ದೇಶದಲ್ಲಿ ಸಾವಿಗೂ ಮಾರುಕಟ್ಟೆ ಮೌಲ್ಯವಿದೆ

ನಾ ದಿವಾಕರ

Ganapathi_2ಜಗತ್ತಿನ ಪ್ರತಿಯೊಂದು ಚರಾಚರ ಜೀವಿಯನ್ನೂ ಕಾಡುವ ಒಂದು ಚಿಂತೆ ಎಂದರೆ ಸಾವನ್ನು ಕುರಿತಾದದ್ದು. ಹುಟ್ಟು ಅನಿರೀಕ್ಷಿತ, ಸಾವು ನಿಶ್ಚಿತ ಅದರೆ ಬದುಕು ಮಾತ್ರವೇ ವಾಸ್ತವ. ಇದು ಎಲ್ಲ ಧರ್ಮಗಳ ಸಾರ, ತಿರುಳು ಮತ್ತು ಅಂತಃಸತ್ವ. ದಾರ್ಶನಿಕರು ಈ ಪದಗಳನ್ನು ಹಲವಾರು ರೀತಿಗಳಲ್ಲಿ ವ್ಯಾಖ್ಯಾನಿಸಿದ್ದಾರೆ. ತನ್ನ ಉಸಿರು ಇರುವವರೆಗೂ ಶಾಶ್ವತವಾಗಿ ಬದುಕಿಯೇ ತೀರುತ್ತೇನೆ ಎನ್ನುವಂತೆ ಬದುಕುವ ಮಾನವನಿಗೆ ಸಾವು ಸದಾ ಪ್ರಶ್ನೆಯಾಗಿಯೇ ಉಳಿಯುತ್ತದೆ. ಪ್ರಶ್ನೆಗಳ ಪಂಜರದಲ್ಲಿಯೇ ಸಿಲುಕಿ ಮಾನವ ತನ್ನ ಕೊನೆಯುಸಿರು ಎಳೆಯುತ್ತಾನೆ. ಈ ದಾರ್ಶನಿಕ ಪ್ರಶ್ನೆಗಳು ಒತ್ತಟ್ಟಿಗಿರಲಿ, ಸಾಮಾನ್ಯವಾಗಿ ಒಬ್ಬರ ಸಾವು ಬದುಕುಳಿದವರಲ್ಲಿ ಒಂದು ಜಾಗೃತಿಯ ಚುಕ್ಕೆ ಮೂಡಿಸುತ್ತದೆ. ತನಗೂ ಇದೇ ಮಾರ್ಗ ಸಿದ್ಧವಾಗಿದೆ ಎಂಬ ಎಚ್ಚರಿಕೆ ಮನದಾಳದಲ್ಲಿ ಚಿಮ್ಮುತ್ತದೆ. ಆದರೂ ಸ್ವಾರ್ಥ ಸಮಾಜದಲ್ಲಿ ಬದುಕುವ ಮಾನವನಿಗೆ ತನ್ನ ಬದುಕಿಗೆ ಒಂದು ಅರ್ಥ ಬರುವಂತೆ ಜೀವಿಸಬೇಕು ಎನಿಸುವುದಿಲ್ಲ. ಏಕೆಂದರೆ ಸ್ವಾರ್ಥತೆ, ಸ್ವ ಹಿತಾಸಕ್ತಿ ಮತ್ತು ಐಷಾರಾಮಿ ಜೀವನದ ಹಪಾಹಪಿ ಮನುಷ್ಯನಲ್ಲಿ ಬದುಕು ಸಾವಿನ ಪ್ರಶ್ನೆಯನ್ನು ಗೌಣವಾಗಿಸುತ್ತದೆ.

