ದೂರ ಓಟದಲ್ಲಿ ಕೀನ್ಯಾ ಕಿಂಗ್ ಏಕೆ?

ಬಾಲಾಜಿ ಕೆ.

ದೂರ ಓಟದಲ್ಲಿ ಚಾಂಪಿಯನ್‍ಗಳಾಗಲು ಏನು ಮಾಡಬೇಕು? ಎಷ್ಟು ಓಡಿದರೂ ದಣಿಯದೇ ಇರುವ ಶಕ್ತಿಯ ಗುಟ್ಟು ಆಹಾರದಲ್ಲಿ ಅಡಗಿದೆಯೇ? ಇಲ್ಲವೇ ಓಟಗಾರ ವಾಸಿಸುವ ಪ್ರದೇಶದಲ್ಲಿದೆಯೇ? ಊಟದಲ್ಲಿದೆಯೇ? ಕೀನ್ಯಾದವರೇಕೆ ಮ್ಯಾರಥಾನ್‍ನಲ್ಲಿ ಎಲ್ಲರಿಗಿಂತ ಮುಂದಿದ್ದಾರೆ?  ಓಟ ಎಂಬುದು ಶಕ್ತಿಯ ಪ್ರಶ್ನೆ ಅಲ್ಲ; ಅದೊಂದು ಮಾನಸಿಕ ಸಾಮಥ್ರ್ಯದ ಪ್ರಶ್ನೆ ಎಂಬ ವಾದದಲ್ಲಿ ಏನಾದರೂ ತಿರುಳು ಇದೆಯಾ?

ಆ ದೇಶದ ಜನಸಂಖ್ಯೆ ಕೇವಲ ನಾಲ್ಕು ಕೋಟಿ ಹತ್ತು ಲಕ್ಷ. ಈ ವಿಷಯದಲ್ಲಿ  ಇಡೀ ವಿಶ್ವಕ್ಕೆ ಹೋಲಿಸಿದರೆ 0.06ನಷ್ಟೂ ಇಲ್ಲ. ಆದರೆ ದೂರ ಓಟದಲ್ಲಿ ಈ ಪುಟ್ಟನಾಡಿಗೆ ಸರಿಸಾಟಿ ಯಾರೂ ಇಲ್ಲ. ಪುರುಷರ ಟಾಪ್ 10 ಮ್ಯಾರಥಾನ್ ಪಟುಗಳಲ್ಲಿ ಈ ದೇಶದವರೇ 8 ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲೂ ಈ ದೇಶದ್ದೇ ಪ್ರಾಬಲ್ಯ. ಇದು ಕೀನ್ಯಾದ ಕತೆ. ದೂರ ಓಟ ಎಲ್ಲಿಯೇ ನಡೆಯಲಿ ಅಲ್ಲಿ ಕೀನ್ಯಾದವರಿದ್ದರೆ ಕತೆ ಫಿನಿಶ್.

1980ರಿಂದೀಚೆಗೆ ಮ್ಯಾರಥಾನ್ ಎಲ್ಲಿ ನಡೆದರೂ ಅಲ್ಲಿ ಕೇನ್ಯಾ ದೇಶದ ಮಂದಿಯ ದಿಗ್ವಿಜಯ. ಇವರಿಗೆ ಪೈಪೋಟಿ ಕೊಡುತ್ತಿರುವ ದೇಶ ಇಥಿಯೋಪಿಯಾ.

ಪ್ರತಿಷ್ಠಿತ ಬೋಸ್ಟನ್ ದೂರ ಓಟದ ಸ್ಪರ್ಧೆಯಲ್ಲಿ ಮೊದಲ 25 ಸ್ಥಾನಗಳಲ್ಲಿ ಕೀನ್ಯಾದವರನ್ನು ಬಿಟ್ಟರೆ ಬೇರೆ ದೇಶದವರು ಇರುವುದಿಲ್ಲ. ಲಂಡನ್ ಮ್ಯಾರಥಾನ್ ಚರಿತ್ರೆಯನ್ನು ಬೆದಕಿದರೆ ಬಹುತೇಕ ಚಾಂಪಿಯನ್‍ಗಳು ಈ ದೇಶದವರೇ. ಮೂರು ಸಾವಿರ ಮೀಟರ್ ಸ್ಟೀಪಲ್‍ಚೇಸ್‍ನಲ್ಲಿ ಅದ್ಭುತ ಸಾಧನೆ ಮಾಡಿದ 25 ಸಾಧಕರ ಪಟ್ಟಿ ಮಾಡಿದರೆ 18 ಪಟುಗಳು ಈ ದೇಶದವರೇ ಆಗಿರುತ್ತಾರೆ.

