇಂಗ್ಲೀಷ್ ಅಧಿಕಾರಿಗಳಿಗೆ ಕೋಟೆಯನ್ನು ಹೇಗೆ ಮುತ್ತಬೇಕೆಂಬುದನ್ನು, ಯಾವ ಸಮಯಕ್ಕೆ ಮುತ್ತಬೇಕೆಂಬುದನ್ನು ತಿಳಿಸಿದನು. ಮಾರನೆಯ ದಿನ ಬೆಳಿಗ್ಗೆ ಬ್ರಿಟೀಷರು ಕೋಟೆಗೆ ಲಗ್ಗೆಹಾಕಲು ಅನುಕೂಲವಾಗಲೆಂದು ಮೀರ್‍ಸಾದಿಕ್‍ನು ಕೋಟೆಯ ಒಡಕಿನ ಬಳಿಯಿದ್ದ ಸೈನ್ಯವನ್ನು ಸಂಬಳ ಬಟವಾಡೆ ಮಾಡುವ ನೆಪದಲ್ಲಿ ಮಧ್ಯಾಹ್ನದ ಹೊತ್ತಿಗೆ ಹಿಂದಕ್ಕೆ ಕರೆಸಿಕೊಂಡನು. ತಕ್ಷಣವೇ ಬ್ರಿಟೀಷರಿಗೆ ಸನ್ನೆಮಾಡಿ ಕೋಟೆಗೆ ಲಗ್ಗೆಹಾಕಲು ಸೂಚಿಸಲಾಯಿತು. ಆಂಗ್ಲರು ತಡಮಾಡದೆ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾದರು. ಮೀರ್‍ಸಾದಿಕನ ಯೋಜನೆಯು ಫಲಿಸಿತು. ಮೇ 4ರಂದು ಟಿಪ್ಪು  ಬ್ರಿಟೀಷರೊಂದಿಗೆ ಸೆಣಸಾಡುತ್ತಲೇ ವೀರಮರಣವನ್ನಪ್ಪಿದ.  ಕಿರ್ಮಾನಿ ಹೇಳುವಂತೆ ಮೀರ್‍ಸಾದಿಕನು ಮಹ್ದವಿಗಳನ್ನು (ಮುಸ್ಲಿಮರ ಒಂದು ಪಂಗಡ) ಟಿಪ್ಪು ಸುಲ್ತಾನ್ ವಿರುದ್ಧ ಎತ್ತಿಕಟ್ಟಿದ್ದನು.