ಬಹುಶಃ ಭಾರತೀಯ ಸಮಾಜದಲ್ಲಿ ಈ ಅವಗುಣಗಳು ಪ್ರಾಧಾನ್ಯತೆ ಪಡೆದಿವೆ ಎನಿಸುತ್ತದೆ. ಏಕೆಂದರೆ ನಮ್ಮ ಸಾರ್ವಜನಿಕ ಜೀವನದಲ್ಲಿ ಸಂಭವಿಸುವ ಸಾವು ಸಮೂಹ ಪ್ರಜ್ಞೆಯನ್ನು ವಿಚಲಿತಗೊಳಿಸುವುದೇ ಇಲ್ಲ. ಸಾರ್ವಜನಿಕ ಜೀವನದಲ್ಲಿ ಸಾವು, ಸಹಜವಾಗಲಿ ಅಥವಾ ಅಸಹಜವಾಗಲಿ, ಸಾಪೇಕ್ಷತೆ ಪಡೆದುಬಿಡುತ್ತದೆ. ಈ ಸಾಪೇಕ್ಷತೆಗೆ ಜಾತಿ, ಧರ್ಮ, ಭಾಷೆ, ರಾಜಕೀಯ ಪಕ್ಷ, ಸಿದ್ಧಾಂತ ಮತ್ತಿತರ ಅಸ್ಮಿತೆಗಳು ವೇದಿಕೆಗಳಾಗಿಬಿಡುತ್ತವೆ. ಸಾರ್ವಜನಿಕ ಜೀವನದಲ್ಲಿ ಸಂಭವಿಸುವ ಕೆಲವರ ಸಾವು ರಾಜಕೀಯ ಸ್ವರೂಪ ಪಡೆದುಕೊಂಡಾಗ ಈ ಸಾಪೇಕ್ಷತೆ ಅಮಾನವೀಯತೆಯ ಪರಾಕಾಷ್ಠೆ ತಲುಪುತ್ತದೆ. ಒಬ್ಬ ವ್ಯಕ್ತಿಯ ಸಹಜ/ಅಸಹಜ ಸಾವನ್ನು, ಕೆಲವೊಮ್ಮೆ ಹತ್ಯೆಯನ್ನೂ, ವಿಜೃಂಭಿಸಿ ಸಂಭ್ರಮಿಸುವ ವಿಕೃತ ಮನಸ್ಸುಗಳೇ ಮತ್ತೊಬ್ಬ ವ್ಯಕ್ತಿಯ ಸಾವಿನ ಬಗ್ಗೆ ಅಪಾರ ಅನುಕಂಪ, ಕಾಳಜಿ ವ್ಯಕ್ತಪಡಿಸುತ್ತವೆ. ಸಾವಿನ ನಂತರ ಮನುಷ್ಯ ತನ್ನ ಎಲ್ಲ ಅಸ್ಮಿತೆಗಳನ್ನೂ ಕಳೆದುಕೊಳ್ಳುತ್ತಾನೆ. ಆದರೆ ನಮ್ಮ ಸಮಾಜದಲ್ಲಿ ಮೃತ ದೇಹಗಳೂ ಹೊಸ ಅಸ್ಮಿತೆಗಳನ್ನು ಪಡೆಯುತ್ತವೆ. ಶವಗಳ ರಾಶಿಯಲ್ಲೂ “ತಮ್ಮವರನ್ನು” ಮತ್ತು “ಅನ್ಯರನ್ನು” ಹೆಕ್ಕಿತೆಗೆಯುವ ವಿಕೃತ ಪ್ರವೃತ್ತಿ ನಮ್ಮ ಸಮಾಜವನ್ನು ಆವರಿಸಿರುವುದು ದುರಂತವಾದರೂ ಸತ್ಯ.

