ದೇಶಭಕ್ತಿಯ ಉನ್ಮಾದ ಮತ್ತು ಶರಣಾಗತಿಯ ಧೋರಣೆ

-ನಾ ದಿವಾಕರ

ಭಕ್ತಿ ಎಂದರೇನು ? ಈ ಪ್ರಶ್ನೆ ಸಾಮಾನ್ಯ ಸಂದರ್ಭಗಳಲ್ಲಿ ಕ್ಲೀಷೆ ಎನಿಸಬಹುದು ಅಥವಾ ಅಪ್ರಬುದ್ಧ ಎನಿಸಬಹುದು. ಆದರೆ ಭಾರತದ ರಾಜಕಾರಣದಲ್ಲಿ, ಸಾಮಾಜಿಕ ಮತ್ತು ಸಾಂಸ್ಕøತಿಕ ವಲಯಗಳಲ್ಲಿ ಸಂಭವಿಸುತ್ತಿರುವ ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಈ ಅಭಿವ್ಯಕ್ತಿಯನ್ನು ವಿಭಿನ್ನ ನೆಲೆಗಳಲ್ಲಿ ವಿಶ್ಲೇಷಿಸಬಹುದು. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಪ್ರಾಮಾಣಿಕತೆ, ಶ್ರದ್ಧೆ, ಬದ್ಧತೆ ಮತ್ತು ಶಿಸ್ತು ಮುಂತಾದ ಅಭಿವ್ಯಕ್ತಿಗಳು ಮೇಲು-ಕೀಳು ಅಥವಾ ಉಚ್ಚ-ನೀಚ ಚೌಕಟ್ಟಿನಲ್ಲೇ ವ್ಯಕ್ತವಾಗುವುದನ್ನು ಇಲ್ಲಿ ಅಲ್ಲಗಳೆಯಲಾಗುವುದಿಲ್ಲ. ಈ ನಾಲ್ಕೂ ಅಭಿವ್ಯಕ್ತಿಗಳು ಒಂದು ಸಾರ್ವತ್ರಿಕ ವಿದ್ಯಮಾನದ ಸ್ವರೂಪ ಪಡೆದಾಗ ಶ್ರೀಸಾಮಾನ್ಯ ಯಾವುದೋ ಒಂದು ಅಧಿಪತ್ಯಕ್ಕೊಳಪಡುತ್ತಾನೆ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ಅಭಿವ್ಯಕ್ತಿಗಳ ಚೌಕಟ್ಟಿನಲ್ಲಿ ವರ್ತಿಸಬೇಕಾದ ಅನಿವಾರ್ಯತೆಗೊಳಗಾಗುತ್ತಾನೆ. ಭಾರತ ಪ್ರಜಾತಂತ್ರ ವ್ಯವಸ್ಥೆಯನ್ನು ಅಪ್ಪಿಕೊಂಡಿದ್ದರೂ ಸಾಮಾಜಿಕ-ಸಾಂಸ್ಕøತಿಕ ನೆಲೆಯಲ್ಲಿ ಇನ್ನೂ ರಾಜಪ್ರಭುತ್ವ ಮತ್ತು ಊಳಿಗಮಾನ್ಯ ಧೋರಣೆಗಳನ್ನು ಮೈಗೂಡಿಸಿಕೊಂಡಿರುವುದರಿಂದ ಜನಸಾಮಾನ್ಯರ ಅನಿವಾರ್ಯತೆಗಳು ಭಕ್ತಿಯ ನೆರಳಲ್ಲೇ ವ್ಯಕ್ತವಾಗುತ್ತಿರುತ್ತವೆ.

