ದಾಳಿಯಿಡುತ್ತಿರುವ ಹೆಜಮನಿ

-ಬಿ.ಶ್ರೀಪಾದ ಭಟ್

ಅಂತರಾಷ್ಟ್ರೀಯ ವ್ಯಾಪಾರಿ ಒಪ್ಪಂದಗಳ ಕುರಿತು ವರದಿ ಮಾಡುವುದೆಂದರೆ ಅದು ಒಂದು ಪತ್ತೇದಾರಿ ಕೆಲಸದಂತೆ ಮತ್ತು ತ್ಯಾಪೇದಾರಿ ಕೆಲಸದಂತೆಯೂ ಹೌದು. ಈ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಆರಂಭದಿಂದ ಕೊನೆಯವರೆಗೂ ಭಾಗವಹಿಸಿ ತನ್ನ ಎಲ್ಲಾ ಜ್ಞಾನ ಮತ್ತು ಅನುಭವವನ್ನು ಬಳಸಿಕೊಂಡ ನಂತರವೂ ಅದರ ವರದಿಗಾರನಿಗೆ ಕೊನೆಗೂ ತನ್ನ ದೇಶವು ತನ್ನ ಹಿತಾಸಕ್ತಿಯನ್ನು ಬಿಟ್ಟುಕೊಡದೆ ಅಂತರಾಷ್ಟ್ರೀಯ ಒಪ್ಪಂದಗಳಿಗೆ ಸಹಿ ಹಾಕಿದೆಯೇ? ಆ ಒಪ್ಪಂದದ ವಿವರಗಳೇನು ? ಅದರ ಸಾಧಕಬಾಧಕಗಳೇನು? ಎನ್ನುವ ವಿವರಗಳು ದೊರಕುವುದಿಲ್ಲ. ಚಿತ್ರಾ ಸುಬ್ರಮಣ್ಯಂ ಅವರು ಹೇಳುವಂತೆ ಆ ಒಪ್ಪಂದದ ಕರಡು ಪ್ರತಿ ಕೇವಲ ಸಹಿಗೋಸ್ಕರ ಆಯಾ ರಾಷ್ಟ್ರದ ಪ್ರತಿನಿಧಿಯಾಗಿ ಭಾಗವಹಿಸಿದ ಮಂತ್ರಿಗಳಿಗೆ ಬಳಿ ತಲುಪಿಸಲಾಗುತ್ತದೆ.

1986-1995ರವರೆಗಿನ ಉರುಗ್ವೆ ಸುತ್ತಿನ ಸಭೆಗಳಲ್ಲಿ WTO ಎನ್ನುವ ವಿವಿಧ ದೇಶಗಳ ಅಂತರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲಾಯಿತು ಮತ್ತು ಇಂದು ‘ಗಾಟ್ಸ್’ (General Agreement on Trade in Services)  ಅನ್ನು ಅನುಷ್ಟಾನ ಗೊಳಿಸುವ ಮುಖ್ಯ ಸಂಸ್ಥೆಯಾಗಿದೆ. WTO ಸಂಸ್ಥೆ ವಿಶ್ವಕ್ಕೆ ಸಂವಿಧಾನವನ್ನು ಬರೆಯಲು ಹೊರಟಿದೆ, ಇದು ದೇಶಗಳ ಸಂಪನ್ಮೂಲಗಳನ್ನು ಬಂಡವಾಳಶಾಹಿಗಳ ಕೈಗೆ ಹಸ್ತಾಂತರಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇತ್ತೀಚೆಗೆ ಡಿಸೆಂಬರ್ 15-18 ರಂದು ಆಫ್ರಿಕಾದ ನೈರೋಬಿಯಲ್ಲಿ ಡಬ್ಲಿಟಿಓ (WTO) ನ ಸಚಿವ ಸಮ್ಮೇಳನ ಜರುಗಿತು.

