ಇಲ್ಲಿ ಈ ಪವಿತ್ರ ಭೂಮಿಯಲ್ಲಿ
ಹುಲುಸಾದ ಫಸಲು
ಪಡೆಯಲು ಬೇಕಿರುವುದು
ನೀರಲ್ಲ ಗೊಬ್ಬರವಲ್ಲ
ಹೊನ್ನಾರು ಕಟ್ಟುವುದಲ್ಲ
‘ಕೈಕೆಸರಾದರೆ ಬಾಯಿ
ಮೊಸರಾಗುವುದಂತು ಅಲ್ಲವೇ ಅಲ್ಲ;’
ಇಲ್ಲಿ ಹುಲುಸಾದ ಬೆಳೆ
ಬೆಳೆಯಲು ಕಾಲುಕೆರೆಯಬೇಕು
ಕುರುಡು ನೆಪ ತೆಗೆಯಬೇಕು
ಹೆಣ ಉರುಳಬೇಕು
ನೆತ್ತರು ಹರಿಯಬೇಕು;
ಹರಿದು ಕೆಸರಾಗಿ ಮಡುಗಟ್ಟಬೇಕು.
ಹರಿತವಾದ ಚೂರಿಗಳು
ಹಸುಳೆಗಳ ಹೃದಯ ಸೀಳಬೇಕು;
ದ್ವೇಷದ ಕಿಡಿ ಹೊತ್ತಿ
ಉರಿದು
ಹಬ್ಬಿದ ಹೊಗೆಯಲ್ಲಿ
ಮನಸುಗಳ ಇಬ್ಬಾಗಿಸಿ
ಒಡೆದ ಮನಗಳ ಬಯಲಲಿ
ದ್ವೇಷದ ವಾಮನ ಪಾದ
ದೃಢವಾಗಿ ಊರಬೇಕು
ನೆತ್ತರಲ್ಲಿ;
ಸೇರಿಗೆ ಸವ್ವಾಸೇರು
ಎನ್ನಬೇಕು ಕಿಚ್ಚಿನಲ್ಲಿ.
ಆ ನೆತ್ತರ ರಂಗೋಲಿಯಲಿ
ಮೂಡಿದ ಬಾಲಗೋಪಾಲರ
ಪುಟ್ಟಪಾದಗಳನು
ಊರಮಂದಿಗೆ ತೋರಿಸಿ
ಮತ್ತಷ್ಟು ಕಿಡಿ ಹೊತ್ತಿಸಿ
ಮನದÀ ಕುಡಿಗಳ ಕಮರಿಸಿ
ಪಡೆಯಬೇಕು ಹುಲುಸಾದ
ಮತಬೆಳೆ.
ಈಗ, ಮತಬೆಳೆಯ ಬರ
ನೀಗಲು ಮತ್ತೊಮ್ಮೆ ಆದೇಶ
ವಾದ ಸುತ್ತೋಲೆಯ ಸಾರವನು
ದೇಗುಲದ ಗಂಟೆ ಜಾಗಟೆಗಳ
ನಾಲಿಗೆಗಳು ನುಡಿದಿವೆ;
ಆ ಗಂಟೆಗಳ ನುಡಿ
ಕೇಳಿದ ಭಕ್ತರು
ನೆರೆದಿಹರು; ಪವಿತ್ರ ಭೂಮಿಯಲಿ
ಹುಲುಸಾದ ಫಸಲು ತೆಗೆಯಲು
ದೇವರಿಗೆ ಅರ್ಪಿಸಲು
ನಡಿದಿದೆ ಎಲ್ಲೆಲ್ಲೂ ನರಯಜ್ಞ;
ಬುಸುಗುಡುತ ನುಗ್ಗಿ ಬರುವ
ಯಾಜ್ಞಿಕರ ಕಂಡು ದೇವರೀಗ
ಮಿಕ ಮಿಕ ಕಣ್ಣು ಬಿಡುತಿಹನು;
ಛಲ್ಲೆಂದು ಎಗರಿದ ನೆತ್ತರು
ಹಣೆ ಹೃದಯಗಳಿಗೆ ಅಂಟಿ
ಕಣ್ಣು ಮುಚ್ಚಿದನು
ಮತ್ತೆಂದು ಕಣ್ಣು ತೆರೆಯೆನೆಂದು
ಭಕ್ತರ ಕಾಣೆನೆಂದು.
ಕಣ್ಣು ತೆರೆಯೆನೆಂದು
ಯಾಜ್ಞಿಕರ ಕಾಣೆನೆಂದು
ಹಠವಿಡಿದು ಕೂತ
ದೇವರ ಸುತ್ತ
ದೇಗುಲ ಕಟ್ಟಿ
ಭಕ್ತಿಯನು ಅರ್ಪಿಸಿಹರು
ಮತಬೆಳೆಯನು ಕಾತರಿಸಿಹರು.
ಕರುಣಾಮಯಿ ದೇವರು
ಈಗಲೂ ಭಕ್ತರು ಕಟ್ಟಿಸಿದ
ದೇಗುಲದಲಿ ಕೂತು
ಮಿಕಮಿಕ ಕಣ್ಣು ಬಿಡುತಿಹನು!
ಇಂದಷ್ಟೇ ಗುಡಿ ಹೊಕ್ಕ
ಪುಟ್ಟ ಮಗು
ಅಮ್ಮನ ಕೇಳಿತು
‘ಅಮ್ಮ, ದೇವರು
ಗುಡಿಯಲ್ಲಿ ಕೂತು
ಏನು ಮಾಡುತ್ತಿದ್ದಾನೆ’.
ಹೊನ್ನೂರಿನ ಗುಡಿಗಳಲ್ಲಿ ಏನು ಮಾಡುತ್ತಿದ್ದಾನೆ?