ದೇವರ ಬಂಡಾಯ: ಗುಳೆಹೊರಟ ಲಿಂಗಗಳು

- ಜಯಪ್ರಕಾಶ್ ಶೆಟ್ಟಿ ಹೆಚ್, ಕುಂದಾಪುರ

anathadevaru
ನಮಗೆಲ್ಲ ತಿಳಿದಿರುವಂತೆ ಹರಿಹರನಿಗೆ ಭಕ್ತಕವಿ, ಕ್ರಾಂತಿಕವಿ ಇತ್ಯಾದಿ ಗುರುತುಗಳಿವೆ. ಆದರೆ ಇವೆಲ್ಲವನ್ನೂ ಮೀರಿ ಆತನಲ್ಲಿರುವ ಸ್ಥಳೀಯತೆ, ದಕ್ಷಿಣಪ್ರಜ್ಞೆಯಿಂದ ಕೂಡಿದ ಉತ್ತರ ಹಾಗೂ ವೈದಿಕ ವಿರೋಧದ ಖಚಿತ ಛಾಯೆಗಳು ನಮಗೆ ಹೆಚ್ಚು ಮುಖ್ಯವಾಗುತ್ತವೆ. ಇಷ್ಟೇ ಅಲ್ಲದೆ, ಸ್ಥಾವರ ವ್ಯವಸ್ಥೆಯ ಉದ್ದೀಪಕನೆಂಬಂತೆ ಗುರುತಿಸಲಾಗುವ ಈ ಕವಿಯಲ್ಲಿ ಸ್ಥಾವರ ಪಲ್ಲಟದ ದಟ್ಟ ಛಾಯೆಯೂ ಆತನಲ್ಲಿ ಮತ್ತೆ ಮತ್ತೆ ಪ್ರಕಟಗೊಂಡಿದೆ. ಸಂಕೇತಗಳ ವೈಭವೀಕರಣದ ನಡುವೆಯೇ ಕುರುಹುಗಳ ಭಗ್ನತೆಯೂ ಸಾಧಿತವಾಗಿದೆ. ದುಂಬಿ ಎಂಜಲಿಸದ ಮಡಿ ಹೂವನ್ನು ಹೂಬನದಲ್ಲಿ ಅರಸುವ ಕವಿಯೇ, ಸುಟ್ಟ ಮಾಂಸವನ್ನೇ ಶಿವನಿಗೆ ಹೂವಂತೆ ಅರ್ಪಿಸಿ, ಶಿವಲಿಂಗವನ್ನೇ ಕಾಲಿನಿಂದ ಪೂಜಿಸುವ ಪಾತ್ರಗಳನ್ನೂ ತನ್ಮಯವಾಗಿ ಕಡೆದವನು. ಈ ವೈರುಧ್ಯಗಳ ಜೊತೆಗೆ ಹುಟ್ಟನ್ನಾಧರಿಸಿದ ಶ್ರೇಷ್ಠತೆಯೆಂಬ ಸಾಮಾಜಿಕ ಕಾಯಿಲೆಗೂ ಈತ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಬಲ್ಲ. ಹೀಗಾಗಿ ಆತನ ಒಂದೊಂದು ರಗಳೆಯಲ್ಲೂ ಭಕ್ತಿಯ ಜೊತೆಗೆ ವಿಭಿನ್ನ ನೆಲೆಯ ವೈಚಾರಿಕ ಸಂವಾವಿದೆ. ಇವೆಲ್ಲದರ ಜೊತೆಗೆ ಆಕ್ಷರಿಕ ಕನ್ನಡದಲ್ಲಿ ಭಕ್ತರ ವ್ಯಕ್ತಿಗತ ವೇಷದಲ್ಲಾದರೂ ಅನೇಕ ತಳಮೂಲಗಳ ಕಾಯಕಜೀವಿಗಳು ಮೊದಲಬಾರಿಗೆ ಕಥೆಯಾದುದು ಈ ಹರಿಹರನಲ್ಲೇ. ಹಾಗಾಗಿ ಈ ರಗಳೆಗಳಿಗೆ ಭಕ್ತಕಥನಗಳ ಸಾಮಾನ್ಯ ಚಹರೆಯೊಂದಿಗೆ ಸಾಮಾಜಿಕ, ಧಾರ್ಮಿಕ ಸಂವಾದದ ಪ್ರಾಮುಖ್ಯತೆಯೂ ಇದೆ. ‘ಕೆಂಬಾವಿಯ ಭೋಗಣ್ಣನ ರಗಳೆ’ಗೆ ಇಂತಹ ಸಾಮಾಜಿಕ ಮಹತ್ವವಿರುವ ರಗಳೆಗಳಲ್ಲೊಂದು. ಆರಂಭ ಮತ್ತು ಕೊನೆಯ ಕಂದ ಪದ್ಯಗಳನ್ನುಳಿದು 5 ಮಾತ್ರೆಯ ಲಯದ 236 ಲಲಿತ ರಗಳೆಯ ಸಾಲುಗಳ ಈ ಪುಟ್ಟ ಕಾವ್ಯದ ವಸ್ತು ಭಕ್ತನೊಬ್ಬನ ನಿಷ್ಠೆಯ ಅನಾವರಣ. ಆದರೆ ಆ ಅನಾವರಣದ ಪ್ರಕ್ರಿಯೆಯಲ್ಲಿ ಜಾತಿ ಎನ್ನುವ ಸಾಮಾಜಿಕ ಸತ್ಯವನ್ನು ಅನುಸರಿಸಿದ ಪ್ರವೇಶದ ಪ್ರಶ್ನೆ, ಒಡನುಣ್ಣುವ ಔಚಿತ್ಯದ ಪ್ರಶ್ನೆ ಇದೆ. ಸಾಮಾಜಿಕ ಮಾಲಿನ್ಯವಾದ ಅಸ್ಪøಶ್ಯತೆಯೊಂದಿಗಿನ ವಿಭಿನ್ನ ಸಂವಾದವೂ ಇದೆ.