ಇವರೇನು ಎನರ್ಜಿ ಡ್ರಿಂಕ್ಸ್ ತೆಗೆದುಕೊಳ್ಳುವುದಿಲ್ಲ; ಸಿಕ್ಕಾಪಟ್ಟೆ ತರಬೇತಿ ಪಡೆಯುವುದಿಲ್ಲ. ಭಾರಿ ಪಗಾರ ಕೊಟ್ಟು ಕೋಚ್‍ಗಳನ್ನೂ ಇಟ್ಟುಕೊಂಡಿಲ್ಲ. ನೋಡಲು ಭಾರಿ ಆಳುಗಳೂ ಅಲ್ಲ. ಪುಟ್ಟ ಹಕ್ಕಿಗಳಂತೆ ಇರುವ ಸರ್ವೇ ಸಾಧಾರಣ ಜೀವಿಗಳು. ಆದರೆ ಓಟಕ್ಕೆ ನಿಂತಾಗ ಮಾತ್ರ ಇವರ ಶಕ್ತಿಯ ಅಗಾಧತೆ ಅರ್ಥವಾಗುತ್ತದೆ. ಕಾಲುಗಳ ಶಕ್ತಿಗೆ ತಕ್ಕಂತೆ ಶ್ವಾಸಕೋಶದ ಬಲ ಕಂಡು ಯಾರೇ ಆದರೂ ಅಯ್ಯಯ್ಯೋ ಎನ್ನದೇ ಇರುವುದಿಲ್ಲ. ಇದಕ್ಕೇನು ಕಾರಣ? ಎಂಬ ಪ್ರಶ್ನೆಗೆ ಸರಳ, ಸಾದಾ ಉತ್ತರ ಸಿಗುವುದಿಲ್ಲ. ವಂಶವಾಹಿ ಗುಣಗಳಿಗಿಂತ ಸಾಂಸ್ಕøತಿಕ ಭಿನ್ನತೆಗಳನ್ನು ಎತ್ತಿ ತೋರಿಸುವ ಐರೋಪ್ಯ ಕೇಂದ್ರಿತ ಚಿಂತನೆಗಳು ಕಾಣಿಸುತ್ತವೆ. ಕೀನ್ಯಾದಲ್ಲಿ ಶಾಲೆಗಳ ಸಂಖ್ಯೆ ಕಡಿಮೆ. ಅವು ತುಂಬ ದೂರದಲ್ಲಿರುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಕಲಿಯಲು ಓಡಲೇಬೇಕು. ಇದೇ ಅವರ ಸಕ್ಸಸ್‍ಗೆ ಕಾರಣ ಎಂಬುದು ಜನಪ್ರಿಯ ಥಿಯರಿ. ಆದರೆ ಗೆದ್ದ 20 ಮಂದಿ ಕೀನ್ಯಾ ಪಟುಗಳ ಪೈಕಿ 10ಹೇಳಿದ್ದು  ಶಾಲೆಗೋಸ್ಕರ ಓಡುವುದಿಲ್ಲ. ಬಸ್ಸಿನಲ್ಲಿ ಹೋಗುತ್ತೇವೆ. ಇಲ್ಲದಿದ್ದರೆ ನಡೆದು ಸಾಗುವಷ್ಟು ದೂರದಲ್ಲಿ ಶಾಲೆಗಳಿವೆ ಎಂದರು. ಅಲ್ಲಿಗೆ ಆ ಸಿದ್ಧಾಂತ ಠುಸ್ ಆಯಿತು. ಮತ್ತೊಂದು ವಾದವೆಂದರೆ ಕೀನ್ಯಾದವರು `ನಟರಾಜ ಸರ್ವೀಸ್’ ಮಾಡುವವರು ಅಂದರೆ ಬರಿಗಾಲಿನಲ್ಲಿ ನಡೆಯುವವರು. ಇದೇ ಅವರ ಓಟದ ಯಶಸ್ಸಿಗೆ ಕೀಲಿ ಕೈ. ಅದರೆ ಏಷ್ಯಾದ ಅನೇಕ ದೇಶಗಳಲ್ಲಿ ಬರಿಗಾಲಿನ ಮಂದಿ ಅಸಂಖ್ಯಾತ. ಆದರೆ ಓಟದಲ್ಲಿ ಅವರು ಕ್ಯಾಬಿ ನಹಿ-ಏನೇನೂ ಇಲ್ಲ.