ಟಿಪ್ಪು ವಾದರೋ ಅವರನ್ನು ರಾಜ್ಯದಿಂದ ಗಡೀಪಾರು ಮಾಡಲು ಆಜ್ಞೆಯಿತ್ತನು. ನಂತರ ಅವರೆಲ್ಲಾ ನಯವಂಚಕನಾದ ಮೀರ್‍ಸಾದಿಕನ ಒಳಸಂಚಿನಿಂದ 4ನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ವಿನ ವಿರುದ್ಧವಾಗಿ ಬ್ರಿಟೀಷರೊಂದಿಗೆ ಸೇರಿಕೊಂಡು, ಟಿಪ್ಪು ವಿನ ಅವನತಿಯಲ್ಲಿ ಪ್ರಮುಖ ಪಾತ್ರವಹಿಸಿದರು.
ನಂತರ ಬ್ರಿಟೀಷರು ಟಿಪ್ಪುವನ್ನು ದಮನಮಾಡಲು ಸಹಕರಿಸಿದ ಮೈಸೂರಿನ ಅಧಿಕಾರಿಗಳಿಗೆ ಧಾರಾಳವಾದ ಉಡುಗೊರೆಗಳನ್ನು ಇತ್ತರು. ಖಮರುದ್ದೀನ್‍ಖಾನನಿಗೆ ಗುರ್ರಮಕೊಂಡದ ಜಹಗೀರಿಯನ್ನು ಕೊಡಲಾಯಿತು. ಪೂರ್ಣಯ್ಯನನ್ನು ಹೊಸರಾಜನ (ಮುಮ್ಮಡಿ ಕೃಷ್ಣರಾಜ ಒಡೆಯರ) ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಯಿತು. ಆದರೆ ಮೀರ್‍ಸಾದಿಕನು ತನ್ನ ನೀಚತನದ ಫಲವನ್ನು ಅನುಭವಿಸಲು ಹೆಚ್ಚುಕಾಲ ಬದುಕಲಿಲ್ಲ. ಏಕೆಂದರೆ ಈ ದುಷ್ಟಕೆಲಸವನ್ನು ಮಾಡಿದ ಮೇಲೆ ಅವನು ತಪ್ಪಿಸಿಕೊಂಡು ಇಂಗ್ಲೀಷರನ್ನು ಸೇರಿಕೊಳ್ಳಲು ಯತ್ನಿಸಿದನು. ಆದರೆ ಮೈಸೂರು ಸೈನಿಕರು ಮೀರ್‍ಸಾದಿಕನು ಟಿಪ್ಪÅಸುಲ್ತಾನನನ್ನು ಬಿಟ್ಟುಕೊಟ್ಟನೆಂದು ಶಂಕಿಸಿ, ಅವನನ್ನು ಕೊಂದುಹಾಕಿದರು. ಅವನ ದೇಹವನ್ನು ಅವರು ಕೇಳಲೂ ಸಹ ನಡುಗಿಹೋಗುವ ರೀತಿಯಲ್ಲಿ ಕೊಚ್ಚಿಹಾಕಿದರು. ಅವನನ್ನು ಹೂಳಿದ ಮೇಲೆಯೂ ಕೂಡ ದೇಹವನ್ನು ಹೊರತೆಗೆದು, ಎರಡು ವಾರಗಳಿಗಿಂತಲೂ ಹೆಚ್ಚಿಗೆ ನೆರೆದ ಗಂಡಸರು, ಹೆಂಗಸರು ಮತ್ತು ಮಕ್ಕಳು ಅದರ ಮೇಲೆ ಹೇಸಿಗೆಯನ್ನು ಹಾಕುತ್ತಾ ಅವಮಾನಕ್ಕೀಡುಮಾಡಿದರು.