wtoಈ ನಾಲ್ಕು ದಿನಗಳ ಸಮ್ಮೇಳನದಲ್ಲಿ ಭಾರತವನ್ನೂ ಒಳಗೊಂಡಂತೆ ಸುಮಾರು 164 ಸದಸ್ಯ ರಾಷ್ಟ್ರಗಳು ಭಾಗವಹಿಸಿದ್ದವು. ಮುಕ್ತಾಯದ ಸಂದರ್ಭದಲ್ಲಿ ಇದೊಂದು ಐತಿಹಾಸಿಕ ಸಮ್ಮೇಳನ ಎಂದೂ ಬಡ ರಾಷ್ಟ್ರಗಳ ಅಭಿವೃದ್ಧಿಗೆ ಈ ಡಬ್ಲಿಟಿಓ ವ್ಯಾಪಾರಿ ಒಪ್ಪಂದಗಳು ಸಹಕಾರಿಯಾಗಲಿವೆ, ಈ ಗ್ಯಾಟ್ಸ್ ಒಡಂಬಡಿಕೆಯು ಬಡರಾಷ್ಟ್ರಗಳ ಹಸಿವನ್ನು ತೀರಿಸುತ್ತದೆ ಎನ್ನುವ ಘೋಷಣೆಯನ್ನೂ ಮಾಡಲಾಯಿತು. ಕಿವಿಗಡುಚಿಕ್ಕುವ ಕರಾಡತನದಿಂದ !! ಇದು ಒಂದು ತೀರಾ ಸವಕಲಾದ, ಹಳಸಲಾದ ಪ್ರಕ್ರಿಯೆ. ಅಮೇರಿಕಾ ಕೇಂದ್ರಿತವಾದ, ಅಮೇರಿಕಾ ಮತ್ತು ಯುರೋಪ್‍ನ ಶ್ರೀಮಂತ ರಾಷ್ಟ್ರಗಳ ಹಿತಾಸಕ್ತಿಯನ್ನು ನಿರಂತರವಾಗಿ ಕಾಪಾಡುವುದಕ್ಕೋಸ್ಕರವಾಗಿಯೇ WTO  ನ ಸಚಿವ ಸಮ್ಮೇಳನಗಳು ಜರಗುತ್ತವೆ.

2001 ನವೆಂಬರ್‍ನಲ್ಲಿ ದೋಹಾ ಅಭಿವೃದ್ಧಿ ಅಜೆಂಡಾ (ಆಆಂ) ಎನ್ನುವ ವ್ಯಾಪಾರ ವಹಿವಾಟಿನ ಚಟುವಟಿಕೆಗಳನ್ನು ಸುಗುಮಗೊಳಿಸಿಕೊಳ್ಳುವ ಮುಖ್ಯ ನೀತಿಗಳನ್ನು ಒಳಗೊಂಡಂತಹ ವೇದಿಕೆಯನ್ನು ಡಬ್ಲಿಟಿಓಗಾಗಿ ರಚಿಸಲಾಯಿತು. ಇದರ ಮುಖ್ಯ ಅಜೆಂಡಾವೆಂದರೆ ಅಮೇರಿಕಾ ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿನ ವ್ಯಾಪಾರ ನೀತಿನಿಯಮಗಳನ್ನು ಮತ್ತು ಕಟ್ಟುಪಾಡುಗಳನ್ನು ಸಡಿಲಿಸುವುದು ಮತ್ತು ಆ ಮೂಲಕ ಈ ಎಲೈಟ್ ರಾಷ್ಟ್ರಗಳಿಗೆ ಸುಲುಭದ ರಹದಾರಿ ಕಲ್ಪಿಸುವುದಾಗಿತ್ತು.

ಆ ಮೂಲಕ ಸ್ಥಳೀಯ ಸಂಸ್ಥೆಗಳನ್ನು ದುರ್ಬಲಗೊಳಿಸುವುದು ಇದರ ಗುಪ್ತ ಅಜೆಂಡ. ಆರಂಭದ ಸಚಿವ ಮಟ್ಟದ ಸಭೆಗಳಲ್ಲಿ ತೃತೀಯ ಜಗತ್ತಿನ ರಾಷ್ಟ್ರಗಳು ಇದನ್ನು ವಿರೋಧಿಸಿದ್ದೂ ನಿಜ. ಈ ಬಾರಿಯ ನೈರೋಬಿ ಸಚಿವ ಸಮ್ಮೇಳನದಲ್ಲಿಯೂ ಇದನ್ನೇ ಹಿನ್ನೆಲೆಯಾಗಿ ಬಳಸಿಕೊಳ್ಳಲು ಪ್ರಯತ್ನಿಸಲಾಯಿತು ಎಂದು ಹೇಳಲಾಗುತ್ತಿದೆ. ಈ ಹಿಂದೆ ಉರುಗ್ವೆಯಲ್ಲಿ, ಬಾಲಿಯಲ್ಲಿ ನಡೆದ ಡಬ್ಲಿಟಿಓ(WTO) ಸಚಿವ ಸಮ್ಮೇಳನಗಳಲ್ಲಿ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಹಿಂದುಳಿದ ಲ್ಯಾಟೀನ್ ಅಮೇರಿಕಾ, ಆಫ್ರಿಕಾ ರಾಷ್ಟ್ರಗಳು ಬಂಡವಾಳ ಹೂಡಿಕೆ ಮತ್ತು ಖಾಸಗಿ ಬಂಡವಾಳಶಾಹಿಗಳ ವ್ಯಾಪಾರದ ಯಶಸ್ವಿಗೆ ದೇಶದ ಅಭಿವೃದ್ಧಿಯ ಮುಖವಾಡದ ಕ್ಯಾರೆಟ್ ಅನ್ನು ತೊಡಿಸಿ ಆ ಮೂಲಕ ಕಲೋನಿಯಲ್ ವ್ಯಾಪಾರದ ವಹಿವಾಟಿನ ಒಡಂಬಡಿಗೆ ಸಹಿ ಹಾಕಿವೆ. ತಮ್ಮ ದೇಶದ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಲು ವಿಫಲವಾಗುವ ಈ ರಾಷ್ಟ್ರಗಳು ಸ್ವದೇಶಗಳಲ್ಲಿ ಆರ್ಥಿಕ ಕ್ರಾಂತಿ ಎನ್ನುವ ಮೃಗಜಲವನ್ನು ಜನಸಾಮಾನ್ಯರಿಗೆ ತೋರಿಸುತ್ತಾ ತಮ್ಮ ಅಸಮರ್ಥತೆಯನ್ನು ಬಚ್ಚಿಟ್ಟುಕೊಳ್ಳಲು ಹೆಣಗುತ್ತಾರೆ.