ಅವರು ತಿನ್ನುವ ಸಾದಾ ಆಹಾರವೇ ಓಟಕ್ಕೆ ಶಕ್ತಿಕೊಡುತ್ತದೆ ಎಂದರು ಕೆಲವರು ತಜ್ಞರು. ಹಾಗೆ ನೋಡಿದರೆ ಕೆನ್ಯಾದವರ ಆರೋಗ್ಯ ದಾಖಲೆ ಭಾರಿ ಏನೂ ಇಲ್ಲ. ಅವರ ಆಹಾರದಲ್ಲಿ ಪವಾಡ ಸದೃಶ ಪೌಷ್ಠಿಕಾಂಶದ ಯಾವ ತಿನಿಸೂ ಇಲ್ಲ.

ಕೀನ್ಯಾದವರು ಮೂಲತಃ ಪಶುಪಾಲರು. ಹೀಗಾಗಿ ಓಡೋದರಲಿ ್ಲ ಮುಂದಿದ್ದಾರೆ. ಭಾರಿ ಓಟಗಾರರೆಲ್ಲ ಗ್ರೇಟ್ ರಿಫ್ಟ್ ವ್ಯಾಲಿಯಿಂದ ಬಂದವರು. ಈ ಪ್ರದೇಶ ಹೋಮೋ ಸೇಪಿಯನ್ಸ್‍ನ ನೆಲೆ ಕೂಡ ಹೌದು. ಇದು ಸಮುದ್ರ ಮಟ್ಟಕ್ಕಿಂಥ 7 ಸಾವಿರ ಅಡಿ ಎತ್ತರದಲ್ಲಿದೆ. ಹೀಗಾಗಿ ಇಲ್ಲಿನ ಮಂದಿಗೆ ಓಟ ಸಹಜ. ಇದನ್ನು ಒಪ್ಪಿದರೆ ಭಾರತದ ಈಶಾನ್ಯ ರಾಜ್ಯಗಳ ಮಂದಿ, ಟಿಬೆಟ್‍ನಲ್ಲಿರುವವರು, ಸ್ವಿಜರ್‍ಲೆಂಡ್‍ನಲ್ಲಿರುವವರು ರನ್ನಿಂಗ್‍ರೇಸ್‍ನಲ್ಲಿ ಮುಂದಿರಬೇಕಾಗಿತ್ತು.