Tippu-Srirangapattana Murals.ಇದನ್ನು ನಿಲ್ಲಿಸಲು ಇಂಗ್ಲೀಷರು ಬಲವಾದ ಏರ್ಪಾಡುಗಳನ್ನು ಮಾಡಬೇಕಾಯಿತು. ಟಿಪ್ಪು ವಿನ ನೆನಪನ್ನು ಗೌರವಿಸುವ ಜನ ಈಗಲೂ ಕೂಡ ಶ್ರೀರಂಗಪಟ್ಟಣಕ್ಕೆ ಹೋದಾಗ, ಮೀರ್‍ಸಾದಿಕ್‍ನನ್ನು ಕೊಂದ ಜಾಗದತ್ತ ಕಲ್ಲುಗಳನ್ನೆಸೆಯುತ್ತಾರೆ. ಹೀಗೆ ನಯವಂಚನೆಗೆ, ಒಳಸಂಚಿಗೆ, ಪಿತೂರಿಗೆ, ಮಿತ್ರದ್ರೋಹಕ್ಕೆ, ತಾಯ್ನಾಡಿನ ದ್ರೋಹಕ್ಕೆ, ಹಿತಶತ್ರುವಿಗೆ ಮತ್ತೊಂದು ಹೆಸರಾಗಿ ಉಳಿದುಕೊಂಡ, ಶ್ರೀರಂಗಪಟ್ಟಣದ ಮತ್ತು ಟಿಪ್ಪು ವಿನ ಪತನಕ್ಕೆ ಕಾರಣನಾದ ಮೀರ್‍ಸಾದಿಕನು ಜನ್ಮತಾಳಿದ್ದು ದೊಡ್ಡಬಳ್ಳಾಪುರದಲ್ಲಿ ಎಂಬುದು ಗಮನಾರ್ಹ. ಟಿಪ್ಪು  ಸತ್ತ ಮಾರನೆಯ ವರ್ಷ ಅಂದರೆ ಕ್ರಿ.ಶ.1800ರ ಜುಲೈ 18 ರಂದು ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದ ಈಸ್ಟ್ ಇಂಡಿಯಾ ಕಂಪನಿಯ ಸೇವಕ ಫ್ರಾನ್ಸಿಸ್ ಬುಕಾನನ್ ತನ್ನ ಪ್ರವಾಸದ ವರದಿಯಲ್ಲಿ “ಮೀರ್‍ಸಾದಿಕನು ದೊಡ್ಡಬಳ್ಳಾಪುರದಲ್ಲಿ ಜನಿಸಿದವನು. ಮುಂದೆ ಇವನು ಟಿಪ್ಪು ಸುಲ್ತಾನನ ಬಹುಮುಖ್ಯ ಅಧಿಕಾರಿಗಳಲ್ಲಿ ಒಬ್ಬನಾಗಿದ್ದನು.” ಎಂಬ ಅಂಶವನ್ನು ಸ್ಪಷ್ಟಪಡಿಸಿದ್ದಾನೆ. ಬಹುಶಃ ಮೀರ್‍ಸಾದಿಕನು ಮೊಗಲರ ಆಡಳಿತಾವಧಿಯಲ್ಲಿ ಸಿರಾದ ಸುಬೇದಾರನಾಗಿದ್ದ, ದೊಡ್ಡಬಳ್ಳಾಪುರದ ಜಹಗೀರನ್ನು ಪಡೆದಿದ್ದ ಅಬ್ಬಾಸ್ ಖುಲಿಖಾನನ ಸೋದರ ಸಂಬಂಧಿಯಾಗಿರಬೇಕು. ಒಂದು ಸ್ಥಳೀಯ ಹೇಳಿಕೆಯ ಪ್ರಕಾರ “ಟಿಪ್ಪುವಿನ ತಂದೆ ಹೈದರಾಲಿಯು ಅಬ್ಬಾಸ್ ಖುಲಿಖಾನನನ್ನು ಬಂಧಿಸಿ, ಅವನ ಜಹಗೀರನ್ನು (ದೊಡ್ಡಬಳ್ಳಾಪುರವನ್ನು) ಮುಟ್ಟುಗೋಲು ಹಾಕಿಕೊಂಡನು. ಆ ಮೂಲಕ ಹೈದರ್ ತನ್ನ ಬಾಲ್ಯದಲ್ಲಾಗಿದ್ದ ಅವಮಾನಕ್ಕೆ ಸೇಡನ್ನು ತೀರಿಸಿಕೊಂಡನು. ಅಂತೆಯೇ ಮೀರ್‍ಸಾದಿಕನು ಅಬ್ಬಾಸ್‍ಖುಲಿಖಾನನಿಗಾಗಿದ್ದ ಅವಮಾನದ ಸೇಡನ್ನು ಟಿಪ್ಪು  ಮತ್ತು ಶ್ರೀರಂಗಪಟ್ಟಣವನ್ನು ನಾಶಮಾಡಲು ಬ್ರಿಟೀಷರಿಗೆ ನೆರವಾಗುವುದರೊಂದಿಗೆ ತೀರಿಸಿಕೊಂಡನು”.