ಉದಾಹರಣೆಗೆ ನೈರೋಬಿಯಲ್ಲಿ ನಡೆದ ಡಬ್ಲಿಟಿಓ (WTO) ಸಮ್ಮೇಳನದಲ್ಲಿ ಅಮೇರಿಕಾದ ಒತ್ತಾಯಕ್ಕೆ ಮಣಿದ ಭಾರತ “ವ್ಯಾಪಾರ ಸುಗಮತೆಯ ಒಪ್ಪಂದ (Trade Facilitation Agreement (TFA) ಸಹಿ ಹಾಕಿದೆ. ಆ ಮೂಲಕ ತನ್ನ ದೇಶದ ಸ್ಥಳೀಯ ಸಂಸ್ಥೆಗಳ ಹಿತಾಸಕ್ತಿ ಕಾಪಾಡುವಂತಹ ಕರಾರುಗಳನ್ನು ಮುಂದಿಡುವ ಅವಕಾಶವನ್ನು ಸಹ ಬಿಟ್ಟುಕೊಟ್ಟಿದೆ. ತನ್ನ ವ್ಯಾಪಾರದ ವಹಿವಾಟನ್ನು ಸುಗುಮಗೊಳಿಸಿಕೊಳ್ಳಲು ತೆರಿಗೆ ಸುಧಾರಣೆಯ ಬೇಡಿಕೆಯನ್ನು ಮುಂದಿಡುವ ಅಮೇರಿಕಾ ಇಲ್ಲಿನ ಸಬ್ಸಿಡಿಗಳು ಮತ್ತು ಜನಕಲ್ಯಾಣ ಯೋಜನೆಗಳನ್ನು ಅಗಾಧ ಮಟ್ಟದಲ್ಲಿ ಕಡಿತಗೊಳಿಸಬೇಕೆಂದು ಷರತ್ತನ್ನು ಮುಂದಿಡುತ್ತದೆ.