scಮತ ಧರ್ಮಗಳ ಗಾಢ ಪ್ರಭಾವ, ಶ್ರೇಣೀಕೃತ ಜಾತಿ ವ್ಯವಸ್ಥೆ ಸೃಷ್ಟಿಸಿರುವ ಯಜಮಾನಿಕೆಯ ಹಪಾಹಪಿ ಮತ್ತು ಧರ್ಮ-ಸಂಸ್ಕøತಿಯ ನಡುವಿನ ಸಂಘರ್ಷ ಈ ಮೂರೂ ವಿದ್ಯಮಾನಗಳು ಭಾರತದ ಸಾಮಾಜಿಕ ಜೀವನವನ್ನು ನಿಯಂತ್ರಿಸುತ್ತವೆ. ಹಾಗಾಗಿ ದೊರೆಗೆ ಸದಾ ಬದ್ಧತೆಯಿಂದಿರುವ ಗುಲಾಮಗಿರಿಯ ಧೋರಣೆಯನ್ನು ಜನಸಾಮಾನ್ಯರಿಂದ ಅಪೇಕ್ಷಿಸಲಾಗುತ್ತದೆ. ದೊರೆಯನ್ನು ಪ್ರಶ್ನಿಸುವ ಮನೋಭಾವವನ್ನು ವಿರೋಧಿ ನೆಲೆಯಲ್ಲೇ ಕಾಣಲಾಗುತ್ತದೆ. ಹಾಗಾಗಿಯೇ ಪ್ರಜಾತಂತ್ರ ಮತ್ತು ಗಣತಂತ್ರ ವ್ಯವಸ್ಥೆಯನ್ನೇ ಅಪ್ಪಿಕೊಂಡಿದ್ದರೂ ಭಾರತದ ರಾಜಕಾರಣದಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ಪ್ರತಿರೋಧದ ದನಿಗಳು ಬಂಡಾಯದ ದನಿಗಳಾಗಿಬಿಡುತ್ತವೆ. ಹಲವಾರು ಸಂದರ್ಭಗಳಲ್ಲಿ ಪ್ರಶ್ನಾರ್ಹವಾದರೆ ಕೆಲವೊಮ್ಮೆ ಶಿಕ್ಷಾರ್ಹವೂ ಆಗಿಬಿಡುತ್ತವೆ. ಈ ಊಳಿಗಮಾನ್ಯ ಧೋರಣೆಗೆ ಪೂರಕವಾಗಿ ಭೌಗೋಳಿಕ ರಾಷ್ಟ್ರೀಯತೆಯನ್ನು ವ್ಯವಸ್ಥಿತವಾಗಿ ಪೋಷಿಸುತ್ತಿರುವುದು ಪ್ರಸ್ತುತ ಸಂದರ್ಭದಲ್ಲಿ ಆತಂಕಕಾರಿ ವಿಚಾರವಾಗಿದೆ. ದೇಶ-ದೇಶಭಕ್ತಿ-ದೇಶಪ್ರೇಮ ಮತ್ತು ದೇಶದ್ರೋಹ ಈ ಪದಗಳು ಭಾವುಕತೆಯ ನೆಲೆಯಲ್ಲಿ ಹೆಚ್ಚು ಮೌಲ್ಯಯುತವಾಗುತ್ತಿವೆ. ಸಾಪೇಕ್ಷ ವಿದ್ಯಮಾನಗಳಾದರೂ ಈ ಅಭಿವ್ಯಕ್ತಿಯ ಸಾಧನಗಳಿಗೆ ಸಾರ್ವತ್ರಿಕ ಮೌಲ್ಯಗಳನ್ನು ಒದಗಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಇದರ ಪ್ರತಿಫಲವನ್ನು ರಾಷ್ಟ್ರಗೀತೆಯನ್ನು ಕುರಿತ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಕಾಣಬಹುದು.

ಒಂದು ರಾಷ್ಟ್ರದ ಪ್ರಜೆಯಾಗಿ ಆ ರಾಷ್ಟ್ರದ ಘನತೆ, ಗೌರವ, ಪ್ರತಿಷ್ಠೆ ಮತ್ತು ಅಸ್ಮಿತೆಯನ್ನು ಪ್ರತಿನಿಧಿಸುವ ಯಾವುದೇ ಸಾಂಕೇತಿಕ ಪರಿಭಾಷೆಗೆ ಸಮ್ಮಾನ ನೀಡುವುದು ಸಾರ್ವಭೌಮ ಪ್ರಜೆಗಳ ಆದ್ಯ ಕರ್ತವ್ಯವಾಗಿರುತ್ತದೆ. ದೇಶದ ಅಖಂಡತೆ ಮತ್ತು ಭದ್ರತೆಯ ದೃಷ್ಟಿಯಿಂದ ಇದು ಅಪೇಕ್ಷಣೀಯವೂ ಇರಬಹುದು. ಆದರೆ ಈ ಸಾಂಕೇತಿಕ ಪರಿಭಾಷೆಯನ್ನು ವ್ಯಾಖ್ಯಾನಿಸುವವರಾರು , ನಿಯಂತ್ರಿಸುವವರಾರು ಎಂಬ ಪ್ರಶ್ನೆ ಎದುರಾಗುತ್ತದೆ. ದೇಶಭಕ್ತಿ ಎಂದರೆ ಆಡಳಿತಾರೂಢ ಪಕ್ಷದ ಎಲ್ಲ ನೀತಿಗಳನ್ನೂ, ಯೋಜನೆಗಳನ್ನೂ, ಧೋರಣೆಯನ್ನೂ ಸ್ವೀಕರಿಸುವುದು ಎಂದೇ ಆದಲ್ಲಿ ಅಂತಹ ದೇಶಭಕ್ತಿಯನ್ನು ತಿರಸ್ಕರಿಸುವ ಹಕ್ಕು ಪ್ರಜಾತಂತ್ರ ವ್ಯವಸ್ಥೆಯ ಪ್ರತಿಯೊಬ್ಬ ಸಾರ್ವಭೌಮ ಪ್ರಜೆಗೂ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಪ್ರಭುತ್ವದ ನೀತಿಗಳನ್ನು ವಿರೋಧಿಸುವ ಹಕ್ಕುಗಳನ್ನೂ ಸಂವಿಧಾನ ಪ್ರಜೆಗಳಿಗೆ ನೀಡಿರುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರಗೀತೆಗೆ ಸಂಬಂಧಿಸಿದ ಎರಡು ಪ್ರಕರಣಗಳು ಇಲ್ಲಿ ಉಲ್ಲೇಖನಾರ್ಹ.