12ನೇ ಶತಮಾನದ ವಚನಕಾರರಿಗೆ ಮಾತು ಮತ್ತದರ ಪಾರದರ್ಶಕತೆ ಮುಖ್ಯ. ‘ನುಡಿದರೆ ಲಿಂಗ ಮೆಚ್ಚಿ ಅಹುದು ಅಹುದು’ ಎನಬೇಕಂದವರು. ಶಿವ ಇಂತಹ ಶರಣನ ತನು, ಮನ, ಧನವನಲ್ಲಾಡಿಸಿ ನೋಡಿ ಮೇಲೆತ್ತಿಕೊಳ್ಳುತ್ತಾನೆಂದೂ ಸಾರಿದವರು. ಶರಣಧರ್ಮವು ಹೀಗೆ ನಡೆ-ನುಡಿಗಳಲ್ಲಿ ಏಕೀಭವಿಸಿದ ಸದಾಚಾರವನ್ನು ಅಪೇಕ್ಷಿಸಿತು. ಆ ಚಳುವಳಿಯ ತಾತ್ವಿಕತೆಯನ್ನು ಅನೇಕ ನೆಲೆಗಳಲ್ಲಿ ಪ್ರತಿನಿಧಿಸಿ, ಅದರ ಉತ್ತರಾಧಿಕಾರಿಯೆನಿಸಿದ ಹರಿಹರನ ನಾಯಕರುಗಳಲ್ಲಿ ಈ ಗುಣವಿದೆ. ಆತನ ಶಿವನೂ ಈ ನಡೆ-ನುಡಿಗಳ ಸಾಂಗತ್ಯದ ಪರೀಕ್ಷೆಯನ್ನು ವ್ರತದಂತೆ ನಿರ್ವಹಿಸುವವನು. ಚ್ಯುತಿಬಾರದ ಶರಣಚರಿತವನ್ನು ಲೋಕಪ್ರಕಟಮಾಡುವುದು ಈ ಶಿವನ ಕಾಯಕ. ಅದಕ್ಕೆಂದೇ ಆತ ಹಲವು ವೇಷ ಧರಿಸುತ್ತಾನೆ. ಹಾಗಾಗಿ ಹರಿಹರನ ರಗಳೆಗಳಲ್ಲಿ ಪರೀಕ್ಷೆ, ಪರೀಕ್ಷಕನಾದ ಶಿವ ಮತ್ತು ಅರಿವಿಲ್ಲದೆ ಆ ಪರೀಕ್ಷೆಗೆ ಒಡ್ಡಿಕೊಳ್ಳುವ ಸಹಜಸದಾಚಾರಿ ಭಕ್ತ ಎಂಬ ತ್ರಿಕೂಟವಿದೆ. ಶರಣಧರ್ಮದ ಅಪೇಕ್ಷೆಯನ್ನೇ ಮೈಗೂಡಿಸಿಕೊಂಡ ‘ಭೊಗಣ್ಣನ ರಗಳೆ’ಯ ಭೋಗಣ್ಣನ ಕಥನದಲ್ಲೂ ವಿಶಿಷ್ಟವಾದ ಈ ತ್ರಿಕೂಟವಿದೆ. ಇಲ್ಲಿನ ಶಿವನೊಡ್ಡುವ ಪರೀಕ್ಷೆ ಜಾತಿಸತ್ಯವನ್ನು ಒಳಗೊಂಡಂತೆ ಶಿವನ ಪಾಲ್ಗೊಳ್ಳುವಿಕೆಯಿಂದ ಕೂಡಿರುವುದರಿಂದಾಗಿ ಈ ರಗಳೆಗೊಂದು ಸಾಮಾಜಿಕ ಮಹತ್ವವೂ ಲಭ್ಯವಾಗುತ್ತದೆ.
