ದೇಹವು ಆತ್ಮ ರಹಿತವಾಗಿದೆ

-ಗೋಪಾಲ ಕೃಷ್ಣ

ಕೆನ್ನೆಗೆ
ಮುತ್ತಿಕ್ಕುವ ಹನಿಯೇ
ಇಳಿದು ಬಾ
ಹನಿಯ ರೂಪವನ್ನು ಪಡೆ
ಜಿನುಗು, ತುಂಬು ಆಲಿ
ತೊಟ್ಟಿಕ್ಕುವ ಮೊದಲು ಕೂಡು
ಹನಿಯಾಗಿ ಉದುರು

ನಿನ್ನ ರೂಪದ ಹಿಂದೆ ನಡೆದಿರುವ ಯುದ್ದ ಭೀಕರ
ಅರೆಬೆಂದ ದೇಹ
ಅರೆಬೆಂದ ಚಿತ್ತ
ನೋವ ಮೂರ್ತಿಗೆ ರೂಪಕೊಟ್ಟಂತೆ
ಶುಭ್ರವಾಗಿ ಜಿನುಗು

ಯಾವುದನ್ನು ಉಜ್ಜಿ ತೊಳೆಯುತ್ತೀ
ಮನವನ್ನೋ….
ತೊಳೆಯಲು ಆಗುತ್ತದೆಯೇ
ಬಾ… ಹನಿಯೇ ಬಾ
ಎಲ್ಲಿ ಅಡಗಿದ್ದರೂ ಗುಡಿಗಿ ಬಾ

ನೀ ಬಾರದಿದ್ದರೆ ಕಣ್ಣೀರ ಜೌಗು
ಮೆದುಳನ್ನು ಕೊಲುವುದು
ಕಣ್ಣು ಕೊಳೆಯುವುದು
ಕನಸು ಕಾಣಬೇಕಲ್ಲಾ
ಬಾ ಒಮ್ಮೆ ಹರಿಸು….ಒಂದೇ ಒಂದು ಹನಿಯ
ಮತ್ತೆ ನಿರಂತರವಾಗಿ ಬರುವುದು.

ಕೂತಕಡೆ ಸಮಾಧಿ
ನರನಾಡಿಯ ಚೈತನ್ಯ ಒಣಗಿ,

ದೇಹವು ಆತ್ಮ ರಹಿತವಾಗಿದೆ
ಐಕ್ಯದ ನಿರೀಕ್ಷೆ ಅಷ್ಟು ಸುಲಭವಲ್ಲ
ಮೋಕ್ಷದ ಪ್ರಾಪ್ತಿಯೂ ತೀರಾ ಕಷ್ಟ

ಮತ್ತೇಕೆ ಹಿಂದೆ ಹೋಗುತ್ತಿರುವೆ
ಒಂದು ಹನಿಯೇ ನೀಬಾರದೆ ಕೊಂದು ಬಿಡುತ್ತಿರುವೆ ನನ್ನ
ಈ ಕಾಲ ಕಷ್ಟವಾಗಿದೆ
ಒಂದು ಹನಿಯ ನೀರಿಗೂ
ಆಯಾಸ ಗೊಂಡಿರುವ ಪ್ರಾಣಕ್ಕೂ…..

 

Leave a Reply

Your email address will not be published.