del4ಈ ಒಪ್ಪಂದ ಮೊದಲ ಬಲಿಪಶುವೇ ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಕೃಷಿ ಸಬ್ಸಿಡಿ. ಮೇಲ್ನೋಟಕ್ಕೆ ಸುಮಾರು 3 ಟ್ರಿಲಿಯನ್ ಆರ್ಥಿಕ ನೆರವು ಅಮೇರಿಕಾದಿಂದ ದೊರಕುತ್ತದೆ ಎಂದು ಹೇಳಲಾಗುತ್ತದೆ ಆದರೆ ಇಷ್ಟೊಂದು ಮೊತ್ತದ ಹಣವನ್ನು ಅಮೇರಿಕಾ ಯಾವ ಕಾರಣಕ್ಕೆ ಕೊಡುತ್ತದೆ ? ಈ ಮೊತ್ತವು ಮುಂದೆ ಯಾರನ್ನು ತಲಪುತ್ತದೆ ಎನ್ನುವುದರ ಕುರಿತಾಗಿ ಎಲ್ಲಿಯೂ ಸ್ಪಷ್ಟತೆ ಇಲ್ಲ. ಸರಳವಾಗಿ ಹೇಳಬೇಕೆಂದರೆ ಅಮೇರಿಕಾ ಮತ್ತು ಯುರೋಪ್ ರಾಷ್ಟ್ರಗಳ ಸರಕುಗಳನ್ನು,ಪದಾರ್ಥಗಳನ್ನು ಅವರು ನಿಗದಿಪಡಿಸಿದ ಬೆಲೆಯಲ್ಲಿ ಭಾರತ ಆಮದು ಮಾಡಿಕೊಳ್ಳಲೇಬೇಕು ಆಗ ಮಾತ್ರವೇ ಆ ದೇಶಗಳು ಭಾರತದ ಸರಕು ಮತ್ತು ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತದೆ. ಇಲ್ಲಿ ಒನ್ ವೇ ನೀತಿಯೇ ಇಲ್ಲ. ಇನ್ನು ಸರಕುಗಳ ಆಯ್ಕೆಯ ಸ್ವಾತಂತ್ರವೂ ಭಾರತಕ್ಕೆ ಇರುವುದಿಲ್ಲ. ಈ ಮೊದಲೇ ಭಾರತದಲ್ಲಿ ಸ್ಥಾಪಿತಗೊಂಡ ವಿದೇಶಿ ಉದ್ದಿಮೆಗಳ ಬೇಡಿಕೆಗೆ ಅನುಗುಣವಾಗಿ ಮಾತ್ರ ಆಮದು ಮಾಡಿಕೊಳ್ಳಬೇಕೇ ಹೊರತು ಭಾರತದ ಅವಶ್ಯಕತೆಗಳ ಅನುಗುಣವಾಗಿ ಅಲ್ಲವೇ ಅಲ್ಲ.

ಮತ್ತೊಂದು ಕರಾರಿನಲ್ಲಿ 2018ರ ವೇಳೆಗೆ ತೃತೀಯ ಜಗತ್ತಿನ ರಾಷ್ಟ್ರಗಳು ( ಇವುಗಳನ್ನು ಅತಿ ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೆಂದು ಈ ಡಬ್ಲಿಟಿಓ ಕರೆಯುತ್ತದೆ). ಕೃಷಿ ಉತ್ಪನ್ನ ಸರಕುಗಳಿಗೆ, ಪದಾರ್ಥಗಳಿಗೆ ರಫ್ತು ವಹಿವಾಟಿಗೆ ಸಂಭಂದಿಸಿದ ಎಲ್ಲಾ ಸಬ್ಸಿಡಿಗಳನ್ನು ಹಿಂಪಡೆಯಬೇಕೆಂದು ಷರತ್ತು ವಿಧಿಸಿದೆ. ಇದಕ್ಕೆ ಭಾರತವನ್ನು ಒಳಗೊಂಡಂತೆ ಎಲ್ಲಾ ಸದಸ್ಯ ರಾಷ್ಟ್ರಗಳು ಅನುಮೋದನೆ ಸೂಚಿಸಿವೆ. ಮತ್ತು ಎಲ್ಲಾ ರೀತಿಯ ಬೆಲೆಗಳ ವಿಗಂಡಣೆಯ ಕುರಿತಾಗಿ ನಿರ್ಧರಿಸುವ ಎಲ್ಲಾ ನಿರ್ಭಂದಗಳನ್ನು, ಕಾನೂನುಗಳನ್ನು ನಿವಾರಿಸಬೇಕೆಂದು ಸ್ಪಷ್ಟಪಡಿಸಿದೆ. ಏಕೆಂದರೆ ಆಮದು ವಹಿವಾಟು ಹೆಚ್ಚಿಸಲು !!!! ಅಲ್ಲದೆ ಇದೇ ಕರಾರಿನ ಅನುಸಾರ ರಫ್ತಿಗೆ ಅವಶ್ಯಕವಾದ ಆರ್ಥಿಕ ಸಾಲವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ನೀಡುತ್ತವೆ. ಮತ್ತು ಯೋಜನೆ ಅನುಷ್ಠಾನಗೊಳಿಸಿದ ಮೊದಲ ವರ್ಷದಿಂದ 36 ತಿಂಗಳುಗಳ ಒಳಗೆ,ಎರಡನೇ ವರ್ಷದಿಂದ 27 ತಿಂಗಳುಗಳ ಒಳಗೆ,ಮೂರನೇ ವರ್ಷದ ನಂತರದಿಂದ 18 ತಿಂಗಳುಗಳೊಳಗೆ ಈ ಸಾಲವನ್ನು ತೀರಿಸಬೇಕು ಎನ್ನುವ ಷರತ್ತನ್ನು ವಿಧಿಸಲಾಗಿದೆ!!! ಭೂತಯ್ಯ ನೆನಪಾಗುತ್ತಿದ್ದಾನೆಯೇ??