ಪೂರ್ಣಯ್ಯ (1732-1811):
ಟಿಪ್ಪು ವಿನ ಕಾಲದಲ್ಲಿ ಪೂರ್ಣಯ್ಯ ನವರು ಅಧಿಕಾರದಲ್ಲಿದ್ದಾಗ ದೊಡ್ಡಬಳ್ಳಾಪುರದ ಮಟ್ಟಿಗೆ ಆದ ಒಂದು ಪ್ರಮುಖ ಬೆಳವಣಿಗೆಯೆಂದರೆ ಷಾಷ್ಟಿಕರನ್ನು (ಅರವತ್ತೊಕ್ಕಲು) ಮೂಲೆಗುಂಪು ಮಾಡಿದ್ದು. ಹೈದರಾಲಿಯ ಕಾಲದಿಂದಲೂ ಪೂರ್ಣಯ್ಯನವರು ಅವಕಾಶ ದೊರೆತಾಗಲೆಲ್ಲಾ ಷಾಷ್ಟಿಕರ ಮೇಲೆ ಗದಾಪ್ರಹಾರ ಮಾಡಿದ್ದಾರೆ. ವಿಜಯನಗರ ಕಾಲದಿಂದಲೂ ದೊಡ್ಡಬಳ್ಳಾಪುರವು ಷಾಷ್ಟಿಕರಿಗೆ ನೆಲಮನೆಯಾಗಿದ್ದು, ಈ ಪ್ರಾಂತ್ಯದ ಮಂತ್ರಿಪದವಿಯು ಷಾಷ್ಟಿಕರಿಗೆ ಇದ್ದಿತೆಂಬ ವಿಚಾರವನ್ನು ಈ ಹಿಂದೆಯೇ ತಿಳಿಸಿದೆ. ದೊಡ್ಡಬಳ್ಳಾಪುರವು ಮೊಗಲರ ಆಳ್ವಿಕೆಗೆ ಒಳಪಟ್ಟಾಗಲೂ, ಅಬ್ಬಾಸ್ ಖುಲಿಖಾನನು ಇಲ್ಲಿನ ಪ್ರಾಂತ್ಯಾಧಿಕಾರಿ ಆಗಿದ್ದಾಗಲೂ ಮುಲ್ಕೀ ವಿಚಾರಣೆಯ ಸರ್ವಾಧಿಕಾರವು ಷಾಷ್ಟಿಕ ಮನೆತನದ ನಾಗಪ್ಪನ ಮಗ ಕೃಷ್ಣಪ್ಪನಿಗೇ ಇದ್ದಿತು. ಇವರ ವಂಶೀಯರು ರಾಜಾಸ್ಥಾನದಲ್ಲಿ ಪ್ರಬಲರಾಗಿದ್ದರು. ಈ ಎಲ್ಲಾ ಕಾರಣಗಳಿಂದ ಹವೇಲಿ ಮತ್ತು ದೇಶಪಾಂಡೆ ಈ ಎರಡೂ ಅಧಿಕಾರಗಳ ಗೌರವಕ್ಕೋಸ್ಕರ 35 ಗ್ರಾಮಗಳು ಇವರಿಗೆ ಸರ್ವಮಾನ್ಯವಾಗಿ ನಡೆದುಬಂದಿತ್ತು. ಇವುಗಳನ್ನು ಬಿಟ್ಟು ಉಳಿದ ಎಲ್ಲ ಗ್ರಾಮಗಳ ಆಡಳಿತವು ಖಾನರಿಗೇ ಸೇರಿತ್ತು. ಮೈಸೂರು ರಾಜ್ಯದ ಸರ್ವಾಧಿಕಾರಿಯಾಗಿದ್ದ ಹೈದರಾಲಿಖಾನನು ಅಬ್ಬಾಸ್ ಖುಲಿಖಾನನನ್ನು ದೊಡ್ಡಬಳ್ಳಾಪುರದ ಜಹಗೀರಿನಿಂದ ಹೊಡೆದೊಡಿಸಿ ಈ ಊರನ್ನು ಮುಟ್ಟುಗೋಲು ಹಾಕಿಕೊಂಡನು. ಆಗಲೂ ಷಾಷ್ಟಿಕರ ಸರ್ವಮಾನ್ಯ ಗ್ರಾಮಗಳನ್ನು ಹೈದರಾಲಿಯು ಅವರಿಗೇ ಉಳಿಸಿಕೊಟ್ಟಿದ್ದನು. ಇದಕ್ಕೆ ಪ್ರಮುಖ ಕಾರಣ ನಾಗಪ್ಪನ ಜ್ಞಾತಿ ಸಹೋದರರಲ್ಲೊಬ್ಬನಾದ ಹರಿಪಂತ. ಇವನು ಪೂನಾ ಪೇಶ್ವೆಗಳ ಸೇನಾಧಿಪತಿಯಾಗಿದ್ದು, ಹೈದರಾಲಿಯ ಪರಮಮಿತ್ರನೂ ಆಗಿದ್ದನು. ಹರಿಪಂತನ ಮಕ್ಕಳಾದ ಭೀಮರಾಯ ಮತ್ತು ರಾಮರಾಯರೂ ಸಹ ಟಿಪ್ಪುವಿನ ಅಂತರಂಗ ಮಿತ್ರರು, ಅಂಗರಕ್ಷಕರು ಮತ್ತು ರಾಯಭಾರಿಗಳಾಗಿದ್ದರು. ಈ ಎಲ್ಲಾ ಕಾರಣಗಳಿಂದ ಆಗಿನ ರಾಜಕೀಯದಲ್ಲಿ ಷಾಷ್ಟಿಕರ ಕೈಮೇಲಾಗಿದ್ದಿತಾಗಿ ಪೂರ್ಣಯ್ಯ ನವರು ತಮ್ಮ ಆಶೋತ್ತರಗಳನ್ನು ಸಾಧಿಸಲು ಶಕ್ತರಾಗಲಿಲ್ಲ.

