ದೇವರ ಅಂತ್ಯ ಸಂಸ್ಕಾರ

-ಅಭಿನಂದನ್ ಆರ್. ನಾಯಕ್ ಬಿ. ಎ. ವಿದ್ಯಾರ್ಥಿ

suicides

ಕಳೆದ ಆಗಸ್ಟ್ ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವ ಕ್ಯಾಂಪೇನ್ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಆಗ ಒಂದು ಘಟನೆ ನಡೆಯಿತು. ಅದರ ಬಗೆಗೆ ಇಲ್ಲಿ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸುವೆ. ನಮ್ಮ ತಂಡ ಕ್ಯಾಂಪೇನ್ ಗೆ ಹೊರಟಿದ್ದು ಮಂಡ್ಯ ಜಿಲ್ಲೆಯ ಕೀಲಾರದಲ್ಲಿ ಗ್ರಾಮದಲ್ಲಿ ನಡೆದ `ದೇವರ ಅಂತ್ಯ ಸಂಸ್ಕಾರಕ್ಕೆ’ ಹೊರಟಂತೆ ಇತ್ತು ನಮ್ಮ ಸವಾರಿ. ದೇವರ ಚಿತೆಯ ಮೇಲೆ ಚಿಂತೆಯಿಲ್ಲದೆ ಮಲಗಿರಲು ಕರುಣಾಕ್ರಂದನ ಮುಗಿಲು ಮುಟ್ಟಿತ್ತು. ನೆರೆದ ನೂರಾರು ದುಃಖ ತಪ್ಪರಲ್ಲಿ ನಾನು ಕೇವಲ ಪ್ರೇಕ್ಷಕನಾಗಿದ್ದೆ. “ಅಯ್ಯಾ ಹಸಿವು, ಕೈತುತ್ತ ನೀಡೋ” ಎಂದು ಎದೆ ಬಡಿದು ಏಳಿಸಿದರು ಪ್ರಯೋಜನವಾಗಲಿಲ್ಲ. ಕಾರಣ ನಮ್ಮ ಹೋರಾಟದ ಹಾದಿಯಲ್ಲಿ ಸೈನಿಕನಾಗಿದ್ದ ದೇವರು ಹೆಣವಾಗಿದ್ದ, ಕೊಳ್ಳಿ ಚಿತೆಯ ತಾಗಲು ಧಗ ಧಗನೆ ಉರಿದ ಬೆಂಕಿ ಎಲ್ಲವನೂ ನುಂಗಿಹಾಕಿತು. “ಮುಕ್ಕೋಟಿ ದೇವರನು ಪೂಜಿಸುವ ನಾಡಲಿ ಅನ್ನ ದೇವರನೆ ಮರೆತರೆಂತಯ್ಯ? ಕೋಟಿ ಕೋಟಿಯ ಲೂಟಿ ಮಾಡಿ ಖಜಾನೆಯ ಕೋಟೆ ಕಟ್ಟಿದ ಒಡೆಯನವನಲ್ಲ. ಹಸಿದೊಟ್ಟೆಯ ಬಡ ರೈತನಯ್ಯ……..ಓ ಅಯ್ಯಾ ಶ್ರಮಿಕ ರೈತನಯ್ಯಾ……..!” ಎಂದು ಕೂಗಿ ಕರೆದಂತೆ ಇತ್ತು.