ಎರಡು ದಶಕಗಳ ಹಿಂದೆ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಉರುಗ್ವೆ ಸುತ್ತಿನ ಸಭೆಯಲ್ಲಿ ಪ್ರಾರಂಭಗೊಂಡ ತೆವಳುವ, ಅಂಗಲಾಚುವ ಈ ಮಾದರಿಯು ನರೇಂದ್ರ ಮೋದಿಯ ಆಡಳಿತದಲ್ಲಿಯೂ ಮುಂದುವರೆದಿದೆ. ಈ ಡಬ್ಲಿಟಿಓ (WTO) ಶೃಂಗ ಸಭೆಗಳಲ್ಲಿ ಪ್ರತಿಭಟಿಸುವುದಿರಲಿ ಸಣ್ಣ ಮಟ್ಟದ ಗೊಣಗಾಟ ಮಾಡಿದರೆ ಆ ರಾಷ್ಟ್ರವನ್ನು ಶೃಂಗಸಭೆಯಿಂದಲೇ ಹೊರಹಾಕಲಾಗುತ್ತದೆ. ಅಭಿವೃದ್ಧಿ ಎನ್ನುವ ಮರೀಚೆಕೆಗೆ ಹೊರಳಿಕೊಳ್ಳುವ ತೃತೀಯ ಜಗತ್ತಿನ ರಾಷ್ಟ್ರಗಳು ಮತ್ತೊಮ್ಮೆ ಈ ಸಾಮ್ರಾಜ್ಯಶಾಹಿ ಬಲೆಯೊಳಗೆ ಜಾರಿಕೊಳ್ಳತೊಡಗುತ್ತವೆ.

ಈ ಬಾರಿಯ ನೈರೋಬಿ ಶೃಂಗ ಸಬೆಯಲ್ಲಿ ಗ್ಯಾಟ್ಸ್ ಜೊತೆಗೆ ಮತ್ತೆರೆಡು ಸೂಚಿಗಳು ಚರ್ಚಿತವಾದವು. ಅವು ಬೌದ್ಧಿಕ ಆಸ್ತಿ ಹಕ್ಕು (TRIPS) ಮತ್ತು ಶೃಂಗ ವ್ಯಾಪಾರ ಸಂಭಂದಿತ ಹೂಡಿಕೆಯ ಮಾಪನ (TRIMS). ಅಮೇರಿಕಾ ಮತ್ತು ಯುರೋಪ್ ರಾಷ್ಟ್ರಗಳು ತೃತೀಯ ಜಗತ್ತಿನ ದೇಶಗಳ ಎಲ್ಲಾ ಹಕ್ಕುಸ್ವಾಮ್ಯಗಳನ್ನು ಕತ್ತರಿಸಲು ಈ ಟ್ರಿಪ್ಸ್ ಮತ್ತು ಟ್ರಿಮ್ಸ್ ಒಪ್ಪಂದಗಳನ್ನು ಬಳಸಿಕೊಳ್ಳುತ್ತದೆ. ನೈರೋಬಿಯ ಡಬ್ಲಿಟಿಓ ಶೃಂಗಸಭೆಯಲ್ಲಿ ಮೇಲ್ನೋಟಕ್ಕೆ ಭಾರತದ ನಿರ್ಮಲಾ ಸೀತಾರಾಮನ್ ಅವರು ಇದರ ಸರ್ವಾಧಿಕಾರದ ವ್ಯಾಪ್ತಿಯನ್ನು ಪ್ರತಿಭಟಿಸಿದಂತೆ ವರದಿಯಾದರೂ ಅಂತಿಮವಾಗಿ ಭಾರತ ತಳೆದ ನಿಲುವು ಏನೆಂಬದು ಇಂದಿಗೂ ಬಹಿರಂಗಗೊಂಡಿಲ್ಲ.