ಟಿಪ್ಪುವಿನ ಆಡಳಿತದ ಕೊನೆಗಾಲದಲ್ಲಿ ಅಧಿಕೃತವಲ್ಲದ ಇನಾಂ ಜಮೀನುಗಳನ್ನು ಹಿಂದಕ್ಕೆ ಪಡೆಯಲಾಯಿತು. ಆದರೆ ಅಧಿಕೃತವಾಗಿ ಕೊಟ್ಟವುಗಳನ್ನು ಅವರವರ ವಶದಲ್ಲಿಯೇ ಬಿಡಲಾಯಿತು. ದೇವಸ್ಥಾನಗಳು, ಮಸೀದಿಗಳು ಮತ್ತು ಬ್ರಾಹ್ಮಣರಿಗೆ, ಗ್ರಾಮಗಳ ಗೌಡರಿಗೆ ಹೊಸ ಉಂಬಳಿಗಳನ್ನು ಕೂಡ ಬಿಡಲಾಯಿತು. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ತೂಬಗೆರೆಯ ಶಾಸನವನ್ನು ಗಮನಿಸಬಹುದು. ಆದರೂ ಕಟ್ಟಕಡೆಗೆ ಬಹುತೇಕ ಎಲ್ಲ ಜಮೀನ್ದಾರರ ವಶದಲ್ಲಿದ್ದ ಅನುವಂಶಿಕವಾದ ಭೂಮಿಯನ್ನು ಒಂದಲ್ಲಾ ಒಂದು ನೆವದಿಂದ ಅವರ ಕೈತಪ್ಪಿಸಲಾಯಿತು. ಮುಖ್ಯವಾಗಿ ಷಾಷ್ಟಿಕರದ್ದು. ಇದರಲ್ಲಿ ಪÀÇರ್ಣಯ್ಯನವರ ಜಾತಿರಾಜಕೀಯವೂ ಇಲ್ಲದಿರಲಿಲ್ಲ. ಇದರಿಂದ ದೊಡ್ಡಬಳ್ಳಾಪುರದಲ್ಲಿ ಷಾಷ್ಟಿಕ ಮನೆತನದವರಿಗೆ ವರ್ಣನಾತೀತವಾದ ಕಷ್ಟನಷ್ಟಗಳು ಉಂಟಾದವು ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ದೊಡ್ಡಬಳ್ಳಾಪುರದಲ್ಲಿ ಪ್ರಸಿದ್ಧರಾಗಿದ್ದ ದೇಶಪಾಂಡೆಯವರ ಇನಾಂ ಗ್ರಾಮಭೂಮಿಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಸಿದ ವಿಚಾರವು ಇಂದಿಗೂ ಆ ಕುಟುಂಬದವರ ಮನೆಮಾತಾಗಿದೆ.

ಪೂರ್ಣಯ್ಯವರ ಸಮಕಾಲೀನ ಕವಿ ದೊಡ್ಡಬಳ್ಳಾಪುರದ ಷಾಷ್ಟಿಕ ಮನೆತನದ ರಾಘವೇಂದ್ರನು ಈ ವಿಚಾರವನ್ನು ತನ್ನ ‘ಸಾರಸ್ವತ ಪರಿಣಯ’ ಎಂಬ ಗ್ರಂಥದಲ್ಲಿ ಈ ರೀತಿಯಾಗಿ ಚಿತ್ರಿಸಿದ್ದಾನೆ.
“ಅವರಿಗಾಶ್ರಯದಾತರೀಗಲು ಪೂರ್ಣಯ್ಯ ಮಹಾನುಭಾವರು ನಮ್ಮ
ನಾಡಿನ ಜನತೆಗೀತನೆ ರಾಜಪ್ರತಿನಿಧಿಯು /
ಷಾಹಿ ಬಹಮನಿ ಮೊಗಲ ಸಾಮ್ರಾಟರಿಗೆ ಪ್ರಣಿಥಿಯರಾಯಭಾರಿಗಳಾದ
ನಾರಣಪ್ಪನ ಪ್ರಪೌತ್ರರಿಗೆಲ್ಲ ಪರಶಿವನ ಕರಪಾತ್ರೆಯನು ಕರುಣಿಸಿ
ಹೆಮ್ಮೆ ಪಡುವವರು //”