ಊರಸೂತಕ ತೊರೆದು ಊರಿಂದ ಹೊರಗಾದ
ರಗಳೆಯ ನಾಯಕ ಭೋಗಣ್ಣನಿಗೆ ಶಿವಭಕ್ತರೆಂದರೆ ಜಾತಿಸೂತಕವಿಲ್ಲದ ಶಿವಸಮಾನರು. ಆದರೆ ಆತ ವಿಚಾರಸೂತಕದ ಎಚ್ಚರ ಉಳ್ಳವನು. ಹುಟ್ಟಿಗೆ ತಗುಲಿಕೊಂಡ ಜಾತಿಸೂತಕವನ್ನು ಗಣಿಸದವನು. ಹಾಗಾಗಿ ಆತನದು ‘ಶಿವಭಕ್ತರೊಳಗೆ ಜಾತಿಯ ವಿಚಾರಿಪುದಿಲ್ಲ ಶಿವಭಕ್ತರೊಳಗೆ ಭೇದವ ಕಲ್ಪಿಸುವುದಿಲ್ಲ’ ಎಂಬ ಕಾಣ್ಕೆಗೆ ತಕ್ಕ ಬದುಕು. ಈ ಭಕ್ತನ ಶೋಧನೆಗೆ, ಶಿವ “ಹೆಗಲಮಿಳಿ ಕೈಯ ಸಂಬಳಿಗೋಲಿ”ನೊಂದಿಗೆ ‘ಸೊಗಯಿಪ ವಿಭೂತಿ ರುದ್ರಾಕ್ಷಿ’ಯುಳ್ಳ ‘ಹಿರಿಯವೇಷ’(ಹೊಲೆವೇಷ) ಧರಿಸಿ ಬರುತ್ತಾನೆ(ನೆಲಸುಗಾರ ಕೃಷಿಸಂಸ್ಕøತಿಗೆ ಹೊಲೆಮಾದಿಗರೇ ಮೂಲವೆಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ‘ಹಿರಿಯವೇಷ’ ಕ್ಕೆ ವಿಶೇಷ ಅರ್ಥವಿದೆ). ಅಲ್ಲಿ ಹುಟ್ಟು ಮತ್ತು ಕಸುಬನ್ನು ಸೂಚಿಸುವ ಮಿಳಿ-ಸಂಬಳಿಗೋಲಿದೆ. ಜೊತೆಗೆ ಭಕ್ತಿಯನ್ನು ಸೂಚಿಸುವ ವಿಭೂತಿಯೂ ಇದೆ. ಅಲ್ಲಿ ಕುರುಹುಗಳು ಕಲಸಿಕೊಂಡಿವೆ! ಜಡಸಮಾಜಕ್ಕೆ ಇದರಲ್ಲಿ ಒಂದಕ್ಕೆ ಒಪ್ಪಿಗೆ ಇದೆ. ಆದರೆ ಇನ್ನೊಂದರ ಕಾರಣಕ್ಕೆ ಅದು ಆ ಒಪ್ಪಿರುವ ಗುರುತನ್ನೂ ನಿರಾಕರಿಸಿ ಮುಲಾಜಿಲ್ಲದೆ ಹೊರಗಿಡುವ ರಾಜಕಾರಣ ನಡೆಸಿಕೊಂಡು ಬಂದಿದೆ. ಆದರೆ ಇಲ್ಲಿ ಹುಟ್ಟಿನ ಗುರುತನ್ನು ಲೆಕ್ಕಕ್ಕೆ ತಾರದೆ ಭಕ್ತಿಯ ಗುರುತನ್ನು ಮಾನ್ಯಮಾಡಿ ಒಳಗೊಳ್ಳುವ ರಾಜಕಾರಣ ನಡೆಸುವ ಭೋಗಣ್ಣನ ನಡೆ ಯಥಾಸ್ಥಿತಿಯ ಜೊತೆಗೆ ಸಂಘರ್ಷಕ್ಕಿಳಿಯುತ್ತದೆ.

ಹೀಗೆ ‘ಹಿರಿಯ ವೇಷಂಗೊಂಡು ಮನೆಯ ಮುಂದಂ’ ಸುಳಿದ ಹೊಲೆಶಿವನನ್ನು ಭೋಗಣ್ಣ ಕಾಲ್ಗೆರಗಿ, ಕೈಮುಗಿದು ಮನೆಯೊಳಗೆ ಕರೆತಂದು ಉನ್ನತಾಸನವಿತ್ತು ಪಾದಪೂಜೆಮಾಡಿ ನಮಸ್ಕರಿಸುತ್ತಾನೆ. ಆರೋಗಣೆಗೆ (ಊಟಕ್ಕೆ)ಇತ್ತು, ಉಂಡ ಬಳಿಕದ ‘ಅವರ ಪ್ರಸಾದಮಂ ಸಾದರಂ ಕೈಗೊಂಡು’ ಭಕ್ತಿಯ ತೃಪ್ತಿಯನ್ನು ಅನುಭವಿಸುತ್ತಾನೆ. ಆದರೆ ಈ ಕುಲಾಚಾರದ ಮೀರುವಿಕೆ ಹುಟ್ಟನ್ನೇ ಮುಂದಿಟ್ಟು ಮಾತಾಡುವ ‘ಮಟ್ಟೆಯ ಮರುಳ್ಗ’ಳಿಗೆ ಸಿಟ್ಟು ತರಿಸುತ್ತದೆ. ಅವರುಗಳು ‘ಸಂದ ವಿಪ್ರರ ಕರ್ಮವೆಲ್ಲಮಂ ಪುಸಿಮಾಡಿ ಹೊಲೆಯನಂ ಮುಂದಿಟ್ಟುಕೊಂಡೈದನೆಲೆಯರಸ ಕುಲವೆಲ್ಲ ನಿರ್ಮೂಲವಾದುದು’ ಎಂದು