ನಮ್ಮ ತಂಡವೊಂದು ಮಾಲ್ಗುಡಿ ರೈಲಿನಲ್ಲಿ ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯೆಡೆಗೆ ಸಾಗಿತ್ತು. ಅದರಲ್ಲಿ ನಾನು ಒಬ್ಬ ಕಳೆದ ಒಂದು ತಿಂಗಳಿನಿಂದ ರಾಜ್ಯಾದ್ಯಂತ ದಿನ ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳ ಮೆಚ್ಚಿನ ಸುದ್ದಿಯಾಗಿದ್ದು, ರೈತರ ಆತ್ಮಹತ್ಯೆ ಎಂಬ ಸಾವಿನ ಸುದ್ದಿ. ವಿದ್ಯಾರ್ಥಿ ಸಂಘಟನೆಯೊಂದು ಕೃಷಿ ಬಿಕ್ಕಟ್ಟು ಮತ್ತು ರೈತರ ಆತ್ಮಹತ್ಯೆಗೆ ಅಸಲೀ ಕಾರಣ ಹುಡುಕುವ ಯೋಜನೆಯಡಿಯಲ್ಲಿ ನಮ್ಮನ್ನು ಆಹ್ವಾನಿಸಿತ್ತು. ಸಂಜೆ ಐದರ ಹೊತ್ತಿಗೆ ಸಂಘಟನೆ ಸೇರಿದ ನಮ್ಮನ್ನು ನಾಲ್ಕು ತಂಡಗಳನ್ನಾಗಿ ವಿಂಗಡಿಸಿದರು. ನನ್ನ ತಂಡದ ಪಾಲಿಗೆ ದೊರೆತಿದ್ದು ಮದ್ದೂರು ತಾಲ್ಲೂಕಿನ ಸುಮಾರು ಎಪ್ಪತ್ತು ಹಳ್ಳಿಗಳು; ನಮಗಿರುವ ನಾಲ್ಕು ದಿನಗಳ ಅವಧಿಯಲ್ಲಿ ದೊರೆತಿರುವ ಎಲ್ಲಾ ಹಳ್ಳಿಗಳನ್ನು ಸುತ್ತಿ ರೈತರಲ್ಲಿ ಭರವಸೆಯ ಮೂಡಿಸುವ ಜವಾಬ್ದಾರಿಯ ಕೆಲಸ. ಪ್ರಜಾ ಪ್ರಭುತ್ವ ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಂಡಿರುವ ರೈತರು ನಮ್ಮನೆತ್ತ ನಂಬುವರು……? ಎಂಬುದು ಬಹು ದೊಡ್ಡ ಪ್ರಶ್ನೆಯಾಗಿಯೇ ಉಳಿದಿತ್ತು. ಆದರೂ ಹೊರಟಿತ್ತು ನಮ್ಮ ಸವಾರಿ ಕಲ್ಲು ಮುಳ್ಳುಗಳ ಹಾದಿಯ ದಾಟಿ.

ಅನ್ನದಾತನಿಗೆ ತಿಳಿ ಹೇಳುವ ಜ್ಞಾನಿಗಳು ನಾವಾಗಿರಲಿಲ್ಲ. ಆದರೂ ಮಾನವರಂತು ಖಂಡಿತ ಪ್ರತಿನಿತ್ಯ ಮುಂಜಾನೆ ಸೂರ್ಯ ಹುಟ್ಟುವ ಮೊದಲು ನಾವು ಸಜ್ಜಾಗಿ ಹೊರಟರೆ ಸೂರ್ಯ ಮುಳಗಿದ ನಂತರವೇ ನಮ್ಮ ಕಾರ್ಯಕ್ಕೆ ವಿರಾಮ. ಹೀಗಿರುವಾಗ ಒಂದು ಬೀದಿ ನಾಟಕದ ಜೊತೆಗೆ ನಾಲ್ಕೈದು ಹೋರಾಟದ ಹಾಡುಗಳನ್ನು ಕಲಿತ ನಾವು ಹಳ್ಳಿ ಹಳ್ಳಿಗಳಿಗೆ ತಲುಪಿ ಕಾರ್ಯಕ್ರಮಗಳ ಮೂಲಕ ಸಂದೇಶವನ್ನು ಮುಟ್ಟಿಸುವುದು ಸುಲಭದ ಮಾತಾಗಿರಲಿಲ್ಲ. ಅದರಲ್ಲೂ ಕೆಲವೆಡೆ ಕೆಲವರಿಂದ ನೀರಸ ಪ್ರತಿಕಿಯೆಯೂ ಬಂತು. ಕೃಷಿ ಉತ್ಪನ್ನ ವಸ್ತುಗಳ ಬೆಲೆ ದಿಡಿರ್ ಕುಸಿತ ಕಂಡ ಕಾರಣ, ದಿನ ದಿನಕ್ಕೂ ರೈತರ ಸಾವಿನ ಸಂಖ್ಯೆ ಹೆಚ್ಚುತ್ತಿದ್ದರು ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಯೋಚನೆಯಲ್ಲಿರಲಿಲ್ಲ. ಪ್ರತಿ ಸಾವಿಗೂ ಎರಡು ಲಕ್ಷ ರೂ. ಬೆಲೆ ತೆತ್ತಿ ಪರಿಹಾರ ಧನವೆಂದು ಘೋಶಿಸುವುದರಲ್ಲಿ ಮಾತ್ರ ಯಶಸ್ವಿಯಾಗಿತ್ತು. ಪ್ರಮಾಣ ವಚನ ಸ್ವೀಕರಿಸುವಾಗ ನೀಡಿದ ವಚನವನ್ನು ಗಾಳಿಗೆ ತೂರಿರುವ ರಾಜಕಾರಣಿಗಳು ವಿದೇಶಿ ಪ್ರವಾಸ, ಮೋಜುಮಸ್ತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಒಂದು ಫೋನ್ ಕರೆಗೂ ಸಹ ಸಿಗದೆ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ.