Parliament of India (5)“ ಸೆಪ್ಟಂಬರ್ 16ರಂದು ಅಮೆರಿಕದ ಸ್ಯಾನ್‍ಫ್ರಾನ್ಸಿಸ್‍ಕೋದಲ್ಲಿ ನಡೆದ ರಾತ್ರಿ ಪಾಳಿಯ ಫುಟ್‍ಬಾಲ್ ಪಂದ್ಯವೊಂದರಲ್ಲಿ ರಾಷ್ಟ್ರೀಯ ಫುಟ್‍ಬಾಲ್ ತಂಡದ ಆಟಗಾರ ಕಾಲಿನ್ ಕೇಪರ್‍ನಿಕ್ ಪಂದ್ಯ ಆರಂಭವಾಗುವ ಮುನ್ನ ಅಮೆರಿಕದ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ ಸಲ್ಲಿಸಲು ನಿರಾಕರಿಸಿ ಮಂಡಿಯೂರಿ ಕುಳಿತು ತನ್ನ ಪ್ರತಿರೋಧ ವ್ಯಕ್ತಪಡಿಸಿದ್ದ. ಅಮೆರಿಕದ ಹಾದಿಬೀದಿಗಳಲ್ಲಿ ಕಾಣಲಾಗುತ್ತಿರುವ ಜನಾಂಗೀಯ ದ್ವೇಷ ಮತ್ತು ತಾರತಮ್ಯಗಳ ವಿರುದ್ಧ ತನ್ನ ಪ್ರತಿಭಟನೆ ಎಂದು ಕೇಪರ್‍ನಿಕ್ ಹೇಳಿಕೆ ನೀಡಿದ್ದ. “ ವರ್ಣಬೇಧ ನೀತಿ ಅನುಸರಿಸುವ ಮತ್ತು ಕಪ್ಪು ಜನರನ್ನು ದಮನಿಸುವ ದೇಶವೊಂದರ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ತಾನು ಗೌರವಿಸುವುದಿಲ್ಲ ” ಎಂದು ಹೇಳಿದ ಕೇಪರ್‍ನಿಕ್ ತನಗೆ ಫುಟ್‍ಬಾಲ್‍ಗಿಂತಲೂ ಘನತೆ ಮುಖ್ಯ ಎಂದು ಹೇಳಿದ್ದ. ಕೇಪರ್‍ನಿಕ್‍ನ ಈ ಪ್ರತಿರೋಧಕ್ಕೆ ಯಾವುದೇ ಶಿಕ್ಷೆ ವಿಧಿಸಲಿಲ್ಲ. ರಾಷ್ಟ್ರಗೀತೆಯನ್ನು ಮಾನ್ಯ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಹಕ್ಕು ಇರುತ್ತದೆ ಎಂದು ಅಧಿಕೃತವಾದ ಹೇಳಿಕೆಯನ್ನು ನೀಡಲಾಗಿತ್ತು. ಪೊಲೀಸ್ ಇಲಾಖೆಯೂ ಸಹ ವ್ಯಕ್ತಿಗತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಿತ್ತು. ಕೇಪರ್‍ನಿಕ್‍ನ ನಿಲುವು ಅನೇಕ ಪಂದ್ಯಗಳಲ್ಲಿ ಪ್ರತಿಧ್ವನಿಸಿತ್ತು. 1968ರ ಮೆಕ್ಸಿಕೋ ಒಲಂಪಿಕ್ಸ್‍ನಲ್ಲಿ ಇದೇ ರೀತಿಯ ಪ್ರತಿಭಟನೆಯನ್ನು ತಮ್ಮ ಮುಷ್ಠಿ ಏರಿಸುವ ಮೂಲಕ ವ್ಯಕ್ತಪಡಿಸಿದ್ದ ಜಾನ್ ಕಾರ್ಲೋಸ್ ಕೇಪರ್‍ನಿಕ್‍ನ ದಿಟ್ಟ ಪ್ರತಿಭಟನೆಯನ್ನು ಶಾಘಿಸಿದರು. ಇಲ್ಲಿ ಗಮನಿಸಲೇಬೇಕಾದ ವಿಶೇಷ ಅಂಶವೆಂದರೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೇಪರ್‍ನಿಕ್ ಅವರ ಪ್ರತಿರೋಧಕ್ಕೆ ಮಾನ್ಯತೆ ನೀಡಿದ್ದೇ ಅಲ್ಲದೆ, ಕೇಪರ್‍ನಿಕ್ ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಿದ್ದಾರೆ ಅದನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಹೇಳಿದ್ದರು. ”