ಚಂದಿಮರಸನಿಗೆ ದೂರು ಕೊಡುತ್ತಾರೆ. ‘ಆತನಿರಲಾವೆಲ್ಲ ಪೋದಪ್ಪೆವಲ್ಲದಡೆ’ ಎಂದು ಶಿಕ್ಷೆಗೆ ಪಟ್ಟುಹಿಡಿಯುತ್ತಾರೆ. ದೂರಿತ್ತ ಬ್ರಾಹಣರಪರ ನಿಲ್ಲುವ ಚಂದಿಮರಸ ಭೋಗಣ್ಣನನ್ನು ಕರೆಸಿ, “ಏನಯ್ಯ ಪುರದೊಳಗಕೃತ್ಯವಂ ಮಾಳ್ಪರೆ? ಏನಾದಡಂ ಹೊಲಯರಂ ಹೊಗಿಸಿ ಬಾಳ್ವರೆ?” ಎಂದು ಪ್ರಶ್ನಿಸುತ್ತಾನೆ. ಪ್ರಭುತ್ವವನ್ನು ಭಕ್ತಿಯ ತೀವ್ರತೆಯಲ್ಲಿ ಇದಿರಿಸುವ ಭೋಗಣ್ಣ, ತಾನು ಹೊಲೆಯರನ್ನು ಒಳಕರೆದುದಿಲ್ಲವೆಂದೇ ವಾದಿಸುತ್ತಾನೆ. ಹೊಲೆಯರಾದ ನಾರಣಕ್ರಮಿತ, ಸೂರಿಭಟ್ಟ, ಕೃಷ್ಣಪೆದ್ದಿ, ವಿಷ್ಣುಭಟ್ಟ ಇವರಾರನ್ನೂ ತಾನು ಮುಟ್ಟಿಯೂ ಸೋಂಕಿಲ್ಲ, ‘ಶಿವನನ¾Âಯದ ಈ ಹೊಲೆಯರನ್ನು’ ಎಂದೂ ಮನೆಯೊಳಗೆ ಹೊಗಿಸಿದವನಲ್ಲ, “ಶಿವಭಕ್ತನಂ ಹೊಗಿಸಿದೆಂ ತಪ್ಪೆ ಹೇಳರಸ?” ಎಂದು ಮರುಪ್ರಶ್ನಿಸುತ್ತಾನೆ. ಹೀಗೆ ‘ಹೊಲೆಯ’ ಪದದ ಅರ್ಥವನ್ನೇ ಪಲ್ಲಟಿಸಿ, ಪ್ರಭುತ್ವ ಮತ್ತು ಸಾಮಾಜಿಕ ಪ್ರಭುತ್ವದ ನಿರೂಪಣೆಗಳನ್ನೇ ಧಿಕ್ಕರಿಸಿದ ಈ ಉತ್ತರ ಅರಸನನ್ನು ಕೆರಳಿಸುತ್ತದೆ. ಬ್ರಾಹ್ಮಣರನ್ನು ಹೊಲೆಯರೆನ್ನುವ ‘ಇಂತಪ್ಪ ಸಿತಗರೆಮ್ಮೂರೊಳಗಿರಲ್ಬೇಡ’ ಎಂದು ಊರುಬಿಟ್ಟು ಹೋಗುವಂತೆ ರಾಜಾದೇಶ ಮಾಡುತ್ತಾನೆ. ಹೀಗೆ ಕುಲಾಚಾರದ ಊರಸೂತಕ ತೊರೆದ ಶಿವಾಚಾರಕ್ಕಾಗಿ ಭೋಗಣ್ಣ ಬಹಿಷ್ಕøತನಾಗುತ್ತಾನೆ.
ಬಂಡಾಯಕ್ಕೆಂದೇ ಬಯಲಿಗಿಳಿದ ಲಿಂಗಗಳು
ಕಡು ಸ್ವಾಭಿಮಾನಿ ಭೋಗಣ್ಣ ಕ್ಷಣಮಾತ್ರವಿರದೆ ಊರುಬಿಟ್ಟು ಹೊರಡುತ್ತಲೇ ಕಥೆಯ ಆಕರ್ಷಣೀಯ ಭಾಗವೊಂದು ಚಾಲನೆಗೊಳ್ಳುತ್ತದೆ. ಕೆಂಬಾವಿಯಿಂದ ಹೊರಟ ಭೋಗಣ್ಣನನ್ನು ಜನ ಹಿಂಬಾಲಿಸಲಿಲ್ಲ. ಆದರೆ ಶಿವಾಲಯಗಳ ಲಿಂಗಗಳು ರಾಜಾದೇಶವನ್ನು ಧಿಕ್ಕರಿಸಿ ಬೆಂಬತ್ತುತ್ತವೆ! ದೊಡ್ಡದು, ಚಿಕ್ಕದೆಂಬ ಭೇದವಿಲ್ಲದೆ ಬಹುರೂಪಿಯಾದ ಲಿಂಗಗಳೆಲ್ಲವೂ ಏಕಪ್ರಕಾರವಾಗಿ ಸಮೂಹದಲ್ಲಿ ಹಿಂಬಾಲಿಸುತ್ತವೆ. ಗುಡಿಯ ಪಾಣಿಪೀಠದಿಂದೆದ್ದು ಬಯಲಿಗಿಳಿಯುವ ಮೂಲಕ ಪ್ರಭುತ್ವ ಮತ್ತು ಜಾತಿಪ್ರಭುತ್ವ ವಿರುದ್ಧದ ದೇವರ ಬಂಡಾಯವೇ ಸಂಭವಿಸುತ್ತದೆ. ಭೋಗಣ್ಣನ ನಿರ್ಗಮನವು ಶಿವಾಲಯಗಳ ಲಿಂಗನಿರ್ವಾತವಾಗಿ ಬದಲಾಗುತ್ತದೆ. ಆತ ಊರಿಂದ ಹೊರಗೆ ಅಡಿಯಿಡುತ್ತಲೇ ಲಿಂಗಗಳೂ ಕ್ರಿಯಾಶೀಲವಾಗುತ್ತವೆ.