farmer-suicide   ಆತ್ಮಹತ್ಯೆಯಲ್ಲಿ ಆತ್ಮಾವಲೋಕನ, ಶಾಶ್ವತ ಪರಿಹಾರಕ್ಕೆ ಸಂಬಂಧಿಸಿದ ಹಕ್ಕೊತ್ತಾಯಗಳಿಗೆ ಹೋರಾಡುವುದೇ ನಮ್ಮ ಜಾಥದ ಮುಖ್ಯ ಗುರಿಯಾಗಿತ್ತು. ನಿಜವಾಗಿಯೂ ಸಬ್ಸಿಡಿ ಪಡೆಯುತ್ತಿರುವವರು ಯಾರು…….? ರೈತರೋ ಅಥವಾ ಬಂಡವಾಳಿಗರೋ? ಎಂಬುದು ತೆರೆದಿಟ್ಟ ಗುಟ್ಟು. ಕೆಲವರ ಅಭಿಪ್ರಾಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರು ಮಾಡಲು ಕೆಲಸವಿಲ್ಲದೆ ಕುಡಿದು, ಇಸ್ಪೀಟು ಆಡಿ ಹಣ ಕಳೆದುಕೊಂಡ ಅಪ್ರಯೋಜಕರು ಎಂಬ ಮಾತಿದೆ. ಹೌದು, ಹಾಗಾಗಿರಬಹುದು, ಆದರೆ ವಾಸ್ತವತೆಯಲ್ಲಿ ಕಾಣದ ಗಾಳಿ ಮಾತುಗಳಿವು. ಮಧ್ಯಾಹ್ನದ ಸಮಯ ನಿತ್ಯದ ಪಟ್ಟಿಯಂತೆ ಸುಮಾರು ಹಳ್ಳಿಗಳಿಗೆ ಭೇಟಿ ನೀಡಿದ ನಂತರ ಶಿವಪುರಕ್ಕೆ ಬಂದಿಳಿದೆವು. ಪದವಿ ಓದುತ್ತಿರುವ ನಾವು ಕಾಲೇಜಿನಲ್ಲಿ ತಿಂಗಳ ಅಂತ್ಯದ ಪರೀಕ್ಷೆಯಿರುವ ಕಾರಣ ಬೆಂಗಳೂರಿಗೆ ವಾಪಸ್ ತೆರಳುವ ವಿಚಾರವನ್ನು ಸಂಘಟನೆಯ ಮುಖ್ಯಸ್ಥರಿಗೆ ತಿಳಿಸಿದೆ. ‘ಆಗಲಿ.. ಆದರೆ ದಯವಿಟ್ಟು ತೆರಳುವ ಮುನ್ನ ಮಂಡ್ಯಕ್ಕೆ ಬಂದು ತಮ್ಮ ಅಭಿಪ್ರಾಯವನ್ನು ತಿಳಿಸಿ ಹೋಗಿ ಎಂದರು. ಹಿರಿಯರ ಮಾತನ್ನು ತಿರಸ್ಕರಿಸಲು ಮನಸ್ಸು ಬಾರದೆ ಶಿವಪುರದಿಂದ ತಂಡದ ಜೊತೆಗೂಡಿ ಮಂಡ್ಯಕ್ಕೆ ಹೊರಟೆವು. ಸಣ್ಣ ಬದಲಾವಣೆಗಾಗಿ ಸಂಘಟನೆಯ ಮುಖ್ಯಸ್ಥರನ್ನು ಭೇಟಿ ಮಾಡಿದ್ದು ಮಂಡ್ಯ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಶವಗಾರದ ಎದುರು. ಕಾರಣ ರೈತನೊಬ್ಬ ಸಾಲದ ಬಾಧೆಯನ್ನು ತಡೆಯಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ, ಆತನ ವಯಸ್ಸು ಅಂದಾಜು ಮುವತ್ತೈದಿರಬಹುದು. ನಾವೆಲ್ಲರು ಆಸ್ಪತ್ರೆ ತಲುಪಿದೆವು, ವಿಚಾರ ತಿಳಿದ ಪೋಲಿಸರು ಗಲಾಟೆಯಾಗಬಹುದೆಂದು ನೂರಾರು ಪೋಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದರು, ನಾಟಕೀಯವಾಗಿ ಶವವನ್ನು ಪರೀಕ್ಷೆಗಾಗಿ ಶವಗಾರದೊಳಗೆ ಹೊತ್ತೊಯ್ದರು. ರೈತ ಕುಟುಂಬದವರ ಒಪ್ಪಿಗೆಯ ಮೇರೆಗೆ ಪರಿಹಾರ ಕೋರಿ ಆಸ್ಪತ್ರೆಯ ಎದುರು ಹೋರಾಟಕ್ಕಿಳಿದೆವು.