ಇದ್ಯಾವುದೂ ನಿಜವಲ್ಲ. ಪೂರಕ ವಾತಾವರಣ, ಕಠಿಣ ಪರಿಶ್ರಮ ಹಾಗೂ ಗೆಲುವಿನ ಗುರಿಯೆಡೆ ಅಚಲ ಸಂಕಲ್ಪ ಅವರನ್ನು ಸಾಮ್ರಾಟರನ್ನಾಗಿಸಿದೆ. ಇದೆಲ್ಲದಕ್ಕಿಂತ ಮಿಗಿಲಾಗಿ ಒಲಿಂಪಿಕ್ಸ್ ಸೇರಿದಂತೆ ದೂರ ಓಟಗಳಲ್ಲಿ ಪದಕ ಗೆಲ್ಲುವ ಕೀನ್ಯಾದವರು ಕೆಲಂಜಿನ್ ಬುಡಕಟ್ಟಿಗೆ ಸೇರಿದವರು. ಕೆನ್ಯಾದಲ್ಲಿ ಇವರ ಸಂಖ್ಯೆ 40 ಲಕ್ಷ. ಅನೇಕ ಅಧ್ಯಯನಗಳು ಈ ಬುಡಕಟ್ಟಿನವರ ಓಟದ ಸಾಮಥ್ರ್ಯ ಇತರೆ ದೇಶದವರಷ್ಟೇ ಅಲ್ಲ; ಕೀನ್ಯಾನ್ಯಾದ ಅನ್ಯ ಸಮುದಾಯದವರಿಗೆ ಹೋಲಿಸಿದರೂ ಅತಿ ಹೆಚ್ಚು ಎಂಬುದನ್ನು ರುಜುವಾತುಪಡಿಸಿವೆ. ಕೆಲಂಜಿನ್‍ಗಳು ಹುಟ್ಟಿನಿಂದಲೇ ಗಟ್ಟಿಗರು. ಇವರ ರಕ್ತದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಅತಿ ಹೆಚ್ಚು. ಇನ್ನು ಇವರ ಹಕ್ಕಿಗಳಿಗೆ ಇರುವಂಥ ಕಾಲುಗಳು ಓಟಕ್ಕೆ ಅನುಕೂಲಕಾರಿಯಾಗಿವೆ. ಸದ್ಯಕ್ಕೆ ಈ ವಾದ ಸಮರ್ಥನೀಯ ಎಂದೆನಿಸಿದೆ. ಒಲಿಂಪಿಕ್ಸ್ ಈಜಿನಲ್ಲಿ ಎಲ್ಲ ದಾಖಲೆಗಳನ್ನು ಪುಡಿ ಪುಡಿ ಮಾಡಿದ ಮೈಕೆಲ್ ಫೆಲ್ಪ್ಸ್‍ನ ಅಸಹಜ ದೇಹದ ವಿನ್ಯಾಸವೇ ಆತನ ಅದ್ಭುತ ಸಾಧನೆಗೆ ಕಾರಣ ಎಂಬುದನ್ನು ತಜ್ಞರು ಸಂಶಯಕ್ಕೆಡೆ ಇಲ್ಲದಂತೆ ಪ್ರೂವ್ ಮಾಡಿದ್ದಾರೆ. ಹೀಗಾಗಿ ಈ ವಾದದಲ್ಲಿ ತಿರುಳಿದೆ.

ಟಾಪ್ 10 ಮ್ಯಾರಥಾನ್ ಚಾಂಪಿಯನ್ಸ್

  1. ಡೆನಿಸ್ ಕಿಮೆಟ್ಟೊ (ಕೀನ್ಯಾ) 2 ಗಂಟೆ, 2 ನಿಮಿಷ, 57 ಸೆಕೆಂಡ್ ಬರ್ಲಿನ್ 2014
  2. ಇಮ್ಯಾನುಯೆಲ್ ಮುತೈ (ಕೀನ್ಯಾ) 2:3:13 ಬರ್ಲಿನ್ 20
  3. ವಿಲ್ಸನ್ ಕಿಪ್‍ಸಂಗ್ (ಕೀನ್ಯಾ), 2:3:23, ಬರ್ಲಿನ್ 2013
  4. ಪ್ಯಾಟ್ರಿಕ್ ಮಕಾವು (ಕೀನ್ಯಾ) 2:3:38, ಬರ್ಲಿನ್ 2008
  5. ಹೈಲೆ ಗೆಬರ್‍ಸೆಲಾಸಿ (ಇಥಿಯೋಪಿಯಾ) 2:3:38, ಬರ್ಲಿನ್ 2013
  6. ಈಲಿಯಡ್ ಕಿಪ್‍ಚೋಗೆ (ಕೀನ್ಯಾ) 2:4:05 ಬರ್ಲಿನ್ 2013
  7. ಜೆಫ್ರಿ ಮುತಾಯಿ(ಕೀನ್ಯಾ), 2:04:15 ಬರ್ಲಿನ್ 2012
  8. ಅಯೇಲ ಅಬ್ಸಶೇರೊ (ಇಥಿಯೋಪಿಯಾ), 2:04:23
  9. ಡಂಕ್‍ನ್ ಕಿಬೆಟ್ (ಕೀನ್ಯಾ) 2:04:27, ರೋಟರ್‍ಡ್ಯಾಂ 2009
  10. ಜೇಮ್ಸ್ ಕವಾಂಬಿ (ಕೀನ್ಯಾ) 2:04:27,ರೋಟರ್‍ಡ್ಯಾಂ 2009