“ಒಂದಡಿಯನಿಡೆ ಪುರದ ಲಿಂಗವೊಡನುಬ್ಬಿದುವು
ಮುಂದಕಡಿಯಿಡೆ ಪುರದ ಲಿಂಗವೊಡನೆಳಸಿದುವು
ನಡೆಯೆ ನಡೆದುವು ಪುರದ ಶಿವಲಿಂಗವೊಂದಾಗಿ
ಒಡನೊಡನೆ ಭೋಗಣ್ಣನೆಡಬಲದೊಳೊಂದಾಗಿ”
‘ಮಡಿಕಾರರು’ ಪೂಜಿಸಿದ ‘ಮಡಿಲಿಂಗ’ಗಳು ಹೀಗೆ ಹೊಲೆಯನನ್ನು ಕರೆದು ಹೊರಗಾದ ಭೋಗಣ್ಣನನ್ನು ಹಿಂಬಾಲಿಸುತ್ತವೆ. ಕೆಂಬಾವಿಯ ‘ಮಡಿ ಹೊಲೆಗೆ’ ಹೇಸಿ ಹೊರನಡೆಯುತ್ತವೆ. ಈ ಲಿಂಗಗಳ ನಿರ್ಗಮನವನ್ನು ಹರಿಹರ ಕೇವಲ ಸುದ್ಧಿಯಂತೆ ಹೇಳಿ ಮುಗಿಸಲಾರ. ಆತನ ನಾಟಕೀಯ ಚಿತ್ರಣದಲ್ಲಿ ಆ ಲಿಂಗನಡೆ ಪ್ರಜ್ಞಾಪೂರ್ವಕವಾದ ಉತ್ಸುಕ ಕ್ರಾಂತಿಯಾಗುತ್ತದೆ. ಜಡತೆ ಕಳೆದು ಭೋಗಣ್ಣನ ಎಡಬಲಕ್ಕೆ ಪುಟಿದೆದ್ದು ಸಾಗುವ ಆ ಲಿಂಗಗಳ ನಡಿಗೆ “ಲಿಂಗಜಂಗಮವೆಂಬವವಿಭೇದವೀ ಜಗಕೆ” ಎಂಬಂತಾಗಿಸುತ್ತವೆ. ಅಷ್ಟೇ ಅಲ್ಲ, ಜೀವವಿರೋಧಿಯೂ, ನೈಸರ್ಗಿಕವಲ್ಲದ್ದೂ ಆದ ಆ ಕರ್ಮಟರ ಮಡಿಯನ್ನು ನಿಸರ್ಗದ ಸಕಲವ್ಯಾಪಾರವೂ ಒಂದಾಗಿ ನಿಂತು ವಿರೋಧಿಸಿದವೆಂಬಂತೆ ಮರ, ಗಿಡ, ಗಾಳಿ, ಬೆಳಕುಗಳೂ ಸೇರಿಕೊಂಡು ಅದಕ್ಕೊಂದು ಸಮಷ್ಟಿಬಲ ಒದಗಿಸುತ್ತವೆ. ‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ ಜಲವೊಂದೆ ಶೌಚಾಚಮನಕ್ಕೆ’ ಎಂಬುದನ್ನರಿಯದೆ ಮನುಷ್ಯರ ನಡುವೆ ಗೆರೆಕೊರೆಯುವ ಮಡಿವಾದಿಗಳ ವಿರುದ್ಧದ ದೇವರ ಬಂಡಾಯವನ್ನು “ತವತವಗೆ ತರುನಿಕರವೆಲ್ಲ ನೆಳಲಾಗಿ” ಅನುಸರಿಸಿ, ಆ ಗುಡಿಬಿಟ್ಟ ಲಿಂಗಗಳ ಓಟದಲ್ಲಿ ಬೆರೆಯುವ ಈ ಚಿತ್ರ ಅಪೂರ್ವವಾದುದು.
ಸಂಸಾರವೂ ಸಾರವಾದುದೆ
ಆದರೆ ಯಾನದ ಉತ್ಸುಕತೆಯಲ್ಲಿ ಹರಿಹರನ ಭಕ್ತಿಯ ಕಣ್ಣು ಸಂಸಾರದ ಸೂಕ್ಷ್ಮತೆಯನ್ನು ಕಳೆದುಕೊಳ್ಳದು. ಅದು ಪಾಣಿಪೀಠಗಳನ್ನಗಲಿ ಬಂದ ಲಿಂಗಗಳಿಂದಾಗಿ ದೇವಿಯರಿಗಾದ ವಿಯೋಗಕ್ಕೆ ಭೋಗಣ್ಣನ ಸಹಾನುಭೂತಿ ದಾಖಲಿಸುತ್ತದೆ. ಲೋಕಹಿತದಷ್ಟೇ ಸಂಸಾರಹಿತವೂ ಮುಖ್ಯವೆಂಬ ಜೀವಪರ ದೃಷ್ಟಿ ತಾಳುತ್ತದೆ. ಹರಿಹರನದು ಬ್ರಹ್ಮಚಾರಿ ಅಥವಾ ಹೆಂಡತಿ ಬಿಟ್ಟವನಷ್ಟೇ ನಾಯಕನಾಗಲು ಅರ್ಹನೆಂಬ ವಿತಂಡವಾದವಲ್ಲ. ಆತನದು ‘ಬೇರಿಂಗೆ ನೀರೆರೆದರೆ ಮೇಲೆ ಪಲ್ಲವಿಸಿತ್ತು ನೋಡಾ’ ಎಂಬ ಶರಣರ ಶುಚೀಸಂಸಾರದ ಧೋರಣೆ. ಆತನ ರಗಳೆಗಳ ದೇವರು ಹಾಗೂ ಭಕ್ತ ಇಬ್ಬರೂ ಸಂಸಾರಿಗಳೇ. ಹಾಗಾಗಿ ತಮ್ಮ ಸಂಗಾತದ ದೇವಿಯರನ್ನು ಒಬ್ಬಂಟಿಯಾಗಿ ಬಿಟ್ಟುಬಂದ ಲಿಂಗಗಳನ್ನು, “ದೇವಿಯರನಗಲಿ ಇಂತೆನ್ನೊಡನೆ ಬರ್ಪರೆ?” ಎಂದು ಭೋಗಣ್ಣ ಪ್ರಶ್ನಿಸುತ್ತಾನೆ. ಆದರೂ ಲಿಂಗಸಂಗಿಯಾದ ಆತ ಲಿಂಗಗಳನ್ನು ಅನಾಧರಿಸಲಾರ. ಮೀರಿ ಬರುವ ಆ “ಸುತ್ತಿರ್ದ ಲಿಂಗಮಂ ಸುಳಿಸುಳಿದು ತಕ್ಕೈಸಿ” ತನ್ನ ಸರ್ವಾಂಗದೊಳು ಮುದ್ದಾಡಿಕೊಳ್ಳುತ್ತಲೇ ಸಾಗುವ ಆತನ ಲಿಂಗಜಂಗಮ ಸಂಗಮದ ಆ ‘ಗಮನ’ವಾದರೋ ಲಿಂಗಗಳಲ್ಲಿ ಉಲ್ಲಾಸವನ್ನೇ ತುಂಬಿ ತುಳುಕಿಸುತ್ತದೆ.