ಟಿಪ್ಪು  ಮತ್ತು ಶ್ರೀರಂಗಪಟ್ಟಣದ ಪತನಾನಂತರ ಮೈಸೂರು ಸಂಸ್ಥಾನವು ಬ್ರಿಟೀಷರ ವಶವಾಗುವ ಕಾಲಕ್ಕೆ ಷಾಷ್ಟಿಕ ಮನೆತನದ ಘಟಾನುಘಟಿಗಳೆಲ್ಲಾ ವಿಧಿವಶರಾಗಿದ್ದುದರಿಂದ ಪೂರ್ಣಯ್ಯವರಿಗೆ ಅನಾಯಾಸವಾಗಿ ಮೈಸೂರು ಸಂಸ್ಥಾನದ ಮಂತ್ರಿಪದವಿ ಲಭಿಸಿತು. ಈ ವೇಳೆಗಾಗಲೆ ದುರ್ಬಲರಾಗಿದ್ದ ಷಾಷ್ಟಿಕರ ಮೇಲೆ ಪೂರ್ಣಯ್ಯ ನವರು ಗದಾಪ್ರಹಾರ ಮಾಡಿದರು. ಮುಂದೆ ಅವರು ತಲೆಯೆತ್ತದಂತೆ ನೋಡಿಕೊಂಡರು.

ತೂಬಗೆರೆ ಶಾಸನ

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಟಿಪ್ಪು ಸುಲ್ತಾನನ ಕಾಲಕ್ಕೆ ಸೇರಿದ ಒಂದೇ ಒಂದು ಕನ್ನಡ ಶಿಲಾಶಾಸನ ಲಭ್ಯವಾಗಿದೆ. ಕ್ರಿ.ಶ.1785ರ ಕಾಲಕ್ಕೆ ಸೇರಿದ ತೂಬಗೆರೆಯ ಶ್ರೀವೆಂಕಟರಮಣಸ್ವಾಮಿ ದೇವಾಲಯದ ಸಮೀಪದಲ್ಲಿ ದೊರೆತಿರುವ ಈ ಶಾಸನದಲ್ಲಿ “ತೂಬಗೆರೆಯ ಗೌಡಿಕೆ ಮಾಡುತ್ತಿರುವ ಬೆಸ್ತ ಲಕ್ಕಣ್ಣನಾಯಕ, ಸಿಂಗಿನಾಯಕ ಇವರುಗಳಿಗೆ ಜೀವನೋಪಾಯಕ್ಕಾಗಿ ಇದೇ ಗ್ರಾಮದಲ್ಲಿ ಕೆಂಪುಭೂಮಿಯ ಹೊಲಗದ್ದೆಯನ್ನು ಇನಾಂತಿಯಾಗಿ ದಯಪಾಲಿಸಲಾಗಿದೆ. ಸರ್ಕಾರದ ಆಜ್ಞೆಯ ಪ್ರಕಾರ ಇವರು ಅಮೀಲನೊಂದಿಗೆ (ತಾಲ್ಲೂಕಿನ ಆಡಳಿತಾಧಿಕಾರಿ) ನಿಷ್ಟೆಯಿಂದ ಇದ್ದುಕೊಂಡು, ಅಹ್ಮದಿ ದವಲತ್ತಿಗೆ (ಮುಸಲ್ಮಾನ ಸಾಮ್ರಾಜ್ಯಕ್ಕೆ) ಶ್ರೇಯಸ್ಸು ಕೋರಿಕೊಂಡು, ಸುಖಶಾಂತಿಯಿಂದ ಇರುವುದು” ಎಂದು ದಾಖಲಾಗಿದೆ.

2 Responses to "ದೊಡ್ಡಬಳ್ಳಾಪುರದ ಸ್ಥಳೀಯ ಚರಿತ್ರೆಯಲ್ಲಿ ದೇಶಪ್ರೇಮಿ ಟಿಪ್ಪು ಮತ್ತು ದ್ರೋಹಿ ಪೂರ್ಣಯ್ಯ -ಮೀರ್ ಸಾದಿಕ್"

  1. Amir  November 7, 2016 at 9:37 am

    Good information.

    Reply
  2. Muneer Ahmed  November 7, 2016 at 4:00 pm

    beautiful writing, Congradulatios

    Reply

Leave a Reply

Your email address will not be published.