ಮುಂಬಯಿ ಮ್ಯಾರಥಾನ್ ತಾರಾಲೋಕ

ಪ್ರತಿವರ್ಷ ಜನವರಿಯಲ್ಲಿ ಮುಂಬಯಿ ಅಂತಾರಾಷ್ಟ್ರೀಯ ಮ್ಯಾರಥಾನ್‍ಗೆ ಸಿಂಗಾರಗೊಳ್ಳುತ್ತದೆ. ಗುರಿ ಎಷ್ಟು ಮಂದಿಯಾದರೂ ಮುಟ್ಟಲಿ ಆರಂಭವಂತೂ ಅದ್ಭುತವಾಗಿರುತ್ತದೆ. ಬಾಲಿವುಡ್‍ನ ತಾರಾಲೋಕವೇ ಅಂದು ರೋಡಿಗಿಳಿದಿರುತ್ತದೆ. ಜತೆಗೆ ಕ್ರೀಡೆ, ಉದ್ಯಮ ಲೋಕದ ಸೆಲೆಬ್ರೆಟಿಗಳು ಹೆಜ್ಜೆ ಹಾಕುತ್ತಾರೆ. ಹೀಗಾಗಿ ಇದಕ್ಕೆ ದೊಡ್ಡ ತಾರಾ ಆಕರ್ಷಣೆ ಇದೆ.  ಮ್ಯಾರಾಥಾನ್, ಹಾಫ್ ಮ್ಯಾರಥಾನ್, ಡ್ರೀಮ್ ರನ್, ಸೀನಿಯರ್ ಸಿಟಿಜನ್ ರನ್, ವಿಶೇಷ ಚೇತನರ ಚಾಂಪಿಯನ್, ಕಾರ್ಪೂರೆಟ್ ಚಾಂಪಿಯನ್ ಎಂಬ ಆರು ವಿಭಾಗಗಳಿರುತ್ತವೆ. ಸಾವಿರಾರು ಮಂದಿ ಇದರಲ್ಲಿ ಭಾಗವಹಿಸುತ್ತಾರೆ.

ಸ್ಟ್ಯಾಂಡರ್ಡ್ ಚಾರ್ಟಡ್ ಪ್ರಾಯೋಜಕತ್ವದಲ್ಲಿ ಪ್ರತಿವರ್ಷ ಜನವರಿ ಮೂರನೇ ವಾರದಲ್ಲಿ  ನಡೆಯುತ್ತದೆ.  2004ರಲ್ಲಿ ಇದು ಶುರುವಾಯಿತು.  ಏಷ್ಯಾದಲ್ಲೇ ಅತಿದೊಡ್ಡ ಓಟದ ಮೇಳ. ಗೆದ್ದವರಿಗೆ ಕೊಡುವ ಬಹುಮಾನ ಮೂರೂವರೆ ಲಕ್ಷ ಡಾಲರ್. ಹೀಗಾಗಿ ಹತ್ತಾರು ದೇಶಗಳು ಪಾಲ್ಗೊಳ್ಳುತ್ತವೆ.

2013ರಲ್ಲಿ ಉಗಾಂಡಾದ ಜಾಕ್ಸನ್ ಕಿಪ್ರಾಪ್ 2 ಗಂಟೆ, 9 ನಿಮಿಷ 32 ಸೆಕೆಂಡ್‍ಗಳಲ್ಲಿ ಗುರಿ ಮುಟ್ಟಿ ದಾಖಲೆ ಸ್ಥಾಪಿಸಿದರು. ಮಹಿಳೆಯರ ವಿಭಾಗದಲ್ಲಿ ಕೀನ್ಯಾದ ವ್ಯಾಲೆಂಟೈನ್ ಕಿಪ್‍ಕೇಟರ್ 2 ಗಂಟೆ, 24 ನಿಮಿಷ 33 ಸೆಕೆಂಡ್‍ಗಳಲ್ಲಿ ದೂರವನ್ನು ಕ್ರಮಿಸಿ ಚಾಂಪಿಯನ್ ಆದರು. ಇಂದಿಗೂ ಈ ರೆಕಾರ್ಡ್‍ಅನ್ನು ಯಾರೂ ಮುರಿಯಲು ಆಗಿಲ್ಲ.