ಕೇಳಿಕೆಯ ಮೇಳದ ಮೇಲೆ ಮರಳಿ ಬಂದ ಭೋಗಣ್ಣ.
ಭೋಗಣ್ಣನನ್ನು ಹೊರಹಾಕಿದ ವಿಪ್ರರ ಸಂಕಟ ಇನ್ನೊಂದಾಗುತ್ತದೆ. ‘ಆತನೇ ಇರಲಿ ತಾವೆಲ್ಲರೂ ಹೋಗುತ್ತೇವೆ’ ಎಂದು ಬೆದರಿಕೆ ಹಾಕಿದವರನ್ನೇ ನಿರಾಕರಿಸಿ ಈಗ ಲಿಂಗಗಳೇ ಹೊರಟುಹೋಗಿವೆ. ಪೂಜೆಗೆಂದು ಹೊಕ್ಕ ಶಿವಾಲಯಗಳಲಿ ಲಿಂಗವಿಲ್ಲದ ಬರಿಯ ಪಾಣಿಪೀಠಗಳನ್ನಷ್ಟೇ ಕಂಡು ಅವರು ಕಂಗಾಲಾಗುತ್ತಾರೆ. ತಮ್ಮ ಪ್ರಮಾದದ ಅರಿವಾಗಿ, ‘ಹೊಳೆ ತನಕ ಜೋಡು ದೊರೆ ತನಕ ದೂರು’ ಅನ್ನುವಂತೆ ಮತ್ತೆ ಚಂದಿಮರಸನಲ್ಲಿಗೆ ಹೋಗಿ,
“ಭೋಗಣ್ಣನೊಡನೆ ಹೋದುವು ಲಿಂಗಕುಳವೆಲ್ಲ
ರಾಗದಿಂದೊಡನೊಕ್ಕಲಾದವಳ್ತಿಯೊಳೆಲ್ಲ
ಕರೆದು ಬಿಜಯಂಗೈಸಿ ತಪ್ಪುದಾ ಭಕ್ತನಂ”
ಎಂದು ಭೋಗಣ್ಣನನ್ನು ಕರೆತರುವಂತೆ ಹುಯ್ಯಲು ಹಾಕುತ್ತಾರೆ. ಆಗ ತನ್ನ ಮಂದಬುದ್ಧಿಗೆ ತನ್ನನ್ನೇ ಹಳಿದುಕೊಂಡ ಚಂದಿಮರಸ ಬೇರೆ ದಾರಿಕಾಣದೆ ‘ಮುಜನಾವುಜದ ಗಿರುಗಟೆಯ ಕೇಳಿಕೆ’ ಸಮೇತವಾಗಿ ಹೋಗಿ “ಶಿವಲಿಂಗಸಂಸಾರ ಲೋಲುಪ್ತ”ನಾದ ಭೋಗಣ್ಣನನ್ನು ಕರುಣೆದೋರಿ ಕೆಂಬಾವಿಗೆ ಬರುವಂತೆ ಬೇಡುತ್ತಾನೆ. ಈ ಕೋರಿಕೆಗೆ ಕರಗಿದ್ದಲ್ಲದೆ, ದೇವರಸಂಸಾರವನ್ನು ಸರಿಪಡಿಸಿ, ‘ದೇವರಂ ದೇವಿಯರನೊಂದು ಮಾಡುವೆನೆನುತೆ’ ಭೋಗಣ್ಣ ಕೆಂಬಾವಿಗೆ ತಿರುಗುತ್ತಾನೆ. ಆಗ ‘ಎನಗೆ ತನಗೆಂಬಂತೆ ಮುಂಚಿ’ ಮೇರೆದಪ್ಪಿದ ಅದೇ ಉತ್ಸಾಹದಲ್ಲಿ ಆತನೊಡನೆ ಮರಳಿಬಂದ ಲಿಂಗಗಳು,
“ಭರದೊಳ¾Âಯದೆ ನಿಜಸ್ಥಾನಂಗಳಂ ಮ¾õÉದು
ಪರಮಸುಖವೇ¾ುತುರವಣಿಸುತಂಹೊಳೆಹೊಳೆದು
ಭೋಗಣ್ಣನಂ ಮೆ¾õÉಯಿತಕ್ಕೆ ಕುರುಹೆಂಬಂತೆ
ರಾಗದಿಂದಂ ಸ್ಥಾನಪಲ್ಲಟಮುಮಾದಂತೆ
ಪಿರಿಯ ಪೀಠಂಗಳೊಳ್ಕಿ¾Âಯ ಲಿಂಗಂಳಿರೆ
ನೆರೆÉದು ಕಿ¾Âಯವ¾ಲ್ಲಿ ಪಿರಿಯ ಲಿಂಗಂಳಿರೆ”
ಎಂಬಂತೆ ಅನುರಾಗದ ಸಂಭ್ರಮದಲ್ಲಿ ಅದಲು-ಬದಲಾಗುತ್ತವೆ. ಹೀಗೆ ಭೋಗಣ್ಣನ ಹಿರಿಮೆಗೆ ಕುರುಹಾಗಿ ಲಿಂಗಗಳ ಪೂರ್ವಾವಸ್ಥೆಯಲ್ಲಿ ಪೂರ್ಣಪಲ್ಲಟವಾಗುತ್ತದೆ. ಮುಂದೆ ಭೋಗಣ್ಣನ ಕೈಲಾಸಯಾನದೊಂದಿಗೆ ಕಥೆÉ ಕೊನೆಗೊಳ್ಳುತ್ತದೆ.