ವಿಶ್ವ ವ್ಯಾಪಾರ ಮಾರುಕಟ್ಟೆಯಲ್ಲಿ ಅಮೇರಿಕಾ ಮತ್ತು ಯುರೋಪ್ ರಾಷ್ಟ್ರಗಳೊಂದಿಗೆ ತಾನು ಸರಿಸಮನಾಗಿ ನಿಲ್ಲಬೇಕೆಂದು ಬೀಗುವ ಭಾರತ ಈ ವ್ಯಾಪಾರದ ಶೃಂಗಸಭೆಗಳಲ್ಲಿ ತನ್ನ ಧ್ವನಿಯನ್ನು ಅದುಮಿಟ್ಟುಕೊಂಡಿರುತ್ತದೆ. ಪಡೆದಕೊಂಡಿರುವುದು ಶೂನ್ಯವಾದರೆ ಬಿಟ್ಟುಕೊಟ್ಟಿರುವುದು ಅಗಾಧವಾಗಿರುತ್ತದೆ. ಈ ಶೃಂಗ ಸಭೆಯಿಂದ ಮರಳಿದ ನಂತರ ನೈರೋಬಿ ಸಮ್ಮೇಳನ ಫಲಶೃತಿಯು ನಿರಾಶದಾಯಕ, ನಾವು ನಮ್ಮ ಹಿತಾಸಕ್ತಿಯನ್ನು ಬಿಟ್ಟುಕೊಟ್ಟಿಲ್ಲ ಎಂದು ತನ್ನ ಪ್ರತಾಪವನ್ನು ಕೊಚ್ಚಿಕೊಳ್ಳುವ ಭಾರತದ ಮಂತ್ರಿಗಳು ಮತ್ತು ಬ್ಯೂರೋಕ್ರಸಿ ಕಡೆಗೂ ತಾವು ಸಹಿ ಮಾಡಿದ ಒಡಂಬಡಿಕೆಯ ವಿವರಗಳನ್ನು ಬಹಿರಂಗಗೊಳಿಸುವುದಿಲ್ಲ.

ಉದಾಹರಣೆಗೆ ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ದೇಶದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ, ಸಮಾನ ಶಿಕ್ಷಣ ವ್ಯವಸ್ಥೆಯನ್ನೇ ನಾಶಮಾಡುವ ಗ್ಯಾಟ್ಸ್ ಒಡಂಬಡಿಕೆಯಲ್ಲಿ ಯಾವ ಒಪ್ಪಂದಕ್ಕೆ ಸಹಿ ಹಾಕಿದೆ? ಅದರ ವಿವರಗಳೇನು ಎಂದು ಇದುವರೆಗೂ ಬಹಿರಂಗಗೊಂಡಿಲ್ಲ. ಭಾರತದ ಪ್ರತಿನಿಧಿಯಾಗಿ ಬಾಗವಹಿಸಿದ್ದ ಕಾಮರ್ಸ ಮಂತ್ರಿ ನಿರ್ಮಲಾ ಸೀತಾರಾಮನ್ ಅವರಿಗೆ ಈ ಗ್ಯಾಟ್ಸ್ ಒಡಂಬಡಿಕೆಯ ಕರಾಳ ನಿಯಮಗಳ ಪರಿಚಯವಿದೆಯೇ? ಇದರ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು, ಚಿಂತಕರು ದೇಶಾದ್ಯಾಂತ ನqಸಿದ ಪ್ರತಿಭಟನೆಯ ಹಿನ್ನೆಲೆ ಮತ್ತು ಅದರ ಕಾರಣಗಳ ಕುರಿತಾಗಿ ಅಧ್ಯಯನ ಮಾಡಿದ್ದರೇ ಎನ್ನುವುದೂ ಸ್ಪಷ್ಟವಿಲ್ಲ.

ಇದೇ ಅವಕಾಶವನ್ನು ಬಳಸಿಕೊಂಡು ಭಾರತವು ದೋಹಾ ಸುತ್ತಿನ ಕಾರ್ಯಸೂಚಿಗಳನ್ನು ತಿರಸ್ಕರಿಸಬಹುದಿತ್ತು. ಅದರಲ್ಲೂ ಸಚಿವರ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಯಾವುದೇ ಪೂರ್ವ ತಯಾರಿ ಇಲ್ಲದೆಯೇ ಮತ್ತು ಸಂಬಂಧಪಟ್ಟ ವಿಷಯಗಳ ಆಳವಾದ ಅಧ್ಯಯನದ ಕೊರತೆಯಿಂದಾಗಿ ಈ ಸಂದರ್ಭವನ್ನು ತನ್ನ ಸ್ವಾಯತ್ತತೆಯ ಪರವಾಗಿ ಪ್ರತಿವಾದ ಮಂಡಿಸುವ ಅವಕಾಶವನ್ನೇ ಭಾರತವು ಕಳೆದುಕೊಂಡಂತಿದೆ. ಈ ಕುರಿತಾಗಿ ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ಆರ್‍ಟಿಐ ಕಾರ್ಯಕರ್ತರು ಅರ್ಜಿ ಸಲ್ಲಿಸಿದರೂ ಅದಕ್ಕೆ ಪ್ರತ್ಯುತ್ತರ ದೊರಕುತ್ತಿಲ್ಲ.

ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಖಾಸಗಿ ಬಂಡವಾಳಶಾಹಿಗಳ ಪರವಾದ ಆರ್ಥಿಕ ನೀತಿ. ಅಪ್ಪಟ ಬೂಜ್ರ್ವ ಮಾದರಿಯ, ಖಾಸಗಿ ಸ್ವತ್ತನ್ನು ಅಭಿವೃದ್ಧಿಗೊಳಿಸುವ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ಒತ್ತುಕೊಡುವ ಮೋದಿಯವರ ಆರ್ಥಿಕ ಚಿಂತನೆಗಳು ಈ ಡಬ್ಲಿಟಿಓ ಮಾದರಿಯ ವಸಾಹತುಶಾಹಿ ವ್ಯವಸ್ಥೆಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಮೇಕ್ ಇನ್ ಇಂಡಿಯಾ ಎನ್ನುವಂತಹ ಅಲಂಕಾರಿಕ ಘೋಷಣೆಗಳನ್ನು ಮಾಡುವ ಮೋದಿ ಇಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಮಾತ್ರ ಹೆಚ್ಚಿನ ಒತ್ತು ಕೊಡುತ್ತಾರೆ.ಸರ್ಕಾರಿ ಸ್ವಾಮ್ಯದ ವಲಯಗಳನ್ನು ಕ್ರಮೇಣ ನಿಸ್ತೇಜನಗೊಳಿಸುವ ಯೋಜನೆಗಳನ್ನು ಹೆಣೆದಿರುವ ಮೋದಿ ಈ ವಿದೇಶಿ ಬಂಡವಾಳ ಹೂಡಿಕೆಯ ಸ್ವರೂಪದಲ್ಲಿ ಈ ಡಬ್ಲಿಟಿಓ ಒಡಂಬಡಿಕೆಗಳನ್ನು ಜಾರಿಗೊಳಿಸುವುದರಲ್ಲಿ ನಿಸ್ಸೀಮರು.

ಮತ್ತೊಂದೆಡೆ ತಮ್ಮ ಪ್ರತಿನಿಧಿ ಭಾಷಣದಲ್ಲಿ ಆರಂಭದಲ್ಲಿ ರೈತರ ಪರವಾಗಿ ಮೊಸಳೆ ಕಣ್ಣೀರು ಸುರಿಸುವ ಕಾಮರ್ಸ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು “ ಒಮ್ಮತಕ್ಕಾಗಿ ವಿಚಾರ ವಿನಿಮಯದ ನಿಯಮಗಳನ್ನು ನಾವು ಗೌರವಿಸುತ್ತೇವೆ, ದೋಹಾ ಶೃಂಗಸಭೆಯ ಒಂಡಂಬಡಿಕೆಯ ಕಕ್ಷೆಯೊಳಗಡೆ ನಾವು ವ್ಯವಹಾರ ಮಾಡಬೇಕು” ಎಂದು ಹೇಳುತ್ತಾರೆ. ಇದು ಕಲೋನಿಯಲ್ ದೇಶಗಳಿಗೆ ಭಾರತಕ್ಕೆ ಮುಕ್ತ ವ್ಯಾಪಾರದ ವ್ಯವಹಾರಕ್ಕೆ ಆಮಂತ್ರಿಸುವುದನ್ನು ಸೂಚಿಸುತ್ತದೆ ಅಷ್ಟೇ.