ಇಂತಹ ಒಂದು ವಿಕೃತ ರಾಜಕೀಯ ವ್ಯವಸ್ಥೆ ಮತ್ತು ಸಾಮಾಜಿಕ ಸನ್ನಿವೇಶದಲ್ಲಿ ಸಮೂಹ ಸನ್ನಿ ತನ್ನದೇ ಆದ ಪಾತ್ರ ವಹಿಸುತ್ತದೆ. ಆಳುವ ವರ್ಗಗಳ ದೃಷ್ಟಿಯಲ್ಲಿ, ಪ್ರಭುತ್ವದ ದೃಷ್ಟಿಯಲ್ಲಿ ಮತ್ತು ಆಡಳಿತಾರೂಢ ಪಕ್ಷದ ಹಿಂಬಾಲಕರ ದೃಷ್ಟಿಯಲ್ಲಿ ಕೆಲವು ವ್ಯಕ್ತಿಗಳು ಸಾಯಲು ರೆಡಿಮೇಡ್ ಅರ್ಹತೆ ಪಡೆದುಕೊಂಡಿರುತ್ತಾರೆ. ಇಂತಹ ವ್ಯಕ್ತಿಗಳ ಸಾವು ಸ್ವೀಕಾರಾರ್ಹವಷ್ಟೇ ಅಲ್ಲ, ಸ್ವಾಗತಾರ್ಹವೂ ಆಗಿಬಿಡುತ್ತದೆ. ಈ ವಿಕೃತಿಯ ಮೂಲ ಇರುವುದು ದ್ವೇಷ ರಾಜಕಾರಣದಲ್ಲಿ ಮತ್ತು ಸ್ವಾರ್ಥ ರಾಜಕಾರಣದಲ್ಲಿ. ಇಂತಹ ವ್ಯಕ್ತಿಗಳ ಅಸಹಜ ಸಾವು ಅಥವಾ ಹತ್ಯೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೊಳಗಾದಾಗ ವ್ಯಕ್ತಿಯ ವ್ಯಕ್ತಿಗತ ನಿಲುವುಗಳು, ಸಿದ್ದಾಂತಗಳು ಮತ್ತು ಚಿಂತನೆಗಳು ಬದುಕು-ಸಾವು ನಿರ್ಧರಿಸುವ ಮಾನದಂಡಗಳಾಗಿ ಪರಿಣಮಿಸುತ್ತವೆ. “ಅವರು ಇಂತಹ ನಿಲುವು ವ್ಯಕ್ತಪಡಿಸಿದ್ದರಿಂದಲೇ ಹತ್ಯೆಗೀಡಾದರು” ಎಂದೋ ಅಥವಾ “ಅವರು ಹೀಗೆ ಮಾತನಾಡಬಾರದಿತ್ತು” ಎಂದೋ ಹೇಳುವ ಮೂಲಕ ಹತ್ಯೆಯನ್ನು ಸಮರ್ಥಿಸುವ ಪ್ರಯತ್ನಗಳಿಗೂ ಕೊರತೆ ಇರುವುದಿಲ್ಲ. ಸ್ಥಾಪಿತ ವ್ಯವಸ್ಥೆಯನ್ನು ಪ್ರತಿರೋಧಿಸುವ ಪ್ರತಿಯೊಂದು ದನಿಗೂ ಈ ಅಸಮರ್ಥನೀಯ ಸಮರ್ಥನೆಯನ್ನು ಸಹಿಸಬೇಕಾದ ಸನ್ನಿವೇಶದಲ್ಲಿ ನಾವು ಬದುಕುತ್ತಿದ್ದೇವೆ.