ಮಧ್ಯಾಹ್ನ ಸುಮಾರು ಎರಡು ಗಂಟೆಯ ಸಮಯಕ್ಕೆ ಶವಾಗಾರ ತಲುಪಿದ್ದ ಶವ ಸಂಜೆ ಆರಾದರು ಹೊರಬರಲಿಲ್ಲ. ಕಾರಣ ಅದೇ ದಿನ ಮಾನ್ಯ ಮುಖ್ಯಮಂತ್ರಿಗಳು ಮತ್ತು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದರು. ವಿಷಯ ತಿಳಿದ ಮಂಡ್ಯ ಜಿಲ್ಲೆಯ ಡಿ.ಸಿ ಶವ ನೀಡಿದರೆ ಎಲ್ಲಿ ಮುಖ್ಯ ಮಂತ್ರಿಗಳ ಎದುರೇ ಹೋರಾಟ ನಡೆಸುತ್ತಾರೋ ಎಂದು ಭಾವಿಸಿ ಪೋಲೀಸ್ ಪಡೆಯ ಸಹಾಯದಿಂದ ನಮ್ಮನ್ನು ತಡೆಹಿಡದರು. ಮುಖ್ಯಮಂತ್ರಿಗಳನ್ನೇ ಶವಾಗಾರಕ್ಕೆ ಕರೆಯಿಸಿ ಎಂದು ನಾವು ಒತ್ತಾಯಿಸಿದೆವು. ಆದರೆ ನಮ್ಮ ಕೂಗಿನ ಕರೆ ಯಾರಿಗೂ ಕೇಳಲಿಲ್ಲ. ಎಲ್ಲವನ್ನು ಮೀರಿ ಕಾರ್ಯಕ್ರಮ ಚಾಲ್ತಿಯಲ್ಲಿರುವ ಸ್ಥಳಕ್ಕೆ ನಡೆದು ಹೋರಾಡೋಣೆಂದು ಮುನ್ನುಗಿದರೆ ಮತ್ತದೆ ಪೋಲೀಸ್ ಸರ್ಪಗಾವಲು. ಸಾರ್ವಜನಿಕರ ಒಳಿತಿನ ಹೋರಾಟಕ್ಕೆ ರಕ್ಷಕರಾಗಬೇಕಿದ್ದ ಆರಕ್ಷಕರು ಭಕ್ಷಕರಾಗಿದ್ದರು. ಉಸ್ತುವಾರಿ ಸಚಿವರ ಸಹಚರರ ಆದೇಶಕ್ಕೆ ಆರಕ್ಷಕರು ಅವರ ಸೇವಕರಂತೆ ವರ್ತಿಸಿದರು.