ಸಮಾಜವಾದ ಮತ್ತು ಸ್ವಾವಲಂಬನೆಯು ರಾಜಕೀಯ ತಾತ್ವಿಕ ನೀತಿಯಾಗಿದ್ದ ಕಾಲದಿಂದ ( ಅದರ ಮಿತಿಗಳ ನಡುವೆಯೂ) ಬಲು ದೂರ ಸಾಗಿಬಂದಿರುವ ಸ್ವಾತಂತ್ರೋತ್ತರ ಭಾರತದಲ್ಲಿ 23 ವರ್ಷಗಳ ಹಿಂದೆ ಮುಕ್ತ ಮಾರುಕಟ್ಟೆಯ ನೆಪದಲ್ಲಿ ಮನಮೋಹನ್ ಸಿಂಗ್ ಅವರ ಮುಂದಾಳತ್ವದಲ್ಲಿ ಸರ್ಕಾರದ ಮೇಲೆ ಬಂಡವಾಳಶಾಹಿಗಳ ಹಿಡಿತಕ್ಕೆ ಅವಕಾಶ ಕಲ್ಪಿಸಲಾಯಿತು. ಸಾಮಾಜಿಕ-ಸಾಸ್ಕøತಿಕ ಸ್ವಾತಂತ್ರವನ್ನು ಕಡೆಗಣಿಸಿ ಆರ್ಥಿಕ ಸ್ವಾತಂತ್ರ ಎನ್ನುವ ಪರಿಕಲ್ಪನೆಯ ಮೂಲಕ ಬೂಜ್ರ್ವಾ ಶೈಲಿಯ ಬಂಡವಾಶಾಹಿಯು ಮನಮೋಹನ್ ಸಿಂಗ್‍ರಿಂದ ಪ್ರಾರಂಭಗೊಂಡು ಇಂದು ಬಲಪಂಥೀಯ ಆರ್ಥಿಕತೆಯ ಪ್ರತಿಪಾದಕ ನರೇಂದ್ರ ಮೋದಿಯವರ ಕೈಸೇರಿದೆ. ಬಕಾಸುರ ಬಂಡವಾಳಶಾಹಿಯನ್ನು ಬೆಂಬಲಿಸುವ ನರೇಂದ್ರ ಮೋದಿ ಕ್ರೂನಿ ಕ್ಯಾಪಿಟಲಿಸಂ ಅನ್ನು ವ್ಯಾಪಕ ನೆಲೆಯಲ್ಲಿ ಸ್ಥಾಪಿತಗೊಳಿಸಲು ಪಣತೊಟ್ಟಿದ್ದಾರೆ. ಮೋದಿಯವರ ಈ ಕ್ರೂನಿ ಕ್ಯಾಪಿಟಲಿಸಂ ಪರವಾದ ನವಉದಾರೀಕರಣದಲ್ಲಿ ಉಳ್ಳವರ ನಡುವೆ ಪರಸ್ಪರ ಸ್ಪರ್ಧೆ ಏರ್ಪಡಿಸುತ್ತದೆ. ಬಡವರ ಹೋರಾಟವನ್ನು ಕ್ರಮೇಣ ಹತ್ತಿಕ್ಕಲಾಗುತ್ತದೆ.

ಬಡವರಿಗೆ ಬದುಕುವ ಅವಕಾಶ ಕಲ್ಪಿಸುತ್ತಿದ್ದ ಸರ್ಕಾರಿ ಉದ್ದಿಮೆಗಳಿಗೆ ಕಾಯಕಲ್ಪ ನೀಡುವುದನ್ನು ಕೈಬಿಟ್ಟ ನರೇಂದ್ರ ಮೋದಿ ಖಾಸಗಿ ಬಂಡವಾಳಶಾಹಿಗಳು ಉತ್ತಮ ಸೇವೆ ನೀಡುತ್ತಾರೆ ಎಂದು ಬಹಿರಂವಾಗಿಯೇ ಸಮರ್ಥಿಸಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವದ ಬಲು ದೊಡ್ಡ ಸೋಲು. ಸೇವೆ ನೀಡುತ್ತೇವೆ ಎನ್ನುತ್ತಲೇ ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವ, ಬೆಳೆಸಿಕೊಳ್ಳುವ ಈ ಕ್ರೂನಿ ಕ್ಯಾಪಿಟಲಿಸಂ ಮತ್ತೊಮ್ಮೆ ವರ್ಗ, ಜಾತಿ ವಿಭಜನೆಯನ್ನು ಸಾಧಿಸುತ್ತಾ ಹೋಗುತ್ತದೆ. ಶ್ರಮಜೀವನದ ಕಾಯಕ ಪರಿಕಲ್ಪನೆಯನ್ನು ಊಳಿಗಮಾನ್ಯದ ಸೇವೆಯ ಮಟ್ಟಕ್ಕೆ ತಂದು ನಿಲ್ಲಿಸಿದ ಮೋದಿ ಆಧುನಿಕತೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಪ್ರಜಾಪ್ರಭುತ್ವದ ಎಲ್ಲಾ ಆಶಯಗಳನ್ನು ಮಣ್ಣುಗೂಡಿಸುತ್ತಿದ್ದಾರೆ. ಇದಕ್ಕೆ ಡಬ್ಲಿಟಿಓ (WTO) ಒಡಂಬಡಿಕೆಯ ಮೂಲಕ ಮೊಳೆ ಹೊಡೆಯಲಾಗಿದೆ.

Leave a Reply

Your email address will not be published.