ಕರ್ನಾಟಕದ ಇತ್ತೀಚಿನ ಕೆಲವು ಪ್ರಸಂಗಗಳನ್ನೇ ಗಂಭೀರವಾಗಿ ಅವಲೋಕನ ಮಾಡಿದರೆ ಈ ವಾಸ್ತವದ ಅರಿವಾಗುತ್ತದೆ. ಕರ್ನಾಟಕದ ಸಾರಸ್ವತ ಲೋಕ ಕಂಡ ಅಪರೂಪದ ಮೇಧಾವಿ ಪ್ರತಿಭೆಗಳಲ್ಲೊಬ್ಬರಾದ ವಿದ್ವಾಂಸ ಕಲಬುರ್ಗಿಯವರ ಹತ್ಯೆ ಸಂಘಪರಿವಾರದ ವಲಯದಲ್ಲಿ ವಿಜಯೋತ್ಸವದ ಭೂಮಿಕೆಯಾಗಿ ಪರಿಣಮಿಸಿತ್ತು. ಮೈಸೂರಿನ ಸಾಧಾರಣ ರೌಡಿಶೀಟರ್ ರಾಜು ಹತ್ಯೆಯಾದ ನಂತರದಲ್ಲಿ ಸರ್ಕಾರದ ವಿರುದ್ಧ ನ್ಯಾಯಕ್ಕಾಗಿ ಅವಿರತ ಹೋರಾಡುತ್ತಿರುವವರು ಕಲಬುರ್ಗಿಯ ಹಂತಕರ ಬಗ್ಗೆ ಚಕಾರವೆತ್ತುವುದಿಲ್ಲ. ಏಕೆಂದರೆ ಇವರಿಗೆ ಕಲಬುರ್ಗಿಯ ಸಾವು ನಿರೀಕ್ಷಿತವಷ್ಟೇ ಅಲ್ಲ ಸ್ವಾಗತಾರ್ಹವೂ ಆಗಿತ್ತು. ಈಗ ಡಿಎಸ್‍ಪಿ ಗಣಪತಿಯವರ ಆತ್ಮಹತ್ಯೆ ಪ್ರಸಂಗ ನಡೆದಿದೆ. ಕೆಲವು ದಿನಗಳ ಹಿಂದೆ ಕಲ್ಲಪ್ಪ ಹಂಡಿಬಾಗ್ ಎಂಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಾಗ ಸರ್ಕಾರದ ನಿಷ್ಕ್ರಿಯತೆ, ಗೂಂಡಾ ಸಂಸ್ಕøತಿ, ಜನವಿರೋಧಿ ನಿಲುವು ಇದಾವುದೂ ಮುಂಚೂಣಿಗೆ ಬರಲಿಲ್ಲ. ಆದರೆ ಗಣಪತಿಯವರ ಆತ್ಮಹತ್ಯೆ ಹಠಾತ್ತನೆ ಪ್ರಧಾನ್ಯತೆ ಪಡೆಯುತ್ತದೆ. ಕೆಲವು ದಿನಗಳ ಹಿಂದೆ ಇದೇ ರೀತಿ ಆತ್ಮಹತ್ಯೆ ಮಾಡಿಕೊಂಡ ಐಎಎಸ್ ಅಧಿಕಾರಿ ಡಿ ಕೆ ರವಿ ಪ್ರಕರಣದಲ್ಲೂ ಇದೇ ರೀತಿಯ ವಿಕೃತಿಯನ್ನು ಕಾಣಬಹುದಿತ್ತು.
ಡಿ ಕೆ ರವಿ, ಮಲ್ಲಿಕಾರ್ಜುನ ಬಂಡೆ, ಕಲ್ಲಪ್ಪ ಹಂಡಿಬಾಗ್, ಎಂ ಕೆ ಗಣಪತಿ ಇವರೆಲ್ಲರೂ ಮೂಲತಃ ಸ್ಥಾಪಿತ ಆಡಳಿತ ವ್ಯವಸ್ಥೆಯಲ್ಲೇ ಕರ್ತವ್ಯನಿರತರಾಗಿದ್ದುಕೊಂಡು ವಿಶಿಷ್ಟ ಸನ್ನಿವೇಶದಲ್ಲಿ ಸಾವನ್ನಪ್ಪಿದವರು. ಇವರ ಸಾವಿಗೆ ಕಾರಣಗಳು ಏನೇ ಇರಬಹುದು. ಆದರೆ ಒಂದು ಪ್ರಜ್ಞಾವಂತ ಸಮಾಜವನ್ನು ಕಾಡಬೇಕಿರುವುದು ಈ ಸಾವುಗಳ ಹಿಂದಿನ ವ್ಯವಸ್ಥಿತ ಕಾರಣಗಳು. ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳು ಒಂದಲ್ಲಾ ಒಂದು ರೀತಿಯಲ್ಲಿ ಈ ಅಧಿಕಾರಿಗಳ ಸಾವಿಗೆ ಕಾರಣವಾಗಿರುವುದು ಸ್ಪಷ್ಟ. ಎಲ್ಲಕ್ಕಿಂತಲೂ ಮಿಗಿಲಾಗಿ ಈ ಅಧಿಕಾರಿಗಳ ಸಾವು ಆಡಳಿತ ವ್ಯವಸ್ಥೆಯೊಳಗಿನ ತಾರತಮ್ಯ ನೀತಿ, ಪಕ್ಷಪಾತಿ ಧೋರಣೆ ಮತ್ತು ನಿಷ್ಕ್ರಿಯತೆಯನ್ನು ಸಾಬೀತುಪಡಿಸುತ್ತವೆ. ಹಾಗಾಗಿ ಪ್ರಜ್ಞಾವಂತ ಸಮಾಜ ಈ ನ್ಯೂನ್ಯತೆಯ ವಿರುದ್ಧ ದನಿ ಎತ್ತಬೇಕಿದೆ. ಈ ನಿಟ್ಟಿನಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಮುಂಚೂಣಿಯಲ್ಲಿ ನಿಂತು ಸಾರ್ವಜನಿಕ ಪ್ರಜ್ಞೆಯನ್ನು ಬಡಿದೆಬ್ಬಿಸಬೇಕಿದೆ.

ಆದರೆ ದುರಾದೃಷ್ಟವಶಾತ್ ವಿದ್ಯುನ್ಮಾನ ಮಾಧ್ಯಮಗಳಿಗೆ ಇಂತಹ ಸುದ್ದಿಗಳ ಹಿಂದಿನ ರೋಚಕತೆ ಪ್ರಧಾನವಾಗಿ ಕಾಣುವುದೇ ಹೊರತು, ಆಂತರ್ಯದಲ್ಲಿರುವ ಗಂಭೀರ ಸಮಸ್ಯೆಗಳಲ್ಲ. ತನ್ನ ಪತಿಯ ಚಿತೆಗೆ ಅಗ್ನಿ ಸ್ಪರ್ಶವಾಗುವ ಮುನ್ನವೇ ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳ ಪ್ರಶ್ನೆಗಳ ಸುರಿಮಳೆಯನ್ನು ಎದುರಿಸಬೇಕಾದ ಸಂದರ್ಭವನ್ನು ಎದುರಿಸುವ ಮಹಿಳೆಯ ಮನದಾಳದ ವೇದನೆಯನ್ನು ಗ್ರಹಿಸಲಾರದ ಮಟ್ಟಿಗೆ ನಮ್ಮ ಸಮಾಜ ತನ್ನ ಸಂವೇದನೆಯನ್ನು ಕಳೆದುಕೊಂಡಿದೆ. ಒಂದು ಆತ್ಮಹತ್ಯೆ ಪ್ರಕರಣವನ್ನು ತಮ್ಮ ರಾಜಕೀಯ ಸಿದ್ಧಾಂತದ ಅನುಸಾರ ವ್ಯಾಖ್ಯಾನಿಸಿ, ಸಾವಿನ ವೇದನೆಯನ್ನು ರೋಚಕತೆಯ ಸಾಗರದಲ್ಲಿ ಮುಳುಗಿಸಿ, ತಮ್ಮ ಟಿಆರ್‍ಪಿ ಹೆಚ್ಚಿಸಿಕೊಳ್ಳಲು ತವಕಿಸುವ ಮಾಧ್ಯಮಗಳ ಹಪಾಹಪಿಗೆ ಏನು ಹೇಳಬೇಕು ?