ದ್ವಂದ್ವಗಳ ಮುಖಾಮುಖಿಯಲ್ಲಿ ಪಲ್ಲಟದ ಸರಣಿ
ಭೋಗಣ್ಣನ ಸಹಜಾಚಾರವನ್ನು ಪರಿಚಯಿಸುತ್ತಲೇ ಆತನ ಪರೀಕ್ಷೆಯ ವೇದಿಕೆ ಸಿದ್ಧಪಡಿಸುವ ರಗಳೆಯ ನಡೆಯಲ್ಲಿ ಪರಸ್ಪರ ವಿರುದ್ಧ ಧ್ರುವಗಳು ಎದುರು-ಬದುರಾಗುತ್ತವೆ. ಒಂದು ಕಡೆ ‘ನಾವು’ ಮತ್ತು ‘ಆತ’ ಎನ್ನುವ ‘ಸ್ವ’-‘ಅನ್ಯತೆ’ಯಲ್ಲಿ ಒಡೆದಾಳುವ ತರತಮವಾದದ ವಿಪ್ರಕೂಟವಿದೆ. ಇನ್ನೊಂದು ಕಡೆ ಭಕ್ತರೊಳಗೆ ಭೇದವೆಣಿಸದೆ ದೇವರು-ದೇವಿಯರನ್ನೂ, ಮನುಷ್ಯರನ್ನೂ ಒಂದಾಗಿಸುವ ‘ಕೂಡುವಿಕೆಯ’ ಭೋಗಣ್ಣನಿದ್ದಾನೆ. ಆಳುವ ಅರಸನನ್ನು ನಿಯಾಮಕ ಶಕ್ತಿಯಾಗಿ ವಿಪ್ರರು ಒಪ್ಪಿಕೊಂಡರೆ, ಇದಕ್ಕೆ ಪ್ರತಿಯಾಗಿ ಭೋಗಣ್ಣ ಶಾಸನಭಾಷೆಯ ರಾಜಪ್ರಭುತ್ವವನ್ನು ನಿರಾಕರಿಸಿ ಆಚಾರ ಭಾಷೆಯ ದೈವಪ್ರಭುತ್ವವನ್ನು ಒಪ್ಪಿದವನು. ಹೀಗಾಗಿ ‘ಮಡಿ’ ಮತ್ತು ‘ಅಸ್ಪøಶ್ಯತೆ’ಗಳೆಂಬ ರೋಗಗಳ ಎದುರುಬದುರಾಗುವಿಕೆ ಇರುವ ಸಾಮಾಜಿಕ ಸಂದರ್ಭದಲ್ಲಿ ರಾಜಪ್ರಭುತ್ವವು ಸ್ಥಾವರ ಪರವಾದರೆ ದೈವಪ್ರಭುತ್ವವು ಜಂಗಮ ಪರವಾಗುತ್ತದೆ. ಈ ದ್ವಂದ್ವಗಳ ಮುಖಾಮುಖಿಯಲ್ಲಿ ನಿಷೇಧದ ಆದೇಶ ಮತ್ತು ಬಹಿಷ್ಕಾರದ ನಿರ್ಧಾರಗಳು ಪರಸ್ಪರ ಭಿನ್ನ ನೆಲೆಗಳಿಂದ ಕಾರ್ಯರೂಪಕ್ಕಿಳಿದು ರಗಳೆಯೊಳಗಿನ ಕರ್ಷಣವು ತನ್ನ ಪರಾಕಾಷ್ಠೆಯನ್ನು ತಲುಪುತ್ತದೆ.