ಓಟ ನವ ನವೀನ

ಪ್ರಪಂಚದಾದ್ಯಂತ ಸಾವಿರಾರು ಮ್ಯಾರಥಾನ್‍ಗಳು ನಡೆಯುತ್ತವೆ. ಅಂತಾರಾಷ್ಟ್ರೀಯ ಮ್ಯಾರಥಾನ್ ಹಾಗೂ ದೂರ ಓಟದ ಸಂಘ(ಐಎಎಂಎಸ್)ದ ನಿಯಂತ್ರಣದಲ್ಲಿ 500ಕ್ಕೂ ಹೆಚ್ಚು ಪಂದ್ಯಗಳು ಏರ್ಪಾಡಾಗುತ್ತವೆÉ.  ಇದು 1982ರಲ್ಲಿ ಸ್ಥಾಪನೆಗೊಂಡಿತು.  83 ರಾಷ್ಟ್ರಗಳು ಮತ್ತು ಪ್ರಾಂತ್ಯಗಳಲ್ಲಿ 300 ಕ್ಕೂ ಹೆಚ್ಚು ಸದಸ್ಯ ಸ್ಪರ್ಧೆಗಳ ಯಾದಿ ಈ ಸಂಘದಲ್ಲಿದೆ.

ಮ್ಯಾರಥಾನ್ ಎಂದ ಕೂಡಲೇ ನೆನಪಿಗೆ ಬರುವುದು ಬೋಸ್ಟನ್, ನ್ಯೂಯಾರ್ಕ್, ಚಿಕಾಗೋ, ಲಂಡನ್ ಹಾಗೂ ಬರ್ಲಿನ್. ಇಲ್ಲಿ ಗೆದ್ದವರು  5 ಲಕ್ಷ ಡಾಲರ್ ಗಳಿಸುತ್ತಾರೆ. ಇದಲ್ಲದೆ ಅಮ್‍ಸ್ಟರ್‍ಡಂ, ಹೊನೊಲುಲು, ಪ್ಯಾರಿಸ್, ಸ್ಟಾಕ್‍ಹೋಂ, ಮ್ಯಾರಥಾನ್‍ಗಳು ಕೂಡ ಹೆಚ್ಚು ಪ್ರಸಿದ್ಧಿಹೊಂದಿವೆ.  ಬೋಸ್ಟನ್ ಮ್ಯಾರಥಾನï ವಿಶ್ವದ ಅತ್ಯಂತ ಪ್ರಾಚೀನ ವಾರ್ಷಿಕ ಓಟ ಪಂದ್ಯ.ಇದು 1897 ರಿಂದ ನಡೆಯುತ್ತಿದೆ.

ಚೀನಾದ ಮಹಾಗೋಡೆಯಲ್ಲಿ ಜರುಗುವ ಗ್ರೇಟï ವಾಲï ಮ್ಯಾರಥಾನ್,  ದಕ್ಷಿಣ ಆಫ್ರಿಕಾದ ಸಫಾರಿ ವನ್ಯದಲ್ಲಿ ಜರುಗುವ ಬಿಗï ಫೈಟ್ ಮ್ಯಾರಥಾನï, ಟಿಬೇಟಿನ ಬೌದ್ಧಧರ್ಮೀಯ ವಾತಾವರಣದಲ್ಲಿ ಜರುಗುವ ಗ್ರೇಟ್ ಟಿಬೆಟನ್ ಮ್ಯಾರಥಾನ್ , ಮತ್ತು -15 ಡಿಗ್ರಿ ಸೆಲ್ಷಿಯಸ್ ಇರುವ ಗ್ರೀನ್‍ಲ್ಯಾಂಡ್ ಮ್ಯಾರಥಾನ್ ರೋಚಕವಾಗಿರುತ್ತವೆ

Leave a Reply

Your email address will not be published.