ಡಿಎಸ್‍ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣ ಕೇವಲ ಆಡಳಿತ ವ್ಯವಸ್ಥೆಯೊಳಗಿನ ಹೊಲಸನ್ನು ಮಾತ್ರ ಹೊರಹಾಕಿಲ್ಲ. ಬದಲಾಗಿ ನಮ್ಮ ಪ್ರಜಾತಂತ್ರ ಮೌಲ್ಯಗಳ ನೆಲೆಯನ್ನೂ ಹೊರಸೂಸಿದೆ. ಸಾವಿನ ಸೂತಕದ ನಡುವೆಯೂ ರೋಚಕತೆಯನ್ನು ಅರಸುವ ವಿದ್ಯುನ್ಮಾನ ಮಾಧ್ಯಮಗಳ ಧೋರಣೆ ಈ ಮೌಲ್ಯಗಳ ಅಪಮೌಲ್ಯೀಕರಣದ ಪರಾಕಾಷ್ಠೆಯಾಗಿ ಪರಿಣಮಿಸಿದೆ. . ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಆಧಾರ ಸ್ತಂಭ ಎಂದೇ ಪರಿಗಣಿಸಲ್ಪಡುವ ಮಾಧ್ಯಮಗಳು ಮಾನವೀಯ ಸಂವೇದನೆಯನ್ನೇ ಕಳೆದುಕೊಂಡಾಗ ಯಾವ ಸಮಾಜ ತಾನೇ ಸುಸ್ಥಿರವಾಗಿರಲು ಸಾಧ್ಯ ? ಇದು ಇಂದು ಚರ್ಚೆಗೊಳಗಾಗಬೇಕಾದ ವಿಚಾರ.

2 Responses to "ದೇಶದಲ್ಲಿ ಸಾವಿಗೂ ಮಾರುಕಟ್ಟೆ ಮೌಲ್ಯವಿದೆ"

 1. Krishna kumar TR  July 15, 2016 at 11:04 am

  Edu satyavada mathu evatina madyamagalu sayuvarige hechu prerane needi sayisutive samaja ghataka & manujakula nashamadutive

  Reply
 2. ಗೋದೂರು ಪ್ರಸನ್  July 16, 2016 at 12:39 pm

  ಇವತ್ತಿಗೆ ಸಾವನ್ನು ಈ ಮಾಧ್ಯಮ ಸಮೂಹಗಳು ತಮ್ಮ ಲೋಭಕ್ಕಾಗಿ ಯಾವ ರೀತಿಯಾಗಿ ತಿರುಚಿ ಸಾವಿನ ಅಸಲಿ ಆಧಾರಗಳನ್ನು ನಾಶಪಡಿಸಲು ಮುಂದಾಗಿರೋದು ತೀರಾ ಕ್ಷುದ್ರ ರೀತಿಯದು.
  ಅದಕ್ಕೆ ಜನರ ಆಲೋಚನ ಕ್ರಮವನ್ನು ಬದಲಿಸುವ ಹುನ್ನಾರ ; ಸಮಾಜದ ಕೆಡುಕಿಗೆ. ಮನುಷ್ಯನ/ಳ ಸ್ವಂತ ಆಲೋಚನೆಯನ್ನು ಕಡಿದು ಹಾಕುತ್ತಿವೆ.

  ಲೇಖನ ತುಂಬಾನೇ ವಾಸ್ತವಕ್ಕೆ ಕನ್ನಡಿಯಂತಿದೆ.

  Reply

Leave a Reply

Your email address will not be published.