ಏನೇ ಆಗಲಿ ಹೊಲೆಯರನ್ನು ಹೊಗಿಸಿಕೊಳ್ಳುವುದೇ? ರಗಳೆಯ ಮುಖ್ಯಪ್ರಶ್ನೆ ಇದು. ಇಲ್ಲಿನ ಸ್ಥಿತಮಾದರಿಗಳೆಲ್ಲವೂ ಹೀಗೆ ಹೊಗಿಸಿಕೊಂಡುದರಿಂದಲೇ ಪಲ್ಲಟಕ್ಕೊಳಗಾಗುತ್ತವೆ. ಮೊದಲಿಗೆ ಹೊಲೆಯ ಬ್ರಾಹ್ಮಣನ ಮನೆ ಪ್ರವೇಶಿಸುತ್ತಾನೆ. ಮುಂದೆ ಹೊಲೆಯರ ಕುರಿತ ಅರ್ಥ ವಿವರಣೆಯಲ್ಲಿ ಪಲ್ಲಟವಾಗುತ್ತದೆ. ಶ್ರೇಷ್ಠರು, ಬ್ರಹಜ್ಞಾನವುಳ್ಳವರೆಂದು ಪರಿಭಾವಿತವಾದ ವಿಪ್ರರೇ ಶಿವನನ್ನು ಅರಿಯದ ಹೊಲೆಯರಾಗಿ ಅರ್ಥೈಸಲ್ಪಡುತ್ತಾರೆ. ಇದನ್ನು ಸಹಿಸದ ವ್ಯವಸ್ಥೆ ಅರ್ಥಪಲ್ಲಟಿಸುವವನನ್ನೇ ತಿರಸ್ಕರಿಸಿ ನೆಮ್ಮದಿಗೆ ಹವಣಿಸುತ್ತದೆ. ಜಂಗಮವಾಗಬೇಕಾದ ಸಮಾಜವು ಹೀಗೆ ಸ್ಥಾವರಗೊಂಡುದಕ್ಕೆ ಪ್ರತಿಯಾಗಿ ಸ್ಥಾವರ ಲಿಂಗಗಳೇ ಪಾಣಿಪೀಠಗಳಿಂದೆದ್ದು ಜಂಗಮವಾಗುವಂತಾಗುತ್ತವೆ. ಮರಮಟ್ಟುಗಳೂ, ನಿಸರ್ಗವೂ ಚಲಿಸುತ್ತವೆ. ಇದರಿಂದಾಗಿ ಹೊಲೆಯನನ್ನು ಹೊಗಿಸಿಕೊಂಡ ತಪ್ಪಿಗೆ ‘ಇಂತಪ್ಪ ಸಿತಗರೆಮ್ಮೂರೊಳಗೆ” ಇರಬಾರದೆಂದು ಬೈಯ್ದು ಅಟ್ಟಿದವನನ್ನೇ ಕೇಳಿಕೆಯ ಮೇಳದೊಂದಿಗೆ ಹೊಗಳಿ ಕರೆತರುವಂತಾಗುತ್ತದೆ. ಆದರೆ ಮರಳಿ ಬರುವ ಲಿಂಗಗಳು ತಮ್ಮ ಪೂರ್ವಪೀಠವನ್ನು ಬಿಟ್ಟು ಬೇರೆ ಪಾಣಿಪೀಠಗಳಲ್ಲಿ ನೆಲೆಗೊಳ್ಳುತ್ತವೆ. ದೈವಪ್ರಭುತ್ವದೆದುರು ಅರಸೊತ್ತಿಗೆಯ ಶಾಸನಭಾಷೆ ಸೋಲೊಪ್ಪಿಕೊಳ್ಳುತ್ತದೆ.
ಹೀಗೆ ಹೊಲೆಯನ ಪ್ರವೇಶವೇ ಇಡಿಯ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಸ್ಥಿತ್ಯಂತರದ ಸರಣಿಯೊಂದನ್ನು ಆಗುಗೊಳಿಸುತ್ತದೆ. ಈ ಸಂದರ್ಭವನ್ನು ಕನಕನಿಗೆ ಸಂಬಂಧಿಸಿದ ಮಿಥ್ ಜೊತೆಗಿಟ್ಟು ನೋಡುವುದಾದರೆ ಅಲ್ಲಿ ಪ್ರವೇಶಕ್ಕಾಗಿ ಪರಿತಪಿಸಿದ ಕನಕನೆಡೆಗೆ ಗೋಡೆಯೊಡೆದು ಒಳಗಿಂದಲೇ ದರ್ಶನಕೊಟ್ಟ ಕೃಷ್ಣನ ಮೂರ್ತಿಗೆ ಸಾಧ್ಯವಾದುದು ದಿಕ್ಕಿನ ಬದಲಾವಣೆ ಅಷ್ಠೆ. ಅಲ್ಲಿರುವುದು ಯಾವುದನ್ನೂ ಉಲ್ಲಂಘಿಸದೆ, ಧರ್ಮಗ್ಲಾನಿಯಾಗದಂತೆ ಕನಕನಿಗಾದ ಕೃಷ್ಣದರ್ಶನ. ಆದರೆ ಈ ರಗಳೆಯಲ್ಲಿ ಆಲಯವು ಬಯಲಾಗಿ ಬಯಲು ಆಲಯವಾಗುವ ಅಪೂರ್ವ ಉಲ್ಲಂಘನೆಯಿದೆ. ಕೊನೆಯಲ್ಲಿ ಲಿಂಗಗಳು ಕೂರುವ ಪೀಠಗಳ ಬದಲಾವಣೆಯಂತೂ ಸಾಮಾಜಿಕ ಸ್ತರವ್ಯವಸ್ಥೆಯಲ್ಲಾಗುವ ಪಲ್ಲಟದ ರೂಪಕವೇ ಆಗುತ್ತದೆ. ಹೀಗೆ ಹೊಲೆಯನ ಪ್ರವೇಶವನ್ನು ಸಮ್ಮತಿಸಿ ಅದರ ಪರಿಣಾಮಗಳನ್ನು ಯಶಸ್ವಿಯಾಗಿ ಹೇಳುವ ಈ ಬಗೆ ಅಸ್ಪøಶ್ಯರನ್ನು ಸಮಾಜ ಯಾಕೆ ಇಷ್ಟೊಂದು ಎಚ್ಚರದಿಂದ ಕಾವಲು ಕಾಯುತ್ತಿದೆ ಎಂಬುದನ್ನೂ ಅರ್ಥಪೂರ್ಣವಾಗಿಯೇ ಬಿಡಿಸಿಡುತ್ತದೆ.

Leave a Reply

Your email address will not be published.