ಹಣಬಲವಿದ್ದಲ್ಲಿ ಎಲ್ಲವು ಸಾಧ್ಯವೆಂಬ ಮಾತನ್ನು ದೃಢಗೊಳಿಸಿದ ಸಂದರ್ಭವದು. ನ್ಯಾಯವು ಅನ್ಯಾಯದ ಸುಳಿಯಲ್ಲಿ ಸಿಲುಕಿ, ತತ್ತರಿಸಿ ನಡುಗಿ ಹೋದ ಘಟನೆಯದು. ಇಂತಹದಕ್ಕೆ ಕೊನೆ ಎಲ್ಲಿದೆ? ಅಷ್ಟರಲ್ಲಿ ವಿಚಾರ ತಿಳಿದ ಮಾನ್ಯ ಮುಖ್ಯಮಂತ್ರಿಗಳು ಬೇರೆ ಮಾರ್ಗದಿಂದ ಮಂಡ್ಯ ಜಿಲ್ಲೆಯಿಂದ ಹೊರಟು ಬೆಂಗಳೂರು ಸೇರಿದ್ದರು. ಜನರ ನೋವಿಗೆ ಸ್ಪಂದಿಸದ ವ್ಯಕ್ತಿಯನ್ನು ನಮ್ಮ ನಾಯಕನೆಂದು ಚುನಾಯಿಸಿ ಗದ್ದುಗೆ ಏರಿಸಿದ ತಪ್ಪಿಗೆ ನಮಗೆ ನಾವೇ ಶ್ರದ್ದಾಂಜಲಿ ಕೋರಬೇಕಾಗಿದೆ. ಎಲ್ಲವೂ ತಣ್ಣಗಾದ ನಂತರ ರೈತನ ಶವವನ್ನು ಆಂಬುಲೆನ್ಸ್‍ನ ಮೂಲಕ ಪೋಲೀಸರ ಕಾವಲಿನೊಂದಿಗೆ ಕೀಲಾರ ಗ್ರಾಮಕ್ಕೆ ಕಳುಹಿಸಿಕೊಟ್ಟರು. ಒಂದು ಎಕರೆ ಜಮೀನಿನಲ್ಲಿ ವ್ಯವಸಾಯ ನಡೆಸುತ್ತಿದ್ದ ಬಡ ರೈತ, ಕಬ್ಬು ಬೆಳೆಯನ್ನು ನಂಬಿ ಸುಮಾರು ಎಂಟು ಲಕ್ಷದವರೆಗೂ ಸಾಲ ಮಾಡಿದ್ದನಂತೆ. ಸಾಲ ಕೊಟ್ಟವರ ಕಾಟ ತಾಳಲಾರದೆ ತನ್ನ ಜಮೀನಿನಲ್ಲೆ ವಿಷ ಸೇವಿಸಿ ಪ್ರಾಣ ಬಿಟ್ಟಿದ್ದ. ಚಿಕ್ಕ ಸಂಸಾರ ಹೆಂಡತಿ ಮತ್ತು ಇಬ್ಬರು ಮಕ್ಕಳು ಗಂಡು ಮತ್ತು ಹೆಣ್ಣು, ಅಕ್ಕ ಹತ್ತನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರೆ, ತಮ್ಮ ಏಳನೇ ತರಗತಿಯಲ್ಲಿದ್ದನು. ಹೆಂಡತಿ ಸತ್ತ ಗಂಡನ ಎದೆ ಬಡಿದು ಎಬ್ಬಿಸಿದರು ಏಳಲಿಲ್ಲ. ಮಗಳು ಆಘಾತದಿಂದ ಮೌನಿಯಾಗಿದ್ದಳು. ತಂದೆಯೆಂಬ ಪದದ ಅರ್ಥವೇ ತಿಳಿಯದ ಮಗ ಚಿತೆಗೆ ಬೆಂಕಿಯನಿಟ್ಟಿ. ಉರಿದ ಬೆಂಕಿ ಎಲ್ಲವನ್ನು ಬೂದಿ ಮಾಡುತ್ತಿರಲು, ಹೆಂಡತಿ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲಿ ಅನ್ನದೇವರ ಅಂತ್ಯ ಸಂಸ್ಕಾರವಾಗಿ ಹೋಗಿತ್ತು.

5 Responses to "ದೇವರ ಅಂತ್ಯ ಸಂಸ್ಕಾರ"

 1. Abinandan R Naik  October 17, 2015 at 1:21 pm

  ಸೋಲಿನ ಹೊಣೆಗಾರರು ನಾವೇ ಎಂದೆನಿಸುತ್ತದೆ

  Reply
 2. CHETHAN sj  October 29, 2015 at 11:08 am

  Then after ur campaign also continue the farmers suicide then now what you contribute for him

  Reply
 3. Abinandan R Naik  November 4, 2015 at 9:08 am

  It’s not about what I contribute Mr. Chethan SJ, it’s all about what we contribute. Hope you understand the meaning of “we” my dear🙊

  Reply
 4. CHETHAN SJ  December 6, 2015 at 6:50 pm

  I understand meaning of we but all good works start by single person and after this all are come and join with us then that’s time we find out really meaningful of “we”

  Reply
 5. Kumar  January 3, 2016 at 4:02 pm

  Nice article

  Reply

Leave a Reply

Your email address will not be published.