guru“ ಗೋವಾದ ಪಣಜಿಯ ಚಿತ್ರ ಮಂದಿರವೊಂದರಲ್ಲಿ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ನೋಡಲು ಹೋಗಿದ್ದ ಸಲಿಲ್ ಚತುರ್ವೇದಿ ಬೆನ್ನು ಮೂಳೆ ಹುರಿಯ ಬೇನೆಯಿಂದ ನರಳುತ್ತಿರುವ ಒಬ್ಬ ಪ್ರಸಿದ್ಧ ಲೇಖಕ ಮತ್ತು ವಿಕಲಾಂಗರ ಪರವಾಗಿ ಸಕ್ರಿಯವಾಗಿ ಹೋರಾಡುತ್ತಿರುವ ಕಾರ್ಯಕರ್ತ. ಚಿತ್ರ ಅರಂಭವಾಗುವ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಿದಾಗ ವೀಲ್‍ಚೇರ್ ಮೇಲೆ ಕುಳಿತಿದ್ದ ಚತುರ್ವೇದಿಗೆ ಸಹಜವಾಗಿ ಮೇಲೇಳಲು ಸಾಧ್ಯವಾಗಿಲ್ಲ. ಇದನ್ನು ಕಂಡ ಹಿಂದಿನ ಸಾಲಿನಲ್ಲಿದ್ದ ದಂಪತಿಗಳಿಬ್ಬರು ಸಲಿಲ್ ವಿರುದ್ಧ ವಾಗ್ದಾಳಿ ನಡೆಸಿದ್ದು ರಾಷ್ಟ್ರಗೀತೆ ಪ್ರಸಾರವಾಗುವ ವೇಳೆ ಎದ್ದು ನಿಲ್ಲಲು ಒತ್ತಾಯಿಸಿದ್ದಾರೆ. ತಾಳ್ಮೆಯಿಂದಲೇ ಈ ವಾಗ್ದಾಳಿಗೆ ಪ್ರತಿಕ್ರಯಿಸಿದ ಸಲಿಲ್ ನಿಮಗೆ ವಾಸ್ತವದ ಅರಿವಿಲ್ಲ, ಅರಿಯುವ ಅವಶ್ಯಕತೆಯೇ ಇಲ್ಲ ನಿಮ್ಮ ಪಾಡಿಗೆ ನೀವಿರಿ ಎಂದು ಹೇಳಿದ ಕೂಡಲೇ ದಂಪತಿಗಳಿಬ್ಬರೂ ಸಲಿಲ್ ಅವರ ಮೇಲೆ ಹಲ್ಲೆ ನಡೆಸಿ ಥಳಿಸಿದ್ದಾರೆ. ವಾಸ್ತವ ಅರಿತ ನಂತರ ಇಬ್ಬರೂ ಪರಾರಿಯಾಗಿದ್ದಾರೆ. ಈ ಘಟನೆಯಿಂದ ವಿಚಲಿತರಾಗಿರುವ ಸಲಿಲ್ ತಾವು ಇನ್ನೆಂದೂ ಸಿನಿಮಾ ಮಂದಿರಕ್ಕೆ ಹೋಗುವುದಿಲ್ಲ ಎಂದು ಶಪಥ ಮಾಡಿದ್ದಾರೆ ”

ದೇಶಭಕ್ತಿ ಮತ್ತು ದೇಶಪ್ರೇಮ ಎನ್ನುವುದು ಒಂದು ಸಾಂವಿಧಾನಿಕ ಕರ್ತವ್ಯವಾಗುವುದಕ್ಕೂ, ಭಾವನಾತ್ಮಕ ಉನ್ಮಾದದ ಧೋರಣೆಯಾಗುವುದಕ್ಕೂ ಇರುವ ವ್ಯತ್ಯಾಸವನ್ನು ಈ ಎರಡು ಘಟನೆಗಳಲ್ಲಿ ಕಾಣಬಹುದು. ಆರಾಧನಾ ಸಂಸ್ಕøತಿ, ವ್ಯಕ್ತಿ ಪೂಜೆ ಮತ್ತು ವ್ಯಕ್ತಿಗತ ವೈಭವೀಕರಣವನ್ನೇ ಮೈಗೂಡಿಸಿಕೊಂಡಿರುವ ಭಾರತೀಯ ಸಮಾಜದಲ್ಲಿ ಬಹುಶಃ ಪ್ರಜಾತಂತ್ರ ಮೌಲ್ಯಗಳ ಬಗ್ಗೆ ಪ್ರಬುದ್ಧತೆ ಮೂಡಲು ಇನ್ನೂ ಶತಮಾನಗಳೇ ಬೇಕೆನಿಸುತ್ತದೆ. ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡುವ ಸುಪ್ರೀಂಕೋರ್ಟ್‍ನ ತೀರ್ಪು ಇದನ್ನು ದೃಢೀಕರಿಸುತ್ತದೆ. ಉರಿ ಸರ್ಜಿಕಲ್ ದಾಳಿಯನ್ನು ಖಂಡಿಸುವುದು, ರೂಪಾಯಿ ಅಮಾನ್ಯೀಕರಣವನ್ನು ಖಂಡಿಸುವುದು, ಪ್ರಧಾನಿ ಮೋದಿಯನ್ನು ಖಂಡಿಸುವುದು ದೇಶದ್ರೋಹ ಎಂಬ ಉನ್ಮಾದದ ಅಲೆ ದೇಶವ್ಯಾಪಿಯಾಗುತ್ತಿರುವ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಕೇವಲ ಸಾಂಕೇತಿಕ ಅಭಿವ್ಯಕ್ತಿಯ ರೂಪದಲ್ಲಿ ಪ್ರಜೆಗಳ ಮುಂದಿರಿಸುತ್ತಿರುವುದು ದುರಂತವಲ್ಲವೇ ?

ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಪ್ರಜೆಗಳ ಪ್ರಾಮಾಣಿಕತೆ ಮತ್ತು ಬದ್ಧತೆಯ ಸಂಕೇತವನ್ನಾಗಿ ಕಾಣುವುದು ಪ್ರಜಾತಂತ್ರ ವ್ಯವಸ್ಥೆಯ ದೌರ್ಬಲ್ಯವೇ ಹೊರತು ಹೆಚ್ಚುಗಾರಿಕೆಯಲ್ಲ. ಸಂಕೇತಗಳ ಮೂಲಕವೇ ತಮ್ಮ ರಾಷ್ಟ್ರಭಕ್ತಿ ಪ್ರದರ್ಶಿಸುವ ಹಪಾಹಪಿ ರಾಷ್ಟ್ರ ಎಂಬ ಪರಿಕಲ್ಪನೆಯನ್ನೇ ಅಪಹಾಸ್ಯಕ್ಕೀಡುಮಾಡುವ ಸಂಭವವೇ ಹೆಚ್ಚು. ಭಾರತದ ಪ್ರಜಾತಂತ್ರ ವ್ಯವಸ್ಥೆ ವ್ಯಕ್ತಿಪೂಜೆಯ ಹಂಬಲಕ್ಕೆ ಸಿಲುಕಿ ಅವಸಾನದತ್ತ ಸಾಗುತ್ತಿರುವ ಸಂದರ್ಭದಲ್ಲಿ ನ್ಯಾಯಾಂಗವೂ ವಾಸ್ತವತೆಗೆ ವಿಮುಖವಾಗಿರುವುದು ಸ್ವೀಕರಾರ್ಹವಲ್ಲ. ಇದು ವ್ಯವಸ್ಥೆಗೆ ತಗುಲಿರುವ ಸಾಂಕ್ರಾಮಿಕ ರೋಗವೋ ಅಥವಾ ಪ್ರಭುತ್ವವನ್ನು ಕಾಡುತ್ತಿರುವ ರೋಗದ ಲಕ್ಷಣವೋ ಚರ್ಚೆಗೊಳಗಾಗಬೇಕಿದೆ.

Leave a Reply

Your email address will not be published.